8.10 ಕೋಟಿ ರು ಮೊತ್ತದ ಟೆಂಡರ್; ಅಸ್ತಿತ್ವದಲ್ಲಿಲ್ಲದ ಕಾಯ್ದೆ ಪ್ರಸ್ತಾವ, ಸದನಕ್ಕೆ ತಪ್ಪು ಮಾಹಿತಿ?

ಬೆಂಗಳೂರು;  8.10 ಕೋಟಿ ರು ಮೊತ್ತದಲ್ಲಿ  65 ಎಂಎಂ ಫೋರ್ಜ್‌ ಸ್ಟೀಲ್‌ ಗ್ರೈಂಡಿಂಗ್‌ ಮೀಡಿಯಾ ಬಾಲ್ಸ್‌ ಖರೀದಿ ಮಾಡುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್‌ ಸದಸ್ಯ ಎನ್ ರವಿಕುಮಾರ್ ಅವರು ಕೇಳಿದ್ದ ಪ್ರಶ್ನೆಗೆ  ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್‌ ಎಸ್ ಮಲ್ಲಿಕಾರ್ಜುನ್‌ ಅವರು ಅಸ್ತಿತ್ವದಲ್ಲಿಲ್ಲದ ಕಾಯ್ದೆಯನ್ನು ಉಲ್ಲೇಖಿಸಿದ್ದಾರೆ. ಈ ಉತ್ತರದಲ್ಲಿ ಉಲ್ಲೇಖಿಸಿರುವ ಮಾಹಿತಿಯು ತಪ್ಪುಗಳಿಂದ ಕೂಡಿದೆ ಎಂಬ ಅಭಿಪ್ರಾಯವು ವ್ಯಕ್ತವಾಗಿದೆ.

 

ಹಾಗೆಯೇ ತಪ್ಪುಗಳಿಂದ ಕೂಡಿರುವ ಮಾಹಿತಿಯನ್ನು ನೀಡುವ ಮೂಲಕ ಸದನವನ್ನು ದಿಕ್ಕು ತಪ್ಪಿಸಿದಂತಾಗಿದೆ ಎಂದು ಅಧಿಕಾರಿ ವರ್ಗದಲ್ಲೇ ಮಾತುಗಳು ಕೇಳಿ ಬರುತ್ತಿವೆ.

 

ಈ ಟೆಂಡರ್‍‌ನಲ್ಲಿ ಅನರ್ಹಗೊಂಡಿದ್ದ  ತೆಲಂಗಾಣ ಮತ್ತು ಮುಂಬೈ ಮೂಲದ ಕಂಪನಿಗಳ ಮೇಲ್ಮನವಿಯನ್ನು  ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗಣಿ ಮತ್ತು ಎಂಎಸ್ಎಂಇ) ಯ ಪುನರ್ ಪರಿಶೀಲನಾ ಪ್ರಾಧಿಕಾರದ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರು  ತರಾತುರಿಯಲ್ಲಿ ಇತ್ಯರ್ಥಗೊಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

 

ಈ ಆರೋಪಗಳಿಗೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನದಲ್ಲಿ ಬಿಜೆಪಿ ಸದಸ್ಯ ಎನ್ ರವಿಕುಮಾರ್‍‌ ಅವರು ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಇಲಾಖೆಯು ಅಸಮಂಜಸ ಮತ್ತು  ತಪ್ಪು ಉತ್ತರ, ತಪ್ಪು ಮಾಹಿತಿ ನೀಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಅಲ್ಲದೇ ಉತ್ತರ ಕೊಡುವ ಭರದಲ್ಲಿ  ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇಲ್ಲದೇ ಇರುವ ಕಾನೂನನ್ನು ಅಂದರೇ  ಕೆಟಿಟಿಪಿ ಆಕ್ಟ್‌ (KTTP ACT)  ಎಂದು ಉತ್ತರ ಒದಗಿಸಿದೆ. ರಾಜ್ಯದಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ, ಅಧಿನಿಯಮವು (Karnataka Transparency in Public Procurements)  ಜಾರಿಯಲ್ಲಿದೆ. ಆದರೆ ಎಲ್ಲಿಯೂ ಕೆಟಿಟಿಪಿ ಆಕ್ಟ್‌ (KTTP ACT) ಕಾಯ್ದೆಯಾಗಲೀ ಅಧಿನಿಯಮವಾಗಲಿ ಅಸ್ತಿತ್ವದಲ್ಲಿ ಇಲ್ಲ. ಆದರೂ ಈ ಉತ್ತರದಲ್ಲಿ ಕೆಟಿಟಿಪಿ ಆಕ್ಟ್‌ (KTTP ACT) ಎಂದು ಸೇರಿಸಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

