ಬೆಂಗಳೂರು; ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಸೇರಿದಂತೆ ರಾಜ್ಯದ ಇನ್ನಿತರೆ ಜಿಲ್ಲೆಗಳಲ್ಲಿನ ಕಾರಾಗೃಹಗಳಲ್ಲಿ ನಡೆದಿದೆ ಎನ್ನಲಾಗಿರುವ 15 ಅಕ್ರಮ ಚಟುವಟಿಕೆಗಳಲ್ಲಿ 30 ಮಂದಿ ಜೈಲುಗಳ ಅಧಿಕಾರಿ, ಸಿಬ್ಬಂದಿಗಳೇ ಭಾಗಿಯಾಗಿದ್ದಾರೆ.
ವಿಶೇಷವೆಂದರೇ ದಾವಣಗೆರೆ ಕಾರಾಗೃಹದಲ್ಲಿ ನಡೆದಿದ್ದ ಅಕ್ರಮ ಚಟುವಟಿಕೆಯ ಒಂದು ಪ್ರಕರಣದಲ್ಲಿ 12 ಮಂದಿ ಅಧಿಕಾರಿ, ಸಿಬ್ಬಂದಿಗಳು ಭಾಗಿಯಾಗಿದ್ದರು.
ಜೈಲುಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದನ್ನು ಸ್ವತಹ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ 2025ರ ಆಗಸ್ಟ್‌ನಲ್ಲೇ ಉತ್ತರ ನೀಡಿದ್ದರು.
ವಿಕೃತ ಕಾಮಿ ಉಮೇಶ್ ರೆಡ್ಡಿ ಮತ್ತು ಉಗ್ರನೊಬ್ಬನಿಗೆ ಮೊಬೈಲ್ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಒದಗಿಸಿದ್ದ ವೈರಲ್ ಆಗಿದ್ದ ವಿಡಿಯೋ ಆಧರಿಸಿ ತನಿಖೆಗೆ ಆದೇಶಿಸಿರುವ ಬೆನ್ನಲ್ಲೇ ಬೆಂಗಳೂರಿನ ಪರಪ್ಪನ ಅಗ್ರಹಾರ ಸೇರಿದಂತೆ ಇನ್ನಿತರೆ ಜೈಲುಗಳಲ್ಲಿ 15 ಅಕ್ರಮ ಪ್ರಕರಣಗಳಲ್ಲಿ 30 ಮಂದಿ ಅಧಿಕಾರಿ, ಸಿಬ್ಬಂದಿಗಳು ಭಾಗಿಯಾಗಿದ್ದಾರೆ ಎಂದು ಸರ್ಕಾರವು ನೀಡಿದ್ದ ಉತ್ತರವು ಮುನ್ನೆಲೆಗೆ ಬಂದಿದೆ.
ಕಾರಾಗೃಹಗಳ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಪೊಲೀಸ್ ಇಲಾಖೆಯಿಂದ ನಿಯಮಿತವಾಗಿ ತಪಾಸಣೆ ನಡೆಸಲಾಗುತ್ತದೆ. ತಪಾಸಣೆ ನಡೆಸಿದ್ದ ಸಂದರ್ಭದಲ್ಲಿ ನಿಷೇಧಿತ ವಸ್ತುಗಳಾದ ಮೊಬೈಲ್ ಫೋನ್‌ಗಳು, ಅದರ ಪರಿಕರಗಳು, ನಗದು ಹಣ, ತಂಬಾಕು, ಗಾಂಜಾ ಇತ್ಯಾದಿಗಳು ದೊರಕಿವೆ ಎಂದು ಸರ್ಕಾರವು ಸದನಕ್ಕೆ ಉತ್ತರ ಒದಗಿಸಿತ್ತು.

ತಪಾಸಣೆ ಸಮಯದಲ್ಲಿ ನಿಷೇಧಿತ ವಸ್ತುಗಳು ದೊರೆತ ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದೆ. 2025ರ ಜುಲೈ 31ರವರೆಗೆ ಒಟ್ಟು 269 ಪ್ರಕರಣಗಳು ದಾಖಲಾಗಿವೆ.
ಅಕ್ರಮ ಚಟುವಟಿಕೆಗಳಲ್ಲಿ ಶಾಮೀಲಾಗಿರುವ ಒಟ್ಟು 15 ಪ್ರಕರಣಗಳಲ್ಲಿ 30 ಜನ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಿಸಿ ಅವರುಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು ಕಾರಾಗೃಹದಲ್ಲಿ 04 ಪ್ರಕರಣಗಳಲ್ಲಿ 6 ಮಂದಿ ಅಧಿಕಾರಿ, ಸಿಬ್ಬಂದಿ ಭಾಗಿಯಾಗಿದ್ದಾರೆ. ಬೆಳಗಾವಿಯಲ್ಲಿ 3 ಪ್ರಕರಣಗಳಲ್ಲಿ 3 ಮಂದಿ ಸಿಬ್ಬಂದಿಗಳು ಭಾಗಿಯಾಗಿದ್ದಾರೆ. ಕಲ್ಬುರ್ಗಿ, ಬಳ್ಳಾರಿ ಕಾರಾಗೃಹದಲ್ಲಿನ ನಡೆದ ತಲಾ 1 ಪ್ರಕರಣದಲ್ಲಿ ಒಬ್ಬೊಬ್ಬ ಅಧಿಕಾರಿ, ಸಿಬ್ಬಂದಿ ಭಾಗಿಯಾಗಿದ್ದಾರೆ ಎಂದು ಉತ್ತರ ನೀಡಿತ್ತು.

ಧಾರವಾಡದಲ್ಲಿ 2 ಪ್ರಕರಣಗಳಲ್ಲಿ 3 ಮಂದಿ ಅಧಿಕಾರಿ, ಸಿಬ್ಬಂದಿ ಭಾಗಿಯಾಗಿದ್ದರೇ ದಾವಣಗೆರೆ ಕಾರಾಗೃಹದಲ್ಲಿ 01 ಪ್ರಕರಣದಲ್ಲಿ 12 ಮಂದಿ ಅಧಿಕಾರಿ, ಸಿಬ್ಬಂದಿ ಭಾಗಿಯಾಗಿದ್ದಾರೆ. ಮಂಗಳೂರಿನಲ್ಲಿ 2 ಪ್ರಕರಣಗಳಲ್ಲಿ ಇಬ್ಬರು ಅಧಿಕಾರಿ, ಸಿಬ್ಬಂದಿ, ಹೂವಿನಹಡಗಲಿ ಕಾರಾಗೃಹದಲ್ಲಿ 01 ಪ್ರಕರಣದಲ್ಲಿ ಇಬ್ಬರು ಅಧಿಕಾರಿ, ಸಿಬ್ಬಂದಿ ಭಾಗಿಯಾಗಿದ್ದಾರೆ. ಒಟ್ಟಾರೆ 15 ಪ್ರಕರಣಗಳಲ್ಲಿ 30 ಮಂದಿ ಅಧಿಕಾರಿ, ಸಿಬ್ಬಂದಿ ಭಾಗಿಯಾಗಿದ್ದಾರೆ.
ಕಾರಾಗೃಹ ಮತ್ತು ಸುಧಾರಣೆ ಸೇವಾ ಇಲಾಖೆಯಲ್ಲಿ ಉಗ್ರರಿಗೆ ಸಹಕಾರ ನೀಡಿದ ಆರೋಪದಲ್ಲಿ ಪ್ರಸ್ತುತ ಯಾವುದೇ ಅಧಿಕಾರಿ, ಸಿಬ್ಬಂದಿಗಳು ಭಾಗಿಯಾಗಿರುವುದಿಲ್ಲ. ಆದರೆ ಅನ್ಯ ಸೇವೆ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯಾಧಿಕಾರಿ, ಉಗ್ರರಿಗೆ ಸಹಕಾರ ನೀಡಿದ ಆರೋಪದಲ್ಲಿ ಭಾಗಿಯಾಗಿರುವುದನ್ನು ಸರ್ಕಾರವು ಒಪ್ಪಿಕೊಂಡಿತ್ತು.

ಬೆಂಗಳೂರು ಕೇಂದ್ರ ಕಾರಾಗೃಹ ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅನ್ಯ ಸೇವೆ ಮೇಲೆ ಮನೋ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ ನಾಗರಾಜ್ ಎಸ್ ಅವರು ಆರೋಪಕ್ಕೆ ಗುರಿಯಾಗಿದ್ದರು. ಇವರ ವಿರುದ್ಧ ಎನ್‌ಐಎ ಪ್ರಕರಣ ಎಫ್‌ಐಆರ್ ಆರ್‍ಸಿ 28/2023 ಅಕ್ಟೋಬರ್ 25ರಂದು ದಾಖಳಾಗಿದ್ದ ಪ್ರಕರಣದ ತನಿಖೆಯಲ್ಲಿ 2025ರ ಜುಲೈ 8ರಂದು ದಸ್ತಗಿರಿಯಾಗಿದ್ದಾರೆ. ಅವರನ್ನೂ ಸಹ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿತ್ತು.
ಉಗ್ರರಿಗೆ ಸಹಕಾರ ನೀಡಿದ ಆರೋಪದಲ್ಲಿ ಬೆಂಗಳೂರು ನಗರ ದಕ್ಷಿಣ ವಿಭಾಗದ ಎಆರ್‍ಎಸ್‌ಐ ಚಾಂದ್ ಪಾಷಾ ಅವರ ವಿರುದ್ಧ ಆರ್ ಸಿ ಸಂಖ್ಯೆ 28/2023 ಎಎನ್‌ಡಿಎ ಡಿಎಲ್‌ಐ ರಲ್ಲಿ ಪ್ರಕರಣ ದಾಖಲಾಗಿ ದಸ್ತಗಿರಿ ಆಗಿದ್ದಾರೆ. ಆದ ಕಾರಣ ಅವರನ್ನು 2025ರ ಜುಲೈ 9ರಂದು ಅಮಾನತುಗೊಳಿಸಿ ಇಲಾಖೆ ವಿಚಾರಣೆಗೆ ಆದೇಶಿಸಿದೆ.
ಎನ್‌ಐಎ ಬಂಧಿಸಿರುವ ಚಾಂದ್ ಪಾಷಾ, ಜೈಲಿನಲ್ಲಿರುವ ಉಗ್ರ ನಾಸೀರ್ ಮತ್ತು ಇತರೆ ಶಂಕಿತರನ್ನು ಜೈಲಿನಿಂದ ನ್ಯಾಯಾಲಯಗಳಿಗೆ ಕರೆದೊಯ್ಯುವಾಗ ಎಸ್ಕಾರ್ಟ್‌ನಿರ್ವಹಿಸುತ್ತಿದ್ದ, ಈ ವೇಳೆ ಅವರು ಹಣ ಪಡೆದುಕೊಳ್ಳಲು ನೆರವು ನೀಡುತ್ತಿದ್ದ. ಶಂಕಿತ ಸಲ್ಮಾನ್‌ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ. ಎರಡು ವರ್ಷದ ಹಿಂದೆ ಸಲ್ಮಾನ್ ತಪ್ಪಿಸಿಕೊಳ್ಳಲು ನೆರವು ನೀಡಿದ್ದ ವಿಚಾರ ಎನ್‌ಐಎ ತನಿಖೆ ವೇಳೆ ಗೊತ್ತಾಗಿತ್ತು.

ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಮನೋ ವೈದ್ಯ ಡಾ.ನಾಗರಾಜ್ ಜೈಲಲ್ಲಿರುವ ಉಗ್ರ, ಶಂಕಿತ ಉಗ್ರರು ಸೇರಿ ಕೈದಿಗಳಿಗೆ ಮೊಬೈಲ್ ಕೊಟ್ಟು 10 – 50 ಸಾವಿರ ರು.ವರೆಗೂ ಹಣ ಪಡೆ ಯುತ್ತಿದ್ದ ವಿಚಾರ ಎನ್‌ಐಎ ತನಿಖೆ ಯಲ್ಲಿ ಬೆಳಕಿಗೆ ಬಂದಿತ್ತು. ಉಗ್ರರಿಗೆ ನೆರವು ಆರೋಪದಡಿ ಎನ್‌ಐಎ ಮಂಗಳವಾರ ಬೆಂಗಳೂರು ನಗರ ಮತ್ತು ಕೋಲಾರದ 5 ಕಡೆ ದಾಳಿ ನಡೆಸಿ ಕೇಂದ್ರ ಕಾರಾಗೃಹದ ಮನೋವೈದ್ಯ ಡಾ.ನಾಗರಾಜ್, ಸಿಎಆರ್ ಎಎಸ್‌ಐ ಚಾಂದ್ ಪಾಷಾ ಹಾಗೂ ಶಂಕಿತ ಉಗ್ರ ಜುನೈದ್ ಅಹಮದ್‌ನ ತಾಯಿ ಅನೀಸ್ ಫಾತಿಮಾಳನ್ನು ಬಂಧಿಸಿದ್ದರು.
ನಾಗರಾಜ್ ಹಣದಾಸೆಗೆ ಜೈಲಿನಲ್ಲಿರುವ ಲಷ್ಕರ್-ಎ-ತೊಯ್ದಾ(ಎಲ್‌ಇಟಿ) ಉಗ್ರ ಸಂಘಟನೆಯ ಟಿ.ನಾಸೀರ್, ಇತರೆ ಕೈದಿಗಳಿಗೆ ಮೊಬೈಲ್ ಮಾರಾಟ ಮಾಡಿದ್ದ. ಇದಕ್ಕೆ ತನ್ನ ಸಹಾಯಕಿ ಪವಿತ್ರಾ ರನ್ನುಬಳಸಿಕೊಂಡಿದ್ದ, 2-3 ಸಾವಿರ ರು. ಬೆಲೆಯ ಮೊಬೈಲ್ ಗಳನ್ನು 10 ಸಾವಿರ ರು.ನಿಂದ 50 ಸಾವಿರ ರೂಪಾಯಿವರೆಗೆ ಮಾರಾಟ ಮಾಡಿದ್ದ. ಈ ಮೊಬೈಲ್‌ಗಳನ್ನು ಬಳಸಿಕೊಂಡು ಉಗ್ರ ನಾಸೀರ್ ಉಗ್ರ ಕೃತ್ಯಕ್ಕೆ ಸಂಚು ರೂಪಿಸಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿತ್ತು.
ಜೈಲಿನಲ್ಲಿಂದಲೇ ಉಗ್ರ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದ ಆರೋಪದಡಿ ಸಿಸಿಬಿ ಪೊಲೀಸರು 2023ರಲ್ಲಿ ಸುಲ್ತಾನ್‌ಪಾಳ್ಯ, ಭದ್ರಪ್ಪ ಲೇಔಟ್ ಸೇರಿ ವಿವಿಧೆಡೆ ದಾಳಿ ನಡೆಸಿ ಐವರು ಶಂಕಿತರನ್ನು ಬಂಧಿಸಿದ್ದರು. ಆರೋಪಿಗಳ ಮನೆಯಲ್ಲಿ ಗ್ರಾನೈಡ್, ಮದ್ದುಗುಂಡುಗಳು, ಸೇರಿ ಸ್ಫೋಟಕ ಜಪ್ತಿ ಮಾಡಿದ್ದರು. ತನಿಖೆ ಆರಂಭಿಸಿದ್ದ ಎನ್‌ಐಎ ಅಧಿಕಾರಿಗಳು ಲಷ್ಕರ್‌ನ ಭಾರತದ ಕಮಾಂಡರ್ ಕೇರಳದ ನಾಸೀರ್‌ನನ್ನು ಪತ್ತೆ ಹಚ್ಚಿದ್ದರು.
ನಾಸೀರ್, ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣ ಸೇರಿ 30ಕ್ಕೂ ಅಧಿಕ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಕೆಲ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರದ ಜೈಲಲ್ಲಿದ್ದಾನೆ. ಜೈಲಿನಲ್ಲಿದ್ದೇ ಉಗ್ರ ಚಟುವಟಿಕೆ ನಡೆಸಲು ಸಂಚು ರೂಪಿಸುತ್ತಿದ್ದ ಎಂಬ ಆರೋಪವಿದೆ.
ಕಾರಾಗೃಹಗಳಲ್ಲಿ ಸುಧಾರಿಸದ ಆಡಳಿತ; ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿ ಮೂಲೆಗುಂಪು
ಕಾರಾಗೃಹಗಳಲ್ಲಿ ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯೂ ಸಹ ವರದಿ ನೀಡಿತ್ತು. ಆದರೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ವರದಿಯನ್ನಾಧರಿಸಿ ಯಾವುದೇ ಬಿಗಿಯಾದ ಕ್ರಮವನ್ನು ಕೈಗೊಂಡಿರಲಿಲ್ಲ. ಈ ಬಗ್ಗೆ ದಿ ಫೈಲ್ ವರದಿ ಪ್ರಕಟಿಸಿತ್ತು.









