7.20 ಕೋಟಿ ಮೊತ್ತದ ಗುತ್ತಿಗೆ ಮುಂದುವರಿಕೆ; ಟೆಂಡರ್ ಇಲ್ಲದೇ ‘ದ ಪಾಲಿಸಿ ಫ್ರಂಟ್‌’ಗೆ ಫಟಾಫಟ್‌ ಕಾರ್ಯಾದೇಶ

ಬೆಂಗಳೂರು; ಸರ್ಕಾರದ ಯೋಜನೆ, ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ  ಪ್ರಚಾರ ಮಾಡಲು 7.20 ಕೋಟಿ ರು ಮೊತ್ತದ  ಗುತ್ತಿಗೆಯ ಅವಧಿ ಪೂರ್ಣಗೊಂಡಿದ್ದರೂ ಸಹ ಯಾವುದೇ ಟೆಂಡರ್‍‌ ಆಹ್ವಾನಿಸದೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೌಖಿಕ ಸೂಚನೆ ಮೇರೆಗೆ ಈ ಗುತ್ತಿಗೆಯನ್ನು ‘ದ ಪಾಲಿಸಿ ಫ್ರಂಟ್‌’ ಹೆಸರಿನಲ್ಲಿ ಮುಂದುವರೆಸಿರುವುದು ಇದೀಗ ಬಹಿರಂಗವಾಗಿದೆ.

 

ದ ಪಾಲಿಸಿ ಫ್ರಂಟ್‌ ಗೆ ಗುತ್ತಿಗೆಯನ್ನು ಮುಂದುವರೆಸಲು ಚಿರತೆ ವೇಗದಲ್ಲಿ ಸರ್ಕಾರ ಮತ್ತು ʻಕರ್ನಾಟಕ ಸ್ಟೇಟ್‌ ಮಾರ್ಕೆಟಿಂಗ್‌ ಕಮ್ಯುನಿಕೇಷನ್‌ ಅಂಡ್‌ ಅಡ್ವರ್ಟೈಸಿಂಗ್‌ ಲಿಮಿಟೆಡ್‌ʼ (ಎಂಸಿ ಅಂಡ್‌ ಎ) ಆಡಳಿತಾತ್ಮಕ ಪ್ರಕ್ರಿಯೆಗಳನ್ನು ನಡೆಸಿವೆ. ಸರ್ಕಾರವು ಕಚೇರಿ ಆದೇಶ ಹೊರಡಿಸಿದ ದಿನದಂದೇ ಎಂಸಿ ಅಂಡ್‌ ಎ ಯು ಸಹ ಫಟಾಫಟ್‌ ಎಂದು  ಕಾರ್ಯದೇಶ ನೀಡಿದೆ.

 

ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರದ ಯೋಜನೆ, ಕಾರ್ಯಕ್ರಮಗಳನ್ನು ಪ್ರಚಾರ ಮಾಡಲು  ‘ದ ಪಾಲಿಸಿ ಫ್ರಂಟ್‌’ಗೆ ನೀಡಿದ್ದ  7.20 ಕೋಟಿ ರು ಮೊತ್ತದ ಗುತ್ತಿಗೆ ಅವಧಿಯು 2024ರ ಸೆ.12ಕ್ಕೆ ಪೂರ್ಣಗೊಂಡಿತ್ತು. ನಿಯಮದ ಪ್ರಕಾರ ಈ ಸೇವೆ ಮುಂದುವರೆಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹೊಸದಾಗಿ ಟೆಂಡರ್‍‌ ಆಹ್ವಾನಿಸಬೇಕಿತ್ತು.

 

ಆದರೆ ಇದಕ್ಕೆ ಯಾವುದೇ ಅವಕಾಶಗಳನ್ನೂ ನೀಡದೆಯೇ ಗುತ್ತಿಗೆ ಅವಧಿಯನ್ನು ದ ಪಾಲಿಸಿ ಫ್ರಂಟ್‌ಗೆ ವಿಸ್ತರಿಸಿ ಕಾರ್ಯಾದೇಶ ನೀಡಿರುವುದು  ಆರ್‍‌ಟಿಐ ಮೂಲಕ ಪಡೆದ ದಾಖಲೆಗಳು ಬಹಿರಂಗಪಡಿಸಿವೆ.

