ಬೆಂಗಳೂರು; ಕಾಂಗ್ರೆಸ್ ವರಿಷ್ಠ ಹಾಗೂ ಲೋಕಸಭೆ ಸದಸ್ಯ ರಾಹುಲ್ ಗಾಂಧಿ ಅವರು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿನ ಭಾಗವಹಿಸಿದ್ದ ಸಮರ್ಪಣೆ ಸಂಕಲ್ಪ ಸಮಾವೇಶʼಕ್ಕೆ ಬರೋಬ್ಬರಿ 16.59 ಕೋಟಿ ರು ಖರ್ಚಾಗಿದೆ.
ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು 2 ವರ್ಷ ಪೂರ್ಣಗೊಳಿಸಿದ್ದ ಸಂದರ್ಭವನ್ನು ಸಂಭ್ರಮಾಚರಣೆ ಮಾಡಿದ್ದ ಸಮಾವೇಶಕ್ಕೆ 16.59 ಕೋಟಿ ರು ಖರ್ಚಿನ ಅಂಕಿ ಅಂಶಗಳು ಇದೀಗ ಬಹಿರಂಗವಾಗಿವೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ವಿದ್ಯುತ್ ಬಿಲ್ ಬಾಕಿ, ಪ್ರವೇಶಾತಿ ಹೆಚ್ಚಳ, ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಕಂಪ್ಯೂಟರ್ ಲ್ಯಾಬ್, ಡಿಜಿಟಲ್ ಲೈಬ್ರೇರಿಗೆ ಅನುದಾನ ನೀಡಲು ಕೈ ಎತ್ತಿದ್ದ ಸರ್ಕಾರವು, ಸಮರ್ಪಣೆ ಸಂಕಲ್ಪ ಸಮಾವೇಶʼಕ್ಕೆ 16.59 ಕೋಟಿ ರು ಖರ್ಚು ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಸಮಾವೇಶಕ್ಕೆ ಖರ್ಚಾಗಿರುವ 16.59 ಕೋಟಿ ರುಪಾಯಿ ಮೊತ್ತದ ಪೈಕಿ ಇದುವರೆಗೆ 7 ಕೋಟಿ ಬಿಡುಗಡೆಯಾಗಿದೆ. ಇನ್ನುಳಿದ ಮೊತ್ತವನ್ನು ಬಿಡುಗಡೆ ಮಾಡಬೇಕು ಎಂದು ವಿಜಯನಗರ ಜಿಲ್ಲಾಧಿಕಾರಿ 2025ರ ಜುಲೈ 18ರಂದೇ ಕಂದಾಯ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ವಿಶೇಷವೆಂದರೇ ಈ ಸಮಾವೇಶದಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೆ ವಿತರಿಸಿದ್ದ ಮಜ್ಜಿಗೆ ಪ್ಯಾಕೇಟ್‌ಗಳಿಗೆ 1.60 ಕೋಟಿ ರು ಖರ್ಚಾಗಿದೆ. ಅದೇ ರೀತಿ ಜಿಲ್ಲಾಧಿಕಾರಿ ತೋರಿಸಿರುವ ಲೆಕ್ಕದಲ್ಲಿನ ಮೊತ್ತ ಮತ್ತು ಪಾವತಿಸಬೇಕಾದ ವಿವರಗಳು ಪುನರಾವರ್ತನೆಯಾಗಿರುವುದು ಪತ್ರದಲ್ಲಿ ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಸಂಬಂಧ ಆರ್ಥಿಕ ಇಲಾಖೆಯು ಸಹ ಆಕ್ಷೇಪ ಎತ್ತಿದೆ ಎಂದು ತಿಳಿದು ಬಂದಿದೆ.
ಜಿಲ್ಲಾಧಿಕಾರಿ ಪತ್ರದಲ್ಲೇನಿದೆ?
ವಿಜಯನಗರ ಜಿಲ್ಲೆಯಲ್ಲಿ 2025ರ ಮೇ 290ರಂದು 1.89 ಲಕ್ಷ ಫಲಾನುಭವಿಗಳೊಂದಿಗೆ ನಡೆದಿದ್ದ ಕರ್ನಾಟಕ ಸರ್ಕಾರದ ಸಮರ್ಪಣೆ ಸಂಕಲ್ಪ ಸಮಾವೇಶ ಕಾರ್ಯಕ್ರಮಕ್ಕೆ 16.59 ಕೋಟಿ ರು ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. ಆರ್ಥಿಕ ಇಲಾಖೆಯು ಇದಕ್ಕಾಗಿ 4(ಜಿ) ವಿನಾಯಿತಿ ನೀಡಿದೆ. ಕಂದಾಯ ಸಚಿವರ ಸೂಚನೆ ಮೇರೆಗೆ 1.89 ಲಕ್ಷ ಫಲಾನುಭವಿಗಳ ಬದಲಾಗಿ 3.00 ಲಕ್ಷ ಫಲಾನುಭವಿಗಳ ಸಮಾವೇಶಕ್ಕೆ ವ್ಯವಸ್ಥೆ ಮಾಡಲಾಗಿದೆ.
ಈ ಸಮಾವೇಶಕ್ಕೆ 16.58 ಕೋಟಿ 76 ಲಕ್ಷ ಪಾವತಿ ಮಾಡಬೇಕಿದೆ. ಆದರೆ ಇದುವರೆಗೆ 7 ಕೋಟಿ ಮಾತ್ರ ಬಿಡುಗಡೆ ಮಾಡಿದೆ. ಇನ್ನುಳಿದ ಬಾಬ್ತುಗಳಿಗೆ ಹಣ ಪಾವತಿ ಮಾಡಬೇಕಿದೆ. ಹೀಗಾಗಿ ಬಾಕಿ ಉಳಿದ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ವಿಜಯನಗರ ಜಿಲ್ಲಾಧಿಕಾರಿ ಅವರು ಪತ್ರದಲ್ಲಿ ಕೋರಿರುವುದು ತಿಳಿದು ಬಂದಿದೆ.
7 ಕೋಟಿ ಖರ್ಚಿನ ವಿವರ
ಗಾಯನ ಮತ್ತು ನಿರೂಪಣೆ ಸೇರಿದಂತೆ ವೇದಿಕೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 1.50 ಕೋಟಿ ರು., ಹೊಸಪೇಟೆ ಮತ್ತು ಹೊಸಪೇಟೆ ಸುತ್ತಮುತ್ತ ರಸ್ತೆಗಳಿಗೆ , ಸರ್ಕಲ್‌ಗಳಿಗೆ ತ್ರಿವರ್ಣ ಬಣ್ಣದ ಬ್ರಾಂಡಿಂಗ್, ಬಾಳೆ ಕಂಬ, ಮಾವಿನ ತೋರಣ ಮತ್ತು ಇತರೆ ಕಾಮಗಾರಿಗಳಿಗೆ 45 ಲಕ್ಷ, ಪಾರ್ಕಿಂಗ್ ಸ್ಥಳದಲ್ಲಿ ಶುಚಿ, ಮಣ್ಣು ತುಂಬುವುದು, ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ 47 ಲಕ್ಷ ರು ಖರ್ಚಾಗಿದೆ.

ಅದೇ ರೀತಿ ಕಾರ್ಯಕ್ರಮಕ್ಕೆ ಬಳಕೆಯಾಗಿದ್ದ ಡ್ರೋಣ್ ಕ್ಯಾಮರಾ, ಮಾಧ್ಯಮ ಸಲಕರಣೆಗಳು, ಇಂಟರ್‍ನೆಟ್ ವ್ಯವಸ್ಥೆಗೆ 25 ಲಕ್ಷ, ಕಾರ್ಯಕ್ರಮಕ್ಕೆ ವೇದಿಕೆ, ಸೋಫಾ ಕುರ್ಚಿ ಇತರೆ ಉಪಕರಣಗಳಿಗೆ 1.50 ಕೋಟಿ ರು., ಸಾರ್ವಜನಿಕರಿಗೆ ಉಪಹಾರ, ಊಟದ ವ್ಯವಸ್ಥೆ ಹಾಗೂ ಸುಮಾರು 2,000 ಪೊಲೀಸ್ ಸಿಬ್ಬಂದಿಗಳಿಗೆ ಉಪಹಾರ, ಊಟದ ವ್ಯವಸ್ಥೆಗೆ 3.50 ಕೋಟಿ ರು. ಖರ್ಚಾಗಿದೆ.

ಈ ಸಮಾವೇಶಕ್ಕೆ ಫಲಾನುಭವಿಗಳನ್ನು ಕರೆತಂದಿದ್ದ ಖಾಸಗಿ ಬಸ್‌ಗಳ ವ್ಯವಸ್ಥೆಗಾಗಿ 31.50 ಲಕ್ಷ, ಸರ್ಕಾರಿ ಶಿಷ್ಟಾಚಾರ ವಾಹನಗಳಿಗೆ, ಇತರೆ ಖಾಸಗಿ ವಾಹನಗಳಿಗೆ ಇಂಧನ ವ್ಯವಸ್ಥೆಗಾಗಿ 11.12 ಲಕ್ಷ ರು., ಆಹ್ವಾನ ಪತ್ರಿಕೆ, ಸನ್ಮಾನ, ಇತರೆ 15 ಲಕ್ಷ, ಸಾರ್ವಜನಿಕರಿಗಾಗಿ ನೀರಿನ ಪೈಪ್‌ಲೈನ್ ವ್ಯವಸ್ಥೆಗೆ 8.34 ಲಕ್ಷ ರು ಸೇರಿ ಒಟ್ಟಾರೆ 7 ಕೋಟಿ ಖರ್ಚಾಗಿದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಲೆಕ್ಕ ಕೊಟ್ಟಿರುವುದು ಪತ್ರದಿಂದ ಗೊತ್ತಾಗಿದೆ.
ಬಾಕಿ ಬಿಡುಗಡೆಯಾಗಬೇಕಾದ ಮೊತ್ತದ ವಿವರ
ಈ ಸಮಾವೇಶಕ್ಕೆ ಬಳಕೆಯಾಗಿದ್ದ ಬಸ್‌ಗಳಿಗೆ ಅಂಟಿಸಿದ್ದ ಸ್ಟಿಕರ್‍ಗಳಿಗಾಗಿ 10 ಲಕ್ಷ, ವೇದಿಕೆ ಸುತ್ತಮುತ್ತ, ಪಾರ್ಕಿಂಗ್ ಸ್ಥಳಗಳಲ್ಲಿ, ರಸ್ತೆಗಳಲ್ಲಿ , ಹೆಲಿಪ್ಯಾಡ್ ಸ್ಥಳದಲ್ಲಿ ಸುರಕ್ಷತಾ ಬ್ಯಾರಿಕೇಡ್ ವ್ಯವಸ್ಥೆ, ಸೈನ್ ಬೋರ್ಡ್‌ಗಳಿಗೆ 7,50,00, 000 ರು., ಎಲ್‌ಇಡಿ, ವೇದಿಕೆ, ಜರ್ಮನ್ ಟೆಂಟ್, ಬ್ಯಾಕ್ ಡ್ರಾಪ್‌ಗೆ 4,50,00,000 ರು., ಗಣ್ಯರು, ಕಲಾವಿದರಿಗೆ ಊಟ, ವಸತಿ 24,81, 457 ರು., ಸರ್ಕಾರದ ಸಾಧನೆಗಳ ಬಗ್ಗೆ ರಸ್ತೆ ಮತ್ತು ಸರ್ಕಲ್‌ಗಳಲ್ಲಿ ಬ್ಯಾನರ್ ಅಳವಡಿಕೆಗೆ 4,00,0, 000 ರು.,

ತಾತ್ಕಾಲಿಕ ಬಸ್ ನಿಲ್ದಾಣ, ಮೈಕ್ ಸೆಟ್‌ಗಳ ವ್ಯವಸ್ಥೆಗೆ 2,10,00,000 ರು., ಫಲಾನುಭವಿಗಳನ್ನು ಸಮಾವೇಶಕ್ಕೆ ಕರೆ ತಂದಿದ್ದ ಕೆಎಸ್‌ಆರ್‍ಟಿಸಿ ಬಸ್‌ಗಳ ವ್ಯವಸ್ಥೆಗೆ 2,93,16,584 ರು., ಪಾರ್ಕಿಂಗ್ ಸ್ಥಳ, ಕಾರ್ಯಕ್ರಮದ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆಗೆ 4,00,0,000 ರು., ಸಾರ್ವಜನಿಕರಿಗಾಗಿ ವ್ಯವಸ್ಥೆಗೊಳಿಸಿದ್ದ ಕೆಎಂಎಫ್ ಮಜ್ಜಿಗೆ ವ್ಯವಸ್ಥೆಗಾಗಿ 1.66 ಕೋಟಿ ಸೇರಿ ಒಟ್ಟಾರೆ 9,59,54,846 ರು.ಗಳನ್ನು ಪಾವತಿಸಬೇಕು ಎಂದು ಲೆಕ್ಕ ನೀಡಿರುವುದು ತಿಳಿದು ಬಂದಿದೆ.
ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆಗಳನ್ನು ಬಿಂಬಿಸಲು ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಭವ್ಯ ವೇದಿಕೆ ನಿರ್ಮಾಣವಾಗಿತ್ತು. ಇದೊಂದು ಐತಿಹಾಸಿಕ ಸಮಾವೇಶ ಎಂದು ಕಾಂಗ್ರೆಸ್ ಬಣ್ಣಿಸಿತ್ತು.

ಈ ಸಮಾವೇಶ ಯಶಸ್ವಿಗೊಳಿಸಲು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಶಾಸಕ ಗವಿಯಪ್ಪ, ಸಚಿವ ಕೃಷ್ಣ ಭೈರೆಗೌಡ ಅವರು ಸಮಾವೇಶ ಸಿದ್ಧತೆ, ಯಶಸ್ಸಿಗಾಗಿ ಟೊಂಕ ಕಟ್ಟಿ ನಿಂತಿದ್ದರು.

ಈ ಭಾಗದಲ್ಲಿ ಹೆಚ್ಚು ಬಿಸಿಲು ಇದ್ದ ಕಾರಣಕ್ಕಾಗಿ ನೆರಳಿನ ವ್ಯವಸ್ಥೆ ಕಲ್ಪಿಸಲು ಸುಸಜ್ಜಿತ ಜರ್ಮನ್ ಟೆಂಟ್ ನಿರ್ಮಿಸಲಾಗಿತ್ತು. ಪ್ರಧಾನ ವೇದಿಕೆ ಜತೆಗೆ ಇನ್ನೂ ಎರಡು ಕಿರು ವೇದಿಕೆಗಳನ್ನು ನಿರ್ಮಿಸಲಾಗಿತ್ತು. 200 ಅಡಿ ಅಗಲ, 70 ಅಡಿ ಉದ್ದದ ಪ್ರಧಾನ ವೇದಿಕೆಯಲ್ಲಿ 300 ಗಣ್ಯರಿಗೆ ಆಸನದ ವ್ಯವಸ್ಥೆ ಮಾಡಲಾಗಿತ್ತು.

ಮೊದಲ ಕಿರು ವೇದಿಕೆಯಲ್ಲಿ 50 ಮಾಜಿ ಸಚಿವರಿಗೆ ವೇದಿಕೆ ಕಲ್ಪಿಸಲಾಗಿತ್ತು. ಇನ್ನೊಂದರಲ್ಲಿ ನಿಗಮ ಮಂಡಳಿಗಳ ಅಧ್ಯಕ್ಷರು ಹಾಗೂ ಪಕ್ಷದ ಪ್ರಮುಖ 50 ಗಣ್ಯರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಈ ಸಮಾವೇಶಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಜನರು ಆಗಮಿಸಿದ್ದರು. ಇದಕ್ಕಾಗಿ 1ಲಕ್ಷದ 50 ಸಾವಿರ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. 50 ಸಾವಿರ ಕುರ್ಚಿಗಳನ್ನು ಹೆಚ್ಚುವರಿಯಾಗಿ ತರಿಸಿದ್ದರು. ಕ್ರೀಡಾಂಗಣದ ಅಕ್ಕಪಕ್ಕದ ರಸ್ತೆಯಲ್ಲೂ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿತ್ತು. ಭೋಜನದ ವ್ಯವಸ್ಥೆಗಾಗಿ ಟೆಂಟ್‌ಗಳನ್ನು ನಿರ್ಮಿಸಿ ಕೌಂಟರ್‌ಗಳನ್ನು ತೆರೆದಿತ್ತು. ಈ ಭವ್ಯ ವೇದಿಕೆಯ ಅಕ್ಕಪಕ್ಕ ಹಾಗೂ ಹೊರಗೆ ಹಂಪಿ ಸ್ಮಾರಕಗಳನ್ನು ಹೋಲುವ ಕಂಬಗಳ ಮಾದರಿ ಬಳಸಲಾಗಿತ್ತು.
ಅಲ್ಲದೇ ಈ ಸಮಾವೇಶಕ್ಕೆ ವಿಜಯನಗರ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಕೊಪ್ಪಳ, ರಾಯಚೂರು ಭಾಗಗಳಿಂದ ಹೆಚ್ಚಿನ ಜನರು ಬಂದಿದ್ದರು. ಜನರನ್ನು ಕರೆತರಲು 3,700 ಸಾರಿಗೆ ಬಸ್, ಸ್ವಂತ ಖರ್ಚಿನಲ್ಲಿ 2000 ಬಸ್ ಸೇರಿ 10 ಸಾವಿರಕ್ಕೂ ಅಧಿಕ ವಾಹನಗಳನ್ನು ಮೀಸಲಿಡಲಾಗಿತ್ತು. ಜನರಿಗೆ ಐದು ಲಕ್ಷ ಪ್ಯಾಕೆಟ್ ನೀರು, ಮೂರು ಲಕ್ಷ ಪ್ಯಾಕೆಟ್ ಮಜ್ಜಿಗೆ, ಎರಡು ಲಕ್ಷ ಜನರಿಗೆ ಊಟ ಹಾಗೂ ಹೆಚ್ಚುವರಿ 50 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಇದೇ ಕಾರ್ಯಕ್ರಮದಲ್ಲಿ ಒಂದು ಲಕ್ಷ ಕುಟುಂಬಗಳಿಗೆ ಕಂದಾಯ ಗ್ರಾಮ ಹಕ್ಕು ಪತ್ರ ಸಮರ್ಪಣೆ ಮಾಡಲಾಗಿತ್ತು.
ಗ್ಯಾರಂಟಿ ಯೋಜನೆಗಳ ಸಮಾವೇಶಕ್ಕೆ 46.5 ಕೋಟಿ ರು. ವೆಚ್ಚ; ಪಿಡಿ ಖಾತೆಗೆ ಕೈ ಹಾಕಿದ ಸರ್ಕಾರ
ಗ್ಯಾರಂಟಿ ಯೋಜನೆಗಳ ಸಮಾವೇಶವನ್ನು ಕಾಂಗ್ರೆಸ್ ಸರ್ಕಾರವು ಮೊದಲ ವರ್ಷದಲ್ಲೇ ಆಯೋಜಿಸಿತ್ತು. ಇದಕ್ಕಾಗಿ 46.5 ಕೋಟಿ ರು ಖರ್ಚಾಗಿತ್ತು. ಈ ಹಣವನ್ನು ಪಿ ಡಿ ಖಾತೆಗಳಿಂದ ಭರಿಸಿತ್ತು. ಈ ಕುರಿತು ‘ದಿ ಫೈಲ್’ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
ಹಕ್ಕುಪತ್ರ ವಿತರಣೆ ಕಾರ್ಯಕ್ರಮಕ್ಕೆ 8.96 ಕೋಟಿ ವೆಚ್ಚದ ಪ್ರಸ್ತಾವನೆ;ಸರ್ಕಾರದ ಹಣದಿಂದ ಬಿಜೆಪಿ ಶಕ್ತಿ ಪ್ರದರ್ಶನ
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲೂ ಯಾದಗಿರಿಯಲ್ಲಿ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳ ಹಕ್ಕು ಪ್ರಮಾಣ ಪತ್ರಗಳನ್ನು ವಿತರಿಸಲು ಸಮಾವೇಶ ಏರ್ಪಡಿಸಿತ್ತು. ಇದಕ್ಕಾಗಿ 8.96 ಕೋಟಿ ರು ಖರ್ಚಾಗಿತ್ತು. ಈ ಕುರಿತು ‘ದಿ ಫೈಲ್’ ವರದಿ ಪ್ರಕಟಿಸಿತ್ತು.
ಪ್ರಗತಿ ಪ್ರತಿಮೆ ಅನಾವರಣ; ಮೋದಿ ಕಾರ್ಯಕ್ರಮ, ಕಾಮಗಾರಿ, ವ್ಯವಸ್ಥೆಗೆ 48.44 ಕೋಟಿ ವೆಚ್ಚ!
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಇದೇ ತರಹ ಸಮಾವೇಶಗಳಿಗೆ ಖರ್ಚು ಮಾಡಲಾಗಿತ್ತು. ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಆಗಮಿಸಿದ್ದರು. ಈ ಕಾರ್ಯಕ್ರಮಕ್ಕೆ 48.44 ಕೋಟಿ ರು ಖರ್ಚಾಗಿತ್ತು. ಈ ಕುರಿತು ‘ದಿ ಫೈಲ್’ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
ಕಲ್ಬುರ್ಗಿಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದ ಕೆಲಗಂಟೆಗಳ ಕಾರ್ಯಕ್ರಮಕ್ಕೆ 11.18 ಕೋಟಿ ರು. ವೆಚ್ಚ
ಕಲ್ಬುರ್ಗಿಯಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸಿದ್ದ ಕೆಲವೇ ಕೆಲವು ಗಂಟೆಗಳ ಕಾರ್ಯಕ್ರಮಕ್ಕೂ ಹಿಂದಿನ ಬಿಜೆಪಿ ಸರ್ಕಾರವು 11.18 ಕೋಟಿ ರು ಖರ್ಚು ಮಾಡಿತ್ತು.
ಹಕ್ಕುಪತ್ರ ವಿತರಣೆ ಹೆಸರಿನಲ್ಲಿ 7.00 ಕೋಟಿ ದುಂದುವೆಚ್ಚ; 4(ಜಿ)ವಿನಾಯಿತಿಗೆ ಆರ್ಥಿಕ ಇಲಾಖೆ ಸಮ್ಮತಿ
ಹಕ್ಕು ಪತ್ರ ವಿತರಣೆ ಹೆಸರಿನಲ್ಲಿಯೂ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಂದಾಯ ಇಲಾಖೆಯು 7 ಕೋಟಿ ರು.ಗಳನ್ನು ದುಂದುವೆಚ್ಚ ಮಾಡಿತ್ತು.





