ಬೆಂಗಳೂರು; ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವಕ್ಕೆ ಸಂಬಂಧಿಸಿದಂತೆ 1972ರ ಕಾಯ್ದೆಗೆ ಸಹಕಾರ ಇಲಾಖೆಯು ಸೂಕ್ತ ತಿದ್ದುಪಡಿ ತರಲು ಸಾಧ್ಯವಿಲ್ಲ ಎಂದು ಸಹಕಾರ ಇಲಾಖೆಯು ನಗರಾಭಿವೃದ್ದಿ ಇಲಾಖೆಗೆ ಸ್ಪಷ್ಟಪಡಿಸಿದೆ.
ಕರ್ನಾಟಕ ಅಪಾರ್ಟ್‌ಮೆಂಟ್‌ಗಳಿಗೆ ಸಂಬಂಧಿಸಿದಂತೆ ಕಾಯ್ದೆಗೆ ತಿದ್ದುಪಡಿ ತರುವ ವಿಚಾರದಲ್ಲಿ ನಗರಾಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಅವರು ನಿವಾಸಿಗಳು ಮತ್ತು ಮಾಲೀಕರ ಸಭೆ ನಡೆಸಿದ್ದರು. 2025ರ ಡಿಸೆಂಬರ್‍ನಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಅಧಿವೇಶನದಲ್ಲಿ ಕಾಯ್ದೆ ಮಂಡಿಸಲಿದೆ ಎಂದು ಹೇಳಿದ್ದಾರಾದರೂ ಹಿಂದಿನ ಅಧಿವೇಶನದಲ್ಲಿ ಕಾಯ್ದೆ ಮಂಡಿಸಲಿಲ್ಲ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೂ ಉಪ ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಅವರು ಸಮಾಲೋಚನೆ ನಡೆಸಿದ್ದರು.
ಇದರ ಬೆನ್ನಲ್ಲೇ ಈ ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವಕ್ಕೆ ಸಂಬಂಧಿಸಿದಂತೆ 1972ರ ಕಾಯ್ದೆ ತಿದ್ದುಪಡಿ ಮಾಡುವ ವಿಚಾರದಲ್ಲಿ ಸಹಕಾರ ಇಲಾಖೆಯು ಸ್ಪಷ್ಟಪಡಿಸಿರುವುದು ಮುನ್ನೆಲೆಗೆ ಬಂದಿದೆ.
ಈ ಕುರಿತು ಸಹಕಾರ ಇಲಾಖೆಯು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದೆ. 2026ರ ಜನವರಿ 19ರಂದು ಬರೆದಿರುವ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಅಪಾರ್ಟ್‌ಮೆಂಟ್ ಅಸೋಸಿಯೇಷನ್ ನೋಂದಣಿ ಕುರಿತು ಧನಂಜಯ ಪದ್ಮನಾಭಚಾರ್ ಅವರು ಸಹಕಾರ ಇಲಾಖೆಗೆ ಪತ್ರ ಬರೆದು ದೂರನ್ನು ಸಲ್ಲಿಸಿದ್ದರು. ಕಾಂಪಿಟೆಂಟ್ ಅಥಾರಿಟಿ ಕುರಿತು ಹಲವು ಆಕ್ಷೇಪಗಳನ್ನು ಸಲ್ಲಿಸಿದ್ದರು. ಈ ಮನವಿಯನ್ನು ಪರಿಶೀಲಿಸಿರುವ ಸಹಕಾರ ಇಲಾಖೆಯು 1972ರಲ್ಲಿ ಜಾರಿಗೆ ತಂದ ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯ್ದೆಯು ನಗರಾಭಿವೃದ್ಧಿ ಮತ್ತು ವಸತಿ ಇಲಾಖೆಯಡಿಯಲ್ಲಿದೆ. ಹೀಗಾಗಿ ಈ ಕಾಯ್ದೆಗೆ ಸಹಕಾರ ಇಲಾಖೆಯಿಂದ ಸೂಕ್ತವಾದ ತಿದ್ದುಪಡಿ ತರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವುದು ಪತ್ರದಿಂದ ಗೊತ್ತಾಗಿದೆ.
ಪತ್ರದಲ್ಲೇನಿದೆ?
ಅಪಾರ್ಟ್‌ಮೆಂಟ್ ಅಸೋಸಿಯೇಷನ್ ನೋಂದಣಿ ಕುರಿತಂತೆ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ (ಸಂಖ್ಯೆ 2558/2023) ಸಲ್ಲಿಕೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2024ರ ಫೆ.23ರಂದು ಆದೇಶ ಹೊರಡಿಸಿದೆ ಇದರ ಪ್ರಕಾರ ಅಪಾರ್ಟ್‌ಮೆಂಟ್‌ಗಳು ಕೇವಲ ವಾಸಕ್ಕೆ ಮಾತ್ರ ಸೀಮಿತವಾಗಿದ್ದರೇ ಅಂತಹ ಅಪಾರ್ಟ್‌ಮೆಂಟ್‌ಗಳಿಗೆ ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯ್ದೆ 1972 ಅನ್ವಯವಾಗುತ್ತದೆ. ಇದೇ ಆದೇಶದಲ್ಲಿನ ಕಂಡಿಕೆ 14ರಲ್ಲಿ ವಾಸಕ್ಕೆ ಮತ್ತು ವಾಣಿಜ್ಯ ಉದ್ದೇಶಕ್ಕೂ ಅವಕಾಶವಿದ್ದರೇ ಅಂತಹ ಅಪಾರ್ಟ್‌ಮೆಂಟ್‌ಗಳಿಗೆ ಕರ್ನಾಟಕ ಓನರ್‍ಶಿಪ್ ಪ್ಲಾಟ್ ಅನ್ವಯವಾಗುತ್ತದೆ ಎಂದೂ ಆದೇಶಿಸಿದೆ ಎಂದು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಅಪಾರ್ಟ್‌ಮೆಂಟ್‌ಗಳಲ್ಲಿ ಸಾಮಾನ್ಯವಾಗಿ ವಸತಿ ಉದ್ದೇಶವಿರುವುದರಿಂದ ಕರ್ನಾಟಕ ಅಪಾರ್ಟ್‌ಮೆಂಟ್ ಓನರ್‍ಶಿಪ್ 1972 ಅನ್ವಯವಾಗುತ್ತದೆ. ಆದರೆ ಈ ಕಾಯ್ದೆಯಲ್ಲಿ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳನ್ನು ನೋಂದಾಯಿಸುವ ಅವಕಾಶಗಳಿಲ್ಲ. ಈ ಬಗ್ಗೆ ಸ್ಪಷ್ಟವಾದ ನಿಯಮ, ಕಾಯ್ದೆ ಸುತ್ತೋಲೆಗಳನ್ನು ರಚಿಸಬೇಕು ಎಂದು ಹಲವು ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ನಗರಾಭಿವೃದ್ಧಿ ಇಲಾಖೆ ಗಮನಕ್ಕೆ ತಂದಿರುವುದು ತಿಳಿದು ಬಂದಿದೆ.
ಕರ್ನಾಟಕ ಅಪಾರ್ಟ್‌ಮೆಂಟ್ ಓನರ್ ಶಿಪ್ 1972ರ ಕಾಯ್ದೆ ಹಾಗೂ ಕರ್ನಾಟಕ ಓನರ್‍ಶಿಪ್ ಪ್ಲಾಟ್ 1972ರ ಈ ಎರಡೂ ಕಾಯ್ದೆಗಳು ನಗರಾಭಿವೃದ್ಧಿ ಮತ್ತು ವಸತಿ ಇಲಾಖೆ ವ್ಯಾಪ್ತಿಗೆ ಒಳಪಡಲಿದೆ. ಆದ್ದರಿಂದ ಈ ಕಾಯ್ದೆಗಳಿಗೆ ಸಂಬಂಧಪಟ್ಟಂತೆ ತಿದ್ದುಪಡಿ ತರುವುದು ಅಥವಾ ಹೊಸ ಕಾಯ್ದೆಯನ್ನು ತರುವುದು ಅಥವಾ ಸುತ್ತೋಲೆಯನ್ನು ಹೊರಡಿಸಬೇಕಾದಲ್ಲಿ ನಗರಾಭಿವೃದ್ಧಿ, ವಸತಿ ಇಲಾಖೆಯಿಂದ ಹೊರಡಿಸಬೇಕು.

ಅಪಾರ್ಟ್‌ಮೆಂಟ್‌ಗಳಲ್ಲಿ ಕಾಮನ್ ಏರಿಯಾ ಮತ್ತು ಕಾಮನ್ ಸರ್ವಿಸ್‌ಗಳ ನಿರ್ವಹಣೆಗಾಗಿ ಕೋ ಆಪರೇಟೀವ್ ಸೊಸೈಟಿ ನೋಂದಾಯಿಸಬೇಕೇ ಅಥವಾ ಕಂಪನಿಯನ್ನು ನೋಂದಾಯಿಸಬೇಕೆ, ಅಥವಾ ಕರ್ನಾಟಕ ಅಪಾರ್ಟ್‌ಮೆಂಟ್ ಓನರ್‍ಷಿಪ್ ಕಾಯ್ದೆ 1972ರ ಅಡಿ ಅಸೋಸಿಯೇಷನ್ ನೋಂದಾಯಿಸಬೇಕೆ, ಅಲ್ಲದೇ ಕಾಯ್ದೆಯಲ್ಲಿ ಡೀಡ್ ಆಫ್ ಡಿಕ್ಲರೇಷನ್ ಉಪ ನೋಂದಣಾಧಿಕಾರಿಯವರ ಕಚೇರಿಯಲ್ಲಿ ನೋಂದಾಯಿಸಿದಾಗ ಅಸೋಸಿಯೇಷನ್ ನೋಂದಣಿಯಾಗುತ್ತದೆಯೇ, ಒಂದು ವೇಳೆ ಅಸೋಸಿಯೇಷನ್ ನೋಂದಣಿಯಾಗದೇ ಇದ್ದಲ್ಲಿ ಅಪಾರ್ಟ್‌ಮೆಂಟ್‌ಗಳಲ್ಲಿ ಕಾಮನ್ ಏರಿಯಾ ಮತ್ತು ಕಾಮನ್ ಸರ್ವಿಸ್ ನಿರ್ವಹಣೆ ಆಡಲು ಯಾವ ಕಾಯ್ದೆಯಡಿ ಕ್ರಮವಿಡಬೇಕು ಎಂಬ ಬಗ್ಗೆ ಗೊಂದಲವಿದೆ ಎಂದು ಸಹಕಾರ ಇಲಾಖೆಯು ತನ್ನ ಪತ್ರದಲ್ಲಿ ವಿವರಿಸಿದೆ.
ಕಾನೂನು ಇಲಾಖೆಯ ಅಭಿಪ್ರಾಯವೇನು?
ಕರ್ನಾಟಕ ಸೊಸೈಟೀಸ್ ರಿಜಿಸ್ಟ್ರೇಷನ್ ಕಾಯ್ದೆ 1960, ಕರ್ನಾಟಕ ಅಪಾರ್ಟ್‌ಮೆಂಟ್ ಓನರ್‍ಷಿಪ್ ಕಾಯ್ದೆ 1972 ಕಾಯ್ದೆಗಳಡಿಯಲ್ಲಿ ಎಲ್ಲಿಯೂ ಸಹ ಅಸೋಸಿಯೇಷನ್ ನೋಂದಣಿಯಾಗುವ ಬಗ್ಗೆ ಉಲ್ಲೇಖವಿಲ್ಲ. ಆದ್ದರಿಂದ ನೋಂದಣಿ ಮಾಡಲು ಈ ಕಾಯ್ದೆಗಳಡಿಯಲ್ಲಿ ಅವಕಾಶವಿರುವುದಿಲ್ಲ. ಆದರೆ ಅಪಾರ್ಟ್‌ಮೆಂಟ್‌ಗಳಲ್ಲಿ ಕಾಮನ್ ಏರಿಯಾ ಮತ್ತು ಕಾಮನ್ ಸರ್ವಿಸ್ ಗಳ ನಿರ್ವಹಣೆಗೆ ಸಂಬಂಧಿಸಿದಂತೆ ಯಾವ ಕಾಯ್ದೆಯಡಿ ಸಂಘಗಳು, ಅಸೋಸಿಯೇಷನ್‌ಗಳನ್ನು ನೋಂದಾಯಿಸಬೇಕು ಎಂದು ತಿಳಿಸಿಲ್ಲ ಎಂದು ತನ್ನ ಅಭಿಪ್ರಾಯದಲ್ಲಿ ಸ್ಪಷ್ಟಪಡಿಸಿದೆ.
ಕರ್ನಾಟಕ ಓನರ್‍ಷಿಪ್ ಫ್ಲಾಟ್‌ಗಳ ಕಾಯ್ದೆ 1972 ಸೆಕ್ಷನ್ 10ರಲ್ಲಿ ಕಾಮನ್ ಏರಿಯಾದ ನಿರ್ವಹಣೆಗಾಗಿ ಕೋಆಪರೇಟೀವ್ ಸೊಸೈಟಿ ಅಥವಾ ಕಂಪನಿಯನ್ನು ನೋಂದಾಯಿಸಲು ಉಲ್ಲೇಖಿಸಲಾಗಿದೆ. ಅದರಂತೆ ಕರ್ನಾಟಕ ಉಚ್ಛ ನ್ಯಾಯಾಲಯವು ರಿಟ್ ಅಪೀಲ್ ( ಸಂಖ್ಯೆ 974/2019 (ಜಿಎಂ ಕೆಎಸ್) 1206-1211/2019 (ಜಿಎಂ-ಕೆಎಸ್‌ಆರ್ ದಿನಾಂಕ 06-11-2019) ರಂದು ತೀರ್ಪು ನೀಡಿತ್ತು. ಈ ತೀರ್ಪಿನ ಕಂಡಿಕೆ 11ರಲ್ಲಿ ಕರ್ನಾಟಕ ಓನರ್‍ಷಿಪ್ ಕಾಯ್ದೆ 1972ರಡಿಯಲ್ಲಿ ಸಂಘವನ್ನು ರಚನೆ ಮಾಡಲು ಹಾಗೂ ನೋಂದಣಿ ಮಾಡಲು ಯಾವುದೇ ಬಾಧ್ಯತೆ ಇಲ್ಲ ಎಂದು ಆದೇಶಿಸಿದೆ.

ಹೀಗಾಗಿ ರೇರಾ ಕಾಯ್ದೆ ಜಾರಿಗೆ ಬರುವ ಪೂರ್ವದಲ್ಲಿ ಮತ್ತು ರೇರಾ ಕಾಯ್ದೆ ಜಾರಿಗೆ ಬಂದ ನಂತರ ಅಪಾರ್ಟ್‌ಮೆಂಟ್‌ಗಳಲ್ಲ ಕಾಮನ್ ಏರಿಯಾ ಫೆಸಿಲಿಟಿಯನ್ನು ನಿರ್ವಹಣೆ ಮಾಡಲು ಕರ್ನಾಟಕ ಹೈಕೋರ್ಟ್ ತೀರ್ಪಿನ 11ನೇ ಕಂಡಿಕೆಯನ್ನು ಪುನಃ ಉಲ್ಲೇಖಿಸಿದೆ. ಈ ಪ್ರಕರಣದ ಅಂತಿಮ ತೀರ್ಪು ಬರುವವರೆಗೂ ಮೇಲೆ ಹೇಳಿರುವಂತೆ ಕ್ರಮವಹಿಸಬಹುದು. ಮತ್ತು ರಿಟ್ ಅರ್ಜಿ 511/2021ರ ಅಂತಿಮ ತೀರ್ಪು ಬಂದ ನಮತರ ಈ ತೀರ್ಪಿನ ಅನ್ವಯ ಕ್ರಮಕೈಗೊಳ್ಳಬಹುದು ಎಂದು ಕಾನೂನು ಇಲಾಖೆಯು ತಿಳಿಸಿರುವುದು ಗೊತ್ತಾಗಿದೆ.
ಕರ್ನಾಟಕ ಅಪಾರ್ಟ್‌ಮೆಂಟ್ ಓನರ್‍ಷಿಪ್ ಕಾfಯದೆ 1972ರ ಕಲಂ 3(i) ರಲ್ಲಿ ಕಾಂಪಿಟೆಂಟ್ ಅಥಾರಿಟಿ ಎಂಬ ಸಂದರ್ಭದಲ್ಲಿ ಸಹಕಾರ ಸಂಘಗಳ ನಿಬಂಧಕರು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಅವಕಾಶ ಪ್ರಕಾರ ಅಧಿಕಾರವಿದೆ. ಇದನ್ನು ಹೊರತುಪಡಿಸಿದರೇ ಬೇರೆ ಯಾವುದೇ ರೀತಿಯಲ್ಲಿ ಸಹಕಾರ ಸಂಘಗಳ ನಿಬಂಧಕರಿಗೆ ಆಡಳಿತ ನಡೆಸಬಹುದಾದ ಅಧಿಕಾರವನ್ನು ಈ ಕಾಯ್ದೆಯಡಿಯಲ್ಲಿ ಅವಕಾಶವಿಲ್ಲ. ಅಲ್ಲದೇ ಈ ಕಾಯ್ದೆಯ ವ್ಯಾಪ್ತಿಯು ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿದೆ. ಸರ್ಕಾರದಿಂದ ನಿಬಂಧಕರಿಗೆ ಅಧಿಕಾರ ಪ್ರತ್ಯಾಯೋಜನೆಯಾಗಿರುವುದಕ್ಕೆ ಯಾವುದೇ ಅಧಿಸೂಚನೆಗಳನ್ನೂ ಸರ್ಕಾರವು ಹೊರಡಿಸಿಲ್ಲ ಎಂದು ಪತ್ರದಲ್ಲಿ ವಿವರಿಸಿದೆ.
‘ಈ ಹಿನ್ನೆಲೆಯಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯವು ರಿಟ್ ಸಂಖ್ಯೆ (2558/2023ರ ಪ್ರಕರಣದಲ್ಲಿ 2024ರ ಫೆ.23ರಂದು ಹೊರಡಿಸಿರುವ ಆದೇಶವನ್ನು ಆಧರಿಸಿ ಕರ್ನಾಟಕ ಅಪಾರ್ಟ್‌ಮೆಂಟ್ ಓನರ್‍ಷಿಪ್ ಕಾfಯದೆ 1972ರ ಅನ್ವಯ ಅಸೋಸಿಯೇಷನ್‌ನ್ನು ನೋಂದಾಯಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅಪಾರ್ಟ್‌ಮೆಂಟ್ ಮಾಲೀಕರಲ್ಲಿ ಯಾವ ಕಾಯ್ದೆಯಡಿ ಅಸೋಸಿಯೇಷನ್‌ನ್ನು ನೋಂದಾಯಿಸಬೇಕು ಎಂಬ ಬಗ್ಗೆ ಗೊಂದಲವಿದೆ,’ ಎಂದು ಹೇಳಿರುವುದು ತಿಳಿದು ಬಂದಿದೆ.
ಈ ಮಧ್ಯೆ ಮಹಾರಾಷ್ಟ್ರ ಮತ್ತಿತರೆ ರಾಜ್ಯಗಳಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕಾಯ್ದೆಗಳ ಬಗ್ಗೆ ಸೂಕ್ತ ಅಭಿಪ್ರಾಯ ನೀಡಬೇಕು ಎಂದು ಅಧಿಕಾರಿಗಳ ತಂಡವನ್ನು ರಚಿಸಲಾಗಿತ್ತು. ಈ ತಂಡವು ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ನೋಂದಣಿ ಕಾರ್ಯನಿರ್ವಹಣೆ ಕುರಿತು ವರದಿ ನೀಡಲು ಸೂಚಿಸಲಾಗಿತ್ತು.
ಈ ಮಧ್ಯೆ ಉಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಕರ್ನಾಟಕ ಅಪಾರ್ಟ್‌ಮೆಂಟ್ ಓನರ್‍ಷಿಪ್ ಕಾಯ್ದೆ 1972ರ ಅನ್ವಯ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ನ್ನು ನೋಂದಣಿ ಮಾಡುವಂತೆ ಕೋರಲಾಗಿದೆ.
ಹಾಗೂ ಈ ಕಾಯ್ದೆ ಅನ್ವಯ ಕಾಂಪಿಟೆಂಟ್ ಅಥಾರಿಟಿ ಎಂದು ಸಹಕಾರ ಸಂಘಗಳ ನಿಬಂಧಕರಿದ್ದಾರೆ. ಹೀಗಾಗಿ ಈ ಕಾಯ್ದೆ ಅನ್ವಯ ನೋಂದಣಿಯಾಗಿರುವ ಡಿಒಡಿಯಲ್ಲಿ ನಮೂದಾಗಿರುವ ಅಸೋಸಿಯೇಷನ್ ವಿರುದ್ಧ ಹಲವಾರು ದೂರು ಅರ್ಜಿಗಳು ಸ್ವೀಕೃತವಾಗಿದ್ದವು.

‘ಕಾಂಪಿಟೆಂಟ್ ಅಥಾರಿಟಿ ಎಂಬ ಸಂದರ್ಭದಲ್ಲಿ ಸಹಕಾರ ಸಂಘಗಳ ನಿಬಂಧಕರು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಅವಕಾಶಗಳ ರೀತಿ ವ್ಯಾಖ್ಯಾನಿಸಲಾಗಿದೆ. ಆದರೆ ಕಾಂಪಿಟೆಂಟ್ ಅಥಾರಿಟಿ ಅದ ಸಹಕಾರ ಸಂಘಗಳ ನಿಬಂಧಕರಿಗೆ ಅಸೋಷಿಯೇಷನ್ ನೋಂದಣಿ ಮಾಡುವ ಅಧಿಕಾರವಿರುವುದಿಲ್ಲ. ಅಸೋಸಿಯೇಷನ್‌ಗಳ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಸಲು ಚುನಾವಣಾಧಿಕಾರಿಯನ್ನು ನೇಮಿಸುವ ಅಧಿಕಾರವೂ ಇಲ್ಲ. ಚುನಾವಣೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ವ್ಯಾಜ್ಯಗಳು ಉಂಟಾದಲ್ಲಿ ವ್ಯಾಜ್ಯಗಳನ್ನು ವಿಚಾರಣೆ ನಡೆಸುವ ಅಧಿಕಾರವೂ ಇಲ್ಲ,’ ಎಂದು ಹೇಳಿರುವುದು ಗೊತ್ತಾಗಿದೆ.
ಅಪಾರ್ಟ್‌ಮೆಂಟ್ ವಿಧೇಯಕ ಜಾರಿಯಾಗದೇ ನೋಟೀಸ್; ಬಿಡಿಎ ಮೇಲೆ ನಿವಾಸಿಗಳ ಕೆಂಗಣ್ಣು
ನಿವಾಸಿಗಳ ಸಂಘವನ್ನು ನೋಂದಾಯಿಸಿಕೊಳ್ಳಬೇಕು ಎಂದು ಇತ್ತೀಚೆಗಷ್ಟೇ ಬಿಡಿಎ ನೋಟೀಸ್ ನೀಡಿತ್ತು. ಈ ಕುರಿತು ದಿ ಫೈಲ್ ವರದಿ ಪ್ರಕಟಿಸಿತ್ತು.
ದಿ ಫೈಲ್ ವರದಿ ಪರಿಣಾಮ; ನಿವಾಸಿಗಳಿಗೆ ನೀಡಿದ್ದ ನೋಟೀಸ್ ಹಿಂಪಡೆದುಕೊಂಡ ಬಿಡಿಎ
ಈ ವರದಿ ಪ್ರಕಟಿಸಿದ್ದ ಬೆನ್ನಲ್ಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೂ ಸಹ ತನ್ನ ನೋಟೀಸ್‌ನ್ನು ಹಿಂಪಡೆದಿತ್ತು.