 

ವಿಧಾನಸಭೆ ಮತ್ತು ವಿಧಾನ ಪರಿಷತ್‌ ಅಧಿವೇಶನಕ್ಕೆ ಇಲಾಖೆ ಅಧಿಕಾರಿಗಳು ಸಿದ್ಧಪಡಿಸುವ ಉತ್ತರವನ್ನು ಇಲಾಖೆಯ ಸರ್ಕಾರದ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಅಧೀನ ಕಾರ್ಯದರ್ಶಿ ಹಂತದಲ್ಲಿ ಪರಿಶೀಲಿಸಲಾಗುತ್ತದೆ. ಪರಿಶೀಲನೆ ನಂತರ ಈ ಉತ್ತರವನ್ನು ಕಡತದಲ್ಲಿರಿಸಲು ಸರ್ಕಾರದ ಕಾರ್ಯದರ್ಶಿ ಅಥವಾ ಇದಕ್ಕೆ ಸಂಬಂಧಿಸಿದ ಉನ್ನತ ಅಧಿಕಾರಿಯು ಶಿಫಾರಸ್ಸು ಅಥವಾ ಅನುಮೋದಿಸುತ್ತಾರೆ. ಇದಾದ ನಂತರ ಸಂಬಂಧಿಸಿದ  ಸಚಿವರು ಉತ್ತರವನ್ನು ಅನುಮೋದಿಸುತ್ತಾರೆ.

 

ಆದರೆ ಹಟ್ಟಿ ಚಿನ್ನದ ಗಣಿಯಲ್ಲಿನ ಟೆಂಡರ್‍‌ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್‌ ಸದಸ್ಯ ಎನ್ ರವಿಕುಮಾರ್ ಅವರು ಕೇಳಿದ್ದ ಪ್ರಶ್ನೆಗೆ ಇಲಾಖಾಧಿಕಾರಿಗಳು  ಸಿದ್ಧಪಡಿಸಿದ್ದ ಉತ್ತರವನ್ನು ಮೇಲಾಧಿಕಾರಿಗಳು ಪರಿಶೀಲನೆ ಮಾಡುವ ಗೋಜಿಗೆ ಹೋಗಿಲ್ಲ. ಹಾಗೆಯೇ ಇಲಾಖಾಧಿಕಾರಿಗಳು ನೀಡಿರುವ ಉತ್ತರವು ಸರಿ ಇದೆಯೇ ಇಲ್ಲವೇ ಎಂಬುದರ ಕಡೆ ಸಚಿವರೂ ಕಣ್ಣಾಯಿಸಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

 

ಈ ಉತ್ತರವನ್ನು ಸ್ವತಃ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರು ಅನುಮೋದಿಸಿದ್ದಾರೆ. ಇದನ್ನು ‘ದಿ ಫೈಲ್‌’ಗೆ ರೋಹಿಣಿ ಸಿಂಧೂರಿ ಅವರು ಖಚಿತಪಡಿಸಿದ್ದಾರೆ. ಆದರೆ ಈ ಉತ್ತರದಲ್ಲಿ ಕೆಟಿಟಿಪಿ ಆಕ್ಟ್‌ (KTTP ACT) ಯಾವುದು ಎಂದು ಕೇಳಿದ್ದ ಪ್ರಶ್ನೆಗೆ ರೋಹಿಣಿ ಸಿಂಧೂರಿ ಅವರು ಉತ್ತರಿಸಿಲ್ಲ. ಹೀಗಾಗಿ  ಈ ತಪ್ಪು ಉತ್ತರವನ್ನು ನೀಡಿದ್ದು ಯಾರು ಎಂಬ ಪ್ರಶ್ನೆಯೂ ಉದ್ಭವಿಸಿದೆ.

