2,218 ಎಕರೆ ಜಮೀನು ವಾಪಸ್‌ ವಿಚಾರ; ಮಾತಿನಿಂದ ಹಿಂದೆ ಸರಿದು ವಚನ ಭ್ರಷ್ಟವಾಯಿತೇ ಕಾಂಗ್ರೆಸ್‌ ಸರ್ಕಾರ?

ಬೆಂಗಳೂರು; ರೈತರ ಅಭಿಪ್ರಾಯ ಹಾಗೂ ಗ್ರಾಮಸಭೆ ನಡೆಸದೆ ಕೆಐಎಡಿಬಿಯು  ಏಕಾಏಕಿ ವಶಪಡಿಸಿಕೊಂಡಿದ್ದ  2,218.11 ಎಕರೆ ಜಮೀನನ್ನು ಅಧಿಕಾರಕ್ಕೆ ಬಂದ ಕೆಲವೇ ಕೆಲವು ತಿಂಗಳಲ್ಲಿ ರೈತರಿಗೆ ವಾಪಸ್‌ ಕೊಡಿಸುವುದಾಗಿ ಬಾಗಲಕೋಟೆಯ ಹಲಕುರ್ಕಿ ಗ್ರಾಮದಲ್ಲಿ ಕಾಂಗ್ರೆಸ್‌ ನೀಡಿದ್ದ  ಭರವಸೆ ಈಡೇರುವ ಲಕ್ಷಣಗಳಿಲ್ಲ.

 

ಹಿಂದಿನ ಬಿಜೆಪಿ ಸರ್ಕಾರವು ನಿಯಮಬಾಹಿರವಾಗಿ ಸಂಘ ಪರಿವಾರ ಮತ್ತಿತರೆ ಖಾಸಗಿ ಸಂಘ ಸಂಸ್ಥೆಗಳಿಗೆ ಗೋಮಾಳ ಮಂಜೂರು ರದ್ದು, ಎಪಿಎಂಸಿ ಕಾಯ್ದೆ ತಿದ್ದುಪಡಿ ವಾಪಸ್,  ಪಿಎಸ್‌ಐ ಹಗರಣ, 45 ಪರ್ಸೆಂಟ್‌ ಕಮಿಷನ್‌ ತನಿಖೆ ಸೇರಿದಂತೆ ಇನ್ನಿತರೆ ಭರವಸೆಗಳನ್ನು ಈಡೇರಿಸಲು ಮುಂದಾಗಿದೆಯಾದರೂ ಬಾಗಲಕೋಟೆ ಹಲಕುರ್ಕಿ ಗ್ರಾಮದಲ್ಲಿ ರೈತರ ಸಮ್ಮತಿಯಿಲ್ಲದೇ ವಶಪಡಿಸಿಕೊಂಡಿದ್ದ ಜಮೀನನ್ನು ವಾಪಸ್‌ ಕೊಡಿಸುವ ವಿಚಾರದಲ್ಲಿ  ಸರ್ಕಾರವು ಇದೀಗ ತನ್ನ ಮಾತಿನಿಂದ ಹಿಂದೆ ಸರಿದಿದೆ.

 

ಕಾಂಗ್ರೆಸ್‌ ಸರಕಾರ ಬಂದ ಕೂಡಲೇ ಹಲಕುರ್ಕಿ ಗ್ರಾಮದ ಭೂಸ್ವಾಧೀನ ವಿಚಾರವನ್ನು ವಿಧಾನಸಭೆ ಅಧಿವೇಶನದಲ್ಲಿ ಇಟ್ಟು ರದ್ದುಪಡಿಸಲಾಗುವುದು,’ ಎಂದು ಅಲ್ಲಿನ ರೈತರಿಗೆ ಭರವಸೆ ನೀಡಿದ್ದ ಜಿ ಟಿ ಪಾಟೀಲ್‌ ಅವರನ್ನು ಇದೀಗ ಕಾಂಗ್ರೆಸ್‌ ಸರ್ಕಾರವು ಮುಖಭಂಗಕ್ಕೀಡು ಮಾಡಿದೆ.

 

ಕೆಐಎಡಿಬಿಯು ಕೈಗಾರಿಕೆ ಉದ್ದೇಶಕ್ಕಾಗಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದಲ್ಲಿ 2,000 ಎಕರೆ ರೈತರ ಜಮೀನು, ಗೋಮಾಳ ಮತ್ತು ಗಾವಟಾಣ ಜಮೀನುಗಳನ್ನು ವಶಪಡಿಸಿಕೊಂಡಿತ್ತು. ಆ ವೇಳೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ, ಎಸ್‌ ಆರ್‌ ಪಾಟೀಲ್‌ ಅವರು ನಮ್ಮ ಸರ್ಕಾರ ಬಂದ ಮೆಲೆ ವಾಪಸ್‌ ಕೊಡಿಸಿಕೊಡುವುದಾಗಿ ಭರವಸೆ ನೀಡಿದ್ದರು.

 

ಆದರೆ ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಿರುವ 444.31 ಎಕರೆ ಜಮೀನನ್ನು ಭೂ ಸ್ವಾಧೀನದಿಂದ ಕೈ ಬಿಡುವುದು ಕಷ್ಟ ಸಾಧ್ಯ ಎಂದು ಕಾಂಗ್ರೆಸ್‌ ಸರ್ಕಾರವು ರೈತರಿಗೆ ಕೈ ಎತ್ತಿದೆ.

 

 

ಹಲಕುರ್ಕಿಯ ಭೂಮಿಗಳನ್ನು 2,000 ಎಕರೆ ಭೂಮಿಯನ್ನ ವಾಪಸ್‌ ಕೊಡಿಸುವ ಸಂಬಂಧ ಕಾಂಗ್ರೆಸ್‌ ಶಾಸಕ ಜಿ ಟಿ ಪಾಟೀಲ್‌ ಅವರೇ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವರಿಗೆ ವಿಧಾನಸಭೆ ಅಧಿವೇಶನದಲ್ಲಿ ಗಮನಸೆಳೆದಿದ್ದರು. ಇದಕ್ಕೆ ಉತ್ತರಿಸಿರುವ ಸಚಿವ ಎಂ ಬಿ ಪಾಟೀಲ್‌ ಅವರು ‘ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಿರುವ 444.31 ಎಕರೆ ಜಮೀನನ್ನು ಭೂ ಸ್ವಾಧೀನದಿಂದ ಕೈ ಬಿಡುವುದು ಕಷ್ಟ ಸಾಧ್ಯವಾಗಿರುತ್ತದೆ,’ ಎಂದು ಉತ್ತರಿಸಿರುವುದು ಕಾಂಗ್ರೆಸ್‌ ಸರ್ಕಾರವು ಮಾತಿನಿಂದ ಹಿಂದೆ ಸರಿದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

 

ಪ್ರಕರಣದ ವಿವರ

 

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಲಕುರ್ಕಿ, ಬ್ಯಾಡರಬೂದಿಹಾಳ ಹಾಗೂ ಗುಳೇದಗುಡ್ಡ ತಾಲೂಕಿನ ಹಂಗರಗಿ ಗ್ರಾಮಗಳಲ್ಲಿ ಒಟ್ಟು 2,218.11 ಎಕರೆ ಜಮೀನನ್ನು ಕೈಗಾರಿಕೆ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಕೆಐಎಡಿ ಕಾಯ್ದೆ ಕಲಂ 3(1) 1(3) ಮತ್ತು 28(1) ಡಿ 2022ರ ಆಗಸ್ಟ್‌ 19ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು.

 

ಈ ಪೈಕಿ ಒಟ್ಟು 444.31 ಎಕರೆ ಜಮೀನಿಗೆ 2023ರ ಫೆ.23ರಂದು ಕೆಐಎಡಿಬಿ ಕಲಂ 28(4) ಅಡಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಈ ಅಂತಿಮ ಅಧಿಸೂಚನೆಯಲ್ಲಿ ಒಳಗೊಂಡಿರುವ ಜಮೀನುಗಳಿಗೆ ಎಕರೆ ಒಂದಕ್ಕೆ 18.00 ಲಕ್ಷ ರು.ನಂತೆ ಭೂ ದರ ನಿರ್ಧರಣಾ ಸಲಹಾ ಸಮಿತಿಯು ದರವನ್ನು ನಿಗದಿಪಡಿಸಿ ಶಿಫಾರಸ್ಸು ಮಾಡಿತ್ತು. 2023ರ ಮಾರ್ಚ್‌ 27ರಂದು ನಡೆದ ಮಂಡಳಿ ಸಭೆಯಲ್ಲಿ ಶಿಫಾರಸ್ಸು ಮಾಡಿರುವ ದರವು ಹೆಚ್ಚಿನದಾಗಿರುವುದರಿಂದ ದರವನ್ನು ಪುನರ್‌ ಪರಿಶೀಲಿಸಲು ಭೂ ದರ ಸಲಹಾ ಸಮಿತಿಗೆ ತಿಳಿಸಲು ನಿರ್ಣಯಿಸಿದೆ ಎಂದು ಎಂ ಬಿ ಪಾಟೀಲ್‌ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

 

‘ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಿರುವ 444.31 ಎಕರೆ ಜಮೀನನ್ನು ಭೂ ಸ್ವಾಧೀನದಿಂದ ಕೈ ಬಿಡುವುದು ಕಷ್ಟ ಸಾಧ್ಯವಾಗಿರುತ್ತದೆ. ಆದರೆ ಉಳಿದ ಜಮೀನುಗಳಿಗೆ ಅಂತಿಮ ಅಧಿಸೂಚನೆ ಹೊರಡಿಸುವ ಪೂರ್ವದಲ್ಲಿ ಸಾಧಕ ಬಾಧಕಗಳನ್ನು ಚರ್ಚಿಸಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ,’ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಅವರು ಜಿ ಟಿ ಪಾಟಿಲ್‌ ಅವರಿಗೆ ಉತ್ತರಿಸಿದ್ದಾರೆ.

 

ಅಂದಾಜು 5 ಸಾವಿರ ಜನಸಂಖ್ಯೆ ಇರುವ ಹಲಕುರ್ಕಿ ಗ್ರಾಮದಲ್ಲಿ 3 ಸಾವಿರ ಎಕರೆ ಜಮೀನು ಇದೆ. ಇದು ಸಂಪೂರ್ಣವಾಗಿ ಲವತ್ತತೆಯಿಂದ ಕೂಡಿ ಜನತೆಯ ಬದುಕಿಗೆ ಆಸರೆಯಾಗಿದೆ. ಸಚಿವ ಮುರುಗೇಶ ನಿರಾಣಿ ವಿಮಾನ ನಿಲ್ದಾಣ ಹಾಗೂ ಕೈಗಾರಿಕೆ ಸ್ಥಾಪನೆಗೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿ ಅನ್ಯಾಯ ಮಾಡುತ್ತಿದ್ದಾರೆ ಎಂದು ಅಲ್ಲಿನ ರೈತರು ದೂರಿದ್ದರು.

 

‘ಗ್ರಾಮದ ರೈತರು ವರ್ಷಕ್ಕೆ ಎರಡು ಬೆಳೆ ಬೆಳೆದು ಜೀವನ ನಡೆಸುತ್ತಿದ್ದಾರೆ. ಈ ಭೂಮಿ ವಶಕ್ಕೆ ಪಡೆದರೆ ಶೇ.60 ರಷ್ಟು ಕುಟುಂಬಗಳು ಬೀದಿ ಪಾಲಾಗುತ್ತವೆ. ಇನ್ನು ಗ್ರಾಮಕ್ಕೆ ಸಚಿವರು, ಕಂದಾಯ ಇಲಾಖೆ ಅಧಿಕಾರಿಗಳು, ಕೈಗಾರಿಕಾ ಇಲಾಖೆ ಅಧಿಕಾರಿಗಳು, ಕೆಐಎಡಿಬಿ ಅಧಿಕಾರಿಗಳು ಭೇಟಿ ನೀಡಿಲ್ಲ. ರೈತರ ಅಭಿಪ್ರಾಯ ಕೇಳಿಲ್ಲ, ಗ್ರಾಮಸಭೆ ನಡೆಸದೆ ಏಕಾಏಕಿ 1500 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡು ರೈತ ಸಮೂಹವನ್ನು ಬೀದಿ ಪಾಲು ಮಾಡಲು ಹೊರಟಿದೆ,’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.

 

ಅದೇ ರೀತಿ ಕಾಂಗ್ರೆಸ್‌ನ ಮತ್ತೊಬ್ಬ ಮುಖಂಡ ಎಸ್‌ ಆರ್‌ ಪಾಟೀಲ್‌ ಅವರು ‘ರೈತರಾದ ನಾವು ಭೂಮಿಯನ್ನು ತಾಯಿಯಂತೆ ಕಂಡು ಪೂಜಿಸುತ್ತೇವೆ. ಅದನ್ನು ಕಳೆದುಕೊಂಡರೆ ತಾಯಿಯನ್ನು ಕಳೆದುಕೊಂಡ ತಬ್ಬಲಿಯಂತೆ. ನಮ್ಮ ಸರಕಾರ ಬಂದರೆ ಕೇವಲ ಮೂರ್ನಾಲ್ಕು ತಿಂಗಳಲ್ಲಿ ಜಮೀನು ಬಿಡಿಸಿ ಕೊಡುತ್ತೇವೆ. ಜಮೀನು ಕಸಿದುಕೊಳ್ಳುವ ಬಿಜೆಪಿ ಸರಕಾರಕ್ಕೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ರೈತರೆಲ್ಲರೂ ಒಗ್ಗೂಡಿ ರೈತರ ಅಭಿವೃದ್ಧಿ ಪರ ಕೆಲಸ ಮಾಡುವ ಕಾಂಗ್ರೆಸ್‌ಗೆ ಮತ ನೀಡಬೇಕು,’ ಎಂದು ಮತಯಾಚಿಸಿದ್ದರು.

 

ಅಲ್ಲದೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವೇಳೆಯಲ್ಲಿ ಮಾತನಾಡಿದ್ದ ಜೆ.ಟಿ ಪಾಟೀಲ ಅವರು ‘ನಾನು ಅಧಿಕಾರದಲ್ಲಿದ್ದಾಗ ಹಲಕುರ್ಕಿ ಗ್ರಾಮದಲ್ಲಿ ಸಾಕಷ್ಟು ಜನಪರ ಕೆಲಸ ಮಾಡಿದ್ದೇನೆ. ಈಗ ನಿಮ್ಮೆಲ್ಲರ ಬೇಡಿಕೆಯಂತೆ ಕಾಂಗ್ರೆಸ್‌ ಸರಕಾರ ಬಂದ ಕೂಡಲೇ ಹಲಕುರ್ಕಿ ಗ್ರಾಮದ ಭೂಸ್ವಾಧೀನ ವಿಚಾರವನ್ನು ವಿಧಾನಸಭೆ ಅಧಿವೇಶನದಲ್ಲಿ ಇಟ್ಟು ರದ್ದುಪಡಿಸಲಾಗುವುದು,’ ಎಂದು ಭರವಸೆ ನೀಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts