ಬೆಂಗಳೂರು; ಕೇಂದ್ರ ತೆರಿಗೆಗಳ ಸಂಗ್ರಹದಲ್ಲಿ ವರ್ಷದಿಂದ ವರ್ಷಕ್ಕೆ ರಾಜ್ಯ ಪಾಲು ಕುಸಿತವಾಗುತ್ತಿರುವ ಕಾರಣ ಕರ್ನಾಟಕಕ್ಕೂ ಇದೊಂದು ಪ್ರಮುಖ ಮತ್ತು ಗಂಭೀರ ಸವಾಲಾಗಿದೆ. ಅಲ್ಲದೇ ಮುಂಬರುವ ವರ್ಷಗಳಲ್ಲಿ ಇದು ತೀವ್ರ ಸವಾಲನ್ನು ಒಡ್ಡಲಿದೆ ಎಂದು ಕರ್ನಾಟಕ ಆರ್ಥಿಕ ಸಮೀಕ್ಷೆಯು (2025-26) ಎಚ್ಚರಿಸಿದೆ.
ಮಾರ್ಚ್ 6ರಂದು ವಿಧಾನಮಂಡಲದಲ್ಲಿ ಮಂಡನೆಯಾಗಿರುವ ಕರ್ನಾಟಕ ಆರ್ಥಿಕ ಸಮೀಕ್ಷೆಯು ಕರ್ನಾಟಕದ ವಿತ್ತೀಯ ಅಭಿವೃದ್ದಿ ಹಾಗೂ ರಾಜ್ಯ ಹಣಕಾಸಿನ ಸ್ಥಿತಿಗತಿಗಳ ಕುರಿತು ಚರ್ಚಿಸಿದೆ.
ಕರ್ನಾಟಕಕ್ಕೆ ಹಣಕಾಸು ಆಯೋಗದ ಅನುದಾನದ ಒಟ್ಟಾರೆ ಪಾಲು ಶೇ.3.7ರಷ್ಟಿದೆ. ಇದು 14ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೇ ಶೆ. 4.71ರಷ್ಟಿದೆ. ಇದು ಶೇ.1ರಷ್ಟು ಕಡಿಮೆಯಾಗಿದೆ. ಹೀಗಾಗಿ ಈ ಬೆಳವಣಿಗೆಯು ಮುಂಬರುವ ವರ್ಷಗಳಲ್ಲಿ ತೀವ್ರ ಸವಾಲನ್ನು ರಾಜ್ಯಕ್ಕೆ ಒಡ್ಡಲಿದೆ ಎಂದು ಹೇಳಿದೆ.
ಕಳೆದ 6 ವರ್ಷಗಳಿಂದ (2020-2026) ರಲ್ಲಿ ರಾಜ್ಯದ ಸ್ವಂತ ತೆರಿಗೆಯ ವಾರ್ಷಿಕ ಸರಾಸರಿ ಪಾಲು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ ಶೇ. 6.90ರಷ್ಟಿದೆ. ಕೇಂದ್ರದ ತೆರಿಗೆಗಳ ಪಾಲು ಕಡಿಮೆಯಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. 2020-21ರಲ್ಲಿ ಶೇ. 1.93ರಿಂದ 2025-26ರಲ್ಲಿ ಶೇ. 1.69ಕ್ಕೆ ಕ್ಷೀಣಿಸಿದೆ. ಇದೇ ರೀತಿಯಾಗಿ ಕೇಂದ್ರ ಸರ್ಕಾರದಿಂದ ಬರುವ ಅನುದಾನದ ಪ್ರವೃತ್ತಿಯು ಶೇ. 1.22ರಿಂದ ಶೆ. 0.52ಕ್ಕೆ ಇಳಿಕೆಯಾಗಿದೆ. ತೆರಿಗೆಯೇತರ ಅದಾಯವು ಸುಮಾರು 0.5 ಪ್ರತಿಶತದಷ್ಟಿದೆ. ಹೆಚ್ಚುವರಿ ತೆರಿಗೆಯೇತರ ಅದಾಯವನ್ನು ಸಜ್ಜಗೊಳಿಸಬೇಕು ಎಂದುಕೊಂಡರೂ ಇದು ಇಂತಹ ನಿರ್ಬಂಧಗಳನ್ನು ತೋರಿಸುತ್ತಿದೆ ಎಂದು ಕರ್ನಾಟಕ ಆರ್ಥಿಕ ಸಮೀಕ್ಷೆಯು ವಿಶ್ಲೇಷಿಸಿದೆ.
ಸ್ವಂತ ತೆರಿಗೆ ಆದಾಯದ ಮೇಲೆ ಒತ್ತಡ ಹೆಚ್ಚಳ
ಕೇಂದ್ರ ಸರ್ಕಾರದ ವಿಕೇಂದ್ರೀಕರಣ ಯೋಜನೆಯಲ್ಲಿ ರಾಜ್ಯದ ಪಾಲು ಕಡಿಮೆಯಾಗಿದೆ. ಮತ್ತು ಸರಕು ಸೇವೆಗಳ ತೆರಿಗೆಯು ಜಾರಿಯಲ್ಲಿದೆ. ಹೀಗಾಗಿ ರಾಜ್ಯದ ಸ್ವಂತ ತೆರಿಗೆ ಆದಾಯದ ಮೇಲಿನ ಒತ್ತಡವು ಹಲವು ಪಟ್ಟು ಹೆಚ್ಚಾಗಿದೆ. ಇದಲ್ಲದೇ ರಾಜ್ಯಗಳಿಗೆ ಸರಕು ಮತ್ತು ಸೇವೆಗಳ ಮೇಲೆ ತೆರಿಗೆ ಪರಿಹಾರವನ್ನು ನಿಲ್ಲಿಸುವುದರೊಂದಿಗೆ ಮತ್ತು ಸಹಾಯನುದಾನದಲ್ಲಿಯೂ ಕುಸಿತವಾಗಿದೆ. ಹೀಗಾಗಿ ರಾಜ್ಯವು ಆದಾಯದ ಪರ್ಯಾಯ ಮೂಲಗಳನ್ನು ಕಂಡುಕೊಳ್ಳುವ ಅವಶ್ಯಕತೆ ಇದೆ. ಹೀಗಾಗಿ ರಾಜ್ಯವು ಐಟಿ ಸೇವೆಗಳನ್ನು ಉಳಿಸಿಕೊಂಡು ತೆರಿಗೆ ಆಡಳಿತವನ್ನು ಸುಧಾರಿಸಬೇಕು. ಇದರಿಂದಾಗಿ ತೆರಿಗೆ ದರದಲ್ಲಿ ಏರಿಕೆಯಾಗಬಹುದು ಎಂದು ಸಮೀಕ್ಷೆಯು ಅಂದಾಜಿಸಿದೆ.

ವಿತ್ತೀಯ ಪರಿಸ್ಥಿತಿ ಒತ್ತಡಕ್ಕೆ ಸಿಲುಕಿದ ರಾಜ್ಯ
ಅಖಿಲ ಭಾರತ ಪ್ರವೃತ್ತಿಗಳಂತೆಯೇ ಕರ್ನಾಟಕವು ಸಹ ವಿತ್ತೀಯ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿದೆ. ವಿತ್ತೀಯ ಕೊರತೆಯು ಒಟ್ಟು ಆಂತರಿಕ ಉತ್ಪನ್ನಕ್ಕೆ ಶೇ. 3.0ರಷ್ಟನ್ನು ದಾಟದಂತೆ ರಾಜ್ಯವು ಖಚಿತಪಡಿಸಿಕೊಳ್ಳಬೇಕಿದೆ. ಆದರೂ ಬಾಕಿ ಇರುವ ಹೊಣೆಗಾರಿಕೆಗಳಲ್ಲಿನ ಪ್ರವೃತ್ತಿಗಳ ಆಧಾರದ ಮೇಲೆ ಅನುಸರಿಸಿ ಮಧ್ಯಮವಾವಧಿ ಹಣಕಾಸಿನ ಅಪಾಯವಿದೆ ಎಂದು ವಿಶ್ಲೇಷಿಸಿದೆ.
ರಾಜಸ್ವ ಕೊರತೆ- ವಿತ್ತೀಯ ಹೊಣೆಗಾರಿಕೆ ಅಧಿನಿಯಮಕ್ಕೆ ವಿರುದ್ಧ
ರಾಜ್ಯವು ರಾಜಸ್ವ ಹೆಚ್ಚಳವನ್ನು ಹೊಂದಿದ್ದರೂ ಸಹ ಕೆಲವು ವರ್ಷಗಳಿಂದ ರಾಜ್ಯವು ಒಟ್ಟು ಆಂತರಿಕ ಉತ್ಪನ್ನದ ಸುಮಾರು ಶೇ. 1ರಷ್ಟು ರಾಜಸ್ವ ಕೊರತೆ ಹೊಂದಿದೆ. ಇದು ವಿತ್ತೀಯ ಹೊಣೆಗಾರಿಕೆ ಅಧಿನಿಯಮಕ್ಕೆ ವಿರುದ್ಧವಾಗಿದೆ. ಹೀಗಾಗಿ ರಾಜಸ್ವ ವೆಚ್ಚಗಳನ್ನು ತರ್ಕಬದ್ಧಗೊಳಿಸಬೇಕು. ಈ ಬಗ್ಗೆ ರಾಜ್ಯವು ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮಧ್ಯಮಾವಧಿಯಲ್ಲಿ ಬಾಕಿ ಉಳಿದಿರುವ ಹೊಣೆಗಾರಿಕೆಗಳಮೇಲೆ ಪರಿಣಾಮಗಳು ಬೀರಬಹುದು ಎಂದು ಎಚ್ಚರಿಸಿದೆ.
ರಾಜ್ಯವು ಒಟ್ಟು ಆಂತರಿಕ ಉತ್ಪನ್ನವನ್ನು ಸುಧಾರಿಸಲು ವೆಚ್ಚದ ವಿಚಾರಗಳಲ್ಲಿನ ಕಾರ್ಯವಿಧಾನವನ್ನು ಅವಳವಡಿಸಿಕೊಳ್ಳುವುದು ವಿವೇಕಯುತವಾಗಿದೆ ಎಂದು ಹೇಳಿದೆ. ಅಲ್ಲದೇ ಆಯವ್ಯಯದ ಕಠಿಣಕರ ನಿರ್ಬಂಧಗಳನ್ನು ಪರಿಹರಿಸಬೇಕು ಎಂದಾದಲ್ಲಿ ಸಾರ್ವಜನಿಕ ವೆಚ್ಚಗಳಲ್ಲಿನ ದಕ್ಷತೆಯನ್ನು ಸುಧಾರಿಸಬೇಕು. ಸಾರ್ವಜನಿಕ ವೆಚ್ಚಗಳ ಗರಿಷ್ಠ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಬೇಕು. ಇದಕ್ಕಾಗಿ ರಾಜ್ಯವು ಸಾರ್ವಜನಿಕ ವೆಚ್ಚದ ದಕ್ಷತೆಯನ್ನು ಹೆಚ್ಚಿಸುವುದರ ಮೇಲೆ ಹೆಚ್ಚು ಗಮನಹರಿಸಬೇಕು ಎಂದು ಕರ್ನಾಟಕ ಆರ್ಥಿಕ ಸಮೀಕ್ಷೆಯು ಸಲಹೆ ನೀಡಿದೆ.
ಸಂಪನ್ಮೂಲ ಹರಿವಿಗೆ ಖಾತ್ರಿ ಇದೆಯೇ?
ಸುಸ್ಥಿರ ಅಭಿವೃದ್ಧಿ ಗುರಿಗಳ ಅಗತ್ಯಗಳು ಸರ್ಕಾರದ ಹಣಕಾಸಿನ ಮೇಲೆ ಒತ್ತಡವನ್ನು ಉಂಟು ಮಾಡುತ್ತಿವೆ ಎಂದು ವಿಶ್ಲೇಷಿಸಿರುವ ಆರ್ಥಿಕ ಸಮೀಕ್ಷೆಯು ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಸಂಪನ್ಮೂಲಗಳ ಹರಿವನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದೆ. ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ವಿತ್ತೀಯ ಮೂಲಗಳು, ವಿತ್ತೀಯ ಪ್ರಸ್ತುತಿ ಹಾಗೂ ಇತರ ಸ್ಥೂಲ ಆರ್ಥಿಕ ಪರಿಸ್ಥಿತಿಗಳ ಮೇಲೆ ಅದರ ಪ್ರಭಾವ ಹೇಗಾಗಿದೆ ಎಂದು ಯೋಚಿಸುವುದಕ್ಕೆ ಇದು ಸೂಕ್ತ ಸಮಯವಾಗಿದೆ. ಒಂದು ರೀತಿಯಲ್ಲಿ 2023ರವರೆಗೆ ಸ್ವಲ್ಪ ದೀರ್ಘವಾದ ದೃಷ್ಟಿಕೋನ ತೆಗೆದುಕೊಳ್ಳುವ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಸಂಬಂಧಪಟ್ಟಂತೆ ಸ್ಥಿರವಾದ ಮ್ಯಾಕ್ರೋ ಫ್ರೇಮ್ ವರ್ಕ್‌ಗಳಲ್ಲಿ ಕೆಲಸ ಮಾಡಲು ಸಮಯವು ತುಂಬ ಅನುಕೂಲವಾಗಿದೆ ಎಂದು ಸಮೀಕ್ಷೆಯು ವಿಶ್ಲೇಷಿಸಿದೆ.
ಲೆಕ್ಕ ಶೀರ್ಷಿಕೆಗಳಿಗೆ ಸಂಪನ್ಮೂಲ ಹಂಚಿಕೆಯೇ ಸಮಸ್ಯೆ
ರಾಜ್ಯವು ಪ್ರಸ್ತುತ ಸುಮಾರು 1,876 ಲೆಕ್ಕ ಶೀರ್ಷಿಕೆಗಳನ್ನು ಹೊಂದಿದೆ. ಈ ಲೆಕ್ಕ ಶೀರ್ಷಿಕೆಗಳಿಗೆ ಸಂಪನ್ಮೂಲಗಳನ್ನು ಹಂಚಿಕೆ ಮಾಡುವುದೇ ಒಂದು ಸಮಸ್ಯೆಯಾಗಿದೆ ಎಂದು ಹೇಳಿರುವ ಕರ್ನಾಟಕ ಆರ್ಥಿಕ ಸಮೀಕ್ಷೆಯು ಇಷ್ಟು ದೊಡ್ಡ ಸಂಖ್ಯೆಯ ಲೆಕ್ಕ ಶೀರ್ಷಿಕೆಗಳ ನಿರ್ವಹಣೆಯು ಆಡಳಿತದ ಸಾಮರ್ಥ್ಯಗಳನ್ನು ಮಿತಿಗೊಳಿಸಲಿದೆ. ಅಲ್ಲದೇ ವೆಚ್ಚಗಳ ದಕ್ಷತೆಯನ್ನು ತೀವ್ರವಾಗಿ ಕಡಿಮೆ ಮಾಡಬಹುದು. ಕೇಂದ್ರ ಪುರಸ್ಕೃತ ಯೋಜನೆಗಳನ್ನು ಕೇಂದ್ರ ಸರ್ಕಾರವು ಗಣನೀಯವಾಗಿ ಕಡಿತಗೊಳಿಸಿರುವ ಕಾರಣ ರಾಜ್ಯವು ಕೇಂದ್ರದ ಮಾದರಿಯಲ್ಲಿಯೇ ಯೋಜನೆಗಳನ್ನು ಸಮೀಕರಣಗೊಳಿಸಬೇಕು ಎಂದು ಸಲಹೆ ನೀಡಿದೆ.
ಅರ್ಹವಲ್ಲದ ಸಹಾಯಧನಗಳ ಸಂಖ್ಯೆಯೇ ಹೆಚ್ಚು
ದೇಶದಲ್ಲಿಯೇ ಕರ್ನಾಟಕದಲ್ಲಿಯೇ ಅತೀ ಹೆಚ್ಚು ಸಹಾಯಧನ ಯೋಜನೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇದರಲ್ಲಿ ಅರ್ಹವಲ್ಲದ ಸಹಾಯಧನಗಳು ದೊಡ್ಡಮಟ್ಟದಲ್ಲಿ ಕಾಣಿಸುತ್ತಿವೆ. ಹೆಚ್ಚಿನ ಸಂಪನ್ಮೂಲಗಳನ್ನು ಮುಕ್ತಗೊಳಿಸಿ ಬೆಳವಣಿಗೆ ಮತ್ತು ಅಭಿವೃದ್ಧಿ ಉದ್ದೇಶಗಳನ್ನು ಸಾಧಿಸಲು ಅರ್ಹವಲ್ಲದ ಸಹಾಯಧನಗಳನ್ನು ತ್ವರಿತಗತಿಯಲ್ಲಿ ತರ್ಕಬದ್ಧಗೊಳಿಸಬೇಕು. ಇದು ಸ್ಪಷ್ಟ ಮಾರ್ಗವಾಗಿದೆ ಎಂದು ಹೇಳಿದೆ.
ವಿಕೇಂದ್ರೀಕರಣ ಅನುದಾನವೂ ಕಡಿತ
15ನೇ ಹಣಕಾಸು ಆಯೋಗದ ಶಿಫಾರಸ್ಸುಗಳ ಪ್ರಕಾರ ಸಂಪನ್ಮೂಲಗಳ ಹಂಚಿಕೆಯಲ್ಲಿ ರಾಜ್ಯವು ದೊಡ್ಡ ಹಿನ್ನಡೆ ಅನುಭವಿಸಿದೆ. ವಿಕೇಂದ್ರೀಕರಣ ಅನುದಾನವು ಸೇ. 4.74ರಿಂದ ಶೇ.3.64ಕ್ಕೆ ಕಡಿತಗೊಂಡಿದೆ. ತಲಾವಾರು ಅಧಿಕ ಆದಾಯ ಹೆಚ್ಚಾಗಿರುವುದೇ ಇದಕ್ಕೆ ಮೂಲ ಕಾರಣ ಎಂದು ವಿಶ್ಲೇಷಿಸಿರುವ ಆರ್ಥಿಕ ಸಮೀಕ್ಷೆಯು ಬೆಂಗಳೂರು ಮತ್ತು ರಾಜ್ಯದ ದಕ್ಷಿಣ ಜಿಲ್ಲೆಗಳಿಂದಲೇ ಹೆಚ್ಚಿನ ಆದಾಯ ಬರುತ್ತಿದೆ. ಆದರೂ ರಾಜ್ಯವು ತೀವ್ರತರವಾದ ಪ್ರಾದೇಶಿಕ ಅಸಮತೋಲನವನ್ನು ಹೊಂದಿದೆ ಎಂದು ಹೇಳಿದೆ.
ಸಾಮಾಜಿಕ ಆರ್ಥಿಕ ಸೂಚಕಗಳು ಅಥವಾ ಮಾನವ ಅಭಿವೃದ್ಧಿ ಸೂಚಕಗಳು ದೇಶದ ಹಿಂದುಳಿದ ರಾಜ್ಯಗಳಿಗಿಂತ ತೀರಾ ಕಡಿಮೆ ಇದೆ. ರಾಜ್ಯ ಸರ್ಕಾರವು ರಾಜ್ಯದ ಹಿಂದುಳಿದ ಪ್ರದೇಶದ ಏಳು ಜಿಲ್ಲೆಗಳಿಗೆ ವರ್ಷಕ್ಕೆ 3,000 ಕೋಟಿಯಷ್ಟು ಹಣ ನೀಡುತ್ತಿದೆ. ಭಾರತ ಸರ್ಕಾರವೂ ಸಹ ಈ ಪ್ರದೇಶದ ಅಭಿವೃದ್ಧಿಗೆ ಹೊಂದಾಣಿಕೆ ಕೊಡುಗೆ ನೀಡುವ ಮೂಲಕ ರಾಜ್ಯದ ಪ್ರಯತ್ನಗಳಿಗೆ ಪೂರಕವಾಗಿರಬೇಕು ಎಂದು ಅಭಿಪ್ರಾಯಸಿದೆ.
ಅನುದಾನ-ಸಂಪನ್ಮೂಲಗಳ ನಡುವೆ ಅಂತರ
ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಅನುದಾನ ಮತ್ತು ಸಂಪನ್ಮೂಲಗಳ ನಡುವೆ ಇರುವ ಅಂತರವನ್ನು ಗುರುತಿಸಿರುವ ಆರ್ಥಿಕ ಸಮೀಕ್ಷೆಯು ಹಲವಾರು ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಅನುಮೋದಿತ ವಾರ್ಷಿಕ ಕ್ರಿಯಾ ಯೋಜನೆ ಮತ್ತು ನೈಜವಾಗಿ ಬಿಡುಗಡೆಯಾಗುವ ಅನುದಾನ, ಸಂಪನ್ಮೂಲಗಳ ನಡುವೆ ಗಮನಾರ್ಹ ಅಂತರವಿದೆ ಎಂದು ಹೇಳಿದೆ. ಹೀಗಾಗಿ ಕೇಂದ್ರ ಸರ್ಕಾರವು ಬಿಡುಗಡೆ ಮಾಡದ ಭಾಗವನ್ನು ರಾಜ್ಯ ಸರ್ಕಾರವು ಭರಿಸಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಅನುಮೋದಿಸಲಾದ ಸಂಪೂರ್ಣ ಹಣನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಬೇಕು. ಕೇಂದ್ರ ಪುರಸ್ಕೃತ ಯೋಜನೆಗಳ ಅಡಿಯಲ್ಲಿ ಹಣದ ಬಿಡುಗಡೆಯನ್ನು ಮರುಪಾವತಿ ವಿಧಾನದಿಂದ ಮುಂಗಡ ಬಿಡುಗಡೆ ವಿಧಾನಕ್ಕೆ ಬದಲಾಯಿಸಬೇಕು ಎಂದು ಸಲಹೆ ನೀಡಿದೆ.