 

ರವಿಕುಮಾರ್‍‌ ಕೇಳಿದ್ದ ಪ್ರಶ್ನೆ ಏನು?

 

ಹಟ್ಟಿ ಚಿನ್ನದ ಗಣಿಯು 65 ಎಂಎಂ ಸ್ಟೀಲ್‌ ಗ್ರೈಂಡಿಂಗ್‌ ಮೀಡಿಯಾ ಬಾಲ್ಸ್‌ ಸರಬರಾಜಿಗೆ ತಾಂತ್ರಿಕವಾಗಿ ಅನರ್ಹವೆಂದು ಘೋಷಿಸಿ ಟೆಂಡರ್ ಪರಿಶೀಲನಾ ಸಮಿತಿ ನೀಡಿದ್ದ ಆದೇಶವನ್ನೂ ರದ್ದುಗೊಳಿಸಿ ತೆಲಂಗಾಣ ಮೂಲದ ರಿಷಿಕಾ ಕೆಮಿಕಲ್ಸ್‌ಗೆ ಆದೇಶ ನೀಡಲು ಕಾರಣವೇನು, ಮಹಿಳಾ ಐಎಎಸ್‌ ಅಧಿಕಾರಿಯ ಪತಿಯವರು ಈ ಕಂಪನಿಗಳಿಗೆ ಅತ್ಯಾಸಕ್ತಿ ವಹಿಸಿದ್ದಾರೆ ಎಂಬ ಕಾರಣಕ್ಕಾಗಿ ನೀಡಲಾಗಿದೆಯೇ ಎಂದು ಪ್ರಶ್ನೆ ಕೇಳಿದ್ದರು.

 

 

ಇದಕ್ಕೆ ಉತ್ತರ ನೀಡಿದ್ದ ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ್ ಅವರು ಈ ಟೆಂಡರ್‍‌ಗೆ ಸಂಬಂಧಿಸಿದಂತೆ ಯಾವುದೇ ಕಂಪನಿ ಅಥವಾ ಸಂಸ್ಥೆಗೆ ಆದೇಶ ನೀಡಿರುವುದಿಲ್ಲ ಎಂದು ಉತ್ತರಿಸಿದೆ.

 

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಕಾರ್ಯದರ್ಶಿ ನೇತೃತ್ವದ ಪುನರ್ ಪರಿಶೀಲನಾ ಸಮಿತಿಯ ಮುಂದೆ 10ಕ್ಕೂ ಹೆಚ್ಚು ಪುನರ್ ಪರಿಶೀಲನಾ  ಅರ್ಜಿಗಳು ಬಾಕಿ ಇದ್ದರೂ ತೆಲಂಗಾಣ ಮೂಲದ ರಿಷಿಕಾ ಕೆಮಿಕಲ್ಸ್‌ ಹಾಗೂ ಮುಂಬೈ ವಿಳಾಸದ ಶಕ್ತಿ ಪೋರ್ಜ್‌ ಇಂಡಿಯಾ ಕಂಪನಿಯ ಅರ್ಜಿಗಳು ತುರ್ತಾಗಿ ಇತ್ಯರ್ಥವಾಗಲು ಕಾರಣವೇನು, ಎಷ್ಟು ಕಂಪನಿಗಳ ಪುನರ್‍‌ ಪರಿಶೀಲನಾ ಅರ್ಜಿಗಳು ಬಾಕಿ ಇವೆ, ಸದರಿ ಕಂಪನಿಗಳು ಯಾವ ದಿನಾಂಕದಂದು ಅರ್ಜಿ ಸಲ್ಲಿಸಿದ್ದವು, ಸಮಗ್ರ ವಿವರ ಒದಗಿಸಬೇಕು ಎಂದು ರವಿಕುಮಾರ್‍‌ ಪ್ರಶ್ನೆ ಕೇಳಿದ್ದರು.

 

ಇದಕ್ಕೆ ಉತ್ತರಿಸಿರುವ ಎಸ್‌ ಎಸ್‌ ಮಲ್ಲಿಕಾರ್ಜುನ್‌ ಅವರು KTTP ACT 1999 ಅನ್ವಯ ಯಾವುದೇ ಅರ್ಜಿ ಬಾಕಿ ಇರುವುದಿಲ್ಲ. KTTP ACT 1999 ಅನ್ವಯ ನಿಗದಿತ ಅವಧಿಯಲ್ಲಿ ಅರ್ಜಿಗಳನ್ನು ವಿಲೇ ಮಾಡಬೇಕಾಗಿರುವ ಕಾರಣ ವಿಲೇ ಮಾಡಲಾಗಿದೆ ಎಂದು ಮೂರು ಸಾಲಿನಲ್ಲಿ ಉತ್ತರವನ್ನು ಒದಗಿಸಿದ್ದಾರೆ.

 

ವಿಶೇಷವೆಂದರೇ ರವಿಕುಮಾರ್ ಅವರು ಕೇಳಿದ್ದ ಪ್ರಶ್ನೆಯಲ್ಲಿ KTTP ACT 1999 ನಮೂದಿಸಿರಲೇ ಇಲ್ಲ. ಮೇಲಾಗಿ ಈ KTTP ACT 1999 ಕಾನೂನು ಸಹ ಇಲ್ಲ. ರಾಜ್ಯದಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ, ಅಧಿನಿಯಮವು (Karnataka Transparency in Public Procurements)  ಜಾರಿಯಲ್ಲಿದೆಯೇ ವಿನಃ KTTP ACT 1999 ಜಾರಿಯಲ್ಲೇ ಇಲ್ಲ. ರವಿಕುಮಾರ್‍‌ ಅವರು ಕೇಳಿದ್ದ ಪ್ರಶ್ನೆಗೂ ಸಚಿವ ಎಸ್ ಎಸ್‌ ಮಲ್ಲಿಕಾರ್ಜುನ್ ಅವರು ನೀಡಿರುವ ಉತ್ತರವು ಒಂದಕ್ಕೊಂದು ತಾಳಮೇಳವೇ ಇಲ್ಲದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಹಟ್ಟಿ ಚಿನ್ನದ ಗಣಿಯು 65 ಎಂಎಂ ಪೋರ್ಜ್ಡ್ ಸ್ಟೀಲ್‌ ಗ್ರೈಂಡಿಂಗ್‌ ಮೀಡಿಯಾ ಬಾಲ್ಸ್‌ ಸರಬರಾಜಿಗೆ ಎಷ್ಟು ಮೊತ್ತದ ಟೆಂಡರ್ ಕರೆಯಲಾಗಿತ್ತು, ಈ ಅನರ್ಹ ಕಂಪನಿಗಳಿಗೆ ಟೆಂಡರ್‍‌ ಒದಗಿಸಲು ಎಷ್ಟು  ಮೊತ್ತದ ಕಮಿಷನ್ ಪಾವತಿಯಾಗಿದೆ, ವಿವರ ನೀಡಬೇಕು ಎಂದು ಪ್ರಶ್ನೆ ಕೇಳಿದ್ದರು.

 

ಇದಕ್ಕೆ ಉತ್ತರ ನೀಡಿರುವ ಸಚಿವರು 65 ಎಂಎಂ ಪೋರ್ಜ್ಡ್‌ ಸ್ಟೀಲ್‌ ಗ್ರೈಂಡಿಂಗ್‌ ಮೀಡಿಯಾ ಬಾಲ್ಸ್‌ಗಳ ಖರೀದಿಗೆ 8.10 ಕೋಟಿ ರುಗಳ ಟೆಂಡರ್‍‌ ಕರೆಯಲಾಗಿತ್ತು. ಕಮಿಷನ್‌ ಪಾವತಿಯಾಗಿದೆಯೇ ಎಂಬ ಪ್ರಶ್ನೆಗೆ ‘ಉದ್ಭವಿಸುವುದಿಲ್ಲ’ ಎಂದು ಉತ್ತರ ನೀಡಿದ್ದಾರೆ.

 

 

ಪುನರ್‍‌ ಪರಿಶೀಲನಾ ಪ್ರಾಧಿಕಾರವು ನೀಡಿದ್ದ ಆದೇಶವನ್ನು  ಹಟ್ಟಿ ಚಿನ್ನದ ಗಣಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಪಾಲಿಸುತ್ತಿಲ್ಲ. ಹೀಗಾಗಿ ಹಟ್ಟಿ ಚಿನ್ನದ ಗಣಿ ಕಂಪನಿಯ ಅಧ್ಯಕ್ಷ ಹಾಗೂ ಬೀಳಗಿ ಕ್ಷೇತ್ರದ ಶಾಸಕರೂ ಆಗಿರುವ ಜೆ ಟಿ ಪಾಟೀಲ್‌ ಅವರು ಕಂಪನಿಗಳ ಪರವಾಗಿ ಸರ್ಕಾರದ ಕದ ತಟ್ಟಿದ್ದರು.

 

ಟೆಂಡರ್ ವಿವಾದ; ಪಾಲನೆಯಾಗದ ಪ್ರಾಧಿಕಾರದ ಆದೇಶ, ತೆಲಂಗಾಣ, ಮುಂಬೈ ಕಂಪನಿ ಪರ ಕದ ತಟ್ಟಿದ ಅಧ್ಯಕ್ಷ

 

ಶಕ್ತಿ ಮತ್ತು ರಿಷಿಕಾ ಕೆಮಿಕಲ್ಸ್‌ ಕಂಪನಿಯ ಮೇಲ್ಮನವಿಗಳ ವಿಚಾರಣೆ ನಡೆಸಿದ್ದ ಪುನರ್‍‌ ಪರಿಶೀಲನಾ ಪ್ರಾಧಿಕಾರದ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರು ಹಟ್ಟಿ ಚಿನ್ನದ ಗಣಿ ಕಂಪನಿಯ ಟೆಂಡರ್ ಪರಿಶೀಲನಾ ಸಮಿತಿಯ ಆದೇಶವನ್ನು  ರದ್ದುಗೊಳಿಸಿದ್ದರು.   ಹಾಗೆಯೇ  ಈ ಕಂಪನಿಗಳ ಆರ್ಥಿಕ ಬಿಡ್‌ನ್ನೂ ತೆರೆಯಲು ಆದೇಶಿಸಿದ್ದರು. ಆದರೀಗ ಈ ಆದೇಶವನ್ನು ಹೆಚ್‌ಜಿಎಂಎಲ್‌  ಪಾಲಿಸುತ್ತಿಲ್ಲ.  ಈ ಸಂಬಂಧ ಪ್ರಾಧಿಕಾರದ ಕಾರ್ಯದರ್ಶಿ ಅವರಿಗೆ 2025ರ ನವೆಂಬರ್‍‌ 22ರಂದು  ಪತ್ರ ಬರೆದಿದ್ದರು.

 

 

 

 

 

ಪ್ರಕರಣದ ವಿವರ

 

ಶಕ್ತಿ ಫೋರ್ಜ್ಡ್‌ ಇಂಡಿಯಾ ಮತ್ತು ರಿಶಿಕಾ ಕೆಮಿಕಲ್ಸ್‌ ಕಂಪನಿಗಳನ್ನು ಹಟ್ಟಿ ಚಿನ್ನದ ಗಣಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು, ತಾಂತ್ರಿಕ ಮೌಲ್ಯಮಾಪನ ವರದಿ ಪ್ರಕಾರ ಟೆಂಡರ್‍ (ಟೆಂಡರ್ ಸಂಖ್ಯೆ HGML/2024-25/IND0313 65‌, HGML/2024-25/IND0314 125 ) ನಲ್ಲಿ ಅನರ್ಹಗೊಳಿಸಿದ್ದರು. ಇದನ್ನು ಈ ಎರಡೂ ಕಂಪನಿಗಳು ಪ್ರಶ್ನಿಸಿದ್ದವು.

 

 

ಈ ಅರ್ಜಿಗಳನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಪರಿಶೀಲಿಸಿತ್ತು. ಬಿಡ್‌ದಾರರ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ತಾಂತ್ರಿಕ ಮೌಲ್ಯಮಾಪನವನ್ನೇ ಮರು ಪರಿಶೀಲಿಸಬೇಕು ಎಂದು ಪುನರ್ ಪರಿಶೀಲನಾ ಪ್ರಾಧಿಕಾರದ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರು ನಿರ್ದೇಶಿಸಿದ್ದರು.

 

ಕರ್ನಾಟಕ ಪಾರದರ್ಶಕತೆ ಸಾರ್ವಜನಿಕ ಸಂಗ್ರಹಣೆ ಕಾಯಿದೆ, 1999 ಮತ್ತು ಒಟ್ಟಾರೆ ಆಡಳಿತಾತ್ಮಕ ವಿವೇಚನೆಗೆ ಅನುಗುಣವಾಗಿ ಟೆಂಡರ್ ಪ್ರಕ್ರಿಯೆಯು ನಡೆಯಬೇಕು. ಈ ಸಂಬಂಧ ನಿರ್ದೇಶನಗಳನ್ನು ನೀಡಬೇಕು ಎಂದು ಅರ್ಜಿದಾರರ ಕಂಪನಿಗಳ ಕೋರಿಕೆಗೆ ಇಲಾಖೆಯು ಅತ್ಯಂತ ಮುತುವರ್ಜಿ ವಹಿಸಿತ್ತು ಎಂಬ ಆರೋಪ ಕೇಳಿ ಬಂದಿತ್ತು.

 

ತೆಲಂಗಾಣ, ಮುಂಬೈ ಮೂಲದ ಕಂಪನಿ ಅರ್ಜಿಗಳಿಗೆ ಜಿಂಕೆ ವೇಗ; ತಾಂತ್ರಿಕ ಅನರ್ಹತೆ ಆದೇಶವನ್ನೇ ರದ್ದುಗೊಳಿಸಿದ ಸರ್ಕಾರ

 

ಡೀಲರ್ ಶಿಪ್‌ ಪ್ರಮಾಣ ಪತ್ರ ಮತ್ತು ಅನುಭವ ದಾಖಲಾತಿ ಸೇರಿದಂತೆ ಇನ್ನಿತರೆ ಕೆಲವು ದಾಖಲೆಗಳ ಸ್ವರೂಪ ಮತ್ತು ಸಿಂಧುತ್ವಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಟೆಂಡರ್‍‌ ಪರಿಶೀಲನಾ ಸಮಿತಿಯು ಉಲ್ಲೇಖಿಸಿತ್ತು. ಇದನ್ನಾಧರಿಸಿ ಈ ಎರಡೂ ಕಂಪನಿಗಳು ತಾಂತ್ರಿಕವಾಗಿ ಅರ್ಹವಾಗಿಲ್ಲ ಎಂದು ತನ್ನ ತೀರ್ಮಾನ ಪ್ರಕಟಿಸಿತ್ತು. ಈ ತೀರ್ಮಾನವನ್ನೂ ಸಹ ಪ್ರಾಧಿಕಾರವು ಗಮನಿಸಿತ್ತು.

 

ಕಂಪನಿಗಳ ಈ ಹಿಂದಿನ ಕಾರ್ಯಕ್ಷಮತೆ ಮತ್ತು ಪೂರೈಕೆಯ ಸ್ಥಿರತೆಗೆ ಸಂಬಂಧಿಸಿದಂತೆ ಪ್ರಾಧಿಕಾರವು ಪರಿಶೀಲಿಸಿದೆ. ಈ ಹಿಂದೆ ಇದೇ ಕಂಪನಿಗಳು 65 ಎಂಎಂ ಮತ್ತು 125 ಎಂಎಂ ಫೋರ್ಜ್ಡ್‌ ಮೀಡಿಯಾ ಬಾಲ್ಸ್‌ಗಳನ್ನುಎಚ್‌ಜಿಎಂಎಲ್‌ಗೆ ಮೊದಲೇ ಪೂರೈಸಿದೆ ಎಂದು ಗಮನಿಸಿದೆ. ಬಿಡ್‌ದಾರರ ಪ್ರಾಯೋಗಿಕ ಸಾಮರ್ಥ್ಯ ಮತ್ತು ವಿಶ್ವಾಸಾರ್ಹತೆಯನ್ನು ನಿರ್ಣಯಿಸುವಾಗ ಸಹಜವಾಗಿಯೇ ಪ್ರಸ್ತುತತೆ ಹೊಂದಿದೆ ಎಂದು ಉಲ್ಲೇಖಿಸಿರುವುದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts