ಬೆಂಗಳೂರು; ಜಲಸಂಪನ್ಮೂಲ ಇಲಾಖೆಯ ‘ಸಿ’ ವೃಂದದ ದ್ವಿತೀಯ ದರ್ಜೆ ಸಹಾಯಕರ ಬ್ಯಾಕ್‌ಲಾಗ್ ಹುದ್ದೆ ಪಡೆಯಲು ನಕಲಿ ಸಿಬಿಎಸ್‌ಇ ಅಂಕಪಟ್ಟಿ ಸಲ್ಲಿಸಿ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಆನಂದ ಕುಂಬಾರ್ ಎಂಬುವರಿಗೆ ಸರ್ಕಾರವು ಒಂದು ವರ್ಷದ ನಂತರ ದೋಷಾರೋಪಣೆ ವಿವರಣೆ ಪಟ್ಟಿ ಜಾರಿಗೊಳಿಸಿದೆ.
ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡೋತಿಯಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿದ್ದ ಆನಂದ ಕುಂಬಾರ್ ಅವರು ನಕಲಿ ಸಿಬಿಎಸ್‌ಇ ಅಂಕಪಟ್ಟಿ ಸೃಷ್ಟಿ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಮತ್ತು ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿದ್ದರು. ಇವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.
ಇದಾದ ನಂತರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಇದೀಗ ಆರೋಪಿ ಆನಂದ ಕುಂಬಾರ್ ಎಂಬುವರಿಗೆ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ ) ನಿಯಮಗಳು 1957ರ ನಿಯಮ 11ರ ಅಡಿ ನೋಟೀಸ್ ನೀಡಿದೆ. ಜತೆಗೆ ದೋಷಾರೋಪಣೆ ವಿವರಣೆ ಪಟ್ಟಿಯನ್ನೂ ಆಪಾದಿತ ಆನಂದ್ ಕುಂಬಾರ್ ಗೆ ಜಾರಿಗೊಳಿಸಿದೆ. ದೋಷಾರೋಪಣೆ ಪಟ್ಟಿ ಜಾರಿಗೊಳಿಸಲು ಸಚಿವ ಜಮೀರ್ ಅಹ್ಮದ್ ಖಾನ್ ಅವರು ಅನುಮೋದನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
2025ರ ಜುಲೈ 8ರಂದು ಜಾರಿಗೊಳಿಸಿರುವ ನೋಟೀಸ್ ಮತ್ತು ದೋಷಾರೋಪಣೆ ವಿವರಣೆ ಪಟ್ಟಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಪ್ರಕರಣದ ವಿವರ
ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇದ್ದ ಪರಿಶಿಷ್ಟ ಜಾತಿಯ 182 ಸಿ ವೃಂದದ ದ್ವಿತೀಯ ದರ್ಜೆ ಸಹಾಯಕರ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿತ್ತು. ಮೆರಿಟ್ ಆಧಾರದ ಮೇಲೆ 1;3 ಅನುಪಾತದಲ್ಲಿ 546 ಅಭ್ಯರ್ಥಿಗಳಿಗೆ ದಾಖಲಾತಿಗಳನ್ನು ಸಲ್ಲಿಸಲು ಸೂಚಿಸಲಾಗಿತ್ತು. ಅರ್ಹ ಅಭ್ಯರ್ಥಿಗಳು ಸಲ್ಲಿಸಿದ್ದ ಅಂಕಪಟ್ಟಿಗಳ ನೈಜತೆಯ ಪರೀಕ್ಷೆಗಾಗಿ ದಾಖಲಾತಿಗಳನ್ನು ಪರೀಕ್ಷಾ ಮಂಡಳಿಗಳಿಗೆ ಕಳಿಸಿತ್ತು.
ಈ ಪೈಕಿ 24 ಅಭ್ಯರ್ಥಿಗಳು ಸಲ್ಲಿಸಿದ್ದ ದ್ವಿತೀಯ ಪಿಯುಸಿ ಅಂಕಪಟ್ಟಿ, 8 ಅಭ್ಯರ್ಥಿಗಳು ಸಲ್ಲಿಸಿದ್ದ ಎನ್‌ಐಒಎಸ್ ಅಂಕಪಟ್ಟಿ ಮತ್ತು 30 ಅಭ್ಯರ್ಥಿಗಳು ಸಲ್ಲಿಸಿದ್ದ ಸಿಬಿಎಸ್‌ಇ ಅಂಕಪಟ್ಟಿ ಸೇರಿದಂತೆ ಒಟ್ಟಾರೆ 62 ಅಭ್ಯರ್ಥಿಗಳು ಸಲ್ಲಿಸಿದ್ದ ಅಂಕಪಟ್ಟಿಗಳು ನಕಲಿಯಾಗಿದ್ದವು. ಈ ಅಭ್ಯರ್ಥಿಗಳು ನಕಲಿ ಅಂಕಪಟ್ಟಿಗಳನ್ನು ನೀಡಿ ಉದ್ಯೋಗ ಪಡೆಯಲು ಪ್ರಯತ್ನಿಸಿದ್ದರು.
ಈ ಸಂಬಂಧ ಜಲಸಂಪನ್ಮೂಲ ಇಲಾಖೆಯ ಮುಖ್ಯ ಇಂಜಿನಿಯರ್ ಕಚೇರಿಯು ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಈ ದೂರನ್ನಾಧರಿಸಿ ಎಫ್‌ಐಆರ್ ದಾಖಲಿಸಿತ್ತು. ನಕಲಿ ಅಂಕಪಟ್ಟಿಯನ್ನು ಸಲ್ಲಿಸಿದ್ದ ಕಲ್ಬುರ್ಗಿ ಜಿಲ್ಲೆಯ 25 ಅಭ್ಯರ್ಥಿಗಳ ಪೈಕಿ ಕೆಲವು ಅಭ್ಯರ್ಥಿಗಳನ್ನು ಪೊಲೀಸ್ ವಿಚಾರಣೆಗೆ ಒಳಪಡಿಸಲಾಗಿತ್ತು. ವಿಚಾರಣೆಗೆ ಒಳಪಟ್ಟಿದ್ದ ಅಭ್ಯರ್ಥಿಗಳು ಆನಂದ್ ಕುಂಬಾರ್ ಅವರ ಹೆಸರನ್ನು ಬಾಯಿಬಿಟ್ಟಿದ್ದರು.
‘ಆನಂದ್ ಕುಂಬಾರ್, ಸಿಬಿಎಸ್‌ಇಯ ನಕಲಿ ಅಂಕಪಟ್ಟಿ ಸೃಷ್ಟಿಸುವ ಕೃತ್ಯದಲ್ಲಿ ಭಾಗಿಯಾಗಿ ನಕಲಿ ಅಂಕಪಟ್ಟಿಗಳನ್ನು ಅಭ್ಯರ್ಥಿಗಳಿಗೆ ತರಿಸಿಕೊಟ್ಟು ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ 2024ರ ಜುಲೈ 6ರಂದು ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿತ್ತು,’ ಎಂದು ದೋಷಾರೋಪಣೆ ವಿವರಣೆ ಪಟ್ಟಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಈ ಪ್ರಕರಣದಲ್ಲಿ ಆನಂದ್ ಕುಂಬಾರ್ ಅವರು 76ನೇ ಆರೋಪಿಯಾಗಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಆನಂದ್ ಕುಂಬಾರ್, ಒಟ್ಟು 7 ಜನ ಅಭ್ಯರ್ಥಿಗಳೊಂದಿಗೆ ಹಣಕಾಸಿನ ವ್ಯವಹಾರ ಮಾಡಿರುವುದು ಕಂಡು ಬಂದಿತ್ತು.
ಶಿಸ್ತು ಕ್ರಮದ ನೋಟೀಸ್
‘ಸದರಿ ಪ್ರಾಂಶುಪಾಲರು ಒಬ್ಬ ಜವಾಬ್ದಾರಿಯುತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ನಿಷ್ಠೆ, ಪ್ರಾಮಾಣಿಕತೆ, ಶಿಸ್ತು ಮುಂತಾದ ಸಾಮಾಜಿಕ ಮೌಲ್ಯಗಳನ್ನು ಕಲಿಸುವುದರ ಮುಖಾಂತರ ಸಮಾಜಕ್ಕೆ ಮಾದರಿಯಾಗಬೇಕಿದ್ದವರನ್ನು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ಇಲಾಖೆಗೆ ಸಾರ್ವಜನಿಕವಾಗಿ ಮುಜುಗರ ಉಂಟಾಗಲು ನೇರ ಕಾರಣರಾಗಿರುತ್ತಾರೆ. ಒಬ್ಬ ಸರ್ಕಾರಿ ನೌಕರನಾಗಿದ್ದು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯುವುದನ್ನು ಬಿಟ್ಟು ಬೇಜವಾಬ್ದಾರಿತನದಿಂದ ದುರ್ನತಡೆಯಿಂದ ನಡೆದುಕೊಳ್ಳುವುದರ ಮೂಲಕ ಕರ್ತವ್ಯದಲ್ಲಿ ಅಶಿಸ್ತು ಹಾಗೂ ಬೇಜವಾಬ್ದಾರಿ ತೋರಿಸಿ ಕರ್ತವ್ಯಲೋಪ ಎಸಗಿ ಶಿಸ್ತು ಕ್ರಮಕ್ಕೆ ಗುರಿಯಾಗಿದ್ದಾರೆ,’ ಎಂದು ನೋಟೀಸ್‌ನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಆನಂದ್ ಕುಂಬಾರ್ ಅಲ್ಲದೇ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮದ ಎಫ್‌ಡಿಎ ಕೃಷ್ಣ ಗುರುನಾಥ್ ರಾಥೊಡ್, ಜಲಸಂಪನ್ಮೂಲ ಇಲಾಖೆ ಎಫ್‌ಡಿಎ ಹಾಸನದ ಗಂಗೂರ್ ಪ್ರದೀಪ್, ಮಧ್ಯವರ್ತಿಗಳಾದ ಹಾಸನದ ಟಿ.ರವಿ, ಮಳವಳ್ಳಿ ಪ್ರದೀಪ್, ಜೇವರ್ಗಿ ಮೂಲದ ನಿಂಗಪ್ಪ ನಡುವಿನಮನಿ, ಸಿಂಧಗಿಯ ಮಲ್ಲಿಕಾರ್ಜುನ ಸೋಂಪುರ್, ಕಲಬುರಗಿಯ ಮುಸ್ತಾಫ, ಕೆಜಿಎಫ್‌ನ ಸುರೇಶ್‌ಕುಮಾರ್, ತುಮಕೂರಿನ ಮುತ್ತುರಾಜ್, ಬೆಂಗಳೂರಿನ ಶರತ್ ಹಾಗೂ 37 ಅಭ್ಯರ್ಥಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಆರೋಪಿಗಳಿಂದ 40 ಲಕ್ಷ ರೂ. ಮೌಲ್ಯದ ಎರಡು ಕಾರು, 17 ಮೊಬೈಲ್ ಹಾರ್ಡ್‌ಡಿಸ್ಕ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದರು. ಸರಕಾರಿ ನೌಕರರಾದ ಆನಂದ್, ಪ್ರದೀಪ್ ಹಾಗೂ ಕೃಷ್ಣಗುರುನಾಥ್ ಸರಕಾರಿ ಹುದ್ದೆ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಂದ ನಾಲ್ಕರಿಂದ ಐದು ಲಕ್ಷ ರೂ. ಪಡೆದು ನಕಲಿ ಅಂಕಪಟ್ಟಿ ಜತೆಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ವಂಚಿಸಿದ್ದರು ಎಂಬ ಆರೋಪವಿತ್ತು.
ಉಳಿದ ಮಧ್ಯವರ್ತಿ ಆರೋಪಿಗಳು ಕಂಪ್ಯೂಟರ್ ಬ್ರೌಸಿಂಗ್ ಸೆಂಟರ್‌ಗಳಲ್ಲಿನಕಲಿ ಅಂಕಪಟ್ಟಿ ತಯಾರಿಸಿ ಕೊಟ್ಟು ಅಭ್ಯರ್ಥಿಗಳಿಂದ ಹಣ ಪಡೆದಿದ್ದರು.
ಆರೋಪಿಗಳು ಪಿಯುಸಿ, ಪದವಿ, ಎಸ್‌ಎಸ್‌ಎಲ್‌ಸಿ ಸೇರಿದಂತೆ ಎಲ್ಲಾ ಕೋರ್ಸ್‌ಗಳ ಅಂಕಪಟ್ಟಿಗಳಿಗೂ 4ರಿಂದ 5 ಲಕ್ಷ ರೂ. ನಿಗದಿ ಮಾಡಿದ್ದರು. ಪ್ರತ್ಯೇಕ ತಂಡಗಳಾಗಿ ತಮಗೆ ಸಂಪರ್ಕಕ್ಕೆ ಪಡೆದ ಅಭ್ಯರ್ಥಿಗಳಿಂದ ಹಣ ಪಡೆದು ಪಿಯು ಬೋರ್ಡ್‌ನಿಂದ ವಿತರಿಸಲಾಗುವ ಅಂಕಪಟ್ಟಿಗಳ ಮಾದರಿಯಲ್ಲೇ ನಕಲಿ ಅಂಕಪಟ್ಟಿ ತಯಾರಿಸಿ ಕೊಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಕಲಬುರಗಿಯಲ್ಲಿ 25, ಹಾಸನ 12, ವಿಜಯಪುರ 8, ಬೀದರ್ 6, ಬೆಳಗಾವಿ 3, ಯಾದಗಿರಿ 2, ಚಿತ್ರದುರ್ಗ 1, ಕೋಲಾರ 1, ಕೊಪ್ಪಳ 1, ರಾಯಚೂರು 1, ರಾಮನಗರ 1, ವಿಜಯನಗರದಲ್ಲಿ 1 ಅಭ್ಯರ್ಥಿಯು ನಕಲಿ ಅಂಕಪಟ್ಟಿ ಪಡೆದುಕೊಂಡಿದ್ದರು.