ಅಪಾರ್ಟ್‌ಮೆಂಟ್‌ ವಿಧೇಯಕ ಜಾರಿಯಾಗದೇ ನೋಟೀಸ್‌; ಬಿಡಿಎ ಮೇಲೆ ನಿವಾಸಿಗಳ ಕೆಂಗಣ್ಣು

ಬೆಂಗಳೂರು: ರಾಜ್ಯ ಸರ್ಕಾರವು ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ 2025 ಇನ್ನೂ ಜಾರಿಗೊಂಡಿಲ್ಲ. ಆದರೆ ಮನೆ ಖರೀದಿದಾರರು ನಿವಾಸಿಗಳ ಕಲ್ಯಾಣ ಸಂಘ ರಚಿಸಬೇಕು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನೋಟೀಸ್‌ ಜಾರಿಗೊಳಿಸಲಾರಂಭಿಸಿದೆ.

 

ಗುಂಜೂರು ವಸತಿ ಯೋಜನೆ ಹಂಚಿಕೆದಾರರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು 2025ರ ಡಿಸೆಂಬರ್‍‌ 23ರಂದು ಅಂತಿಮ ನೆನಪೋಲೆ ಹೆಸರಿನಲ್ಲಿ ನೋಟೀಸ್‌ ಜಾರಿಗೊಳಿಸಿದೆ. ಡಿಸೆಂಬರ್‍‌ 31ರೊಳಗೇ ಸಂಘ ರಚಿಸಿಕೊಳ್ಳದಿದ್ದಲ್ಲಿ ಪ್ರಾಧಿಕಾರದಿಂದ ಕೈಗೊಳ್ಳುವ ನಿರ್ವಹಣೆಗಳನ್ನು 2025ರ ಜನವರಿ 1ರಿಂದ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದೆ.

 

ಗುಂಜೂರು ವಸತಿ ಯೋಜನೆ ಹಂಚಿಕೆದಾರರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು 2025ರ ಡಿಸೆಂಬರ್‍‌ 23ರಂದು ಜಾರಿಗೊಳಿಸಿರುವ ಅಂತಿಮ ನೆನಪೋಲೆಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಗುಂಜೂರು ವಸತಿ ಯೋಜನೆ ಹಂತ 1, 2 ರಲ್ಲಿನ ಹಂಚಿಕೆದಾರರು ವಸತಿ ಸಮುಚ್ಛಯದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ರಚಿಸಿಕೊಳ್ಳಬೇಕು ಎಂದು ಬೆನ್ನು ಬಿದ್ದಿದೆ. ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ 2025 ಇನ್ನೂ ಜಾರಿಗೊಳಿಸದೆಯೇ ವಸತಿ ಸಮುಚ್ಛಯದಲ್ಲಿರುವ ನಿವಾಸಿಗಳಿಗೆ ಕ್ಷೇಮಾಭಿವೃದ್ಧಿ ಸಂಘ ರಚಿಸಿಕೊಳ್ಳಬೇಕು ಎಂದು ಒತ್ತಡ ಹೇರಲಾರಂಭಿಸಿದೆ.

 

ಅಂತಿಮ ನೆನಪೋಲೆಯಲ್ಲೇನಿದೆ?

 

ಗುಂಜೂರು ವಸತಿ ಯೋಜನೆಯ ಮೊದಲ ಮತ್ತು ಎರಡನೇ ಹಂತದಲ್ಲಿ ವಸತಿ ಘಟಕಗಳನ್ನು ನಿರ್ಮಿಸಲಾಗಿದೆ. ಈ ವಷತಿ ಸಮುಚ್ಛಯದಲ್ಲಿ ಈಗಾಗಲೇ ಎಲ್ಲಾ ಫ್ಲಾಟ್‌ಗಳು ಹಂಚಿಕೆಯಾಗಿವೆ. ಹಲವು ಹಂಚಿಕೆದಾರರು ವಾಸವಿದ್ದಾರೆ. ಈ ವಸತಿ ಸಮುಚ್ಛಯದಲ್ಲಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ನಿರ್ಮಿಸಿಕೊಂಡಿಲ್ಲ. ಹೀಗಾಗಿ ವಸತಿ ಸಮುಚ್ಛಯ ಮತ್ತು ಲಿಫ್ಟ್‌ಗಳ ನಿರ್ವಹಣೆಯನ್ನು ಬಿಡಿಎ ನಿರ್ವಹಿಸುತ್ತಿದೆ.

 

 

ಪ್ರಾಧಿಕಾರವು ನಿರ್ಮಿಸಿರುವ ವಸತಿ ಸಮುಚ್ಛಯಗಳ ದೈನಂದಿನ ಸ್ವಚ್ಛತೆ, ದುರಸ್ತಿ, ಸಾಮಾನ್ಯ ಪ್ರದೇಶಗಳ ಸಂರಕ್ಷಣೆ ಹಾಗೂ ಸಮಗ್ರ ನಿರ್ವಹಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನೆರವೇರಿಸಬೇಕಿದೆ. ಹಾಗೂ ಇಲ್ಲಿನ ಸಮುಚ್ಛಯಗಳಲ್ಲಿನ ನಿರ್ವಹಣೆ ಹೊಣೆಯನ್ನು ಸಂಬಂಧಿಸಿದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸುಪರ್ದಿಗೆ ವಹಿಸಲು 2025ರ ಡಿಸೆಂಬರ್‍‌ 31ರ ಒಳಗಾಗಿ ಕಡ್ಡಾಯವಾಗಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ರಚಿಸಿಕೊಳ್ಳುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಆಯುಕ್ತರು ಕಟ್ಟುನಿಟ್ಟಾಗಿ ಸೂಚಿಸಿರುವುದು ಅಂತಿಮ ನೆನಪೋಲೆಯಿಂದ ತಿಳಿದು ಬಂದಿದೆ.

 

 

ವಸತಿ ಸಮುಚ್ಛಯಕ್ಕೆ ಸಂಬಂಧಿಸಿದಂತೆ ಪ್ರಾಧಿಕಾರದಿಂದ ಕೈಗೊಳ್ಳುವ ನಿರ್ವಹಣೆಗಳಣ್ನು 2026ರ ಜನವರಿ 1ರಿಂದ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು. ಅಲ್ಲದೇ 2026ರ ಜನವರಿ 1ರಿಂದಲೇ ವಸತಿ ಸಮುಚ್ಛಯದ ಸಂಪೂರ್ಣ ನಿರ್ವಹಣೆ, ಕಾಮನ್‌ ಏರಿಯಾ ವಿದ್ಯುತ್‌ ಬಿಲ್‌, ಬಿಡಬ್ಲ್ಯೂಎಸ್‌ಎಸ್‌ಬಿ ಇನ್ನಿತರೆ ಶುಲ್ಕಗಳನ್ನು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದಲೇ ಪಾವತಿಸಿ ನಿರ್ವಹಿಸಬೇಕು ಎಂದು ನೆನಪೋಲೆಯಲ್ಲಿ ಸೂಚಿಸಿರುವುದು ಗೊತ್ತಾಗಿದೆ.

 

ಕಾಯ್ದೆ ರೂಪಿಸದೇ ಸಂಘ ಸ್ಥಾಪನೆ ಹೇಗೆ ಸಾಧ್ಯ?

 

ಬಿಡಿಎ ಅಭಿವೃದ್ಧಿಪಡಿಸಿದ ಅಪಾರ್ಟ್‌ಮೆಂಟ್‌ಗಳ ಮನೆ ಖರೀದಿದಾರರು ನಿವಾಸಿಗಳ ಕಲ್ಯಾಣ ಸಂಘ ರಚಿಸಬೇಕೆಂದು ಬಿಡಿಎ ಜಾರಿಗೊಳಿಸಿರುವ ನೋಟೀಸ್‌ಗೆ ಅಪಾರ್ಟ್‌ಮೆಂಟ್‌ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ನ್ನು ಎಲ್ಲಿ ನೋಂದಣಿ ಮಾಡಿಸಬೇಕು ಎಂಬ ಬಗ್ಗೆಯೂ ಸ್ಪಷ್ಟವಾಗಿ ಘೋಷಿಸಿಲ್ಲ. ಗ್ರೇಟರ್ ಬೆಂಗಳೂರು ಅಥಾರಿಟಿಯೂ ಕಾಯ್ದೆಯನ್ನು ಪ್ರಕಟಿಸಿಲ್ಲ. ನಗರಾಭಿವೃದ್ಧಿ ಇಲಾಖೆ ಸರ್ಕಾರದ ಹೆಚ್ಚುವರಿ ಮುರ್ಖಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರೊಂದಿಗೆ ಮಾತನಾಡಿ ಸ್ಪಷ್ಟ ಮಾರ್ಗಸೂಚಿಗಳನ್ನು ಪಡೆಯಲು ಏಕೆ ಮುಂದಾಗಲಿಲ್ಲಎಂದು ಧನಂಜಯ ಪದ್ಮನಾಭಚಾರ್ ಅವರು ಪ್ರಶ್ನಿಸಿದ್ದಾರೆ.

 

‘ನೀವು ನೋಟಿಸ್ ಜಾರಿಗೊಳಿಸಿದ್ದೀರಿ. ಸಾರ್ವಜನಿಕರಿಗೆ ಇಂತಹ ನೋಟಿಸ್‌ಗಳನ್ನು ಜಾರಿಗೊಳಿಸುವ ಮೊದಲು, ನಗರಾಭಿವೃದ್ಧಿ ಇಲಾಖೆ ಮತ್ತು ಬಿಡಿಎ ನಡುವೆ ಸಮನ್ವಯವೇ ಇಲ್ಲ. ಉಪಮುಖ್ಯಮಂತ್ರಿಯವರೊಂದಿಗೆ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ನೋಂದಣಿ ಕುರಿತ ಮಾರ್ಗಸೂಚಿಗಳ ಬಗ್ಗೆ ಚರ್ಚಿಸಿ. ಸರ್ಕಾರದಿಂದ ಸ್ಪಷ್ಟತೆ ಬಂದ ನಂತರವೇ ಮನೆ ಖರೀದಿದಾರರಿಗೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ರಚಿಸುವಂತೆ ಸೂಚಿಸಿ. ಇಲ್ಲದಿದ್ದರೆ ಇದು ಒಂದು ಹಾಸ್ಯಾಸ್ಪದ ಪರಿಸ್ಥಿತಿಯಂತೆ ಕಾಣುತ್ತದೆ,’ ಎನ್ನುತ್ತಾರೆ ಧನಂಜಯ ಪದ್ಮನಾಭಚಾರ್.

 

 

ರಾಜ್ಯದ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ಲಕ್ಷಾಂತರ ನಿವಾಸಿಗಳು ಮತ್ತು ಮಾಲೀಕರ ಹಿತಾಸಕ್ತಿಗಳನ್ನು ರಕ್ಷಿಸಲು, ರಾಜ್ಯ ಸರ್ಕಾರವು ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ 2025 ಅನ್ನು ಜಾರಿಗೆ ತರಲು ಯೋಜಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಚೆಗಷ್ಟೇ ಹೇಳಿಕೆ ನೀಡಿದ್ದರು.

 

 

ಬೆಂಗಳೂರು ಅಪಾರ್ಟ್‌ಮೆಂಟ್ಸ್ ಫೆಡರೇಷನ್ ಸದಸ್ಯರು ಹಾಗೂ ಅಪಾರ್ಟ್‌ಮೆಂಟ್ ಮಾಲೀಕರೊಂದಿಗೆ ಶಿವಕುಮಾರ್ ಅವರು ಸಂವಾದ ನಡೆಸಿದ್ದಾರೆ. ಪ್ರಸ್ತಾವಿತ ವಿಧೇಯಕವನ್ನು ಅಂತಿಮಗೊಳಿಸುವ ಮೊದಲು ಎಲ್ಲಾ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿ, ಅವರ ಅಭಿಪ್ರಾಯಗಳನ್ನು ಮತ್ತು ಸಲಹೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದ್ದರು.

 

ಅಪಾರ್ಟ್‌ಮೆಂಟ್ ಮಾಲೀಕರ ಮಸೂದೆ

 

ಅಪಾರ್ಟ್‌ಮೆಂಟ್ ಮಾಲೀಕರ ಮಸೂದೆಯು (ಉದಾ: ಭಾರತದ ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯಿದೆ, 1972) ಪ್ರತ್ಯೇಕ ಅಪಾರ್ಟ್‌ಮೆಂಟ್‌ಗಳ ಮಾಲೀಕತ್ವ, ನಿರ್ವಹಣೆ ಮತ್ತು ವರ್ಗಾವಣೆಗೆ ಕಾನೂನು ಚೌಕಟ್ಟನ್ನು ಸೃಷ್ಟಿಸುವ ಒಂದು ರಾಜ್ಯ-ನಿರ್ದಿಷ್ಟ ಕಾನೂನಾಗಿದೆ. ಇದು ಅಪಾರ್ಟ್‌ಮೆಂಟ್‌ನ ಘಟಕಗಳನ್ನು ರಿಯಲ್ ಎಸ್ಟೇಟ್ ಆಸ್ತಿಯನ್ನಾಗಿ ಮಾಡುತ್ತದೆ.

 

ಇದು ವೈಯಕ್ತಿಕ ಅಪಾರ್ಟ್‌ಮೆಂಟ್‌ಗಳನ್ನು ಪರಭಾರೆ ಮತ್ತು ಉತ್ತರಾಧಿಕಾರ ಮಾಡಲು ಅನುಮತಿಸುತ್ತದೆ. “ಅಪಾರ್ಟ್‌ಮೆಂಟ್,” “ಸಾಮಾನ್ಯ ಪ್ರದೇಶಗಳು,” “ಘೋಷಣೆ,” ಮತ್ತು “ಸಂಘ” ದಂತಹ ಪ್ರಮುಖ ಪದಗಳಿಗೆ ಸ್ಪಷ್ಟ ವ್ಯಾಖ್ಯಾನಗಳನ್ನು ನೀಡುತ್ತದೆ. ಲಿಫ್ಟ್‌ಗಳು, ಈಜುಕೊಳಗಳು, ಉದ್ಯಾನವನಗಳಂತಹ ಹಂಚಿಕೆಯ ಸೌಲಭ್ಯಗಳ ನಿರ್ವಹಣೆ ಮತ್ತು ಪಾಲನೆಯನ್ನು ನಿಯಂತ್ರಿಸಲಿದೆ.

 

ಪ್ರಸ್ತಾವಿತ ಹೊಸ ಮಸೂದೆಯ ಪ್ರಮುಖ ಬೇಡಿಕೆಗಳು

 

ಸಾರ್ವಜನಿಕ ಸಮಾಲೋಚನೆಯಲ್ಲಿ ಅಪಾರ್ಟ್‌ಮೆಂಟ್ ನಿವಾಸಿಗಳು ಮತ್ತು ಸಂಘಟನೆಗಳು ಸರ್ಕಾರಕ್ಕೆ ಈ ಕೆಳಗಿನ ಪ್ರಮುಖ ಬೇಡಿಕೆಗಳನ್ನು ಸಲ್ಲಿಸಿದ್ದವು. ನಿವಾಸಿಗಳ ಕಲ್ಯಾಣ ಸಂಘಟನೆಗಳ ರಚನೆಯಲ್ಲಿ ಸರ್ಕಾರದ ನೇರ ಹಸ್ತಕ್ಷೇಪ ಇರಬಾರದು. ಬಿಲ್ಡರ್‌ಗಳು ನಿಗದಿತ ಗಡುವಿನೊಳಗೆ ಭೂಮಿ ಮತ್ತು ಸಾಮಾನ್ಯ ಪ್ರದೇಶಗಳನ್ನು ಮಾಲೀಕರ ಸಂಘಗಳಿಗೆ ಹಸ್ತಾಂತರಿಸಲು ಗಡುವು ನಿಗದಿಪಡಿಸಬೇಕು.

 

ನ್ಯಾಯಾಲಯಗಳ ಮೇಲಿನ ಹೊರೆ ಕಡಿಮೆ ಮಾಡಲು, ಸಂಘರ್ಷಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಲು ಸಮರ್ಥ ಪ್ರಾಧಿಕಾರವನ್ನು ಸ್ಥಾಪಿಸಬೇಕು. ಹೊಸ ಕಾಯಿದೆಯು ಸಾಕುಪ್ರಾಣಿಗಳು, ಸಾಮಾನ್ಯ ಪ್ರದೇಶಗಳ ಬಳಕೆ ಮುಂತಾದ “ನಿಯಮಗಳನ್ನು ರೂಪಿಸದ ವಿಷಯ” ಮೇಲೆ ಕೇಂದ್ರೀಕರಿಸಬೇಕು ಎಂದು ಬೇಡಿಕೆ ಮುಂದಿರಿಸಿದ್ದರು.

 

ಪ್ರಸ್ತಾವಿತ ಮಸೂದೆಯಲ್ಲಿನ ಪ್ರಮುಖ ಅಂಶಗಳೇನು?

 

ಎಂಟು ಅಥವಾ ಅದಕ್ಕಿಂತ ಹೆಚ್ಚಿನ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿರುವ ಯೋಜನೆಗಳಿಗೆ ಈ ಮಸೂದೆ ಅನ್ವಯಿಸುತ್ತದೆ. ಸಂಘಗಳ ನೋಂದಣಿ, ಉಪ-ಕಾನೂನುಗಳ ಅನುಮೋದನೆ ಮತ್ತು ಮೇಲ್ವಿಚಾರಣೆಯನ್ನು ನಗರಾಭಿವೃದ್ಧಿ ಇಲಾಖೆಯು ನಿರ್ವಹಿಸುತ್ತದೆ. ಇದು ಈ ಹಿಂದೆ ಇದ್ದ ಅಧಿಕಾರ ವ್ಯಾಪ್ತಿಯ ಗೊಂದಲಗಳನ್ನು ನಿವಾರಿಸುತ್ತದೆ.

 

ನಿರ್ವಹಣಾ ಶುಲ್ಕಗಳನ್ನು ಪ್ರತಿ ಅಪಾರ್ಟ್‌ಮೆಂಟ್‌ನ ಸೂಪರ್ ಬಿಲ್ಟ್-ಅಪ್ ಏರಿಯಾಗೆ ಅನುಗುಣವಾಗಿ ವಿಧಿಸಲಾಗುತ್ತದೆ. ಪ್ರಸ್ತುತ ಕಾಯಿದೆಯಡಿಯಲ್ಲಿ ರಚನೆಯಾಗಿರುವ ಅಸ್ತಿತ್ವದಲ್ಲಿರುವ ಸಂಘಗಳನ್ನು ಹೊಸ ಮಸೂದೆಯಡಿಯಲ್ಲಿ ಹಂಚಿಕೆದಾರರ ಸಂಘಗಳೆಂದು ಪರಿಗಣಿಸಲಾಗುತ್ತದೆ.

 

ಶೇ. 50 ಕ್ಕಿಂತ ಹೆಚ್ಚು ಬುಕಿಂಗ್‌ಗಳು ಆದ ಮೂರು ತಿಂಗಳೊಳಗೆ ಕಡ್ಡಾಯವಾಗಿ ಸಂಘಗಳನ್ನು ರಚಿಸಬೇಕು. ಕ್ಲಬ್‌ಹೌಸ್, ಈಜುಕೊಳ, ಅಂಗಡಿಗಳಂತಹ ವಾಣಿಜ್ಯ ಸೌಲಭ್ಯಗಳನ್ನು ಬಳಸಿದರೆ, ಸಾಮಾನ್ಯ ನಿರ್ವಹಣಾ ಶುಲ್ಕದ ಜೊತೆಗೆ ಪ್ರತ್ಯೇಕ ಬಳಕೆ ಶುಲ್ಕಗಳನ್ನು ವಿಧಿಸಲು ಅನುಮತಿ ನೀಡಲಾಗುತ್ತದೆ. ಮಸೂದೆ ಜಾರಿಯಾದ 12 ತಿಂಗಳೊಳಗೆ ಸಾಮಾನ್ಯ ಪ್ರದೇಶಗಳಿಗಾಗಿ ಪ್ರತ್ಯೇಕ ದಸ್ತಾವೇಜುಗಳನ್ನು ಪೂರ್ಣಗೊಳಿಸಬೇಕು.

 

ಅಪಾರ್ಟ್‌ಮೆಂಟ್ ಮಾಲೀಕರ ಶೇ. 75 ರಷ್ಟು ಅನುಮೋದನೆಯೊಂದಿಗೆ ಪುನರಾಭಿವೃದ್ಧಿಗೆ ಅವಕಾಶ ಕಲ್ಪಿಸಲಾಗಿದೆ. ಸಾಮಾನ್ಯ ಪ್ರದೇಶಗಳು ಮತ್ತು ಸೌಲಭ್ಯಗಳ ಕೆಳಗಿರುವ ಭೂಮಿಯನ್ನು ಘಟಕದ ಪ್ರದೇಶಕ್ಕೆ ಅನುಗುಣವಾಗಿ ಅಪಾರ್ಟ್‌ಮೆಂಟ್ ಮಾಲೀಕರಿಗೆ ಅವಿಭಜಿತ ಪಾಲಾಗಿ ವರ್ಗಾಯಿಸಲಾಗುತ್ತದೆ ಎಂದು ಹೇಳಿದೆ.

 

ಮಾಲೀಕರ ಪ್ರಯೋಜನಗಳು

 

ಮಾಲೀಕತ್ವವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿ, ವಿವಾದಗಳಿಂದ ಆಸ್ತಿಯನ್ನು ರಕ್ಷಿಸುತ್ತದೆ. ಅಪಾರ್ಟ್‌ಮೆಂಟ್ ಮಾಲೀಕರ ಸಂಘವು ನಿರ್ವಹಣೆ, ಹಣಕಾಸು ಮತ್ತು ಭದ್ರತಾ ಸೇವೆಗಳನ್ನು ಸಮರ್ಥವಾಗಿ ನಿರ್ವಹಿಸುತ್ತದೆ. ಸಂಘರ್ಷಗಳನ್ನು ಪರಿಹರಿಸಲು ಸ್ಪಷ್ಟವಾದ ಕಾರ್ಯವಿಧಾನಗಳನ್ನು ಒದಗಿಸಲಿದೆ.

 

ಸೌಲಭ್ಯಗಳು ಸರಿಯಾಗಿ ನಿರ್ವಹಣೆಯಾಗುವುದನ್ನು ಖಚಿತಪಡಿಸಿ ಉತ್ತಮ ಜೀವನ ವಾತಾವರಣವನ್ನು ಸೃಷ್ಟಿಸುತ್ತದೆ. ಉತ್ತಮ ನಿರ್ವಹಣೆ ಮತ್ತು ಆಡಳಿತವು ಆಸ್ತಿಯ ಮೌಲ್ಯವನ್ನು ಹೆಚ್ಚಿಸುತ್ತದೆ. ಹಣಕಾಸಿನ ವರದಿಗಳು ನಿರ್ವಹಣಾ ಶುಲ್ಕಗಳ ಬಳಕೆಯಲ್ಲಿ ಹೊಣೆಗಾರಿಕೆಯನ್ನು ಖಚಿತಪಡಿಸಲಿದೆ.

Your generous support will help us remain independent and work without fear.

Latest News

Related Posts