ಬೆಂಗಳೂರು; ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 2023-24ನೇ ಸಾಲಿನ ವಾರ್ಷಿಕ ಲೆಕ್ಕಪತ್ರದ ಪ್ರಕಾರ ಸ್ಥಿರಾಸ್ತಿಗಳ ಪ್ರಾರಂಭಿಕ ಶಿಲ್ಕು 438.54 ಕೋಟಿ ರು ಗಳಿವೆ. ಇದೇ ವರ್ಷದಲ್ಲಿ 19.20 ಕೋಟಿ ರು ಸವಕಳಿ ಒಳಗೊಂಡಂತೆ ಅಂತಿಮವಾಗಿ 442.03 ಕೋಟಿ ರು ಮೌಲ್ಯದ ಸ್ಥಿರಾಸ್ತಿ ಇದೆ. ಆದರೆ ಸ್ಥಿರಾಸ್ತಿ ಹಾಗೂ ಚರಾಸ್ತಿಗಳಿಗೆ ಸಂಬಂಧಿಸಿದಂತೆ ಹಿಂದಿನ ಸಾಲಿನಿಂದಲೂ ಆಸ್ತಿ ವಹಿ ಹಾಗೂ ವಾರ್ಷಿಕ ಭೌತಿಕ ಆಸ್ತಿಗಳ ವಿವರಗಳನ್ನು ಒದಗಿಸಿಲ್ಲ.
2023-24ನೇ ಸಾಲಿಗೆ ಸಂಬಂಧಿಸಿದಂತೆ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನಾ ಇಲಾಖೆಯು ಪೂರ್ಣಗೊಳಿಸಿರುವ ವರದಿಯು, ವಿಶ್ವವಿದ್ಯಾಲಯದ ಆರ್ಥಿಕ ಅಶಿಸ್ತಿನ ವಿವಿಧ ಮುಖಗಳನ್ನು ತೆರೆದಿಟ್ಟಿದೆ. ಲೆಕ್ಕ ಪರಿಶೋಧನೆ ವರದಿಯು ಈಗಾಗಲೇ ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಲ್ಲಿಕೆಯಾಗಿದೆ.
ಆದರೂ ಈ ಬಗ್ಗೆ ಸಚಿವ ಡಾ ಶರಣ ಪ್ರಕಾಶ್ ಪಾಟೀಲ್ ಅವರು ವರದಿ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿಲ್ಲ ಎಂದು ಗೊತ್ತಾಗಿದೆ.
ಈ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

ಸ್ಥಿರಾಸ್ತಿ, ಚರಾಸ್ತಿ ಮತ್ತು ಒಟ್ಟಾರೆ ಆಸ್ತಿ ವಹಿಗಳಿಗೆ ಸಂಬಂಧಿಸಿದಂತೆ ವಿವರಗಳನ್ನು ಒದಗಿಸದೇ ಇರುವುದಕ್ಕೆ ಲೆಕ್ಕ ಪರಿಶೋಧಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವುದು ವರದಿಯಿಂದ ಗೊತ್ತಾಗಿದೆ.
ಯಾವುದೇ ವಿವರಗಳನ್ನು ನೀಡದ ಕಾರಣ ಜಮೀನು, ಕಟ್ಟಡ, ಪೀಠೋಪಕರಣ, ವಾಹನ, ಕಂಪ್ಯೂಟರ್ ಹಾಗೂ ಇತರೆ ಸ್ಥಿರಾಸ್ತಿಗಳ ಮೌಲ್ಯವನ್ನು ಯಾವ ಮಾನದಂಡದ ಆಧಾರದ ಮೇಲೆ ನಿರ್ಧರಿಸಲಾಗಿದೆ ಎಂದು ಲೆಕ್ಕ ಪರಿಶೋಧಕರು ದೃಢೀಕರಿಸಿಲ್ಲ.
ಹಾಗೆಯೇ ಆಸ್ತಿಗಳ ಮೌಲ್ಯದ ಮೇಲೆ ಸವಕಳಿ ಕಳೆದು 442 ಕೋಟಿ 03 ಲಕ್ಷ ಗಳ ಸ್ಥಿರಾಸ್ತಿ ಅಂತಿಮ ಶಿಲ್ಕನ್ನು ತೋರಿಸಿರುವ ಕುರಿತು ವಿವರಣೆ, ನಿರ್ವಹಿಸಿರುವ ಆಸ್ತಿ ವಹಿಯನ್ನು ಮತ್ತು ಸ್ಥಿರಾಸ್ತಿಗಳ ಮೌಲ್ಯವನ್ನು ದೃಢೀಕರಿಸಿ ನೀಡಬೇಕು ಎಂದು 2024ರ ಅಕ್ಟೋಬರ್ 5ರಂದೇ ಕೋರಿತ್ತು. ಆದರೆ ವಿಶ್ವವಿದ್ಯಾಲಯವು ಈ ಸಂಬಂಧ ಯಾವುದೇ ಮಾಹಿತಿಯನ್ನೂ ಒದಗಿಸಿಲ್ಲ. ಹೀಗಾಗಿ ಸ್ಥಿರಾಸ್ತಿಗಳ ಮೌಲ್ಯವನ್ನು ದೃಢೀಕರಿಸಲು ಸಾಧ್ಯವಾಗಿಲ್ಲ ಎಂದು ಲೆಕ್ಕಪರಿಶೋಧಕರು ವರದಿಯಲ್ಲಿ ದಾಖಲಿಸಿರುವುದು ತಿಳಿದು ಬಂದಿದೆ.

ಟಿಡಿಎಸ್ ಮತ್ತು ಟಿಸಿಎಸ್ ಬಗ್ಗೆ ದಾಖಲೆ ಒದಗಿಸಿಲ್ಲ
ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 2023-24ಏಸಾಲಿನ ಅಂತ್ಯಕ್ಕೆ 7,76,87,297 ರು.ಗಳನ್ನು ಬ್ಯಾಂಕ್ ಬಡ್ಡಿಗಳ ಮೇಲಿನ ಕಟಾವಣೆಯಾದ ಆದಾಯ ತೆರಿಗೆ ಎಂದು ನಮೂದಿಸಿತ್ತು. ಈ ಆದಾಯ ತೆರಿಗೆಯನ್ನು ಹಿಂಪಡೆಯಲು ಸಂಸ್ಥೆಯು ಪ್ರತೀ ವರ್ಷ ನಿಗದಿತ ಸಮಯದಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿ ಹಿಂಪಡೆಯಬೇಕು. 2010-11ರಿಂದ 2013-14ನೇ ಸಾಲುಗಳ ರಿಟರ್ನ್ ಪ್ರತಿಗಳು ವಿಶ್ವವಿದ್ಯಾಲಯದಲ್ಲಿ ಲಭ್ಯವೇ ಇಲ್ಲ.

ಹೀಗಾಗಿ ಟಿಡಿಎಸ್ ಮತ್ತು ಟಿಸಿಎಸ್ ಅಡಿ ತೋರಿಸಿರುವ ಮೊತ್ತವನ್ನು ದೃಢೀಕರಿಸಲು ಲೆಕ್ಕ ಪರಿಶೋಧನೆಗೆ ಸಾಧ್ಯವಾಗಿಲ್ಲ ಎಂದು ವರದಿಯಲ್ಲಿ ವಿವರಿಸಿದೆ.

ಟ್ಯಾಕ್ಸ್ ಡಿಪಾಸಿಟ್
2013-14ನೇ ಸಾಲಿನಿಂದ 2023-24ನೇ ಸಾಲಿನ ಅಂತ್ಯಕ್ಕೆ 64,52,41,588 ರು.ಗಳನ್ನು ಮೇಲ್ಮನವಿ ಸಂದರ್ಭದಲ್ಲಿ ಜಮೆ ಮಾಡಿದ ಆದಾಯ ತೆರಿಗೆ ಎಂದು ನಮೂದಿಸಿದೆ.

