ರಹಸ್ಯ ದಾಖಲೆಗಳು ತೆರಿಗೆಗಳ್ಳರ ಕೈಗೆ, ಮೇಲ್ವಿಚಾರಕರೇ ಶಾಮೀಲು; ಎಪಿಎಂಸಿಗಳಲ್ಲಿ ದುರಾಡಳಿತ

ಬೆಂಗಳೂರು;  ರಾಜ್ಯದ ಹಲವು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಗಳಲ್ಲಿ ಭ್ರಷ್ಟಾಚಾರ ಎಗ್ಗಿಲ್ಲದೇ ನಡೆಯುತ್ತಿದೆ. ಸಮಿತಿಯ ಕಚೇರಿಯ ರಹಸ್ಯ ದಾಖಲೆಗಳೂ ತೆರಿಗೆಗಳ್ಳರ ಕೈ ಸೇರುತ್ತಿವೆ. ಎಪಿಎಂಸಿಗಳ ಕಾರ್ಯದರ್ಶಿಗಳು, ಮಾರುಕಟ್ಟೆಯ ಮೇಲ್ವಿಚಾರಕರುಗಳೇ ಇಂತಹ ಕೃತ್ಯಗಳಲ್ಲಿ ಶಾಮೀಲಾಗಿದ್ದಾರೆ!

 

ರಾಜ್ಯದ ವಿವಿಧೆಡೆ ಇರುವ ಎಪಿಎಂಸಿಗಳಲ್ಲಿ ಸ್ವಚ್ಛಂಧ ಭ್ರಷ್ಟಾಚಾರ, ಲಂಚಗುಳಿತನ, ತೆರಿಗೆಗಳ್ಳರೊಂದಿಗೆ ಸಮಿತಿಯ ಅಧಿಕಾರಿ ನೌಕರರುಗಳೇ ಶಾಮೀಲಾಗಿದ್ದಾರೆ ಎಂಬ ದೂರುಗಳು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಕೆಯಾಗಿವೆ. ಇಂತಹ ದೂರುಗಳನ್ನು ವಿಚಾರಣೆ ನಡೆಸಲು ವಿಚಾರಣಾಧಿಕಾರಿಗಳನ್ನೂ ನೇಮಿಸಿದೆ. ಆದರೆ ವಿಚಾರಣಾಧಿಕಾರಿಗಳು ಸರ್ಕಾರಕ್ಕೆ ವರದಿಗಳನ್ನೇ ನೀಡುತ್ತಿಲ್ಲ.

 

ಅಲ್ಲದೇ ಎಪಿಎಂಸಿಗಳಲ್ಲಿ ನಡೆಯುತ್ತಿರುವ ಅಕ್ರಮ, ಅವ್ಯವಹಾರ, ಲೋಪಗಳು, ನಿಯಮಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ಕೈಗೊಂಡಿಲ್ಲ. ಅದೇ ರೀತಿ ಇಂತಹ ಕೃತ್ಯಗಳ ಬಗ್ಗೆ ದೂರು ನೀಡಿದವರಿಗೇ ಹಣದ ಆಮಿಷ ಒಡ್ಡಿ, ದೂರರ್ಜಿಗಳನ್ನು ಹಿಂಪಡೆಯಲು ಒತ್ತಡವನ್ನೂ ಹೇರಲಾಗುತ್ತಿದೆ ಎಂಬ ಬಲವಾದ ಆರೋಪಗಳೂ ಕೇಳಿ ಬಂದಿವೆ.

