ಎಂಎಸ್‌ಪಿಎಲ್‌ಗೆ 22.73 ಎಕರೆ ಸರ್ಕಾರಿ ಭೂಮಿ ಖಾಯಂ ಮಂಜೂರು; ಅಸಮ್ಮತಿ ನಡುವೆಯೂ ಕಡತ ಮಂಡನೆ

ಬೆಂಗಳೂರು; ಕಬ್ಬಿಣದ ಅದಿರು ಸಂಸ್ಕರಿಸುವ ಘಟಕಕ್ಕೆ ಬಲ್ದೋಟಾ ಸಮೂಹದ ಎಂಎಸ್‌ಪಿಎಲ್‌ ಕಂಪನಿಗೆ ಬಳ್ಳಾರಿಯಲ್ಲಿ  191.73 ಎಕರೆ ವಿಸ್ತೀರ್ಣದ ಸರ್ಕಾರಿ ಜಾಗ ಮಂಜೂರು ಮಾಡುವ ಪ್ರಕ್ರಿಯೆಯು ಇನ್ನೂ ಚಾಲ್ತಿಯಲ್ಲಿರುವಾಗಲೇ ಇದೇ ಕಂಪನಿಯ ಪವನ ವಿದ್ಯುತ್‌ ಯೋಜನೆಗಾಗಿ  ರಾಜ್ಯ ಸರ್ಕಾರವು ವಿಜಯನಗರ ಜಿಲ್ಲೆಯಲ್ಲಿ 22.73 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನನನ್ನು ಖಾಯಂ ಆಗಿ ಮಂಜೂರು ಮಾಡಲು ಸಚಿವ ಸಂಪುಟಕ್ಕೆ ಕಡತ ಮಂಡನೆಯಾಗಿದೆ.

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶದ ಮೇರೆಗೆ ಕಂದಾಯ ಇಲಾಖೆಯು ಸಚಿವ ಸಂಪುಟಕ್ಕೆ ಕಡತ ಮಂಡಿಸಿದೆ. ಇದೇ ಫೆಬ್ರುವರಿಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕಡತದ ಕುರಿತು ಚರ್ಚೆ ನಡೆಯಲಿದೆ.

 

ಸಚಿವ ಸಂಪುಟಕ್ಕೆ ಮಂಡಿಸಿರುವ ಕಡತದ (RD 6 LGE 2024) ರಹಸ್ಯ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಬಲ್ದೋಟಾ ಸಮೂಹದ ಎಂಎಸ್‌ಪಿಎಲ್‌ ಗ್ಯಾಸಸ್‌ ಲಿಮಿಟೆಡ್‌ಗೆ ಅಂದಾಜು 84.79 ಕೋಟಿ ರು ಮೌಲ್ಯದ  22.73 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನನ್ನು ಖಾಯಂ ಆಗಿ ಮಂಜೂರು ಮಾಡಲು ಕಾನೂನು ಮತ್ತು ಆರ್ಥಿಕ ಇಲಾಖೆಯು ಅಸಮ್ಮತಿ ವ್ಯಕ್ತಪಡಿಸಿದೆ. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಕಡತವನ್ನು ಮಂಡಿಸಿರುವುದು ಸಚಿವ ಸಂಪುಟದ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

 

ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಹೊಸಪೇಟೆ ಹೋಬಳಿಯ ಅಮರಾವತಿ ಗ್ರಾಮದಲ್ಲಿ ಸರ್ವೆ ನಂಬರ್‍‌ 571ರಲ್ಲಿ 22.73 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನಿದೆ. ಈ ಜಮೀನನ್ನು ಎಂಎಸ್‌ಪಿಎಲ್‌ ಗ್ಯಾಸಸ್ ಲಿಮಿಟೆಡ್‌ನ ಪವನ ವಿದ್ಯುತ್‌ ಯೋಜನೆಗಾಗಿ 2011ರ ಸರ್ಕಾರದ ಆದೇಶದ ಪ್ರಕಾರ 2016ರ ಫೆ.26ರಂದು ಅಂದರೇ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಮಂಜೂರಾಗಿತ್ತು.

 

 

ವಿಶೇಷವೆಂದರೇ ಇದೇ ಜಮೀನನ್ನು ಸಿದ್ದರಾಮಯ್ಯ ಅವರ ಎರಡನೇ ಅವಧಿಯಲ್ಲಿ  ಖಾಯಂ ಆಗಿ ಮಂಜೂರು ಮಾಡಲು ಕಡತದಲ್ಲಿ ಅನುಮೋದನೆ ಕೋರಿದೆ. ಕೈಗಾರಿಕೆ ಚಟುವಟಿಕೆಗಳಿಗೆ ಉತ್ತೇಜನ ನೀಡಬೇಕು ಎಂದು ಮುಖ್ಯಮಂತ್ರಿ ಅವರ ಸೂಚನೆಯನ್ನು ಮುಂದೊಡ್ಡಿರುವುದು ತಿಳಿದು ಬಂದಿದೆ.

 

ಹೊಸಪೇಟೆ ತಾಲೂಕಿನ ಅಮರಾವತಿ ಗ್ರಾಮದಲ್ಲಿನ ಸರ್ವೆ ನಂಬರ್ 571ರಲ್ಲಿ ಒಟ್ಟಾರೆ 331.64 ಎಕರೆ ಜಮೀನಿದೆ. ಈ ಪೈಕಿ  ಹೊಸಪೇಟೆ ನಗರಸಭೆ ಆಯುಕ್ತರ ಹೆಸರಿನಲ್ಲಿ  9.00 ಎಕರೆ ಇದ್ದರೇ ಸರಕಾರ ರೈಲ್ವೆ ಹೆಸರಿನಲ್ಲಿ 322.64 ಎಕರೆ ಸ್ವಾಧೀನದಲ್ಲಿದೆ. ಇದರಲ್ಲಿಯೇ ವಿಜಯನಗರ ಜಿಲ್ಲಾಧಿಕಾರಿಗಳು 2023ರ ನವೆಂಬರ್‍‌ 29ರ ಪ್ರಕಾರ 8 ಎಕರೆ ಜಮೀನನ್ನು ಸಮಗ್ರ ಗಣಿ ಪರಿಸರ ಪುನಶ್ಚೇತನ ಅಭಿವೃದ್ಧಿ ಯೋಜನೆಯಡಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಕಾಯ್ದಿರಿಸಿದೆ.

 

 

ಉಳಿದ ಜಮೀನಿನ ಪೈಕಿ 22.73 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನನ್ನು ಎಂಎಸ್‌ಪಿಎಲ್‌ ಗ್ಯಾಸಸ್‌ ಲಿಮಿಟೆಡ್‌ಗೆ ಖಾಯಂ ಆಗಿ ಮಂಜೂರು ಮಾಡಲು ಹೊರಟಿದೆ. ಉಪ ವಿಭಾಗಾಧಿಕಾರಿಗಳ ವರದಿ ಪ್ರಕಾರ ಹೊಸಪೇಟೆಯ ಅಮರಾವತಿಯಲ್ಲಿ ಕೃಷಿಯೇತರ ಜಮೀನಿಗೆ ಮಾರ್ಗಸೂಚಿ ಮೌಲ್ಯವು ಎಕರೆಗೆ 1,05,24,800 ರು ಇದೆ. ಅಲ್ಲದೇ ಮಾರುಕಟ್ಟೆ ಮೌಲ್ಯದ ಪ್ರಕಾರ ಎಕರೆಗೆ 3,73,05,085 ರು ಇದೆ. ಇದರ ಪ್ರಕಾರ 22.73 ಎಕರೆಗೆ ಮಾರುಕಟ್ಟೆಯಲ್ಲಿ 84,79,44,582 ರು ಇದೆ ಎಂದು ಉಪ ವಿಭಾಗಾಧಿಕಾರಿಗಳ ವರದಿಯಿಂದ ಗೊತ್ತಾಗಿದೆ.

 

 

ಕಾನೂನು ಇಲಾಖೆ ಅಸಮ್ಮತಿ

 

ಎಂಎಸ್‌ಪಿಎಲ್‌ ಗ್ಯಾಸ್‌ ಲಿಮಿಟೆಡ್‌ಗೆ 22.73 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನನ್ನು ಮಂಜೂರು ಮಾಡಲು ಕಂದಾಯ ಇಲಾಖೆಯು ಅಭಿಪ್ರಾಯ ಕೋರಿತ್ತು. ಕಂದಾಯ ಇಲಾಖೆಯ ಪ್ರಸ್ತಾವವನ್ನು ಪರಿಶೀಲಿಸಿದ್ದ  ಕಾನೂನು ಇಲಾಖೆಯು (LAW/OPINION/147/2024, DATED 11.06.2025) ಅಸಮ್ಮತಿ ವ್ಯಕ್ತಪಡಿಸಿತ್ತು.

 

ಕಾನೂನು ಅಭಿಪ್ರಾಯದಲ್ಲೇನಿದೆ?

 

ಬಿ ಖರಾಬು ವ್ಯಾಖ್ಯಾನದಡಿಯಲ್ಲಿ ಬರುವ ಈ ಜಮೀನುಗಳನ್ನು ಸಾರ್ವಜನಿಕ ಉದ್ದೇಶಗಳೀಗಾಗಿ ಮೀಸಲಿರಿಸಬೇಕಾಗುತ್ತದೆ. ಅದನ್ನು ಹೊರತುಪಡಿಸಿ ಖಾಸಗಿ ವ್ಯಕ್ತಿಗಳಿಗೆ ಬಿ ಖರಾಬು ಜಮೀನುಗಳನ್ನು ಮಂಜೂರು ಮಾಡಲು ನಿಷೇಧವಿದೆ. ಹೀಗಾಗಿ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊಸಪೇಟೆ ಹೋಬಳಿಯ ಅಮರಾವತಿ ಗ್ರಾಮ ಸರ್ಕಾರಿ ಜಮೀನಿನ ಸರ್ವೆ ನಂಬರ್‍‌ 571ರ ವಿಸ್ತೀರ್ಣ 9.29 ಹೆಕ್ಟೇರ್ (22.73 ಎಕರೆ) ಜಮೀನನ್ನು ವಿದ್ಯುತ್ ಪ್ರಾಜೆಕ್ಟ್‌ಗಾಗಿ ಎಂಎಸ್‌ಪಿಎಲ್‌ ಗ್ಯಾಸಸ್ ಲಿಮಿಟೆಡ್‌ಗೆ ಖಾಯಂ ಆಗಿ ಮಂಜೂರು ಮಾಡಲು ಅವಕಾಶವಿರುವುದಿಲ್ಲ ಎಂದು ಕಾನೂನು ಇಲಾಖೆಯು ತನ್ನ ಅಭಿಪ್ರಾಯದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

ಆರ್ಥಿಕ ಇಲಾಖೆಯಿಂದಲೂ ಅಸಮ್ಮತಿ

 

ಕಾನೂನು ಇಲಾಖೆ ಮಾತ್ರವಲ್ಲ, ಆರ್ಥಿಕ ಇಲಾಖೆಯೂ ಸಹ ಅಸಮ್ಮತಿ (FD/725/Exp-7/2025 dated 04.09.2025) ವ್ಯಕ್ತಪಡಿಸಿತ್ತು. ವಿಶೇಷವೆಂದರೆ ಇದೇ ಪ್ರಕರಣದಲ್ಲಿ ಆರ್ಥಿಕ ಇಲಾಖೆಯು 2025ರ ಜುಲೈ 4ರಂದೇ ತನ್ನ ಅಭಿಪ್ರಾಯದಲ್ಲಿಯೂ ಕಂದಾಯ ಇಲಾಖೆಯ ಪ್ರಸ್ತಾವಕ್ಕೆ ಅಸಮ್ಮತಿ ವ್ಯಕ್ತಪಡಿಸಿತ್ತು. ಆದರೂ ಎರಡನೇ ಬಾರಿಗೆ ಅಭಿಪ್ರಾಯ ಕೋರಿತ್ತು. ಎರಡನೇ ಬಾರಿ ನೀಡಿದ್ದ ಅಭಿಪ್ರಾಯದಲ್ಲಿಯೂ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿತ್ತು.

 

‘ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಹೊಸಪೇಟೆ ಹೋಬಳಿಯ ಅಮರಾವತಿ ಗ್ರಾಮದ ಸರ್ಕಾರಿ ಜಮೀನಿನ ಸರ್ವೆನಂಬರ್ 571ರ ವಿಸ್ತೀರ್ಣ 9.20 ಹೆಕ್ಟೇರ್ (22.73 ಎಕರೆ) ಜಮೀನನ್ನು ಪವನ ವಿದ್ಯುತ್‌ ಪ್ರಾಜೆಕ್ಟ್‌ಗಾಗಿ ಎಂಎಸ್‌ಪಿಎಲ್ ಗ್ಯಾಸಸ್ ಲಿಮಿಟೆಡ್‌ಗೆ ಗುತ್ತಿಗೆ ನೀಡಲಾದ ಜಮೀನನ್ನು ಖಾಯಂ ಆಗಿ ಮಂಜೂರು ಮಾಡುವ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯ ಸಹಮತಿ ಇರುವುದಿಲ್ಲ ಎಂದು 2025ರ ಜುಲೈ 4ರಂದೇ ಹಿಂಬರಹದಲ್ಲಿ ನೀಡಿರುವ ಅಭಿಪ್ರಾಯವನ್ನೇ ಪುನರುಚ್ಚರಿಸಲಾಗಿದೆ,’ ಎಂದು ಅಭಿಪ್ರಾಯದಲ್ಲಿ ತಿಳಿಸಿರುವುದು ಗೊತ್ತಾಗಿದೆ.

 

ಸಂಡೂರಿನಲ್ಲಿಯೂ 191.73 ಎಕರೆ

 

ಎಂಎಸ್‌ಪಿಎಲ್‌ ಲಿಮಿಟೆಡ್‌ಗೆ  ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರು ಹೋಬಳಿಯ ಕಾಳಿಂಗೇರಿ, ಅಂಕಮನಾಳ ಗ್ರಾಮದ ವಿವಿಧ ಸರ್ವೇ ನಂಬರ್‍‌ಗಳಲ್ಲಿರುವ ಸರ್ಕಾರಿ ಜಮೀನುಗಳನ್ನು ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲು ತುದಿಗಾಲಲ್ಲಿ ನಿಂತಿದೆ. 

 

 

191.73 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನು ಮಂಜೂರು ಮಾಡುವ ಸಂಬಂಧದ ಕಡತವು ಕಂದಾಯ ಇಲಾಖೆಯಲ್ಲಿ ಬಿರುಸಿನ ವೇಗದಲ್ಲಿ ಚಲಿಸುತ್ತಿದೆ.

 

 

 

ಸಂಡೂರು ತಾಲೂಕಿನ ಚೋರನೂರು ಹೋಬಳಿ ಕಾಳಿಂಗೇರಿ ಗ್ರಾಮ ಮತ್ತು ಅಂಕಮನಾಳ ಗ್ರಾಮದ ವಿವಿಧ  ಸರ್ವೆ ನಂಬರ್‍‌ಗಳಲ್ಲಿ 201.92 ಎಕರೆ ಪೈಕಿ 191 ಎಕರೆ71 ಗುಂಟೆ ಜಮೀನನ್ನು ಗುತ್ತಿಗೆ ಆಧಾರದ ಮೇಲೆ  ಮಂಜೂರು ಮಾಡುವ ಕಲ್ಬುರ್ಗಿ ಪ್ರಾದೇಶಿಕ ಆಯುಕ್ತರು 2024ರ ಜನವರಿ 19ರಂದೇ ಪ್ರಸ್ತಾವ ಸಲ್ಲಿಸಿದ್ದರು.

 

ಪ್ರಸ್ತಾವದಲ್ಲೇನಿದೆ?

 

ಎಂಎಸ್‌ಪಿಎಲ್‌ ಕಂಪನಿಯು  5.00 ಎಂಟಿಪಿಎ ಮತ್ತು 3.00 ಎಂಟಿಪಿಎ ಕಬ್ಬಿಣದ ಅದಿರು ಸಂಸ್ಕರಿಸುವ ಘಟಕ ಸ್ಥಾಪಿಸಲು ಮುಂದಾಗಿದೆ. ಕೈಗಾರಿಕೆ ಉದ್ದೇಶಕ್ಕಾಗಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕಾಳೀಂಗೇರಿ ಮತ್ತು ಅಂಕಮ್ಮನಹಾಳ್‌ ಗ್ರಾಮದ ವಿವಿಧ ಸರ್ವೆ ನಂಬರ್‍‌ಗಳಲ್ಲಿ 201.92 ಎಕರೆ ಇದೆ. ಇದರಲ್ಲಿ 191.71 ಎಕರೆ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಬೇಕು ಎಂದು ಬಳ್ಳಾರಿ ಜಿಲ್ಲಾಧಿಕಾರಿ 2024ರ ಜನವರಿ 6ರಂದು ಪ್ರಾದೇಶಿಕ ಆಯುಕ್ತರಿಗೆ ಪ್ರಸ್ತಾವ ಸಲ್ಲಿಸಿದ್ದರು.

 

 

ಅಂಕಮ್ಮನ  ಹಾಳ್‌ ಗ್ರಾಮದ ಸರ್ವೆ ನಂಬರ್‍‌ 302ರಲ್ಲಿ ಪಹಣಿ ಪ್ರಕಾರ 147.56 ಎಕರೆ ಇದೆ. ಇದರಲ್ಲಿ ಕೈಗಾರಿಕೆಗಾಗಿ 20.00 ಎಕರೆ ಕೋರಿದೆ. ಕಾಳಿಂಗೇರಿ ಗ್ರಾಮದ ಸರ್ವೆ ನಂಬರ್‍‌ 30ರಲ್ಲಿರುವ  10.06 ಎಕರೆ, ಸರ್ವೆ ನಂಬರ್‍‌ 31ರಲ್ಲಿರುವ 10.92 ಎಕರೆ,  32ರಲ್ಲಿ 30.83 ಎಕರೆ, 35ರಲ್ಲಿ 99.90 ಎಕರೆ ಮತ್ತು 240ರಲ್ಲಿ 795. 57 ಎಕರೆಯಲ್ಲಿ 20.00 ಎಕರೆ ಸೇರಿ ಒಟ್ಟಾರೆ 191.71 ಎಕರೆ ವಿಸ್ತೀರ್ಣದ ಜಮೀನನ್ನು ಕೈಗಾರಿಕೆ ಉದ್ದೇಶಕ್ಕಾಗಿ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಬೇಕು ಎಂದು ಪ್ರಸ್ತಾವನೆಯಲ್ಲಿ ಕೋರಿತ್ತು.

 

 

ಪ್ರಸ್ತಾಪಿತ ಜಮೀನು ಕೈಗಾರಿಕೆ ಯೋಜನೆ ಅವಶ್ಯಕತೆ ಅನುಗುಣವಾದ ವಿಸ್ತೀರ್ಣಕ್ಕೆ ಸೀಮಿತಗೊಳಿಸಿ ಕರ್ನಾಟಕ ಭೂ ಮಂಜೂರಾತಿ ನಿಯಮ 1969ರ ನಿಯಮ 19 ಹಾಗೂ 22ರ ಅಡಿಯಲ್ಲಿ ಸರ್ಕಾರಕ್ಕೆ ಮೂಲ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪ್ರಾದೇಶಿಕ ಆಯುಕ್ತರು ಸರ್ಕಾರಕ್ಕೆ ತಿಳಿಸಿದ್ದರು.

 

ಭೂಮಿ ದಾಖಲೆಗಳ ಪ್ರಕಾರ ಸಂಡೂರು ತಾಲೂಕಿನ ಚೋರನೂರು ಹೋಬಳಿಯ ಕಾಳಿಂಗೇರಿ ಗ್ರಾಮದ ಸರ್ವೆ ನಂಬರ್‍‌ 29ರಲ್ಲಿ 16.67 ಎಕರೆ ವಿಸ್ತೀರ್ಣದ ಜಮೀನಿದೆ. ಇದರಲ್ಲಿ ಸರ್ಕಾರದ ಹೆಸರಿನಲ್ಲಿ 9.67 ಎಕರೆ ಇದೆ. ಇನ್ನುಳಿದ 3 ಎಕರೆಯು ಸಿ ಕೆ ತಿಮ್ಮಯ್ಯ ಹೆಸರಿನಲ್ಲಿದೆ. ವಾಸ್ತವದಲ್ಲಿ ಈ ಜಮೀನು 1996ರ ಪ್ರಕಾರ ಪಿಟಿಸಿಎಲ್‌ ಭೂಮಿಯಾಗಿದೆ. ಹೀಗಾಗಿ ಈ ಭೂಮಿಯು ಪರಭಾರೆ ಮಾಡಲು ಅವಕಾಶವಿಲ್ಲ.

 

 

ಅದೇ ರೀತಿ ಅಂಕಮನಹಾಳ ಗ್ರಾಮದಲ್ಲಿನ ಸರ್ವೆ ನಂಬರ್‍‌ 302ರಲ್ಲಿ ಒಟ್ಟು 147.56 ಎಕರೆ ವಿಸ್ತೀರ್ಣದ ಜಮೀನು ಸರ್ಕಾರಿ ಬಿ ಖರಾಬು ಜಮೀನಿದೆ. ಇನ್ನುಳಿದ 12 ಎಕರೆಯು ಗಂಡಿ ಓಬಮ್ಮ ಅವರ ಹೆಸರಿನಲ್ಲಿದೆ. ಈ ಜಮೀನು ಸಹ ಪಿಟಿಸಿಎಲ್‌ ಭೂಮಿಯಾಗಿದೆ.

 

 

 

ಈ ಹಿಂದೆಯೂ ಇದೇ ಎಂಎಸ್‌ಪಿಎಲ್‌ ಕಂಪನಿಯು ಕಬ್ಬಿಣ ಅದಿರು ಸಂಸ್ಕರಣೆ ಘಟಕ ಸ್ಥಾಪಿಸಲು ಸರ್ಕಾರದಿಂದ 922 ಎಕರೆ ಜಮೀನನ್ನು ಮಂಜೂರು ಮಾಡಿಸಿಕೊಂಡಿತ್ತು.  ಈ ಪ್ರಕ್ರಿಯೆಯಲ್ಲಿ   ಕರ್ನಾಟಕ ಭೂ ಸುಧಾರಣೆ ಕಾಯ್ದೆಯನ್ನು ಎಂಎಸ್‌ಪಿಎಲ್‌ ಸಮೂಹದ ಆರ್‌ ಎಸ್‌ ಸ್ಟೀಲ್‌ ಕಂಪನಿ ನೇರನೇರಾ ಉಲ್ಲಂಘಿಸಿದೆ ಎಂಬ ಗುರುತರವಾದ ಆರೋಪ ಕೇಳಿ ಬಂದಿತ್ತು.

 

ಅದೇ ರೀತಿ ಆರ್‌ಎಸ್‌ ಐರನ್‌ ಸ್ಟೀಲ್‌ ಲಿಮಿಟೆಡ್‌ ಕೂಡ ಜಮೀನು ವಶಕ್ಕೆ ಪಡೆದು 10 ವರ್ಷಗಳಾಗಿದ್ದರೂ ಒಂದೇ ಒಂದು ಕೈಗಾರಿಕೆ ಘಟಕವನ್ನು ಸ್ಥಾಪಿಸಿರಲಿಲ್ಲ.

 

 

922 ಎಕರೆಯಲ್ಲಿ ನೆಲೆಗೊಳ್ಳಲಿಲ್ಲ ಒಂದೇ ಒಂದು ಕೈಗಾರಿಕೆ; ಎಂಎಸ್‌ಪಿಎಲ್‌ ರಕ್ಷಣೆಗೆ ಸರ್ಕಾರ?

 

ಈ ಕಂಪನಿಗೆ ಎರಡನೇ ಹಂತದಲ್ಲಿ 2008ರಲ್ಲಿ ಕೊಪ್ಪಳ ಗ್ರಾಮದಲ್ಲಿ 754 ಎಕರೆ 12 ಗುಂಟೆ, 2010ರಲ್ಲಿ 168 ಎಕರೆ 7 ಗುಂಟೆ ಸೇರಿ ಒಟ್ಟು 922 ಎಕರೆ 19 ಗುಂಟೆ ಹಂಚಿಕೆ ಮಾಡಲಾಗಿತ್ತು. ಇದರಲ್ಲಿ ಬಸಾಪುರ ಗ್ರಾಮದ ಸರ್ಕಾರಿ ಸರ್ವೇ ನಂಬರ್‌ 143ರಲ್ಲಿ 44 ಎಕರೆ 35 ಗುಂಟೆ ಜಮೀನು ಕಂದಾಯ ಇಲಾಖೆಯಿಂದ ಹಸ್ತಾಂತರ ಆಗಿದೆ. ಆದರೆ ಭೂಮಿ ಕಳೆದುಕೊಂಡ ರೈತರ ಪೈಕಿ 463 ಎಕರೆ 29 ಗುಂಟೆ ಜಮೀನಿನ ಭೂ ಮಾಲೀಕರು ಭೂ ಸ್ವಾಧೀನ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು.

 

 

 

 

ತಡೆಯಾಜ್ಞೆ ನೀಡಿರುವ ಭೂ ಸ್ವಾಧೀನ ಪ್ರಕರಣ ಹೊರತುಪಡಿಸಿ ಉಳಿದ ಜಮೀನಿನಲ್ಲಿ ಕಳೆದ 10 ವರ್ಷಗಳಿಂದಲೂ ಯಾವುದೇ ಕೈಗಾರಿಕೆಯನ್ನು ಸ್ಥಾಪಿಸದೇ ಪಡಾ ಬಿಟ್ಟಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಜಾಣ ಕುರುಡನ್ನು ಪ್ರದರ್ಶಿಸಿದೆ. ಆರ್‌ ಎಸ್‌ ಐರನ್‌ ಸ್ಟೀಲ್‌ ಕಂಪನಿ ಪಡಾ ಬಿಟ್ಟಿರುವ ಈ ಜಮೀನಿನ ಮಾರುಕಟ್ಟೆಯ ಅಂದಾಜು ಮೌಲ್ಯ 270 ಕೋಟಿ ರು.ಇದೆ ಎಂದು ತಿಳಿದು ಬಂದಿದೆ.

 

900 ಎಕರೆ ಜಾಗದಲ್ಲಿ ಕೈಗಾರಿಕೆಯನ್ನೇ ಸ್ಥಾಪಿಸಿಲ್ಲ ಎಂದು ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರ್ನಾಟಕ ವಿಧಾನಸಭೆಯ ಅಂದಾಜು ಸಮಿತಿ ಮುಂದೆ ಒಪ್ಪಿಕೊಂಡಿದ್ದರು.

 

900 ಎಕರೆಯಲ್ಲಿ ನೆಲೆಗೊಳ್ಳಲಿಲ್ಲ ಒಂದೇ ಒಂದು ಕೈಗಾರಿಕೆ; ಎಂಎಸ್‌ಪಿಎಲ್‌ ರಕ್ಷಣೆಗೆ ನಿಂತ ಬಿಜೆಪಿ ಸರ್ಕಾರ?

 

ಆರ್‌ ಎಸ್‌ ಐರನ್‌ ಸ್ಟೀಲ್‌ ಕಂಪನಿ ಕೊಪ್ಪಳ ಯೋಜನೆಗಾಗಿ ಒಟ್ಟು 4,500 ಕೋಟಿ ರು. ಹೂಡಿಕೆ ಮಾಡಲು ಉದ್ದೇಶಿಸಿತ್ತು. ಇದು ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಹೂಡಿಕೆ ಎಂದು ಹೇಳಲಾಗಿತ್ತು. ಎರಡು ಹಂತದಲ್ಲಿ ಘಟಕಗಳನ್ನು ಆರಂಭಿಸುವ ಉದ್ದೇಶ ಹೊಂದಿದ್ದ ಈ ಕಂಪನಿ 2010ರ ಮಧ್ಯದಲ್ಲಿ ಪ್ರಾರಂಭಿಕ ಹಂತದಲ್ಲಿ 1.2 ಮಿಲಿಯನ್‌ ಟನ್ ಕಬ್ಬಿಣ, ಉಕ್ಕು ಉತ್ಪಾದನೆ ಗುರಿ ಹೊಂದಿತ್ತು.

 

ಆದರೆ 922 ಎಕರೆಯನ್ನು ಕಂಪನಿಯು ಬಳಸಿಕೊಂಡಿಲ್ಲ ಎಂದು ಖುದ್ದು ಕೊಪ್ಪಳ ಉಪ ವಿಭಾಗಾಧಿಕಾರಿ ಅಂದಾಜು ಸಮಿತಿ ಮುಂದೆ ಹೇಳಿಕೆ ನೀಡಿದ್ದರು. ಈ ಮಧ್ಯೆ ರೈತರು ನ್ಯಾಯಾಲಯ ಮೆಟ್ಟಿಲೇರಿದ್ದರು. ಆದರೆ ಕೆಐಎಡಿಬಿಯು ಒಂದೇ ಒಂದು ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ. ಅಲ್ಲದೆ ನ್ಯಾಯಾಲಯದಲ್ಲಿ ಪ್ರಕರಣ ಇರುವುದಕ್ಕೂ ಜಮೀನು ಹಿಂಪಡೆಯುವುದಕ್ಕೆ ಯಾವುದೇ ಸಂಬಂಧ ಇರದಿದ್ದರೂ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ ಎಂಬ ನೆಪವೊಡ್ಡಿ ಕಂಪನಿಗೆ ರಕ್ಷಣೆ ಒದಗಿಸಿತ್ತು.

 

 

 

 

ಅಲ್ಲದೆ ಈ ಕಂಪನಿಗೆ 2009ರಲ್ಲಿ ಜಾಗವನ್ನು ನೀಡಲಾಗಿತ್ತು. ಆದರೆ ಪ್ರಕರಣ ನ್ಯಾಯಾಲದಯ ಮೆಟ್ಟಿಲೇರಿರುವುದು 2017ರಲ್ಲಿ. 8 ವರ್ಷಗಳಿಂದಲೂ ಕಂಪನಿಯು ಕೈಗಾರಿಕೆ ಘಟಕವನ್ನು ಸ್ಥಾಪಿಸದೇ ಇದ್ದರೂ ಕೆಐಎಡಿಬಿ ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ.

 

ಕೆಐಎಡಿಬಿ ವ್ಯಾಪ್ತಿಗೆ ಸೇರಿದ ಭೂಮಿಯಲ್ಲಿ ಏರೋಡ್ರಮ್‌ ಸ್ಥಾಪನೆ ಮಾಡಲು ಅವಕಾಶ ನೀಡಲಾಗಿದೆ. ಆದರೆ ಈ ಜಾಗವನ್ನು ಕೈಗಾರಿಕೆ ಅಭಿವೃದ್ಧಿಗಾಗಿ ಮಂಜೂರಾಗಿದೆ. ಮತ್ತೊಂದು ವಿಶೇಷವೆಂದರೆ ಮಂಜೂರಾಗಿರುವ ಜಾಗ ಎ-ಖರಾಬು ವರ್ಗೀಕರಣದಲ್ಲಿದೆ. ಇಂತಹ ಜಾಗವನ್ನು ರೈತ ಮಾರಾಟ ಮಾಡಲು ಸಾಧ್ಯವೇ ಇಲ್ಲ. ಆತ ಇರುವವರೆಗೂ ಎ-ಖರಾಬು ಜಮೀನಿನ ಅನುಭವದಾರನಾಗಬಹುದೇ ಹೊರತು ಮಾರಾಟ ಮಾಡಲು ಸಾಧ್ಯವಿಲ್ಲ.

 

ಏರೋಡ್ರಮ್‌ ಸ್ಥಾಪನೆ ಮಾಡಲು ಕೊಟ್ಟಿರುವ ಜಾಗ ಯಾರಿಗೆ ಸಂಬಂಧಪಟ್ಟಿದೆ, ರೈತರಿಂದ ಅವರು ಖರೀದಿ ಮಾಡಿದ್ದಾರೆಯೇ, ಸರ್ಕಾರದಿಂದ ಭೂ ದಾನ ನೀಡಲಾಗಿದೆಯೇ ಅಥವಾ 109 ರ ಪ್ರಕಾರ ಇವರಿಗೆ ಅವಕಾಶ ನೀಡಿದ್ದಾರೆಯೇ, ಯಾವ ಆಧಾರದ ಮೇಲೆ ಮಂಜೂರು ಮಾಡಿದ್ದಾರೆ ಎಂದು ಅಂದಾಜು ಸಮಿತಿ ಕೇಳುತ್ತಿರುವ ಪ್ರಶ್ನೆಗಳಿಗೆ ಕಂದಾಯ ಇಲಾಖೆ ಮತ್ತು ವಾಣಿಜ್ಯ, ಕೈಗಾರಿಕೆ ಇಲಾಖೆಯು ಸಮರ್ಪಕವಾದ ಉತ್ತರವನ್ನೂ ನೀಡಿರಲಿಲ್ಲ.

 

ಸಮಿತಿ ಸದಸ್ಯ ಶಾಸಕರು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ನೀಡಲು ತಡಬಡಾಯಿಸುತ್ತಿರುವ ಅಧಿಕಾರಿಗಳನ್ನು ಸದಸ್ಯ ಶಾಸಕ ಕೆ ಎಂ ಶಿವಲಿಂಗೇಗೌಡ ಅವರು ತರಾಟೆಗೆ ತೆಗೆದುಕೊಂಡಿದ್ದರು.  ‘ಈ ವಿಚಾರದಲ್ಲಿ ಏನೋ ವಂಚನೆ ಆಗಿದೆ. ಅಧಿಕಾರಿಗಳಿಗೆ ಎಲ್ಲವೂ ಗೊತ್ತಿದೆ. ಆದರೂ ಅದನ್ನು ಮುಚ್ಚಿಡುತ್ತಿದ್ದಾರೆ. ಸರ್ಕಾರದ ಖರಾಬು ಜಮೀನನ್ನು ಲೂಟಿ ಹೊಡೆದಿರಬಹುದು ಅಥವಾ ಸರ್ಕಾರದಿಂದಲೇ ಮಂಜೂರು ಮಾಡಿರಬಹುದು,’ ಎಂದು ಅನುಮಾನ ವ್ಯಕ್ತಪಡಿಸಿದ್ದರು.

 

ಬಲ್ದೋಟಾ ಸಮೂಹದ ಕಂಪನಿಗಳು ಕರ್ನಾಟಕ ಭೂ ಸುಧಾರಣೆ ಕಾಯ್ದೆಯನ್ನು ನೇರನೇರಾ ಉಲ್ಲಂಘಿಸುತ್ತಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳದ್ದು ಮಾತ್ರ ಜಾಣ ಕುರುಡು. ಕರ್ನಾಟಕ ವಿಧಾನಸಭೆಯ ಅಂದಾಜು ಸಮಿತಿ ಈ ಪ್ರಕರಣವನ್ನು ಹೊರಗೆಡವವರೆಗೂ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೇ ಯಾವ ಮಾಹಿತಿಯೂ ಇರಲಿಲ್ಲ.

 

ಕೈಗಾರಿಕೆ ಉದ್ದೇಶಕ್ಕಾಗಿ ಸರ್ಕಾರದಿಂದ ವಿನಾಯಿತಿ ಪರವಾನಿಗೆ ಪಡೆದು ಖಾಸಗಿ ಹಿಡುವಳಿದಾರರಿಂದ ನೂರಾರು ಎಕರೆ ವಿಸ್ತೀರ್ಣದ ಕೃಷಿ ಜಮೀನು ಖರೀದಿಸಿರುವ ಬಲ್ದೋಟಾ ಸಮೂಹದ ಕಂಪನಿಗಳು ನಿಗದಿತ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳದಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ವಹಿಸಿಲ್ಲ. ಅಲ್ಲದೆ ಈ ಹಿಂದಿನ  ಸರ್ಕಾರ ಕಣ್ಣೆತ್ತಿಯೂ ನೋಡಿರಲಿಲ್ಲ.

Your generous support will help us remain independent and work without fear.

Latest News

Related Posts