ಕೇರಳ ಸರ್ಕಾರಿ ಕಂಪನಿಯಿಂದ ಟ್ರಾನ್ಸ್‌ಫಾರ್ಮ್‌ರ್‍‌ಗಳ ಖರೀದಿ; 174.73 ಕೋಟಿ ರು ಮೊತ್ತಕ್ಕೆ 4 (ಜಿ) ಪ್ರಸ್ತಾವ

ಬೆಂಗಳೂರು; ಕಳೆದ ಎಂಟು ದಶಕಗಳಿಂದಲೂ ಗುಣಮಟ್ಟದ ವಿದ್ಯುತ್‌ ವಿತರಣಾ ಟ್ರಾನ್ಸ್‌ಫಾರ್ಮ್‌ರಗಳ ತಯಾರಿಕೆಯಲ್ಲಿ ತೊಡಗಿಕೊಂಡಿರುವ ಕರ್ನಾಟಕ ವಿದ್ಯುತ್‌ ಕಾರ್ಖಾನೆಯನ್ನು ಬದಿಗೊತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು, ಇದೀಗ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜನಿಯರಿಂಗ್‌ ಲಿಮಿಟೆಡ್‌ಗೆ ರತ್ನಗಂಬಳಿ ಹಾಸಿದೆ.

 

ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜನಿಯರಿಂಗ್‌ ಲಿಮಿಟೆಡ್‌ನಿಂದಲೇ 174.73 ಕೋಟಿ ರು ಮೊತ್ತದಲ್ಲಿ ವಿದ್ಯುತ್‌ ಪರಿವರ್ತಕಗಳನ್ನು ನೇರವಾಗಿ ಖರೀದಿಸಲು ಮುಂದಾಗಿದೆ. ಇದಕ್ಕಾಗಿ 4 ಜಿ ವಿನಾಯಿತಿಯನ್ನೂ ಕೋರಿದೆ. ಒಂದೊಮ್ಮೆ ಇದಕ್ಕೆ ಸಹಮತಿ ದೊರೆತಲ್ಲಿ ಸ್ಪರ್ಧಾತ್ಮಕ ದರಗಳಿಂದ ಸಿಗಬಹುದಾದ ಕಡಿಮೆ ದರಗಳ ಲಾಭದಿಂದ ರಾಜ್ಯಕ್ಕೆ ವಂಚನೆಯಾಗಲಿದೆ. ಮತ್ತು ಸಂಪನ್ಮೂಲ ದುರ್ಬಳಕೆ ಅಗುವ ಸಾಧ್ಯತೆಯೂ ಇದೆ. ಅಲ್ಲದೇ ಕೆಟಿಪಿಪಿ ಆಶಯಕ್ಕೆ ವ್ಯತಿರಿಕ್ತವಾಗಲಿದೆ.

 

ಬೆಂಗಳೂರಿನ ಯಲಹಂಕದ ಕೋಗಿಲು ಸಮೀಪ ಅಕ್ರಮ ಕಟ್ಟಡಗಳ ನೆಲಸಮ ವಿಚಾರದಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅಲ್ಲಿನ ಸಂಸದ ಕೆ.ಸಿ.ವೇಣುಗೋಪಾಲ್ ಅವರು ಮಧ್ಯೆ ಪ್ರವೇಶಿಸಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ 174.73 ಕೋಟಿ ರು ಮೊತ್ತದಲ್ಲಿ ವಿದ್ಯುತ್‌ ಪರಿವರ್ತಕಗಳನ್ನು ಖರೀದಿಸಲು ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜನಿಯರಿಂಗ್‌ ಲಿಮಿಟೆಡ್‌ಗೆ 4 ಜಿ ವಿನಾಯಿತಿ ನೀಡುವ ಪ್ರಸ್ತಾವವು ಮುನ್ನೆಲೆಗೆ ಬಂದಿದೆ. ಅಲ್ಲದೇ ಪ್ರತಿಪಕ್ಷಗಳಿಗೆ ಮತ್ತೊಂದು ಅಸ್ತ್ರವೊಂದನ್ನು ನೀಡಿದಂತಾಗಿದೆ.