ಈ ಮೊತ್ತಕ್ಕೆ ಸಂಬಂಧಿಸಿದಂತೆ ಆಧಾಯ ತೆರಿಗೆ ಜಮೆ ಆದ ಬಗ್ಗೆ ದಾಖಲೆ, ಆದಾಯ ತೆರಿಗೆ ಇಲಾಖೆಯ ನೋಟೀಸ್ ಪ್ರತಿ, ಮೊಕದ್ದಮೆ ಯಾವ ಹಂತದಲ್ಲಿದೆ ಎಂಬ ವಿವರ ಮತ್ತು ಮೊಕದ್ದಮೆಗೆ ಸಂಬಂಧಿಸಿದ ಇತರೆ ದಾಖಲಾತಿಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ. ಹೀಗಾಗಿ ಆದಾಯ ತೆರಿಗೆ ಇಲಾಖೆಗೆ ಪಾವತಿಯಾದ ಮೊತ್ತ ವಿಶ್ವವಿದ್ಯಾಲಯಕ್ಕೆ ಮರು ಭರಣೆ ಆಗುವವರೆಗೆ ಧೃಢೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಮುಂಗಡಗಳ ವಿವರಗಳನ್ನೂ ಒದಗಿಸದ ವಿವಿ
ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 2023-24ನೇ ಸಾಲಿನ ವಾರ್ಷಿಕ ಲೆಕ್ಕಪತ್ರದ ಪ್ರಕಾರ ಮುಂಗಡಗಳನ್ನು ರಿಕವರಿ ಮಾಡಬಲ್ಲ 9,14,20.020 ರು.ಗಳನ್ನು ಒಳಗೊಂಡಿತ್ತು. ಹಲವು ಸಾಲುಗಳಿಂದಲೂ ಈ ಮೊತ್ತವನ್ನು ಬಾಕಿ ಉಳಿಸಿಕೊಂಡಿರುವ ಕುರಿತು ವಿವರಣೆಯನ್ನು ಲೆಕ್ಕ ಪರಿಶೋಧನೆಗೆ ಒದಗಿಸಬೇಕು ಎಂದು ಲೆಕ್ಕ ವಿಚಾರಣೆ ಪತ್ರ ಹೊರಡಿಸಿದ್ದರೂ ಸಹ ವಿಶ್ವವಿದ್ಯಾಲಯವು ಒದಗಿಸಿಲ್ಲ.

ಎಂಎಸ್‌ಐಎಲ್‌ನ ಮುಂಗಡಕ್ಕೆ ಸಂಬಂಧಿಸಿದಂತೆ 2023-24ನೇ ಸಾಲಿನ ಅಂತ್ಯದಲ್ಲಿ 3,50, 00,000.00 ರು ಬಾಕಿ ಇತ್ತು. ವಸೂಲಾತಿಗೆ ಬಾಕಿ ಇರುವ ಈ ಮೊತ್ತವನ್ನು 2019-20ನೇ ಸಾಲಿನಲ್ಲಿ ಆಕ್ಷೇಪಣೆಯಲ್ಲಿಟ್ಟಿತ್ತು. ಈ ಮೊತ್ತವನ್ನು ಹೊಂದಾಣಿಕೆ ಮಾಡಿರುವ ಕುರಿತು ವಿಶ್ವವಿದ್ಯಾಲಯವು ಅನುಸರಣೆ ಒದಗಿಸಿದೆ. ನಂತರ ಲೆಕ್ಕ ಪರಿಶೋಧಕರು ಇದರ ಲೆಡ್ಜರ್‍ನ್ನು ಪರಿಶೀಲಿಸಿದ್ದಾರೆ.

ಎಂಎಸ್‌ಐಎಲ್ ಸಲ್ಲಿಸಿದ್ದ ಬಿಲ್‌ಗಳನ್ನು ವಿಶ್ವವಿದ್ಯಾಲಯದ ಆಂತರಿಕ ಲೆಕ್ಕ ಪರಿಶೋಧಕರು ಪರಿಶೀಲನೆ ನಡೆಸಿದ್ದರು. ಇದರ ಪ್ರಕಾರ 3,50, 00,000.00 ರು ಬಿಲ್ ಹೊಂದಾಣಿಕೆ ಮಾಡದೇ ಬಾಕಿ ಉಳಿಸಿಕೊಂಡಿತ್ತು. ಹೀಗಾಗಿ ಈ ವಿಷಯದ ಬಗ್ಗೆ ಅಂತಿಮ ನಿರ್ಣಯ ಆಗಿಲ್ಲ.
ಹೊಂದಾಣಿಕೆ ಮಾಡದೇ ಬಾಕಿ ಉಳಿಸಿಕೊಂಡಿದ್ದ 3,50, 00,000.00 ರು ಮುಂಗಡದ ಬಗ್ಗೆ ಹಿಂದಿನ ಲೆಕ್ಕ ಪರಿಶೋಧನಾ ಅವಧಿಯಲ್ಲಿ ಆಕ್ಷೇಪಣೆಗೆ ಸೂಚಿಸಿತ್ತು. ಆದರೂ ಸಹ ಯಾವುದೇ ಕ್ರಮ ವಹಿಸಿಲ್ಲ ಎಂದು ಲೆಕ್ಕ ಪರಿಶೋಧಕರು ಅಸಮಾಧಾನ ವ್ಯಕ್ತಪಡಿಸಿರುವುದು ವರದಿಯಿಂದ ಗೊತ್ತಾಗಿದೆ.
ಸಿಂಡಿಕೇಟ್ ಚುನಾವಣೆಗೆ ಮುಂಗಡ
ಸಿಂಡಿಕೇಟ್ ಚುನಾವಣೆ ಮಾಡಲು 72,53,528 ರು.ಗಳನ್ನು ಮುಂಗಡ ನೀಡಿತ್ತು. ಈ ಮೊತ್ತವನ್ನು 2020-21ನೇ ಸಾಲಿನಲ್ಲಿ ವಸೂಲಿಗಿಟ್ಟಿತ್ತು. ಚುನಾವಣೆ ನಡೆಸಲು ಪ್ರಸಾದ್ ರೆಡ್ಡಿ ಎಂಬುವರಿಗೆ 2021ರ ಅಕ್ಟೋಬರ್ 27ರಲ್ಲಿ 25,00,000.00, 2021ರ ನವಂಬರ್ 4ಲ್ಲಿ 25,00,000.00, 20221ರ ನವೆಂಬರ್11ರಲ್ಲಿ 18,00,000.000 ಹಾಗೂ 2022ರ ಫೆ.8ರಂದು 4,53,528 ರು ಸೇರಿ ಒಟ್ಟಾರೆ 72,53,528 ರುಗ.ಳನ್ನು ಮುಂಗಡವಾಗಿ ನೀಡಿತ್ತು.
ಮೊದಲನೇ ಕಂತು ಹೊಂದಾಣಿಕೆ ಆಗದೇ ಇದ್ದರೂ ಸಹ 2ನೇ , 3ನೇ ಮತ್ತು 4ನೇ ಕಂತಿನ ಹಣವನ್ನು ನೀಡಿತ್ತು. ಅಲ್ಲದೇ ಸಿಂಡಿಕೇಟ್ ಚುನಾವಣೆ ಪ್ರಕ್ರಿಯೆಗಾಗಿ ಒಟ್ಟು ಮುಂಗಡ 72,53,528 ರು.ಗಳನ್ನು ವಿಶ್ವವಿದ್ಯಾಲಯದಿಂದ ಭರಿಸಲು ಮತ್ತು ಇದಕ್ಕೆ ಅವಕಾಶ ಇದೆಯೇ ಇಲ್ಲವೇ ಎಂಬ ಬಗ್ಗೆ ಹಾಗೂ ಸರ್ಕಾರದ ಅನುಮೋದನೆ ಪಡೆದ ಪತ್ರದ ವಿವರಗಳೇ ಇರಲಿಲ್ಲ. ಹೀಗಾಗಿ ಒಟ್ಟಾರೆ 72,53,528 ರು ಹೊಂದಾಣಿಕೆಯಾಗಿಲ್ಲ. ಹೀಗಾಗಿ ಈ ಮೊತ್ತವನ್ನು 2022-23ರನೇ ಲೆಕ್ಕ ಪರಿಶೋಧನಾ ವರದಿಯಲ್ಲಿ ಆಕ್ಷೇಪಣೆಯಲ್ಲಿಟ್ಟಿರುವುದು ವರದಿಯಿಂದ ತಿಳಿದು ಬಂದಿದೆ.
ಚಿಕ್ಕಬಳ್ಳಾಪುರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲ್ದರ್ಜೆಗೇರಿಸಲು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಹೆಸರಿನಲ್ಲಿ 4,91,53,180 ರು.ಗಳನ್ನು ಠೇವಣಿ ಇಟ್ಟಿತ್ತು. ಪಿಎಚ್‌ಸಿ ಮೇಲ್ದರ್ಜೆಗೇರಿಸಲು ಮುಂಗಡವಾಗಿ ನೀಡಿದ್ದ 10,00,00,000.00 ರುಗಳಿಗೆ ಹೊಂದಾಣಿಕೆಮಾಡಿ ರು 5,08,46,820ರು.ಗಳಿಗೆ ಉಪಯುಕ್ತತಾ ಪ್ರಮಾಣ ಪತ್ರ ಪಡೆದಿತ್ತು.
2024ರ ಮಾರ್ಚ್ 31ರ ಅಂತ್ಯಕ್ಕೆ 4,91,53,180 ರು.ಗಳು ಬಾಕಿ ಇತ್ತು. ಮುಂಗಡ ಹಣ ಹೊಂದಾಣಿಕೆಯಾಗದೇ ಇರುವುದನ್ನು 2022-23ನೇ ಸಾಲಿನಲ್ಲಿಯೇ ಆಕ್ಷೇಪಣೆಗೆ ಸೂಚಿಸಿತ್ತು. ಆದರೂ ಸಹ ವಿಶ್ವವಿದ್ಯಾಲಯವು ಯಾವುದೇ ಕ್ರಮ ವಹಿಸಿಲ್ಲ. ಈ ಸಾಲಿನಲ್ಲಿಯೂ ಈ ಮೊತ್ತವನ್ನೂ 2022-23ನೇ ಸಾಲಿನಲ್ಲಿ ಆಕ್ಷೇಪಣೆಯಲ್ಲಿಟ್ಟಿದೆ. ಅದೇ ರೀತಿ ವೆಂಡರ್ಸ್‌ಗಳಿಗೆ ನೀಡಿದ್ದ 13,312 ರು.ಗಳನ್ನೂ ಸಹ ವಸೂಲಾತಿಗಿಟ್ಟಿದೆ.
ರಾಮನಗರದಲ್ಲಿ 400 ಕೋಟಿ ಅನುತ್ಪಾದಕ ವೆಚ್ಚ; ಟೆಂಡರ್ ಪೂರ್ವ ಪರಿಶೀಲನಾ ಸಮಿತಿ ಅಭಿಪ್ರಾಯ ಬದಿಗೊತ್ತಿದ್ದೇಕೆ?
ರಾಮನಗರದ ಅರ್ಚಕರಹಳ್ಳಿಯಲ್ಲಿಉದ್ದೇಶಿತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕಟ್ಟಡ ಕ್ಯಾಂಪಸ್ ಮತ್ತು ಕಾಲೇಜು ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಟೆಂರ್ ಪೂರ್ವ ಪರಿಶೀಲನಾ ಸಮಿತಿಯು ನೀಡಿದ್ದ ಸಲಹೆ, ಶಿಫಾರಸ್ಸನ್ನು ಅನುಷ್ಠಾನಗೊಳಿಸಿರಲಿಲ್ಲ. ಈ ಕುರಿತು ‘ದಿ ಫೈಲ್‘ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.









