ಬೆಂಗಳೂರು; 2020-21ರಿಂದ 2023-24ರವರೆಗೆ ಕೇಂದ್ರ ಪುರಸ್ಕೃತ ಯೋಜನೆಗಳ ಸಹಾಯಾನುದಾನವು ಕಡಿಮೆಯಾಗುತ್ತಲೇ ಬಂದಿದೆ. 2022-23 ಸಾಲು ಹೊರತುಪಡಿಸಿ ಉಳಿದ ವರ್ಷಗಳಲ್ಲಿ ಸಹಾಯಾನುದಾನದ ಮೊತ್ತವು ಶೇ. 23.05ರಷ್ಟು ಹೆಚ್ಚಾಗಿದೆ. ಆದರೂ 2023-24ರಲ್ಲಿ 21,340 ಕೋಟಿಗಳಷ್ಟು ಕಡಿಮೆಯಾಗಿದೆ ಎಂದು ಸಿಎಜಿ ವರದಿಯು ಬಹಿರಂಗಪಡಿಸಿದೆ.
ಅಲ್ಲದೇ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದಂತೆ ವಿಶೇಷವಾಗಿ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಗಳಿಗೆ ಹೆಚ್ಚಿನ ವೆಚ್ಚ ಮಾಡಿರುವ ಕಾರಣ ಗ್ರಾಮೀಣ ನೀರು ಸರಬರಾಜು ಕಾರ್ಯಕ್ರಮಗಳ ಅಡಿಯಲ್ಲಿ ಕಡಿಮೆ ಖರ್ಚು ಮತ್ತು ಗ್ರಾಮ ಪಂಚಾಯತ್‌ಗಳಿಗೆ ಕಡಿಮೆ ನೆರವು ನೀಡಿದೆ. ಹೀಗಾಗಿ ಗ್ರಾಮೀಣ ಕಾರ್ಯಕ್ರಮಗಳಲ್ಲಿ ವೆಚ್ಚವು ಕಡಿಮೆಯಾಗಿದೆ.
ಕರ್ನಾಟಕ ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆಯಾಗಿರುವ ಸಿಎಜಿ ವರದಿಯು, ಭಾರತ ಸರ್ಕಾರದಿಂದ ಮಂಜೂರಾಗಿರುವ ಮತ್ತು ಬಿಡುಗಡೆಯಾಗಿರುವ ಸಹಾಯಾನುದಾನವನ್ನು ಸಮಗ್ರವಾಗಿ ವಿಶ್ಲೇಷಣೆ ಮಾಡಿದೆ.
ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಸಂಬಂಧಿಸಿದಂತೆ ಅನುದಾನ, ಇತರೆ ವರ್ಗಾವಣೆಗಳು, ಹಣಕಾಸು ಆಯೋಗದ ಅನುದಾನ, ರಾಜ್ಯಗಳಿಗೆ ಅನುದಾನ ಮೊತ್ತದ ಅಂಕಿ ಅಂಶಗಳ ವಿವರಗಳನ್ನು ಸಿಎಜಿ ವರದಿಯಲ್ಲಿ ನೀಡಲಾಗಿದೆ.
2019-20ರಲ್ಲಿ ಕೇಂದ್ರ ಪ್ರಾಯೋಜಿತ ಅನುದಾನಗಳಿಗೆ 12,214 ಕೋಟಿ ರು, 2020-21ರಲ್ಲಿ 9,857 ಕೋಟಿ, 2021-22ರಲ್ಲಿ 11,629 ಕೋಟಿ, 2023-24ರಲ್ಲಿ 9,866 ಕೋಟಿ ರು ಹಂಚಿಕೆಯಾಗಿದೆ. ಇತರೆ ಅನುದಾನಗಳು ಮತ್ತು ರಾಜ್ಯಗಳಿಗೆ ನೀಡಿರುವ ಅನುದಾನ ಪೈಕಿ 2019-20ರಲ್ಲಿ 17,593 ಕೋಟಿ, 2020-21ರಲ್ಲಿ 14,667 ಕೋಟಿ, 2021-22ರಲ್ಲಿ 11,064 ಕೋಟಿ, 2022-23ರಲ್ಲಿ 21,744 ಕೋಟಿ, 2023-24ರಲ್ಲಿ ಕೇವಲ 1,893 ಕೋಟಿ ರು ಹಂಚಿಕೆಯಾಗಿದೆ.
ಹಣಕಾಸು ಆಯೋಗ ಅನುದಾನಗಳ ಪೈಕಿ 2019-20ರಲ್ಲಿ 4,673 ಕೋಟಿ, 2020-21ರಲ್ಲಿ 6,667 ಕೋಟಿ, 2021-22ರಲ್ಲಿ 6,239 ಕೋಟಿ, 2022-23ರಲ್ಲಿ 3,495 ಕೋಟಿ, 2023-24ರಲ್ಲಿ 3,769 ಕೋಟಿ ರು ಹಂಚಿಕೆಯಾಗಿದೆ. 2019-20ರಲ್ಲಿ ಒಟ್ಟಾರೆಯಾಗಿ 34,480 ಕೋಟಿ, 2020-21ರಲ್ಲಿ 30,076 ಕೋಟಿ, 2021-22ರಲ್ಲಿ 29,962 ಕೋಟಿ, 2022-23ರಲ್ಲಿ 36,868 ಕೋಟಿ, 2023-24ರಲ್ಲಿ 15,528 ಕೋಟಿ ವರ್ಗಾವಣೆಯಾಗಿದೆ ಎಂದು ಸಿಎಜಿ ವರದಿಯಿಂದ ಗೊತ್ತಾಗಿದೆ.
ಹಿಂದಿನ ವರ್ಷಕ್ಕೆ ಹೋಲಿಸಿದರೇ 2023-24ರ ಅವಧಿಯಲ್ಲಿ 21,340 ಕೋಟಿ (ಶೇ.57.88) ಇಳಿಕೆಯಾಗಿದೆ. ಈ ಇಳಿಕೆಯು ಮುಖ್ಯವಾಗಿ ರಾಜ್ಯಗಳಿಗೆ ಇತರೆ ವರ್ಗಾವಣೆ/ಅನುದಾನಗಳು ಅಡಿಯಲ್ಲಿ 19,851 ಕೊಟಿಗಳಷ್ಟಿದೆ. ಜಿಎಸ್‌ಟಿ ಅನುಷ್ಠಾನದಿಂದ ಉಂಟಾದ ಆದಾಯ ನಷ್ಟದ ಪರಿಹಾರದ ಅಡಿಯಲ್ಲಿ ಕಡಿಮೆಯಾಗಿದ ಎಂದು ಸಿಎಜಿ ವರದಿಯಲ್ಲಿ ವಿಶ್ಲೇಷಿಸಿರುವುದು ತಿಳಿದು ಬಂದಿದೆ.
ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಹಣಕಾಸು ಆಯೋಗವು 2023-24ರಲ್ಲಿ 2,490 ಕೋಟಿ ರು ಶಿಫಾರಸ್ಸು ಮಾಡಿತ್ತು. ಆದರೆ ವಾಸ್ತವದಲ್ಲಿ 2,086.59 ಕೋಟಿಯಷ್ಟೇ ಬಿಡುಗಡೆಯಾಗಿತ್ತು. 403.41 ಕೋಟಿ ರು.ಗಳನ್ನು ಬಿಡುಗಡೆ ಮಾಡಿರಲಿಲ್ಲ. ನಗರ ಸ್ಥಳೀಯ ಸಂಸ್ಥೆಗಳಿಗೆ 1,282 ಕೋಟಿ ರು ಬಿಡುಗಡೆಗೆ ಶಿಫಾರಸ್ಸು ಮಾಡಿತ್ತಾದರೂ ವಾಸ್ತವದಲ್ಲಿ 727.40 ಕೋಟಿಯಷ್ಟೇ ಬಿಡುಗೆಯಾಗಿತ್ತು. ಬಿಡುಗಡೆಗೆ 554.60 ಕೋಟಿ ರು ಬಾಕಿ ಉಳಿಸಿಕೊಂಡಿತ್ತು.
ರಾಜ್ಯ ವಿಪತ್ತ ಅಪಾಯ ನಿರ್ವಹಣಾ ನಿಧಿಗೆ 871.50 ಕೋಟಿ ರು ಬಿಡುಗಡೆ ಮಾಡಲು ಹಣಕಾಸು ಆಯೋಗವು ಶಿಫಾರಸ್ಸು ಮಾಡಿದ್ದರೇ 697.60 ಕೋಟಿ ರು ಮಾತ್ರ ಈ ನಿಧಿಗೆ ವರ್ಗಾವಣೆಯಾಗಿತ್ತು. 173.90 ಕೋಟಿ ರು ಬಿಡುಗಡೆಯಾಗಿರಲಿಲ್ಲ. ಆರೋಗ್ಯ ನಿಧಿಗೂ ಸಹ 579 ಕೋಟಿ ರು ಬಿಡುಗಡೆ ಮಾಡಬೇಕು ಎಂದು ಆಯೋಗವು ಶಿಫಾರಸ್ಸು ಮಾಡಿದ್ದರ ಪೈಕಿ 257.04 ಕೋಟಿ ಮಾತ್ರ ಬಿಡುಗಡೆಯಾಗಿತ್ತು. ಬಿಡುಗಡೆಗೆ 321.96 ಕೋಟಿ ರು ಬಿಡುಗಡೆಗೆ ಬಾಕಿ ಉಳಿಸಿಕೊಂಡಿತ್ತು ಎಂದು ಸಿಎಜಿಯು ವಿವರಿಸಿದೆ.
2019-20 ಮತ್ತು 2020-21ರಲ್ಲಿ ಬಂಡವಾಳ ಸ್ವೀಕೃತಿಗಳು ಹೆಚ್ಚಾಗಿವೆ. 2021-22 ಮತ್ತು 2022-23ರಲ್ಲಿ ಕಡಿಮೆಯಾಗಿವೆ. ಆದರೂ 2023-24ರಲ್ಲಿ 90,622 ಕೋಟಿ ಅಂದರೆ ಶೇ.101ರಷ್ಟು ಗಣನೀಯವಾಗಿ ಏರಿಕೆಯಾಗಿದೆ. ಸಾರ್ವಜನಿಕ ಋಣದ ಸ್ವೀಕೃತಿಗಳಿಗೆ ಸಂಬಂಧಿಸಿದಂತೆ 2019-20ರಲ್ಲಿದ್ದ 50,459 ಕೋಟಿಯಿಂದ 2023-24ರಲ್ಲಿ 90,280 ಕೋಟಿಗೆ ಏರಿಕೆಯಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೇ ಸಾರ್ವಜನಿಕ ಋಣದ ಸ್ವೀಕೃತಿಯಲ್ಲಿ ಹೆಚ್ಚಳ ಕಂಡು ಬಂದಿದೆ. ಇದು ಮುಖ್ಯವಾಗಿ ರಾಜ್ಯದಿಂದ ಮಾರುಕಟ್ಟೆ ಎರವಲುಗಳ ಹೆಚ್ಚಳದಿಂದಾಗಿದೆ ಎಂದು ವಿವರಿಸಿದೆ.
ಅದೇ ರೀತಿ ಎನ್‌ಎಸ್‌ಎ ಖಾತೆಗಳಿಂದ ಬಳಕೆಯಾಗದ ಮೊತ್ತದ ಮರುಪಾವತಿಯ ಲೆಕ್ಕದಲ್ಲಿ ಇದನ್ನು 2,256.06 ಕೋಟಿಗಳಷ್ಟು ಕಡಿಮೆ ಮಾಡಲಾಗಿದೆ. 2023-24ರಲ್ಲಿ ಇದು ಹಿಂದಿನ ವರ್ಷದ ಶೇ.28ರಿಂದ 81ಕ್ಕೆ ಏರಿತ್ತು. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೇ ಶೇ.3ರಷ್ಟು ಕಡಿಮೆಯಾಗಿತ್ತು. 2019-29ರಿಂದ 2023-24ರವರೆಗಿನ ರಾಜಸ್ವ ವೆಚ್ಚ, ಬಂಡವಾಳ ವೆಚ್ಚ ಮತ್ತು ಸಾಲಗಳು ಹಾಗೂ ಮುಂಗಡಗಳ ಪಾಲಿನ ಕುರಿತೂ ಸಿಎಜಿಯು ವಿಶ್ಲೇಷಣೆ ಮಾಡಿದೆ.
2019-20ರಿಂದ 2023-24 ರ ಅವಧಿಯಲ್ಲಿ ಸಾಮಾನ್ಯ ಸೇವೆಗಳು, ಆರ್ಥಿಕ ಸೇವೆಗಳು ಮತ್ತು ಸಾಮಾಜಿಕ ಸೇವೆಗಳ ಪಾಲು ವರ್ಷಾಂತ್ಯದಲ್ಲಿ ವ್ಯತ್ಯಾಸಗಳನ್ನು ಹೊಂದಿದೆ. 2023-24ರಲ್ಲಿ ಸಾಮಾಜಿಕ ಸೇವೆಗಳ ಮೇಲಿನ ವೆಚ್ಚದ ಪಾಲು ಶೇ. 1.49ರಷ್ಟು ಹೆಚ್ಚಾಗಿದೆ. ಆರ್ಥಿಕ ಸೇವೆಗಳ ವೆಚ್ಚವು ಶೇ.1.53ರಷ್ಟು ಕಡಿಮೆಯಾಗಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೇ ಸಾಮಾನ್ಯ ಸೇವೆಗಳ ಮೇಲಿನ ವೆಚ್ಚವು ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ರಾಜಸ್ವ ವೆಚ್ಚವು 2019-20ರಲ್ಲಿದ್ದ 1,75,258 ಕೋಟಿಯಿಂದ 2023-24ರಲ್ಲಿ 2,42,614 ಕೋಟಿಗೆ ಏರಿಕೆಯಾಗಿದೆ. ಇದು ಶೇ.39ರಷ್ಟು ಹೆಚ್ಚಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೇ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ (ಶೇ.166) ವಿದ್ಯುತ್ (ಶೇ.69), ಆಹಾರ, ಸಂಗ್ರಹಣೆ ಮತ್ತು ಉಗ್ರಾಣ (ಶೇ.140), ಬಡ್ಡಿ ಪಾವತಿ (ಶೇ.8), ಪೌಷ್ಠಿಕತೆ (ಶೇ.68), ಸಾಮಾನ್ಯ ಶಿಕ್ಷಣ (ಶೇ.5) ಇತ್ಯಾದಿಗಳ ಹೆಚ್ಚಳದಿಂದಾಗಿ ಶೇ. 13ರಷ್ಟು ಏರಿಕೆಯಾಗಿದೆ.
ಆರ್ಥಿಕ ಸೇವೆ, ಬಡ್ಡಿ ಪಾವತಿ, ಋಣ ಸೇವೆ, ಆಡಳಿತಾತ್ಮಕ ಸೇವೆ, ಪಿಂಚಣಿ, ಇತರೆ ಸಾಮಾನ್ಯ ಸೇವೆ, ಸಾಮಾಜಿಕ ಸೇವೆ, ಸಹಾಯಾನುದಾನಗಳಿಗೆ ಸಂಬಂಧಿಸಿದಂತೆ ರಾಜಸ್ವ ವೆಚ್ಚವು ಹಿಂದಿನ ವರ್ಷಕ್ಕಿಂತ 27,030 ಕೋಟಿ ಹೆಚ್ಚಾಗಿದೆ. ಆದರೂ ಜಿಎಸ್‌ಡಿಪಿಯ ಶೇಕಡವಾರು ರಾಜಸ್ವ ವೆಚ್ಚವು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.
ಸಾಮಾಜಿಕ ಭದ್ರತೆ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದಂತೆ ವೆಚ್ಚದಲ್ಲಿ ಶೇ.165.73ರಷ್ಟು ಹೆಚ್ಚಳವಾಗಿದೆ. ಇದಕ್ಕೆ ಗೃಹಲಕ್ಷ್ಮಿ ಯೋಜನೆ ಕಾರಣವಾಗಿದೆ. ಮತ್ತು ಹೆಚ್ಚಳದಲ್ಲಿ ಶೇ.91ರಷ್ಟಿದೆ.
ಆಹಾರ ಸಂಗ್ರಹಣೆ ಮತ್ತು ಉಗ್ರಾಣಕ್ಕೆ ಸಂಬಂಧಿಸಿದಂತೆ ವೆಚ್ಚದಲ್ಲಿ ಶೇ.140.36ರಷ್ಟು ಹೆಚ್ಚಳವಾಗಿದೆ. 2023-24ರಲ್ಲಿ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯಡಿ ಆಹಾರ ಸಹಾಯಧನದ ವೆಚ್ಚವು ಇದಕ್ಕೆ ಕಾರಣವಾಗಿದೆ. ಗ್ರಾಮೀಣ ನೀರು ಸರಬರಾಜು ಕಾರ್ಯಕ್ರಮಗಳ ಅಡಿಯಲ್ಲಿ ಕಡಿಮೆ ಖರ್ಚು ಮತ್ತು ಗ್ರಾಮ ಪಂಚಾಯತ್‌ಗಳಿಗೆ ಕಡಿಮೆ ನೆರವು ಕಾರಣದಿಂದ ನೀರು ಸರಬರಾಜು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಶೇ.90.75ರಷ್ಟು ಕುಸಿತ ಕಂಡು ಬಂದಿದೆ ಎಂದು ಸಿಎಜಿಯು ವಿಶ್ಲೇಷಣೆ ಮಾಡಿದೆ.
ಬದ್ಧತಾ ವೆಚ್ಚದಲ್ಲಿ ಗಣನೀಯ ಹೆಚ್ಚಳ
2019-20ರಿಂದ 2023-24ರ ಅವಧಿಯಲ್ಲಿ ಬದ್ಧತಾ ವೆಚ್ಚಗಳು ಗಣನೀಯವಾಗಿ ಹೆಚ್ಚಳವಾಗಿದೆ. 2019-20ರಲ್ಲಿ 1,32,414 ಕೋಟಿ ಗಳಿಂದ 2023-24ರಲ್ಲಿ 1,79,445 ಕೋಟಿ ರು ಗಳಿಗೆ ಏರಿಕೆಯಾಗಿದೆ. ವೇತನಗಳಿಗೆ ಸಂಬಂಧಿಸಿದಂತೆ 2019-20ರಲ್ಲಿ 33,186 ಕೋಟಿ ರು ವೆಚ್ಚವಾಗಿತ್ತು.
2023-24ರಲ್ಲಿ 45,906 ಕೋಟಿಗೆ ಏರಿಕೆಯಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು 5,243 ಕೋಟಿ (ಶೇ.13)ಯಷ್ಟು ಅಲ್ಪ ಏರಿಕೆ ಕಂಡಿದೆ. ಪಿಂಚಣಿಗಳ ಮೇಲಿನ ವೆಚ್ಚವೂ ಸಹ 2023-24ರಲ್ಲಿ 24,859 ಕೋಟಿಯಷ್ಟಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೇ 839 ಕೋಟಿಯಷ್ಟು (ಶೇ.3) ಹೆಚ್ಚಳವಾಗಿದೆ.
ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೂ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಅನುದಾನವು ಕಡಿಮೆಯಾಗಿತ್ತು. ಆದರೂ ಯಡಿಯೂರಪ್ಪ ಅವರು ಈ ಬಗ್ಗೆ ತುಟಿ ಬಿಚ್ಚಿರಲಿಲ್ಲ.
ಕೇಂದ್ರ ಪುರಸ್ಕೃತ ಯೋಜನೆ; 2,948 ಕೋಟಿಯಲ್ಲಿ 523 ಕೋಟಿ ಕೊಟ್ಟರೂ ತುಟಿಬಿಚ್ಚದ ಸರ್ಕಾರ
ಅಲ್ಲದೇ ಕೇಂದ್ರದ ಅನುದಾನವು ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದ್ದರೂ ಸಹ ಹಿಂದಿನ ಬಿಜೆಪಿ ಸರ್ಕಾರವು ಮೌನ ವಹಿಸಿತ್ತು.
ಕೇಂದ್ರ ಅನುದಾನದಲ್ಲಿ ಶೇ.17.55ರಷ್ಟು ಇಳಿಕೆ; ಉಸಿರೆತ್ತದ ಬಿಜೆಪಿ ಸರ್ಕಾರ
ಅಲ್ಲದೇ ಕೇಂದ್ರ ಸರ್ಕಾರವು ಕೆಲವು ಇಲಾಖೆಗಳಿಗೆ ಬಿಡಿಗಾಸನ್ನೂ ನೀಡಿರಲಿಲ್ಲ.
ಕೇಂದ್ರ ಪುರಸ್ಕೃತ ಯೋಜನೆ; 8 ಇಲಾಖೆಗಳಿಗಿಲ್ಲ ಬಿಡಿಗಾಸು, ಕೇಂದ್ರದಿಂದಲೇ 16,534 ಕೋಟಿ ಬಾಕಿ
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೂ ಕೇಂದ್ರದಿಂದ ಅನುದಾನ ಬಾರದ ಕಾರಣ, ಹಲವು ಕಾರ್ಯಕ್ರಮಗಳಿಗೆ ಚಾಲನೆಯೇ ಸಿಕ್ಕಿರಲಿಲ್ಲ.
ವರ್ಷ ಉರುಳಿದರೂ 122 ಕಾರ್ಯಕ್ರಮಗಳಿಗೆ ಸಿಗದ ಚಾಲನೆ, ಕೇಂದ್ರದಿಂದ ಬಾರದ 8,199 ಕೋಟಿ
ಕಳೆದ ಹಲವು ವರ್ಷಗಳಿಂದಲೂ ಕೇಂದ್ರ ಸರ್ಕಾರವು ತನ್ನ ಪಾಲಿನ ಅನುದಾನವನ್ನು ನಿಯತಕಾಲಿಕವಾಗಿ ಬಿಡುಗಡೆ ಮಾಡುತ್ತಿಲ್ಲ ಎಂದು ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆ ಅಧಿವೇಶನಗಳಲ್ಲಿ ಅಂಕಿ ಅಂಶಗಳ ಸಮೇತ ವಿವರಿಸಿದ್ದರು. ಮತ್ತು ಕೇಂದ್ರದ ಅನುದಾನದಲ್ಲಿ ಇಳಿಕೆಯಾಗುತ್ತಿರುವ ಕುರಿತು ಕಳವಳವನ್ನೂ ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದು.