ನ್ಯೂಸ್ 18, ಏಷ್ಯಾನೆಟ್ ಸುವರ್ಣ ನ್ಯೂಸ್‌ ಸೇರಿ ಟಿ ವಿ ವಾಹಿನಿಗಳಿಗೂ ಕೋಟ್ಯಂತರ ಮೊತ್ತದ ಜಾಹೀರಾತು

ಬೆಂಗಳೂರು : ಅಂಬಾನಿ ಒಡೆತನಕ್ಕೆ ಸೇರಿದ ರಿಲಯೆನ್ಸ್ ಸಮೂಹದ  ʻನ್ಯೂಸ್‌ 18 ಕನ್ನಡʼ  ಕೇರಳ ಬಿಜೆಪಿ ಘಟಕದ ಅಧ್ಯಕ್ಷ, ಮಾಜಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ನೇತೃತ್ವದ ಏಷ್ಯಾನೆಟ್‌ನ ʻಸುವರ್ಣ ನ್ಯೂಸ್‌ʼ ಸುದ್ದಿವಾಹಿನಿಗೂ ರಾಜ್ಯ ಕಾಂಗ್ರೆಸ್ ಸರ್ಕಾರವು ಕೋಟ್ಯಂತರ ರು. ಮೊತ್ತದ  ಜಾಹೀರಾತು ನೀಡಿದೆ.

 

ʻನ್ಯಾಷನಲ್‌ ಹೆರಾಲ್ಡ್‌ʼ ಪತ್ರಿಕೆಗೆ ಕೋಟ್ಯಂತರ ರು. ಜಾಹೀರಾತು ನೀಡಿರುವುದನ್ನು ಪ್ರತಿಪಕ್ಷ ಬಿಜೆಪಿಯು ರಾಜ್ಯ ಕಾಂಗ್ರೆಸ್‌ ಸರ್ಕಾರದ ಮೇಲೆ ಮುಗಿಬಿದ್ದಿದೆ. ಇದರ ಬೆನ್ನಲ್ಲೇ ಅಂಬಾನಿ ಒಡೆತನಕ್ಕೆ ಸೇರಿದ ರಿಲಯೆನ್ಸ್ , ರಾಜೀವ್ ಚಂದ್ರಶೇಖರ್ ನೇತೃತ್ವದ ಏಷ್ಯಾನೆಟ್‌ನ ʻಸುವರ್ಣ ನ್ಯೂಸ್‌ʼ ಸುದ್ದಿವಾಹಿನಿಗೆ ನೀಡಿದ್ದ ಜಾಹೀರಾತಿನ ಮೊತ್ತವೂ ಮುನ್ನೆಲೆಗೆ ಬಂದಿದೆ.

 

ಆರ್ಥಿಕ ಸಂಕಷ್ಟದಿಂದಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು  ಎದುಸಿರು ಬಿಡುತ್ತಿರುವ ಕಾಂಗ್ರೆಸ್‌  ಸರ್ಕಾರ, ಕಳೆದ ಎರಡು ವರ್ಷಗಳಲ್ಲಿ  ಪ್ರಚಾರಕ್ಕಾಗಿ ದಿನಪತ್ರಿಕೆಗಳಿಗಿಂತ ಮೂರುಪಟ್ಟು ಹೆಚ್ಚು ಹಣವನ್ನು ಟಿವಿ ವಾಹಿನಿಗಳಿಗೆ ನೀಡಿದೆ. ಒಟ್ಟಾರೆ 62 ಕೋಟಿ ರು. ಗಳಿಗೂ ಹೆಚ್ಚು ಹಣವನ್ನು ಟಿವಿ ಜಾಹೀರಾತುಗಳಿಗೆ ಖರ್ಚು ಮಾಡಲಾಗಿದೆ.

 

ಹಲವು ವರ್ಷಗಳಿಂದ  ಸುದ್ದಿವಾಹಿನಿಗಳ ಪೈಕಿ, ಟಿಆರ್‌ಪಿಯಲ್ಲಿ  ನಂ.1 ಸ್ಥಾನ ಪಡೆದುಕೊಂಡಿರುವ ʻಟಿವಿ-9ʼ ವಾಹಿನಿಗೆ ಅತಿ ಹೆಚ್ಚು ಹಣ ಸಂದಾಯವಾಗಿದೆ. 2023-24 ಮತ್ತು 2024-25ನೇ ಸಾಲಿನಲ್ಲಿ ಒಟ್ಟು 13.88 ಕೋಟಿ ರು. (13,88,56,737 ರು.) ಗಳನ್ನು ಈ ಸಂಸ್ಥೆಗೆ ಪ್ರಚಾರಕ್ಕೆಂದು ನೀಡಲಾಗಿದೆ. ಎರಡನೇ ಸ್ಥಾನದಲ್ಲಿ, ಕಾಂಗ್ರೆಸ್‌ ಸರ್ಕಾರವನ್ನು ಟೀಕಿಸುತ್ತಲೇ ಬಂದಿರುವ ಹೆಸರಾಂತ ಪತ್ರಕರ್ತ ರಂಗನಾಥ್‌ ನೇತೃತ್ವದ ʻಪಬ್ಲಿಕ್‌ ಟಿವಿʼ ಇದೆ. ಈ ಸಂಸ್ಥೆಗೆ  ಈ ಎರಡು ವರ್ಷಗಳಲ್ಲಿ ಒಟ್ಟು 7.17 ಕೋಟಿ ರು. (7,17,18,335 ರು.) ನೀಡಲಾಗಿದೆ.

 

 

ಮೂರನೇ ಸ್ಥಾನದಲ್ಲಿ ಅಂಬಾನಿ ಒಡೆತನದ  ರಿಲಿಯನ್ಸ್‌ ಗ್ರೂಪ್‌ಗೆ ಸೇರಿದ ʻನ್ಯೂಸ್‌ 18ʼ  ವಾಹಿನಿಗೆ ಒಟ್ಟು  5.16 ಕೋಟಿ ರು. (5,16,12,020 ರು.) ನೀಡಲಾಗಿದೆ. ಇದರಲ್ಲಿ 2.78 ಕೋಟಿ ರು.ಗಳ ಜಾಹೀರಾತಾದರೆ, ಬೇರೆ ಬೇರೆ ಕಾರ್ಯಕ್ರಮಗಳಿಗಾಗಿ 2.37 ಕೋಟಿ ರು.ಗಳನ್ನು ಸರ್ಕಾರ ನೇರವಾಗಿ ನೀಡಿದೆ. ಪತ್ರಕರ್ತರ ಒಡೆತನದ ʻನ್ಯೂಸ್‌ ಫಸ್ಟ್‌ʼ ಗೆ 5.01 ಕೋಟಿ ರು. (5,01,59,190 ರು. ) ನೀಡಲಾಗಿದೆ.

 

 

ರಾಜೀವ್‌ ಚಂದ್ರಶೇಖರ್‌ ನೇತೃತ್ವದ ಏಷ್ಯಾನೆಟ್‌ನ ʻಸುವರ್ಣ ನ್ಯೂಸ್‌ʼ ಐದನೇ ಸ್ಥಾನ ಪಡೆದುಕೊಂಡಿದೆ.   ಈ ಎರಡು ವರ್ಷಗಳಲ್ಲಿ ಒಟ್ಟು 4.92 ಕೋಟಿ ರು.ಗಳನ್ನು (4,92,52,310 ರು.) ಸರ್ಕಾರ ನೀಡಿದೆ.

 

 

ಇದರಲ್ಲಿ, 2.67 ಕೋಟಿ ರು.ಗಳನ್ನು ಜಾಹೀರಾತಿಗೆಂದು ನೀಡಲಾಗಿದ್ದರೆ, ವಿವಿಧ ಕಾರ್ಯಕ್ರಮಗಳಿಗಾಗಿ 2.25 ಕೋಟಿ ರು.ಗಳನ್ನು ನೇರವಾಗಿ ಸಂಸ್ಥೆಗೆ ನೀಡಲಾಗಿದೆ.

 

 

ಈ ಎರಡು ವರ್ಷಗಳಲ್ಲಿ ಪವರ್‌ ಟಿವಿಗೆ 1.98 ಕೋಟಿ ರು. (1,98,09,840 ರು.) ಹಾಗೂ ಕಾಂಗ್ರೆಸ್‌ ಸರ್ಕಾರದ ಪರವಾಗಿದೆ ಎಂದೇ ಹೇಳಲಾಗುತ್ತಿರುವ ʻಟಿವಿ- 5ʼಗೆ 1.76 ಕೋಟಿ ರು.ಗಳ (1,76,00,880ರು.) ಜಾಹೀರಾತು ನೀಡಲಾಗಿದೆ. ಒಟ್ಟು 21 ಸುದ್ದಿವಾಹಿನಿಗಳಿಗೆ  ಸರ್ಕಾರ ಜಾಹೀರಾತು ನೀಡಿದೆ.

 

 

ವಿಶೇಷವೆಂದರೆ,  ರಾಜ್ಯದ ಏಳು ಮನರಂಜನಾ ವಾಹಿನಿಗಳಿಗೆ 2023-24ನೇ ಸಾಲಿನಲ್ಲಿ ಮಾತ್ರ ರಾಜ್ಯ ಸರ್ಕಾರ ಜಾಹೀರಾತು ನೀಡಿತ್ತು. 2024-25ನೇ ಸಾಲಿನಲ್ಲಿ ಒಂದು ರುಪಾಯಿಯ ಜಾಹೀರಾತನ್ನೂ ಈ ವಾಹಿನಿಗಳಿಗೆ ನೀಡಿಲ್ಲ. ʻಕಲರ್ಸ್‌ ಕನ್ನಡʼ 50 ಲಕ್ಷ ರು.ಗಳ ಜಾಹೀರಾತು ಪಡೆದುಕೊಂಡಿದ್ದರೆ, ಝೀ ಕನ್ನಡ 47 ಲಕ್ಷ ರು.ಗಳ ಜಾಹೀರಾತು ಪಡೆದಿತ್ತು. ಉದಯ ಟಿವಿಗೆ 43 ಲಕ್ಷ ರು.ಗಳ ಜಾಹೀರಾತು ನೀಡಲಾಗಿತ್ತು.

 

ಸದ್ಯ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿರುವ ʻನ್ಯಾಷನಲ್‌ ಹೆರಾಲ್ಡ್‌ʼ ಪತ್ರಿಕೆಗೆ ಕೋಟ್ಯಂತರ ರು. ಜಾಹೀರಾತು ನೀಡಿರುವ ಕುರಿತು ʻದಿ ಫೈಲ್‌ʼ ಈ ಹಿಂದೆ ಸರಣಿ ವರದಿಗಳನ್ನು ಪ್ರಕಟಿಸಿತ್ತು.

 

ಜಾಹೀರಾತು, ಪ್ರಚಾರ; ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಗೆ 2.89 ಕೋಟಿ, ರಾಷ್ಟ್ರಮಟ್ಟದ ಪತ್ರಿಕೆಗಳಿಗೆ 10.99 ಕೋಟಿ ವೆಚ್ಚ

 

ರಾಜ್ಯದ ವಿವಿಧ ಭಾಗಗಳಲ್ಲಿರುವ ಪ್ರಾದೇಶಿಕ ಪತ್ರಿಕೆಗಳಿಗೆ ಕಳೆದ ಎರಡು ವರ್ಷಗಳಲ್ಲಿ ಜಾಹೀರಾತು ನೀಡಲು ಸರ್ಕಾರ 18.65 ಕೋಟಿ ರು. (18,65,57,529 ರು.) ಖರ್ಚು ಮಾಡಿದೆ. 2023-24ನೇ ಸಾಲಿನಲ್ಲಿ 95 ಪ್ರಾದೇಶಿಕ ಪತ್ರಿಕೆಗಳಿಗೆ ಜಾಹೀರಾತು ನೀಡಲಾಗಿದ್ದರೆ, 2024-25ನೇ ಸಾಲಿನಲ್ಲಿ 119 ಪತ್ರಿಕೆಗಳಿಗೆ ಜಾಹೀರಾತು ನೀಡಿದೆ.

 

2025ರ ಡಿಸೆಂಬರ್‌ನಲ್ಲಿ ನಡೆದ ವಿಧಾನ ಮಂಡಲದ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿರುವ ನಿರಾಣಿ ಹಣಮಂತ ರುದ್ರಪ್ಪ ಅವರು ಕೇಳಿದ್ದ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ  ನೀಡಿರುವ ಉತ್ತರದಿಂದ ಈ ಮಾಹಿತಿ ಬಹಿರಂಗಗೊಂಡಿದೆ.

 

ರಾಜ್ಯದಲ್ಲಿ ಪ್ರಸಾರವಾಗುತ್ತಿರುವ ಒಟ್ಟು 21 ಟಿವಿಗಳಿಗೆ  ಜಾಹೀರಾತು ನೀಡಲು  2023-24ನೇ ಸಾಲಿನಲ್ಲಿ 20.22 ಕೋಟಿ ರು. (20,22,73,411 ರು.) ನೀಡಲಾಗಿದ್ದರೆ, 2024-25ನೇ ಸಾಲಿನಲ್ಲಿ  ಕೇವಲ 14 ಟಿವಿಗಳಿಗೆ 16.40 ಕೋಟಿ ರು. (16,10,35,512ರು.) ಜಾಹೀರಾತು ನೀಡಲಾಗಿದೆ. ಎರಡು ವರ್ಷಗಳಲ್ಲಿ ಒಟ್ಟು 36.63 ಕೋಟಿ.ರು.ಗಳ ಜಾಹೀರಾತು ನೀಡಲಾಗಿದೆ.

 

ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ʻ ಪ್ರಸಾರ ಭಾರತಿʼ ಒಡೆತನದ ʻದೂರದರ್ಶನʼ ಕ್ಕೆ ರಾಜ್ಯ ಸರ್ಕಾರ ಜಾಹೀರಾತು ನೀಡಿರುವುದು, ಬೇರೆಲ್ಲಾ ಟಿವಿ ವಾಹಿನಿಗಳಿಗೆ ಹೋಲಿಸಿದರೆ ಕಡಿಮೆ. ಕಳೆದ ಎರಡು ವರ್ಷದಲ್ಲಿ ಒಟ್ಟು 2.16 ಕೋಟಿ ರು.ಗಳ ಜಾಹೀರಾತು ನೀಡಲಾಗಿದೆ. 2023-24ನೇ ಸಾಲಿನಲ್ಲಿ 3,44,088 ರು.ಗಳ ಜಾಹೀರಾತು ನೀಡಿದ್ದರೆ, 2024-25ನೇ ಸಾಲಿನಲ್ಲಿ 2,12,61,240 ರು.ಗಳ ಜಾಹೀರಾತು ನೀಡಲಾಗಿದೆ ಎಂಬುದು ಈ ಉತ್ತರದಿಂದ ಗೊತ್ತಾಗಿದೆ.

 

ಪ್ರಾಯೋಜಿತ ಕಾರ್ಯಕ್ರಮಗಳಿಗೆ ಖರ್ಚು

 

ಕೇವಲ ಜಾಹೀರಾತು ಮಾತ್ರವಲ್ಲದೆ, ಸರ್ಕಾರದ ಪರವಾಗಿ ತುತ್ತೂರಿ ಊದುವ ಕಾರ್ಯಕ್ರಮಗಳಿಗೂ ಹಣ ನೀಡಲಾಗಿದೆ. 2023-24ನೇ ಸಾಲಿನಲ್ಲಿ ಒಟ್ಟು 14 ಸುದ್ದಿವಾಹಿನಿಗಳಿಗೆ ಒಟ್ಟು 15.00 ಕೋಟಿ ರು.ಗಳನ್ನು (15,00,11,997 ರು.) ಇದಕ್ಕಾಗಿ ನೀಡಲಾಗಿದ್ದರೆ 2024-25ನೇ ಸಾಲಿನಲ್ಲಿ11 ಸುದ್ದಿವಾಹಿನಿಗಳಿಗೆ ಒಟ್ಟು 11.32 ಕೋಟಿ ರು.ಗಳನ್ನು (11,32,13,900 ರು.) ನೀಡಲಾಗಿದೆ. ಎರಡು ವರ್ಷದಲ್ಲಿ ಒಟ್ಟಾರೆ 26.32 ಕೋಟಿ ರು. ಸುರಿಯಲಾಗಿದೆ. ಈ ಹಣವನ್ನು ವಿಶೇಷ ಮತ್ತು ಪ್ರಾಯೋಜಿತ ಕಾರ್ಯಕ್ರಮ, ವರದಿಗಳಿಗಾಗಿ ನೇರವಾಗಿ ಸಂಸ್ಥೆಗೇ ಪಾವತಿಸಲಾಗಿದೆ ಎಂದು ಮುಖ್ಯಮಂತ್ರಿಗಳು ನೀಡಿದ ಈ ಉತ್ತರದಿಂದ ಗೊತ್ತಾಗಿದೆ.

 

ʻಟಿವಿ 9ʼ ಸಂಸ್ಥೆಗೆ 2023-24ನೇ ಸಾಲಿನಲ್ಲಿ 6.29 ಕೋಟಿ ರು.ಗಳನ್ನು ( 6,29,83,681 ರು.) ನೀಡಲಾಗಿದ್ದರೆ, 2024-25ನೇ ಸಾಲಿನಲ್ಲಿ ಇದಕ್ಕಿಂತ ಹೆಚ್ಚು ಅಂದರೆ 7.58 ಕೋಟಿ ರು.ಗಳನ್ನು ( 7,58,73,056 ರು.) ನೀಡಲಾಗಿದೆ. ಪತ್ರಕರ್ತ ರಂಗನಾಥ್‌ ನೇತೃತ್ವದ ʻಪಬ್ಲಿಕ್‌ ಟಿವಿʼ 2023-24ನೇ ಸಾಲಿನಲ್ಲಿ 3.78 ಕೋಟಿ ರು.ಗಳ ( 3,78,62,955 ರು.) ಸರ್ಕಾರಿ ಜಾಹೀರಾತು ಪಡೆದುಕೊಂಡಿದ್ದರೆ, 2024-25ನೇ ಸಾಲಿನಲ್ಲಿ 3.38 ಕೋಟಿ ರು.ಗಳ (3,38,55, 380 ರು.) ಗಳ ಜಾಹೀರಾತು ಪಡೆದುಕೊಂಡಿದೆ.

 

ಮಾಜಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಒಡೆತನದ ʻಸುವರ್ಣ ನ್ಯೂಸ್‌ʼಗೆ ಜಾಹೀರಾತಿಗಾಗಿ 2023-24ನೇ ಸಾಲಿನಲ್ಲಿ 2.58 ಕೋಟಿ (2,58,61,588) ರು. ಹಾಗೂ 2024-25ನೇ ಸಾಲಿನಲ್ಲಿ 2.33 ಕೋಟಿ ರು.ಗಳನ್ನು ( 2,33,90,722 ರು.) ರಾಜ್ಯ ಸರ್ಕಾರ ಪಾವತಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಉತ್ತರದಲ್ಲಿ ತಿಳಿಸಿದ್ದಾರೆ.

 

ನ್ಯಾಷನಲ್‌ ಹೆರಾಲ್ಡ್‌, ಇತರೆ ಪತ್ರಿಕೆ, ಟಿವಿಗಳಿಗೆ ಜಾಹೀರಾತು, ಪ್ರಚಾರ; 3 ವರ್ಷದಲ್ಲಿ 1,076.27 ಕೋಟಿ ವೆಚ್ಚ!

 

ಸಂಜೆವಾಣಿಗೆ ಹೆಚ್ಚಿನ ಜಾಹೀರಾತು

 

2023-24 ಮತ್ತು 2024-25ನೇ ಸಾಲಿನಲ್ಲಿ ಒಟ್ಟಾರೆ ಪ್ರಾದೇಶಿಕ ಪತ್ರಿಕೆಗಳ ಪೈಕಿ ಬೆಂಗಳೂರಿನ ʻಸಂಜೆವಾಣಿʼ ಪತ್ರಿಕೆಗೆ ಅತಿ ಹೆಚ್ಚಿನ ಮೊತ್ತದ ಜಾಹೀರಾತು ನೀಡಲಾಗಿದೆ. ಎರಡು ವರ್ಷಗಳಲ್ಲಿ ಒಟ್ಟು 55.31 ಲಕ್ಷ ರು.ಗಳ (55,31,784 ರು. ಜಾಹೀರಾತು ನೀಡಲಾಗಿದೆ. ಮೈಸೂರಿನ ಜನಪ್ರಿಯ ಪ್ರಾದೇಶಿಕ ಪತ್ರಿಕೆ ʻಆಂದೋಲನʼ ಕ್ಕೆ ಎರಡು ವರ್ಷಗಳಲ್ಲಿ ಒಟ್ಟು 54.76 ಲಕ್ಷ ರು.ಗಳ (54,76,110 ರು.) ಜಾಹೀರಾತು ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಪರಿಷತ್ತಿಗೆ ಲಿಖಿತವಾಗಿ ತಿಳಿಸಿದ್ದಾರೆ.

 

 

ತುಮಕೂರಿನ ʻಪ್ರಜಾಪ್ರಗತಿʼ ಪತ್ರಿಕೆಗೆ 2023-24ನೇ ಸಾಲೊಂದರಲ್ಲಿಯೇ 45.78 ಲಕ್ಷ ರು.ಗಳ (45,78,100 ರು.) ಜಾಹೀರಾತು ನೀಡಲಾಗಿತ್ತು. ಆದರೆ 2024-25ನೇ ಸಾಲಿನಲ್ಲಿ ಈ ಪತ್ರಿಕೆಗೆ ಎಷ್ಟು ಜಾಹೀರಾತು ನೀಡಲಾಗಿದೆ ಎಂಬ ಮಾಹಿತಿಯನ್ನು ಮುಖ್ಯಮಂತ್ರಿಗಳು ಈ ಉತ್ತರದಲ್ಲಿ ತಿಳಿಸಿಲ್ಲ. ಅಲ್ಲದೆ, ಹಾಸನದ ʻಜನಮಿತ್ರʼ, ಕಾರವಾರದ ʻಕರಾವಳಿ ಮುಂಜಾವುʼ, ಮೈಸೂರಿನ ʻಪ್ರತಿನಿಧಿʼ‌ ಸೇರಿದಂತೆ ಏಳು ಪತ್ರಿಕೆಗಳಿಗೆ 2024-25ನೇ ಸಾಲಿನಲ್ಲಿ ಎಷ್ಟು ಜಾಹೀರಾತು ನೀಡಲಾಗಿದೆ ಎಂಬ ಮಾಹಿತಿಯನ್ನು ಮುಖ್ಯಮಂತ್ರಿಗಳು ಒದಗಿಸಿಲ್ಲ.

 

ಪ್ರಾದೇಶಿಕ ಪತ್ರಿಕೆಗಳಿಗೆ 2023-24ನೇ ಸಾಲಿನಲ್ಲಿ ಸರ್ಕಾರ ಒಟ್ಟು 12.55 ಕೋಟಿ ರು.ಗಳ (12,55,10,2291 ರು.) ಜಾಹೀರಾತು ನೀಡಿತ್ತು. ಆದರೆ 2024-25ನೇ ಸಾಲಿನಲ್ಲಿ ಈ ಮೊತ್ತ ಅರ್ಧದಷ್ಟು ಕಡಿಮೆಯಾಗಿತ್ತು. 2024-25ನೇ ಸಾಲಿನಲ್ಲಿ 122 ಪತ್ರಿಕೆಗಳಿಗೆ ಜಾಹೀರಾತು ನೀಡಲಾಗಿದೆಯಾದರೂ ಅವುಗಳ ಒಟ್ಟು ಮೊತ್ತ 6.10 ಕೋಟಿ ರು. (6,10,47,300 ರು.) ಮಾತ್ರ.

 

 

2023-24ನೇ ಸಾಲಿನಲ್ಲಿ ಮೈಸೂರಿನ ʻಮೈಸೂರು ಮಿತ್ರʼ ಕ್ಕೆ 14.11 ಲಕ್ಷ ರು.ಗಳ, ರಾಯಚೂರು ಮೂಲದ ʻಸುದ್ದಿ ಮೂಲʼ ಪತ್ರಿಕೆಗೆ 18.42 ಲಕ್ಷ ರು.ಗಳ, ಬೆಳಗಾವಿಯ ʻಲೋಕದರ್ಶನʼ ಪತ್ರಿಕೆಗೆ 20.75 ಲಕ್ಷ ರು.ಗಳ ಮತ್ತು ʻಕನ್ನಡಮ್ಮʼ ಪತ್ರಿಕೆಗೆ 23.90 ಲಕ್ಷ ರು.ಗಳ, ಕೋಲಾರದ ʻಕೋಲಾರವಾಣಿʼ ಪತ್ರಿಕೆಗೆ 18.26 ಲಕ್ಷ ರು.ಗಳ, ಕಲಬುರಗಿಯ ʻಕ್ರಾಂತಿʼ ಪತ್ರಿಕೆಗೆ 21.58 ಲಕ್ಷ ರು.ಗಳ,

 

ಮಂಗಳೂರಿನ ʻಕರಾವಳಿ ಅಲೆʼಗೆ 19.92 ಲಕ್ಷ ರು.ಗಳ ಹಾಗೂ ʻಕನ್ನಡ ಜನ ಅಂತರಂಗʼ ಪತ್ರಿಕೆಗೆ 12.32 ಲಕ್ಷ ರು.ಗಳ ಮತ್ತು ಬೆಂಗಳೂರಿನ ʻಈ ಸಂಜೆʼ ಪತ್ರಿಕೆಗೆ 26.05 ಲಕ್ಷ ರು.ಗಳ ಮತ್ತು ʻಇಂದು ಸಂಜೆʼ ಪತ್ರಿಕೆಗೆ 16.60 ಲಕ್ಷ ರು.ಗಳ ಜಾಹೀರಾತು ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ಈ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ.

 

 

2024- 25ನೇ ಸಾಲಿನಲ್ಲಿ ರಾಯಚೂರು ಮೂಲದ ʻಸುದ್ದಿ ಮೂಲʼ ಪತ್ರಿಕೆಗೆ 8.46 ಲಕ್ಷ ರು.ಗಳ, ಬೆಳಗಾವಿಯ ʻಲೋಕದರ್ಶನʼ ಪತ್ರಿಕೆಗೆ 4.98 ಲಕ್ಷ ರು.ಗಳ ಮತ್ತು ʻಕನ್ನಡಮ್ಮʼ ಪತ್ರಿಕೆಗೆ 5.95 ಲಕ್ಷ ರು.ಗಳ, ಕೋಲಾರದ ʻಕೋಲಾರವಾಣಿʼ ಪತ್ರಿಕೆಗೆ 4.98 ಲಕ್ಷ ರು.ಗಳ, ಕಲಬುರಗಿಯ ʻಕ್ರಾಂತಿʼ ಪತ್ರಿಕೆಗೆ 4.98 ಲಕ್ಷ ರು.ಗಳ,

 

 

ಮಂಗಳೂರಿನ ʻಕರಾವಳಿ ಅಲೆʼಗೆ 6.22 ಲಕ್ಷ ರು.ಗಳ ಹಾಗೂ ʻಕನ್ನಡ ಜನ ಅಂತರಂಗʼ ಪತ್ರಿಕೆಗೆ 3.92 ಲಕ್ಷ ರು.ಗಳ ಮತ್ತು ಬೆಂಗಳೂರಿನ ʻಈ ಸಂಜೆʼ ಪತ್ರಿಕೆಗೆ 10.60 ಲಕ್ಷ ರು.ಗಳ ಮತ್ತು ʻಇಂದು ಸಂಜೆʼ ಪತ್ರಿಕೆಗೆ 6.64 ಲಕ್ಷ ರು.ಗಳ ಜಾಹೀರಾತು ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ವಿಧಾನ ಪರಿಷತ್ತಿಗೆ ನೀಡಿದ ಈ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

 

ರಾಜ್ಯಮಟ್ಟದ ಪತ್ರಿಕೆಗಳ ಜಾಹೀರಾತಿಗೆ 24.99 ಕೋಟಿ ಖರ್ಚು; ವಿಜಯವಾಣಿ ಸಿಂಹಪಾಲು

 

ಟಿವಿಗಳಿಗೆ ಮಾತ್ರವಲ್ಲದೆ, ರಾಜ್ಯ ಸರ್ಕಾರ, ಕಳೆದ ಎರಡು ವರ್ಷಗಳಲ್ಲಿ  ರಾಜ್ಯಮಟ್ಟದ ದಿನ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಲು ಒಟ್ಟು 24.99 ಕೋಟಿ ರು. ಖರ್ಚು ಮಾಡಿದೆ. ಇದಲ್ಲದೆ, ಕೆಲವು ಪತ್ರಿಕಾ ಸಂಸ್ಥೆಗಳಿಗೆ ಹೆಚ್ಚುವರಿಯಾಗಿಯೂ ಹಣ ಪಾವತಿಸಲಾಗಿದೆ. ಉದ್ಯಮಿ, ಬಿಜೆಪಿಯ ನಾಯಕ ವಿಜಯ ಸಂಕೇಶ್ವರ ನೇತೃತ್ವದ ವಿಆರ್‌ಎಲ್‌ ಗ್ರೂಪ್‌ನ ʻವಿಜಯ ವಾಣಿʼ ಪತ್ರಿಕೆಗೆ 2023-24 ಮತ್ತು 2024-25ನೇ ಸಾಲಿನಲ್ಲಿ ಒಟ್ಟು 4.69 ಕೋಟಿ ರು.ಗಳ (4,69,70,580 ರು.) ಜಾಹೀರಾತು ನೀಡಲಾಗಿದೆ. ಈ ಕುರಿತೂ ʻದಿ ಫೈಲ್‌ʼ ವರದಿ ಮಾಡಿತ್ತು.

Your generous support will help us remain independent and work without fear.

Latest News

Related Posts