 

ಮಂಗಳೂರು ಮೂಲದ ರಮೇಶ್‌ ಎಸ್‌ ಪೆರ್ಲ ಎಂಬುವರು ಸಲ್ಲಿಸಿದ್ದ ಆರ್‍‌ಟಿಐ ಅರ್ಜಿಗೆ ಕರ್ನಾಟಕ ಸ್ಟೇಟ್‌ ಮಾರ್ಕೆಂಟಿಂಗ್‌ ಕಮ್ಯೂನಿಕೇಷನ್ ಮತ್ತು ಅಡ್ವೈರ್ಟೈಸಿಂಗ್ ಲಿಮಿಟೆಡ್ 2025ರ ಜೂನ್‌ 12ರಂದು ಮಾಹಿತಿ ಒದಗಿಸಿದೆ.

 

ವಿಶೇಷವೆಂದರೇ 7.20 ಕೋಟಿ ರು ಮೊತ್ತದ ಈ ಗುತ್ತಿಗೆ ಅವಧಿ ಪೂರ್ಣಗೊಂಡ ನಂತರವೂ ದ ಪಾಲಿಸಿ ಫ್ರಂಟ್‌ ಅನಧಿಕೃತವಾಗಿ ಸೇವೆ ನೀಡಿತ್ತು. ಹೊಸದಾಗಿ ಕಾರ್ಯಾದೇಶ ನೀಡುವ ಮುನ್ನ  ಟೆಂಡರ್ ಆಹ್ವಾನಿಸಬೇಕಿತ್ತು. ಆದರೆ ಎಂ ಸಿ ಅಂಡ್‌ ಎ ಯು ಆರ್‍‌ಟಿಐ ಅಡಿಯಲ್ಲಿ ನೀಡಿರುವ ಸಮಗ್ರ ದಾಖಲೆಗಳಲ್ಲಿ ಟೆಂಡರ್‍‌ ಆಹ್ವಾನಿಸಿರುವ ಕುರಿತು ಯಾವುದೇ ಮಾಹಿತಿ, ದಾಖಲೆ, ಹಾಳೆಯೂ ಸಹ ಕಂಡು ಬಂದಿಲ್ಲ.

 

ರಾಜ್ಯ ಸರ್ಕಾರದ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳ ನಿರ್ವಹಣೆ ಮತ್ತು ಕಾರ್ಯಾದೇಶದಲ್ಲಿದ್ದ ಇತರೆ ಸೇವೆಗಳನ್ನು ವ್ಯಾಪಕವಾಗಿ ಪ್ರಚಾರ ಮಾಡುವ ಸಲುವಾಗಿ ಈ ಸೇವೆಯನ್ನು ಒಂದು ವರ್ಷದ ಅವಧಿಗೆ ಮುಂದುವರೆಸಬೇಕು ಎಂದು ಎಂ ಸಿ ಅಂಡ್‌ ಎ ನ ವ್ಯವಸ್ಥಾಪಕ ನಿರ್ದೇಶಕರಿಗೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್‍‌ ಅವರು 2024ರ ಸೆ.11ರಂದು ಟಿಪ್ಪಣಿ ಹೊರಡಿಸಿದ್ದರು.

 

 

 

ಈ ಟಿಪ್ಪಣಿ ಹೊರಬಿದ್ದ ಒಂದೇ ಒಂದು ದಿನ ಅಂತರದಲ್ಲಿ    ಸೇವೆಯನ್ನು ಮುಂದುದವರೆಸಬೇಕು ಎಂದು ದ ಪಾಲಿಸಿ ಫ್ರಂಟ್‌ನ ಪಾಲುದಾರರು,  ಎಂಸಿ ಅಂಡ್‌ ಎ ನ ವ್ಯವಸ್ಥಾಪಕ ನಿರ್ದೇಶಕರಿಗೆ   2024ರ 12ರಂದು ಕೋರಿದ್ದರು.

 

 

ಇದನ್ನು ಪರಿಗಣಿಸಿದ್ದ  ಕೆಎಸ್‌ಎಂಸಿಎಯು 2024ರ ಸೆ.13ಕ್ಕೆ ಪೂರ್ವಾನ್ವಯ ಅಗುವಂತೆ ಪರಿಷ್ಕರಿಸಿ ಅಧಿಸೂಚನೆ ಹೊರಡಿಸಬೇಕು ಎಂದು ಎಂಸಿ ಅಂಡ್‌ ಎ ನ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರವನ್ನು 2025ರ ಫೆ.21ರಂದು  ಕೋರಿದ್ದರು ಎಂಬುದು ಅರ್‍‌ಟಿಐ ದಾಖಲೆಗಳಿಂದ ತಿಳಿದು ಬಂದಿದೆ.

 

 

 

 

 

ಮುಂಗಡವಾಗಿಯೇ ಆದೇಶ

 

ಎಂಸಿ ಅಂಡ್‌ ಎ ನ ವ್ಯವಸ್ಥಾಪಕ ನಿರ್ದೇಶಕರು ಈ ಕೋರಿಕೆ ಸಲ್ಲಿಸುವ ಮುನ್ನವೇ ಮುಂಗಡವಾಗಿಯೇ ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆಯು 2025ರ ಜನವರಿ 1ರಿಂದಲೇ ಅನ್ವಯವಾಗುವಂತೆ ಕಚೇರಿ ಆದೇಶ ಹೊರಡಿಸಿರುವುದು ಆರ್‍‌ಟಿಐ ದಾಖಲೆಗಳಿಂದ ತಿಳಿದು ಬಂದಿದೆ.

 

 

 

ಫಟಾಫಟ್‌ ಕಾರ್ಯಾದೇಶ

 

ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆಯು ಕಚೇರಿ ಆದೇಶ ಹೊರಡಿಸಿದ ದಿನದಂದೇ ಅಂದರೇ 2025ರ ಫೆ.12ರಂದೇ ಎಂಸಿ ಅಂಡ್‌ ಎ ಯು ದ ಪಾಲಿಸಿ ಫ್ರಂಟ್‌ಗೆ ಕಾರ್ಯಾದೇಶವನ್ನೂ ನೀಡಿರುವುದು ಆರ್‍‌ಟಿಐ ದಾಖಲೆಗಳಿಂದ ಗೊತ್ತಾಗಿದೆ.

 

 

 

ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ಕೆಲವೇ ಕೆಲವೇ ತಿಂಗಳಲ್ಲಿ  ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರದ ಕಾರ್ಯಕ್ರಮಗಳನ್ನು ಪ್ರಚಾರ ಮಾಡಲು ಮುಂದಾಗಿತ್ತು. ಈ ಸೇವೆಗಳನ್ನು ಪಡೆಯಲು ಯಾವುದೇ  ಸ್ಪರ್ಧಾತ್ಮಕ ಟೆಂಡರ್ ಕರೆದಿರಲಿಲ್ಲ. ಬದಲಿಗೆ ದರ ಪಟ್ಟಿಯನ್ನು ಪಡೆದು 7.20 ಕೋಟಿ ರು ವೆಚ್ಚದಲ್ಲಿ  ಒಂದು ವರ್ಷದ ಅವಧಿಗೆ ಗುತ್ತಿಗೆ ನೀಡಿತ್ತು.

‘ಯಾವುದಕ್ಕೂ  ಒಂದು ಇತಿ ಮಿತಿ ಬೇಕು. ಯಾರು ಕೇಳುವವರು ಇಲ್ಲ ಎಂಬಂತೆ ಸರಕಾರ ವರ್ತಿಸುತ್ತಿದೆ. ಸಂವಿಧಾನ ರಕ್ಷಣೆ ಮಾಡುತ್ತೇವೆ ಎನ್ನುವ ಪಕ್ಷದ ಸರಕಾರ ಕಾನೂನುಗಳನ್ನು ಖುಲ್ಲಂ ಖುಲ್ಲಾಂ ಉಲ್ಲಂಘನೆ ಮಾಡುತ್ತಿದೆ. ಈ ಬಗ್ಗೆ ನಾನು ಮುಖ್ಯ ಮಂತ್ರಿಯವರಿಗೆ ಪತ್ರ ಬರೆದಿದ್ದೇನೆ. 7ಕೋಟಿ ರೂಪಾಯಿ ಗುತ್ತಿಗೆಯನ್ನು ಟೆಂಡರ್ ಕರೆಯದೆ ಮಾತ್ರವಲ್ಲದೆ ಅರ್ಹತೆ ಇಲ್ಲದೆ ನೀಡಿರುವುದು ಕಾನೂನು ಬಾಹಿರ,’ ಎಂದು ಆರೋಪಿಸುತ್ತಾರೆ ರಮೇಶ್‌ ಎಸ್‌ ಪೆರ್ಲ.
‘ಇಷ್ಟರ ತನಕ ಪೋಲು ಮಾಡಲಾದ ತೆರಿಗೆದಾರರ ಹಣವನ್ನು ವಸೂಲು ಮಾಡುವ ಕಾನೂನು ಬಾಧ್ಯತೆ ಸರಕಾರಕ್ಕೆ ಇದೆ. ಸರಕಾರ ಕೂಡಲೇ ಎಚ್ಚೆತ್ತುಕೊಂಡು ಗುತ್ತಿಗೆ ರದ್ದು ಪಡಿಸಬೇಕು.  ಪೋಲು ಮಾಡಲಾದ ಹಣವನ್ನು ಪೈಸೆ ಬಿಡದೆ ವಸೂಲು ಮಾಡಬೇಕು. ಮುಖ್ಯವಾಗಿ ಇಂತಹದೊಂದು ಡಿಜಿಟಲ್ ಪ್ರಚಾರದ ಅಗತ್ಯವೇ ಉದ್ಭವಿಸುವುದಿಲ್ಲ. ಇಬ್ಬರು ಸಂಪುಟ ದರ್ಜೆ ಮಾಧ್ಯಮ ಸಲಹೆಗಾರರಿದ್ದಾರೆ, ವಾರ್ತಾ ಇಲಾಖೆ ಇದೆ, ಅದರಲ್ಲೊಂದು, ಸೋಶಿಯಲ್ ಮಿಡಿಯ ವಿಂಗ್ ಇದೆ. ಇವುಗಳೇ ಹೆಚ್ಚಾಯಿತು. ಆದುದರಿಂದ ಇದೊಂದು ದೊಡ್ಡ ಹಗರಣ. ಡಿಜಿಟಲ್ ಪ್ರಸೆನ್ಸ್ ಕಾಣಿಸಬೇಕಲ್ಲ. ಎಲ್ಲಿದೆ ಇವರ ಕೆಲಸ,’ ಎಂದು ಪ್ರಶ್ನಿಸುತ್ತಾರೆ ರಮೇಶ್ ಎಸ್.ಪೆರ್ಲ

ಸರ್ಕಾರದ ಯೋಜನೆ, ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ  ಪ್ರಚಾರ ಮಾಡುವ ಸಂಬಂಧ ‘ದ ಪಾಲಿಸಿ ಫ್ರಂಟ್‌’ ಗೆ ಒಂದು ವರ್ಷದ ಹಿಂದೆ ನೀಡಿದ್ದ ಹೊರಗುತ್ತಿಗೆಯನ್ನು ನವೀಕರಿಸಲು ಎಂಸಿಅಂಡ್‌ಎ ಕಂಪನಿಯು ಮುಂದಾಗಿದೆ. ಇದಕ್ಕೆ ಅನುಮೋದನೆ ಕೋರಿ ಮುಖ್ಯಮಂತ್ರಿಗಳಿಗೆ ಕಡತ ಸಲ್ಲಿಕೆಯಾಗಿತ್ತು.

 

‘ದ ಪಾಲಿಸಿ ಫ್ರಂಟ್‌’ ಗೆ ಗುತ್ತಿಗೆ ನವೀಕರಣಕ್ಕೆ ಸಿಎಂಗೆ ಕಡತ ಸಲ್ಲಿಕೆ!; ಈ ಬಾರಿಯೂ ಟೆಂಡರ್‍‌ನಿಂದ ವಿನಾಯಿತಿ?

 

ಗುತ್ತಿಗೆ ಅವಧಿ ಪೂರ್ಣಗೊಂಡ ನಂತರ ಇದೇ ಸೇವೆಗಳ ಪಡೆಯುವ ತುರ್ತು ಮತ್ತು ಅಗತ್ಯತೆಗಳಿದ್ದರೆ ಹೊಸದಾಗಿ ಸ್ಪರ್ಧಾತ್ಮಕ ಟೆಂಡರ್ ಆಹ್ವಾನಿಸಬೇಕಿತ್ತು. ಆದರೆ ಈ ಯಾವ ಪ್ರಕ್ರಿಯೆಯನ್ನೂ ನಡೆಸದೆಯೇ ನೇರವಾಗಿ ಗುತ್ತಿಗೆಯನ್ನೇ ನವೀಕರಿಸಲು ಕಡತ ಸಲ್ಲಿಸಿರುವುದಕ್ಕೆ ಅಧಿಕಾರಿಗಳ ವಲಯದಲ್ಲೇ ವಿರೋಧ ವ್ಯಕ್ತವಾಗಿತ್ತು.

 

ವಾಟ್ಸಾಪ್‌ ಸಂಭಾಷಣೆಗೆ 1.45 ಕೋಟಿ ರು. ಸೇರಿದಂತೆ ಒಟ್ಟಾರೆ 1.71 ಕೋಟಿ ರು. ವೆಚ್ಚವಾಗಲಿದೆ ಎಂದು ‘ದ ಪಾಲಿಸಿ ಫ್ರಂಟ್‌’  ಸಲ್ಲಿಸಿದ್ದ ವಾಣಿಜ್ಯ ಪ್ರಸ್ತಾವನೆಯು ಬಹಿರಂಗವಾಗಿತ್ತು.

 

ಈ ಸಂಬಂಧ ‘ದಿ ಫೈಲ್‌’ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಆರ್ಥಿಕ ಇಲಾಖೆಯು ಒದಗಿಸಿದ್ದ  42 ಪುಟಗಳ ದಾಖಲೆಗಳಲ್ಲಿ ‘ದ ಪಾಲಿಸಿ ಫ್ರಂಟ್‌’ನ ವಾಣಿಜ್ಯ ಪ್ರಸ್ತಾವನೆ ಮತ್ತು ಮನವಿ ಮಾತ್ರ ಇತ್ತು. ಇದನ್ನು ಹೊರತುಪಡಿಸಿದರೆ ಈ ಸೇವೆಗಳ ಕುರಿತಾಗಿ ಪೂರ್ವಾನುಭವ ಹೊಂದಿರುವ ಬಗ್ಗೆ ಯಾವ ದಾಖಲೆಗಳೂ ಇಲ್ಲ. ಮತ್ತು ಆರ್ಥಿಕ ಇಲಾಖೆಯ (ವೆಚ್ಚ-7) ಅಧಿಕಾರಿಗಳೂ ಸಹ ಇದರ ಬಗ್ಗೆ ಎಲ್ಲಿಯೂ ಚಕಾರ ಎತ್ತಿರಲಿಲ್ಲ.

 

‘ದ ಪಾಲಿಸಿ ಫ್ರಂಟ್‌’ನ ವಾಣಿಜ್ಯ ಪ್ರಸ್ತಾವನೆ ಬಹಿರಂಗ; ವಾಟ್ಸಾಪ್‌ ಸಂಭಾಷಣೆ ಸೇರಿ 1.45 ಕೋಟಿ ವೆಚ್ಚ

 

ಈ ಕಂಪನಿಗೆ ನೀಡಿದ್ದ ಹೊರಗುತ್ತಿಗೆ ವಿಚಾರವು ಸದನದಲ್ಲಿಯೂ ಪ್ರತಿಧ್ವನಿಸಿತ್ತು.

 

‘ಪಟ್ಟು, ಮಟ್ಟು, ಗುಟ್ಟು ರಟ್ಟಾಗ್ಬೇಕು, ಮಟ್ಟು ಯಾರಂತ ನೋಡ್ಬೇಕು’; ಸದನದಲ್ಲಿ ಪ್ರತಿಧ್ವನಿಸಿದ ‘ದಿ ಫೈಲ್‌’ ವರದಿ

 

ಸುಳ್ಳು ಸುದ್ದಿಗಳ  ತಡೆಗಟ್ಟುವಿಕೆ ಮತ್ತು ಸರ್ಕಾರದ ಸಾಧನೆ, ಯೋಜನೆಗಳ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ, ನಿರ್ವಹಣೆ ಮಾಡಲು ಕೆಎಸ್‌ಎಂಸಿ ಅಂಡ್‌ ಎ ಮೂಲಕ ಕಾರ್ಯಾದೇಶ ಪಡೆದುಕೊಂಡಿರುವ ‘ದ ಪಾಲಿಸಿ ಫ್ರಂಟ್‌’ ಗೆ ಕಚೇರಿಯೇ ಇಲ್ಲ ಎಂಬ ಸಂಗತಿಯು ಚರ್ಚೆಗೆ ಗ್ರಾಸವಾಗಿತ್ತು.

 

7.20 ಕೋಟಿ ರು ಗುತ್ತಿಗೆ; ಕಾರ್ಯಾದೇಶದಲ್ಲಿರುವ ವಿಳಾಸದಲ್ಲಿ ‘ದ ಪಾಲಿಸಿ ಫ್ರಂಟ್‌’ ಕಚೇರಿಯೇ ಇಲ್ಲ

 

ಆಡಳಿತ ಕಾರ್ಯತಂತ್ರ ಮತ್ತು ಆರ್ಥಿಕ ಹಿತಾಸಕ್ತಿ ವಿಷಯ, ಮಾಹಿತಿಗಳು ಒಳಗೊಂಡಿದೆ ಎಂದು ಕುಂಟು ನೆಪವೊಡ್ಡಿ ‘ದ ಪಾಲಿಸಿ ಫ್ರಂಟ್‌’ ಗೆ ನೀಡಿರುವ ಗುತ್ತಿಗೆ ಸಂಬಂಧಿತ ಸಮಗ್ರ ಕಡತವನ್ನು ಆರ್‌ಟಿಐ ಅಡಿಯಲ್ಲಿ ನೀಡಲು ಸರ್ಕಾರವು ನಿರಾಕರಿಸಿದ್ದು  ಚರ್ಚೆಗೆ ಗ್ರಾಸವಾಗಿತ್ತು.  ಈ ಕುರಿತು ಟ್ವೀಟ್‌ ಮಾಡಿದ್ದ  ಬಿಜೆಪಿ ಶಾಸಕ ಅರವಿಂದ್‌ ಬೆಲ್ಲದ್‌ ಅವರು ಪಾರದರ್ಶಕತೆ ಇಲ್ಲದೆಯೇ ಖಜಾನೆ ನಿಧಿ ಹಂಚಿಕೆ ಮಾಡುವುದೇ ಸರ್ಕಾರದ ನೀತಿಯೇ ಎಂದು ಪ್ರಶ್ನಿಸಿದ್ದರು.

ದ ಪಾಲಿಸಿ ಫ್ರಂಟ್‌ಗೆ ಗುತ್ತಿಗೆ; ಪಾರದರ್ಶಕತೆಯಿಲ್ಲದೇ ಖಜಾನೆ ನಿಧಿ ಹಂಚಿಕೆ ಮಾಡುವುದೇ ಸರ್ಕಾರದ ನೀತಿಯೇ?

 

ಮುಕ್ತ  ಟೆಂಡರ್‍‌ ಆಹ್ವಾನಿಸದೆಯೇ ನಿರ್ದಿಷ್ಟವಾಗಿ ‘ದ ಪಾಲಿಸಿ ಫ್ರಂಟ್‌’ ನಿಂದಲೇ ಸೇವೆ ಪಡೆಯಲು ಎಂಸಿಅಂಡ್‌ಎಯು ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಆರ್ಥಿಕ ಇಲಾಖೆಯು ನೀಡಿದ್ದ  4(ಜಿ) ವಿನಾಯಿತಿಯು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಇದಕ್ಕೆ ಸಂಬಂಧಿಸಿದ ಸಮಗ್ರ ಕಡತವನ್ನು ಒದಗಿಸಲು ನಿರಾಕರಿಸಿರುವುದು ‘ದ ಪಾಲಿಸಿ ಫ್ರಂಟ್‌’ನ ಸುತ್ತ ಎದ್ದಿರುವ ಅನುಮಾನಗಳನ್ನು ಮತ್ತಷ್ಟು ಬಲಪಡಿಸಿದಂತಾಗಿತ್ತು.

 

‘ದ ಪಾಲಿಸಿ ಫ್ರಂಟ್‌’ಗೆ 7.20 ಕೋಟಿ ರು. ಮೊತ್ತದ ಗುತ್ತಿಗೆ; ಸಮಗ್ರ ಕಡತ ಒದಗಿಸಲು ನಿರಾಕರಿಸಿದ ಸರ್ಕಾರ

 

ವಿಶೇಷವೆಂದರೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ 4(ಜಿ) ವಿನಾಯಿತಿ ನೀಡಿರುವ ಆರ್ಥಿಕ ಇಲಾಖೆಯು ಆರ್‌ಟಿಐ ಅಡಿಯಲ್ಲಿ ಸಮಗ್ರ ಕಡತವನ್ನೂ ಒದಗಿಸಿತ್ತು.  ಆದರೆ ಕೆಎಸ್‌ಎಂಸಿ ಅಂಡ್‌ ಎ ಕಂಪನಿಯು ತನ್ನ ಹಂತದಲ್ಲಿ ಇದೇ  ವಿಚಾರಕ್ಕೆ ಸಂಬಂಧಿಸಿದಂತೆ ಸೃಜಿಸಿದ್ದ ಕಡತವನ್ನು ಒದಗಿಸಲು ನಿರಾಕರಿಸಿರುವುದು ಮತ್ತಷ್ಟು ಸಂಶಯಗಳಿಗೆ ಆಸ್ಪದ ಮಾಡಿಕೊಟ್ಟಂತಾಗಿತ್ತು.  ಅದಷ್ಟೇ ಅಲ್ಲ,  ಕಡತವನ್ನು ಒದಗಿಸಲು ನಿರಾಕರಿಸುವ  ಮೂಲಕ ‘ದ ಪಾಲಿಸಿ ಫ್ರಂಟ್‌’  ಮತ್ತು ಅದರ ಹಿಂದಿರುವವರನ್ನು ರಹಸ್ಯವಾಗಿರಿಸಲು ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

 

ಮುಕ್ತ  ಟೆಂಡರ್‍‌ ಆಹ್ವಾನಿಸದೆಯೇ ನಿರ್ದಿಷ್ಟವಾಗಿ ‘ದ ಪಾಲಿಸಿ ಫ್ರಂಟ್‌’ ನಿಂದಲೇ ಸೇವೆ ಪಡೆಯಲು ಎಂಸಿಅಂಡ್‌ಎಯು ಸಲ್ಲಿಸಿದ್ದ ಪ್ರಸ್ತಾವನೆಗೆ 4(ಜಿ) ವಿನಾಯಿತಿ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ; ‘ದ ಪಾಲಿಸಿ ಫ್ರಂಟ್‌’ಗೆ 7.20 ಕೋಟಿ ಕೊಟ್ಟ ಸರ್ಕಾರ

 

ಸರ್ಕಾರದ ಸಾಧನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ 2026ರವರೆಗೆ ಪ್ರಚಾರ ಮಾಡಲು ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು 2023ರ ಆಗಸ್ಟ್‌ 28ರಂದು ಪ್ರಸ್ತಾವವನ್ನು ಸಲ್ಲಿಸಿದ್ದರು.  ಅಲ್ಲದೇ ಸುಳ್ಳು ಸುದ್ದಿಗಳನ್ನು ತಡೆಗಟ್ಟುವ ಉದ್ದೇಶವನ್ನೂ ಇದೇ ಪ್ರಸ್ತಾವನೆಯಲ್ಲಿ ವಿವರಿಸಿದ್ದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts