ಬೆಂಗಳೂರು; ಮಹತ್ವಾಕಾಂಕ್ಷೆ ತಾಲೂಕುಗಳ ಅಡಿಯಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಕಟ್ಟಡಗಳ ನಿರ್ಮಾಣ, ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಲ್ಲೊಂದಾಗಿರುವ ಜಲಜೀವನ್ ಮಿಷನ್ (ಗ್ರಾಮೀಣ ಕುಡಿಯುವ ನೀರು) ಸೇರಿದಂತೆ ಹಲವು ಇಲಾಖೆಗಳಿಗೆ 2025ರ ನವಂಬರ್ 15ರ ಅಂತ್ಯದವರೆಗೂ ನಯಾ ಪೈಸೆಯನ್ನೂ ಬಿಡುಗಡೆ ಮಾಡಿಲ್ಲ.
ವಿಶೇಷವೆಂದರೇ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಅಡಿಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯು ಅನುಷ್ಠಾನಗೊಳಿಸಿರುವ ಜಲಜೀವನ್ ಮಿಷನ್ ( ಗ್ರಾಮೀಣ ಕುಡಿಯುವ ನೀರು) ಯೋಜನೆಗೆ ಕೇಂದ್ರ ಸರ್ಕಾರವು 5,000 ಕೋಟಿ ರು ಅನುದಾನ ಒದಗಿಸಿಕೊಂಡಿತ್ತು. ಆದರೆ ಕೇಂದ್ರ ಸರ್ಕಾರವು ಬಿಡಿಗಾಸನ್ನೂ ನೀಡಿಲ್ಲ ಎಂದು ರಾಜ್ಯ ಸರ್ಕಾರದ ಕೆಡಿಪಿ ಸಭೆಗೆ ಅಂಕಿ ಅಂಶಗಳನ್ನು ಮಂಡಿಸಿದೆ.
ಜಲಜೀವನ್ ಮಿಷನ್‌ಗೆ ರಾಜ್ಯ ಸರ್ಕಾರವು ಹಣವನ್ನೇ ಬಿಡುಗಡೆ ಮಾಡಿಲ್ಲ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಅವರು ಈಚೆಗೆ ಹೇಳಿಕೆ ನೀಡಿದ್ದರ ಬೆನ್ನಲ್ಲೇ ಮಹತ್ವಾಕಾಂಕ್ಷೆ ತಾಲೂಕುಗಳ ಅಡಿಯಲ್ಲಿನ ಜಲಜೀವನ್ ಮಿಷನ್‌ಗೆ ರಾಜ್ಯ ಸರ್ಕಾರವು ಬಿಡಿಗಾಸನ್ನೂ ನೀಡದೇ ಇರುವುದು ಮತ್ತು ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಡಿಯಲ್ಲಿ ಜಲಜೀವನ್ ಮಿಷನ್‌ಗೆ ಕೇಂದ್ರವು ಒದಗಿಸಿಕೊಂಡಿದ್ದ 5,000 ಕೋಟಿ ರು ನಲ್ಲಿ ನಯಾಪೈಸೆಯನ್ನೂ ಬಿಡುಗಡೆ ಮಾಡಿಲ್ಲ ಎಂಬುದು ಮುನ್ನೆಲೆಗೆ ಬಂದಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ 2025ರ ನವೆಂಬರ್ 20ರಂದು ನಡೆದಿದ್ದ ಕೆಡಿಪಿ ಸಭೆಯಲ್ಲಿ ಮಹತ್ವಾಕಾಂಕ್ಷೆ ತಾಲೂಕುಗಳಡಿ ಸಾಧಿಸಿರುವ ಆರ್ಥಿಕ ಪ್ರಗತಿಯ ಕುರಿತು ಚರ್ಚೆಯಾಗಿದೆ. ಈ ಸಂಬಂಧ ಇಲಾಖೆಗಳು ಸಭೆಗೆ ಒದಗಿಸಿದ್ದ ಅಂಕಿ ಅಂಶಗಳ ಕುರಿತು ಸಭೆಯಲ್ಲಿ ಚರ್ಚಿಸಿರುವುದು ಗೊತ್ತಾಗಿದೆ.
2025ರ ನವಂಬರ್ 20ರಂದು ನಡೆದಿದ್ದ ಸಭೆಗೆ ಇಲಾಖೆಗಳು ಮಂಡಿಸಿದ್ದ ಅಂಕಿ ಅಂಶಗಳ ವಿವರಗಳು ‘ದಿ ಫೈಲ್’ಗೆ ಲಭ್ಯವಾಗಿವೆ.

2025-26ನೇ ಸಾಲಿನಲ್ಲಿ ಮಹತ್ವಾಕಾಂಕ್ಷೆ ತಾಲೂಕುಗಳಡಿಯಲ್ಲಿ 12 ಇಲಾಖೆಗಳಿಗೆ 3,475.66 ಕೋಟಿ ರು ಅನುದಾನ ಒದಗಿಸಿಕೊಂಡಿತ್ತು. ಈ ಪೈಕಿ ನವೆಂಬರ್ 15ರ ಅಂತ್ಯಕ್ಕೆ 1,110.57 ಕೋಟಿ ರು ಬಿಡುಗಡೆ ಮಾಡಿತ್ತು. ಇದರಲ್ಲಿ 857.18 ಕೋಟಿ ರು ವೆಚ್ಚ ಮಾಡಿತ್ತು. ಬಿಡುಗಡೆಯಾಗಿದ್ದ ಅನುದಾನದಲ್ಲಿ ಶೇ.24.66ರಷ್ಟು ವೆಚ್ಚ ಮಾಡಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಮಹತ್ವಾಕಾಂಕ್ಷೆ ತಾಲೂಕುಗಳಡಿ ಜಲಜೀವನ್ ಮಿಷನ್ ಯೋಜನೆಗೆ ಬಜೆಟ್‌ನಲ್ಲಿ 750 ಕೋಟಿ ರು ಅಂದಾಜಿಸಲಾಗಿತ್ತು. ಈ ಪೈಕಿ ಬಿಡಿಗಾಸನ್ನೂ ನೀಡಿಲ್ಲ. ಹೀಗಾಗಿ ಶೂನ್ಯ ವೆಚ್ಚ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯು ಕೆಡಿಪಿ ಸಭೆಗೆ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಡಿಯಲ್ಲಿ ಜಲಜೀವನ್ ಮಿಷನ್ ಯೋಜನೆಗೆ ರಾಜ್ಯ ಸರ್ಕಾರವು 5,450.00 ಕೋಟಿ ರು, ಕೇಂದ್ರ ಸರ್ಕಾರವು 5,000 ಕೋಟಿ ರು. , ಪ್ರಾರಂಭಿಕ ಶಿಲ್ಕು 604.12 ಕೋಟಿ ರು ಸೇರಿ ಒಟ್ಟು 11,054.12 ಕೋಟಿ ರು ಅನುದಾನವಿತ್ತು. ಈ ಪೈಕಿ ರಾಜ್ಯ ಸರ್ಕಾರವು 1,353.00 ಕೋಟಿ ರು ಬಿಡುಗಡೆ ಮಾಡಿದ್ದರೇ ಕೇಂದ್ರ ಸರ್ಕಾರವು ನಯಾಪೈಸೆಯನ್ನು ಬಿಡುಗಡೆ ಮಾಡಿರಲಿಲ್ಲ.

ಹಾಗೆಯೇ ಕೇಂದ್ರದಿಂದ ಈ ಯೋಜನೆಗೆ 2,500 ಕೋಟಿ ರು ಬಿಡುಗಡೆಗೆ ಬಾಕಿ ಇದೆ ಎಂದು ಕೆಡಿಪಿ ಸಭೆಗೆ ಇಲಾಖೆಯು ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.
ಅದೇ ರೀತಿ ಜಲಜೀವನ್ ಮಿಷನ್ (ಇಎಪಿ 9496) ಅಡಿ 120 ಕೋಟಿ ರು ಮತ್ತು ಪ್ರಾರಂಭಿಕ ಶಿಲ್ಕು 5 ಕೋಟಿ ರು ಸೇರಿ 125 ಕೋಟಿ ರು ಅನುದಾನವಿತ್ತು. ಈ ಪೈಕಿ ನವೆಂಬರ್ 15ರ ಅಂತ್ಯಕ್ಕೆ ಕೇವಲ 30 ಕೋಟಿ ರು.ಗಳನ್ನು ಮಾತ್ರ ಬಿಡುಗಡೆ ಮಾಡಿತ್ತು.

ಮಹತ್ವಾಕಾಂಕ್ಷೆ ತಾಲೂಕುಗಳೂ ಸೇರಿದಂತೆ ಗ್ರಾಮೀಣಾಭಿವೃದ್ದಿ ಇಲಾಖೆಯು ವಿವಿಧ ಲೆಕ್ಕಶೀರ್ಷಿಕೆಗಳ ಮೂಲಕ 2024-25ನೇ ಸಾಲಿನಲ್ಲೂ ಜಲಜೀವನ್ ಮಿಷನ್ ಯೋಜನೆಗೆ 4,773.64 ಕೋಟಿ ರು ಬಿಡುಗಡೆ ಬಾಕಿ ಉಳಿಸಿಕೊಂಡಿತ್ತು.
ಜಲಜೀವನ್ ಮಿಷನ್ ಜಟಾಪಟಿ; ಜನವರಿ 2025ರ ಅಂತ್ಯಕ್ಕೆ 4,773.64 ಕೋಟಿ ಬಿಡುಗಡೆಗೆ ಬಾಕಿ, ಅಂಕಿ ಅಂಶ ಬಹಿರಂಗ
2024-25ನೇ ಸಾಲಿನ ಜನವರಿ 2025ರ ಅಂತ್ಯಕ್ಕೆ ಗ್ರಾಮೀಣಾಭಿವೃದ್ದಿ ಇಲಾಖೆಯ ಕಾರ್ಯಕ್ರಮವಾರು ಹಂಚಿಕೆಯಾಗಿರುವ ಅನುದಾನ, ಬಿಡುಗಡೆ ಮತ್ತು ಮಾಡಿರುವ ವೆಚ್ಚದ ವಿವರಗಳ ಕುರಿತು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯ ಸಭೆಯು ಚರ್ಚಿಸಿದೆ. 2025ರ ಫೆ.15ರಂದು ನಡೆದ ಸಭೆಯಲ್ಲಿ ಜಲ ಜೀವನ್ ಮಿಷನ್ ಯೋಜನೆಗೆ ವಿವಿಧ ಲೆಕ್ಕ ಶೀರ್ಷಿಕೆಗಳಡಿಯಲ್ಲಿ ಎಷ್ಟೆಷ್ಟು ಮೊತ್ತವು ಬಿಡುಗಡೆಯಾಗಿದೆ ಎಂದು ಇಲಾಖೆ ಅಧಿಕಾರಿಗಳು ಅಂಕಿ ಅಂಶಗಳ ಸಮೇತ ವಿವರ ಒದಗಿಸಿದ್ದರು.
ಇಲಾಖಾಧಿಕಾರಿಗಳು ಮಂಡಿಸಿರುವ ಅಂಕಿ ಅಂಶಗಳ ಪ್ರಕಾರ 2024-25ನೇ ಸಾಲಿಗೆ ಜಲಜೀವನ್ ಮಿಷನ್ ಯೋಜನೆಗೆ ವಿವಿಧ ಲೆಕ್ಕ ಶೀರ್ಷಿಕೆಗಳಡಿಯಲ್ಲಿ ಒಟ್ಟಾರೆ 10,.594.14 ಕೋಟಿ ರು ಅನುದಾನ ಒದಗಿಸಿಕೊಂಡಿತ್ತು. ಈ ಪೈಕಿ 5,820.5 ಕೋಟಿ ರು ಅನುದಾನ ಬಿಡುಗಡೆಯಾಗಿತ್ತು. ಇದರಲ್ಲಿ 2025ರ ಜನವರಿ ಅಂತ್ಯಕ್ಕೆ 5,790.55 ಕೋಟಿ ರು ವೆಚ್ಚವಾಗಿತ್ತು. ಬಿಡುಗಡೆಯಾಗಿದ್ದ ಅನುದಾನಕ್ಕೆ ಹೋಲಿಸಿದರೆ ಹೆಚ್ಚುವರಿಯಾಗಿ 29.95 ಕೋಟಿ ರು ವೆಚ್ಚ ಮಾಡಿತ್ತು.
ಜಲಜೀವನ್ ಮಿಷನ್ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಸಚಿವ ವಿ ಸೋಮಣ್ಣ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ಕಳೆದ ವರ್ಷವೂ ಜಟಾಪಟಿ ನಡೆದಿತ್ತು
ಮಹತ್ವಾಕಾಂಕ್ಷೆ ತಾಲೂಕುಗಳಡಿಯಲ್ಲಿ ಜಲಜೀವನ್ ಮಿಷನ್ ಯೋಜನೆಯ ಗ್ರಾಮೀಣ ಕುಡಿಯುವ ನೀರು ಯೋಜನೆಗೆ ಕೇಂದ್ರ ಪುರಸ್ಕೃತ ಅಡಿಯಲ್ಲಿ ಕೇಂದ್ರವು ತನ್ನ ಆಯವ್ಯಯದಲ್ಲಿ 300.00 ಕೋಟಿ ರು ಒದಗಿಸಿಕೊಂಡಿತ್ತು. ಆದರೆ 2025ರ ಜನವರಿ ಅಂತ್ಯಕ್ಕೆ ಬಿಡಿಗಾಸನ್ನೂ ಬಿಚ್ಚಿಲ್ಲ. ಹೀಗಾಗಿ ಈ ತಾಲೂಕುಗಳಲ್ಲಿ ಜಲಜೀವನ್ ಮಿಷನ್ ಯೋಜನೆಗೆ ಶೂನ್ಯ ವೆಚ್ಚವಾಗಿದೆ.
ಜಲಜೀವನ್ ಮಿಷನ್‌ಗೆ ಅನುದಾನ ಬಿಡುಗಡೆ ಸಂಬಂಧ ಕೇಂದ್ರ ಸಚಿವ ವಿ ಸೋಮಣ್ಣ ಅವರು ರಾಜ್ಯ ಸರ್ಕಾರದ ಮೇಲೆ ಆರೋಪ ಹೊರಿಸಿದ್ದರು. ಜಲಜೀವನ್ ಮಿಷನ್‌ಗೆ ರಾಜ್ಯ ಸರ್ಕಾರವು ಹಣವನ್ನೇ ಬಿಡುಗಡೆ ಮಾಡಿಲ್ಲ ಎಂದು ವಿ ಸೋಮಣ್ಣ ಅವರು ನೀಡಿದ್ದ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಳ್ಳಿ ಹಾಕಿದ್ದರು. ಅಲ್ಲದೇ ಜಲಜೀವನ್ ಮಿಷನ್ ಯೋಜನೆಗೆ ರಾಜ್ಯ ಸರ್ಕಾರವು ಬಿಡುಗಡೆ ಮಾಡಿದ್ದ ಅನುದಾನದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದರು.
ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದ್ದ ಅಂಕಿ ಅಂಶಗಳ ಪ್ರಕಾರ ಜಲಜೀವನ್ ಮಿಷನ್‌ಗೆ ಒಟ್ಟು 49, 262 ಕೋಟಿ ರು ಹಂಚಿಕೆಯಾಗಿತ್ತು. ಇದರಲ್ಲಿ ಕೇಂದ್ರ ಸರ್ಕಾರವು 26,119 ಕೋಟಿ ಮತ್ತು ರಾಜ್ಯ ಸರ್ಕಾರವು 23,142 ಕೋಟಿ ರು ಸೇರಿತ್ತು. ಈ ಪೈಕಿ ಕೇಂದ್ರವು 11,760 ಕೋಟಿ ರು, ರಾಜ್ಯ ಸರ್ಕಾರವು 20,442 ಕೋಟಿ ರು ಬಿಡುಗಡೆ ಮಾಡಿತ್ತು. ಒಟ್ಟಾರೆ 32,202ಕೋಟಿ ರು ಬಿಡುಗಡೆಯಾಗಿತ್ತು.

ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ್ದ ಪ್ರತಿಯೊಂದು ರುಪಾಯಿಯನ್ನೂ ರಾಜ್ಯ ಸರ್ಕಾರವು ಸಂಪೂರ್ಣವಾಗಿ ಬಳಸಿಕೊಂಡಿದೆ. ಆದರೆ ಮೋದಿ ಸರ್ಕಾರವು ರಾಜ್ಯದ ಪಾಲಿನ ಹಣ ಬಿಡುಗಡೆ ಮಾಡಲು ಕುಂಟು ನೆಪ ನೀಡುತ್ತಲೇ ಬರುತ್ತಿದೆ. ಅರ್ಹ ಪಾಲನ್ನು ನೀಡಲು ನಿರಾಕರಿಸುತ್ತಿದೆ ಎಂದು ತಿರುಗೇಟು ನೀಡಿದ್ದರು.

ಮಹತ್ವಾಕಾಂಕ್ಷೆ ತಾಲೂಕುಗಳಡಿಯಲ್ಲಿ ಉನ್ನತ ಶಿಕ್ಷಣ ಇಲಾಖೆಯಡಿಯಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಕಟ್ಟಡಗಳಿ ನಿರ್ಮಾಣಕ್ಕೆ 27.78 ಕೋಟಿ ರ.ಗಳನ್ನು ಆಯವ್ಯಯದಲ್ಲಿ ಅಂದಾಜಿಸಿತ್ತು. ಆದರೆ ನವೆಂಬರ್ 15ರ ಅಂತ್ಯಕ್ಕೆ ನಯಾಪೈಸೆಯನ್ನೂ ಬಿಡುಗಡೆ ಮಾಡಿರಲಿಲ್ಲ. ಅದೇ ರೀತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಐಸಿಡಿಎಸ್ ಯೋಜನೆಗೆ ಒಟ್ಟಾರೆ 216.98 ಕೋಟಿ ರು ಅಂದಾಜಿಸಿತ್ತು. ಆದರೆ ನವೆಂಬರ್ 15ರ ಅಂತ್ಯಕ್ಕೆ ಈ ಯೋಜನೆಗೆ ರಾಜ್ಯ ಸರ್ಕಾರವು ಬಿಡಿಗಾಸನ್ನೂ ನೀಡಿರಲಿಲ್ಲ.
ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಗೆ ಮಹತ್ವಾಕಾಂಕ್ಷೆ ತಾಲೂಕುಗಳಡಿ ಕಾರ್ಯಕ್ರಮಕ್ಕೆ 99.98 ಕೋಟಿ ರು ಅನುದಾನವಿತ್ತು. ನವೆಂಬರ್ 15ರ ಅಂತ್ಯಕ್ಕೆ 61.40 ಕೋಟಿ ರು ಬಿಡುಗಡೆ ಮಾಡಿತ್ತು. ಇದೇ ಯೋಜನೆಯಡಿಯಲ್ಲಿ ಮೂಲಭೂತ ಸೌಕರ್ಯಗಳಿಗಾಘಿ 30 ಕೋಟಿ ರು ಅನುದಾನದ ಪೈಕಿ ರಾಜ್ಯ ಸರ್ಕಾರವು ತನ್ನ ಪಾಲಿನಲ್ಲಿ ಕೇವಲ 4.19 ಕೋಟಿ ರು ಬಿಡುಗಡೆ ಮಾಡಿತ್ತು. ಕೇಂದ್ರ ಸರ್ಕಾರವು 20 ಕೋಟಿ ರು ಪೈಕಿ ಕೇವಲ 2.80 ಕೋಟಿ ರು ನೀಡಿತ್ತು.
ಕ್ಷೀರಭಾಗ್ಯ ಯೋಜನೆಗೆ 234 ಕೋಟಿ ರು ಅನುದಾನವಿದ್ದರೂ ಸಹ ನವೆಂಬರ್ 15ರ ಹೊತ್ತಿಗೆ 48.02 ಕೋಟಿ ರು ಮಾತ್ರ ಬಿಡುಗಡೆ ಮಾಡಿತ್ತು. ಇದರಲ್ಲಿ 14.38 ಕೋಟಿ ರು ವೆಚ್ಚ ಮಾಡಿತ್ತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ ಕಟ್ಟಡಗಳ ನಿರ್ಮಾಣಕ್ಕೆ 35 ಕೋಟಿ ರು ಅನುದಾನದ ಪೈಕಿ ಕೇವಲ 8.75 ಕೋಟಿ ರು ಮಾತ್ರ ಬಿಡುಗಡೆ ಮಾಡಿತ್ತು. ಬಿಡುಗಡೆ ಮಾಡಿದ್ದ ಈ ಅನುದಾನದಲ್ಲಿ ಬಿಡಿಗಾಸನ್ನೂ ಖರ್ಚು ಮಾಡಿರಲಿಲ್ಲ.
ಜಲಧಾರೆ, ಜಲಜೀವನ್ ಮಿಷನ್, ಗ್ರಾಮೀಣಾಭಿವೃದ್ಧಿಗೆ 37,621.96 ಕೋಟಿ ರು.ಗಳ ಬೇಡಿಕೆ
ಜಲಧಾರೆ, ಜಲಜೀವನ್ ಮಿಷನ್‌ಗೆ ಗ್ರಾಮೀಣಾಭಿವೃದ್ಧಿ ಇಲಾಖೆಯು 2024-25ನೇ ಸಾಲಿನಲ್ಲಿ 37,621.96 ಕೋಟಿ ರು ಗಳ ಬೇಡಿಕೆ ಇಟ್ಟಿತ್ತು.
ನಿಗದಿಯಾಗದ ಏಕರೂಪ ದರ; ಜಲಜೀವನ್ ಮಿಷನ್ ಕಾಮಗಾರಿಗಳ ಅಂದಾಜು ವೆಚ್ಚದಲ್ಲಿ ಕೋಟ್ಯಂತರ ಏರಿಕೆ
ಜಲಜೀವನ್ ಮಿಷನ್ ಯೋಜನೆಯಲ್ಲಿನ ಕಾಮಗಾರಿಗಳಿಗೆ ಏಕರೂಪ ದರ ನಿಗದಿಯಾಗಿರಲಿಲ್ಲ. ಹೀಗಾಗಿ ಅಂದಾಜು ವೆಚ್ಚದಲ್ಲಿ ಕೋಟ್ಯಂತರ ರುಪಾಯಿ ಏರಿಕೆಯಾಗಿತ್ತು.
ಜೆಜೆಎಂನಲ್ಲಿ ಕಳಪೆ ಕಾಮಗಾರಿ ಬಹಿರಂಗ; ಮನೆಮನೆಗೆ ಗಂಗೆ ಯೋಜನೆಯಲ್ಲಿ ಭ್ರಷ್ಟಾಚಾರ ಸಾಬೀತು
ಹಾಗೆಯೆ ಜೆಜೆಎಂ ಯೋಜನೆಡಿಯಲ್ಲಿ ಮನೆ ಮನೆಗೆ ಗಂಗೆ ಕಾರ್ಯಕ್ರಮದಲ್ಲೂ ಭ್ರಷ್ಟಾಚಾರದ ವಾಸನೆ ಹರಡಿತ್ತು.