 

ಈ ಸಂಬಂಧ ‘ದಿ ಫೈಲ್‌’ ಗೆ (ಕಡತ ಸಂಖ್ಯೆ ಎನರ್ಜಿ 852 ಇಇಬಿ 2025) ದಾಖಲೆಗಳು ಲಭ್ಯವಾಗಿವೆ.

 

ಮತ್ತೊಂದು ವಿಶೇಷವೆಂದರೇ ಎಸ್ಕಾಂಗಳಿಗೆ ಕರ್ನಾಟಕ ವಿದ್ಯುತ್‌ ಕಾರ್ಖಾನೆಯಿಂದಲೇ 23,005 ಟ್ರಾನ್ಸ್‌ಫಾರ್ಮ್‌ರ್‍‌ಗಳನ್ನು ಖರೀದಿಸಲು 2024-25ನೇ ಸಾಲಿನಲ್ಲಿ 4 ಜಿ ವಿನಾಯಿತಿ ನೀಡಿತ್ತು. ಆದರೆ 2025-26ನೇ ಸಾಲಿನಲ್ಲಿ ಎಸ್ಕಾಂಗಳಿಗೆ ವಿದ್ಯುತ್‌ ಪರಿವರ್ತಕಗಳನ್ನು ನೇರವಾಗಿ ಕೇರಳ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜನಿಯರಿಂಗ್‌ ಲಿಮಿಟೆಡ್‌ನಿಂದಲೇ ಖರೀದಿಸಲು ಗೆ 4 ಜಿ ವಿನಾಯಿತಿ ಕೋರಿದೆ.

 

174.73 ಕೋಟಿ ರು ವೆಚ್ಚದ ಪ್ರಸ್ತಾವನೆ

 

2025-26ನೇ ಸಾಲಿಗೆ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯು 11,721 ವಿದ್ಯುತ್ ಪರಿವರ್ತಕಗಳನ್ನು ಖರೀದಿಸಲು ಮುಂದಾಗಿದೆ. ಈ ವಿದ್ಯುತ್ ಪರಿವರ್ತಕಗಳನ್ನು ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜನಿಯರಿಂಗ್‌ ಲಿಮಿಟೆಡ್‌ನಿಂದ ನೇರವಾಗಿ ಖರೀದಿಸಲು ಇಂಧನ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು. ಈ ಸಂಬಂಧ ಎಸ್ಕಾಂಗಳು 4 ಜಿ ವಿನಾಯಿತಿಯನ್ನೂ ಕೋರಿದ್ದವು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಇಂಧನ ಇಲಾಖೆಯು ಆರ್ಥಿಕ ಇಲಾಖೆಯ ಅಭಿಪ್ರಾಯವನ್ನು ಕೋರಿತ್ತು.

 

ಆರ್ಥಿಕ ಇಲಾಖೆಯು ಈ ಪ್ರಸ್ತಾವನೆಯನ್ನು ಪರಿಶೀಲಿಸಿತ್ತಲ್ಲದೇ 7 ಅಂಶಗಳಿಗೆ ಸ್ಪಷ್ಟನೆ ಮತ್ತು ಮಾಹಿತಿ ಕೋರಿತ್ತು. ಈ ಮಾಹಿತಿಯನ್ನು ಒದಗಿಸಬೇಕು ಎಂದು ಇಂಧನ ಇಲಾಖೆಯು ಬೆಸ್ಕಾಂ, ಮೆಸ್ಕಾಂ ಮತ್ತು ಹೆಸ್ಕಾಂಗಳಿಗೆ 2026ರ ಜನವರಿ 6ರಂದು ಪತ್ರ ಬರೆದಿದೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಆರ್ಥಿಕ ಇಲಾಖೆಯು ಕೋರಿರುವ ಮಾಹಿತಿಯಲ್ಲೇನಿದೆ?

 

25 ಕಿಲೋ ವ್ಯಾಟ್‌ (ಸ್ಟಾರ್-1, 2) ಪರಿವರ್ತಕಗಳನ್ನು ಕೆಇಎಲ್‌ ಸಂಸ್ಥೆಯು ತನ್ನ ಸ್ವಂತ ಸಂಪನ್ಮೂಲಗಳಿಂದಲೇ ತಯಾರಿಸಿ ಸರಬರಾಜು ಮಾಡುತ್ತದೆಯೇ, ಅಥವಾ ಬಾಹ್ಯ ಮೂಲಗಳಿಂದ ಸಂಗ್ರಹಣೆ ಮಾಡಿಕೊಂಡು ಸರಬರಾಜು ಮಾಡುತ್ತದೆಯೇ ಎಂದು ಮಾಹಿತಿ ಕೋರಿರುವುದು ಪತ್ರದಿಂದ ತಿಳಿದು ಬಂದಿದೆ.

 

ಬೆಸ್ಕಾಂ ಸಂಸ್ಥೆಯು ಕೆಇಎಲ್‌ ಸಂಸ್ಥೆಯ ಕೋರಿಕೆ ಮೇರೆಗೆ 3,721 ಸಂಖ್ಯೆಯ ಪರಿವರ್ತಕಗಳನ್ನು ಖರೀದಿಸಲು ಪ್ರಸ್ತಾವನೆ ಸಲ್ಲಿಸಿದೆ. ಈ ಬಗ್ಗೆ ಸಮರ್ಥನೆ ಪಡೆದು ಮಾಹಿತಿ ಸಲ್ಲಿಸಬೇಕು. ಕೆಇಎಲ್‌ ಸಂಸ್ಥೆಯು ಕರ್ನಾಟಕ ಸರ್ಕಾರದ ಅಂಗ ಸಂಸ್ಥೆಯಿಂದಲೇ ಪ್ರಸ್ತಾವಿತ ಪರಿವರ್ತಕಗಳನ್ನು ಸಹ ಖರೀದಿಸಿದ್ದಲ್ಲಿ ಕರ್ನಾಟಕ ಸರ್ಕಾರದ ಅಂಗ ಸಂಸ್ಥೆಯು ಆರ್ಥಿಕವಾಗಿ ಬೆಳವಣಿಗೆ ಹೊಂದಲು ಅನುಕೂಲವಾಗುವುದಿಲ್ಲವೇ ಎಂದು ಇಂಧನ ಇಲಾಖೆಯನ್ನು ಆರ್ಥಿಕ ಇಲಾಖೆಯು ಪ್ರಶ್ನಿಸಿರುವುದು ಗೊತ್ತಾಗಿದೆ.

 

 

ಪ್ರಸಕ್ತ ಕೆ ಇ ಎಲ್‌ ಸಂಸ್ಥೆಯಿಂದ ಸಂಗ್ರಹಣೆ ಮಾಡಿಕೊಳ್ಳಲು ಪ್ರಸ್ತಾವಿಸಿರುವ 11,721 ಸಂಖ್ಯೆಯ ವಿದ್ಯುತ್ ವಿತರಣೆ ಪರಿವರ್ತಕಗಳನ್ನು ಕರ್ನಾಟಕ ಸರ್ಕಾರದ ಅಂಗಸಂಸ್ಥೆಯಾದ ಕರ್ನಾಟಕ ವಿದ್ಯುತ್ ಕಾರ್ಖಾನೆ (ಕವಿಕಾ) ತಯಾರಿಸಿ ಸರಬರಾಜು ಮಾಡಲು ಸಾಮರ್ಥ್ಯವನ್ನು ಹೊಂದಿಲ್ಲವೇ ಎಂದೂ ಪ್ರಶ್ನಿಸಿದೆ.

 

ಪ್ರಸ್ತಾವಿತ ಉತ್ಪನ್ನಗಳನ್ನು ಸರಬರಾಜು ಮಾಡಲು ಮಾರುಕಟ್ಟೆಯಲ್ಲಿ ಹಲವಾರು ಸಂಸ್ಥೆಗಳು ಲಭ್ಯವಿವೆ. ಅಲ್ಲದೇ ಟೆಂಡರ್ ಮೂಲಕ ಈ ಉತ್ಪನ್ನಗನ್ನು ಸಂಗ್ರಹನೆ ಮಾಡಿಕೊಳ್ಳಲು ವಿಫುಲ ಅವಕಾಶಗಳೂ ಇವೆ. ಆದರೂ ಸಹ ಹೊರ ರಾಜ್ಯದ ಸಂಸ್ಥೆಯಾದ ಕೆಇಎಲ್‌ ಸಂಸ್ಥೆಯಿಂದ ಸಂಗ್ರಹಣೆ ಮಾಡಿಕೊಳ್ಳಲು ಏಕೆ ಪ್ರಸ್ತಾಪಿಸಿದೆ ಎಂದು ಆರ್ಥಿಕ ಇಲಾಖೆಯು ಪ್ರಶ್ನಿಸಿರುವುದು ಪತ್ರದಿಂದ ತಿಳಿದು ಬಂದಿದೆ.

 

 

ಆಡಳಿತ ಇಲಾಖೆಯ ಪ್ರಸ್ತಾವನೆಯಿಂದ ಸಹಮತಿ ನೀಡಿದ್ದಲ್ಲಿ ಸ್ಪರ್ಧಾತ್ಮಕ ದರಗಳಿಂದ ಸಿಗಬಹುದಾದ ಕಡಿಮೆ ದರಗಳ ಲಾಭದಿಂದ ಸರ್ಕಾರವು ವಂಚಿತವಾಗಲಿದೆ. ಹಾಗೂ ಸಂಪನ್ಮೂಲ ದುರ್ಬಳಕೆ ಆಗುವ ಸಾಧ್ಯತೆ ಇರುವುದಿಲ್ಲವೇ ಎಂದೂ ಕೇಳಿದೆ. ಅಲ್ಲದೇ ಪ್ರಸ್ತಾವಿತ ಮೊತ್ತವು 174.73 ಕೊಟಿ ರುಗಳಾಗಿದೆ. ಇಷ್ಟೊಂದು ಬೃಹತ್‌ ಮೊತ್ತಕ್ಕೆ 4 ಜಿ ವಿನಾಯಿತಿ ನೀಡುವುದರಿಂದ ಕೆಟಿಪಿಪಿ ಕಾಯ್ದೆಯ ಪಾರದರ್ಶಕ ಸಂಗ್ರಹಣೆಯ ಆಶಯಕ್ಕೆ ವ್ಯತಿರಿಕ್ತವಾಗುವುದಿಲ್ಲವೇ ಎಂದು ಪ್ರಶ್ನಿಸಿರುವುದು ಪತ್ರದಿಂದ ಗೊತ್ತಾಗಿದೆ.

 

ಕವಿಕಾಕ್ಕೆ 2024ರಲ್ಲೇ 4 ಜಿ ವಿನಾಯಿತಿ

 

ರಾಜ್ಯದ ವಿದ್ಯುತ್ ಸರಬರಾಜು ಸಂಸ್ಥೆಗಳು 2024-25ನೇ ಸಾಲಿನಲ್ಲಿ ಕರ್ನಾಟಕ ವಿದ್ಯುತ್ ಕಾರ್ಖಾನೆಯಿಂದ ಒಟ್ಟಾರೆ 23,005 ಟ್ರಾನ್ಸ್‌ಫಾರ್ಮ್‌ರ್‍‌ಗಳನ್ನು ಖರೀದಿಸಲು ಕೆಟಿಪಿಪಿ ಕಾಯ್ದೆ 4 ಜಿ ಯಿಂದ ವಿನಾಯಿತಿ ನೀಡಿತ್ತು.

 

 

ಈ ಸಂಬಂಧ 2024ರ ಆಗಸ್ಟ್‌ 29ರಂದೇ ಅಧಿಸೂಚನೆ ಹೊರಡಿಸಿತ್ತು. ಅಲ್ಲದೇ ಇದೇ ಅಧಿಸೂಚನೆಯಲ್ಲಯೇ ಕೆಟಿಪಿಪಿ ಕಾಯ್ದೆ 4 ಜಿ ಯಿಂದ ವಿನಾಯಿತಿ ಅವಧಿಯನ್ನೂ ವಿಸ್ತರಿಸಿತ್ತು. ಆದರೂ 2025-26ನೇ ಸಾಲಿನಲ್ಲಿ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜನಿಯರಿಂಗ್‌ ಲಿಮಿಟೆಡ್‌ನಿಂದಲೇ ವಿದ್ಯುತ್ ಪರಿವರ್ತಕಗಳನ್ನು ಖರೀದಿಸಲು 4 ಜಿ ವಿನಾಯಿತಿ ಕೋರಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.

 

 

8 ದಶಕಗಳಿಂದಲೂ ಕವಿಕಾ ಕಾರ್ಯನಿರ್ವಹಣೆ

 

ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1933 ರಲ್ಲಿ ಸ್ಥಾಪಿಸಿದ್ದ ಕವಿಕ ಸಂಸ್ಥೆಯು ಭಾರತದಲ್ಲಿ ವಿದ್ಯುತ್ ವಿತರಣಾ ಟ್ರಾನ್ಸ್‌ಫಾರ್ಮರ್‌ಗಳ ಮೊದಲ ತಯಾರಕ ಕಂಪನಿ. ಕರ್ನಾಟಕ ಸರ್ಕಾರದ ಸಂಪೂರ್ಣ ಸ್ವಾಮ್ಯದ ಉದ್ಯಮವಾಗಿದೆ. ಕರ್ನಾಟಕ ವಿದ್ಯುತ್ ಕಾರ್ಖಾನೆಯು ಕಳೆದ 8 ದಶಕಗಳಿಂದಲೂ ವಿದ್ಯುತ್ ವಿತರಣಾ ಪರಿವರ್ತಕಗಳನ್ನು ತಯಾರಿಸುತ್ತ ಬಂದಿದೆ. ಅಲ್ಲದೇ ಭಾರತೀಯ ಮಾನಕ ಬ್ಯೂರೋದಿಂದಲೂ ಪ್ರಮಾಣ ಪತ್ರ 2022ರಲ್ಲೇ ಲಭಿಸಿತ್ತು.

 

 

 

 

ಹೊಸ ತಂತ್ರಜ್ಞಾನ, ನಾವೀನ್ಯತೆ ಮತ್ತು ಉತ್ಪಾದನಾ ಪ್ರಕ್ರಿಯೆಗಳನ್ನು ಕವಿಕಾ ಅಳವಡಿಸಿಕೊಂಡಿದೆ. ಅಲ್ಲದೇ 25 ಕಿಲೋ ವ್ಯಾಟ್‌ ಯಿಂದ 500 ಕಿಲೋ ವ್ಯಾಟ್‌ವರೆಗಿನ 11 ಕಿಲೋ ವ್ಯಾಟ್‌/ 433 ವ್ಯಾಟ್‌ ವರ್ಗದವರೆಗಿನ ವಿದ್ಯುತ್ ವಿತರಣಾ ಟ್ರಾನ್ಸ್‌ಫಾರ್ಮರ್‌ಗಳ ತಯಾರಿಕೆಯಲ್ಲಿ ಹಾಗೂ ನಿರ್ದಿಷ್ಟ ಅವಶ್ಯಕತೆಗಳಿಗೆ ಅನುಗುಣವಾಗಿ ಕಸ್ಟಮ್-ನಿರ್ಮಿತ/ವಿಶೇಷ ಪ್ರಕಾರದ ಟ್ರಾನ್ಸ್‌ಫಾರ್ಮರ್‌ಗಳ ತಯಾರಿಕೆಯಲ್ಲಿ ಪ್ರಸಿದ್ಧಿ ಪಡೆದಿದೆ.

 

ವಿದ್ಯುತ್‌ ಪರಿವರ್ತಕಗಳ ಉತ್ಪಾದನೆಯಲ್ಲಿ ಕರ್ನಾಟಕವಿದ್ಯುತ್‌ ಕಾರ್ಖಾನೆಯು ದಶಕಗಳಿಂದಲೂ ಸೇವೆ ಸಲ್ಲಿಸುತ್ತಿದೆ ಎಂದು ಮುಖ್ಯಮಂತ್ರಿ  ಸಿದ್ದರಾಮಯ್ಯ ಮತ್ತು ಸಚಿವ ಕೆ ಜೆ ಜಾರ್ಜ್‌ ಅವರು ಹೇಳಿದ್ದರು.

