ಬೆಂಗಳೂರು; ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಕುರಿತಂತೆ ಉಪ ಜಾತಿ ಒದಗಿಸುವಲ್ಲಿ ಅಧಿಕಾರಿ ವರ್ಗವು ಆಯೋಗಕ್ಕೆ ಸಹಕರಿಸುತ್ತಿಲ್ಲ. ಉಪ ಜಾತಿಗಳ ಮಾಹಿತಿ ಮಾಹಿತಿ ಒದಗಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಹಲವು ಬಾರಿ ಇಲಾಖೆಗಳ ಮುಖ್ಯಸ್ಥರಿಗೆ ಪತ್ರ ಬರೆದಿದ್ದರೂ ಸಹ ಅಧಿಕಾರಿವರ್ಗವು ಉಪ ಜಾತಿ ವಿವರಗಳನ್ನು ಸಲ್ಲಿಸುತ್ತಿಲ್ಲ.
ನಿವೃತ್ತ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನ್ ದಾಸ್ ನೇತೃತ್ವದ ಏಕ ಸದಸ್ಯ ವಿಚಾರಣೆ ಆಯೋಗವು ನಡೆಸುತ್ತಿರುವ ಸಮೀಕ್ಷೆ ಅವಧಿಯು ವಿಸ್ತರಣೆಯಾಗಿರುವ ಬೆನ್ನಲ್ಲೇ ಅಧಿಕಾರಿಗಳು ಉಪ ಜಾತಿಗಳ ವಿವರಗಳನ್ನು ಒದಗಿಸದೇ ವಿಳಂಬ ಮಾಡುತ್ತಿರುವುದು ಮುನ್ನೆಲೆಗೆ ಬಂದಿದೆ.
ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಾಗಪ್ಪ ಶಂಕರ್ ಪರೀಟ ಅವರು ಎಲ್ಲಾ ಇಲಾಖೆಗಳ ಮುಖ್ಯಸ್ಥರು, ಪ್ರಧಾನ ಇಂಜಿನಿಯರ್, ಮುಖ್ಯ ಇಂಜಿನಿಯರ್ ಮತ್ತು ನಿರ್ದೇಶಕರಗಳ ವೃಂದಗಳ ಮುಖ್ಯಸ್ಥರುಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.
2025ರ ಜುಲೈ 15ರಂದು ಹೊರಡಿಸಿರುವ ಸುತ್ತೋಲೆಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ವಿವಿಧ ಉಪ ಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯ ಕುರಿತು ಪ್ರಾಯೋಗಿಕ ದತ್ತಾಂಶ (Empirical Data) ಪಡೆದು ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ( ಉಪ ವರ್ಗೀಕರಣ) ಬಗ್ಗೆ ಸೂಕ್ತ ಶಿಫಾರಸ್ಸಿನೊಂದಿಗೆ ಎರಡು ತಿಂಗಳ ಅವಧಿಯೊಳಗಾಗಿ ವರದಿ ಸಲ್ಲಿಸಬೇಕಿತ್ತು. ಇದರ ಪ್ಕರಾರ ಪರಿಶಿಷ್ಟ ಜಾತಿಗೆ ಸೇರಿದ ಎಲ್ಲಾ ಅಧಿಕಾರಿ, ನೌಕರರ ಮಾಹಿತಿಯನ್ನು ಸಂಗ್ರಹಿಸಿ ಸಮಾಜ ಕಲ್ಯಾಣ ಇಲಾಖೆಯ ವೆಬ್‌ಸೈಟ್‌ನಲ್ಲಿ ನವೀಕರಿಸಬೇಕಿತ್ತು.
ಆದರೆ ಬಹುತೇಕ ಇಲಾಖೆಗಳ ಮುಖ್ಯಸ್ಥರು ಉಪ ಜಾತಿಗಳ ವಿವರಗಳನ್ನು ಆಯೋಗಕ್ಕೆ ಒದಗಿಸುತ್ತಿಲ್ಲ. ಹೀಗಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಇಲಾಖಾ ಮುಖ್ಯಸ್ಥರುಗಳಿಗೆ ಸುತ್ತೋಲೆ ಹೊರಡಿಸಿದೆ.
ಸುತ್ತೋಲೆಯಲ್ಲೇನಿದೆ?
ಪ್ರಸ್ತುತ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಲಾಖಾ ಮುಖ್ಯಸ್ಥರು ವೃಂದದ ಅಧಿಕಾರಿಗಳಲ್ಲಿ ಪರಿಶಿಷ್ಟ ಜಾತಿ ಪ್ರವರ್ಗಕ್ಕೆ ಸೇರಿದ ಅಧಿಕಾರಿಗಳು ತಮ್ಮ ಉಪಜಾತಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಈಗಾಗಲೇ ಪತ್ರ ಮುಖೇನ ಅಧಿಕಾರಿಳಿಗೆ ತಿಳಿಸಿದ್ದರೂ ತಮ್ಮ ಉಪ ಜಾತಿಯ ವಿವರವನ್ನು ಸಲ್ಲಿಸದೇ ತಮ್ಮ ಕಚೇರಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಸಲ್ಲಿಸಲಾಗುತ್ತಿದೆ. ಆದ್ದರಿಂದ ಪರಿಶಿಷ್ಟ ಜಾತಿ ಪ್ರವರ್ಗಕ್ಕೆ ಸೇರಿದ ಅಧಿಕಾರಿಗಳು ತಮ್ಮ ಉಪ ಜಾತಿಗೆ ಸಂಬಂಧಿಸಿದ ಮಾಹಿತಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ ಕೂಡಲೇ ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ನಿರ್ದೇಶಿಸಿದೆ.
2011ರ ಜನಗಣತಿಯ ಪ್ರಕಾರ ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆ 1.05 ಕೋಟಿಯಲ್ಲಿ 7.29 ಲಕ್ಷ ಜನರು ಯಾವುದೇ ಉಪ ಜಾತಿಗಳನ್ನು ನಮೂದಿಸಿಲ್ಲ. ಅಲ್ಲದೇ ಸರ್ಕಾರಿ ಸೇವೆಗಳು ಮತ್ತು ಶಿಕ್ಷಣದಲ್ಲಿ 4 ಗುಂಪುಗಳಿಗೆ ಸೇರಿದ ವ್ಯಕ್ತಿಗಳ ಸಮರ್ಪಕ ಅಥವಾ ವಾಸ್ತವ ಪ್ರಾತಿನಿಧ್ಯದ ಬಗ್ಗೆ ಯಾವ ಅಂಕಿ ಅಂಶವೂ ಇರಲಿಲ್ಲ.
ಒಳ ಮೀಸಲಾತಿ; ಉಪ ಜಾತಿ ನಮೂದಿಸದ 7.29 ಲಕ್ಷ ಪರಿಶಿಷ್ಟರು, ಮುನ್ನೆಲೆಗೆ ಬಂದ ಸಚಿವ ಸಂಪುಟ ಟಿಪ್ಪಣಿ
2011ರ ಜನಗಣತಿಯಂತೆ ಕರ್ನಾಟಕ ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಇದೆ. ಈ ಪೈಕಿ ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆ 1.05 ಕೋಟಿ ಇದೆ. (ಗ್ರಾಮೀಣ 75 ಲಕ್ಷ ಮತ್ತು ನಗರ 30 ಲಕ್ಷ) ರಾಜ್ಯದ ಒಟ್ಟು ಜನಸಂಖ್ಯೆಗೆ ಹೋಲಿಸಿದಾಗ ಶೇ.17.15ರಷ್ಟು ಇದೆ.
ಒಳಮೀಸಲಾತಿ; ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ.35ರಷ್ಟು ಸಮೀಕ್ಷೆ, ಉಳಿದೆಡೆ ಶೇ.84 ಪ್ರಗತಿ
‘2011ರ ಜನಗಣತಿಯಲ್ಲಿ ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆ 1.05 ಕೋಟಿಯಲ್ಲಿ 7.29 ಲಕ್ಷ ಜನರು ಯಾವುದೇ ಉಪ ಜಾತಿಗಳನ್ನು ನಮೂದಿಸಿರುವುದಿಲ್ಲ. ಕಾರಣ ಒಟ್ಟಾರೆ ಜಾತಿವಾರು ನಿಖರ ಜನಸಂಖ್ಯೆ 97.56 ಲಕ್ಷ ಎಂದು ಪರಿಗಣಿಸಲಾಗಿದೆ. ಈ ಜನಸಂಖ್ಯೆಯಲ್ಲಿ ಆದಿ ಕರ್ನಾಟಕ ಜನಸಂಖ್ಯೆ 29.21 ಲಕ್ಷ ಮತ್ತು ಆದಿ ದ್ರಾವಿಡರು 7.95 ಲಕ್ಷ ಸಂಖ್ಯೆಯಲ್ಲಿದ್ದಾರೆ,’ ಎಂದು ಟಿಪ್ಪಣಿಯಲ್ಲಿ ಅಂಕಿ ಅಂಶಗಳನ್ನು ಒದಗಿಸಲಾಗಿತ್ತು.
ಮೊದಲ ಗುಂಪಿನಲ್ಲಿ (ಶೇ.6) ಆದಿದ್ರಾವಿಡ, ಭಂಬಿ, ಮಾದಿಗ, ಸಮಗಾರ ಒಟ್ಟು 4 ಜಾತಿಗಳಿವೆ. ಈ ಗುಂಪಿನ ಒಟ್ಟು ಜನಸಂಖ್ಯೆ 32.60 ಲಕ್ಷ ಇದೆ. ಎರಡನೇ ಗುಂಪಿನಲ್ಲಿ ಆದಿ ಕರ್ನಾಟಕ, ಛಲವಾದಿ, ಚನ್ನದಾಸರ, ಹೊಲೆಯ, ಮಹರ್ ಜಾತಿಗಳಿವೆ. ಈ ಗುಂಪಿನಲ್ಲಿ ಒಟ್ಟು 32.58 ಲಕ್ಷ ಜನಸಂಖ್ಯೆ ಇದೆ. ಮೂರನೇ ಗುಂಪಿನಲ್ಲಿ ಬಂಜಾರ ಹಾಗೂ ಇದರ ಸಮನಾಂತರ ಜಾತಿಗಳಿವೆ.
ಭೋವಿ ಮತ್ತು ಇದರ ಸಮನಾಂತರ ಜಾತಿಗಳು, ಕೊರಚ,/ಕೊರಚರ್ ಮತ್ತು ಕೊರಮ/ಕೊರವ,/ಕೊರವಾರ್ ಜಾತಿ ಸೇರಿ ಒಟ್ಟು 4 ಜಾತಿಗಳಿವೆ. ಈ ಗುಂಪಿನಲ್ಲಿ ಒಟ್ಟು 26.51 ಲಕ್ಷ ಜನಸಂಖ್ಯೆ ಇದೆ. ನಾಲ್ಕನೇ ಗುಂಪಿನಲ್ಲಿ (ಮೊದಲ ಮತ್ತು ಎರಡನೇ ಗುಂಪು) ಈ ಹಿಂದೆ ಅಸ್ಪ್ರಶ್ಯತೆಗೆ ಒಳಗಾದ ಮತ್ತು ಕಡಿಮೆ ಜನಸಂಖ್ಯೆ ಇರುವ ಒಟ್ಟು 88 ಪರಿಶಿಷ್ಟ ಜಾತಿಗಳನ್ನು ಸೇರಿಸಲಾಗಿದೆ. ಈ ಗುಂಪಿನಲ್ಲಿ ಒಟ್ಟು 5.87 ಲಕ್ಷ ಜನಸಂಖ್ಯೆ ಇದೆ.
‘2011ರ ಜನಸಂಖ್ಯೆಯ ಆಧಾರದ ಮೇಲೆ ಒಳ ಮೀಸಲಾತಿ ಮಾಡಲಾಗಿದೆ. ಆದರೆ ಸರ್ಕಾರಿ ಸೇವೆಗಳು ಮತ್ತು ಶಿಕ್ಷಣದಲ್ಲಿ ನಾಲ್ಕು ಗುಂಪುಗಳಿಗೆ ಸೇರಿದ ವ್ಯಕ್ತಿಗಳ ಸಮರ್ಪಕ ಅಥವಾ ವಾಸ್ತವ ಪ್ರಾತಿನಿಧ್ಯದ ಬಗ್ಗೆ ಯಾವುದೇ ಅಂಕಿ ಅಂಶವೂ ಇಲ್ಲ,’ ಎಂದು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿತ್ತು.
ಸಮರ್ಥನೆ ಏನು?
ಪಂಜಾಬ್ ರಾಜ್ಯ ಸರ್ಕಾರ ಇತರರ ಮತ್ತು ದಾವಿಂದರ್ ಸಿಂಗ್ ಮತ್ತಿತರರು (ಸಿವಿಲ್ ಅಪೀಲು 2317 /2011) ರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 2024ರ ಆಗಸ್ಟ್ 1ರಂದು ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರಗಳು ಭಾರತ ಸಂವಿಧಾನದ ಅನುಚ್ಛೇಧ 15(4) ಮತ್ತು 16(4)ರಂತೆ ಶಿಕ್ಷಣ ಮತ್ತು ರಾಜ್ಯ ಸರ್ಕಾರದ ಅಧೀನದ ಸೇವೆಗಳಲ್ಲಿ ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಕಲ್ಪಿಸಲು ಅವಕಾಶವಿದೆ. ಆದ್ದರಿಂದ 2011ರ ಜನಗಣತಿಯಂತೆ ಜನಸಂಖ್ಯೆ ಆಧಾರದ ಮೇಲೆ ಒಳ ಮೀಸಲಾತಿ ಕಲ್ಪಿಸುವುದು ಸಮರ್ಥನೀಯವಾಗಿರುತ್ತದೆ ಎಂದು ಟಿಪ್ಪಣಿಯಲ್ಲಿ ವಿವರಿಸಿತ್ತು.
ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಕಲ್ಪಿಸುವ ಕುರಿತು ನಿವೃತ್ತ ನ್ಯಾಯಮೂರ್ತಿ ಎ ಜೆ ಸದಾಶಿವ ಅವರ ನೇತೃತ್ವದ ಆಯೋಗದ ಶಿಫಾರಸ್ಸು ಪ್ರಸ್ತುತವಲ್ಲ ಎಂದು ಹಿಂದಿನ ಬಿಜೆಪಿ ಸರ್ಕಾರವೇ ಆದೇಶ ಹೊರಡಿಸಿತ್ತು.
ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ವರದಿಯನ್ನು ಮುಂದಿನ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರು ಈಚೆಗಷ್ಟೇ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸದಾಶಿವ ಆಯೋಗದ ವರದಿ ಶಿಫಾರಸ್ಸುಗಳು ಪ್ರಸ್ತುತವಾಗಿಲ್ಲ ಎಂದು ಹಿಂದಿನ ಬಿಜೆಪಿ ಸರ್ಕಾರವು ಆದೇಶ ಹೊರಡಿಸಿತ್ತು.
ಒಳ ಮೀಸಲಾತಿ; ಪ್ರಸ್ತುತವಾಗದ ಸದಾಶಿವ ಆಯೋಗದ ವರದಿ, ಚರ್ಚೆಗೆ ಗ್ರಾಸವಾದ 2 ವರ್ಷದ ಹಿಂದಿನ ಆದೇಶ
ಪರಿಶಿಷ್ಟ ಜಾತಿಗಳ ವರ್ಗೀಕರಣ (ಒಳ ಮೀಸಲಾತಿ) ಬಗ್ಗೆ ಭಾರತ ಸಂವಿಧಾನಕ್ಕೆ ಅನುಚ್ಛೇಧ 341ರಲ್ಲಿ ತಿದ್ದುಪಡಿ ಮೂಲಕ Clasue (3)ನ್ನು ಸೇರಿಸಲು ಭಾರತ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಸಂಬಂಧ ತೆರೆದಿರುವ ಕಡತದಲ್ಲಿ ಈ ಆದೇಶದ ಅಂಶವನ್ನು ಉಲ್ಲೇಖಿಸಿದ್ದನ್ನು ಸ್ಮರಿಸಬಹುದು.