ಗಾಲ್ಫ್‌ ಕ್ಲಬ್‌ ನಿಯಂತ್ರಿಸಲು ಮೂಗುದಾರ; ಆಡಳಿತ ಮಂಡಳಿ ಅಧ್ಯಕ್ಷ ಹುದ್ದೆಗೆ ಐಎಎಸ್‌ ಅಧಿಕಾರಿ ನೇಮಕ?

ಬೆಂಗಳೂರು;  ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್ ಆಡಳಿತ ಮಂಡಳಿಗೆ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅಥವಾ ಸರ್ಕಾರದ ಹಿರಿಯ ಐಎಎಸ್‌ ಅಧಿಕಾರಿಗಳನ್ನು ನೇಮಿಸಲು ಚಿಂತಿಸುತ್ತಿದೆ. ಗಾಲ್ಫ್‌ ಅಸೋಸಿಯೇಷನ್‌ನ ಆಡಳಿತವನ್ನು ನಿಯಂತ್ರಿಸಲು ಸಿದ್ಧತೆ ನಡೆಸಿರುವ ಸರ್ಕಾರವು,  ಇದಕ್ಕಾಗಿ ನಿಯಮಗಳಲ್ಲಿ ಬದಲಾವಣೆ ತರಲು ಹೊರಟಿರುವುದು ಇದೀಗ ಬಹಿರಂಗವಾಗಿವೆ.

 

ಕರ್ನಾಟಕ  ಗಾಲ್ಫ್‌ ಅಸೋಸಿಯೇಷನ್‌ ಮೇಲೆ ಇದೀಗ ಸರ್ಕಾರದ ಕಣ್ಣು ಬಿದ್ದಿದೆ. ಗಾಲ್ಪ್‌ ಅಸೋಸಿಯೇಷನ್‌ ಬಳಸುತ್ತಿರುವ ಜಮೀನು, ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿರುವ ಕಾರಣ ಆಡಳಿತ ವಿಷಯದಲ್ಲಿಯೂ ನಿರ್ಣಯ ಕೈಗೊಳ್ಳುವ ಅಧಿಕಾರವೂ ಸರ್ಕಾರಕ್ಕಿದೆ ಎಂದು ಪ್ರತಿಪಾದಿಸಲಾರಂಭಿಸಿದೆ.

 

ಈ ಸಂಬಂಧ ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಅಧಿಕಾರಿಗಳು ಸಮಾಲೋಚಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ಗೆ ಸಂಬಂಧಿಸಿದಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ  ಕಂದಾಯ ಇಲಾಖೆಯು ಮಾಹಿತಿ ಒದಗಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ ಆಡಳಿತವನ್ನು ನಿಯಂತ್ರಿಸಲು ಹೊರಟಿರುವ ಸರ್ಕಾರವು, ಹಲವು ಸಮರ್ಥನೀಯ ಅಂಶಗಳನ್ನು ಪಟ್ಟಿ ಮಾಡಿದೆ. ಅದರಂತೆಯೇ 1980ರಲ್ಲಿ ಸರ್ಕಾರ ಹೊರಡಿಸಿದ್ದ ಆದೇಶ, 1986ರಲ್ಲಿ ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ ಮತ್ತು ನಿಗಮದ ನಡುವೆ ಆಗಿರುವ ಒಪ್ಪಂದವನ್ನು ಮುನ್ನೆಲೆಗೆ ತಂದಿದೆ. ಇದರ ಪ್ರಕಾರ ಗಾಲ್ಫ್‌ ಅಸೋಸಿಯೇಷನ್‌ನ ಆಡಳಿತವನ್ನು ನಿಯಂತ್ರಿಸುವ ಕುರಿತು ಗೌರ್ನಿಂಗ್ ಕೌನ್ಸಿಲ್‌ ರಚಿಸಲು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಬೇಕು ಎಂದು ಕಂದಾಯ ಇಲಾಖೆಯು ಪ್ರಸ್ತಾವವನ್ನೂ ಸಿದ್ಧಪಡಿಸಿದೆ.

 

 

 

ನಿಯಂತ್ರಣವೇಕೆ?

 

ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ ಮತ್ತು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಜತೆ 1986ರ ಜುಲೈ 25ರಂದು ಒಪ್ಪಂದ ಆಗಿದೆ. ಇದರ ಪ್ರಕಾರ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಸರ್ಕಾರವು ಗಾಲ್ಫ್‌ ಅಸೋಸಿಯೇಷನ್‌ನ ಆಡಳಿತವನ್ನು ನಿಯಂತ್ರಿಸಲು  ಗೌರ್ನಿಂಗ್‌ ಕೌನ್ಸಿಲ್‌ನ್ನು ನಿಯೋಜಿಸಲು ಮುಂದಾಗಿದೆ.

 

karnataka golf club fileld

 

 

ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ಗೆ ಯೋಜನೆಗೆ ಸಂಬಂಧಿಸಿದಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಏಜೆಂಟ್‌ನಂತೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದೆ. ಗಾಲ್ಫ್‌ ಅಸೋಸಿಯೇಷನ್‌ಗೆ ನೀಡಿರುವ ಜಮೀನನ್ನು ಗಾಲ್ಫ್‌ ಉತ್ತೇಜಿಸಬೇಕು. ಸದಸ್ಯರಿಗೆ ಸೌಲಭ್ಯಗಳನ್ನು ಒದಗಿಸಬೇಕು. ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ಅನುಕೂಲಕರವಾದ ಪರಿಸರ ನಿರ್ಮಾಣ ಮಾಡುವುದು ಅವಶ್ಯಕವಿದೆ ಎಂದು ಪ್ರಸ್ತಾವದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ಗೆ ಸದಸ್ಯರನ್ನು  ನೋಂದಾಯಿಸುವಾಗ ಸದಸ್ಯತ್ವವು ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವ ರೀತಿಯಲ್ಲಿರಬೇಕು. ಮತ್ತು ಎಲ್ಲಾ ವರ್ಗದವರಿಗೂ ಸಹ ಕೈಗೆಟುಕುವ ಸದಸ್ಯತ್ವ ಶುಲ್ಕವನ್ನು ನಿರ್ಣಯಿಸುವ ಅವಶ್ಯಕತೆ ಇದೆ.  ಅಲ್ಲದೇ ಗಾಲ್ಫ್‌ ಅಸೋಸಿಯೇಷನ್‌, ಬಾಡಿಗೆ, ಸದಸ್ಯತ್ವ ಶುಲ್ಕ, ಇತ್ಯಾದಿಗಳ ಸಂಗ್ರಹಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ತ್ರೈಮಾಸಿಕ ಖಾತೆಯ ಹೇಳಿಕೆಗಳನ್ನು ಸಲ್ಲಿಸಬೇಕು.  ಅದೇ ರೀತಿ ಈ ಜಮೀನಿನ ಮೇಲಿನ ಎಲ್ಲಾ ಕಾನೂನುಬದ್ಧ ಶುಲ್ಕಗಳನ್ನು ಮತ್ತು ತೆರಿಗೆಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಬೇಕು. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ವರದಿ ಸಲ್ಲಿಸಬೇಕು.

 

 

ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ನ ಅಡಳಿತ ಮಂಡಳಿಗೆ ಈಗಾಗಲೇ ಸರ್ಕಾರಿ ಪ್ರತಿನಿಧಿಗಳನ್ನು ನೇಮಿಸಿದೆ. ಅಲ್ಲದೇ ಅವರ ಸಲಹೆ, ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದರೂ ಸಹ ಗಾಲ್ಫ್‌ ಅಸೋಸಿಯೇಷನ್‌ ಕ್ರಮ ವಹಿಸುತ್ತಿಲ್ಲ. ಹಾಗೆಯೇ ಒಪ್ಪಂದದ ಅಂಶಗಳನ್ನು ಮೀರಿ ಸದಸ್ಯತ್ವ ಶುಲ್ಕ ವಸೂಲು ಮಾಡುತ್ತಿದೆ. ಅಲ್ಲದೇ ವ್ಯಾಪ್ತಿ ಮೀರಿ  ಸದಸ್ಯತ್ವವನ್ನು ನೋಂದಾಯಿಸುತ್ತಿದೆ. ಹೀಗಾಗಿ ಇದನ್ನು ನಿಯಂತ್ರಿಸುವುದು ಅವಶ್ಯಕವಾಗಿದೆ ಎಂದು ಪ್ರತಿಪಾದಿಸಿರುವುದು ತಿಳಿದು ಬಂದಿದೆ.

 

 

ಅಲ್ಲದೇ ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ನ ತನ್ನ ಆಂತರಿಕ ನಿಯಮಗಳಲ್ಲಿ ಯಾವುದೇ ಬದಲಾವಣೆಗೆ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ, ಸರ್ಕಾರದ ಪೂರ್ವಾನುಮೋದನೆ ಅಗತ್ಯವಾಗಿದೆ. ಆದರೂ ಸಲಹ ಕಾಲಕಾಲಕ್ಕೆ ಜರಗುವ ಆಡಳಿತ ಮಂಡಳಿಯ ನಡವಳಿ ಮತ್ತು ನಿರ್ಣಯಗಳನ್ನು ಕರ್ನಾಟಕ ಪ್ರವಾಸೋದ್ಯ ಅಭಿವೃದ್ಧಿ ನಿಗಮಕ್ಕೆ ಸಲ್ಲಿಸುವಲ್ಲಿ ವಿಫಲವಾಗಿದೆ.

 

 

ಈ ಎಲ್ಲಾ ಅಂಶಗಳನ್ನು ಮುಂದಿರಿಸಿರುವ ಕಂದಾಯ ಇಲಾಖೆಯು ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ ಆಡಳಿತ ಮಂಡಳಿ ಮೇಲೆ ನಿಯಂತ್ರಣ ಹೊಂದಲು ಬಯಸಿದೆ. ‘ ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ ಆಡಳಿತದ ಮೇಲೆ ನಿಯಂತ್ರಣ ಸಾಧಿಸದೇ ಹೋದಲ್ಲಿ ಅದರಿಂದ ಸರ್ಕಾರಕ್ಕೆ ಮತ್ತು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಹಾನಿ ಉಂಟಾಗುವ ಸಾಧ್ಯತೆ ಇದೆ,’ ಎಂದು ಕಂದಾಯ ಇಲಾಖೆಯು ತನ್ನ ಪ್ರಸ್ತಾವದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ  ಐಎಎಸ್‌ ಅಧಿಕಾರಿ ನೇಮಕ

 

ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅಥವಾ ಹಿರಿಯ ಐಎಎಸ್‌ ಅಧಿಕಾರಿಯನ್ನು ನೇಮಿಸಬೇಕು ಎಂದು ಪ್ರಸ್ತಾವದಲ್ಲಿ ಹೇಳಿದೆ. ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌, ಸೊಸೈಟಿ ಅಧಿನಿಯಮಗಳ ಅಡಿಯಲ್ಲಿ ನೋಂದಾಯಿತವಾಗಿದೆ. ಆಧರೆ ಅದು ಬಳಸುತ್ತಿರುವ ಜಮೀನು, ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದೆ. ಹೀಗಾಗಿ ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ ಆಡಳಿತ ವಿಷಯವಾಗಿ ನಿರ್ಣಯ ಕೈಗೊಳ್ಳುವ ಅಧಿಕಾರ ಸರ್ಕಾರಕ್ಕಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಮಾಹಿತಿ ಒದಗಿಸಿದೆ ಎಂದು ಗೊತ್ತಾಗಿದೆ.

 

 

 

ಆಗಲಿದೆಯೇ ನಿಯಮ ಬದಲಾವಣೆ?

 

ಸೊಸೈಟಿ ನೋಂದಣಿ ಅಧಿನಿಯಮದ ಅಡಿಯಲ್ಲಿ ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ ನೋಂದಾಯಿತ ಸಂಸ್ಥೆಯಾಗಿದೆ. ಅದಕ್ಕೆ ಅಧ್ಯಕ್ಷರನ್ನಾಗಿ ಚುನಾಯಿತ ಸದಸ್ಯರನ್ನು ನಿಯಮಾನುಸಾರ ಆಯ್ಕೆ ಮಾಡುವುದರಿಂದ ಸರ್ಕಾರದ ನಿಯಂತ್ರಣ ಕಡಿಮೆಯಾಗಿದೆ. ಹೀಗಾಗಿ ಸರ್ಕಾರದ ಸುಪರ್ದಿಗೆ ಒಳಪಡುವ ವ್ಯವಸ್ಥೆ ಮಾಡುವುದು ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ಗೆ ನಿಯಮಗಳಲ್ಲಿ ಬದಲಾವಣೆ ಮಾಡುವುದು ಅವಶ್ಯಕವಾಗಿದೆ ಎಂದು ಪ್ರತಿಪಾದಿಸಿರುವುದು ತಿಳಿದು ಬಂದಿದೆ.

 

ನಿಯಮಗಳು ಬದಲಾವಣೆ ಆದಲ್ಲಿ ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ ಆಡಳಿತ ಮಂಡಳಿಯ ಅಧ್ಯಕ್ಷರನ್ನಾಗಿ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅಥವಾ ಸರ್ಕಾರದ ಹಿರಿಯ ಐಎಎಸ್‌ ಅಧಿಕಾರಿಯನ್ನು ನೇಮಿಸಬೇಕು. ಇದಕ್ಕೆ ಸರ್ಕಾರದ ನಿರ್ದೇಶನದ ಅವಶ್ಯಕತೆ ಇದೆ. ಅಧ್ಯಕ್ಷರು ಸರ್ಕಾರದ ಪ್ರತಿನಿಧಿಯಾದಲ್ಲಿ ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ನ ಆಡಳಿತ ಮತ್ತು ಅದರ ವ್ಯವಹಾರಗಳಲ್ಲಿ ಸರ್ಕಾರವು ನಿಯಂತ್ರಣ ಹೊಂದಬಹುದು. ಈ ರೀತಿ ಅವಕಾಶ ದೊರೆತಲ್ಲಿ ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ಗೆ ನೀಡಿರುವ ಜಮೀನಿನ ನಿರ್ವಹಣೆಯೂ ಸುಲಭವಾಗಲಿದೆ ಎಂದು ಸಮರ್ಥಿಸಿಕೊಂಡಿರುವುದು ಗೊತ್ತಾಗಿದೆ.

 

ಅದೇ ರೀತಿ ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ಗೆ ನೀಡಿರುವ ಜಮೀನಿನ ಸುತ್ತಮುತ್ತ ಕೆಲವು ಖಾಸಗಿ ವ್ಯಕ್ತಿಗಳು ಅತಿಕ್ರಮಿಸುತ್ತಿದ್ದಾರೆ. ಅದನ್ನು ತಡೆಗಟ್ಟುವಲ್ಲಿ ಮತ್ತು ನಿಯಂತ್ರಿಸುವಲ್ಲಿ ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ ವಿಫಲವಾಗಿದೆ. ಹೀಗಾಗಿ ಅತಿಕ್ರಮಣ ತಡೆಗಟ್ಟುವುದು ಮತ್ತು ಈಗಾಗಲೇ ಆಗಿರುವ ಅತಿಕ್ರಮಣವನ್ನು ತೆರವುಗೊಳಿಸಲು ಸರ್ಕಾರದ ನಿಯಂತ್ರಣದ ಅವಶ್ಯಕತೆ ಇದೆ ಎಂದು ಹೇಳಿದೆ.

 

ಹೆಚ್ಚಳವಾಗದ ಬಾಡಿಗೆ ಮೊತ್ತ

 

ಕರ್ನಾಟಕ ಗಾಲ್ಫ್‌ ಅಸೋಸಿಯೇ‍ಷನ್‌ನ ವಾರ್ಷಿಕ ಆದಾಯವು ಪ್ರತೀ ವರ್ಷ ಹೆಚ್ಚುತ್ತಿದೆ. ಆದರೆ ಹಣಕಾಸು ವಹಿವಾಟುಗಳ ಆಧಾರದ ಮೇಲೆ ಬಾಡಿಗೆ ಮೊತ್ತ ಹೆಚ್ಚಳವಾಗಿಲ್ಲ. 2012-13ರ ಆದಾಯದ ಲೆಕ್ಕಾಚಾರದ ಪ್ರಕಾರ ಶೇ.2ರಷ್ಟು ಮೊತ್ತವನ್ನು ಬಾಡಿಗೆಯಾಗಿ ತೆಗೆದುಕೊಳ್ಳುತ್ತಿದೆ. ಗಾಲ್ಫ್‌ ಕ್ಲಬ್‌ಗೆ ನೀಡಿರುವ ಜಮೀನಿನ ಮಾರುಕಟ್ಟೆ ದರ, ಬೆಂಗಳೂರಿನಲ್ಲಿರುವ ಇತರೆ ಜಾಗಗಳನ್ನು ಹೋಲಿಸಿದ್ದಲ್ಲಿ ಬಹಳಷ್ಟು ಹೆಚ್ಚಾಗುತ್ತದೆ. ಆದರೆ ಆ ಮಟ್ಟದಲ್ಲಿ ಸರ್ಕಾರಕ್ಕೆ ಯಾವುದೇ ಆದಾಯ ಬರುತ್ತಿಲ್ಲ. ಹೀಗಾಗಿ ಬಾಡಿಗೆಯನ್ನು ಹೆಚ್ಚಳ ಮಾಡಬೇಕಿದೆ ಎಂದು ಪ್ರತಿಪಾದಿಸಿದೆ.

 

 

ಪರೋಕ್ಷ ಮತ್ತು ಪ್ರತ್ಯಕ್ಷವಾಗಿ ಕರ್ನಾಟಕ ಗಾಲ್ಫ್ ಅಸೋಸಿಯೇಷನ್‌ನ ವಾರ್ಷಿಕ ಆದಾಯ ಹೆಚ್ಚಿಸಿಕೊಳ್ಳಬೇಕಿದೆ. ಗಾಲ್ಫ್‌ ಕ್ಲಬ್‌ ಪ್ರತಿನಿತ್ಯ 5 ಸಾಲ್ಟ್‌ಗಳಲ್ಲಿ ಗಾಲ್ಫ್‌ ಪಂದ್ಯವನ್ನು ನಡೆಸಲು ಕ್ರಿಯಾ ಯೋಜನೆ ರೂಪಿಸಬೇಕಿದೆ. ಈ ಮಾಹಿತಿಯನ್ನು ಬೆಂಗಳೂರಿನಲ್ಲಿರುವ ಎಲ್ಲಾ ಪಂಚತಾರಾ ಹೋಟೆಲ್‌ಗಳಿಗೆ  ನೀಡಬೇಕು. ಮತ್ತು ಪ್ರತಿನಿತ್ಯ 5 ಸಾಲ್ಟ್‌ಗಳಲ್ಲಿ ಗಾಲ್ಫ್‌  ಪಂದ್ಯ ನಡೆಸಲು ಕ್ರಮಕೈಗೊಂಡಲ್ಲಿ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರಲಿದೆ ಎಂದು ಮಾಹಿತಿ ಒದಗಿಸಿದೆ.

