ಬೆಂಗಳೂರು; ಗಣಿಗಾರಿಕೆ ಉದ್ಯಮದಲ್ಲಿ ಆಂಧ್ರ ಪ್ರದೇಶ, ರಾಜಸ್ತಾನ ಸರ್ಕಾರವು ನೀಡಿರುವ ರಿಯಾಯಿತಿಯನ್ನು ಕರ್ನಾಟಕದಲ್ಲಿಯೂ ನೀಡಬೇಕು ಎಂದು ದಾಲ್ಮಿಯಾ ಸಿಮೆಂಟ್, ರಾಜ್ಯ ಸರ್ಕಾರವನ್ನು ಕೋರಿರುವುದು ಇದೀಗ ಬಹಿರಂಗವಾಗಿದೆ.
ಈಗಾಗಲೇ ಅದಾನಿ ಎಸಿಸಿ ಸಿಮೆಂಟ್ಸ್ ಪ್ರೈವೈಟ್ ಲಿಮಿಟೆಡ್ 850 ಕೋಟಿ ರುಪಾಯಿ ಬಾಕಿ ಉಳಿಸಿಕೊಂಡಿದ್ದರೂ ಲೆಟರ್ ಆಫ್ ಇಂಟೆಂಟ್ ನೀಡಲು ರಾಜ್ಯ ಸರ್ಕಾರವು ಉತ್ಸುಕವಾಗಿರುವ ಬೆನ್ನಲ್ಲೇ ದಾಲ್ಮಿಯಾ ಪ್ರಕರಣವು ಮುನ್ನೆಲೆಗೆ ಬಂದಿದೆ.
2021-22ರಿಂದ 2025-26ನೇ ಸಾಲಿನವರೆಗೆ ದಾಲ್ಮಿಯಾ ಸಿಮೆಂಟ್ ಪಾವತಿಸಿರುವ ರಾಜಧನದ ಪೈಕಿ 96.73 ಕೋಟಿ ರುಪಾಯಿಗೆ ರಿಯಾಯಿತಿ ನೀಡಬೇಕು ಎಂದು ದಾಲ್ಮಿಯಾ ಸಿಮೆಂಟ್ಸ್ ಕೋರಿದೆ. ಈ ಮನವಿಯನ್ನು ಪರಿಗಣಿಸಬೇಕೇ ಬೇಡವೇ ಎಂಬ ಕುರಿತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉನ್ನತ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಆದರೆ ಇದುವರೆಗೂ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ.
ಇದಕ್ಕೆ ಸಂಬಂಧಿಸಿದಂತೆ ಟಿಪ್ಪಣಿ ಹಾಳೆಯು ದಿ ಫೈಲ್ ಗೆ ಲಭ್ಯವಾಗಿದೆ.
ವಿಶೇಷ ಉತ್ತೇಜನ ಮತ್ತು ಪ್ರೋತ್ಸಾಹಗಳ ಪ್ಯಾಕೇಜ್ ಮಂಜೂರು ಮಾಡಬೇಕು ಎಂದು 2025ರ ಜುಲೈ 31ರಂದೇ ದಾಲ್ಮಿಯಾ ಕಂಪನಿಯು ಸರ್ಕಾರವನ್ನು ಕೋರಿತ್ತು. ಈ ಕುರಿತು ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ರಾಜಧನ ಮರುಪಾವತಿಸಲು ಅವಕಾಶವಿದೆಯೇ?
ಎಂಎಂಡಿಆರ್ ಕಾಯ್ದೆ 1957ರ ಕಲಂ 09ರಂತೆ ಸುಣ್ಣದ ಕಲ್ಲು ಖನಿಜ ಬಳಸಿದ್ದಕ್ಕೆ ಅಥವಾ ಉಪಯೋಗಿಸಿದ್ದಕ್ಕೆ ಕಡ್ಡಾಯವಾಗಿ ರಾಜಧನ ಸಂಗ್ರಹಿಸಲು ನಿಯಮಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ. ಮುಖ್ಯ ಖನಿಜಕ್ಕೆ ಸಂಬಂಧಿಸಿದಂತೆ ರಾಜಧನ ನಿಗದಿಪಡಿಸುವ ಅಧಿಕಾರವು ಕೇಂದ್ರ ಸರ್ಕಾರಕ್ಕಿದೆ. ಪಾವತಿಸಿದ ಹೆಚ್ಚುವರಿ ರಾಜಧನವನ್ನು ಮಾತ್ರ ಮರುಪಾವತಿಸಲು ನಿರ್ದೇಶನವಿದೆ. ಆದರೆ ಖನಿಜ ಬಳಸಿದ್ದಕ್ಕೆ, ಉಪಯೋಗಿಸಿದ್ದಕ್ಕೆ ಪಾವತಿಸದ ರಾಜಧನ ಮರುಪಾವತಿಸಲು ನಿಯಮಗಳಲ್ಲಿ ಅವಕಾಶವೇ ಇಲ್ಲ.
ಚಿನ್ನ ಗಣಿಗಾರಿಕೆಗೆ ಸಂಬಂಧಿಸಿದಂತೆ 2021-22ರಿಂದ 2025-26ರ ಫೆಬ್ರುವರಿ 26ರವರೆಗೆ ಒಟ್ಟಾರೆ 205.91 ಕೋಟಿ ರುಪಾಯಿಗಳನ್ನು ರಾಜಧನವನ್ನು ಸಂಗ್ರಹಿಸಿದೆ. ಅದಿರು (ಎಂಎಂಟಿ) ಗಣಿಗಾರಿಕೆ ನಡೆಸಿದ ಕಂಪನಿಗಳಿಂದ ಇದೇ ಅವಧಿಯಲ್ಲಿ ಒಟ್ಟಾರೆ 11,538.04 ಕೋಟಿ ರುಪಾಯಿಗಳನ್ನು ರಾಜಧನ ರೂಪದಲ್ಲಿ ಸಂಗ್ರಹಿಸಿದೆ.

ಸುಣ್ಣದ ಕಲ್ಲು (ಎಂಎಂಟಿ) ಗಣಿಗಾರಿಕೆ ನಡೆಸಿರುವ ಕಂಪನಿಗಳಿಂದ 1,695.24 ಕೋಟಿ ರು., ಮ್ಯಾಂಗನೀಸ್ ಗಣಿಗಾರಿಕೆ ನಡೆಸಿರುವ ಕಂಪನಿಗಳಿಂದ 76.27 ಕೋಟಿ ರು., ಮ್ನಾಗ್ನಸೈಟ್ ಗಣಿಗಾರಿಕೆ ನಡೆಸಿರುವ ಕಂಪನಿಗಳಿಂದ 1.94 ಕೋಟಿ ರು ಸೇರಿ ಇದೇ ಅವಧಿಯಲ್ಲಿ ಒಟ್ಟಾರೆ 20,168.33 ಕೋಟಿಯಷ್ಟು ರಾಜಸ್ವ ಸಂಗ್ರಹಿಸಿರುವುದು ತಿಳಿದು ಬಂದಿದೆ.
ದಾಲ್ಮಿಯಾ ಪಾವತಿಸಿರುವುದೆಷ್ಟು?
ಸಗಟು ಪರವಾನಿಗೆಗೆ ವಿರುದ್ಧವಾಗಿ 2021-22ರಲ್ಲಿ 18.55 ಕೋಟಿ, 2022-23ರಲ್ಲಿ 18.68 ಕೋಟಿ, 2023-24ರಲ್ಲಿ 18.95 ಕೋಟಿ, 2024-25ರಲ್ಲಿ 21.60 ಕೋಟಿ, 2025-26 (ಫೆಬ್ರುವರಿವರೆಗೆ) 18.95 ಕೋಟಿ ರು ಸೇರಿ ಒಟ್ಟಾರೆ 96.73 ಕೋಟಿ ರುಪಾಯಿ ಪಾವತಿಸಿದೆ. ಇದೀಗ ದಾಲ್ಮಿಯಾ ಸಿಮೆಂಟ್ಸ್ ಕಂಪನಿಯು ವಿಶೇಷ ಉತ್ತೇಜನ ಮತ್ತು ಪ್ರೋತ್ಸಾಹ ಯೋಜನೆಯಡಿಯಲ್ಲಿ ಇದೇ 96.73 ಕೋಟಿ ರುಪಾಯಿಗಳೀಗೆ ವಿನಾಯಿತಿ ಕೋರಿದೆ.
ಆಂಧ್ರ ಪ್ರದೇಶ ರಾಜ್ಯದ ಕಡಪ ಜಿಲ್ಲೆಯಲ್ಲಿ ಸಿಮೆಂಟ್ ಉತ್ಪಾದನಾ ಘಟಕ ವಿಸ್ತರಣೆ ಮಾಡಲು ದಾಲ್ಮಿಯಾ ಸಿಮೆಂಟ್ಸ್ ಪ್ರಸ್ತಾವ ಸಲ್ಲಿಸಿದೆ. ಈ ಪ್ರಸ್ತಾವನೆಯನ್ನು ಪರಿಶೀಲಿಸಿರುವ ಆಂಧ್ರ ಪ್ರದೇಶ ಸರ್ಕಾರವು 2025ರ ಮಾರ್ಚ್ 25ರಂದು ರಾಜಧನದಿಂದ ವಿನಾಯಿತಿ ನೀಡಿದೆ.

ಅದೇ ರೀತಿ ವಂಡರ್ ಸಿಮೆಂಟ್ಸ್ ಲಿಮಿಟೆಡ್‌ಗೆ ಇಂಟಿಗ್ರೇಟೆಡ್ ಸಿಮೆಂಟ್ ಪ್ಲಾಂಟ್ ಘಟಕ ಸಾಮರ್ಥ್ಯದ ವಿಸ್ತರಣೆಗಾಗಿ ರಾಜಸ್ಥಾನ ಸರ್ಕಾರವು ರಾಜಧನದಿಂದ ವಿನಾಯಿತಿ ನೀಡಿ ಆದೇಶಿಸಿದೆ ಎಂದು ತಿಳಿಸಿರುವ ದಾಲ್ಮಿಯಾ ಕಂಪನಿಯು, ಕರ್ನಾಟಕದಲ್ಲಿಯೂ ಇದೇ ಮಾದರಿಯಲ್ಲಿ ಸುಣ್ಣದ ಕಲ್ಲು ಖನಿಜಕ್ಕೆ ಪಾವತಿಸುವ ರಾಜಧನದಿಂದ ವಿನಾಯಿತಿ ನೀಡಬೇಕು ಎಂದು ಕೋರಿರುವುದು ಗೊತ್ತಾಗಿದೆ.
ದಾಲ್ಮಿಯಾ ಸಮೂಹವು ವಿಶೇಷವಾಗಿ ಬೆಳಗಾವಿ ಜಿಲ್ಲೆಯ ಯಾದವಾಡದಲ್ಲಿ 2.5 ಮೆ.ಟನ್ ಸಾಮರ್ಥ್ಯದ ಪ್ರಮುಖ ಉತ್ಪಾದನಾ ಘಟಕವನ್ನು ಹೊಂದಿದೆ. ಈ ಸಂಸ್ಥೆಯು ಕಲಬುರಗಿ ಜಿಲ್ಲೆಯ ಸೇಡಂನಲ್ಲೂ ಘಟಕಗಳನ್ನು ಹೊಂದಿದ್ದು, ದಕ್ಷಿಣ ಭಾರತದ ಮಾರುಕಟ್ಟೆಯಲ್ಲಿ ಪ್ರಬಲ ಸ್ಥಾನವನ್ನು ಹೊಂದಿದೆ.
ರಾಜಸ್ಥಾನದಲ್ಲಿ ತನ್ನ ಕಾರ್ಯಾಚರಣೆಯನ್ನು ತೀವ್ರವಾಗಿ ವಿಸ್ತರಿಸುತ್ತಿದ್ದು, ಜೈಸಲ್ಮೇರ್‌ನಲ್ಲಿ 6 MTPA ಸಾಮರ್ಥ್ಯದ ಸ್ಥಾವರ ಮತ್ತು ಚಿತ್ತೋರ್‌ಗಢದಲ್ಲಿ 4 MTPA ಸಾಮರ್ಥ್ಯದ ಗ್ರೀನ್‌ಫೀಲ್ಡ್ ಯೋಜನೆಗಳ ಮೂಲಕ ಹೂಡಿಕೆ ಮಾಡುತ್ತಿದೆ. ರಾಜಸ್ಥಾನ ಸರ್ಕಾರದೊಂದಿಗೆ ಸಹಕರಿಸಿ, ಪರಿಸರ ನಿಯಮಗಳನ್ನು ಪಾಲಿಸಿ, ಸುಸ್ಥಿರ ಇಂಧನ ಬಳಕೆಯೊಂದಿಗೆ ಸಿಮೆಂಟ್ ಉತ್ಪಾದನೆಯನ್ನು ಹೆಚ್ಚಿಸಲು ಕಂಪನಿಯು ಬದ್ಧವಾಗಿದೆ
ಕಳೆದ ದಶಕದಲ್ಲಿ, ದಾಲ್ಮಿಯಾ ಭಾರತ್ ತನ್ನ ಸಾಮರ್ಥ್ಯ ಮತ್ತು ಆದಾಯದ ಬೆಳವಣಿಗೆಯನ್ನು ಕ್ರಮವಾಗಿ ಸುಮಾರು 14% ಮತ್ತು 17% ಸಿಎಜಿಆರ್‍ನಲ್ಲಿ ನಿಗದಿಪಡಿಸಿ ವೇಗವಾಗಿ ಬೆಳೆಯುತ್ತಿರುವ ಸಿಮೆಂಟ್ ಕಂಪನಿಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಈ ಅಸಾಧಾರಣ ಬೆಳವಣಿಗೆಯ ಹೊರತಾಗಿಯೂ, ಕಾರ್ಯಾಚರಣೆ ಮತ್ತು ಆರ್ಥಿಕ ಕಾರ್ಯಕ್ಷಮತೆಯ ಸಾಬೀತಾದ ದಾಖಲೆಯೊಂದಿಗೆ ದಾಲ್ಮಿಯಾ ಭಾರತ್ ಭಾರತದಲ್ಲಿ ಕಡಿಮೆ ವೆಚ್ಚದ ಸಿಮೆಂಟ್ ಉತ್ಪಾದಕರಲ್ಲಿ ಒಂದಾಗಿದೆ.
ದಾಲ್ಮಿಯಾ ಭಾರತ್ ಲಿಮಿಟೆಡ್, 10 ರಾಜ್ಯಗಳಲ್ಲಿನ 15 ಸಿಮೆಂಟ್ ಸ್ಥಾವರಗಳಲ್ಲಿ ಹರಡಿರುವ ವಾರ್ಷಿಕ 49.5 ಮಿಲಿಯನ್ ಟನ್ ಸ್ಥಾಪಿತ ಸಿಮೆಂಟ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರುವ ಭಾರತದ 4 ನೇ ಅತಿದೊಡ್ಡ ಸಿಮೆಂಟ್ ಕಂಪನಿಯಾಗಿದೆ. ಸುಮಾರು 49,300 ಚಾನೆಲ್ ಪಾಲುದಾರರ ದೃಢವಾದ ಜಾಲದೊಂದಿಗೆ, ಕಂಪನಿಯು ಪ್ರಸ್ತುತ 23 ಕ್ಕೂ ಹೆಚ್ಚು ರಾಜ್ಯಗಳಿಗೆ ಸೇವೆ ಸಲ್ಲಿಸುತ್ತಿದೆ.
