ಬೆಂಗಳೂರು; ರಾಜ್ಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಕೆಲವು ಪ್ರಾಂಶುಪಾಲರು, ವಾರ್ಡ್ನ್ಗಳು ಸರ್ಕಾರದ ಹಣ ದುರುಪಯೋಗಪಡಿಸಿಕೊಳ್ಳುತ್ತಿರುವ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಸ್ವತಃ ಪ್ರಾಂಶುಪಾರು ಮತ್ತು ವಾರ್ಡನ್ಗಳೇ ಅವರ ಪತಿ, ಕೌಟುಂಬಿಕ ಸದಸ್ಯರ ಖಾತೆಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡುತ್ತಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಇಂತಹ ಹಲವು ಪ್ರಕರಣಗಳ ಬಗ್ಗೆ ವಕೀಲರು ಆದಿಯಾಗಿ ಹಲವರು ಸರ್ಕಾರಕ್ಕೆ ಸಲ್ಲಿಸಿರುವ ದೂರುಗಳು ಸಹ ಕಸದ ಬುಟ್ಟಿಗೆ ಸೇರಿವೆ. ಅಲ್ಲದೇ ಇಂತಹ ದೂರುಗಳನ್ನು ಸ್ವೀಕರಿಸುವ ಸಮಾಜ ಕಲ್ಯಾಣ ಇಲಾಖೆಯು, ನೋಟೀಸ್ ನೀಡಿ ಕೈ ತೊಳೆದುಕೊಳ್ಳುತ್ತಿವೆ. ಆನೇಕಲ್ ಪ್ರಕರಣದಲ್ಲಿಯೂ ಸಹ ಸಮಾಜ ಕಲ್ಯಾಣ ಇಲಾಖೆಯು ಬಿಗಿಯಾದ ಕ್ರಮ ಕೈಗೊಂಡಿಲ್ಲ.
ಅಲ್ಲದೇ ವರ್ಷದ ಹಿಂದೆಯೇ ಕ್ರೈಸ್ನ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪತ್ರ ಬರೆದಿದ್ದರೂ ಸಹ ಕಠಿಣ ಕ್ರಮ ಕೈಗೊಂಡಿಲ್ಲ. ಈ ಕುರಿತು ಸಚಿವ ಡಾ ಹೆಚ್ ಸಿ ಮಹದೇವಪ್ಪ ಅವರು ಸಮಾಜ ಕಲ್ಯಾಣ ಇಲಾಖೆಯ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ನೀಡಿದ್ದ ಸೂಚನೆಯನ್ನೂ ಬದಿಗೊತ್ತಲಾಗಿದೆ ಎಂದು ತಿಳಿದು ಬಂದಿದೆ.
ದೂರಿನಲ್ಲೇನಿತ್ತು?
ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಭಾಗ್ಯ ಸಿ ಆರ್ ಎಂಬುವರು ವಾರ್ಡನ್ ಮತ್ತು ಪ್ರಾಂಶುಪಾಲರ ಹೆಸರಿನಲ್ಲಿರುವ ಜಂಟಿ ಖಾತೆಯಿಂದಲೇ ನೇರವಾಗಿ ತಮ್ಮ ತಂದೆ, ತಾಯಿ, ಪತಿ, ತಮ್ಮ ಅಣ್ಣ ತಮ್ಮಂದಿರು ಸೇರಿ ಸಂಬಂಧಿಕರ ಹೆಸರಿನಲ್ಲಿರುವ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ ಎಂದು ವಕೀಲರಾದ ಬಿ ಕೆ ವೆಂಕಟೇಶ್ ಎಂಬುವರು ಸಮಾಜ ಕಲ್ಯಾಣ ಇಲಾಖೆಗೆ ದೂರು ಸಲ್ಲಿಸಿದ್ದರು.
ಆದರೆ ಈ ದೂರಿನ ಮೇಲೆ ಯಾವುದೇ ಕ್ರಮ ವಹಿಸಿರಲಿಲ್ಲ. ಈ ವಕೀಲರಾದ ವೆಂಕಟೇಶ್ ಎಂಬುವರು ಸರ್ಕಾರಕ್ಕೆ ನೇರವಾಗಿ ಪತ್ರ ಬರೆದಿದ್ದರು. ಹೀಗಾಗಿ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ ಮಣಿವಣ್ಣನ್ ಅವರು ಈ ಬಗ್ಗೆ ಕ್ರಮ ವಹಿಸಿ ವರದಿ ಸಲ್ಲಿಸಬೇಕು ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದಶಕರಿಗೆ ಸೂಚಿಸಿದ್ದಾರೆ. ಈ ಬಗ್ಗೆ 2024 ಡಿಸೆಂಬರ್ 4ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಪತ್ರದಲ್ಲೇನಿದೆ?
ಆನೇಕಲ್ ತಾಲೂಕು ಅತ್ತಿಬೆಲೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಭಾಗ್ಯ ಸಿ ಆರ್ ಎಂಬುವರು ಸರ್ಕಾರದ ಹಣ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ತಮ್ಮ ಪತಿ ಟಿ ಪರಮೇಶ್ ಅವರಿಗೆ ಪ್ರಾಂಶುಪಾಲರು ಮತ್ತು ವಾರ್ಡನ್ ಅವರ ಜಂಟಿ ಖಾತೆಯಿಂದ ಹಲವಾರು ಬಾರಿ ಅಕ್ರಮವಾಗಿ ಹಣ ವರ್ಗಾವಣೆ ಆಗಿದೆ. ಈಗಾಗಲೇ ಹಲವರಿಂದ ಸಾಕಷ್ಟು ಬಾರಿ ಸರ್ಕಾರಕ್ಕೆ ಮತ್ತು ಕ್ರೈಸ್ನ ಕಾರ್ಯನಿರ್ವಾಹಕ ನಿರ್ದೇಶಕರಿಗೆ ದೂರು ನೀಡಲಾಗಿದೆ. ಆದರೆ ಯಾರೂ ಕ್ರಮ ಕೈಗೊಂಡಿಲ್ಲ ಎಂದು ವಕೀಲ ವೆಂಕಟೇಶ್ ಎಂಬುವರು ದೂರಿನಲ್ಲಿ ಉಲ್ಲೇಖಿಸಿದ್ದ ಅಂಶಗಳನ್ನು ಪತ್ರದಲ್ಲಿ ಪ್ರಸ್ತಾವಿಸಿರುವುದು ಗೊತ್ತಾಗಿದೆ.

‘ಇವರ ಪತಿಯವರಾದ ಟಿ ಪರಮೇಶ್ ಅವರಿಗೆ ಅಕ್ರಮವಾಗಿ ವಾರ್ಡನ್ ಮತ್ತು ಪ್ರಾಂಶುಪಾಲರ ಜಂಟಿ ಖಾತೆಯಿಂದ ಹಣ ವರ್ಗಾವಣೆ ಮಾಡಿರುವುದು, ತಮ್ಮ ಅಣ್ಣ, ತಮ್ಮಂದಿರುವ, ತಂದೆ, ತಾಯಿ ಮತ್ತು ಸಂಬಂಧಿಕರ ಹೆಸರಿಗೆ ಹಣ ವರ್ಗಾವಣೆ ಮಾಡುತ್ತಿರುವುದು ತಿಳಿದು ಬಂದಿದೆ. ಇದನ್ನು ಪ್ರಶ್ನಿಸಿದ ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ ನೀಡಿ ಬೇರೆ ಕಡೆಗೆ ಕಳಿಸಲಾಗುತ್ತಿದೆ,’ ಎಂದು ದೂರಿನಲ್ಲಿನ ಅಂಶಗಳನ್ನು ಉಲ್ಲೇಖಿಸಿರುವುದು ತಿಳಿದು ಬಂದಿದೆ.
ಅಲ್ಲದೇ ಅಡುಗೆ ಮಾಡಲು ಬಳಸುವ ಸಾಮಗ್ರಿಗಳು ಕಳಪೆಯಿಂದ ಕೂಡಿವೆ. ವಿದ್ಯಾರ್ಥಿಗಳು ಪೌಷ್ಠಿಕ ಆಹಾರ ಸೇವಿಸದೆ ಕಳಪೆ ಆಹಾರ ಸೇವಿಸಿ ಯಾರಿಗೂ ಹೇಳಲಾಗದ ಸ್ಥಿತಿಯಲ್ಲಿ ಓದುತ್ತಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕೂಡಲೇ ಅಗತ್ಯ ಕ್ರಮ ವಹಿಸಬೇಕು. ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ಅವರು ಕ್ರೈಸ್ನ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪತ್ರದಲ್ಲಿ ಸೂಚಿಸಿರುವುದು ಗೊತ್ತಾಗಿದೆ.

ಗೃಹ ಸಚಿವ ಡಾ ಜಿ ಪರಮೇಶ್ವರ ಅವರು ಅಧ್ಯಕ್ಷರಾಗಿರುವ ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್, ವಿವಿಧ ಕ್ರೀಡೆಗಳ ಸ್ಪರ್ಧೆ ಹೆಸರಿನಲ್ಲಿ ಸಂಗ್ರಹಿಸುತ್ತಿರುವ ಲಕ್ಷಾಂತರ ರು ಮೊತ್ತದ ಪ್ರವೇಶ ಶುಲ್ಕವನ್ನು ಬೇನಾಮಿ ಖಾತೆಗಳಿಗೆ ಜಮೆ ಮಾಡಿಸುತ್ತಿದೆ ಎಂಬ ಬಲವಾದ ಆರೋಪ ಕೇಳಿ ಬಂದಿದ್ದವು.
ಅಥ್ಲೆಟಿಕ್ ತರಬೇತುದಾರ ಮತ್ತು ಮಾಜಿ ಸೈನಿಕರೂ ಆಗಿರುವ ಯತೀಶ್ಕುಮಾರ್ ಎಂಬುವರು ಈ ಸಂಬಂಧ ಮುಖ್ಯಮಂತ್ರಿ, ಸಂಘದ ಅಧ್ಯಕ್ಷ ಡಾ ಜಿ ಪರಮೇಶ್ವರ, ಮುಖ್ಯ ಕಾರ್ಯದರ್ಶಿ ಸೇರಿದಂತೆ ಸಕ್ಷಮ ಪ್ರಾಧಿಕಾರಗಳಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಅಲ್ಲದೇ ಬೇನಾಮಿ ಖಾತೆಗಳಿಗೆ ಜಮೆ ಮಾಡುತ್ತಿರುವ ಕುರಿತಾದ ಸಾಕ್ಷ್ಯ, ಪುರಾವೆಗಳನ್ನೂ ಒದಗಿಸಿದ್ದರು.
ಪ್ರವೇಶ ಶುಲ್ಕ ವಸೂಲಿ; ಬೇನಾಮಿ ಖಾತೆಗಳಿಗೆ ಲಕ್ಷಾಂತರ ರು ಜಮೆ, ಅಥ್ಲೆಟಿಕ್ ಅಸೋಸಿಯೇಷನ್ಗೆ ಅಪಾರ ನಷ್ಟ?
ಕ್ರೀಡಾ ಸ್ಪರ್ಧಾಳುಗಳಿಂದ ಸಂಗ್ರಹಿಸುತ್ತಿರುವ ಶುಲ್ಕವನ್ನು ಅಸೋಸಿಯೇಷನ್ಗೆ ಜಮೆ ಮಾಡುತ್ತಿಲ್ಲ. ಬದಲಿಗೆ ಬೇನಾಮಿ ಖಾತೆಗಳಿಗೆ ಹಣ ಜಮೆ ಮಾಡುತ್ತಿದೆ ಎಂದು ಯತೀಶ್ಕುಮಾರ್ ಅವರು ದೂರಿನಲ್ಲಿ ವಿವರಿಸಿದ್ದರು.
ಅಲ್ಲದೇ ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧಿಕಾರಿಗಳು ಬೇನಾಮಿ ಸ್ವ ಸಹಾಯ ಸಂಘಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದರು.
ಬೇನಾಮಿ ಸ್ವಸಹಾಯ ಸಂಘಗಳಿಗೂ ಲಕ್ಷಾಂತರ ರು ಬಿಡುಗಡೆ; ‘ಐರಾವತ’ದಲ್ಲೂ ‘ಸಮೃದ್ಧಿ’
ಖಾಸಗಿ ಶಾಲೆಗಳಲ್ಲಿ ಶಿಕ್ಷಣಾಧಿಕಾರಿಗಳು ಹಣ ಸುಲಿಗೆ ಮಾಡಿರುವುದನ್ನು ತನಿಖಾಧಿಕಾರಿಗಳೇ ದೃಢಪಡಿಸಿದ್ದರು.
ಖಾಸಗಿ ಶಾಲೆಗಳಲ್ಲಿ ಶಿಕ್ಷಣಾಧಿಕಾರಿಗಳಿಂದ ಹಣ ಸುಲಿಗೆ; ತನಿಖಾಧಿಕಾರಿ ತಪಾಸಣೆಯಲ್ಲಿ ದೃಢ
ಸಹಕಾರ ಮಂಡಲದ 19.34 ಕೋಟಿ ರುಪಾಯಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು.
ಸಹಕಾರ ಮಂಡಲದ 19.34 ಕೋಟಿ ಅಕ್ರಮ ವರ್ಗಾವಣೆ; ಪ್ರಭಾರಿ ಸಿಇಒ ಸೇರಿ 6 ಮಂದಿ ವಿರುದ್ಧ ಎಫ್ಐಆರ್
ಸಮಾಜ ಕಲ್ಯಾಣ ಇಲಾಖೆಯೂ ಸೇರಿದಂತೆ ಹಲವು ಇಲಾಖೆಗಳಲ್ಲಿ ಈಗಲೂ ಸರ್ಕಾರದ ಹಣ ದುರುಪಯೋಗ ಮತ್ತು ಅಕ್ರಮವಾಗಿ ಹಣ ವರ್ಗಾವಣೆ ಆಗುತ್ತಿವೆ. ಇಂತಹ ಪ್ರಕರಣಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳದೇ ಇರುವುದೇ ಇದಕ್ಕೆ ಕಾರಣ ಎಂದು ಗೊತ್ತಾಗಿದೆ.
 
								 
								 
											