 

 

ರಾಜ್ಯದ ವಿದ್ಯುತ್ ಕಂಪನಿಗಳಾದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಕರ್ನಾಟಕ ವಿದ್ಯುತ್ ನಿಗಮ ಲಿಮಿಟೆಡ್ ಕೂಡ ಕವಿಕಾದ ಗ್ರಾಹಕರ ಪಟ್ಟಿಯಲ್ಲಿವೆ.

 

ಕರ್ನಾಟಕ ವಿದ್ಯುತ್‌ ಕಾರ್ಖಾನೆಗೆ ಐಎಸ್‌ಒ ಪ್ರಮಾಣಪತ್ರವೂ ಸಹ ಲಭಿಸಿತ್ತು.

 

 

ಈ ಸಂಗತಿಯನ್ನು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂಧನ ಸಚಿ ಕೆ ಜೆ ಜಾರ್ಜ್‌ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದರು.

 

 

 

ಅಲ್ಲದೇ ಭಾರತ್ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್, ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯ, ಬಿಜಿಎಸ್ ಕಾಲೇಜ್ ಮತ್ತು ಇತರ ಖಾಸಗಿ ಸಂಸ್ಥೆಗಳು, ಇತ್ಯಾದಿಗಳಂತಹ ಅನೇಕ ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರನ್ನೂ ಒಳಗೊಂಡಿದೆ.

 

ಕವಿಕಾವು ಕಂಪನಿಯು ಕಳೆದ ಐದು ವರ್ಷಗಳಿಂದ ಉತ್ತಮ ಆರ್ಥಿಕ ಬೆಳವಣಿಗೆ ಹೊಂದಿದೆ. ಪರಿವತ೯ಕಗಳ ಮಾರಾಟದಿಂದ 8.69 ಕೋಟಿಯಿಂದ 76.23 ಕೋಟಿ ರು ಲಾಭ ಗಳಿಸಿದೆ. 2005 – 06 ರಲ್ಲಿ 1.30 ಕೋಟಿ ನಷ್ಟದಲ್ಲಿತ್ತು. 2010-11 ರಲ್ಲಿ 1.52 ಕೋಟಿಯಷ್ಟು ಲಾಭ ಗಳಿಸಿದೆ. 2021-22ರಲ್ಲಿ 13,140 ವಿದ್ಯುತ್ ಪರಿವರ್ತಕಗಳನ್ನು ಮಾರಾಟ ಮಾಡಿತ್ತು. ಇದರ ಮೌಲ್ಯವೇ 109.71 ಕೋಟಿಯಷ್ಟಿತ್ತು.

 

 

ವಿತರಣಾ ಪರಿವತ೯ಕಗಳ ತಯಾರಿಕೆಯಲ್ಲಿರುವ ಕರ್ನಾಟಕ ವಿದ್ಯುತ್ ಕಾರ್ಖಾನೆಯು ಅರ್ಹ ಎಂಜಿನಿಯರ್‌ಗಳು, ಮೇಲ್ವಿಚಾರಕರು, ತಂತ್ರಜ್ಞರನ್ನು ಹೊಂದಿದೆ. ಮತ್ತು ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ ಮತ್ತು ಉತ್ತಮ ಗುಣಮಟ್ಟದ ಪರಿವತ೯ಕಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವ ಸಿಬ್ಬಂದಿಗಳನ್ನೂ ಒಳಗೊಂಡಿದೆ.

 

 

ಗುಣಮಟ್ಟ ನಿಯಂತ್ರಣ ಕಾಯ್ದುಕೊಂಡಿರುವ ಕವಿಕಾ ನಡೆಸುವ ತಪಾಸಣೆ ವಿಧಾನಗಳ ಬಗ್ಗೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪ್ರಚಾರ ಮಾಡಿದ್ದರು.

 

 

ಗುಣಮಟ್ಟ ನಿಯಂತ್ರಣ

 

ವಿದ್ಯುತ್ ಪರಿವತ೯ಕಗಳ ತಯಾರಿಕೆಯಿಂದ ಹಿಡಿದು ಅಂತಿಮ ಪರೀಕ್ಷೆಯವರೆಗೆ ಮತ್ತು ಭಾರತೀಯ ಮಾನದಂಡಗಳಿಗೆ ಮತ್ತು ಗ್ರಾಹಕರ ಅವಶ್ಯಕತೆಗೆ ಅನುಗುಣವಾಗಿವೆ. ಇಂಡಿಯನ್ ಸ್ಟ್ಯಾಂಡರ್ಡ್ಸ್ ಪ್ರಕಾರ ಪರಿವತ೯ಕಗಳ ಅಂತಿಮ ಪರೀಕ್ಷೆ ನಡೆಸಲಾಗಿದೆ. ಬಹಳ ವಿಸ್ತಾರವಾದ ವಿವಿಧ ಕಾರ್ಯವಿಧಾನಗಳು ಮತ್ತು ಪರೀಕ್ಷೆಗಳು ಭಾರತೀಯ ಗುಣಮಟ್ಟವನ್ನು ಅನುಸರಿಸುತ್ತದೆ. ಉತ್ಪಾದನಾ ವಿಭಾಗದಿಂದ ಸ್ವತಂತ್ರವಾಗಿ ಕೆಲಸ ಮಾಡುವುದರಿಂದ ಗುಣಮಟ್ಟದ ನಿಯತಾಂಕಗಳನ್ನು ತಯಾರಿಕೆಯ ವಿವಿಧ ಹಂತಗಳಲ್ಲಿ ಅನುಸರಿಸಲಾಗುತ್ತಿದೆ ಎಂದು ಕವಿಕಾವು ಹೇಳಿಕೊಂಡಿದೆ.

 

ಕವಿಕಾದ ಟ್ರಾನ್ಸ್‌ಫಾರ್ಮ್‌ರ್‍‌ ಶ್ರೇಣಿಯ ಬಗ್ಗೆ ಮತ್ತು ಉತ್ತಮ ಗುಣಮಟ್ಟದ ಬಗ್ಗೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಚಾರ ಮಾಡಿದ್ದರು.

 

 

ವಿದ್ಯುತ್ ಪರಿವರ್ತಕಗಳಿಗೆ ಸಿಲಿಕಾನ್ ಸ್ಟೀಲ್ ಲ್ಯಾಮಿನೇಷನ್ಸ್ , ಕೋಲ್ಡ್ ರೋಲ್ಡ್ ಗ್ರೈನ್ ಓರಿಯೆಂಟೆಡ್ ಸ್ಟೀಲ್ ಬಳಸುತ್ತಿದೆ. ಹೀಗಾಗಿ ಪರಿವತ೯ಕಗಳ ಬಳಕೆ ಅವಧಿಯೂ ದೀರ್ಘಾವಧಿಯದ್ದಾಗಿದೆ. ಎಲೆಕ್ಟ್ರಿಕ್ ಗ್ರೇಡ್ ಡಬಲ್ ಪೇಪರ್ ತಾಮ್ರ / ಅಲ್ಯೂಮಿನಿಯಂ ಕಂಡಕ್ಟರ್‌ಗಳನ್ನು ಒಳಗೊಂಡಿದೆ. ಖ್ಯಾತ ಕಂಪನಿಗಳಿಂದ ಇತ್ತೀಚಿನ IS:335 ಗೆ ಅನುಗುಣವಾಗಿ ತೈಲವನ್ನು ಸಂಗ್ರಹಿಸಿದೆ.

 

ಈ ಸಂಗತಿಯನ್ನೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆ ಜೆ ಜಾರ್ಜ್‌ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದರಲ್ಲದೇ ಭರ್ಜರಿ ಪ್ರಚಾರವನ್ನೂ ಪಡೆದಿದ್ದರು.

 

ಪರಿವತ೯ಕದ ಕಾರ್ಯಕ್ಷಮತೆಯ ದೀರ್ಘಾವಧಿಯವರೆಗಿರುವ ಉದ್ದೇಶದಿಂದ ತೈಲವನ್ನು ಟಾನ್ ಡೆಲ್ಟಾ ಪರೀಕ್ಷೆಗೂ ಒಳಪಡಿಸುತ್ತಿದೆ.

Your generous support will help us remain independent and work without fear.

Latest News

Related Posts