ಬೆಂಗಳೂರು; ರಾಜ್ಯದಲ್ಲಿ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಬೆಲೆಬಾಳುವ ಸರ್ಕಾರಿ ಜಮೀನನ್ನು ಹರಾಜು ಮಾಡುವುದು ಸಮಂಜಸವಲ್ಲ ಎಂದು ಕಂದಾಯ ಇಲಾಖೆಯು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗೆ ವರ್ಷದ ಹಿಂದೆಯೇ ಬರೆದಿದ್ದ ಪತ್ರವು ಇದೀಗ ಬಹಿರಂಗವಾಗಿದೆ.
ಆಡಳಿತ ಇಲಾಖೆಗಳ ವಶದಲ್ಲಿರುವ ಆಸ್ತಿಗಳ ನಗದೀಕರಣ ಮಾಡಿಕೊಂಡು ಸಂಪನ್ಮೂಲ ಕ್ರೋಢೀಕರಣ ಮಾಡಲು ಸಮಿತಿಯು ಶಿಫಾರಸ್ಸು ಮಾಡಿರುವ ಬೆನ್ನಲ್ಲೇ ಸರ್ಕಾರಿ ಜಮೀನುಗಳನ್ನು ಹರಾಜು ಮೂಲಕ ಮಾರಾಟ ಮಾಡುವ ಸಂಬಂಧ ಕಂದಾಯ ಇಲಾಖೆಯು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗೆ 2024ರ ಫೆ.26ರಂದೇ ಬರೆದಿದ್ದ ಪತ್ರವು ಮುನ್ನೆಲೆಗೆ ಬಂದಿದೆ. ಈ ಪತ್ರವು ‘ದಿ ಫೈಲ್’ಗೆ ಲಭ್ಯವಾಗಿದೆ.
ಭೂ ಸ್ವತ್ತು ನಗದೀಕರಿಸಿ ಆದಾಯ ಹೆಚ್ಚಿಸಿ ಎಂದು ಸಂಪನ್ಮೂಲ ಕ್ರೋಢೀಕರಣ ಸಮಿತಿಯು ಶಿಫಾರಸ್ಸು ಮಾಡಿರುವ ಬೆನ್ನಲ್ಲೇ ವರ್ಷದ ಹಿಂದಿನ ಪತ್ರವು ಮುನ್ನೆಲೆಗೆ ಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕು ಸೂಲಿಬೆಲೆ ಹೋಬಳಿ ತೆನೆಯೂರು ಗ್ರಾಮದ ಸರ್ವೆ ನಂಬರ್ 19/1ರಲ್ಲಿ ಒಟ್ಟು 8.39 ಎಕರೆ ವಿಸ್ತೀರ್ಣದ ಜಮೀನಿನ ಪೈಕಿ 6-05 ಎಕರೆ ಜಮೀನನ್ನು ರಾಜ್ಯದಲ್ಲಿ ಸಂಪನ್ಮೂಲ ಕ್ರೋಢೀಕರಿಸಲು ಮುಂದಾಗಿತ್ತು. ಈ ಸಂಬಂಧ ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಕಲಂ 69ರ ಅಡಿ ಹರಾಜು ಮಾಡುವ ಬಗ್ಗೆ ಸರ್ಕಾರದ ಪೂರ್ವಾನುಮೋದನೆ ನೀಡಲು ಕಡತ ಸಲ್ಲಿಸಿತ್ತು. ಈ ಕುರಿತು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದರು ಎಂದು ತಿಳಿದು ಬಂದಿದೆ.
‘ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕು ಸೂಲಿಬೆಲೆ ಹೋಬಳಿ ತೆನೆಯೂರು ಗ್ರಾಮದ ಸರ್ವೆ ನಂಬರ್ 19/1ರಲ್ಲಿ ಒಟ್ಟು 8. 39 ಎಕರೆ ಜಮೀನಿನ ಪೈಕಿ 6-05 ಎಕರೆ ಜಮೀನನ್ನು ರಾಜ್ಯದಲ್ಲಿ ಸಂಪನ್ಮೂಲ ಕ್ರೋಢೀಕರಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 69ರ ಅಡಿ ಹರಾಜು ಮಾಡುವ ಪ್ರಸ್ತಾವನೆಯನ್ನು ತಿರಸ್ಕರಿಸಿದೆ,’ ಎಂದು ಪತ್ರದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಆದರೆ ಇದಕ್ಕೆ ಬಲವಾದ ಆಕ್ಷೇಪ ವ್ಯಕ್ತಪಡಿಸಿರುವ ಕಂದಾಯ ಇಲಾಖೆಯು ರಾಜ್ಯದಲ್ಲಿ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಬೆಲೆಬಾಳುವ ಸರ್ಕಾರಿ ಜಮೀನನ್ನು ಹರಾಜು ಮಾಡುವುದು ಸಮಂಜಸವಲ್ಲ ಎಂದು ನಿಲುವು ತಳೆದಿರುವುದು ಪತ್ರದಿಂದ ಗೊತ್ತಾಗಿದೆ. ಅಲ್ಲದೇ ಸರ್ಕಾರಿ ಭೂಮಿಯನ್ನು ಹರಾಜು ಹಾಕುವುದು ನೈತಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತಪ್ಪು. ಇದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದೂ ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಪತ್ರದಲ್ಲೇನಿದೆ?
ಸರ್ಕಾರಿ ಜಮೀನುಗಳು ಸಾರ್ವಜನಿಕ ಆಸ್ತಿಗಳಾಗಿದ್ದು ಇವುಗಳನ್ನು ಸಂರಕ್ಷಿಸುವುದು ಸರ್ಕಾರದ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಅಲ್ಲದೇ ಶಾಲೆ, ಸ್ಮಶಾನದ ಉದ್ದೇಶ, ಮೈದಾನಗಳು, ಆಟದ ಮೈದಾನಗಳು, ಹಾಸ್ಟೆಲ್‌ಗಳು, ಆಸ್ಪತ್ರೆಗಳು, ಬಡವರಿಗೆ ವಸತಿ, ಸರ್ಕಾರಿ ಕಚೇರಿಗಳಂತಹ ಸಾರ್ವಜನಿಕ ಅಗತ್ಯತೆಗಳಿಗಾಗಿ ಸರ್ಕಾರವು ಆಗಾಗ್ಗೆ ಭೂಮಿಯ ಕೊರತೆ ಎದುರಿಸುತ್ತಿದೆ. ಇಂತಹ ಉದ್ದೇಶಕ್ಕೆ ಖಾಸಗಿ ಜಮೀನುಗಳನ್ನು ಭೂ ಸ್ವಾಧೀನ ಮಾಡುವುದು ಕಷ್ಟಸಾಧ್ಯವಾಗಿದೆ ಎಂದು ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.

ಪ್ರಸ್ತುತ ಮತ್ತು ಭವಿಷ್ಯದ ಸಾರ್ವಜನಿಕ ಅಗತ್ಯತೆಗಳಿಗಾಗಿ ಬಳಸಬಹುದಾದ ಲಭ್ಯವಿರುವ ಸರ್ಕಾರಿ ಭೂಮಿಯನ್ನು ಹರಾಜು ಮಾಡುವುದರಿಂದ ಸಾರ್ವಜನಿಕ ಅಗತ್ಯಗಳಿಗಾಗಿ ಭೂಮಿ ಒದಗಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಸಾವ್ಜನಿಕ ಸಾರ್ವಜನಿಕ ಹಿತಾಸಕ್ತಿಯನ್ನು ಪೂರೈಸಿದಂತಾಗುವುದಿಲ್ಲ. ಇನ್ನು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಮೀನಿನ ಕೊರತೆಯ ಸಮಸ್ಯೆ ಹೆಚ್ಚು ತೀವ್ರವಾಗಿದೆ ಎಂದು ವಿವರಿಸಿದೆ.
ಕ್ಷಿಪ್ರ ನಗರೀಕರಣ, ಸಾರ್ವಜನಿಕ/ನಾಗರಿಕ ಅಗತ್ಯಗಳಿಗಾಗಿ ಜಾಗವನ್ನು ಕಾಯ್ದಿರಿಸದೇ ಅನಧಿಕೃತ ಲೇ ಔಟ್‌ಗಳ ಬೆಳವಣಿಗೆ, ಮೂಲಭೂತ, ಮೂಲಸೌಕರ್ಯ, ಸೌಲಭ್ಯಗಳಿಗಾಗಿ ಜಾಗಗಳನ್ನು ಮೀಸಲಿಡದೇ ಇರುವುದರಿಂದ ಸಾರ್ವಜನಿಕ ಅಗತ್ಯಗಳನ್ನು ಪೂರೈಸಲು ಸರ್ಕಾರಕ್ಕೆ ಈಗಾಗಲೇ ಬಹಳ ಸವಾಲಾಗಿದೆ ಎಂದು ಹೇಳಿರುವುದು ಪತ್ರದಿಂದ ಗೊತ್ತಾಗಿದೆ.
ಈಗಾಗಲೇ ಹರಾಜು ಮಾಡಿರುವ ಜಮೀನುಗಳ ಮೌಲ್ಯವು ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಾಗಿದೆ ಎಂದು ಭಾವಿಸಿದರೂ ಸಹ ನಿಜವಾದ ಮಾರುಕಟ್ಟೆ ದರಗಳು ಬಹುಶಃ ಹರಾಜು ದರಗಳಿಗಿಂತ ಹೆಚ್ಚಾಗಿರುತ್ತದೆ. ಹರಾಜನ್ನು ಸಮರ್ಥಿಸಲು ಹೆಚ್ಚು ಕಡಿಮೆ ಮಾರುಕಟ್ಟೆ ದರವನ್ನು ಉಲ್ಲೇಖಿಸಲಾಗಿದೆ. ವಾಸ್ತವದಲ್ಲಿ ಅಂತಹ ಹರಾಜುಗಳು, ಖರೀದಿದಾರರಿಗೆ ಆಗಾಧ ಲಾಭವನ್ನು ತಂದುಕೊಡುತ್ತದೆ ಎಂದೂ ಹೇಳಿದೆ.
‘ಸರ್ಕಾರಿ ಜಮೀನುಗಳನ್ನು ಹರಾಜಿನಲ್ಲಿ ಖರೀದಿಸಿರುವ ಖರೀದಿದಾರರು ಶಾಲೆಗಳು, ಕಾಲೇಜುಗಳು ಮತ್ತು ಇತರ ಸೇವಾ ಮೂಲಸೌಕರ್ಯಗಳನ್ನು ಸ್ಥಾಪಿಸಲು ಪ್ರಸ್ತಾಪಿಸುವ ಭೂ ಮಂಜೂರಾತಿ ಸಂಸ್ಥೆಗಳಿಗಿಂತ ಭಿನ್ನವಾಗಿ ಖಾಸಗಿ ಆಸಕ್ತಿಗಳನ್ನು ಹೊಂದಿರುವ ಡೆವಲಪರ್‍ಗಳು ಅಥವಾ ಭೂ ಮಾಲೀಕರಾಗಿರಬಹುದು. ಹಾಗಾಗಿ ಸರ್ಕಾರಿ ಭೂಮಿಯನ್ನು ಹರಾಜು ಹಾಕುವುದು ನೈತಿಕವಾಗಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತಪ್ಪು ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಆದ್ದರಿಂದ ಸರ್ಕಾರಿ/ಸಾರ್ವಜನಿಕ ಭೂಮಿಯನ್ನು ಉಳಿಸಲು ಎಲ್ಲಾ ಕಾನೂನಾತ್ಮಕ ಪ್ರಯತ್ನಗಳನ್ನು ಮಾಡಬೇಕು,’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ನಿರ್ದೇಶನ ನೀಡಿರುವುದು ತಿಳಿದು ಬಂದಿದೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ಒತ್ತುವರಿ ತೆರವುಗೊಳಿಸಿದ ಜಮೀನು ಹರಾಜು ಹಾಕಿ ಸಂಪನ್ಮೂಲ ಕ್ರೋಢೀಕರಿಸಲು ಮುಂದಾಗಿತ್ತು. ಇದಕ್ಕೆ ರಾಜ್ಯ ಸರ್ಕಾರವು ಅನಮೋದನೆ ನೀಡಿತ್ತು. ಹರಾಜು ಹಾಕಲು ಲಭ್ಯವಿರುವ ಜಮೀನಿನ ಪಟ್ಟಿಯನ್ನು ಬೆಂಗಳೂರು ನಗರ ಜಿಲ್ಲೆಯ ಐದು ತಹಶೀಲ್ದಾರ್ ಪಟ್ಟಿ ಕಳಿಸಿದ್ದರು. ಆಋಭಿಕ ಹಂತದಲ್ಲಿ 107 ಎಕರೆ ಜಾಗ ಹರಾಜಿಗೆ ಲಭ್ಯ ಇದೆ ಎಂದು ವರದಿ ಸಲ್ಲಿಸಿದ್ದರು. ಹರಾಜಿನಿಂದ 300 ಕೋಟಿ ಸಂಗ್ರಹಿಸಬಹುದು ಎಂದು ಲೆಕ್ಕಾಚಾರ ಹಾಕಿದ್ದರು.
ವಿ ಶಂಕರ್ ಅವರು ನಗರ ಜಿಲ್ಲಾಧಿಕಾರಿಯಾಗಿದ್ದಾಗ 16 ಸಾವಿರ ಎಕರೆ ಒತ್ತುವರಿ ತೆರವುಗೊಳಿಸಿತ್ತು. ಇದರಲ್ಲಿ 1,200 ಎಕರೆಯನ್ನು ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಯೋಜನೆ ಅನುಷ್ಟಾನಕ್ಕಾಗಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ನೀಡಿತ್ತು.
ಬೆಂಗಳೂರಿನ ಮಹದೇವಪುರ ವಲಯದ ಬೆಂಡಿಗಾನಹಳ್ಳಿ, ಭಟ್ಟಹಳ್ಳಿ, ಕೌದೇನಹಳ್ಳಿ, ಮಹದೇವಪುರ, ಚಳ್ಳಕೆರೆ ಗ್ರಾಮಗಳಲ್ಲಿ 61 ಎಕರೆ 21 ಗುಂಟೆ ಬಿ ಖರಾಬು ಜಾಗ ಇದೆ. ಇದರಲ್ಲಿ 31 ಎಕರೆ 13 ಗುಂಟೆ ಒತ್ತುವರಿಯಾಗಿದೆ. ಈ ಜಾಗ ಪರಿಶೀಲನೆ ನಡೆಸಿ ಮಾರಾಟ ಮಾಡಲು ಹಾಗೂ ಒತ್ತುವರಿ ತೆರವುಗೊಳಿಸಲು ಸೂಕ್ತ ಪ್ರಸ್ತಾವನೆ ಸಿದ್ಧಪಡಿಸಬೇಕು ಎಂದು ಅಂದಿನ ಮುಕ್ಯ ಕಾರ್ಯದರ್ಶಿ ಸೂಚಿಸಿದ್ದರು.
ಭೂ ಮಾಫಿಯಾ ಮತ್ತು ಇದರ ಪ್ರಭಾವ ಹೊಂದಿರುವ ಚುನಾಯಿತ ಪ್ರತಿನಿಧಿಗಳ ಒತ್ತಡಕ್ಕೆ ಮಣಿದಿದ್ದ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಹರಾಜು ಮಾಡಲು ಲಭ್ಯವಿರುವ ಸೂಕ್ತ ಸರ್ಕಾರಿ ಜಮೀನುಗಳನ್ನು ಗುರುತಿಸಿ ತ್ವರಿತಗತಿಯಲ್ಲಿ ಹರಾಜು ಹಾಕಲು ತುದಿಗಾಲಲ್ಲಿ ನಿಂತಿದ್ದರು. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ರಾಜ್ಯದ ಎಲ್ಲಾ ತಹಶೀಲ್ದಾರ್‌ಗಳಿಗೆ ಆಯಾ ಜಿಲ್ಲಾಧಿಕಾರಿಗಳ ಮೂಲಕ ಸೂಚನೆ ಹೊರಡಿಸಿದ್ದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ರಚಿಸಿರುವ ಬಡಾವಣೆಗಳಲ್ಲಿ ಖಾಲಿ ಇರುವ ನಾಗರಿಕ ಮತ್ತು ಮೂಲೆ ನಿವೇಶನಗಳನ್ನು ಹರಾಜು ಹಾಕಲು ಮುಂದಾಗಿದ್ದ ಬೆನ್ನಲ್ಲೇ, ಬೆಂಗಳೂರು ನಗರ ಜಿಲ್ಲೆ ಸೇರಿದಂತೆ ರಾಜ್ಯದೆಲ್ಲೆಡೆ ಇರುವ ಸರ್ಕಾರಿ ಜಮೀನುಗಳನ್ನು ಹರಾಜು ಹಾಕಲು ಮುಂದಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.
ಸರ್ಕಾರದ ಸೂಚನೆಯಂತೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ತಹಶೀಲ್ದಾರ್ ಜಿಗಣಿ ಮತ್ತು ಕಸಬಾ ಹೋಬಳಿಯಲ್ಲಿರುವ ಒಟ್ಟು 33.26 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನನ್ನು ಗುರುತಿಸಿದ್ದಾರೆ. ಅಲ್ಲದೆ, ಅಳತೆ ಕಾರ್ಯ ನಡೆಸುವ ಸಲುವಾಗಿ ತಾಲೂಕಿನ ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ 2020ರ ಏಪ್ರಿಲ್ 29ರಂದು ಪತ್ರವನ್ನು ಬರೆದಿದ್ದರು.

ಆನೇಕಲ್ ತಹಶೀಲ್ದಾರ್ ಅವರು ಗುರುತಿಸಿರುವ ಒಟ್ಟು 33.26 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನು ಅಂದಾಜು 200 ಕೋಟಿ ರು.ಮೌಲ್ಯ ಹೊಂದಿದೆ ಎಂದು ತಿಳಿದು ಬಂದಿದೆ. ಜಿಗಣಿ ಹೋಬಳಿಯ ಹುಲ್ಲಹಳ್ಳಿ ಸರ್ವೇ ನಂಬರ್ 111ರಲ್ಲಿ 2.16 ವಿಸ್ತೀರ್ಣದ ಗೋಮಾಳ, ಸರ್ವೆ ನಂಬರ್ 186ರಲ್ಲಿನ 1.17 ಎಕರೆ ವಿಸ್ತೀರ್ಣದ ಗೋಮಾಳವನ್ನು ಅಳತೆ ಮಾಡಿದ ನಂತರ ಪ್ರಸ್ತಾವನೆ ಕಳಿಸಲು ತಹಶೀಲ್ದಾರ್ ಸೂಚಿಸಿದ್ದರು.
ಅದೇ ರೀತಿ ಹುಲಿಮಂಗಲ ಗ್ರಾಮದ ಸರ್ವೆ ನಂಬರ್ 350ರಲ್ಲಿರುವ 22.00 ಎಕರೆ ವಿಸ್ತೀರ್ಣದ ಸರ್ಕಾರಿ ಖರಾಬು ಕೂಡ ಒಳಗೊಂಡಿದೆ. ವಿಶೇಷವೆಂದರೆ ಈ ಸರ್ವೆ ನಂಬರ್‌ನಲ್ಲಿರುವ ಸರ್ಕಾರಿ ಜಮೀನು ಬಿಎಂಆರ್‌ಸಿಎಲ್ ಯೋಜನೆಗೆ ನೀಡಲಾಗಿತ್ತು. ಆದರೀಗ ಸರ್ಕಾರದ ಸೂಚನೆಯಂತೆ ಈ ಜಮೀನಿನ ಹಂಚಿಕೆಯನ್ನು ರದ್ದುಗೊಳಿಸಿ ಹರಾಜು ಹಾಕುವ ಪ್ರಸ್ತಾವನೆಯಲ್ಲಿ ಸೇರಿಸಿತ್ತು.
ಹಾಗೆಯೇ ಎಸ್ ಬಂಗಿಪುರ ಸರ್ವೇ ನಂಬರ್ 231 ಮತ್ತು 238ರಲ್ಲಿರುವ 3.50 ಎಕರೆ ವಿಸ್ತೀರ್ಣದ ಗೋಮಾಳವನ್ನು ಅಳತೆ ಮಾಡಿ ಹರಾಜು ಪ್ರಸ್ತಾವನೆಯಲ್ಲಿ ಸೇರಿಸಲು ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ತಹಶೀಲ್ದಾರ್ ಅವರು ಸೂಚಿಸಿದ್ದರು.
ಆಸ್ತಿ ನಗದೀಕರಣವಷ್ಟೇ ಅಲ್ಲ, ಬಂಡವಾಳವೂ ಹಿಂತೆಗೆತ; ಇಲಾಖೆಗಳಿಂದ ಸಮಗ್ರ ಪಟ್ಟಿ ಕೋರಿದ್ದ ಪತ್ರ ಮುನ್ನೆಲೆಗೆ
ಕಸಬಾ ಹೋಬಳಿಯ ಮಡಿವಾಳದ ಸರ್ವೆ ನಂಬರ್ 8 ಮತ್ತು 9ರಲ್ಲಿ ಕ್ರಮವಾಗಿ 0.22 ಮತ್ತು 0.30 ಗುಂಟೆ,ಬೆಸ್ತಮಾನಹಳ್ಳಿ ಸರ್ವೆ ನಂಬರ್ 19ರಲ್ಲಿ 2.11 ಎಕರೆ ವಿಸ್ತೀರ್ಣದ ಗೋಮಾಳ ಜಮೀನು, ಇನ್ನೂ ಸರ್ವೆ ಇಲಾಖೆಯಿಂದ ಅಳತೆಯಾಗಬೇಕಿದೆ ಎಂಬ ಮಾಹಿತಿಯನ್ನು ತಹಶೀಲ್ದಾರ್ ಒದಗಿಸಿದ್ದರು.
ಅದೇ ರೀತಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಒತ್ತುವರಿಯಿಂದ ಈಗಾಗಲೇ ತೆರವುಗೊಳಿಸಿರುವ ಸರ್ಕಾರಿ ಜಮೀನುಗಳನ್ನು ಹರಾಜು ಹಾಕಲು ಜಾರಿ ದಳದ ವಿಶೇಷ ಜಿಲ್ಲಾಧಿಕಾರಿ 2020ರ ಏಪ್ರಿಲ್ 13ರಂದೇ ಬೆಂಗಳೂರು ಉತ್ತರ ಮತ್ತು ದಕ್ಷಿಣ ವಿಭಾಗದ ಉಪ ವಿಭಾಗಾಧಿಕಾರಿಗಳಿಗೆ ಪತ್ರ ಬರೆದಿದ್ದರು.
‘ಸರ್ಕಾರಿ ಜಮೀನು ಸರ್ಕಾರದ ಸುಬರ್ದಿನಲ್ಲಿದ್ದು ಯಾವುದೇ ನ್ಯಾಯಾಲಯದಲ್ಲಿ ದಾವೆ ದಾಖಲಾಗದೇ ಇರುವುದನ್ನು ಭೂ ಸುಧಾರಣೆ ಕಾಯ್ದೆ 79(ಎ) ಮತ್ತು (ಬಿ), ನಮೂನೆ 50,53,57ರ ಅರ್ಜಿಗಳ ಬಗ್ಗೆ ಎನ್‌ಜಿಟಿ ಆದೇಶದಂತೆ ಕಾಪು ವಲಯ(ಬಫರ್ ಝೋನ್) ಹೊರತುಪಡಿಸಿ ಮತ್ತು 136(3) ಪ್ರಕರಣ ದಾಖಲಾಗದೇ ಇರುವಂತಹ ಮತ್ತು ಋಣಭಾರ ಮುಕ್ತವಾಗಿರುವ ಜಮೀನುಗಳನ್ನು ಖಚಿತಪಡಿಸಿಕೊಂಡು ಪ್ರಸ್ತಾವನೆ ಸಲ್ಲಿಸಬೇಕು,’ ಎಂದು ಜಾರಿದಳದ ವಿಶೇಷ ಜಿಲ್ಲಾಧಿಕಾರಿ ಉಪವಿಭಾಗಾಧಿಕಾರಿಗಳಿಗೆ ಪತ್ರದಲ್ಲಿ ಸೂಚಿಸಿದ್ದರು.









