Sunday | April 12, 2026 |

ಹೆಚ್‌ಡಿಕೆ ಸಹಿ ಫೋರ್ಜರಿ; ರೇರಾ ಅಧ್ಯಕ್ಷ ರಾಕೇಶ್‌ಸಿಂಗ್‌ರಿಗೆ ವರ್ಷ ಕಳೆದರೂ ಜಾರಿಯಾಗದ ನೋಟೀಸ್‌, ತೆವಳಿದ ತನಿಖೆ

ಬೆಂಗಳೂರು; ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಅವರ ಸಹಿಯನ್ನು ಫೋರ್ಜರಿ ಮಾಡಿರುವ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗಿರುವ ರೇರಾದ ಹಾಲಿ ಅಧ್ಯಕ್ಷ ರಾಕೇಶ್‌ ಸಿಂಗ್‌ ಅವರ ವಿರುದ್ಧ ಸಲ್ಲಿಕೆಯಾಗಿರುವ  ದೂರರ್ಜಿಯನ್ನು ಲೋಕಾಯುಕ್ತ ಸಂಸ್ಥೆಯು ವರ್ಷ ಕಳೆದರೂ ಕಣ್ಣೆತ್ತಿಯೂ ನೋಡಿಲ್ಲ.

 

ಕೇತಗಾನಹಳ್ಳಿಯ ಸರ್ಕಾರಿ ಜಮೀನು ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ಎಸ್‌ಐಟಿ (ವಿಶೇಷ ತನಿಖಾ ತಂಡ) ತನಿಖೆಗೆ ನ್ಯಾಯಪೀಠ ನೀಡಿದ್ದ ಮಧ್ಯಂತರ ತಡೆ ಆದೇಶವನ್ನು  ವಿಭಾಗೀಯ ನ್ಯಾಯಪೀಠವು ತೆರವುಗೊಳಿಸಿದೆ. ಆದರೆ ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಅಕ್ರಮವಾಗಿ ಗಣಿ ಗುತ್ತಿಗೆ ಪ್ರಕರಣದಲ್ಲಿ ಹೆಚ್‌ ಡಿ ಕುಮಾರಸ್ವಾಮಿ ಅವರ ಸಹಿ ಫೋರ್ಜರಿ ಮಾಡಿರುವ ಪ್ರಕರಣದಲ್ಲಿ ಸಲ್ಲಿಕೆಯಾಗಿರುವ ದೂರರ್ಜಿಯನ್ನು  ಲೋಕಾಯುಕ್ತ ಸಂಸ್ಥೆಯು ಒಂದು ವರ್ಷದಿಂದಲೂ ಕಣ್ಣೆತ್ತಿಯೂ ನೋಡದೇ ಇರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಅಕ್ರಮವಾಗಿ ಗಣಿ ಗುತ್ತಿಗೆ ನೀಡಿದ್ದಾರೆ ಎಂದು ಆರೋಪಕ್ಕೆ ಗುರಿಯಾಗಿರುವ ಹಾಲಿ ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಅವರು ಕಡತದ ಪುಟಗಳಲ್ಲಿನ ಕೈ ಬರವಣಿಗೆ, ಸಹಿಯು ತಮ್ಮದಲ್ಲ, ಮತ್ತು ಅದನ್ನು ಪೋರ್ಜರಿ ಮಾಡಲಾಗಿದೆ ಎಂದು  ಹೇಳಿಕೆ ನೀಡಿದ್ದರು.  ಈ ಹೇಳಿಕೆ  ನೀಡಿದ್ದರ  ಕಡತದ ಪುಟಗಳಲ್ಲಿನ ಕೈ ಬರವಣಿಗೆಯು ಹಿರಿಯ ನಿವೃತ್ತ ಐಎಎಸ್‌ ಅಧಿಕಾರಿ ಹಾಗೂ ರೇರಾದ ಹಾಲಿ ಅಧ್ಯಕ್ಷ ರಾಕೇಶ್‌ ಸಿಂಗ್‌ ಅವರದ್ದು ಎಂದು  ಲೋಕಾಯುಕ್ತರಿಗೆ   ದೂರರ್ಜಿ ಸಲ್ಲಿಕೆಯಾಗಿತ್ತು.

 

ಸಾಮಾಜಿಕ ಕಾರ್ಯಕರ್ತ ಕಂಚನಹಳ್ಳಿ ರವಿಕುಮಾರ್‍‌ ಎಂಬುವರು  ಲೋಕಾಯುಕ್ತರಿಗೆ 2024ರ ಸೆ 20ರಂದು  ದೂರರ್ಜಿ ಸಲ್ಲಿಸಿದ್ದರು. ಈ ದೂರರ್ಜಿ ಸಲ್ಲಿಕೆಯಾಗಿದೆ ಒಂದು ವ‍ರ್ಷ ಕಳೆದಿದೆ. ಆದರೂ ಈ ದೂರರ್ಜಿಯು ಅಪರ ನಿಬಂಧಕರ (18) ಕಚೇರಿಯಲ್ಲೇ ಕೊಳೆಯುತ್ತಿದೆ. ಈ ದೂರರ್ಜಿ ಮೇಲೆ ಕ್ರಮವೇನಾದರೂ ಆಗಿದೆಯೇ, ಪ್ರತಿವಾದಿಗಳಿಗೆ ನೋಟೀಸ್‌ ಜಾರಿಯಾಗಿದೆಯೇ ಎಂಬ ಕುರಿತು ‘ದಿ ಫೈಲ್‌’, ಲೋಕಾಯುಕ್ತ ಜಾಲತಾಣವನ್ನು ತಡಕಾಡಿತು.

 

 

ಲೋಕಾಯುಕ್ತ ಸಂಸ್ಥೆಯ ಅಧಿಕೃತ ಜಾಲತಾಣದಲ್ಲಿರುವ ಮಾಹಿತಿ ಪ್ರಕಾರ ಈ ದೂರರ್ಜಿಯು 2024ರ ಸೆ.20ರಿಂದ ಅಪರ ನಿಬಂಧಕರು (18) ಕಚೇರಿಯಲ್ಲಿರುವುದು ಗೊತ್ತಾಗಿದೆ. ಈ ದೂರರ್ಜಿ ಆಧರಿಸಿ ಪ್ರತಿವಾದಿ ರಾಕೇಶ್‌ ಸಿಂಗ್‌ ಅವರಿಂದ ಸ್ಪಷ್ಟೀಕರಣ ಕೋರಿ  ಯಾವುದೇ ನೋಟೀಸ್‌ನ್ನೂ ಜಾರಿಗೊಳಿಸಿಲ್ಲ ಎಂಬುದು ತಿಳಿದು ಬಂದಿದೆ.

 

 

ಸಾಮಾಜಿಕ ಕಾರ್ಯಕರ್ತ ಕಂಚನಹಳ್ಳಿ ರವಿಕುಮಾರ್‍‌  ಅವರು ದೂರರ್ಜಿಯಲ್ಲಿ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಗಣಿ ಗುತ್ತಿಗೆ ಮಂಜೂರಾತಿಗೆ ಸಂಬಂಧಿಸಿದ ಕಡತದ ಟಿಪ್ಪಣಿ ಹಾಳೆಯಲ್ಲಿನ ಕೈ ಬರವಣಿಗೆ ಮತ್ತು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ರಾಕೇಶ್‌ಸಿಂಗ್‌ ಅವರ ಕೈ ಬರವಣಿಗೆಯನ್ನು ಹೋಲಿಕೆ ಮಾಡಿ ವಿವರಿಸಿದ್ದರು.

 

ಹೆಚ್‌ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಕೇಶ್‌ ಸಿಂಗ್‌ ಅವರು ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲೇ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಗಣಿ ಗುತ್ತಿಗೆ ಮಂಜೂರಾತಿಗೆ ಸಂಬಂಧಿಸಿದ ಕಡತದಲ್ಲಿ ಕುಮಾರಸ್ವಾಮಿ ಅವರ ಸಹಿ ಮತ್ತು ಕೈ ಬರವಣಿಗೆಯನ್ನು ತಿದ್ದಲಾಗಿದೆ ಎಂದು ದೂರರ್ಜಿಯಲ್ಲಿ ಆಪಾದಿಸಿದ್ದರು.

 

ಸಾಯಿ ವೆಂಕಟೇಶ್ವರ ಮಿನರಲ್ಸ್‌ ಗಣಿ ಗುತ್ತಿಗೆ ಮಂಜೂರಾತಿಯ ಕಡತದಲ್ಲಿನ ಟಿಪ್ಪಣಿ ಹಾಳೆಗಳಲ್ಲಿನ ಕೈ ಬರವಣಿಗೆಯು, ನಗರಾಭಿವೃದ್ದಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ರಾಕೇಶ್‌ ಸಿಂಗ್‌ ಅವರ ಕೈ ಬರವಣಿಗೆಯೊಂದಿಗೆ ಹೋಲುತ್ತದೆ ಮತ್ತು ಅದಕ್ಕೆ ಸಾಮಿಪ್ಯವಿದೆ ಎಂದು ಸಾಮಾಜಿಕ ಕಾರ್ಯಕರ್ತ ಪುರಾವೆಗಳನ್ನು ಒದಗಿಸಿದ್ದರು.

 

ಸಾಮಾಜಿಕ ಕಾರ್ಯಕರ್ತ ರವಿಕುಮಾರ್‍‌ ಕಂಚನಹಳ್ಳಿ   ಸಲ್ಲಿಸಿರುವ ದೂರರ್ಜಿ ಮತ್ತು ಕೈ ಬರವಣಿಗೆಗೆ ಸಂಬಂಧಿಸಿದಂತೆ  ಟಿಪ್ಪಣಿಯ ಹಾಳೆಗಳನ್ನು ಲೋಕಾಯುಕ್ತರಿಗೆ ಸಲ್ಲಿಸಿದ್ದರು.

 

 

 

 

 

 

ಅಲ್ಲದೇ ‘ಸಾಯಿ ವೆಂಕಟೇಶ್ವರ ದಾಖಲೆಯಲ್ಲಿರುವುದು ನನ್ನ ಸಹಿಯೇ ಅಲ್ಲ ಮತ್ತು ಆ ಕಂಪನಿಗೆ ಭೂಮಿಯನ್ನೇ ಕೊಟ್ಟಿಲ್ಲ, ಯಾರೆಲ್ಲಾ ಮೋಸ ಮಾಡಿಕೊಂಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ತಿದ್ದಲಾಗಿರುವ ಆದೇಶ ಪತ್ರದ ದಾಖಲೆಯನ್ನು ಪರಿಶೀಲನೆ ಮಾಡಲು ಕೇವಲ ನನ್ನ ಸಹಿಯನ್ನಷ್ಟೇ ಅಲ್ಲ, ನನ್ನ ಕೈ ಬರಹವನ್ನು ತೆಗೆದುಕೊಂಡು ಹೋಗಿದ್ದಾರೆ. ಎಲ್ಲಿ ಬೇಕಾದರೂ ತನಿಖೆ ಮಾಡಲಿ ಮತ್ತು ಯಾವ ಪ್ರಯೋಗಾಲಯದಿಂದಲಾದರೂ ವರದಿ ಪಡೆಯಬಹುದು,’ ಎಂದು ಸವಾಲು ಹಾಕಿದ್ದರು.

 

 

ಆದರೆ ಈ ಸಂಬಂಧ ಹೆಚ್‌ ಡಿ ಕುಮಾರಸ್ವಾಮಿ ಅವರು ದೂರನ್ನೇ ದಾಖಲಿಸಿಲ್ಲ.

 

ಈ ಕುರಿತು ದೂರನ್ನೇಕೆ ದಾಖಲಿಸಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಸಹ ಹೆಚ್‌ ಡಿ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದರು. ಈ ಬೆಳವಣಿಗೆಗಳ ನಡುವೆಯೇ ರಾಕೇಶ್‌ ಸಿಂಗ್‌ ಅವರದ್ದು ಎನ್ನಲಾಗಿರುವ 2021 ರಲ್ಲಿನ ನಗರಾಭಿವೃದ್ಧಿ ಇಲಾಖೆಯ ಕಡತದ  ಹಾಳೆಗಳಲ್ಲಿನ  ಕೈ ಬರವಣಿಗೆಯ ಮಾದರಿ ಪುಟಗಳು ರಾಜ್ಯಪಾಲರ ಕಚೇರಿ ಸೇರಿರುವುದು ಕುತೂಹಲ ಮೂಡಿಸಿದ್ದವು.

 

 

 

ರಾಜ್ಯಪಾಲರಿಗೆ ಸಲ್ಲಿಸಿರುವ ದೂರಿನಲ್ಲೇನಿತ್ತು?

 

ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಗಣಿ ಗುತ್ತಿಗೆ ಮಂಜೂರು ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಲೋಕಾಯುಕ್ತ ಎಸ್‌ಐಟಿಯು ಹಾಲಿ ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಅವರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವ ಪ್ರಸ್ತಾವನೆ ತಮ್ಮ ಮುಂದಿದೆ.

 

 

ಎಸ್‌ಐಟಿಯು ಸಲ್ಲಿಸಿರುವ ಪ್ರಸ್ತಾವನೆ ಮತ್ತು ಕಡತಗಳಲ್ಲಿನ ದಾಖಲೆಗಳ ಬಗ್ಗೆ ಹೆಚ್‌ ಡಿ ಕುಮಾರಸ್ವಾಮಿ ಅವರು ಅನುಮಾನ ವ್ಯಕ್ತಪಡಿಸಿದ್ದರು.  ಇಲಾಖೆ ಮತ್ತು ಎಸ್‌ಐಟಿಯು ತಮ್ಮ ಮುಂದಿರಿಸಿರುವ ಕಡತಗಳ ಪುಟಗಳಲ್ಲಿನ ಕೈ ಬರವಣಿಗೆ ಕುರಿತು ಹೆಚ್‌ ಡಿ ಕುಮಾರಸ್ವಾಮಿ ಅವರು ಶಂಕೆ ವ್ಯಕ್ತಪಡಿಸಿದ್ದರು. ಅದು ತಮ್ಮ ಸಹಿಯೇ ಅಲ್ಲ, ತಮ್ಮ ಸಹಿ ಮತ್ತು ಕೈ ಬರವಣಿಗೆಯೂ ಪೋರ್ಜರಿ ಆಗಿದೆ ಎಂದು ಸುದ್ದಿಗೋಷ್ಠಿಯಲ್ಲಿಯೇ ಹೇಳಿಕೆ ನೀಡಿದ್ದಾರೆ. ಆದರೆ ಇದುವರೆಗೂ ಕುಮಾರಸ್ವಾಮಿ ಅವರು ತಮ್ಮ ಸಹಿ ಮತ್ತು ಕೈ ಬರವಣಿಗೆಯು ಪೋರ್ಜರಿ ಆಗಿದೆ ಎಂದು ಎಲ್ಲಿಯೂ ದೂರು ದಾಖಲಿಸಿಲ್ಲ ಎಂದು ದೂರರ್ಜಿಯಲ್ಲಿ ವಿವರಿಸಲಾಗಿತ್ತು.

 

‘ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತನಾದ ನಾನು ಕೂಡ ಒಂದಷ್ಟು ದಾಖಲೆಗಳನ್ನು ಕಲೆ ಹಾಕಿದ್ದೇನೆ. ಕುಮಾರಸ್ವಾಮಿ ಅವರು ಹೇಳಿರುವ ಪ್ರಕಾರ ಕೈ ಬರವಣಿಗೆ ಮತ್ತು ಸಹಿ ಪೋರ್ಜರಿ ಆಗಿದೆ ಎಂಬುದಕ್ಕೆ ಪುರಾವೆಗಳನ್ನೂ  ಒದಗಿಸುತ್ತಿದ್ದೇನೆ,’ ಎಂದು ದೂರಿನಲ್ಲಿ ಹೇಳಿದ್ದರು.

 

 

 

ಕುಮಾರಸ್ವಾಮಿ ಅವರು ಹೇಳುತ್ತಿರುವ ಕೈ ಬರವಣಿಗೆ ಮತ್ತು ಸಹಿ ತಿದ್ದಿರುವುದು ಅಂದು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರ ಕಾರ್ಯದರ್ಶಿ ಆಗಿದ್ದ ರಾಕೇಶ್‌ ಸಿಂಗ್‌ ಅವರದ್ದು ಎಂಬುದಕ್ಕೆ ಪುರಾವೆಗಳನ್ನು ಇಲ್ಲಿ ನೀಡಿದ್ದೇನೆ.

 

‘ರಾಕೇಶ್‌ ಸಿಂಗ್‌ ಅವರು ನಗರಾಭಿವೃದ್ಧಿ ಇಲಾಖೆ ಸೇರಿದಂತೆ ಮೂರ್ನಾಲ್ಕು ಇಲಾಖೆಗಳಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಆ ಅವಧಿಯಲ್ಲಿ ಕಡತಗಳಲ್ಲಿನ ಟಿಪ್ಪಣಿ ಹಾಳೆಗಳಲ್ಲಿ ರಾಕೇಶ್‌ ಸಿಂಗ್‌ ಅವರ ಕೈ ಬರವಣಿಗೆಯು, ಸಾಯಿ ವೆಂಕಟೇಶ್ವರ ಮಿನರಲ್ಸ್‌ ಗಣಿ ಗುತ್ತಿಗೆ ಸಂಬಂಧಿತ ಕಡತದ ಟಿಪ್ಪಣಿ ಹಾಳೆಯಲ್ಲಿನ ಬರವಣಿಗೆಗೆ ಸಾಮ್ಯತೆ ಕಂಡು ಬರುತ್ತಿದೆ. ಮೇಲ್ನೋಟಕ್ಕೆ ಈ ಕೈ ಬರವಣಿಗೆಯು ರಾಕೇಶ್‌ ಸಿಂಗ್‌ ಅವರದ್ದೇ ಎಂದು ಕಂಡು ಬರುತ್ತಿರುವ ಕಾರಣ ಅವರನ್ನು ವಿಚಾರಣೆಗೊಳಪಡಿಸಲು ಕ್ರಮ ಕೈಗೊಳ್ಳಬೇಕು,’ ಎಂದು ಕೋರಿದ್ದರು.

 

 

ನಗರಾಭಿವೃದ್ಧಿ ಇಲಾಖೆಯಲ್ಲಿನ 2021ರಲ್ಲಿನ  ಕಡತಗಳಲ್ಲಿನ ಈ ಟಿಪ್ಪಣಿ ಹಾಳೆಗಳಲ್ಲಿನ ಕೈ ಬರವಣಿಗೆ ಮತ್ತು ಸಾಯಿ ವೆಂಕಟೇಶ್ವರ ಮಿನರಲ್ಸ್‌ ನ ಕೈ ಬರವಣಿಗೆ ಮತ್ತು ಸಹಿಯ ಟಿಪ್ಪಣಿ ಹಾಳೆಗಳನ್ನು ಅದರ ಕೆಲ ಮಾದರಿಗಳನ್ನು ರವಿಕುಮಾರ್‍‌ ಅವರು ಒದಗಿಸಿದ್ದಾರೆ. ಇವುಗಳನ್ನು   ಫೋರೆನ್ಸಿಕ್‌ ಅಥವಾ ಎಫ್‌ಎಸ್‌ಎಲ್‌ ಪರೀಕ್ಷೆಗೊಳಪಡಿಸಬೇಕು ಎಂದು  ಕೋರಿದ್ದರು.

 

‘ನಮಗೆ ಸಿಕ್ಕಿರುವ ಪ್ರಾಥಮಿಕ ಸಾಕ್ಷ್ಯಗಳನ್ನಷ್ಟೇ ನಿಮಗೆ ನೀಡಿದ್ದೇವೆ. ಇದನ್ನು ಆಧಾರವಾಗಿರಿಸಿಕೊಂಡು ಮುಂದಿನ ತನಿಖೆ ನಡೆಸಿದರೆ ಇನ್ನಷ್ಟು ಸತ್ಯಾಂಶಗಳು ಹೊರಬರಲಿವೆ. ತಾವುಗಳು ದಯವಿಟ್ಟು ಈ ದೂರರ್ಜಿಯನ್ನು ಪರಿಗಣಿಸಿ ರೇರಾ ಅಧ್ಯಕ್ಷ ರಾಕೇಶ್‌ ಸಿಂಗ್‌ ಅವರನ್ನು ತನಿಖೆಗೊಳಪಡಿಸಬೇಕು ಮತ್ತು ಈ ಪ್ರಕರಣದಲ್ಲಿ ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಅವರನ್ನು ಸಾಕ್ಷಿಯನ್ನಾಗಿ ಪರಿಗಣಿಸಿ ಅವರಿಂದಲೂ ಕಾನೂನುಬದ್ಧವಾಗಿ ಹೇಳಿಕೆ ಪಡೆಯಬೇಕು,’ ಎಂದು ಮನವಿ ಮಾಡಿದ್ದರು.

 

‘ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರು  ಮುಖ್ಯ ಮಂತ್ರಿಯಾಗಿದ್ದಾಗ ತಮ್ಮ  ಸಹಿ ಪೋರ್ಜರಿ ಆಗಿದೆ ಅಂತ ಹೇಳಿದ್ದರು. ಫೋರ್ಜರಿ ಸಹಿ ಯಾರದ್ದು ಎಂದು ನಮ್ಮ ಬಳಿ ದಾಖಲೆ ಇದೆ. ಇದನ್ನಾಧರಿಸಿ ರಾಕೇಶ್ ಸಿಂಗ್ ಅವರೇ ಫೋರ್ಜರಿ ಮಾಡಿದ್ದರು ಎಂಬುದಕ್ಕೆ   ಕೈ ಬರಹದ ಸಾಕ್ಷ್ಯವನ್ನೂ ಕೊಟ್ಟಿದ್ದೆವು.   ಈ ಬಗ್ಗೆ ದೂರು ಕೊಟ್ಟು ವರ್ಷ ಕಳೆದು ಹೋಗಿದೆ.  ಇನ್ನೂ ವಿಚಾರಣೆ ಪ್ರಾರಂಭವೇ ಆಗಿಲ್ಲ. ಮಾಜಿ ಮುಖ್ಯಮಂತ್ರಿಗಳ ಸಹಿ ಪೋರ್ಜರಿ ಮಾಡಿರುವ ಪ್ರಕರಣವೇ ಹೀಗಾದರೆ, ಜನ ಸಾಮಾನ್ಯರನ್ನು ವಂಚಿಸುವ ಪ್ರಕರಣಗಳ ತನಿಖೆ ಹೇಗಿರುತ್ತೆ,  ಲೋಕಾಯುಕ್ತದಲ್ಲೂ ಭ್ರಷ್ಟ ವ್ಯವಸ್ಥೆ ಇದೆ ಎನ್ನುವುದಕ್ಕೆ ಇದೂ ಕೂಡ ಒಂದು ನಿದರ್ಶನ,’ ಎನ್ನುತ್ತಾರೆ ದೂರದಾರ  ರವಿಕುಮಾರ್ ಕಂಚನಹಳ್ಳಿ.

 

ಈ ದೂರರ್ಜಿ ಮೇಲೆ ಲೋಕಾಯುಕ್ತ ಸಂಸ್ಥೆಯು ಕೈಗೊಂಡಿರುವ ಕ್ರಮದ ಕುರಿತು ‘ದಿ ಫೈಲ್‌’, ಸಕ್ಷಮ ಪ್ರಾಧಿಕಾರವನ್ನು ಸಂಪರ್ಕಿಸಿತ್ತು. ಆದರೆ ಸಕ್ಷಮ ಪ್ರಾಧಿಕಾರಿಯು ಈ ಸಂಬಂಧ ಯಾವುದೇ ಮಾಹಿತಿ ಹಂಚಿಕೊಳ್ಳಲು ಬಯಸಲಿಲ್ಲ. ಮತ್ತು ಕೋರಿದ್ದ ಮಾಹಿತಿಯನ್ನು ನೀಡಲು ನಿರಾಕರಿಸಿದರು.

Hot this week

866.59 ಕೋಟಿ ರು ಮೊತ್ತದ 399 ಬಳಕೆ ಪ್ರಮಾಣ ಪತ್ರಗಳ ಸಲ್ಲಿಕೆಗೆ ಬಾಕಿ ಉಳಿಸಿಕೊಂಡ ಇಲಾಖೆಗಳು; ಅನುದಾನ ದುರುಪಯೋಗ ಸಾಧ್ಯತೆ?

ಬೆಂಗಳೂರು; ರಾಜ್ಯದ ಹಲವು ಇಲಾಖೆಗಳು ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಕೆಯಲ್ಲಿ ತೀವ್ರ...

ಸರ್ಕಾರಿ ಸೇವೆ; ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪ್ರಾತಿನಿಧ್ಯ ಎರಡು ವರ್ಷದಲ್ಲಿ ಇಳಿಕೆಯಾಗಿದೆಯೇ?

ಬೆಂಗಳೂರು; ರಾಜ್ಯ ಸರ್ಕಾರದ ಶಿಕ್ಷಣ, ಒಳಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ...

ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ; ಅಧಿಕಾರಿಗಳ ವಿರುದ್ಧ ದಾಖಲಾಗದ ಎಫ್‌ಐಆರ್, ವರದಿ ಸಲ್ಲಿಸಲು ಸೂಚನೆ

ಬೆಂಗಳೂರು; ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ತವರು ಕ್ಷೇತ್ರದಲ್ಲಿ...

13 ಪರ್ಸೆಂಟ್ ಕಮಿಷನ್‌ಗೆ ಬೇಡಿಕೆ; ಗುತ್ತಿಗೆದಾರರ ಸಂಘದಿಂದ ಮತ್ತೊಂದು ಪತ್ರ, ಕೋರ್ಟ್‌ ಕದ ತಟ್ಟಿದ ಗುತ್ತಿಗೆದಾರರು

ಬೆಂಗಳೂರು;  ಮಹಾತ್ಮಗಾಂಂಧಿ ನಗರ ವಿಕಾಸ ಯೋಜನೆ -1 ರ ಅಡಿಯಲ್ಲಿ ಕಾಮಗಾರಿ...

Topics

866.59 ಕೋಟಿ ರು ಮೊತ್ತದ 399 ಬಳಕೆ ಪ್ರಮಾಣ ಪತ್ರಗಳ ಸಲ್ಲಿಕೆಗೆ ಬಾಕಿ ಉಳಿಸಿಕೊಂಡ ಇಲಾಖೆಗಳು; ಅನುದಾನ ದುರುಪಯೋಗ ಸಾಧ್ಯತೆ?

ಬೆಂಗಳೂರು; ರಾಜ್ಯದ ಹಲವು ಇಲಾಖೆಗಳು ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಕೆಯಲ್ಲಿ ತೀವ್ರ...

ಸರ್ಕಾರಿ ಸೇವೆ; ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪ್ರಾತಿನಿಧ್ಯ ಎರಡು ವರ್ಷದಲ್ಲಿ ಇಳಿಕೆಯಾಗಿದೆಯೇ?

ಬೆಂಗಳೂರು; ರಾಜ್ಯ ಸರ್ಕಾರದ ಶಿಕ್ಷಣ, ಒಳಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ...

ಬಳಕೆಯಾಗದ ಅನುದಾನ; ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗಿಲ್ಲ 10,546.42 ಕೋಟಿ, ಸಿಎಜಿ ಆಕ್ಷೇಪಣೆ

ಬೆಂಗಳೂರು; ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸೇರಿದಂತೆ 2024-25ನೇ ಸಾಲಿನಲ್ಲಿ   ಒಟ್ಟು...

13,646.51 ಕೋಟಿ ಹೆಚ್ಚುವರಿ ವೆಚ್ಚ; ಗೃಹ ಲಕ್ಷ್ಮಿಯದ್ದೇ ಸಿಂಹಪಾಲು, ಹೆಚ್ಚುವರಿ ಖರ್ಚಿಗೆ ಕಾರಣಗಳೇ ಇಲ್ಲ, ಸಿಎಜಿ ಆಕ್ಷೇಪ

ಬೆಂಗಳೂರು;  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯು 2024-25ನೇ ಸಾಲಿನಲ್ಲಿ ...

Related Articles

Popular Categories

error: Content is protected !!