ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಹೊಸದಾಗಿ ನೇಮಕಗೊಳ್ಳುವ ಶಿಕ್ಷಕರ ವೇತನ ವೇತನ ಪಾವತಿಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ಲಂಚಕ್ಕೆ ಬೇಡಿಕೆ ಇಡಲಾಗುತ್ತಿದೆ. ಹಲವು ಶಿಕ್ಷಕರು ತಮ್ಮ ವೇತನ ಪಡೆಯಲು 3,000 ರು ಗಳಿಗೂ ಹೆಚ್ಚು ಲಂಚವನ್ನು ನೀಡಿದ್ದಾರೆ!
ಅಷ್ಟೇ ಅಲ್ಲ, ತಮ್ಮದೇ ಬ್ಯಾಂಕ್ ಖಾತೆಗೆ ಆನ್‌ಲೈನ್ ಮೂಲಕ ಹಣವನ್ನು ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ. ಶಿಕ್ಷಕರ ನಿಯೋಜನೆಗೂ ಹಣಕ್ಕಾಗಿ ಬೇಡಿಕೆ ಇರಿಸಲಾಗುತ್ತಿದೆ.
ಹೊಸದಾಗಿ ನೇಮಕವಾಗಿರುವ ಶಿಕ್ಷಕರಿಗೆ ವೇತನ ಪಾವತಿಸಲು ಲಂಚ ವಸೂಲು ಮಾಡುತ್ತಿರುವುದು ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿನ ಲಂಚ ಪ್ರಪಂಚದ ಕುರಿತು ಪ್ರಾಥಮಿಕ ಶಿಕ್ಷಕರ ಬಳಗದ ಹೆಸರಿನಲ್ಲಿ ಹಲವು ಶಿಕ್ಷಕರು ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಲಿಖಿತ ದೂರು ನೀಡಿದ್ದಾರೆ.
ಪಿರಿಯಾಪಟ್ಟಣ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿನ ಪ್ರಥಮದರ್ಜೆ ಗುಮಾಸ್ತ ಮೋಹನ್ ಕುಮಾರ್ ಎಂಬಾತ, ಶಿಕ್ಷಕರಿಗೆ ಹಣದ ಬೇಡಿಕೆ ಇರಿಸಿದ್ದಾರೆ ಎಂದು ಪ್ರಾಥಮಿಕ ಶಿಕ್ಷಕರ ಬಳಗವು ದೂರಿನಲ್ಲಿ ಆರೋಪಿಸಿದೆ. ಈ ಬಗ್ಗೆ ಲೋಕಾಯುಕ್ತ ಕಚೇರಿಗೂ ಸೇರಿದಂತೆ ಇನ್ನಿತರೆ ಸಕ್ಷಮ ಪ್ರಾಧಿಕಾರಗಳಿಗೆ ದೂರುಗಳನ್ನು ನೀಡಿದ್ದರೂ ಸಹ ಮೋಹನ್ ಕುಮಾರ್ ಅವರ ವಿರುದ್ಧ ಯಾವುದೇ ಕ್ರಮವಹಿಸಿಲ್ಲ ಎಂದು ದೂರಿನಲ್ಲಿ ವಿವರಿಸಿದೆ.
ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಗಮನ ಸೆಳೆದಿರುವುದು ದೂರಿನಿಂದ ಗೊತ್ತಾಗಿದೆ. 2025ರ ಅಕ್ಟೋಬರ್ 6ರಂದು ದೂರು ಸಲ್ಲಿಕೆಯಾಗಿದೆ. ಈ ದೂರಿನ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಅಲ್ಲದೇ ಶಿಕ್ಷಕರ ವೇತನದಲ್ಲಿ ಸಾಮಾನ್ಯವಾಗಿ ಕಟಾಯಿಸುವ ಎಲ್‌ಐಸಿ, ಕೆಜಿಐಡಿ, ಜಿಪಿಎಫ್, ಗಳಿಕೆ ರಜೆ ಇತ್ಯಾದಿಗಳನ್ನು ಮಂಜೂರು ಮಾಡಲೂ ಬಿಇಒ ಕಚೇರಿಯಲ್ಲಿ ಶಿಕ್ಷಕರಿಂದ ಹಣ ಸುಲಿಗೆ ಮಾಡಲಾಗುತ್ತಿದೆ ಎಂದು ದೂರಿರುವುದು ಗೊತ್ತಾಗಿದೆ. ಇಂತಹ ಹಲವಾರು ದೂರುಗಳು ನೇರವಾಗಿ ಸಚಿವ ಮಧು ಬಂಗಾರಪ್ಪ ಅವರಿಗೂ ಸಲ್ಲಿಕೆಯಾಗಿವೆ. ಆದರೂ ಇಂತಹ ದೂರುಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ.
‘ಕಚೇರಿಗೆ ಬರುವ ಶಿಕ್ಷಕರಿಗೆ ದಿನನಿತ್ಯ ಅಲೆದಾಡಿಸಲಾಗುತ್ತಿದೆ. ಶಿಕ್ಷಕರಿಗೆ ಸಾಮಾನ್ಯವಾಗಿ ವೇತನದಲ್ಲಿ ಕಟಾವಣೆ ಮಾಡುವ ಎಲ್‌ಐಸಿ, ಕೆಜಿಐಡಿ, ಜಿಪಿಎಫ್ ಅಥವಾ ಗಳಿಕೆ ರಜೆ ಇತ್ಯಾದಿಗಳನ್ನು ಮಂಜೂರು ಮಾಡಲು ಹಣ ಸುಲಿಗೆ ಮಾಡಲಾಗುತ್ತಿದೆ. ಸರಿಯಾದ ದಿನಾಂಕದಲ್ಲಿ ಎಲ್‌ಐಸಿ, ಕೆಜಿಐಡಿ, ಜಿಪಿಎಫ್ ಕಟಾವಣೆ ಮಾಡುತ್ತಿಲ್ಲ, ‘ ಎಂದು ವಿವರಿಸಿರುವುದು ದೂರಿನಿಂದ ತಿಳಿದು ಬಂದಿದೆ.

ಈ ಹಿಂದೆಯೂ ಮೋಹನ್ ಕುಮಾರ್ ಅವರ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು. ಅಲ್ಲದೇ ದೂರುಗಳೂ ಸಹ ಸಲ್ಲಿಕೆಯಾಗಿದ್ದವು. ಆ ಸಂದರ್ಭದಲ್ಲಿ ಪಿರಿಯಾಪಟ್ಟಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ವರ್ಗಾವಣೆ ಮಾಡಲಾಗಿತ್ತು. ನಂತರ 2022ರಲ್ಲಿ ಪುನಃ ಇದೇ ಪಿರಿಯಾಪಟ್ಟಣ ಬಿಇಒ ಕಚೇರಿಗೆ ಪುನಃ ವರ್ಗಾವಣೆಯಾಗಿದ್ದಾರೆ. ಈ ಕಚೇರಿಗೆ ವರ್ಗಾವಣೆಯಾಗಿ ಬಂದ ನಂತರವೂ ಹಿಂದಿನಂತೆಯೇ ಹಣಕ್ಕಾಗಿ ಬೇಡಿಕೆ ಇರಿಸಿದ್ದಾರೆ ಎಂದು ದೂರಿರುವುದು ಗೊತ್ತಾಗಿದೆ.
ಹೊಸ ಶಿಕ್ಷಕರ ವೇತನ ಪಾವತಿಗೂ 3,000 ರು ಲಂಚ
‘ಶಿಕ್ಷಕರು ಕಚೇರಿ ಕೆಲಸಕ್ಕೆ ಹೋದರೆ ಕೆಲಸ ಮಾಡಿಕೊಡುವುದಿಲ್ಲ. ಕಚೇರಿಗೆ ಅಲೆದಾಡಿಸುತ್ತಾರೆ. ಹಣ ನೀಡಿ ಎಂದು ತಮ್ಮ ಬ್ಯಾಂಕ್ ಖಾತೆಗೆ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ಹೊಸದಾಗಿ ನೇಮಕವಾಗಿರು ಶಿಕ್ಷಕರಿಗೆ ವೇತನ ಪಾವತಿ ಮಾಡಲು 3,000 ರು.ಗಳನ್ನು ಪಡೆದಿರುತ್ತಾರೆ,’ ಎಂದು ದೂರಿನಲ್ಲಿ ಆಪಾದಿಸಲಾಗಿದೆ.
ಹಾಗೆಯೇ ಇದೇ ಅಧಿಕಾರಿ, ಪ್ರಾಥಮಿಕ ಶಿಕ್ಷಕರ ವಿಭಾಗವನ್ನೂ ಸಹ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಶಿಕ್ಷಕರ ನಿಯೋಜನೆ ಮಾಡುವುದರಲ್ಲಿಯೂ ಹಣ ಪಡೆಯುತ್ತಿದ್ದಾರೆ. ಅಗತ್ಯವಿಲ್ಲದಿರುವ ಕಡೆ ಮತ್ತು ಕಡಿಮೆ ಮಕ್ಕಳಿರುವ ಶಾಲೆಗಳಿಗೆ ನಿಯೋಜನೆ ಮಾಡಲು ಸಹ ಹಣ ಸುಲಿಗೆ ಮಾಡಲಾಗುತ್ತಿದೆ ಎಂದು ದೂರಲಾಗಿದೆ.
ಕಚೇರಿಯಲ್ಲೇ ಹುಟ್ಟುಹಬ್ಬ
ಸರ್ಕಾರಿ ಕಚೇರಿಗಳಲ್ಲಿ ಸರ್ಕಾರಿ ಅಧಿಕಾರಿ, ನೌಕರರು ಹುಟ್ಟುಹಬ್ಬ ಆಚರಿಸಿಕೊಳ್ಳುವುದನ್ನು ನಿರ್ಬಂಧಿಸಲಾಗಿದೆ. ಆದರೆ ಪಿರಿಯಾಪಟ್ಟಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪ್ರಥಮದರ್ಜೆ ಗುಮಾಸ್ತನಾಗಿರುವ ಮೋಹನ್ ಕುಮಾರ್, ಬಿಇಒ ಕಚೇರಿಯಲ್ಲಿಯೇ ತನ್ನ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಬಗ್ಗೆ ಮೈಸೂರು ಜಿಲ್ಲಾ ಡಿಡಿಪಿಐ ಮತ್ತು ಜಂಟಿ ನಿರ್ದೇಶಕರ ಕಚೇರಿಗೂ ದೂರ ದೂರನ್ನೂ ಸಹ ನೀಡಲಾಗಿತ್ತು. ಆದರೂ ಯಾವುದೇ ಕ್ರಮ ವಹಿಸಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ.

ವಿಶೇಷವೆಂದರೇ ಇದೇ ಪಿರಿಯಾಪಟ್ಟಣ ತಾಲೂಕಿನ ಆರೋಗ್ಯ ಇಲಾಖೆಯ ಸಿಬ್ಬಂದಿಯು ಕಚೇರಿಯಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಅಧಿಕಾರಿ, ನೌಕರರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಆದರೆ ಇದೇ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕೊಠಡಿಯಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ಬಗ್ಗೆ ಫೋಟೋಗಳನ್ನು ನೀಡಿದ್ದರೂ ಸಹ ಯಾವುದೇ ಕ್ರಮವಹಿಸಿಲ್ಲ ಎಂದು ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೀಡಿರುವ ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಪಿಂಚಣಿ ನಿಲ್ಲಿಸುವ ಬೆದರಿಕೆ
ಹೊಸದಾಗಿ ನೇಮಕವಾಗಿರುವ ಶಿಕ್ಷಕರಿಂದ ಲಂಚ ವಸೂಲಿ ಮಾತ್ರವಲ್ಲದೇ ನಿವೃತ್ತವಾಗಿರುವ ಶಿಕ್ಷಕರಿಂದಲೂ ಹಣಕ್ಕೆ ಪೀಡಿಸಲಾಗುತ್ತಿದೆ ಎಂದೂ ದೂರುದಾರರು ಆಪಾದಿಸಿದ್ದಾರೆ. ನಿವೃತ್ತ ಶಿಕ್ಷಕರಿಗೆ ಪಿಂಚಣಿ ಹಣ ಪಾವತಿಗೂ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಒಂದೊಮ್ಮೆ ಹಣ ನೀಡದೇ ಇದ್ದಲ್ಲಿ ಪಿಂಚಣಿಯನ್ನೇ ನಿಲ್ಲಿಸುವ ಬೆದರಿಕೆಯನ್ನು ಒಡ್ಡಲಾಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಿರುವುದು ತಿಳಿದು ಬಂದಿದೆ.

ವರ್ಗಾವಣೆಯಾಗಿ ಹೋಗುವ ಯಾವುದೇ ಶಿಕ್ಷಕರು ಪ್ರಭಾರ ಪಡೆಯದೇ ಇದ್ದರೂ ಸಹ ಅವರನ್ನು ಬೆದರಿಸಲಾಗುತ್ತಿದೆ. ‘ನಿಮ್ಮ ಶಾಲೆ ತಪಾಸಣೆ ಮಾಡಬೇಕಿದೆ’ ಎಂದು ಹೆದರಿಸುತ್ತಾರೆ. ಪ್ರಥಮದರ್ಜೆ ಗುಮಾಸ್ತ ಮೋಹನ್ ಕುಮಾರ್ ಅವರ ಜತೆ ಇದೇ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಮಂಜು ಎಂಬಾತ ಕೂಡ ಶಾಮೀಲಾಗಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
‘ಈ ಇಬ್ಬರೂ ಸೇರಿ ಶಾಲೆಗಳಿಗೆ ತಪಾಸಣೆಗೆ ಹೋಗುತ್ತಿದ್ದಾರೆ. ಮತ್ತು ಹಣ ವಸೂಲಿ ಮಾಡುತ್ತಾರೆ. ಗೂಗಲ್ ಪೇ ಮತ್ತು ಫೋನ್ ಪೇ ಗಳನ್ನು ಪರಿಶೀಲಿಸಿದರೇ ಹಣ ಪಡೆದಿರುವುದು ಗೊತ್ತಾಗುತ್ತದೆ. ಹಾಗೆಯೇ ಕೆಲವೆಡೆ ತಮ್ಮ ಖಾತೆಗೆ ನೇರವಾಗಿ ಹಣವನ್ನು ಶಿಕ್ಷಕರಿಂದ ಪಡೆದಿದ್ದಾರೆ,’ ಎಂದೂ ಪ್ರಾಥಮಿಕ ಶಿಕ್ಷಕರ ಬಳಗವು ದೂರಿನಲ್ಲಿ ಆಪಾದಿಸಿರುವುದು ಗೊತ್ತಾಗಿದೆ.

ಈ ದೂರನ್ನು ಸ್ವೀಕರಿಸಿರುವ ಮುಖ್ಯಮಂತ್ರಿಗಳ ಸಚಿವಾಲಯ ಮತ್ತು ಮುಖ್ಯ ಕಾರ್ಯದರ್ಶಿಗಳ ಕಚೇರಿಯೂ ಯಥಾ ಪ್ರಕಾರ ‘ನಿಯಮಾನುಸಾರ ಸೂಕ್ತ ಕ್ರಮಕ್ಕಾಗಿ,’ ಎಂದು ಷರಾ ಬರೆದು, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ರವಾನೆ ಮಾಡಿ ಕೈತೊಳೆದುಕೊಂಡಿದೆ.









