ಬೆಂಗಳೂರು; ರಾಜ್ಯಕ್ಕೆ ಮುಂಗಾರು ಹಂಗಾಮಿನ ಇದೇ ಸೆಪ್ಟಂಬರ್‍ವರೆಗೆ ಯೂರಿಯಾ ಸೇರಿದಂತೆ ರಸಗೊಬ್ಬರಗಳು 27,77,000 ಮೆಟ್ರಿಕ್ ಟನ್‌ನಷ್ಟು ಬೇಡಿಕೆ ಇದೆ. ರಸಗೊಬ್ಬರ ಕೊರತೆ ಕಾಣಿಸಿಕೊಂಡಿರುವ ಜಿಲ್ಲೆಗಳಿಗೆ ಬೇರೆ ಜಿಲ್ಲೆಗಳ ದಾಸ್ತಾನಿನಲ್ಲಿರುವ ರಸಗೊಬ್ಬರಗಳನ್ನು ವರ್ಗಾಯಿಸಿ ಕೊರತೆ ನೀಗಿಸುವಲ್ಲಿಯೂ ಸರ್ಕಾರವು ವಿಫಲವಾಗಿದೆ.
ಒಟ್ಟು ಬೇಡಿಕೆ ಪೈಕಿ 2025ರ ಮೇ 26ವರೆಗೆ 15,88,311 ಮೆಟ್ರಿಕ್ ಟನ್‌ನಷ್ಟು ಎಲ್ಲಾ ಬಗೆಯ ರಸಗೊಬ್ಬರಗಳು ರಾಜ್ಯದಲ್ಲಿ ಸರಬರಾಜು ಆಗಿದ್ದವು. ದಾಸ್ತಾನಿನಲ್ಲಿ ಮೇ ತಿಂಗಳಾಂತ್ಯಕ್ಕೆ 10,89,551 ಮೆಟ್ರಿಕ್ ಟನ್‌ನಷ್ಟು ರಸಗೊಬ್ಬರಗಳು ದಾಸ್ತಾನಿನಲ್ಲೇ ಉಳಿದಿದ್ದವು.
ಬೆಳಗಾವಿ, ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿ ಉಳಿದೆಲ್ಲ ಜಿಲ್ಲೆಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಂದರೇ 18,632 ಮೆಟ್ರಿಕ್ ಟನ್‌ನಷ್ಟು ರಸಗೊಬ್ಬರಗಳು ಉಳಿಕೆಯಾಗಿತ್ತು. ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಒಟ್ಟಾರೆ 2,34,247 ಮೆಟ್ರಿಕ್ ಟನ್ ಬೇಡಿಕೆ ಇತ್ತು. ಈ ಪೈಕಿ 1,45,348 ಮೆಟ್ರಿಕ್ ಟನ್ ಸರಬರಾಜು ಆಗಿತ್ತು. ಜೂನ್ ತಿಂಗಳವೊಂದರಲ್ಲೇ 78,472 ಮೆಟ್ರಿಕ್ ಟನ್‌ನಷ್ಟು ಬೇಡಿಕೆ ಇತ್ತು.
ಸರಬರಾಜಾಗಿದ್ದ ರಸಗೊಬ್ಬರಗಳ ಪೈಕಿ ಮೇ 26ರ ಅಂತ್ಯಕ್ಕೆ 4,98,760 ಮೆಟ್ರಿಕ್ ಟನ್ ರಸಗೊಬ್ಬರವು ಮಾರಾಟವಾಗಿತ್ತು. ಇನ್ನೂ 10,89, 551 ಮೆಟ್ರಿಕ್ ಟನ್‌ನಷ್ಟು ರಸಗೊಬ್ಬರವು ದಾಸ್ತಾನಿನಲ್ಲಿ ಉಳಿದಿತ್ತು. ಏಪ್ರಿಲ್‌ನಿಂದ ಮೇವರೆಗೆ ಒಟ್ಟಾರೆ 8,36,937 ಮೆಟ್ರಿಕ್ ಟನ್‌ನಷ್ಟು ಕೊರತೆಯಿತ್ತು. ಕೆಲವು ರಸಗೊಬ್ಬರಗಳು ಬೇಡಿಕೆಗಿಂತಲೂ ಹೆಚ್ಚು ಪ್ರಮಾಣದಲ್ಲಿ ಸರಬರಾಜು ಆಗಿವೆ.
ರಸಗೊಬ್ಬರ ಬೇಡಿಕೆ, ಪೂರೈಕೆ ಮತ್ತು ಕೊರತೆ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎನ್ ಚೆಲುವರಾಯಸ್ವಾಮಿ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರ ಮಧ್ಯೆ ನಡೆಯುತ್ತಿರುವ ಆರೋಪ ಪ್ರತ್ಯಾರೋಪದ ಮಧ್ಯೆಯೇ ರಸಗೊಬ್ಬರಕ್ಕೆ ಸಂಬಂಧಿಸಿದಂತೆ ಅಂಕಿ ಅಂಶಗಳು ಮುನ್ನೆಲೆಗೆ ಬಂದಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮೇಳನದಲ್ಲಿ ಕೃಷಿ ಇಲಾಖೆಯು ಮುಂಗಾರು ಹಂಗಾಮಿನ ರಸಗೊಬ್ಬರಗಳ ಬೇಡಿಕೆ ಹಾಗೂ ಸರಬರಾಜಿಗೆ ಸಂಬಂಧಿಸಿದಂತೆ ಅಂಕಿ ಅಂಶಗಳನ್ನು ಒದಗಿಸಿದ್ದರು. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಅಲ್ಲದೇ ಬೇಡಿಕೆಗೆ ಅನುಗುಣವಾಗಿ ಡಿಎಪಿ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ ಮತ್ತು ಬೇಡಿಕೆಗೆ ತಕ್ಕಂತೆ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮೇಳನದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ರಸಗೊಬ್ಬರಗಳ ಕೊರತೆ ಉಂಟಾದಲ್ಲಿ ಮತ್ತು ರಸಗೊಬ್ಬರವು ಅಗತ್ಯವಿರುವ ಜಿಲ್ಲೆಗಳಿಗೆ (250 ಕಿ ಮೀ ಒಳಗೆ) ಕಾಪು ದಾಸ್ತಾನಿನಿಂದ ವರ್ಗಾಯಿಸಲಾಗುವುದು ಎಂದು ಕೃಷಿ ಇಲಾಖೆಯು ಹೇಳಿತ್ತು. ಆದರೀಗ ಅಗತ್ಯವಿರುವ ಜಿಲ್ಲೆಗಳಿಗೆ ರಸಗೊಬ್ಬರಗಳನ್ನು ಸರಬರಾಜು ಮಾಡುವಲ್ಲಿ ಕೃಷಿ ಇಲಾಖೆಯು ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಹಾಗೆಯೇ ಮುಂಗಾರು ಹಂಗಾಮು ಈ ಸಾಲಿನಲ್ಲಿ ಪ್ರಾರಂಭವಾಗುವುದರಿಂದ ಜೂನ್ ತಿಂಗಳ ಬೇಡಿಕೆಯಾದ 78,472 ಮೆಟ್ರಿಕ್ ಟನ್ ಕೂಡ ಜಿಲ್ಲೆಗಳಲ್ಲಿ ಮುಂಚಿತವಾಗಿಯೇ ಅವಶ್ಯಕವಾಗಿ ಬೇಕಿರುತ್ತದೆ ಎಂದು ಕೃಷಿ ಇಲಾಖೆಯು ಹೇಳಿತ್ತು.
ಬೆಳಗಾವಿ, ಹಾಸನ, ಮೈಸೂರು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಪ್ರಾರಂಭಿಕ ಶಿಲ್ಕು ಉಳಿಕೆಯಾಗಿದೆ. ಸ್ವಲ್ಪ ಮಟ್ಟಿಗೆ ಕೊರತೆ, ಅಧಿಕ ಪ್ರಮಾಣವಿರುವ ಜಿಲ್ಲೆಗಳಿಂದ ತೀರಾ ಅಗತ್ಯವಿರುವ ಜಿಲ್ಲೆಗಳಿಗೆ (250 ಕಿ ಮೀ ಪರಿಧಿಯೊಳಗೆ) ಕಾಪು ದಾಸ್ತಾನಿನಿಂದ ವರ್ಗಾಯಿಸಲಾಗುವುದು ಎಂದು ಇಲಾಖೆಯು ಸಭೆಗೆ ತಿಳಿಸಿತ್ತು.
ಬೇಡಿಕೆ-ಸರಬರಾಜು
ಮುಂಗಾರು ಹಂಗಾಮಿನ 2025ರ ಏಪ್ರಿಲ್‌ನಿಂದ ಸೆಪ್ಟಂಬರ್‍ವರೆಗೆ ಡಿಎಪಿಯು 4,00,000 ಮೆಟ್ರಿಕ್ ಟನ್ ಬೇಡಿಕೆ ಇತ್ತು. ಎಂಒಪಿಯು 1,30,000 ಮೆಟ್ರಿಕ್ ಟನ್, ಕಾಂಪ್ಲೆಕ್ಸ್ 9,90,000, ಯೂರಿಯಾ 11.17 ಲಕ್ಷ, ಎಸ್‌ಎಸ್‌ಪಿ 40,000 ಸೇರಿ ಒಟ್ಟಾರೆ 26,77,000 ಮೆಟ್ರಿಕ್ ಟನ್‌ನಷ್ಟು ಬೇಡಿಕೆ ಇರುವುದು ಗೊತ್ತಾಗಿದೆ.
2025ರ ಏಪ್ರಿಲ್ ಮತ್ತು ಮೇ 26ವರೆಗೆ ಒಟ್ಟಾರೆ 7,51,373 ಮೆಟ್ರಿಕ್ ಟನ್‌ನಷ್ಟು ಬೇಡಿಕೆ ಇತ್ತು. ರಸಗೊಬ್ಬರಗಳ ಪೈಕಿ ಏಪ್ರಿಲ್‌ನಿಂದ ಮೇ ವರೆಗೆ 2,37,687 ಮೆಟ್ರಿಕ್ ಟನ್‌ನಷ್ಟು ಯೂರಿಯಾ ಬೇಡಿಕೆ ಇತ್ತು. ಆದರೆ 2025ರ ಮೇ 26ರ ಅಂತ್ಯಕ್ಕೆ ಆರಂಭಿಕ ಶಿಲ್ಕು ಸೇರಿದಂತೆ 5,71,205 ಮೆಟ್ರಿಕ್ ಟನ್ ಯೂರಿಯಾ ಸರಬರಾಜು ಆಗಿತ್ತು. ಇದರಲ್ಲಿ 2,08,397 ಮೆಟ್ರಿಕ್ ಟನ್ ಮಾರಾಟವೂ ಆಗಿತ್ತು. ದಾಸ್ತಾನಿನಲ್ಲಿ 3,62,808 ಮೆಟ್ರಿಕ್ ಟನ್ ಯೂರಿಯಾವು ದಾಸ್ತಾನಿನಲ್ಲಿ ಉಳಿದಿತ್ತು. ಆದರೂ 3,33,518 ಮೆಟ್ರಿಕ್ ಟನ್ ಮೇ 26ರ ಅಂತ್ಯಕ್ಕೆ ಯೂರಿಯಾವು ಕೊರತೆಯಲ್ಲಿತ್ತು ಎಂಬುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಸೆಪ್ಟಂಬರ್‍ವರೆಗೆ ಡಿಎಪಿಯು 4,00,000 ಮೆಟ್ರಿಕ್ ಟನ್ ಪ್ರಮಾಣದಷ್ಟು ಬೇಡಿಕೆ ಇದೆ. ಏಪ್ರಿಲ್ ಮತ್ತು ಮೇ ವರೆಗೆ 1,55,775 ಮೆಟ್ರಿಕ್ ಟನ್ ಬೇಡಿಕೆ ಇತ್ತು. ಈ ಪೈಕಿ 1,45,344 ಮೆಟ್ರಿಕ್ ಟನ್ ಪೂರೈಕೆಯಾಗಿತ್ತು. ಇದರಲ್ಲಿ 71,098 ಮೆಟ್ರಿಕ್ ಟನ್ ಮಾರಾಟವಾಗಿತ್ತು. ದಾಸ್ತಾನಿನಲ್ಲಿ 74,246 ಮೆಟ್ರಿಕ್ ಟನ್ ಉಳಿದಿತ್ತು.
ಎಂಒಪಿಯು ಸೆಪ್ಟಂಬರ್‍ವರೆಗೆ 1,30,000 ಮೆಟ್ರಿಕ್ ಟನ್‌ನಷ್ಟು ಬೇಡಿಕೆ ಇದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 41,990 ಮೆಟ್ರಿಕ್ ಟನ್ ಬೇಡಿಕೆ ಇತ್ತು. ಆದರೆ 1,10,386 ಮೆಟ್ರಿಕ್ ಟನ್‌ನಷ್ಟು ಸರಬರಾಜಾಗಿತ್ತು. ಇದರಲ್ಲಿ 25,276 ಮೆಟ್ರಿಕ್ ಟನ್ ಮಾರಾಟವಾಗಿತ್ತು. 85,110 ಮೆಟ್ರಿಕ್ ಟನ್ ದಾಸ್ತಾನಿನಲ್ಲಿ ಉಳಿಕೆಯಾಗಿತ್ತು.
ಕಾಂಪ್ಲೆಕ್ಸ್ ಗೊಬ್ಬರವು ಸೆಪ್ಟಂಬರ್‍ವರೆಗೆ 9,90,000 ಮೆಟ್ರಿಕ್ ಟನ್‌ನಷ್ಟು ಬೇಡಿಕೆ ಇದೆ. ಏಪ್ರಿಲ್ ಮತ್ತು ಮೇ ವರೆಗೆ 3,03,995 ಮೆಟ್ರಿಕ್ ಟನ್‌ನಷ್ಟು ಬೇಡಿಕೆ ಇತ್ತು. ಈ ಪೈಕಿ 7,20,700 ಮೆಟ್ರಿಕ್ ಟನ್ ಮೇ ಅಂತ್ಯಕ್ಕೆ ಸರಬರಾಜಾಗಿತ್ತು. ಇದರಲ್ಲಿ 1,85, 378 ಮೆಟ್ರಿಕ್ ಟನ್ ಮಾರಾಟವಾಗಿತ್ತು. 5,35,322 ಮೆಟ್ರಿಕ್ ಟನ್ ದಾಸ್ತಾನಿನಲ್ಲಿತ್ತು.
ಯೂರಿಯಾ ಗೊಬ್ಬರವು ಸೆಪ್ಟಂಬರ್‍ವರೆಗೆ 11,17,000 ಮೆಟ್ರಿಕ್ ಟನ್ ಬೇಡಿಕೆ ಇತ್ತು. ಈ ಪೈಕಿ ಏಪ್ರಿಲ್ ಮತ್ತು ಮೇ ತಿಂಗಳಲ್ಲೇ 2,37,687 ಮೆಟ್ರಿಕ್ ಟನ್ ಬೇಡಿಕೆ ಇತ್ತು. ಮೇ ತಿಂಗಳಾಂತ್ಯಕ್ಕೆ 5,71,205 ಮೆಟ್ರಿಕ್ ಟನ್ ಸರಬರಾಜಾಗಿತ್ತು. ಇದರಲ್ಲಿ 2,08,397 ಮೆಟ್ರಿಕ್ ಟನ್ ಮಾರಾಟವಾಗಿತ್ತು. ಮೇ ತಿಂಗಳವರೆಗೆ 3,62,808 ಮೆಟ್ರಿಕ್ ಟನ್ ಯೂರಿಯಾವು ದಾಸ್ತಾನಿನಲ್ಲೇ ಉಳಿದಿತ್ತು. ಆದರೂ 3,33,518 ಮೆಟ್ರಿಕ್ ಟನ್‌ನಷ್ಟು ಕೊರತೆಯಾಗಿದೆ ಎಂದು ಕೃಷಿ ಇಲಾಖೆಯು ಸರ್ಕಾರಕ್ಕೆ ತಿಳಿಸಿತ್ತು.
ಎಸ್‌ಎಸ್‌ಪಿಯು ಸೆಪ್ಟಂಬರ್‍ವರೆಗೆ 40,000 ಮೆಟ್ರಿಕ್ ಟನ್‌ನಷ್ಟು ಬೇಡಿಕೆ ಇದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 11,926 ಮೆಟ್ರಿಕ್ ಟನ್‌ನಷ್ಟು ಬೇಡಿಕೆ ಇತ್ತು. ಆದರೆ 40,675 ಮೆಟ್ರಿಕ್ ಟನ್ ಸರಬರಾಜಾಗಿತ್ತು. ಮೇ ತಿಂಗಳಾಂತ್ಯಕ್ಕೆ 8,610 ಮೆಟ್ರಿಕ್ ಟನ್ ಮಾರಾಟವಾಗಿದ್ದರೇ 32,065 ಮೆಟ್ರಿಕ್ ಟನ್ ದಾಸ್ತಾನಿನಲ್ಲಿ ಉಳಿಕೆಯಾಗಿತ್ತು. ಆದರೂ 28,749 ಮೆಟ್ರಿಕ್ ಟನ್ ಕೊರತೆ ಇದೆ ಎಂದು ಇಲಾಖೆಯು ವಿವರಿಸಿತ್ತು.
ಮುಂಗಾರು ಅವಧಿಯಲ್ಲಿ ಕರ್ನಾಟಕದಲ್ಲಿ ರಸಗೊಬ್ಬರ ಕೊರತೆಯ ಆತಂಕ ಎದುರಾಗಿರುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ಜೆಪಿ ನಡ್ಡಾ ಅವರಿಗೆ ಪತ್ರ ಬರೆದಿದ್ದರು ಕೇಂದ್ರ ಸರ್ಕಾರ 2025ನೇ ಖಾರಿಫ್‌ಗೆ 11,17,000 ಮೆಟ್ರಿಕ್ ಟನ್ ಯೂರಿಯಾವನ್ನು ಹಂಚಿಕೆ ಮಾಡಿದೆ. ಅದರಲ್ಲಿ ಇಲ್ಲಿಯವರೆಗೆ ಸರಬರಾಜು ಮಾಡಿರುವುದು ಕೇವಲ 5,16,959 ಮೆಟ್ರಿಕ್ ಟನ್ ಮಾತ್ರ. ಆದರೆ ಏಪ್ರಿಲ್‌ನಿಂದ ಜುಲೈವರೆಗೆ ರಾಜ್ಯದ ಯೂರಿಯಾದ ಅವಶ್ಯಕತೆ 6,80,655 ಮೆಟ್ರಿಕ್ ಟನ್ ಆಗಿದೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಗಮನ ಸೆಳೆದಿದ್ದರು.
ಇದಲ್ಲದೆ, ಕೆಲವು ರಸಗೊಬ್ಬರ ಕಂಪನಿಗಳು ಕೇಂದ್ರ ಸರ್ಕಾರದ ಹಂಚಿಕೆಯ ಪ್ರಕಾರ ಯೂರಿಯಾ ಗೊಬ್ಬರವನ್ನು ಪೂರೈಸಲು ತಮ್ಮ ಅಸಮರ್ಥತೆಯನ್ನು ವ್ಯಕ್ತಪಡಿಸಿವೆ ಎಂದೂ ರಸಗೊಬ್ಬರ ಸಚಿವರಿಗೆ ಬರೆದ ಪತ್ರದಲ್ಲಿ ಅವರು ಉಲ್ಲೇಖಿಸಿದ್ದನ್ನು ಸ್ಮರಿಸಬಹುದು.