922 ಎಕರೆಯಲ್ಲಿ ನೆಲೆಗೊಳ್ಳಲಿಲ್ಲ ಒಂದೇ ಒಂದು ಕೈಗಾರಿಕೆ; ಎಂಎಸ್‌ಪಿಎಲ್‌ ರಕ್ಷಣೆಗೆ ಸರ್ಕಾರ?

ಬೆಂಗಳೂರು; ಪ್ರತಿಷ್ಠಿತ ಎಂಎಸ್‌ಪಿಎಲ್‌ ಒಡೆತನದ ಮತ್ತೊಂದು ಕಂಪನಿ ಆರ್‌ ಎಸ್‌ ಐರನ್‌ ಸ್ಟೀಲ್‌ ಕಂಪನಿ (AARESS IRON STEEL LIMITED) ಕೈಗಾರಿಕೆ ಉದ್ದೇಶಕ್ಕೆ ಮಂಜೂರು ಮಾಡಿಸಿಕೊಂಡಿದ್ದ 900 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಈವರೆವಿಗೂ ಒಂದೇ ಒಂದು ಕೈಗಾರಿಕೆಯನ್ನು ಸ್ಥಾಪಿಸಿಲ್ಲ.

ಜಮೀನು ಬಳಕೆ ಮಾಡಿಕೊಳ್ಳದ ಕಂಪನಿಗಳಿಂದ ಜಮೀನನ್ನು ವಶಪಡಿಸಿಕೊಳ್ಳಲಾಗುವುದು ಎಂದು ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ ಅವರು ಹೇಳಿಕೆ ನೀಡಿದ್ದರ ಬೆನ್ನಲ್ಲೇ ಆರ್‌ ಎಸ್‌ ಐರನ್‌ ಸ್ಟೀಲ್‌ ಕಂಪನಿಯ ಬಂಡವಾಳವೂ ಹೊರಬಿದ್ದಿದೆ.

ಕರ್ನಾಟಕ ಭೂ ಸುಧಾರಣೆ ಕಾಯ್ದೆಯನ್ನು ಎಂಎಸ್‌ಪಿಎಲ್‌ ಸಮೂಹದ ಆರ್‌ ಎಸ್‌ ಸ್ಟೀಲ್‌ ಕಂಪನಿ ನೇರನೇರಾ ಉಲ್ಲಂಘಿಸಿತ್ತು. ಅದೇ ರೀತಿ ಆರ್‌ಎಸ್‌ ಐರನ್‌ ಸ್ಟೀಲ್‌ ಲಿಮಿಟೆಡ್‌ ಕೂಡ ಜಮೀನು ವಶಕ್ಕೆ ಪಡೆದು 10 ವರ್ಷಗಳಾಗಿದ್ದರೂ ಒಂದೇ ಒಂದು ಕೈಗಾರಿಕೆ ಘಟಕವನ್ನು ಸ್ಥಾಪಿಸದೇ ಇದ್ದರೂ ಹಿಂದಿನ ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌ ಮತ್ತು ಹಾಲಿ ಸಚಿವ ಮುರುಗೇಶ್‌ ನಿರಾಣಿ ಅವರು ಈ ಕುರಿತು ಗಮನಹರಿಸಿಲ್ಲ.

ಈ ಕಂಪನಿಗೆ ಎರಡನೇ ಹಂತದಲ್ಲಿ 2008ರಲ್ಲಿ ಕೊಪ್ಪಳ ಗ್ರಾಮದಲ್ಲಿ 754 ಎಕರೆ 12 ಗುಂಟೆ, 2010ರಲ್ಲಿ 168 ಎಕರೆ 7 ಗುಂಟೆ ಸೇರಿ ಒಟ್ಟು 922 ಎಕರೆ 19 ಗುಂಟೆ ಹಂಚಿಕೆ ಮಾಡಲಾಗಿತ್ತು. ಇದರಲ್ಲಿ ಬಸಾಪುರ ಗ್ರಾಮದ ಸರ್ಕಾರಿ ಸರ್ವೇ ನಂಬರ್‌ 143ರಲ್ಲಿ 44 ಎಕರೆ 35 ಗುಂಟೆ ಜಮೀನು ಕಂದಾಯ ಇಲಾಖೆಯಿಂದ ಹಸ್ತಾಂತರ ಆಗಿದೆ. ಆದರೆ ಭೂಮಿ ಕಳೆದುಕೊಂಡ ರೈತರ ಪೈಕಿ 463 ಎಕರೆ 29 ಗುಂಟೆ ಜಮೀನಿನ ಭೂ ಮಾಲೀಕರು ಭೂ ಸ್ವಾಧೀನ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. ಸದ್ಯ ಸುಪ್ರೀಂ ಕೋರ್ಟ್‌ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ತಡೆಯಾಜ್ಞೆ ನೀಡಿದೆ.

ತಡೆಯಾಜ್ಞೆ ನೀಡಿರುವ ಭೂ ಸ್ವಾಧೀನ ಪ್ರಕರಣ ಹೊರತುಪಡಿಸಿ ಉಳಿದ ಜಮೀನಿನಲ್ಲಿ ಕಳೆದ 10 ವರ್ಷಗಳಿಂದಲೂ ಯಾವುದೇ ಕೈಗಾರಿಕೆಯನ್ನು ಸ್ಥಾಪಿಸದೇ ಪಡಾ ಬಿಟ್ಟಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಜಾಣ ಕುರುಡನ್ನು ಪ್ರದರ್ಶಿಸಿದೆ. ಆರ್‌ ಎಸ್‌ ಐರನ್‌ ಸ್ಟೀಲ್‌ ಕಂಪನಿ ಪಡಾ ಬಿಟ್ಟಿರುವ ಈ ಜಮೀನಿನ ಮಾರುಕಟ್ಟೆಯ ಅಂದಾಜು ಮೌಲ್ಯ 270 ಕೋಟಿ ರು.ಇದೆ ಎಂದು ತಿಳಿದು ಬಂದಿದೆ.

900 ಎಕರೆ ಜಾಗದಲ್ಲಿ ಕೈಗಾರಿಕೆಯನ್ನೇ ಸ್ಥಾಪಿಸಿಲ್ಲ ಎಂದು ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರ್ನಾಟಕ ವಿಧಾನಸಭೆಯ ಅಂದಾಜು ಸಮಿತಿ ಮುಂದೆ ಒಪ್ಪಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ ಗೆ ದಾಖಲೆಗಳು ಲಭ್ಯವಾಗಿವೆ.

ಆರ್‌ ಎಸ್‌ ಐರನ್‌ ಸ್ಟೀಲ್‌ ಕಂಪನಿ ಕೊಪ್ಪಳ ಯೋಜನೆಗಾಗಿ ಒಟ್ಟು 4,500 ಕೋಟಿ ರು. ಹೂಡಿಕೆ ಮಾಡಲು ಉದ್ದೇಶಿಸಿತ್ತು. ಇದು ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಹೂಡಿಕೆ ಎಂದು ಹೇಳಲಾಗಿತ್ತು. ಎರಡು ಹಂತದಲ್ಲಿ ಘಟಕಗಳನ್ನು ಆರಂಭಿಸುವ ಉದ್ದೇಶ ಹೊಂದಿದ್ದ ಈ ಕಂಪನಿ 2010ರ ಮಧ್ಯದಲ್ಲಿ ಪ್ರಾರಂಭಿಕ ಹಂತದಲ್ಲಿ 1.2 ಮಿಲಿಯನ್‌ ಟನ್ ಕಬ್ಬಿಣ, ಉಕ್ಕು ಉತ್ಪಾದನೆ ಗುರಿ ಹೊಂದಿತ್ತು.

ಆದರೆ 922 ಎಕರೆಯನ್ನು ಕಂಪನಿಯು ಬಳಸಿಕೊಂಡಿಲ್ಲ ಎಂದು ಖುದ್ದು ಕೊಪ್ಪಳ ಉಪ ವಿಭಾಗಾಧಿಕಾರಿ ಅಂದಾಜು ಸಮಿತಿ ಮುಂದೆ ಹೇಳಿಕೆ ನೀಡಿದ್ದರು. ಈ ಮಧ್ಯೆ ರೈತರು ನ್ಯಾಯಾಲಯ ಮೆಟ್ಟಿಲೇರಿದ್ದರು. ಆದರೆ ಕೆಐಎಡಿಬಿಯು ಒಂದೇ ಒಂದು ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ. ಅಲ್ಲದೆ ನ್ಯಾಯಾಲಯದಲ್ಲಿ ಪ್ರಕರಣ ಇರುವುದಕ್ಕೂ ಜಮೀನು ಹಿಂಪಡೆಯುವುದಕ್ಕೆ ಯಾವುದೇ ಸಂಬಂಧ ಇರದಿದ್ದರೂ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ ಎಂಬ ನೆಪವೊಡ್ಡಿ ಕಂಪನಿಗೆ ರಕ್ಷಣೆ ಒದಗಿಸಿತ್ತು.

ಅಲ್ಲದೆ ಈ ಕಂಪನಿಗೆ 2009ರಲ್ಲಿ ಜಾಗವನ್ನು ನೀಡಲಾಗಿತ್ತು. ಆದರೆ ಪ್ರಕರಣ ನ್ಯಾಯಾಲದಯ ಮೆಟ್ಟಿಲೇರಿರುವುದು 2017ರಲ್ಲಿ. 8 ವರ್ಷಗಳಿಂದಲೂ ಕಂಪನಿಯು ಕೈಗಾರಿಕೆ ಘಟಕವನ್ನು ಸ್ಥಾಪಿಸದೇ ಇದ್ದರೂ ಕೆಐಎಡಿಬಿ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಇದ್ದದ್ದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ಕೆಐಎಡಿಬಿ ವ್ಯಾಪ್ತಿಗೆ ಸೇರಿದ ಭೂಮಿಯಲ್ಲಿ ಏರೋಡ್ರಮ್‌ ಸ್ಥಾಪನೆ ಮಾಡಲು ಅವಕಾಶ ನೀಡಲಾಗಿದೆ. ಆದರೆ ಈ ಜಾಗವನ್ನು ಕೈಗಾರಿಕೆ ಅಭಿವೃದ್ಧಿಗಾಗಿ ಮಂಜೂರಾಗಿದೆ. ಮತ್ತೊಂದು ವಿಶೇಷವೆಂದರೆ ಮಂಜೂರಾಗಿರುವ ಜಾಗ ಎ-ಖರಾಬು ವರ್ಗೀಕರಣದಲ್ಲಿದೆ. ಇಂತಹ ಜಾಗವನ್ನು ರೈತ ಮಾರಾಟ ಮಾಡಲು ಸಾಧ್ಯವೇ ಇಲ್ಲ. ಆತ ಇರುವವರೆಗೂ ಎ-ಖರಾಬು ಜಮೀನಿನ ಅನುಭವದಾರನಾಗಬಹುದೇ ಹೊರತು ಮಾರಾಟ ಮಾಡಲು ಸಾಧ್ಯವಿಲ್ಲ.

ಏರೋಡ್ರಮ್‌ ಸ್ಥಾಪನೆ ಮಾಡಲು ಕೊಟ್ಟಿರುವ ಜಾಗ ಯಾರಿಗೆ ಸಂಬಂಧಪಟ್ಟಿದೆ, ರೈತರಿಂದ ಅವರು ಖರೀದಿ ಮಾಡಿದ್ದಾರೆಯೇ, ಸರ್ಕಾರದಿಂದ ಭೂ ದಾನ ನೀಡಲಾಗಿದೆಯೇ ಅಥವಾ 109 ರ ಪ್ರಕಾರ ಇವರಿಗೆ ಅವಕಾಶ ನೀಡಿದ್ದಾರೆಯೇ, ಯಾವ ಆಧಾರದ ಮೇಲೆ ಮಂಜೂರು ಮಾಡಿದ್ದಾರೆ ಎಂದು ಅಂದಾಜು ಸಮಿತಿ ಕೇಳುತ್ತಿರುವ ಪ್ರಶ್ನೆಗಳಿಗೆ ಕಂದಾಯ ಇಲಾಖೆ ಮತ್ತು ವಾಣಿಜ್ಯ, ಕೈಗಾರಿಕೆ ಇಲಾಖೆಯು ಸಮರ್ಪಕವಾದ ಉತ್ತರವನ್ನೂ ನೀಡಿರಲಿಲ್ಲ ಎಂದು ಗೊತ್ತಾಗಿದೆ.

ಸಮಿತಿ ಸದಸ್ಯ ಶಾಸಕರು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ನೀಡಲು ತಡಬಡಾಯಿಸುತ್ತಿರುವ ಅಧಿಕಾರಿಗಳನ್ನು ಸದಸ್ಯ ಶಾಸಕ ಕೆ ಎಂ ಶಿವಲಿಂಗೇಗೌಡ ಅವರು ತರಾಟೆಗೆ ತೆಗೆದುಕೊಂಡಿದ್ದರು ಎಂಬ ಸಂಗತಿಯು ದಾಖಲೆಯಿಂದ ಗೊತ್ತಾಗಿದೆ. ‘ಈ ವಿಚಾರದಲ್ಲಿ ಏನೋ ವಂಚನೆ ಆಗಿದೆ. ಅಧಿಕಾರಿಗಳಿಗೆ ಎಲ್ಲವೂ ಗೊತ್ತಿದೆ. ಆದರೂ ಅದನ್ನು ಮುಚ್ಚಿಡುತ್ತಿದ್ದಾರೆ. ಸರ್ಕಾರದ ಖರಾಬು ಜಮೀನನ್ನು ಲೂಟಿ ಹೊಡೆದಿರಬಹುದು ಅಥವಾ ಸರ್ಕಾರದಿಂದಲೇ ಮಂಜೂರು ಮಾಡಿರಬಹುದು,’ ಎಂದು ಅನುಮಾನ ವ್ಯಕ್ತಪಡಿಸಿದ್ದರು.

ಬಲ್ದೋಟಾ ಸಮೂಹದ ಕಂಪನಿಗಳು ಕರ್ನಾಟಕ ಭೂ ಸುಧಾರಣೆ ಕಾಯ್ದೆಯನ್ನು ನೇರನೇರಾ ಉಲ್ಲಂಘಿಸುತ್ತಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳದ್ದು ಮಾತ್ರ ಜಾಣ ಕುರುಡು. ಕರ್ನಾಟಕ ವಿಧಾನಸಭೆಯ ಅಂದಾಜು ಸಮಿತಿ ಈ ಪ್ರಕರಣವನ್ನು ಹೊರಗೆಡವವರೆಗೂ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೇ ಯಾವ ಮಾಹಿತಿಯೂ ಇರಲಿಲ್ಲ.

ಕೈಗಾರಿಕೆ ಉದ್ದೇಶಕ್ಕಾಗಿ ಸರ್ಕಾರದಿಂದ ವಿನಾಯಿತಿ ಪರವಾನಿಗೆ ಪಡೆದು ಖಾಸಗಿ ಹಿಡುವಳಿದಾರರಿಂದ ನೂರಾರು ಎಕರೆ ವಿಸ್ತೀರ್ಣದ ಕೃಷಿ ಜಮೀನು ಖರೀದಿಸಿರುವ ಬಲ್ದೋಟಾ ಸಮೂಹದ ಕಂಪನಿಗಳು ನಿಗದಿತ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳದಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ವಹಿಸಿಲ್ಲ. ಅಲ್ಲದೆ ಈ ಹಿಂದಿನ ಕಾಂಗ್ರೆಸ್‌, ಮೈತ್ರಿ ಸರ್ಕಾರ ಮತ್ತು ಹಾಲಿ ಬಿಜೆಪಿ ಸರ್ಕಾರ ಕಣ್ಣೆತ್ತಿಯೂ ನೋಡಿಲ್ಲ.

the fil favicon

SUPPORT THE FILE

Latest News

Related Posts