 

 

ಅದೇ ರೀತಿ ಕರ್ನಾಟಕ ಗಾಲ್ಫ್‌ ಅಸೋಷಿಯೇನ್‌ನಿಂದ ಸರ್ಕಾರಕ್ಕೆ ಕ್ಲಬ್‌ನ ವಾರ್ಷಿಕ ಆದಾಯದ ಶೇ. 2ರಷ್ಟು ಗುತ್ತಿಗೆ ಮೊತ್ತವನ್ನು ನಿಗದಿಪಡಿಸಿದೆ. ಸರ್ಕಾರಕ್ಕೆ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕ್ಲಬ್‌ನ ವಾರ್ಷಿಕ ಆದಾಯದ ಶೇ. 20ರಷ್ಟು ಗುತ್ತಿಗೆ ಬಾಡಿಗೆಯನ್ನು ನಿಗದಿಪಡಿಸಬಹುದು ಎಂದು ಸಲಹೆ ನೀಡಿದೆ. ಹೆಚ್ಚಳ ಮಾಡಿದ ಗುತ್ತಿಗೆ ಬಾಡಿಗೆಯನ್ನು ಪ್ರತಿ 5 ವರ್ಷಕ್ಕೊಮ್ಮೆ ಗುತ್ತಿಗೆ ಅವಧಿ ಮುಗಿಯುವವರೆಗೆ ಶೇ. 10 (ಶೇ.20ರ ಮೇಲೆ) ಹೆಚ್ಚಿಸಿ ಗುತ್ತಿಗೆ ಬಾಡಿಗೆಯನ್ನು ಪರಿಷ್ಕರಿಸಲು ಗುತ್ತಿಗೆ ಕರಾರಿನಲ್ಲಿ ತಿದ್ದುಪಡಿ ಮಾಡಬಹುದು ಎಂದು ಹೇಳಿದೆ. ಮತ್ತು ಸರ್ಕಾರವು, ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ನ ಹಣಕಾಸು ವ್ಯವಹಾರಗಳನ್ನು ನಿಯಮಿತವಾಗಿ ಲೆಕ್ಕ ಪರಿಶೋಧನೆ ಮಾಡಿ ವರದಿ ಪಡೆಯಬಹುದು.

 

 

ಗಾಲ್ಫ್‌ ಅಸೋಸಿಯೇಷನ್‌ಗೆ ಸಂಬಂಧಿಸಿದಂತೆ ಸರ್ಕಾರವು 2013ರಲ್ಲಿ ಆದೇಶ ಹೊರಡಿಸಿತ್ತು. ಈ ಆದೇಶದ ಪ್ರಕಾರ ಹೊಸ ಕಟ್ಟಡ ನಿರ್ಮಾಣ ಮಾಡದಂತೆ ನಿಬಂಧನೆ ವಿಧಿಸಿತ್ತು. ಸರ್ಕಾರದ ಅನುಮತಿಯಿಲ್ಲದೇ ಯಾವುದೇ ನಿರ್ಮಾಣ ಕಾಮಗಾರಿ ಕೈಗೊಳ್ಳುವಂತಿಲ್ಲ. ಈ ಅಸೋಸಿಯೇಷನ್‌ಗೆ ನೀಡಿರುವ ಜಮೀನು ಅತ್ಯಂತ ಬೆಲೆಬಾಳಲಿದೆ. ಈ ಜಮೀನಿನ ಒಪ್ಪಂದದ ಅವಧಿಯು 2040ಕ್ಕೆ ಪೂರ್ಣಗೊಳ್ಳಲಿದೆ.

 

2040ರ ನಂತರ ಒಪ್ಪಂದ ಮುಂದುವರೆಸುವ ವಿಷಯವು ಸರ್ಕಾರದ ವಿವೇಚನೆಗೆ ಒಳಪಟ್ಟಿದೆ. ಸರ್ಕಾರದ ಆದೇಶ ಮತ್ತು ಒಪ್ಪಂದದಲ್ಲಿ ಹೇಳಿರುವಂತೆ ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ 2010ರ ನಂತರ ಯಾವುದೇ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡದಂತೆ ಪ್ರತಿಬಂಧಿಸಿದೆ.

Your generous support will help us remain independent and work without fear.

Latest News

Related Posts