 

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯೇ ಇದಕ್ಕೊಂದು ಜ್ವಲಂತ ನಿದರ್ಶನ. ಪುತ್ತೂರಿನ ಎಪಿಎಂಸಿಯಲ್ಲಿ ಅಲ್ಲಿನ ಕಾರ್ಯದರ್ಶಿ, ಮಾರುಕಟ್ಟೆ ಮೇಲ್ವಿಚಾರಕರು ಸೇರಿದಂತೆ ಇನ್ನಿತರೆ ಅಧಿಕಾರಿ ನೌಕರರ ವಿರುದ್ಧ ಅದ್ರಾಮ ಎಂಬ ಸಾಮಾಜಿಕ ಕಾರ್ಯಕರ್ತರು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಈ ದೂರಿನಲ್ಲಿರುವ ಆಪಾದನೆಯು, ಪುತ್ತೂರು ಎಪಿಎಂಸಿಯ ಮತ್ತೊಂದು ಮುಖವಾಡವನ್ನು ತೆರೆದಿಟ್ಟಿದೆ.

 

ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಇಂತಹ ಹಲವಾರು ದೂರುಗಳು ಸಚಿವ ಶಿವಾನಂದ ಪಾಟೀಲ್‌ ಅವರ ಗಮನಕ್ಕೆ ಬಂದಿದ್ದರೂ ಸಹ ಇದುವರೆಗೂ ಬಿಗಿಯಾದ ಕ್ರಮಗಳನ್ನು ಕೈಗೊಂಡಿಲ್ಲ ಮತ್ತು ಈ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿಲ್ಲ ಎಂದು ತಿಳಿದು ಬಂದಿದೆ.

 

ದೂರಿನಲ್ಲೇನಿದೆ?

 

2024-25ನೇ ಸಾಲಿಗೆ ಸಕಾಲದಲ್ಲಿ ಸಮಿತಿಯು ಬಜೆಟ್‌ ತಯಾರಿಸಿಲ್ಲ. ಸಮಿತಿಯ ಅನುಮೋದನೆಯೊಂದಿಗೆ ಸಕ್ಷಮ ಪ್ರಾಧಿಕಾರದಿಂದ ಬಜೆಟ್‌ ಮಂಜೂರಾತಿ ಪಡೆಯದೆ ಲಕ್ಷಾಂತರ ಹಣ ಖರ್ಚು ಮಾಡಿದ್ದಾರೆ. ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ನಿಯಮ 1968ರ ನಿಯಮ 64ರ ಅನ್ವಯ ಸಮಿತಿಯು 2024-25ನೇ ಸಾಲಿನ ಮಾರುಕಟ್ಟೆ ವರ್ಷಕ್ಕೆ ಸಂಬಂಧಿಸಿದಂತೆ ಸಾಮಾನ್ಯ ನಿಧಿ ಮತ್ತು ಖಾಯಂ ನಿಧಿ ಆಯವ್ಯಯ ಮುಂಗಡ ಪತ್ರ ತಯಾರಿಸಿ ಸಮಿತಿಯ ಸಭೆಯಲ್ಲಿ ಮಂಡಿಸಿ ಸಮಿತಿಯ ಅನುಮೋದನೆಯೊಂದಿಗೆ 2024ನೇ ಜನವರಿ ಅಂತ್ಯದೊಳಗೆ ಸಕ್ಷಮ ಪ್ರಾಧಿಕಾರಕ್ಕೆ ಬಜೆಟ್‌ ಮಂಜೂರಾತಿಗಾಗಿ ಕಳಿಸಬೇಕು.

 

 

ಆದರೆ ಪುತ್ತೂರು ಎಪಿಎಂಸಿಯು 2024-25ನೇ ಸಾಲಿನ ಮಾರುಕಟ್ಟೆ ವರ್ಷದ ಆಯವ್ಯಯ ಮುಂಗಡ ಪತ್ರನ್ನು ತಯಾರಿಸಿ ಸಮಿತಿಯ ಅನುಮೋದನೆಯೊಂದಿಗೆ ಸಕ್ಷಮ ಪ್ರಾಧಿಕಾರಕ್ಕೆ ಕಳಿಸಿ ಬಜೆಟ್‌ ಮಂಜೂರಾತಿ ಪಡೆದಿರುವುದಿಲ್ಲ. ಸದರಿ ಸಾಲಿಗೆ ಬಜೆಟ್‌ ಮಂಜೂರಾತಿ ಇಲ್ಲದಿದ್ದರೂ ಸಹ 2024ನೇ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಲಕ್ಷಾಂತರ ರುಪಾಯಿಗಳನ್ನು ಅಕ್ರಮವಾಗಿ ಸಮಿತಿಯು ಮಾರುಕಟ್ಟೆ ನಿಧಿಯಿಂದ ಕಾರ್ಯದರ್ಶಿ ಎಂ ಸಿ ಪಡಗಾನೂರು ಮತ್ತು ಪ್ರಭಾರ ಲೆಕ್ಕಿಗರಾದ ಪವಿತ್ರ ಕೆ ಅವರು ಡ್ರಾ ಮಾಡಿ ಆರ್ಥಿಕ ಅಪರಾಧ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

 

 

ಸಮಿತಿಯ ಪ್ರಾಂಗಣದಲ್ಲಿರುವ ಅಂಗಡಿ, ಗೋದಾಮು ಮತ್ತು ಅಂಗಡಿ-ಗೋದಾಮು ಕಟ್ಟಡಗಳಿಗೆ ಲೀವ್‌ ಎಂಡ್‌ ಲೈಸೆನ್ಸ್‌ ಶುಲ್ಕ ನಿಗದಿಪಡಿಸಿ ಅರ್ಹ ಪೇಟೆ ಕಾರ್ಯಕರ್ತರುಗಳಿಗೆ ಲೀವ್‌ ಅಂಡ್‌ ಲೈಸೆನ್ಸ್ ಆಧಾರದಲ್ಲಿ ಹಂಚಿಕೆಗೆ ಸೂಕ್ತ ಕ್ರಮವಹಿಸಿಲ್ಲ. ಪ್ರಸ್ತುತ ಪುತ್ತೂರು ಸಮಿತಿಯ ಪುತ್ತೂರು ಮುಖ್ಯ ಮಾರುಕಟ್ಟೆ ಪ್ರಾಂಗಣ ಮತ್ತು ಕಡಬ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ 30ಕ್ಕೂ ಹೆಚ್ಚು ಸಂಖ್ಯೆಯ ಕಟ್ಟಡಗಳು ಖಾಲಿಯಾಗಿ ಸಮಿತಿಯ ವಶದಲ್ಲಿವೆ. ಕಟ್ಟಡಗಳ ಹಂಚಿಕೆಗೆ ಬೇಡಿಕೆ ಇದ್ದರೂ ಕೂಡ ಹಂಚಿಕೆಗೆ ಸೂಕ್ತ ಕ್ರಮವಹಿಸದ ಕಾರಣ ಸಮಿತಿಗೆ ಲಕ್ಷಾಂತರ ರುಪಾಯಿಗಳ ಆರ್ಥಿಕ ನಷ್ಟವುಂಟಾಗಿದೆ ಎಂದು ಆಪಾದಿಸಿರುವುದು ದೂರಿನಿಂದ ಗೊತ್ತಾಗಿದೆ.

 

 

ಸಂತೆಕಟ್ಟೆ ಸುತ್ತ ಇರುವ ಮಳಿಗೆ ಮತ್ತು ಕೆಲವು ಕಟ್ಟಡಗಳನ್ನು (ಅಂಗಡಿ ಸಂಖ್ಯೆ 13, ನೂತನ ದೊಡ್ಡ ಗೋದಾಮ, 30 ಎಂಟಿ ಸಾಮರ್ಥ್ಯದ ಗೋದಾಮು , ಸಂಡ್ರಿ ಶಾಪ್‌ ಕಟ್ಟಡ) ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯದೇ ಅಕ್ರಮವಾಗಿ ವರ್ತಕರಿಗೆ ನೀಡಲಾಗಿದೆ. ಕಚೇರಿಯ ರಹಸ್ಯ ದಾಖಲೆಗಳನ್ನು ಪೆನ್‌ ಡ್ರೈವ್‌ ಮೂಲಕ ತೆರಿಗೆ ಕಳ್ಳರಿಗೆ ನೀಡುತ್ತಿದ್ದಾರೆ. ಇದಕ್ಕಾಗಿ ಹಲವಾರು ಪೆನ್‌ಡ್ರೈವ್‌ಗಳನ್ನು ಸಮಿತಿಯ ಇಂಪ್ರೆಸ್ಟ್‌ನಿಂದ ಖರೀದಿಸಲಾಗಿದೆ. ಈ ಬಗ್ಗೆ ಸಮಿತಿ ಕಚೇರಿಯ ಗಣಕ ಯಂತ್ರದಲ್ಲಿ ದಿನಕ್ಕೊಂದರಂತೆ ಎ4 ಅಳತೆಯ ನಕಲಿ ಬಿಲ್‌ಗಳನ್ನು ತಯಾರಿಸಿ ಅಕ್ರಮ ಎಸಗಿರುವುದು ಕಂಡು ಬರುತ್ತದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

 

ಈ ಕುರಿತು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಮೇಜರ್‍‌ ಮಣಿವಣ್ಣನ್‌ ಅವರು ವಿಚಾರಣೆಗೆ ಆದೇಶಿಸಿದ್ದರು. ಕೃಷಿ ಮಾರಾಟ ನಿರ್ದೇಶಕ ಮಂಜುನಾಥ್‌ ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಈ ಸಂಬಂಧ ಎಪಿಎಂಸಿ ಕಾರ್ಯದರ್ಶಿ ಎಂ ಸಿ ಪಡಗಾನೂರ ಹಾಗೂ ಹಿರಿಯ ಮಾರುಕಟ್ಟೆ ಮೇಲ್ವಿಚಾರಕರಾದ ಪವಿತ್ರ ಕೆ ಅವರನ್ನು ವಿಚಾರಣೆ ನಡೆಸಿದ್ದರು.

 

 

ಆದರೆ ವಿಚಾರಣೆಯು ನಿಷ್ಪಕ್ಷಪಾತವಾಗಿ ನಡೆದಿಲ್ಲ. ದೂರರ್ಜಿಯನ್ನು ಹಿಂಪಡೆಯಲು ಪವಿತರ ಅವರು ಹಣದ ಆಮಿಷ ಒಡ್ಡಿದ್ದರು. ಅಲ್ಲದೇ ಪ್ರಕರಣದ ವಿಚಾರಣಾಧಿಕಾರಿಯಾಧ ಮಂಜುನಾಥ್ ಅವರು ಸಹ ದೂರುದಾರನಿಗೆ 3-4 ಬಾರಿ ಆಪಾದಿತ ಸರ್ಕಾರಿ ನೌಕರರೊಂದಿಗೆ ರಾಜಿ ಮಾಡಿಕೊಳ್ಳುವಂತೆ ಒತ್ತಡ ಹೇರಿದ್ದಾರೆ.

 

 

ವಿಚಾರಾಣಾಧಿಕಾರಿಗಳು ವಿಚಾರಣೆ ವರದಿಯನ್ನು ಕೃಷಿ ಮಾರಾಟ ನಿರ್ದೇಶಕರಿಗೆ ನೀಡಿಲ್ಲ ಎಂದು ದೂರಿರುವುದು ಗೊತ್ತಾಗಿದೆ.

 

 

ಬೆಂಗಳೂರಿನ ಸಿಂಗೇನ ಅಗ್ರಹಾರದಲ್ಲಿರುವ ಎಪಿಎಂಸಿಗಳಲ್ಲೂ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿದ್ದವು.

 

ಎಪಿಎಂಸಿ ಮಳಿಗೆಗಳ ಹಂಚಿಕೆಯಲ್ಲಿ ಭ್ರಷ್ಟಾಚಾರ; ಪೂರ್ವ ನಿರ್ಧರಿತ ವ್ಯವಹಾರ, ಲಂಚಗುಳಿತನಕ್ಕಿಲ್ಲ ಕಡಿವಾಣ

 

ಸಿಂಗೇನ ಅಗ್ರಹಾರದಲ್ಲಿರುವ ಹಣ್ಣಿನ ಮಾರುಕಟ್ಟೆಯಲ್ಲಿನ ಇ-32, ಎಫ್‌ 52 ಮತ್ತು ಎಫ್‌ 56 ಅಂಗಡಿ ಹಂಚಿಕೆಯಲ್ಲಿ ಗಂಭೀರ ಅಕ್ರಮಗಳು ಮತ್ತು ಉದ್ದೇಶಪೂರ್ವಕವಾಗಿ ದುಷ್ಕೃತ್ಯಗಳು ನಡೆದಿವೆ ಎಂದು ದೂರಿನಲ್ಲಿ ಪ್ರಸ್ತಾವಿಸಿದ್ದರು.

 

 

ಮಳಿಗೆಗಳ ಹಂಚಿಕೆಗಾಗಿ ಬೆರಳಣಿಕೆಯ ಪತ್ರಿಕೆಗಳಲ್ಲಿ ಮಾತ್ರ ಜಾಹೀರಾತು ನೀಡಲಾಗಿದೆ. ಈ ಪತ್ರಿಕೆಗಳು ಸಹ ಎಪಿಎಂಸಿ ಮಾರುಕಟ್ಟೆ ಆವರಣದ ಒಳಗೆ ಮತ್ತು ಸುತ್ತಮುತ್ತ ವ್ಯಾಪಕವಾಗಿ ಪ್ರಸಾರವಾಗುವುದಿಲ್ಲ. ಇದರಿಂದಾಗಿ ಹೆಚ್ಚಿನ ವ್ಯಾಪಾರಿಗಳಿಗೆ ಮಳಿಗೆಗಳ ಹಂಚಿಕೆಯ ಪ್ರಮುಖ ಸೂಚನೆಯೇ ತಿಳಿದಿಲ್ಲ. ಈ ಸಂಬಂಧ ಅಧಿಕೃತವಾಗಿ ವ್ಯಾಪಾರಿಗಳ ಸಭೆಯನ್ನೂ ನಡೆಸಿಲ್ಲ. ಹಾಗೆಯೇ ಹಂಚಿಕೆ ಪ್ರಕ್ರಿಯೆ ಕುರಿತು ವ್ಯಾಪಾರಿಗಳೊಂದಿಗೆ ಸಮಾಲೋಚನೆಯನ್ನೂ ನಡೆಸಿರಲಿಲ್ಲ ಎಂದು ದೂರಲಾಗಿತ್ತು.

 

 

ಬನಶಂಕರಿ ಫ್ರೂಟ್ಸ್‌, ಮಂಜುನಾಥ ಫ್ರೂಟ್ಸ್‌, ಸಿಂಗ್‌ ಇಂಟರ್‍‌ನ್ಯಾಷನಲ್‌ ವ್ಯಾಪಾರಿಗಳಿಗೆ ವಾಮಮಾರ್ಗದಲ್ಲಿ ಅನುಕೂಲ ಮಾಡಿಕೊಡಲಾಗಿದೆ. ಮಳಿಗೆಯನ್ನು ಹಂಚಿಕೆ ಮಾಡುವ ಮುನ್ನವೇ ಬಳಕೆದಾರರ ಶುಲ್ಕವನ್ನು ಮೊದಲೇ ಪಾವತಿಸಲಾಗಿದೆ. ಇದು ಪೂರ್ವನಿರ್ಧರಿತ ವ್ಯವಹಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ದೂರುದಾರರು ಆಪಾದಿಸಿದ್ದರು.

 

‘ಈ ಇಡೀ ಪ್ರಕ್ರಿಯೆಯಲ್ಲಿ ಎಪಿಎಂಸಿ ಬಿನ್ನಿಪೇಟೆ ಕಾರ್ಯದರ್ಶಿ ಸುಮಾ, ಆಡಳಿತಾಧಿಕಾರಿ ರಾಜಣ್ಣ ಮತ್ತು ಅಂಗಡಿ ಮಾಲೀಕರು ಶಾಮೀಲಾಗಿದ್ದಾರೆ. ಅರ್ಜಿದಾರರ ಸಂಖ್ಯೆಯನ್ನು ಮಿತಿಗೊಳಿಸಲು ಕುತಂತ್ರ ನಡೆಸಿದ್ದಾರೆ. 1,000ಕ್ಕೂ ಹೆಚ್ಚು ಪರವಾನಿಗೆದಾರರು ಅಂಗಡಿ ಹಂಚಿಕೆಗಾಗಿ ಕಾಯುತ್ತಿದ್ದರೂ ಸಹ ಕೇವಲ 17 ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗಿದೆ,’ ಎಂದು ದೂರಿನಲ್ಲಿ ವಿವರಿಸಿದ್ದರು.

 

 

ಮಾರುಕಟ್ಟೆ ಸಮಿತಿಯ ಸಹಾಯಕ ಕಾರ್ಯದರ್ಶಿ ಚಿತ್ರಾ ಮತ್ತು ಮಾರುಕಟ್ಟೆ ಮೇಲ್ವಿಚಾರಕಿ ರೇಣುಕಾ ಎಂಬವರು ಒಂದೇ ಸ್ಥಳದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಬ್ಬರೂ ಕೆಲವು ವ್ಯಾಪಾರಿಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಮತ್ತು ಪೂರ್ವ ನಿರ್ಧರಿತ ಅಂಗಡಿಗಳಿಗೆ ಹಂಚಿಕೆ ಮಾಡುತ್ತಿದ್ದಾರೆ. ಎಪಿಎಂಸಿ ನಿಯಮಗಳಿಗೆ ವಿರುದ್ಧವಾಗಿ ಮತ್ತು ಕಾನುನುಬಾಹಿರವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.

 

ಬೀದರ್‍‌ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಕರಣವೊಂದರಲ್ಲಿ   ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಇತ್ಯರ್ಥವಾಗದೇ ಇದ್ದರೂ ಸಹ ಲಕ್ಷಾಂತರ ರುಪಾಯಿ ಲಂಚ ಪಡೆದು ಎಪಿಎಂಸಿ ಮಳಿಗೆ ನೋಂದಣಿ ಮಾಡಿಕೊಡಲಾಗಿತ್ತು.  ಸಮಿತಿಯ ಕಾರ್ಯದರ್ಶಿ ಮಳಿಗೆದಾರರಿಂದ ಲಂಚ ಪಡೆದು ಅನಧಿಕೃತವಾಗಿ ನೋಂದಣಿ ಮಾಡಿಸಿಕೊಟ್ಟಿದ್ದಾರೆ ಎಂದು ಸಹಕಾರ ಇಲಾಖೆಗೆ ಕನ್ನಡ ಸಮರ ಸೇನೆಯ ಅಧ್ಯಕ್ಷ ಅವಿನಾಶ ದೀನೇ ಎಂಬುವರು ದೂರು ಸಲ್ಲಿಸಿದ್ದರು.

 

 

‘ಉಚ್ಛ ನ್ಯಾಯಾಲಯದ ಕಲ್ಬುರ್ಗಿ ಪೀಠದಲ್ಲಿ ಪ್ರಕರಣಗಳು ಬಾಕಿ ಇರುವಾಗಲೇ ಏಕಾಏಕೀ 2024 ಮೇ ಮತ್ತು ಜೂನ್‌ನಲ್ಲಿ ಎಲ್ಲಾ ವ್ಯಾಪಾರಸ್ಥರಿಂದ ಸುಮಾರು 2ರಿಂದ 3 ಲಕ್ಷ ರು ಲಂಚವನ್ನು ಪಡೆದು ಸರ್ಕಾರದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಎಲ್ಲರಿಗೂ ನೋಂದಣಿ ಮಾಡಿಕೊಟ್ಟಿರುತ್ತಾರೆ,’ ಎಂದು ದೂರಿನಲ್ಲಿ ವಿವರಿಸಿದ್ದರು.

 

ಲಕ್ಷಾಂತರ ರುಪಾಯಿ ಲಂಚ; ಹಣ್ಣು, ತರಕಾರಿ ಮಾರುಕಟ್ಟೆ ಮಳಿಗೆಗಳಿಗೆ ಅನಧಿಕೃತ ನೋಂದಣಿ, 4.74 ಕೋಟಿ ನಷ್ಟ

 

ಮದೀನಾ ಪ್ರೂಟ್‌ ಕಂಪನಿ, ಕೆ ಜಿ ಎನ್‌ ಫ್ರೂಟ್‌ ಕಮಿಷನ್ fಏಜೆಂಟ್‌, ಮಹ್ಮದ ಮುಜಮಿಲ್‌ ಅಹ್ಮದ್‌, ನ್ಯೂ ರಾಯಲ್‌ ಫ್ರೂಟ್‌, ಮಹ್ಮದ ಜಮೀಲ್‌ ಅಹ್ಮದ್‌, ನ್ಯೂ ಸ್ಟಾರ್‍‌ ಮದೀನಾ ಟ್ರೇಡರ್ಸ್‌, ಎಚ್‌ ಎಂ ಅಂಡ್‌ ಕಂಪನಿ, ಶ್ರೀ ಸಾಯಿ ಟ್ರೇಡಿಂಗ್‌ ಕಂಪನಿ, ಅಲ್‌ ಹಜ್‌ ಶೇಖ ಅಹ್ಮದ್‌ ಫ್ರೂಟ್‌ ಕಂಪನಿಗೆ ಅನಧಿಕೃತವಾಗಿ ನೋಂದಣಿ ಮಾಡಿಕೊಡಲಾಗಿದೆ ಎಂದು ದೂರಿನಲ್ಲಿ ಪಟ್ಟಿಯನ್ನು ಒದಗಿಸಿದ್ದರು.

 

‘ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪರಮೇಶ್ವರಿ ಫುಲೇಕರ್‍‌ ಅವರು ಪ್ರತಿ ಒಂದು ಅಂಗಡಿಗೆ ಇಲಾಖೆಯ ಮಾರ್ಗಸೂಚಿಗಳ ಪ್ರಕಾರ ಒಟ್ಟು ಮೌಲ್ಯ 13,00,000 ರು. ಮೇಲೆ ಶೇ.12ರಂತೆ ದಂಡ ವಸೂಲಿ ಮಾಡಬೇಕಾಗಿತ್ತು. ಈ ದಂಡವು ಒಂದು ವರ್ಷಕ್ಕೆ 1,56,000 ರು. ರ ಪ್ರಕಾರ ಇಲ್ಲಿಯವರೆಗೆ 8 ವರ್ಷಕ್ಕೆ 4,74,24,000 ರು. ಆಗಲಿದೆ. ಆದರೆ 4.74 ಕೋಟಿ ರು.ಗಳನ್ನು ವಸೂಲಿ ಮಾಡದೇ ಸರ್ಕಾರಕ್ಕೆ ನಷ್ಟವುಂಟಾಗಿದೆ. ಪ್ರತಿ ಅಂಗಡಿಯವರಿಂದ ಸುಮಾರು 5 ಲಕ್ಷ ರು. ಲಂಚ ಪಡೆದು ನೋಂದಣಿ ಮಾಡಿಸಿಕೊಡಲಾಗಿದೆ,’ ಎಂದು ಅವಿನಾಶ ದೀನೇ ಅವರು ದೂರಿನಲ್ಲಿ ವಿವರಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts