ನಿಗದಿಯಾಗದ ಏಕರೂಪ ದರ; ಜಲಜೀವನ್‌ ಮಿಷನ್‌ ಕಾಮಗಾರಿಗಳ ಅಂದಾಜು ವೆಚ್ಚದಲ್ಲಿ ಕೋಟ್ಯಂತರ ಏರಿಕೆ

photo credit; vijayakarnataka

ಬೆಂಗಳೂರು; ಜಲಜೀವನ್‌ ಮಿಷನ್‌ ಯೋಜನೆಯಡಿ 2024ರೊಳಗಾಗಿ ಎಲ್ಲಾ ಗ್ರಾಮೀಣ ಜನವಸತಿಗಳಿಗೆ ನಳ ನೀರು ಸಂಪರ್ಕದ ಮುಖಾಂತರ ಕನಿಷ್ಠ 55 ಎಲ್‌ಪಿಸಿಡಿಯ ನಿಗದಿತ ಗುಣಮಟ್ಟ (ಬಿಐಎಸ್‌ 10500) ನೀರನ್ನು ಉದ್ದೇಶಿಸಿ ಕೈಗೆತ್ತಿಕೊಳ್ಳಲಾಗಿರುವ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಸಂಬಂಧಿಸಿದಂತೆ ಇನ್ನೂ ಏಕರೂಪ ದರಪಟ್ಟಿ ನಿಗದಿಯಾಗಿಲ್ಲ.

 

ಏಕರೂಪ ದರ ಪಟ್ಟಿ ಕಾರ್ಯರೂಪಕ್ಕೆ ಬಾರದೇ ಇರುವ ಕಾರಣ ಕಾಮಗಾರಿ ನಡೆಸಲು ಬೇಕಾಗಿರುವ ಸಿಮೆಂಟ್‌, ಉಕ್ಕು ಮತ್ತು ಪೈಪ್‌ಗಳ ಖರೀದಿ ದರದ ಅಂದಾಜು ವೆಚ್ಚದಲ್ಲಿ ಕೋಟ್ಯಂತರ ರುಪಾಯಿ ಏರಿಕೆ ಆಗುತ್ತಿರುವುದು ಆರ್ಥಿಕವಾಗಿ ಹೆಚ್ಚಿನ ಪರಿಣಾಮಗಳಿಗೆ ಕಾರಣವಾಗಿದೆ ಎಂಬುದು ಇದೀಗ ಬಹಿರಂಗವಾಗಿದೆ.

 

ಜಲಜೀವನ್‌ ಮಿಷನ್‌ ಯೋಜನೆಯಡಿ ರಾಜ್ಯದ ಎಂಟು ಜಿಲ್ಲೆಗಳ 6,358 ಜನವಸತಿಗಳಿಗೆ ನಲ್ಲಿ ಮೂಲಕ ಕುಡಿಯುವ ನೀರು ಪೂರೈಸಲು 4,400.66 ಕೋಟಿ ಮೊತ್ತಕ್ಕೆ ಸಚಿವ ಸಂಪುಟವು ಅನುಮೋದನೆ ನೀಡಿದ ಬೆನ್ನಲ್ಲೇ ಇದೇ ಯೋಜನೆಯಡಿ ಕಾಮಗಾರಿ ನಡೆಸಲು ಸಿಮೆಂಟ್‌, ಸ್ಟೀಲ್‌, ಪೈಪ್‌ ಗಳ ಖರೀದಿಗೆ ಏಕರೂಪ ದರಪಟ್ಟಿ ನಿಗದಿಪಡಿಸದಿರುವುದು ಮುನ್ನೆಲೆಗೆ ಬಂದಿದೆ. ಏಕರೂಪ ನಿಗದಿಪಡಿಸುವ ಸಂಬಂಧ ಸಚಿವ ಕೆ ಎಸ್‌ ಈಶ್ವರಪ್ಪ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿಲ್ಲ ಎಂದು ತಿಳಿದು ಬಂದಿದೆ.

 

ಹಾಸನ ಜಿಲ್ಲೆ ಅರಕಲಗೂಡು, ಹೊಳೆನರಸೀಪುರ, ಬೇಲೂರು, ಆಲೂರು, ಚನ್ನರಾಯಪಟ್ಟಣ ಮತ್ತು ಹಾಸನ ತಾಲ್ಲೂಕುಗಳ 2,396 ಗ್ರಾಮ ಗಳಿಗೆ ಒಟ್ಟು 1,475 ಕೋಟಿ ವೆಚ್ಚದಲ್ಲಿ ನೀರು ಪೂರೈಸುವ ಐದು ಕಾಮಗಾರಿಗಳ ಅಂದಾಜು ಪಟ್ಟಿಗೆ ಸಂಪುಟವು ಈಗಾಗಲೇ ಅನುಮೋದನೆ ನೀಡಿದೆ.

 

ಈ ಪೈಕಿ ಹಾಸನ ಜಿಲ್ಲೆಯ ಆಲೂರು, ಬೇಲೂರು, ಹಾಸನ ಮತ್ತು ಸಕಲೇಶಪುರ ತಾಲೂಕು ವ್ಯಾಪ್ತಿಯ 1,477 ಗ್ರಾಮೀಣ ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಂದಾಜು ವೆಚ್ಚದಲ್ಲಿ ಗಣನೀಯ ಏರಿಕೆ ಆಗುತ್ತಿದೆ ಎಂಬ ಸಂಗತಿಯನ್ನು ಆರ್ಥಿಕ ಇಲಾಖೆಯ ಮುಂದೆ ಆಡಳಿತ ಇಲಾಖೆಯು ತಿಳಿಸಿದೆ. ಈ ಸಂಬಂಧ ಆರ್ಥಿಕ ಇಲಾಖೆಯ ಟಿಪ್ಪಣಿ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

2020-21ನೇ ಸಾಲಿಗೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯ ಆಲೂರು, ಬೇಲೂರು, ಹಾಸನ ಮತ್ತು ಸಕಲೇಶಪುರ ತಾಲೂಕುಗಳ ಗ್ರಾಮೀಣ ಜನವಸತಿಗಳಿಗೆ ಹೇಮಾವತಿ ಮೂಲದಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಸಂಬಂಧ 2021ರ ಆಗಸ್ಟ್‌ 18ರಂದು ನಡೆದಿದ್ದ ಎಸ್‌ಎಲ್‌ಎಸ್‌ಎಸ್‌ಸಿ ಸಭೆಯಲ್ಲಿ ಒಟ್ಟು 503.00 ಕೋಟಿ ರು. ಗೆ ಅನುಮೋದನೆ ದೊರೆತಿತ್ತು.

 

ಆರ್ಥಿಕ ಇಲಾಖೆಯ ಟಿಪ್ಪಣಿ ಪ್ರತಿ

 

717.66 ಕೋಟಿ ರು.ಗಳ ಪ್ರಾಥಮಿಕ ಯೋಜನಾ ವರದಿ (ಪಿಎಸ್‌ಆರ್‌)ಗೆ 2021ರ ಡಿಸೆಂಬರ್‌ 9ರಂದು ರಾಜ್ಯ ತಾಂತ್ರಿಕ ಸಮಿತಿಯು ತಾತ್ವಿಕ ಅನುಮೋದನೆ ನೀಡಿತ್ತು. ಇದಾದ ನಂತರ ನಡೆದ 4ನೇ ಅಪೆಕ್ಸ್‌ ಸಮಿತಿಯ ಸಭೆಯಲ್ಲಿ 19,617.54 ಕೋಟಿ ರು. ಮೊತ್ತದ ಕ್ರಿಯಾ ಯೋಜನೆ ಪ್ರಸ್ತಾವನೆಗೆ ತಾತ್ವಿಕ ಒಪ್ಪಿಗೆ ದೊರೆತಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

‘ರಾಜ್ಯದಾದ್ಯಂತ ಏಕರೂಪ ಪಟ್ಟಿಯು ಕಾರ್ಯರೂಪಕ್ಕೆ ಬಾರದಿದ್ದರಿಂದ ಸಿಮೆಂಟ್‌,ಸ್ಟೀಲ್‌ ಮತ್ತು ಪೈಪುಗಳಿಗೆ ಇಲಾಖೆಯಿಂದ ದರಗಳನ್ನು ನಿಗದಿಪಡಿಸಲಾಗುತ್ತಿದೆ. ಹೀಗಾಗಿ ಪ್ರಾಥಮಿಕ ಯೋಜನಾ ವರದಿ (ಪಿಎಸ್‌ಆರ್‌) ಮೊತ್ತವು 805.60 ಕೋಟಿ ರು.ಗಳಿಗೆ ಪರಿಷ್ಕೃತವಾಗಿರುತ್ತದೆ. ಪಿಎಸ್‌ಆರ್‌ ಮೊತ್ತದಲ್ಲಿ ದರ ಹೊಂದಾಣಿಕೆಯಲ್ಲಿ ಮಾರ್ಪಾಟುಗಳನ್ನು ಮಾಡಿದ ನಂತರ 810.00 ಕೋಟಿ ರು.ಗೆ ಅನುಷ್ಠಾನಗೊಳಿಸಲು ಕೋರಲಾಗಿದೆ,’ ಎಂದು ಸಚಿವ ಸಂಪುಟ ಟಿಪ್ಪಣಿಯಲ್ಲಿ ವಿವರಿಸಲಾಗಿದೆ.

 

ಯೋಜನಾ ವೆಚ್ಚ 810.00 ಕೋಟಿರಗಳಲ್ಲಿ ಜಲ್‌ ಜೀವನ್‌ ಮಿಷನ್‌ ಅಡಿ 357.58 ಕೋಟಿ ಮತ್ತು ಯೋಜನೆಯ 5 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಸೇರಿದಂತೆ ರಾಜ್ಯ ಸರ್ಕಾರದಿಂದ 452.42 ಕೋಟಿ ರು ಗಳನ್ನು ಬಳಕೆ ಮಾಡಿಕೊಳ್ಳಲು ಆಡಳಿತ ಇಲಾಖೆಯು ಪ್ರಸ್ತಾಪಿಸಿತ್ತು.

 

ಜಲಜೀವನ್‌ ಮಿಷನ್‌ ಯೋಜನೆಯಡಿ ರಾಜ್ಯದ ಎಂಟು ಜಿಲ್ಲೆಗಳ 6,358 ಜನವಸತಿಗಳಿಗೆ ನಲ್ಲಿ ಮೂಲಕ ಕುಡಿಯುವ ನೀರು ಪೂರೈಸಲು 4,400.66 ಕೋಟಿ ವೆಚ್ಚದಲ್ಲಿ 17 ಕಾಮಗಾರಿಗಳನ್ನು ಕೈಗೊಳ್ಳುವ ಪ್ರಸ್ತಾವಕ್ಕೆ ಸಂಪುಟ ಸಭೆಯು ಇತ್ತೀಚೆಗಷ್ಟೇ ಮಂಜೂರಾತಿ ನೀಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲುದಾರಿಕೆಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ. ರಾಜ್ಯ ಸರ್ಕಾರದ ಪಾಲು ಮತ್ತು ಫಲಾನುಭವಿಗಳ ವಂತಿಕೆಯನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ಇದಕ್ಕಾಗಿ ವಿಶ್ವ ಬ್ಯಾಂಕ್‌ನಿಂದ ₹ 4,500 ಕೋಟಿ ಸಾಲ ಪಡೆದು ಬಳಸಿಕೊಳ್ಳಲಿದೆ ಎಂದು ಸಚಿವ ಸಂಪುಟ ಸಭೆ ನಂತರ ಸಚಿವ ಜೆ ಸಿ ಮಾಧುಸ್ವಾಮಿ ಅವರು ಹೇಳಿದ್ದನ್ನು ಸ್ಮರಿಸಬಹುದು.

 

ಉಡುಪಿ ಜಿಲ್ಲೆಯ ಕಾರ್ಕಳ, ಹೆಬ್ರಿ ಮತ್ತು ಕಾಪು ತಾಲ್ಲೂಕಿನ 1,904 ಜನವಸತಿಗಳಿಗೆ ನೀರು ಪೂರೈಸುವ 1,215 ಕೋಟಿ ವೆಚ್ಚದ ಕಾಮಗಾರಿ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆ ಪಟ್ಟಣ ಮತ್ತು ಇತರ 21 ಗ್ರಾಮೀಣ ಜನವಸತಿಗಳಿಗೆ ಕುಡಿಯುವ ನೀರು ಒದಗಿಸುವ 367.65 ಕೋಟಿ ವೆಚ್ಚದ ಕಾಮಗಾರಿಗಳಿಗೆ ಸಂಪುಟ ಒಪ್ಪಿಗೆ ನೀಡಿತ್ತು.

 

ರಾಮನಗರ ಜಿಲ್ಲೆಯ 1,041 ಜನವಸತಿಗಳಿಗೆ 825 ಕೋಟಿ ವೆಚ್ಚದಲ್ಲಿ ನೀರು ಒದಗಿಸುವ ಎರಡು ಕಾಮಗಾರಿಗಳಿಗೂ ಮಂಜೂರಾತಿ ನೀಡಿದೆ. ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ 61 ಜನವಸತಿಗಳಿಗೆ ನೀರು ಪೂರೈಸುವ 131.21 ಕೋಟಿ ವೆಚ್ಚದ ಕಾಮಗಾರಿ, ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಶಿವಮೊಗ್ಗ ತಾಲ್ಲೂಕಿನ 349 ಜನವಸತಿಗಳಿಗೆ ನೀರು ಒದಗಿಸುವ 104.73 ಕೋಟಿ ವೆಚ್ಚದ ಕಾಮಗಾರಿ, ಚಿಕ್ಕಬಳ್ಳಾಪುರ ಜಿಲ್ಲೆಯ 41 ಜನವಸತಿಗಳಿಗೆ 28.30 ಕೋಟಿ ವೆಚ್ಚದ ಎರಡು ಕಾಮಗಾರಿಗಳು ಹಾಗೂ ಉತ್ತರ ಕನ್ನಡ ಜಿಲ್ಲೆ ಅಂಕೋಲಾ, ಕಾರವಾರ ಮತ್ತು ಕುಮಟಾ ತಾಲ್ಲೂಕಿನ 349 ಜನವಸತಿಗಳಿಗೆ ನೀರು ಪೂರೈಸುವ 253.77 ಕೋಟಿ ವೆಚ್ಚದ ಮೂರು ಕಾಮಗಾರಿಗಳಿಗೂ ಒಪ್ಪಿಗೆ ದೊರಕಿದೆ.

the fil favicon

SUPPORT THE FILE

Latest News

Related Posts