ಬೆಂಗಳೂರು; ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿ ಸಂದರ್ಭದಲ್ಲಿ ವಿಶ್ವವಿದ್ಯಾಲಯವನ್ನು ಘಟಕವನ್ನಾಗಿ ಪರಿಗಣಿಸಿದ್ದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಲಭ್ಯವಾಗುತ್ತಿರುವ ಒಟ್ಟು ಹುದ್ದೆಗಳಲ್ಲಿ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆ ಇದೆ. ಅಲ್ಲದೇ ಸಾಮಾಜಿಕ ನ್ಯಾಯಕ್ಕೆ ಪೆಟ್ಟು ಬೀಳುತ್ತದೆ ಎಂದು ಡಾ ಮನಮೋಹನ್ ಸಿಂಗ್ ಬೆಂಗಳೂರು ವಿಶ್ವವಿದ್ಯಾಲಯವು ಸರ್ಕಾರಕ್ಕೆ ತನ್ನ ಅಭಿಪ್ರಾಯವನ್ನು ಸಲ್ಲಿಸಿದೆ.
ಬೋಧಕ ಸಿಬ್ಬಂದಿ ನೇಮಕಾತಿಯಲ್ಲಿ ವಿಷಯವಾರು ಮೀಸಲಾತಿ ಅಥವಾ ವಿಶ್ವವಿದ್ಯಾಲಯ, ಶೈಕ್ಷಣಿಕ ಸಂಸ್ಥೆಗಳನ್ನು ಒಂದು ಘಟಕ ಎಂದು ಪರಿಗಣಿಸಿ ಮೀಸಲಾತಿ ಅನ್ವಯಿಸುವ ಸಂಬಂಧ ಡಾ ಮನಮೋಹನ್ ಸಿಂಗ್ ಬೆಂಗಳೂರು ವಿಶ್ವವಿದ್ಯಾಲಯವು ನೀಡಿರುವ ಅಭಿಪ್ರಾಯದಲ್ಲಿ ಈ ಆತಂಕವನ್ನು ವ್ಯಕ್ತಪಡಿಸಿದೆ.
ಮೈಸೂರು, ಕೊಡಗು, ಕರ್ನಾಟಕ ಸಂಸ್ಕೃತ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ತುಮಕೂರು ವಿಶ್ವವಿದ್ಯಾಲಯವು ತನ್ನ ಅಭಿಪ್ರಾಯ ನೀಡಿವೆ. ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಈ ವಿಶ್ವವಿದ್ಯಾಲಯಗಳು 2026ರ ಮಾರ್ಚ್ 2, 3, 4ರಂದು ನೀಡಿರುವ ಅಭಿಪ್ರಾಯಗಳ ಪ್ರತಿಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿ ನೇಮಕಾತಿಯಲ್ಲಿ ವಿಶ್ವವಿದ್ಯಾಲಯವನ್ನು ಒಂದು ಘಟಕ ಎಂದು ಪರಿಗಣಿಸಿ ಮೀಸಲಾತಿ ಅನ್ವಯಿಸಬೇಕೇ ಅಥವಾ ವಿಷಯವಾರು ಮೀಸಲಾತಿ ಅನ್ವಯಿಸಬೇಕೇ ಎಂಬ ಬಗ್ಗೆ ಸಾಧಕ-ಬಾಧಕಗಳ ಸಲಹೆ, ಶಿಫಾರಸ್ಸುಗಳನ್ನು ಸಲ್ಲಿಸಲು ಸಮಾಜ ಕಲ್ಯಾಣ ಸಚಿವ ಡಾ ಹೆಚ್ ಸಿ ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ 2026ರ ಫೆ.26ರಂದು ಸಭೆ ನಡೆದಿತ್ತು. ಈ ಸಭೆಯ ನಂತರ ಈ ಸಂಬಮಧ ಸಾಧಕ-ಬಾಧಕಗಳ ಕೂಲಂಕಷವಾಗಿ ಪರಾಮರ್ಶಿಸಿ ವಿಶ್ವವಿದ್ಯಾಲಯದ ಸೂಕ್ತವಾದ ಸಲಹೆ, ಶಿಫಾರಸ್ಸುಗಳನ್ನು ಕೋರಿ ಉನ್ನತ ಶಿಕ್ಷಣ ಇಲಾಖೆಯು ಎಲ್ಲಾ ವಿಶ್ವವಿದ್ಯಾಲಯಗಳಿಗೆ ಪತ್ರ ಬರೆದಿತ್ತು.
ಮನಮೋಹನ್ ಸಿಂಗ್ ಬೆಂ.ನಗರ ವಿವಿ ಅಭಿಪ್ರಾಯವೇನು?
ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ವಿಶ್ವವಿದ್ಯಾಲಯವನ್ನು ಘಟಕವಾಗಿ ಪರಿಗಣಿಸಿದ್ದಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಈಗ ಲಭ್ಯವಾಗುತ್ತಿರುವ ಒಟ್ಟು ಹುದ್ದೆಗಳಲ್ಲಿ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆಯಿದ್ದು ಸಾಮಾಜಿಕ ನ್ಯಾಯಕ್ಕೆ ಪೆಟ್ಟು ಬೀಳುತ್ತದೆ ಎಂದು ಡಾ ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯವು ಆತಂಕ ವ್ಯಕ್ತಪಡಿಸಿರುವುದು ಅಭಿಪ್ರಾಯದಿಂದ ಗೊತ್ತಾಗಿದೆ.

ಕೊಡಗು ವಿವಿಯ ನಿಲುವಿನಲ್ಲೇನಿದೆ?
ಒಂದು ವಿಶ್ವವಿದ್ಯಾಲಯವನ್ನು ಒಂದು ಘಟಕವಾಗಿ ಪರಿಗಣಿಸಿ ರೋಸ್ಟರ್ ಬಿಂದುಗಳನ್ನು ಅಳವಡಿಸುವ ಅಥವಾ ವಿಷಯವಾರು ರೋಸ್ಟರ್‍ಗಳನ್ನು ಅಳವಡಿಸುವ ಬಗ್ಗೆ ಕೊಡಗು ವಿಶ್ವವಿದ್ಯಾಲಯವು ಆಂತರಿಕವಾಗಿ ಚರ್ಚಿಸಿದೆ. ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿನ ಸಭೆಯು ನೀಡಿದ್ದ ಸೂಚನೆಯನ್ನು ಕೊಡಗು ವಿಶ್ವವಿದ್ಯಾಲಯವೂ ಸಮ್ಮತಿಸಿದೆ.
‘ವಿಶ್ವವಿದ್ಯಾಲಯ, ಶೈಕ್ಷಣಿಕ ಸಂಸ್ಥೆಗಳಲ್ಲಿ ಬೋಧಕ ಸಿಬ್ಬಂದಿ ನೇಮಕಾತಿಯಲ್ಲಿ ವಿಶ್ವವಿದ್ಯಾಲಯ, ಶೈಕ್ಷಣಿಕ ಸಂಸ್ಥೆಗಳನ್ನು ಒಂದು ಘಟಕ ಎಂದು ಪರಿಗಣಿಸಿ ಮೀಸಲಾತಿ ಅನ್ವಯಿಸಬೇಕೇ ಅಥವ ವಿಷಯವಾರು ಮೀಸಲಾತಿ ಅನ್ವಯಿಸಬೇಕೇ ಎಂಬ ಬಗ್ಗೆ ಆಂತರಿಕವಾಗಿ ಚರ್ಚಿಸಲಾಗಿ ವಿಶ್ವವಿದ್ಯಾಲಯವನ್ನು ಒಂದು ಘಟಕ ಎಂದು ಪರಿಗಣಿಸುವುದು ಸೂಕ್ತ ಎಂದು ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.

ಮೈಸೂರು ವಿಶ್ವವಿದ್ಯಾಲಯದ ಅಭಿಪ್ರಾಯದಲ್ಲೇನಿದೆ?
ಒಂದು ವಿಶ್ವವಿದ್ಯಾಲಯವನ್ನು ಒಂದು ಘಟಕವಾಗಿ ಪರಿಗಣಿಸುವ ಕುರಿತು ಮೈಸೂರು ವಿಶ್ವವಿದ್ಯಾಲಯವು ಚರ್ಚಿಸಿದೆ.

ಪರಿಶಿಸ್ಟ ಜಾತಿಗಳಲ್ಲಿರುವ 101 ಜಾತಿಗಳನ್ನು ಪ್ರವರ್ಗ ಎ, ಪ್ರವರ್ಗ ಬಿ ಮತ್ತು ಪ್ರವರ್ಗ ಸಿ ಎಂದು 3 ಪ್ರವರ್ಗಗಳಾಗಿ ವರ್ಗೀಕರಿಸಲಾಗಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಜಾತಿಗಳಿಗೆ ಪ್ರಸ್ತುತ ಜಾರಿಯಲ್ಲಿರುವ ಶೇ. 17ರಷ್ಟು ಮೀಸಲಾತಿ, ಪ್ರವರ್ಗ ಎ ರಲ್ಲಿ ಸಮುದಾಯಗಳಿಗೆ ಶೆ. 6, ಪ್ರವರ್ಗ ಬಿಯಲ್ಲಿನ ಸಮುದಾಯಗಳಿಗೆ ಶೆ. 6 ಮತ್ತು ಪ್ರವರ್ಗ ಸಿ ಯಲ್ಲಿನ ಸಮುದಾಯಗಳಿಗೆ ಶೇ. 5ರಷ್ಟು ಮೀಸಲಾತಿ ನೀಡಿ ಸರ್ಕಾರವು 2025ರ ಆಗಸ್ಟ್ 25ರಲ್ಲಿ ಆದೇಶ ಹೊರಡಿಸಿದೆ ಎಂದು ಸರ್ಕಾರದ ಗಮನ ಸೆಳೆದಿದೆ.

ಅದೇ ರೀತಿ 2022ರ ಡಿಸೆಂಬರ್ 28ರಂದು ಹೊರಡಿಸಿರುವ ಸರ್ಕಾರದ ಆದೇಶದ ಅನುಬಂಧದಲ್ಲಿ ಪರಿಶಿಷ್ಟ ಜಾತಿಗಳಿಗೆ ಗುರುತಿಸಲಾಗಿರುವ 17 ಬಿಂದುಗಳನ್ನು ಮಾತ್ರ ಅನುಬಂಧದ ಪ್ರಕಾರ ಪುನರ್ ವರ್ಗೀಕರಿಸಿ ಆದೇಶಿಸಿದೆ. ಸರ್ಕಾರದ ಆದೇಶದಂತೆಯೇ ಮೈಸೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರ ವೃಂದದ ಹುದ್ದೆಗಳನ್ನು ವಿಷಯವಾರು ಮೀಸಲಾತಿ ಅನ್ವಯಿಸಿ ಭರ್ತಿ ಮಾಡಬೇಕಾಗುತ್ತದೆ ಎಂದು ತನ್ನ ಅಭಿಪ್ರಾಯದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿ ಆವರಣದಲ್ಲಿ ಸುಮಾರು 50ಕ್ಕೂ ಹೆಚ್ಚು ವಿವಿಧ ವಿಷಯಗಳ ಅಧ್ಯಯನ ವಿಭಾಗಗಳಿವೆ. ಪ್ರತಿ ಅಧ್ಯಯನ ವಿಭಾಗದಲ್ಲೂ ಕನಿಷ್ಠ ಮೂರರಿಂದ ಗರಿಷ್ಠ ಐದರವರೆಗೆ ಮಂಜೂರಾದ ಸಹಾಯಕ ಪ್ರಾಧ್ಯಾಪಕ ವೃಂದದ ಹುದ್ದೆಗಳಿರುತ್ತವೆ. ಸರ್ಕಾರದ ಆದೇಶದ ಪ್ರಕಾರ ವಿಷಯವಾರು ಮೀಸಲಾತಿಯನ್ನು ಅನ್ವಯಿಸಿದರೇ ಪ್ರಸ್ತುತ ಜಾರಿಯಲ್ಲಿರುವ ರೋಸ್ಟರ್ ಬಿಂದುಗಳನ್ನು ಅನುಸರಿಸಿ ಭರ್ತಿ ಮಾಡಬೇಕಾಗಿದೆ ಎಂದು ತಿಳಿಸಿದೆ.
ಕನ್ನಡ ವಿಭಾಗದಲ್ಲಿ ಪ.ಜಾತಿ, ಪ್ರವರ್ಗ ಎ (ಸಾಮಾನ್ಯ), ಸಾಮಾನ್ಯ ಅಭ್ಯರ್ಥಿ, ಪ.ಪಂಗಡ (ಸಾಮಾನ್ಯ, ಸಾಮಾನ್ಯ ಆಭ್ಯರ್ಥಿ (ಮಹಿಳೆ), ಪ್ರವರ್ಗ 1 (ಸಾಮಾನ್ಯ ಅಭ್ಯರ್ಥಿ), ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಅರ್ಥ ಶಾಸ್ತ್ರ ವಿಭಾಗದಲ್ಲಿಯೂ ಇದೇ ಮಾದರಿ ಅನುಸಾರವೇ ಭರ್ತಿ ಮಾಡಬೇಕು ಎಂದು ವಿವರಿಸಿರುವುದು ಗೊತ್ತಾಗಿದೆ.

ಮಹಿಳಾ ವಿಶ್ವವಿದ್ಯಾಲಯದ ಅಭಿಪ್ರಾಯವೇನು?
ಸಹ ಪ್ರಾಧ್ಯಾಪಕ ಮತ್ತು ಪ್ರಾಧ್ಯಾಪಕ ಹುದ್ದೆಗಳ ನೇರ ನೇಮಕಾತಿಯಲ್ಲಿ ಪ್ರಸ್ತುತ ವಿಶ್ವವಿದ್ಯಾಲಯವನ್ನು ಒಂದು ಘಟಕವಾಗಿ ಪರಿಗಣಿಸಲಾಗುತ್ತಿದೆ. ಇದೇ ನಿಯಮಗಳನ್ನು ಸಹ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇರ ನೇಮಕಾತಿಯಲ್ಲಿ ಅನುಸರಿಸಬೇಕಾದ ವಿಧಾನಗಳ ಸಾಧಕ ಬಾಧಕಗಳನ್ನು ಸರ್ಕಾರದ ಗಮನ ಸೆಳೆದಿದೆ.

ವಿಷಯವಾರು ಮೀಸಲಾತಿ ಅನ್ವಯಿಸುವ ಕುರಿತು ಚರ್ಚಿಸಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ಈ ವ್ಯವಸ್ಥೆಯು ಪ್ರಸ್ತುತ ಜಾರಿಯಲ್ಲಿದೆ ಎಂದು ಹೇಳಿದೆ. ಅಲ್ಲದೇ ಬಾಧಕಗಳ ಕುರಿತು ವಿಶ್ವವಿದ್ಯಾಲಯವು ವಿವರಿಸಿದೆ. ಇದರ ಪ್ರಕಾರ 100 ಬಿಂದು ರೋಸ್ಟರ್ ಅನುಸರಿಸಿ ಮೀಸಲಾತಿ ಸೌಕರ್ಯವನ್ನು ನೀಡಲಾಗುತ್ತಿದೆ. ಆದರೆ ಶೈಕ್ಷಣಿಕ ಸಂಸ್ಥೆಗಳು, ವಿಶ್ವವಿದ್ಯಾಲಯಗಳಲ್ಲಿ ವಿಷಯವಾರು ಎರಡು ಅಥವಾ ಮೂರು ಹುದ್ದೆಗಳು ಮಾತ್ರ ಇವೆ. ಬಿಂದು 1- ಎಸ್ ಸಿ, ಬಿಂದು 2-ಸಾಮಾನ್ಯ ಹಾಗೂ ಬಿಂದು 3- ಎಸ್ ಟಿ ಮಾತ್ರ ತುಂಬಲ್ಪಡುವ ಸಾಧ್ಯತೆಗಳೇ ಹೆಚ್ಚಿವೆ.
ಹೀಗೆ ಒಮ್ಮೆ ಭರ್ತಿಯಾದ ಹುದ್ದೆಗಳು ಆ ವ್ಯಕ್ತಿ ನಿವೃತ್ತವಾಗುವವರೆಗೂ ಖಾಲಿ ಆಗುವುದಿಲ್ಲ. ಅಂದರೆ ಸುಮಾರು 30ರಿಂದ 33 ವರ್ಷದವರೆಗೆ ರೋಸ್ಟರ್ -3 ಅಥವಾ ರೋಸ್ಟರ್ 4 ನೇ ಬಿಂದುವನ್ನು ಕಾರ್ಯಗತಗೊಳಿಸುವುದಿಲ್ಲ. ಹೀಗಾಗಿ ರೋಸ್ಟರ್ ಬಿಂದು 100 ತಲುಪಿ ಮೀಸಲಾತಿ ಸೌಲಭ್ಯವು ಎಲ್ಲರಿಗೂ ತಲುಪುವುದು ಅಸಾಧ್ಯ ಎಂದು ವಿವರಿಸಿದೆ.
ತುಮಕೂರು ವಿಶ್ವವಿದ್ಯಾಲಯದ ಅಭಿಪ್ರಾಯ
ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಮೀಸಲಾತಿ ಬಿಂದು ಅಳವಡಿಸುವ ಮೂಲಕ ವಿಶ್ವವಿದ್ಯಾಲಯವನ್ನು ಒಂದು ಘಟಕವನ್ನಾಗಿ ಪರಿಗಣಿಸಬಹುದು ಎಂದು ತುಮಕೂರು ವಿಶ್ವವಿದ್ಯಾಲಯವು ಅಭಿಪ್ರಾಯಿಸಿದೆ. ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹುದ್ದೆಗಳನ್ನು ವೃಂದವಾರು ಒಟ್ಟುಗೂಡಿಸಿ ವಿಶ್ವವಿದ್ಯಾಲಯವನ್ನು ಒಂದು ಘಟಕವನ್ನಾಗಿ ಪರಿಗಣಿಸಿ ಮೀಸಲಾತಿ ಬಿಂದುಗಳನ್ನು ಗುರುತಿಸಬಹುದು ಎಂದು ವಿವರಿಸಿದೆ.

ಅಲ್ಲದೇ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಮೀಸಲಾತಿ ಬಿಂದುಗಳನ್ನು ನಿಗದಿಪಡಿಸಲು ನಿಕಾಯಗಳನ್ನು ಪ್ರತ್ಯೇಕವಾಗಿ ಒಂದು ಘಟಕವನ್ನಾಗಿ ಪರಿಗಣಿಸಬಹುದು. ನಿಕಾಯವಾರು ಮೀಸಲಾತಿ ಬಿಂದುಗಳನ್ನು ಅಳವಡಿಸುವುದರಿಂದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ಸರ್ಕಾರದ ಮೀಸಲಾತಿ ಅನ್ವಯ ಅವಕಾಶ ದೊರೆಯುತ್ತದೆ ಎಂದು ಹೇಳಿದೆ.
ತುಮಕೂರು ವಿಶ್ವವಿದ್ಯಾಲಯವು ಮತ್ತೊಂದು ಅವಕಾಶದ ಬಗ್ಗೆಯೂ ಸರ್ಕಾರದ ಗಮನ ಸೆಳೆದಿದೆ. ವಿಷಯ, ವಿಭಾಗವನ್ನು ಒಂದು ಘಟಕವನ್ನಾಗಿ ಪರಿಗಣಿಸಿ ನೇಮಕಾತಿಗೆ ಮೀಸಲಾತಿ ಬಿಂದುಗಳನ್ನು ಅಳವಡಿಸಬಹುದು ಎಂದೂ ಸಲಹೆ ನೀಡಿದೆ.
ಪ್ರವರ್ಗಗಳಿಗೆ ನ್ಯಾಯ ಕಷ್ಟಸಾಧ್ಯವೆಂದ ಬೆಂಗಳೂರು ಉತ್ತರ ವಿವಿ
ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಸಹ ಒಂದು ವಿಶ್ವವಿದ್ಯಾಲಯವನ್ನು ಒಂದು ಘಟಕವನ್ನಾಗಿ ಪರಿಗಣಿಸಿ ರೋಷ್ಟರ್ ಬಿಂದುಗಳನ್ನು ಅಳವಡಿಸುವ ಅಥವಾ ವಿಷಯವಾರು ರೋಸ್ಟರ್‍ಗಳನ್ನು ಅಳವಡಿಸಲು ಅಭಿಪ್ರಾಯ ನೀಡಿದೆ. ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಪ್ರವರ್ಗಗಳಿಗೆ ಮೀಸಲಾತಿ ಅನ್ವಯವಾಗುವಂತೆ ರೋಸ್ಟರ್ ಹೆಚ್ಚಿಸಿ ಖಾಲಿ ಇರುವ ಸಂಬಂಧದಲ್ಲಿ ಎಲ್ಲಾ ಪ್ರವರ್ಗಗಳಿಗೂ ಮೀಸಲಾತಿ ಜಾರಿಗೊಳಿಸುವ ಸಂಬಂಧ ಯಾವುದೇ ಪ್ರವರ್ಗಕ್ಕೆ ಸೇರಿದ ಅಭ್ಯರ್ಥಿಗಳನ್ನು ಕಡೆಗಣಿಸುವಂತಿಲ್ಲ ಎಂದು ತನ್ನ ಅಭಿಪ್ರಾಯದಲ್ಲಿ ವಿವರಿಸಿದೆ.
ವಿಭಾಗವಾರು ಅಧ್ಯಾಪಕರ ಸಂಖ್ಯೆ ಕಡಿಮೆ
ವಿಶ್ವವಿದ್ಯಾಲಯದಲ್ಲಿ ಪ್ರತಿ ವಿಭಾಗಗಳಲ್ಲೂ ಕೇವಲ ಒಂದು ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆಗಳು ಮಾತ್ರ ಇರುವುದರ ಕುರಿತು ಚರ್ಚೆ ನಡೆಯುತ್ತಿದೆ. ಆದರೆ ವಿಭಾಗವಾರು ಅಧ್ಯಾಪಕರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ರೋಸ್ಟರ್ ಬಿಂದುಗಳನ್ನು ಅಳವಡಿಸಲು ತುಂಬಾ ಕಠಿಣ ಹಾಗೂ ಎಲ್ಲಾ ಪ್ರವರ್ಗಗಳಿಗೂ ನ್ಯಾಯ ದೊರಕಿಸಿಕೊಡುವುದು ಕಷ್ಟ ಸಾಧ್ಯ ಎಂದಿದೆ.
‘ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವು ಖಾಲಿ ಇರುವ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದ ಹುದ್ದೆಗಳಿಗೆ ವಿಶ್ವವಿದ್ಯಾಲಯವನ್ನು ಒಂದ ಘಟಕವನ್ನಾಗಿ ಪರಿಗಣಿಸಿ ಮೀಸಲಾತಿಯನ್ನು ಅಳವಡಿಸುವುದು ಸರಿಯಾದ ಮಾರ್ಗ ಹಾಗೂ ಹೀಗೆ ಮಾಡುವ ಮೂಲಕ ಎಲ್ಲಾ ವರ್ಗಗಳಿಗೂ ನ್ಯಾಯ ದೊರಕಿಸಿದಂತಾಗುತ್ತದೆ,’ ಎಂದು ವಿಶ್ವವಿದ್ಯಾಲಯ ಕುಲಪತಿ ಪ್ರೊ ಬಿ ಕೆ ರವಿ ಅವರು ತಮ್ಮ ಅಭಿಪ್ರಾಯವನ್ನು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ಗೆ ವಿವರಿಸಿದ್ದಾರೆ.

ಉದ್ಯೋಗ ನೇಮಕಾತಿ ಸಮಯದಲ್ಲಿ ವಿಶ್ವವಿದ್ಯಾಲಯವನ್ನೇ ಒಂದು ಘಟಕವಾಗಿ ಪರಿಗಣಿಸಿ ಮೀಸಲಾತಿ ನಿಗದಿಪಡಿಸುವುದು ಪರಿಶಿಷ್ಟ ಜಾತಿಯವರಿಗೆ ಮರಣ ಶಾಸನವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೂ ಸಮಾಜ ಕಲ್ಯಾಣ ಸಚಿವ ಡಾ ಹೆಚ್ ಸಿ ಮಹದೇವಪ್ಪ ಅವರು ವಿಶ್ವವಿದ್ಯಾಲಯವನ್ನೇ ಒಂದು ಘಟಕವಾಗಿ ಪರಿಗಣಿಸಿ ಮೀಸಲಾತಿ ನಿಗದಿಪಡಿಸಲು ತರಾತುರಿಯಲ್ಲಿ ಮುಂದಾಗಿರುವ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ಅವರು ಪತ್ರ ಬರೆದಿದ್ದರು.
ನಿಯಮಾವಳಿಗಳ ಅನ್ವಯ ಪ್ರಸ್ತುತ ವಿಶ್ವವಿದ್ಯಾಲಯದಲ್ಲಿ ವಿಭಾಗವಾರು ಹುದ್ದೆಗಳಿಗೆ ಸಂಬಂಧಿಸಿದಂತೆ ಪ್ರತಿ ಸಣ್ಣ ಘಠಕದ ವಿಷಯದಲ್ಲೂ ಕನಿಷ್ಟ 04 ಹುದ್ದೆಗಳು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿದ್ದಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಿದ್ದಲ್ಲಿ ತಲಾ ಒಂದು ವಿಭಾಗಕ್ಕೆ ಒಂದು ಹುದ್ದೆಯೂ ಪರಿಶಿಷ್ಟ ಪಂಗಡಕ್ಕೆ ಲಭ್ಯವಾಗುತ್ತದೆ. ಇದರ ಅನ್ವಯ 25 ವಿಭಾಗದಲ್ಲಿನ ಸಹಾಯಕ ಪ್ರಾಧ್ಯಾಪಕರ ಒಟ್ಟು 100 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದಲ್ಲಿ ಪರಿಶಿಷ್ಟ ಪಂಗಡಕ್ಕೆ ಪ್ರತಿ ವಿಭಾಗವಾರು ತಲಾ 01ರಂತೆ ಒಟ್ಟು 25 ಹುದ್ದೆಗಳು ಲಭ್ಯವಾಗುತ್ತವೆ ಎಂದು ಪತ್ರದಲ್ಲಿ ತಿಳಿಸಿದ್ದರು.
ಪ್ರಸ್ತುತ ವಿಶ್ವವಿದ್ಯಾಲಯವನ್ನು ಒಂದು ಘಟಕವೆಂದು ಪರಿಗಣಿಸಬೇಕು ಎಂದು ಸಚಿವ ಸಂಪುಟ ಉಪ ಸಮಿತಿ ಶಿಫಾರಸ್ಸು ಮಾಡಿದೆ. ಈ ಶಿಫಾರಸ್ಸಿನಿಂದಾಗಿ ಪ್ರಸ್ತುತ 100 ನೇಮಕಾತಿಗಳಲ್ಲಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಸಿಗುವಂತಹ 25 ಹುದ್ದೆಗಳ ಬದಲಾಗಿ ಕೇವಲ 07 ಹುದ್ದೆಗಳಳು ಮಾತ್ರ ದೊರಕಲಿದೆ. ಈ ಪ್ರಸ್ತಾವನೆಯಿಂದ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳ ಪ್ರಾತಿನಿಧ್ಯವನ್ನು ವಿಶ್ವವಿದ್ಯಾಲಯಗಳ ನೇಮಕಾತಿಯಲ್ಲಿ ಕುಗ್ಗಿಸುವ ಪ್ರಯತ್ನವಾಗಲಿದೆ ಎಂದು ಸತೀಶ್ ಜಾರಕಿಹೊಳಿ ಅವರು ಪತ್ರದಲ್ಲಿ ವಿವರಿಸಿದ್ದರು.
ವಿಶ್ವವಿದ್ಯಾಲಯವನ್ನು ಒಂದು ಘಟಕವೆಂದು ಪರಿಗಣಿಸುವ ಪ್ರಸ್ತಾವನೆಯನ್ನು ಕೈಬಿಡಬೇಕು. ಹಾಲಿ ಇರುವ ನಿಯಮಾವಳಿಗಳ ಅನ್ವಯವೇ ವಿಷಯವಾರು, ವಿಭಾಗವಾರು ಘಟಕವನ್ನೇ ಮುಂದುವರೆಸುವುದು ಅತೀ ಅವಶ್ಯವಾಗಿದೆ. ಹೀಗಾಗಿ ಸಚಿವ ಸಂಪುಟ ಉಪ ಸಮಿತಿಯ ಶಿಫಾರಸ್ಸನ್ನು ಮತ್ತೊಮ್ಮೆ ಪರಾಮರ್ಶಿಸಬೇಕು. ಪರಿಶಿಷ್ಟ ಪಂಗಡದ ಸ್ನಾತಕೋತ್ತರ ಅಭ್ಯರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ವಿಶ್ವವಿದ್ಯಾಲಯವನ್ನು ಒಂದು ಘಟಕವೆಂದು ಪರಿಗಣಿಸುವ ಪ್ರಸ್ತಾವನೆಯನ್ನು ಕೈ ಬಿಡಲು ನಿರ್ದೇಶನ ನೀಡಬೇಕು ಎಂದು ಜಾರಕಿಹೊಳಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರಿದ್ದರು.
ವಿಶ್ವವಿದ್ಯಾಲಯವನ್ನು ಘಟಕ ಮಾಡುವುದರಿಂದ ವಿಶ್ವವಿದ್ಯಾಲಯಗಳನ್ನು ಪ್ರತ್ಯೇಕ ಘಟಕಗಳನ್ನಾಗಿ ಪರಿವರ್ತಿಸುತ್ತಿರುವುದು ಮತ್ತೊಂದು ಸಮಸ್ಯೆಗೆ ದಾರಿಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಂದು ವಿಶ್ವವಿದ್ಯಾಲಯದಲ್ಲಿ 45 ವಿಭಾಗಗಳಿದ್ದರೇ ಒಟ್ಟು 45 ಎಸ್ಸಿ ಹುದ್ದೆಗಳು ಇರಲಿವೆ. ಈಗ ಘಟಕ ಮಾಡಿದರೆ 45 ರಲ್ಲಿ ಶೇ. 15 ಹುದ್ದೆಗಳನ್ನು ಮಾತ್ರ ಮೀಸಲಾತಿಗೆ ಪರಿಗಣಿಸಲಾಗುತ್ತದೆ. ಇದರಿಂದ ಹುದ್ದೆಗಳು ಸಂಖ್ಯೆಯೇ ಕಡಿತವಾಗಲಿದೆ. ಪರಿಶಿಷ್ಟ ಜಾತಿಯ ಎಲ್ಲಾ ವರ್ಗಕ್ಕೂ ಅನ್ಯಾಯವಾಗಲಿದೆ. ಹೀಗಾಗಿ ಪರಿಶಿಷ್ಟ ಜಾತಿಯ ಎಲ್ಲರಿಗೂ ಇದು ಮರಣ ಶಾಸನವಾಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಅಸಂವಿಧಾನಿಕವೇ?
ಉದ್ಯೋಗ ನೇಮಕಾತಿ ಸಮಯದಲ್ಲಿ ವಿಶ್ವವಿದ್ಯಾಲಯವನ್ನೇ ಒಂದು ಘಟಕವಾಗಿ ಪರಿಗಣಿಸಿ ಮೀಸಲಾತಿ ನಿಗದಿಪಡಿಸುವ ಸರ್ಕಾರದ ನಿರ್ಧಾರವೇ ಸರಿಯಿಲ್ಲ. ಆದರೂ ರಾಜ್ಯ ಸಚಿವ ಸಂಪುಟ ಉಪ ಸಮಿತಿಯು ತಾತ್ವಿಕ ಒಪ್ಪಿಗೆ ನೀಡಿದೆ. ಇದು ಅಸಂವಿಧಾನಿಕ ಹಾಗೂ ಮೀಸಲಾತಿ ವ್ಯವಸ್ಥೆಯನ್ನು ಬುಡಮೇಲು ಮಾಡುವ ಹುನ್ನಾರವಾಗಿದೆ ಎಂಬ ಆರೋಪಗಳೂ ಕೇಳಿ ಬಂದಿದ್ದವು.
ನೇಮಕಾತಿಯಲ್ಲಿ ವಿಶ್ವವಿದ್ಯಾಲಯವನ್ನು ಘಟಕವನ್ನಾಗಿ ಪರಿಗಣಿಸುವುದು ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಲಿದೆ. ಅಲಹಾಬಾದ್ ಹೈಕೋರ್ಟ್, ಸುಪ್ರೀಂ ಕೋರ್ಟ್ ಸಹ ವಿಶ್ವವಿದ್ಯಾಲಯಗಳನ್ನು ಘಟಕವಾಗಿ ಪರಿಗಣಿಸಬಾರದು ಎಂದು ತೀರ್ಪು ನೀಡಿದೆ. ಸುಪ್ರೀಂಕೋರ್ಟ್ ಆದೇಶಕ್ಕೂ ಬೆಲೆ ಕೊಡದೇ ರಾಜ್ಯ ಸರ್ಕಾರವು ಕೈಗೊಂಡಿರುವ ನಿರ್ಧಾರವು ಸಾಮಾಜಿಕ ನ್ಯಾಯಕ್ಕೆ ಬಗೆಯುವ ದ್ರೋಹ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು.
ವಿಶ್ವವಿದ್ಯಾಲಯದಲ್ಲಿ ನೂರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದರೆ 25 ವಿಭಾಗಗಳಿದ್ದಲ್ಲಿ ಪ್ರತಿ ವಿಭಾಗಕ್ಕೆ 5 ಹುದ್ದೆಗಳು ರೋಸ್ಟರ್ ಬಿಂದುವಿನಂತೆ ಒಂದು ಪರಿಶಿಷ್ಟ ಜಾತಿ, ಎರಡು ಸಾಮಾನ್ಯ ವರ್ಗ, ಮೂರು ಪರಿಶೀಷ್ಟ ಪಂಗಡ ಹಾಗೂ ನಾಲ್ಕು ಸಾಮಾನ್ಯ, ಐದು ಪ್ರವರ್ಗ-1 ರನ್ನು ಪರಿಗಣಿಸದರೆ ಸಮಾನ ಅವಕಾಶಗಳು ದೊರೆಯಲು ಸಾಧ್ಯವಿದೆ ಎಂದು ಹೇಳಲಾಗಿದೆ.
ಡಾ.ಎಚ್.ಸಿ.ಮಹಾದೇವಪ್ಪ ಇವರು ವಿಶ್ವವಿದ್ಯಾಲಯವನ್ನು ಘಟಕವನ್ನಾಗಿ ಪರಿಗಣಿಸಲು ನಿರ್ಧರಿಸಿರುವ ಪ್ರಕಾರ ಪರಿಶಿಷ್ಟ ಜಾತಿಗಳಿಗೆ ಕೇವಲ 17 ಹುದ್ದೆಗಳು ಮಾತ್ರ ದೊರೆಯಲಿವೆ. ಎಸ್ಸಿಎಸ್ಟಿ ಅಭ್ಯರ್ಥಿಗಳು 26 ಹುದ್ದೆಗಳಿಂದ ವಂಚಿತವಾಗುವಂತಾಗುತ್ತದೆ. ಪರಿಶಿಷ್ಟರಲ್ಲದವರಿಗೆ ರೋಸ್ಟರ್ ಬಿಂದು ಮೀಸಲಾತಿ ಹಂಚುವ ಹುನ್ನಾರ ಅಡಗಿದೆ ಎಂದು ಅನುಮಾನಿಸಲಾಗಿದೆ.