ದಾಲ್ಮಿಯಾ ಭಾರತ್ ಸುಸ್ಥಿರತೆಯ ಕ್ಷೇತ್ರದಲ್ಲಿ ಪ್ರವರ್ತಕವಾಗಿದ್ದು, 2040 ರ ವೇಳೆಗೆ ಇಂಗಾಲ-ಋಣಾತ್ಮಕವಾಗಲು ಬದ್ಧವಾಗಿರುವ ಮೊದಲ ಸಿಮೆಂಟ್ ಕಂಪನಿಯಾಗಿದೆ. ದಾಲ್ಮಿಯಾ ಭಾರತ್‌ನ ಪ್ರತಿಯೊಬ್ಬ ಉದ್ಯೋಗಿಯ ಡಿಎನ್‌ಎ ಅದರ ಕಾರ್ಯಾಚರಣಾ ತತ್ವದಿಂದ ಬೇರೂರಿದೆ. ‘ಸ್ವಚ್ಛ ಮತ್ತು ಹಸಿರು ಲಾಭದಾಯಕ ಮತ್ತು ಸುಸ್ಥಿರ’. ಕಂಪನಿಯು ಪ್ರಸ್ತುತ ಜಾಗತಿಕವಾಗಿ ಎಲ್ಲಾ ಸಿಮೆಂಟ್ ಕಂಪನಿಗಳಲ್ಲಿ ಕಡಿಮೆ CO2 ಹೆಜ್ಜೆಗುರುತುಗಳನ್ನು ಹೊಂದಿದೆ. ಕಡಿಮೆ ಇಂಗಾಲ ಪರಿವರ್ತನೆಗೆ ವ್ಯಾಪಾರ ಸಿದ್ಧತೆಗಾಗಿ 2018 ರಲ್ಲಿ ಕಾರ್ಬನ್ ಬಹಿರಂಗಪಡಿಸುವಿಕೆ ಯೋಜನೆ (CDP) ಯಿಂದ ಇದು ನಂ. 1 ಸ್ಥಾನದಲ್ಲಿದೆ ಎಂದು ಕಂಪನಿಯು ಹೇಳಿಕೊಂಡಿದೆ.
ದಾಲ್ಮಿಯಾ ಭಾರತ್ ಭಾರತದ ಅತಿದೊಡ್ಡ ಸ್ಲ್ಯಾಗ್ ಸಿಮೆಂಟ್ ತಯಾರಕ. ದಾಲ್ಮಿಯಾ ಭಾರತ್ ಕ್ಲೈಮೇಟ್ ಗ್ರೂಪ್‌ನ RE100, EV100 ಮತ್ತು EP100 ನ ಮೊದಲ ಟ್ರಿಪಲ್ ಜಾಯ್ನರ್‌ಗಳಲ್ಲಿ ಒಂದಾಗಿದೆ.
ತನ್ನ ಕಾರ್ಯಾಚರಣೆಯ ಪ್ರತಿಯೊಂದು ಪ್ರದೇಶದಲ್ಲಿ ವಿಶ್ವಾಸಾರ್ಹ ಬ್ರ್ಯಾಂಡ್ ಆಗಿರುವುದರ ಜೊತೆಗೆ, ದಾಲ್ಮಿಯಾ ಭಾರತ್ ಬಹುಮುಖಿ ಮತ್ತು ಅಂತರ್ಗತ ಬೆಳವಣಿಗೆಯನ್ನು ನಂಬುತ್ತದೆ ಮತ್ತು ಅದರ ಪ್ರತಿಯೊಬ್ಬ ಉದ್ಯೋಗಿಗಳನ್ನು ತುಂಬಾ ಗೌರವಿಸುತ್ತದೆ. ಕಂಪನಿಯು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಭಾರಿ ಹೂಡಿಕೆ ಮಾಡುತ್ತದೆ – ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸುಸಜ್ಜಿತವಾದ ರೋಬೋಟಿಕ್ ಲ್ಯಾಬ್‌ಗಳಾಗಿ ಮೂರು ಆರ್ & ಡಿ ಕೇಂದ್ರಗಳನ್ನು ನಿರ್ವಹಿಸುತ್ತಿರುವುದು ತಿಳಿದು ಬಂದಿದೆ.







