2,218 ಎಕರೆ ಜಮೀನು; ವರ್ಷವಾದರೂ ಭೂ ಸ್ವಾಧೀನದಿಂದ ಕೈಬಿಡದ ಸರ್ಕಾರ, ವಚನ ಭ್ರಷ್ಟವಾಯಿತೇ?

ಬೆಂಗಳೂರು;  ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ಹಲಕುರ್ಕಿ ಗ್ರಾಮದಲ್ಲಿ ಕೈಗಾರಿಕೆ ವಸಾಹತು ಸ್ಥಾಪನೆಗೆ 2,218 ಎಕರೆ 33 ಗುಂಟೆ ವಿಸ್ತೀರ್ಣದ ಜಮೀನುಗಳನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಹೊರತುಪಡಿಸಬೇಕು ಎಂದು  ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯು ವರ್ಷದ ಹಿಂದೆಯೇ  ಸರ್ಕಾರಕ್ಕೆ  ಪ್ರಸ್ತಾವ ಸಲ್ಲಿಸಿದ್ದರೂ ಸಹ ಈ ಪ್ರಸ್ತಾವವು ಸಚಿವ ಸಂಪುಟದ ಮುಂದೆ ಇದುವರೆಗೂ ಮಂಡನೆಯಾಗಿಲ್ಲ.

 

ಸಚಿವ ಸಂಪುಟದ ಮುಂದೆ ಮಂಡಿಸಬೇಕು ಎಂದು ಸಲ್ಲಿಕೆಯಾಗಿದ್ದ ಈ ಪ್ರಸ್ತಾವವನ್ನು 11 ತಿಂಗಳು ಕಳೆದರೂ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯು ಮಂಡಿಸಿಲ್ಲ. ಬದಲಿಗೆ 11 ತಿಂಗಳಿನಿಂದಲೂ ಪರಿಶೀಲನೆ ಹೆಸರಿನಲ್ಲಿ ಕಾಲಹರಣ ಮಾಡುತ್ತಲೇ ಬಂದಿದೆ.

 

ಈ ಕುರಿತು ಬೀಳಗಿ ಕ್ಷೇತ್ರದ ಶಾಸಕ ಜೆ ಟಿ ಪಾಟೀಲ್‌ ಅವರು ಬೆಳಗಾವಿಯಲ್ಲಿ ನಡೆಯುತ್ತಿರು ವಿಧಾನಸಭೆ ಅಧಿವೇಶನದಲ್ಲಿ  2025ರ ಡಿಸೆಂಬರ್‍‌ 12ರಂದು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಿರುವ ಸಚಿವ ಎಂ ಬಿ ಪಾಟೀಲ್‌ ಅವರು 2,218 ಎಕರೆ 33 ಗುಂಟೆ ವಿಸ್ತೀರ್ಣದ ಜಮೀನನ್ನು ಭೂ ಸ್ವಾಧೀನದಿಂದ ಹೊರತುಪಡಿಸಲು ಕೆಐಎಡಿಬಿ ಕಾಯ್ದೆ ಕಲಂ 4ರ ಪ್ರಸ್ತಾವನೆಯು ಇನ್ನೂ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಉತ್ತರ ನೀಡಿದ್ದಾರೆ.

 

ವಿಶೇಷವೆಂದರೇ ಬೀಳಗಿ ಶಾಸಕ ಜೆ ಟಿ ಪಾಟೀಲ್‌ ಅವರು 2023ರಲ್ಲಿ ನಡೆದಿದ್ದ ವಿಧಾನ ಸಭೆ ಅಧಿವೇಶನದಲ್ಲಿಯೂ ಇದೇ ಪ್ರಶ್ನೆಯನ್ನು ಕೇಳಿದ್ದರು. ಆಗಲೂ ಸಚಿವ ಎಂ ಬಿ ಪಾಟೀಲ್‌ ಅವರು  ‘ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಿರುವ 444.31 ಎಕರೆ ಜಮೀನನ್ನು ಭೂ ಸ್ವಾಧೀನದಿಂದ ಕೈ ಬಿಡುವುದು ಕಷ್ಟ ಸಾಧ್ಯವಾಗಿರುತ್ತದೆ,’  ಎಂದು ಉತ್ತರಿಸಿದ್ದರು.

 

2 ವರ್ಷದ ಬಳಿಕ ಪುನಃ ಶಾಸಕ ಜೆ ಟಿ ಪಾಟೀಲ್‌ ಇದೇ ಪ್ರಶ್ನೆಯನ್ನು ಮತ್ತೊಮ್ಮೆ ಕೇಳಿದ್ದಾಗಲೂ ಸಚಿವರ ಉತ್ತರದಲ್ಲಿ ‘ ಈ ಪ್ರಸ್ತಾವನೆಯು ಇನ್ನೂ ಸರ್ಕಾರದ ಪರಿಶೀಲನೆಯಲ್ಲಿದೆ,’ ಎಂದು ಹೇಳಲಾಗಿದೆ.

 

11 ತಿಂಗಳಾದರೂ ಸಚಿವ ಸಂಪುಟಕ್ಕೆ ಮಂಡನೆಯಾಗದ ಪ್ರಸ್ತಾವ

 

ಹಲಕುರ್ಕಿ, ಹಂಗರಗಿ, ಬೇಡರ ಬೂದಿಹಾಳ ಗ್ರಾಮಗಳ 2,218 ಎಕರೆ 33 ಗುಂಟೆ ವಿಸ್ತೀರ್ಣದ ಜಮೀನುಗಳನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಹೊರತುಪಡಿಸಲು ಕೆಐಎಡಿಬಿ ಮುಂದಾಗಿತ್ತು. ಕೆಐಎಡಿಬಿಯ ಕಾಯ್ದೆ ಕಲಂ 4ರ ಅಡಿ ಕರಡು ಪ್ರಸ್ತಾವನೆಗಳನ್ನು ಸಚಿವ ಸಂಪುಟದ ಮುಂದೆ ಮಂಡಿಸಲು ಮಂಡಳಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯವರು ಸರ್ಕಾರಕ್ಕೆ 2025ರ ಜನವರಿ 30ರಂದೇ ಸಲ್ಲಿಸಿದ್ದರು. ಆದರೆ ಈ ಪ್ರಸ್ತಾವಗಳು 11 ತಿಂಗಳಾದರೂ ಕಾರ್ಯರೂಪಕ್ಕೆ ಬರಲೇ ಇಲ್ಲ.

 

‘ಈ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಯಾವಾಗ ಮಂಡಿಸಲಾಗುವುದು,’ ಎಂದು ಶಾಸಕ ಜೆ ಟಿ ಪಾಟೀಲ್‌ ಅವರು ಕೇಳಿದ್ದ ಪ್ರಶ್ನೆಗೆ ಸಚಿವ ಎಂ ಬಿ ಪಾಟೀಲ್‌ ಅವರು ನೇರ ಮತ್ತು ನಿರ್ದಿಷ್ಟವಾಗಿ ಉತ್ತರವನ್ನೇ ಕೊಟ್ಟಿಲ್ಲ. ಬದಲಿಗೆ ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ ಎಂದು ಹೇಳಿ ಸಾಗಾಕಿದ್ದಾರೆ.

 

ಸರ್ಕಾರದ ಉತ್ತರದಲ್ಲೇನಿದೆ?

 

ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕು ಹಲಕುರ್ಕಿ, ಬೇಡರ ಬೂದಿಹಾಳ, ಗುಳೇದಗುಡ್ಡ ತಾಲೂಕು, ಹಂಗರಗಿ ಗ್ರಾಮಗಳಲ್ಲಿ ಕೈಗಾರಿಕೆ ಪ್ರದೇಶಕ್ಕಾಗಿ ಕಲಂ 3(1), 1(3) ಮತ್ತು 28(1)ರ ಅಡಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿರುವ 2,218.33 ಎಕರೆ ಜಮೀನಿನ ಪೈಕಿ 444.31 ಎಕರೆ ಜಮೀಣಿಗೆ ಈಗಾಗಲೇ ಕಲಂ 28(4)ರ ಅಂತಿಮ ಅಧಿಸೂಚನೆ ಹೊರಡಿಸಿರುವ ಹಾಗೂ ಕಲಂ 3(1), 1(3) ಮತ್ತು 28(1) ರಡಿ ಪ್ರಾಥಮಿಕ ಅಧಿಸೂಚನೆಯಲ್ಲಿ ಬಾಕಿ ಉಳಿದಿರುವ 1,774 ಎಕರೆ 02 ಗುಂಟೆ ಜಮೀನು ಸೇರಿದಂತೆ ಒಟ್ಟು 2,218 ಎಕರೆ 33 ಗುಂಟೆ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಹೊರತುಪಡಿಸಲು ಕೆಐಎಡಿಬಿ ಕಾಯ್ದ ಕಲಂ 4 ರ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯಲ್ಲಿರುತ್ತದೆ ಎಂದು ಸಚಿವ ಎಂ ಬಿ ಪಾಟೀಲ್‌ ಅವರು ಉತ್ತರಿಸಿದ್ದಾರೆ.

 

 

ರೈತರ ಅಭಿಪ್ರಾಯ ಹಾಗೂ ಗ್ರಾಮಸಭೆ ನಡೆಸದೆ ಬಾಗಲಕೋಟೆ ಹಲಕುರ್ಕಿ ಗ್ರಾಮದಲ್ಲಿ ರೈತರ ಸಮ್ಮತಿಯಿಲ್ಲದೇ  ಕೆಐಎಡಿಬಿಯು  ಏಕಾಏಕಿ 2,218.11 ಎಕರೆ ಜಮೀನನ್ನು  ವಶಪಡಿಸಿಕೊಂಡಿತ್ತು.  ಅಧಿಕಾರಕ್ಕೆ ಬಂದ ಕೆಲವೇ ಕೆಲವು ತಿಂಗಳಲ್ಲಿ ಈ ಎಲ್ಲಾ ಜಮೀನುಗಳನ್ನು  ರೈತರಿಗೆ ವಾಪಸ್‌ ಕೊಡಿಸುವುದಾಗಿ ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್‌ ಮುಖಂಡರು ಹಲಕುರ್ಕಿ ಗ್ರಾಮದಲ್ಲಿ  ಭರವಸೆ ನೀಡಿದ್ದರು.

 

ಅಲ್ಲದೇ ಕಾಂಗ್ರೆಸ್‌ ಸರಕಾರ ಬಂದ ಕೂಡಲೇ ಹಲಕುರ್ಕಿ ಗ್ರಾಮದ ಭೂಸ್ವಾಧೀನ ವಿಚಾರವನ್ನು ವಿಧಾನಸಭೆ ಅಧಿವೇಶನದಲ್ಲಿ ಇಟ್ಟು ರದ್ದುಪಡಿಸಲಾಗುವುದು,’ ಎಂದು ಅಲ್ಲಿನ ರೈತರಿಗೆ ಜೆ ಟಿ ಪಾಟೀಲ್‌ ಅವರು  ಭರವಸೆ ನೀಡಿದ್ದರು. ಅದರಂತೆ  ಜಿ ಟಿ ಪಾಟೀಲ್‌ ಅವರು ಬೀಳಗಿ ಶಾಸಕರಾಗಿ ಎರಡೂವರೆ ವರ್ಷ ಕಳೆದಿದ್ದಾರೆ. ಅದರೂ ಈ ಜಮೀನನ್ನು ಭೂ ಸ್ವಾಧೀನ ವಿಚಾರವನ್ನು ಅಧಿವೇಶನದಲ್ಲಿ ಇಟ್ಟು ರದ್ದುಪಡಿಸುವಲ್ಲಿ ವಿಫಲರಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಕೆಐಎಡಿಬಿಯು ಕೈಗಾರಿಕೆ ಉದ್ದೇಶಕ್ಕಾಗಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದಲ್ಲಿ 2,000 ಎಕರೆ ರೈತರ ಜಮೀನು, ಗೋಮಾಳ ಮತ್ತು ಗಾವಟಾಣ ಜಮೀನುಗಳನ್ನು ವಶಪಡಿಸಿಕೊಂಡಿತ್ತು. ಅಲ್ಲದೇ  ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಿರುವ 444.31 ಎಕರೆ ಜಮೀನನ್ನು ಭೂ ಸ್ವಾಧೀನದಿಂದ ಕೈ ಬಿಡುವುದು ಕಷ್ಟ ಸಾಧ್ಯ ಎಂದು ಕಾಂಗ್ರೆಸ್‌ ಸರ್ಕಾರವು ರೈತರಿಗೆ ಕೈ ಎತ್ತಿದೆ.

 

ಹಲಕುರ್ಕಿಯ ಭೂಮಿಗಳನ್ನು 2,000 ಎಕರೆ ಭೂಮಿಯನ್ನ ವಾಪಸ್‌ ಕೊಡಿಸುವ ಸಂಬಂಧ ಕಾಂಗ್ರೆಸ್‌ ಶಾಸಕ ಜಿ ಟಿ ಪಾಟೀಲ್‌ ಅವರೇ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವರಿಗೆ ವಿಧಾನಸಭೆ ಅಧಿವೇಶನದಲ್ಲಿ ಗಮನಸೆಳೆದಿದ್ದರು. ಇದಕ್ಕೆ ಉತ್ತರಿಸಿರುವ ಸಚಿವ ಎಂ ಬಿ ಪಾಟೀಲ್‌ ಅವರು ‘ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಿರುವ 444.31 ಎಕರೆ ಜಮೀನನ್ನು ಭೂ ಸ್ವಾಧೀನದಿಂದ ಕೈ ಬಿಡುವುದು ಕಷ್ಟ ಸಾಧ್ಯವಾಗಿರುತ್ತದೆ,’ ಎಂದು ಉತ್ತರಿಸಿರುವುದು ಕಾಂಗ್ರೆಸ್‌ ಸರ್ಕಾರವು ಮಾತಿನಿಂದ ಹಿಂದೆ ಸರಿದಿತ್ತು.

 

 

 

 

 

ಪ್ರಕರಣದ ವಿವರ

 

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಲಕುರ್ಕಿ, ಬ್ಯಾಡರಬೂದಿಹಾಳ ಹಾಗೂ ಗುಳೇದಗುಡ್ಡ ತಾಲೂಕಿನ ಹಂಗರಗಿ ಗ್ರಾಮಗಳಲ್ಲಿ ಒಟ್ಟು 2,218.11 ಎಕರೆ ಜಮೀನನ್ನು ಕೈಗಾರಿಕೆ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಕೆಐಎಡಿ ಕಾಯ್ದೆ ಕಲಂ 3(1) 1(3) ಮತ್ತು 28(1) ಡಿ 2022ರ ಆಗಸ್ಟ್‌ 19ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು.

 

ಈ ಪೈಕಿ ಒಟ್ಟು 444.31 ಎಕರೆ ಜಮೀನಿಗೆ 2023ರ ಫೆ.23ರಂದು ಕೆಐಎಡಿಬಿ ಕಲಂ 28(4) ಅಡಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಈ ಅಂತಿಮ ಅಧಿಸೂಚನೆಯಲ್ಲಿ ಒಳಗೊಂಡಿರುವ ಜಮೀನುಗಳಿಗೆ ಎಕರೆ ಒಂದಕ್ಕೆ 18.00 ಲಕ್ಷ ರು.ನಂತೆ ಭೂ ದರ ನಿರ್ಧರಣಾ ಸಲಹಾ ಸಮಿತಿಯು ದರವನ್ನು ನಿಗದಿಪಡಿಸಿ ಶಿಫಾರಸ್ಸು ಮಾಡಿತ್ತು. 2023ರ ಮಾರ್ಚ್‌ 27ರಂದು ನಡೆದ ಮಂಡಳಿ ಸಭೆಯಲ್ಲಿ ಶಿಫಾರಸ್ಸು ಮಾಡಿರುವ ದರವು ಹೆಚ್ಚಿನದಾಗಿರುವುದರಿಂದ ದರವನ್ನು ಪುನರ್‌ ಪರಿಶೀಲಿಸಲು ಭೂ ದರ ಸಲಹಾ ಸಮಿತಿಗೆ ತಿಳಿಸಲು ನಿರ್ಣಯಿಸಿತ್ತು.

 

‘ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಿರುವ 444.31 ಎಕರೆ ಜಮೀನನ್ನು ಭೂ ಸ್ವಾಧೀನದಿಂದ ಕೈ ಬಿಡುವುದು ಕಷ್ಟ ಸಾಧ್ಯವಾಗಿರುತ್ತದೆ. ಆದರೆ ಉಳಿದ ಜಮೀನುಗಳಿಗೆ ಅಂತಿಮ ಅಧಿಸೂಚನೆ ಹೊರಡಿಸುವ ಪೂರ್ವದಲ್ಲಿ ಸಾಧಕ ಬಾಧಕಗಳನ್ನು ಚರ್ಚಿಸಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ,’ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಅವರು ಜಿ ಟಿ ಪಾಟಿಲ್‌ 2023ರಲ್ಲೇ   ಉತ್ತರಿಸಿದ್ದರು.

 

 

 

ಅಂದಾಜು 5 ಸಾವಿರ ಜನಸಂಖ್ಯೆ ಇರುವ ಹಲಕುರ್ಕಿ ಗ್ರಾಮದಲ್ಲಿ 3 ಸಾವಿರ ಎಕರೆ ಜಮೀನು ಇದೆ. ಇದು ಸಂಪೂರ್ಣವಾಗಿ ಲವತ್ತತೆಯಿಂದ ಕೂಡಿ ಜನತೆಯ ಬದುಕಿಗೆ ಆಸರೆಯಾಗಿದೆ. ಸಚಿವ ಮುರುಗೇಶ ನಿರಾಣಿ ವಿಮಾನ ನಿಲ್ದಾಣ ಹಾಗೂ ಕೈಗಾರಿಕೆ ಸ್ಥಾಪನೆಗೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿ ಅನ್ಯಾಯ ಮಾಡುತ್ತಿದ್ದಾರೆ ಎಂದು ಅಲ್ಲಿನ ರೈತರು ದೂರಿದ್ದರು.

 

2,218 ಎಕರೆ ಜಮೀನು ವಾಪಸ್‌ ವಿಚಾರ; ಮಾತಿನಿಂದ ಹಿಂದೆ ಸರಿದು ವಚನ ಭ್ರಷ್ಟವಾಯಿತೇ ಕಾಂಗ್ರೆಸ್‌ ಸರ್ಕಾರ?

 

‘ಗ್ರಾಮದ ರೈತರು ವರ್ಷಕ್ಕೆ ಎರಡು ಬೆಳೆ ಬೆಳೆದು ಜೀವನ ನಡೆಸುತ್ತಿದ್ದಾರೆ. ಈ ಭೂಮಿ ವಶಕ್ಕೆ ಪಡೆದರೆ ಶೇ.60 ರಷ್ಟು ಕುಟುಂಬಗಳು ಬೀದಿ ಪಾಲಾಗುತ್ತವೆ. ಇನ್ನು ಗ್ರಾಮಕ್ಕೆ ಸಚಿವರು, ಕಂದಾಯ ಇಲಾಖೆ ಅಧಿಕಾರಿಗಳು, ಕೈಗಾರಿಕಾ ಇಲಾಖೆ ಅಧಿಕಾರಿಗಳು, ಕೆಐಎಡಿಬಿ ಅಧಿಕಾರಿಗಳು ಭೇಟಿ ನೀಡಿಲ್ಲ. ರೈತರ ಅಭಿಪ್ರಾಯ ಕೇಳಿಲ್ಲ, ಗ್ರಾಮಸಭೆ ನಡೆಸದೆ ಏಕಾಏಕಿ 1500 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡು ರೈತ ಸಮೂಹವನ್ನು ಬೀದಿ ಪಾಲು ಮಾಡಲು ಹೊರಟಿದೆ,’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.

 

ಅದೇ ರೀತಿ ಕಾಂಗ್ರೆಸ್‌ನ ಮತ್ತೊಬ್ಬ ಮುಖಂಡ ಎಸ್‌ ಆರ್‌ ಪಾಟೀಲ್‌ ಅವರು ‘ರೈತರಾದ ನಾವು ಭೂಮಿಯನ್ನು ತಾಯಿಯಂತೆ ಕಂಡು ಪೂಜಿಸುತ್ತೇವೆ. ಅದನ್ನು ಕಳೆದುಕೊಂಡರೆ ತಾಯಿಯನ್ನು ಕಳೆದುಕೊಂಡ ತಬ್ಬಲಿಯಂತೆ. ನಮ್ಮ ಸರಕಾರ ಬಂದರೆ ಕೇವಲ ಮೂರ್ನಾಲ್ಕು ತಿಂಗಳಲ್ಲಿ ಜಮೀನು ಬಿಡಿಸಿ ಕೊಡುತ್ತೇವೆ. ಜಮೀನು ಕಸಿದುಕೊಳ್ಳುವ ಬಿಜೆಪಿ ಸರಕಾರಕ್ಕೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ರೈತರೆಲ್ಲರೂ ಒಗ್ಗೂಡಿ ರೈತರ ಅಭಿವೃದ್ಧಿ ಪರ ಕೆಲಸ ಮಾಡುವ ಕಾಂಗ್ರೆಸ್‌ಗೆ ಮತ ನೀಡಬೇಕು,’ ಎಂದು ಮತಯಾಚಿಸಿದ್ದರು.

 

ಅಲ್ಲದೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವೇಳೆಯಲ್ಲಿ ಮಾತನಾಡಿದ್ದ ಜೆ.ಟಿ ಪಾಟೀಲ ಅವರು ‘ನಾನು ಅಧಿಕಾರದಲ್ಲಿದ್ದಾಗ ಹಲಕುರ್ಕಿ ಗ್ರಾಮದಲ್ಲಿ ಸಾಕಷ್ಟು ಜನಪರ ಕೆಲಸ ಮಾಡಿದ್ದೇನೆ. ಈಗ ನಿಮ್ಮೆಲ್ಲರ ಬೇಡಿಕೆಯಂತೆ ಕಾಂಗ್ರೆಸ್‌ ಸರಕಾರ ಬಂದ ಕೂಡಲೇ ಹಲಕುರ್ಕಿ ಗ್ರಾಮದ ಭೂಸ್ವಾಧೀನ ವಿಚಾರವನ್ನು ವಿಧಾನಸಭೆ ಅಧಿವೇಶನದಲ್ಲಿ ಇಟ್ಟು ರದ್ದುಪಡಿಸಲಾಗುವುದು,’ ಎಂದು ಭರವಸೆ ನೀಡಿದ್ದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts