ಬೆಂಗಳೂರು; ಕೇರಳದ ವಯನಾಡಿನ ಮೆಪ್ಪಾಡಿಯಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತದಿಂದ ಹಾನಿಗೊಳಗಾದ ಕುಟುಂಬಗಳಿಗೆ ತಲಾ 20 ಲಕ್ಷ ರು ನಂತೆ ಒಟ್ಟಾರೆ 20 ಕೋಟಿ ರು ವೆಚ್ಚದಲ್ಲಿ 100 ಮನೆಗಳನ್ನು ನಿರ್ಮಾಣ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿದ್ದಾರೆ.
ಮೆಪ್ಪಾಡಿಯಲ್ಲಿನ ಭೂಕುಸಿತಕ್ಕೆ ಒಳಗಾಗಿ ನಿರಾಶ್ರಿತರಾಗಿದ್ದವರಿಗೆ ಮನೆ ಕಟ್ಟಿಕೊಡಲು ಮುಂದಾಗಿದ್ದ ಕರ್ನಾಟಕ ಸರ್ಕಾರದ ಕ್ರಮಕ್ಕೆ ಬಿಜೆಪಿಯು ಬಲವಾಗಿ ಆಕ್ಷೇಪಿಸಿತ್ತು. ಈ ಆಕ್ಷೇಪಗಳ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇರಳ ಸರ್ಕಾರಕ್ಕೆ ಪತ್ರ ಬರೆದಿದ್ದು. ಇದೀಗ 2025ರ ಜುಲೈನಲ್ಲಿ 20 ಕೋಟಿ ಅನುದಾನ ಒದಗಿಸಲು ಅನುಮೋದಿಸಿರುವುದು ಚರ್ಚೆಗೆ ಗ್ರಾಸವಾಗಲಿದೆ.
ಹಾಗೆಯೇ ರಾಜ್ಯ ರಸಗೊಬ್ಬರಗಳನ್ನು ಕೇರಳಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಒಂದು ದಿನದ ಹಿಂದೆಯಷ್ಟೇ ಬಿಜೆಪಿ ಮತ್ತು ಜೆಡಿಎಸ್, ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದವು. 1, 17, 884 ಸರ್ಕಾರಿ ನೌಕರರಿಗೆ ಕಳೆದ ಮೂರು ತಿಂಗಳಿನಿಂದ ವೇತನ ಪಾವತಿಯಾಗದಿರುವ ಕುರಿತು ನೌಕರರು ಆಕ್ರೋಶಗೊಂಡಿದ್ದರು. ಈ ಬೆಳವಣಿಗೆಗಳ ಬೆನ್ನಲ್ಲೇ ಕೇರಳ ಸರ್ಕಾರಕ್ಕೆ 20 ಕೋಟಿ ರು ಅನುದಾನ ಬಿಡುಗಡೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿರುವುದು ಮುನ್ನೆಲೆಗೆ ಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024ರ ಡಿಸೆಂಬರ್ 9ರಂದೇ ಈ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದರು. ಆದರೆ ಕೇರಳ ಸರ್ಕಾರವು ಸೂಕ್ತವಾಗಿ ಸ್ಪಂದಿಸಿರಲಿಲ್ಲ. ಆದರೀಗ ಕೇರಳ ವಯನಾಡ್ ಟೌನ್ ಶಿಪ್ ಯೋಜನೆಯ ವಿಶೇಷ ಅಧಿಕಾರಿಯು 2025ರ ಜುಲೈ 1ರಂದು ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಪತ್ರದಂತೆ ತಲಾ 20 ಲಕ್ಷ ರು.ನಂತೆ ಒಟ್ಟು 20 ಕೋಟಿ ರು ಅನುದಾನ ಬಿಡುಗಡೆ ಮಾಡಲು ಸಿದ್ದರಾಮಯ್ಯ ಅವರು ಅನುಮೋದಿಸಿದ್ದಾರೆ.
ಈ ಕುರಿತಾದ ಟಿಪ್ಪಣಿ ಹಾಳೆಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಕೇರಳ ವಿಶೇಷಾಧಿಕಾರಿ ಪತ್ರದಲ್ಲೇನಿದೆ?
300 ಕೋಟಿ ರು ವೆಚ್ಚದಲ್ಲಿ ವಯನಾಡ್‌ನ ಟೌನ್‌ಶಿಪ್ ಯೋಜನೆಯನ್ನು ಕೇರಳ ಸರ್ಕಾರವು ರೂಪಿಸಿದೆ. ನಿರ್ಮಾಣ ಚಟುವಟಿಕೆಗಳು ತ್ವರಿತಗತಿಯಲ್ಲಿ ನಡೆಯುತ್ತಿದೆ. ಈಚೆಗಷ್ಟೇ ಹೈಕೋರ್ಟ್ ತಡೆಯಾಜ್ಞೆ ರದ್ದಾಗಿದೆ. ಹೀಗಾಗಿ ಕೇರಳ ಸರ್ಕಾರವು 2025ರ ಮಾರ್ಚ್‌ನಲ್ಲಿ ಭೂ ಸ್ವಾಧೀನಪಡಿಸಿಕೊಂಡಿದೆ. ಇದರ ನಂತರ ಒಂದು ಮಾದರಿ ಮನೆ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಪ್ರಗತಿ ವಿವರ ಒದಗಿಸಿರುವುದು ಪತ್ರದಿಂದ ಗೊತ್ತಾಗಿದೆ.
ಮತ್ತು ಪಟ್ಟಣದ ವಲಯ 1 ಪ್ರದೇಶದಲ್ಲಿ 140 ಮನೆಗಳ ಸ್ತಂಭ, ತೊಲೆಗಳು, ಮತ್ತು ಪ್ಯಾರಪೆಟ್‌ಗಳು ಪ್ರಗತಿಯಲ್ಲಿವೆ. ಎಲ್ಲಾ ವಸತಿ ಘಟಕಗಳನ್ನು ಪೂರ್ಣಗೊಳಿಸಿ 2025 ಡಿಸೆಂಬರ್ ಒಳಗೇ ಫಲಾನುಭವಿಗಳಿಗೆ ಹಸ್ತಾಂತರಿಸುವ ನಿರೀಕ್ಷೆ ಇದೆ ಎಂದು ವಯನಾಡಿನ ಟೌನ್‌ಶಿಪ್ ಯೋಜನೆಯ ವಿಶೇಷ ಅಧಿಕಾರಿಯು ಕರ್ನಾಟಕ ಸರ್ಕಾರಕ್ಕೆ ಬರೆದ ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಈ ಟೌನ್‌ಶಿಪ್‌ನಲ್ಲಿ 410 ವಸತಿ ಘಟಕ, ಅಂಗನವಾಡಿ, ಮಾರುಕಟ್ಟೆ, ಸಾರ್ವಜನಿಕ ಆರೋಗ್ಯ ಕೇಂದ್ರ, ಫುಟ್‌ಬಾಲ್ ಕ್ರೀಡಾಂಗಣ, ಸಮುದಾಯ ಭವನಗಳು, ವಿಪತ್ತು ಪರಿಹಾರ ಕೇಂದ್ರ, ಆಂತರಿಕ ರಸ್ತೆಗಳು, ನೀರು ಸರಬರಾಜು ಮತ್ತು ಒಳಚರಂಡಿ, ಮನೆಗಳ ಮೇಲೆ ಸೋಲಾರ್ ಪ್ಯಾನೆಲ್‌ಗಳನ್ನು ಅಳವಡಿಸಲಿದೆ.
ಇದಕ್ಕಾಗಿ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿಯನ್ನು ಹೊರತುಪಡಿಸಿ ಇತರೆ ವಿಪತ್ತು ಪರಿಹಾರಕ್ಕೆ ರಾಜ್ಯದಿಂದ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕಾದ ಪ್ರಸ್ತಾವನೆಗಳಿಗೆ ಪ್ರತ್ಯೇಕವಾಗಿಲೆಕ್ಕ ಶೀರ್ಷಿಕೆ (ಲೆಕ್ಕ ಶೀರ್ಷಿಕೆ; 2245-80-102-0-06) ಸೃಜಿಸಿದೆ ಎಂದು ಕರ್ನಾಟಕ ಸರ್ಕಾರಕ್ಕೆ ಮಾಹಿತಿ ಒದಗಿಸಿದೆ.
‘ಕೇರಳ ರಾಜ್ಯದ ವಯನಾಡ್ ಜಿಲ್ಲೆಯ ಮೆಪ್ಪಾಡಿಯಲ್ಲಿ ಉಂಟಾದ ಭೂ ಕುಸಿತದಿಂದ ಹಾನಿಗೊಳಗಾದ 100 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ತಲಾ 20 ಲಕ್ಷ ರು ನಂತೆ ಒಟ್ಟು 20.00 ಕೋಟಿ ರು ಅನುದಾನ ಬಿಡುಗಡೆ ಮಾಡಬೇಕು,’ ಎಂದು ಕೇರಳ ವಯನಾಡಿನ ವಿಶೇಷ ಅಧಿಕಾರಿಯು ಕೋರಿರುವುದು ಗೊತ್ತಾಗಿದೆ.
ಈ ಪ್ರಸ್ತಾವವನ್ನು ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯು ಪರಿಶೀಲಿಸಿದೆ. ಕೇರಳ ಕೋರಿರುವ 20 ಕೋಟಿ ರು ಪೈಕಿ ಮೊದಲ ಕಂತಿನಲ್ಲಿ 10 ಕೋಟಿ ರು ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯು ಸಹಮತಿಸಿದೆ. ಒಮ್ಮೆ ಮನೆಗಳ ನಿರ್ಮಾಣ ಪೂರ್ಣಗೊಂಡ ನಂತರ ಅದರ ಬಳಕೆ ಪ್ರಮಾಣ ಪತ್ರವನ್ನು ಪರಿಶೀಲಿಸಿ ಎರಡನೇ ಕಂತಿಗೆ 10 ಕೋಟಿ ರು ಬಿಡುಗಡೆ ಮಾಡಬಹುದು ಎಂದು ಅಭಿಪ್ರಾಯಿಸಿರುವುದು ತಿಳಿದುಬಂದಿದೆ.
ಈ ಹಣವನ್ನು ಹೆಚ್ಚುವರಿ ಆಯವ್ಯಯ 1 ಕಂದಾಯ ಇಲಾಖೆಯ ಮೂಲಕ ಕೇರಳ ಸರ್ಕಾರಕ್ಕೆ ವರ್ಗಾವಣೆ ಮಾಡಬಹುದು ಎಂದು ಹೇಳಿದೆ. ಆರ್ಥಿಕ ಇಲಾಖೆಯ ಈ ಅಭಿಪ್ರಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025ರ ಜುಲೈ 11ರಂದು ಅನುಮೋದಿಸಿರುವುದು ಗೊತ್ತಾಗಿದೆ.
ಮನೆ ನಿರ್ಮಿಸಲು ತಮ್ಮ ಸರ್ಕಾರ ಭೂಮಿ ಖರೀದಿಸಲು ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದರು.
ಡಿಸೆಂಬರ್ 9 ರಂದು ಕೇರಳ ಸಿಎಂಗೆ ಬರೆದ ಪತ್ರದಲ್ಲಿ ಸಂತ್ರಸ್ತ ಕುಟುಂಬಗಳಿಗೆ 100 ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿತ್ತು. ನಮ್ಮ ಸರ್ಕಾರದ ಈ ಉಪಕ್ರಮವು ತಮ್ಮ ಮನೆ, ಜೀವನೋಪಾಯ ಮತ್ತು ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸುರಕ್ಷಿತ ಮತ್ತು ಸ್ಥಿರವಾದ ವಾತಾವರಣವನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಸಿದ್ದರಾಮಯ್ಯ ಒತ್ತಿ ಹೇಳಿದ್ದರು.
ಆದರೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಅಗತ್ಯವಾದ ಮಾರ್ಗಸೂಚಿಗಳು ಅಥವಾ ನಿರ್ದೇಶನಗಳ ಬಗ್ಗೆ ಕೇರಳ ಸರ್ಕಾರದಿಂದ ಸಂವಹನದ ಕೊರತೆಯಿಂದಾಗಿ ಯೋಜನೆ ಜಾರಿಗೊಳಿಸಲು ಸಾಧ್ಯವಾಗಿರಲಿಲ್ಲ. ಸಂತ್ರಸ್ತ ಕುಟುಂಬಗಳಿಗೆ ತ್ವರಿತ ಪರಿಹಾರವನ್ನು ಖಾತರಿಪಡಿಸುವ ಮೂಲಕ ಮನೆಗಳನ್ನು ನಿರ್ಮಿಸಲು ಅಗತ್ಯವಿರುವ ಭೂಮಿಯನ್ನು ಖರೀದಿಸಲು ನಮ್ಮ ಸರ್ಕಾರ ಸಿದ್ಧವಾಗಿದೆ,’ ಎಂದು ಎಂದು ಸಿದ್ದರಾಮಯ್ಯ ಹೇಳಿದ್ದರು.
ಕೇರಳದ ವಯನಾಡ್‌ನಲ್ಲಿ ಸಂಭವಿಸಿದ್ದ ಭೀಕರ ಭೂಕುಸಿತದಿಂದಾಗಿ ಕನಿಷ್ಠ 126 ಮಂದಿ ಸಾವನ್ನಪ್ಪಿದ್ದರು. ಭೂಕುಸಿತದಲ್ಲಿ ಉಂಟಾದ ಅವಘಡದಿಂದಾಗಿ ನಾಪತ್ತೆಯಾಗಿದ್ದ ಹಲವು ಮಂದಿಯ ಕುರುಹು ಪತ್ತೆಯಾಗಿರಲಿಲ್ಲ. ಕೇರಳದ ಜನರು ಮಾತ್ರವಲ್ಲದೇ ಹತ್ತಾರು ಕನ್ನಡಿಗರು ಕೂಡ ವಯನಾಡ್ ಭೂಕುಸಿತದಿಂದ ಸಂತ್ರಸ್ತರಾಗಿದ್ದರು. ಮೃತಪಟ್ಟ ಕನ್ನಡಿಗರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಸಿದ್ದರಾಮಯ್ಯ ಅವರು ಘೋಷಿಸಿದ್ದರು.
ಕೇರಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಪ್ರಸ್ತಾಪಕ್ಕೆ ಕರ್ನಾಟಕ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಕಾಂಗ್ರೆಸ್ ಹೈಕಮಾಂಡ್ ಅನ್ನು ಸಮಾಧಾನಪಡಿಸುವ ಗುರಿಯನ್ನು ಹೊಂದಿದೆ ಎಂದು ಆಪಾದಿಸಿತ್ತು. ಸ್ಥಳೀಯರ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿ ಮುಖ್ಯಮಂತ್ರಿ ಈ ಪ್ರಸ್ತಾಪವನ್ನು ನೀಡಿದ್ದಾರೆ. ವಯನಾಡಿಗೆ ಅನುದಾನ ಘೋಷಿಸುವ ಮೂಲಕ ವಯನಾಡಿನ ಲೋಕಸಭಾ ಸ್ಥಾನದಿಂದ ಗೆದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಮೆಚ್ಚಿಸುವ ಗುರಿಯನ್ನು ಹೊಂದಿದ್ದಾರೆ. ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ ಇಬ್ಬರೂ ಸಿಎಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಕೇರಳದ ವಯನಾಡಿನ ಆನೆಯ ದಾಳಿಯಿಂದ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ ಕರ್ನಾಟಕ ಸರ್ಕಾರ ₹ 15 ಲಕ್ಷ ಪರಿಹಾರ ಘೋಷಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ವಿರೋಧ ಪಕ್ಷ ಬಿಜೆಪಿ ಈ ಕ್ರಮದ ಹಿಂದಿನ ತಾರ್ಕಿಕತೆಯನ್ನು ಪ್ರಶ್ನಿಸಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆದೇಶದ ಮೇರೆಗೆ ಪರಿಹಾರ ಘೋಷಿಸಿದೆ ಎಂದು ಆರೋಪಿಸಿತ್ತು.