ಬೆಂಗಳೂರು; ಕಲ್ಯಾಣ ಕರ್ನಾಟಕ ಉತ್ಸವ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ಪ್ರಸಕ್ತ ಸಾಲಿಗೆ ಹಾಸ್ಟೆಲ್ ನಿರ್ಮಾಣ ಹಿಂದುಳಿದ ವರ್ಗ ಕಲ್ಯಾಣ ಇಲಾಖೆಗೆ ಈ ವರ್ಷ ಹಣವನ್ನೇ ಒದಗಿಸಿಲ್ಲ.
ವಿಶೇಷವೆಂದರೇ ಆಯವ್ಯಯದಲ್ಲಿ ಈ ಯೋಜನೆಗಾಗಿ 75 ಕೋಟಿ ರು.ಗಳನ್ನು ಸರ್ಕಾರವು ಘೋಷಿಸಿತ್ತು. ಆದರೆ ಪ್ರಸಕ್ತ ವರ್ಷದಲ್ಲಿ ಈ ಯೋಜನೆಗಾಗಿ ಯಾವುದೇ ಹಣವು ಲಭ್ಯವಿಲ್ಲ ಎಂದು ಸ್ವತಃ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯೇ ಹೇಳಿದೆ.
ಕಳೆದ 28 ತಿಂಗಳಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ದಿಗಾಗಿ 13,000 ಕೋಟಿ ರುಪಾಯಿಗಳ ವೆಚ್ಚ ಮಾಡಲಾಗಿದೆ ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಲಾಗುವುದು ಎಂದು ಕಾಂಗ್ರೆಸ್ ಸರ್ಕಾರವು ಹೇಳಿಕೆ ಬಿಡುಗಡೆ ಮಾಡಿರುವ ಬೆನ್ನಲ್ಲೇ ಹಾಸ್ಟೆಲ್‌ಗಳ ನಿರ್ಮಾಣಕ್ಕೆ ಪ್ರಸಕ್ತ ಸಾಲಿನಲ್ಲಿ ಈ ವರ್ಷ ಯಾವುದೇ ಹಣ ಲಭ್ಯವಿಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರು ನೀಡಿರುವ ಮಾಹಿತಿಯು ಮುನ್ನೆಲೆಗೆ ಬಂದಿದೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಚಿವ ಶಿವರಾಜ ತಂಗಡಗಿ ಅವರು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.
ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿ ನಿಲಯಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹೆಚ್ಚುವರಿ ವಿದ್ಯಾರ್ಥಿ ನಿಲಯಗಳನ್ನು ಮಂಜೂರು ಮಾಡುತ್ತಿಲ್ಲ. ವಿದ್ಯಾರ್ಥಿ ನಿಲಯಗಳ ಈ ಬೇಡಿಕೆಯನ್ನು ಈಡೇರಿಸುವಲ್ಲಿ ಈ ಸರ್ಕಾರವೂ ವಿಫಲವಾಗಿದೆ. ಈ ನಡುವೆ ಹಿಂದುಳಿದ ವರ್ಗ ಕಲ್ಯಾಣ ಇಲಾಖೆ ಬಳಿ ಈ ವರ್ಷ ಯಾವುದೇ ಹಣ ಲಭ್ಯವಿಲ್ಲ ಎಂಬ ಸಂಗತಿಯು, ಪ್ರತಿಪಕ್ಷಗಳ ಕೈಗೆ ಮತ್ತೊಂದು ಅಸ್ತ್ರವನ್ನು ನೀಡಿದಂತಾಗಿದೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 2024-25 ಮತ್ತು 2025-26ನೇ ಸಾಲಿನ ಬಜೆಟ್ ಘೋಷಣೆ ಕಾಮಗಾರಿಗಳ ಕುರಿತು 2025ರ ಆಗಸ್ಟ್ 6ರಂದು ನಡೆದಿದ್ದ ಪರಿಶೀಲಾ ಸಭೆ ವೇಳೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರೇ ‘ಪ್ರಸಕ್ತ ವರ್ಷ ಯಾವುದೇ ಹಣ ಲಭ್ಯವಿಲ್ಲ,’ ಎಂದು ಮಾಹಿತಿ ಒದಗಿಸಿದ್ದಾರೆ.
ಈ ಸಭೆಯ ನಡವಳಿಗಳ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
2024-25ನೇ ಸಾಲಿಗೆ ಕೆಕೆಆರ್‍ಡಿಬಿ ಬಜೆಟ್ (156 ಕೋಟಿ) 2025-26ನೇ ಸಾಲಿಗೆ (75) ಕೋಟಿ ವೆಚ್ಚದಲ್ಲಿ ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಹಾಸ್ಟೆಲ್‌ಗಳನ್ನು ನಿರ್ಮಾಣ ಮಾಡಲು ಘೋಷಿಸಿತ್ತು. ಇದರಲ್ಲಿ 2024-25ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪಾಲು 81.00 ಕೋಟಿಯಷ್ಟಿತ್ತು. ಕೆಕೆಆರ್‍ಡಿಬಿ ಪಾಲು 75 ಕೋಟಿಗಳಷ್ಟಿದೆ. ಈ ಪೈಕಿ ಕೆಕೆಆರ್‍ಡಿಬಿಯಿಂದ 60 ಕೋಟಿ ರು.ಗಳನ್ನು ಬಿಡುಗಡೆ ಮಾಡಲಾಗಿತ್ತು.
ಈ ಅನುದಾನವನ್ನು ಬಳಸಿಕೊಂಡು 34 ಸ್ಥಳಗಳಲ್ಲಿ ಹಾಸ್ಟೆಲ್‌ಗಳ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಅನುಷ್ಠಾನ ಏಜೆನ್ಸಿಯಾಗಿರುವ ಕರ್ನಾಟಕ ಪೊಲೀಸ್ ವಸತಿ ನಿಗಮವು ಟೆಂಡರ್ ಆಹ್ವಾನಿಸಿದೆ. ಕಾರ್ಯಾದೇಶಗಳನ್ನು ನೀಡಿದೆ. ಇಲ್ಲಿಯವರೆಗೆ 30 ಸ್ಥಳಗಳಲ್ಲಿ ಕಾಮಗಾರಿ ಆರಂಭವಾಗಿದೆ. ಈ ವರ್ಷ ಈ ಕಾಮಗಾರಿಗೆ 56 ಕೋಟಿ ರುಗ.ಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಜೆಟ್‌ನಲ್ಲಿ ಕಾಯ್ದಿರಿಸಿದೆ. ಯಾವುದೇ ಹಣಕಾಸಿನ ಕೊರತೆ ಇಲ್ಲ ಎಂದು ಆಯುಕ್ತರು ಸಭೆಯ ಗಮನಕ್ಕೆ ತಂದಿರುವುದು ಗೊತ್ತಾಗಿದೆ.
ಪ್ರಸಕ್ತ ವರ್ಷ ಹಣ ಲಭ್ಯವಿಲ್ಲವೆಂದ ಇಲಾಖೆ
2025-26ನೇ ಸಾಲಿಗೆ ಹಾಸ್ಟೆಲ್ ನಿರ್ಮಾಣ ಯೋಜನೆಗಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಒಟ್ಟು 75 ಕೋಟಿ ರು.ಗಳನ್ನು ಮೀಸಲಿಟ್ಟಿದೆ. ಇದರಲ್ಲಿ ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯು 50;50ರ ಅನುಪಾತದಡಿಯಲ್ಲಿ 75 ಕೋಟಿ ರು.ಗಳನ್ನು ಮಂಜೂರು ಮಾಡಬೇಕು. ಆದರೆ ಈ ವರ್ಷ ಯಾವುದೇ ಹಣ ಲಭ್ಯವಿಲ್ಲ ಎಂದು ಇಲಾಖೆಯ ಆಯುಕ್ತರು ಸಭೆಗೆ ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.
ಈ ಕುರಿತು ಸಭೆಯಲ್ಲಿ ಚರ್ಚೆಯಾಗಿದೆ. ಕಳೆದ ವರ್ಷ ಮಂಜೂರು ಮಾಡಿದ ಕಾಮಗಾರಿಗಳಿಗೆ ಅನುದಾನವನ್ನು ಸಂಪೂರ್ಣವಾಗಿ ಬಳಸಿಲ್ಲ. ಹಿಂದುಳಿದ ವರ್ಗ ಕಲ್ಯಾಣ ಇಲಾಖೆಗೆ ಈಗಾಗಲೇ ಲಭ್ಯವಿರುವ ಅನುದಾನವನ್ನು ಕೆಕೆಆರ್‍ಡಿಬಿ ನಿಧಿಯೊಂದಿಗೆ ಮುಖ್ಯ ಆದ್ಯತೆ ಆಧಾರದ ಮೇಲೆ ಬಳಸಿಕೊಳ್ಳಬೇಕು. ಕಾಮಗಾರಿಯನ್ನು ಕೈಗೊಳ್ಳಬೇಕು ಎಂದು ಸೂಚಿಸಿರುವುದು ಗೊತ್ತಾಗಿದೆ.
ಕಲ್ಬುರ್ಗಿಯ ಅಳಂದ, ಅಫಜಲ್‌ಪುರ, ಭಾಲ್ಕಿ, ಯಾದಗಿರಿಯ ನಾಲ್ಕು ಸ್ಥಳಗಳಲ್ಲಿ ಜಮೀನಿನ ಸಮಸ್ಯೆಯಿದೆ. ಜಮೀನಿನ ಸಮಸ್ಯೆ ಕಾರಣಕ್ಕೆ ಕಾಮಗಾರಿ ಕುಂಠಿತಗೊಂಡಿದೆ. ಹೆಚ್ಚಿನ ಅಗತ್ಯವಿರುವ ಪ್ರದೇಶ ಮತ್ತು ಸೂಕ್ತವಾದ ಭೂಮಿಯ ಲಭ್ಯತೆ ನಿರ್ಧರಿಸಿಲ್ಲ. ಇದೆಲ್ಲವನ್ನು ಖಚಿತಪಡಿಸಿಕೊಂಡು ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಒಂದೊಮ್ಮೆ ಜಮೀನಿನ ಸಮಸ್ಯೆಗಳು ಬಗೆಹರಿಯದಿದ್ದರೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗಾಗಲೇ ಇನ್ನು ಖಾಲಿ ಇರುವ 50 ಖಾಲಿ ನಿವೇಶನಗಳಿಗೆ ಕಾಮಗಾರಿ ಸ್ಥಳ ಬದಲಾಯಿಸಬೇಕು ಎಂದೂ ಸೂಚಿಸಿರುವುದು ತಿಳಿದು ಬಂದಿದೆ.
2024-25ರಲ್ಲಿ ಕೈಗೊಂಡಿದ್ದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ, ಅಂದಾಜು ಮೊತ್ತ ಸೇರಿದಂತೆ ಇನ್ನಿತರೆ ದಾಖಲೆ ಮತ್ತು ಕೆಕೆಆರ್‍ಡಿಬಿಯ ಠೇವಣಿ ಕೊಡುಗೆ ಕುರಿತು ಸಭೆಯಲ್ಲಿ ಚರ್ಚೆಯಾಗಿದೆ. ಬಾಕಿ ಮೊತ್ತವನ್ನು ಬಿಡುಗಡೆ ಮಾಡಲು ಸೂಚಿಸಲಾಗಿದೆಯಾದರೂ ಬಾಕಿ ಮೊತ್ತ ಎಷ್ಟಿದೆ ಎಂಬ ಅಂಕಿ ಅಂಶಗಳು ನಡವಳಿಯಲ್ಲಿ ದಾಖಲಿಸಿಲ್ಲ.
ಕಲ್ಯಾಣ ಕರ್ನಾಟಕದ ಹಿಂದುಳಿದ ವರ್ಗಗಳಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳ ಕೊರತೆಯು ಒಂದು ಗಂಭೀರ ಸಮಸ್ಯೆಯಾಗಿ ಪರಿಣಿಮಿಸಿದೆ. ಶೈಕ್ಷಣಿಕ ಅವಕಾಶ ವಂಚಿತ ವಿದ್ಯಾರ್ಥಿಗಳಿಗೆ ವಸತಿ ಒದಗಿಸಲು ತಕ್ಷಣದ ಕ್ರಮಗಳನ್ನು ಕೈಗೊಳ್ಳುವುದರಲ್ಲಿ ಸರ್ಕಾರವು ವಿಫಲವಾಗುತ್ತಲೇ ಬಂದಿದೆ. ಹಾಸ್ಟೆಲ್‌ಗಳ ನಿರ್ಮಾಣವನ್ನು ಹೆಚ್ಚಿಸುತ್ತಿಲ್ಲ.
ಅಸ್ತಿತ್ವದಲ್ಲಿರುವ ಹಾಸ್ಟೆಲ್‌ಗಳ ನಿರ್ವಹಣೆಯನ್ನು ಸುಧಾರಿಸುತ್ತಿಲ್ಲ. ಹೀಗಾಗಿ ಈ ಭಾಗದಲ್ಲಿ ಶೈಕ್ಷಣಿಕ ಅಸಮಾನತೆಯು ಅತಿರೇಕಕ್ಕೆ ಹೋಗಿದೆ. ಹಾಸ್ಟೆಲ್‌ಗಳ ಕೊರತೆಯಿಂದಾಗಿಯೇ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪ್ರಗತಿಯಿಂದ ವಂಚಿತಗೊಳಿಸುತ್ತಿದೆ.
ಕಲ್ಯಾಣ ಕರ್ನಾಟಕ ಪ್ರದೇಶಗಳಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ 363.2 ಕೋಟಿ ರು ವೆಚ್ಚ ಮಾಡಿದೆ. ಅಲ್ಪಸಂಖ್ಯಾತರ ಅಭಿವೃದ್ದಿಗಾಗಿ 238.03 ಕೋಟಿ ರು., ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ 576.4 ಕೋಟಿ ರು., ಕಲ್ಯಾಣ ಪಥಕ್ಕೆ 1,000 ಕೋಟಿ ರು., 17 ಪ್ರಜಾಸೌಧಗಳ ನಿರ್ಮಾಣಕ್ಕೆ 165.95 ಕೋಟಿ, ಅಂರ್ತಜಲ ಅಭಿವೃದ್ಧಿಗಾಗಿ 175.8 ಕೋಟಿ , ಅರಣ್ಯ ಆವಿಷ್ಕಾರಕ್ಕೆ 96.16 ಕೋಟಿ, ಇಂಡಸ್ಟ್ರಿಯಲ್ ಹಬ್‌ಗಾಗಿ 150.9 ಕೋಟಿ, ಕಲ್ಯಾಣ ಕರ್ನಾಟಕ ಹಾರ್ಟ್‌ಲೈನ್‌ಗಾಗಿ 11.47 ಕೋಟಿ ರು.ಗಳನ್ನು ಕಳೆದ 28 ತಿಂಗಳಲ್ಲಿ ವೆಚ್ಚ ಮಾಡಲಾಗಿದೆ ಎಂದು ಸರ್ಕಾರವು ಹೇಳಿಕೆ ನೀಡಿರುವುದನ್ನು ಸ್ಮರಿಸಬಹುದು.