ಮೈಷುಗರ್ಸ್‌ನ ಕಬ್ಬು ಅರೆಯುವ ಘಟಕ ಎಲ್‌ಆರ್‍‌ಒಟಿ, ಎಥನಾಲ್‌ಗೆ ಪಿಪಿಪಿ ಮಾದರಿ; ಪುರಾವೆ ಮುನ್ನೆಲೆಗೆ

ಬೆಂಗಳೂರು; ಮೈಸೂರು ಸಕ್ಕರೆ ಕಾರ್ಖಾನೆ (ಮೈಷುಗರ್ಸ್‌) ಯನ್ನು ಖಾಸಗಿಗೆ ವಹಿಸಲು ರಾಜ್ಯ ಕಾಂಗ್ರೆಸ್‌ ಸರ್ಕಾರವು ತಯಾರಿ ನಡೆಸುತ್ತಿದೆ ಎಂಬ ಅನುಮಾನಗಳನ್ನು ಪುಷ್ಟೀಕರಿಸುವಂತಹ ಪುರಾವೆಯೊಂದು ಮುನ್ನೆಲೆಗೆ ಬಂದಿದೆ.

 

ಮೈ ಷುಗರ್ಸ್‌ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲಾಗುವುದು ಎಂದು ಘೋಷಿಸಿ ಭರ್ಜರಿ ಪ್ರಚಾರ ಪಡೆದುಕೊಂಡಿತ್ತು. ಆದರೆ  ಸಚಿವ ಸಂಪುಟದ ಉಪ ಸಮಿತಿಯು ಮಾಡಿರುವ  ಶಿಫಾರಸ್ಸು ಮತ್ತು ಆರ್ಥಿಕ ಇಲಾಖೆಯು ನೀಡಿರುವ ಸಲಹೆ, ಅಭಿಪ್ರಾಯದ ಪ್ರಕಾರ ಮೈ ಷುಗರ್ಸ್‌ ಕಾರ್ಖಾನೆಯನ್ನು ಗುತ್ತಿಗೆ ಮತ್ತು  ಖಾಸಗಿ ಸಹಭಾಗಿತ್ವದಲ್ಲಿ ಮುನ್ನಡೆಸುವ ಪ್ರಯತ್ನವನ್ನು ಮುಂದುವರೆಸಿರುವುದು  ಮೇಲ್ನೋಟಕ್ಕೆ ಕಂಡು ಬರುತ್ತದೆ.

 

ಆರ್ಥಿಕ ಇಲಾಖೆಯು ನೀಡಿರುವ ಅಭಿಪ್ರಾಯದ ಪ್ರತಿಯನ್ನು  ‘ದಿ ಫೈಲ್‌’, ಆರ್‍‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

2024-25ನೇ ಸಾಲಿನ ಆಯವ್ಯಯ  ಘೋಷಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಮೈಸೂರು ಷುಗರ್ಸ್‌ ಕಾರ್ಖಾನೆಯನ್ನು  ಪುನಶ್ಚೇತನಗೊಳಿಸಲಾಗುವುದು ಎಂದು  ಘೋಷಣೆ ಮಾಡಿದ್ದರು.

 

 

ಕಂಡಿಕೆ  327ರಲ್ಲಿ ಮಾಡಿದ್ದ ಘೋಷಣೆ ಪ್ರಕಾರ ‘ ಮಂಡ್ಯದ ಮೈ ಷುಗರ್ಸ್‌ ಕಾರ್ಖಾನೆಯ ಆವರಣದಲ್ಲಿ ಹೊಸ ಸಕ್ಕರೆ ಕಾರ್ಖಾನೆಯನ್ನು ನಿರ್ಮಿಸಲಾಗುವುದು. ಸರ್ಕಾರದ ಅನುದಾನ ಇತರೆ ಮೂಲಗಳು  ಹಾಗೂ ಕಾರ್ಖಾನೆಯ ಸಂಪನ್ಮೂಲವನ್ನು ನಗದೀಕರಣ ಮಾಡುವ ಮೂಲಕ ಸಂಪನ್ಮೂಲವನ್ನು ಕ್ರೋಢೀಕರಿಸಲಾಗುವುದು,’ ಎಂದು ಘೋಷಿಸಿದ್ದರು.

 

 

ಕಂಡಿಕೆ 327ರ ಅನುಷ್ಠಾನದ ಕುರಿತು  ಆರ್ಥಿಕ ಇಲಾಖೆಯಲ್ಲಿ ತೆರೆದಿದ್ದ ಕಡತವನ್ನು ‘ದಿ ಫೈಲ್‌’, ಆರ್‍‌ಟಿಐ ಅಡಿಯಲ್ಲಿ ಕೋರಿತ್ತು. ಆದರೆ ಇಲಾಖೆಯು ಇದನ್ನು ನಿರಾಕರಿಸಿ ಅರ್ಜಿಯನ್ನು ತಿರಸ್ಕರಿಸಿತ್ತು . ನಂತರ ಮೇಲ್ಮನವಿಯಲ್ಲಿ ಇದನ್ನು ‘ದಿ ಫೈಲ್‌’ ಪ್ರಶ್ನಿಸಿತ್ತು.

 

ಆರ್ಥಿಕ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರದಲ್ಲಿ ಈ ಬಗ್ಗೆ 2025ರ ಮಾರ್ಚ್‌ 25ರಂದು  ವಿಚಾರಣೆಯೂ ನಡೆದಿತ್ತು.

 

 

ವಿಚಾರಣೆ ಸಂದರ್ಭದಲ್ಲಿ ಇದಕ್ಕೆ ಸಂಬಂಧಿಸಿದಂತೆ ಸಮಗ್ರ ಕಡತವನ್ನು ಒದಗಿಸುವುದಾಗಿ ಮೌಖಿಕವಾಗಿ  ಹೇಳಿದ್ದ ಪ್ರಥಮ ಮೇಲ್ಮನವಿ ಅಧಿಕಾರಿಯು ಆ ನಂತರ  ಕಡತವನ್ನು ಒದಗಿಸಿಲ್ಲ.

 

 

 

ಆದರೆ ಈ ವಿಚಾರದ ಬಗ್ಗೆ ಆರ್ಥಿಕ ಇಲಾಖೆಯು ಆಡಳಿತ ಇಲಾಖೆಗೆ ನೀಡಿದ್ದ ಅಭಿಪ್ರಾಯದ ಪ್ರತಿಯನ್ನು ಮಾತ್ರ 2025ರ ಏಪ್ರಿಲ್‌ 28ರಂದು  ಒದಗಿಸಿದ್ದಾರೆ.

 

ಆರ್ಥಿಕ ಇಲಾಖೆಯ ಅಭಿಪ್ರಾಯದಲ್ಲೇನಿದೆ?

 

ಕಬ್ಬು ಅರೆಯುವ ಘಟಕವನ್ನು ಎಲ್‌ಆರ್‍‌ಒಟಿ ಮಾದರಿಯಲ್ಲಿ ಮುಂದುವರೆಸಬೇಕು ಎಂದು ಸಚಿವ ಸಂಪುಟ ಉಪ ಸಮಿತಿಯೇ ಶಿಫಾರಸ್ಸು ಮಾಡಿದೆ. ಈ ಶಿಫಾರಸ್ಸನ್ನು ಇಲಾಖೆಯು ಅನುಷ್ಠಾನಗೊಳಿಸಬಹುದು. ಅದೇ ರೀತಿ ಎಥನಾಲ್‌ ಘಟಕವನ್ನು ಪಿಪಿಪಿ ಮಾದರಿಯಲ್ಲಿ ಕೈಗೆತ್ತಿಕೊಳ್ಳಬಹುದು ಎಂದು 2024ರ ಡಿಸೆಂಬರ್‍‌ 27ರಂದೇ ಆಡಳಿತ ಇಲಾಖೆಗೆ ಅಭಿಪ್ರಾಯಿಸಿತ್ತು.

 

 

ವಿಶೇಷವೆಂದರೇ  ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಮೈ ಷುಗರ್ಸ್‌ನ್ನು  ಎಲ್‌ಆರ್‌ಓಟಿ ಆಧಾರದ ಮೇಲೆ ಮುನ್ನೆಡೆಸಲು ಮುಂದಾಗಿತ್ತು.  2021-22ನೇ ಹಂಗಾಮಿನಿಂದಲೇ  40 ವರ್ಷಗಳ ಅವಧಿಗೆ ಖಾಸಗಿಯವರಿಗೆ ಗುತ್ತಿಗೆ ನೀಡಲು 2020ರ ನವೆಂಬರ್‌ 18ರಂದು ಅನುಮತಿ ನೀಡಿತ್ತು. ಆ ವೇಳೆಯಲ್ಲಿ ಚೆಲುವರಾಯಸ್ವಾಮಿ ಅವರೂ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

 

ಆದರೀಗ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿಯೇ  ಆರ್ಥಿಕ ಇಲಾಖೆಯೇ ಎಲ್‌ಆರ್‍‌ಒಟಿ ಆಧಾರದ ಮೇಲೆ ಮುನ್ನೆಡೆಸಿ ಎಂದು ಆರ್ಥಿಕ ಇಲಾಖೆಯು  ಹೇಳಿದೆ.  ಹಿಂದಿನ ಬಿಜೆಪಿ ಸರ್ಕಾರವು ಕೈಗೊಂಡಿದ್ದ ನಿರ್ಧಾರವನ್ನೇ ಕಾಂಗ್ರೆಸ್‌ ಸರ್ಕಾರವು  ಮತ್ತೆ ಎತ್ತಿ ಹಿಡಿದಂತಾಗಿತ್ತು.  ಒಂದೊಮ್ಮೆ ಕಾಂಗ್ರೆಸ್‌ ಸರ್ಕಾರವೂ ಎಲ್ಆರ್‍‌ಒಟಿ ಮಾದರಿಯಲ್ಲಿಯೇ ಕಾರ್ಖಾನೆಯನ್ನು ಮುಂದುವರೆಸಲು ಅಂತಿಮ ತೀರ್ಮಾನ ಕೈಗೊಂಡಲ್ಲಿ  ಕಬ್ಬು ಬೆಳೆಗಾರರ ಆಕ್ರೋಶಕ್ಕೆ ತುತ್ತಾಗಲಿದೆ ಎಂಬ ಮಾತುಗಳೂ ಕೇಳಿ ಬಂದಿವೆ.

 

ಮೈ ಷುಗರ್ಸ್‌ನ ಕಬ್ಬು ಅರೆಯುವ ಘಟಕವನ್ನು ಎಲ್‌ಆರ್‍‌ಒಟಿ ಮಾದರಿಯಲ್ಲಿ ನಡೆಸಲು  ಟೆಂಡರ್ ಕರೆಯುವುದು ಮತ್ತು ಎಥನಾಲ್‌ ಘಟಕವನ್ನು ಪಿಪಿಪಿ ಮಾದರಿಯಲ್ಲಿ ನಡೆಸಬೇಕು ಎಂದು ಆರ್ಥಿಕ ಇಲಾಖೆಯು ನೀಡಿದ್ದ ಅಭಿಪ್ರಾಯಕ್ಕೆ  ಅರ್ಥ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿದ್ದಾರೆಯೇ ಇಲ್ಲವೇ ಎಂಬುದು ಖಚಿತಪಟ್ಟಿಲ್ಲ. ಏಕೆಂದರೇ ಆರ್ಥಿಕ ಇಲಾಖೆಯು ಈ ಸಂಬಂಧಿತ ಕಡತವನ್ನೇ ಆರ್‍‌ಟಿಐ ಅಡಿಯಲ್ಲಿ ಒದಗಿಸಿಲ್ಲ.

 

ಮೈಷುಗರ್ಸ್‌ ಖಾಸಗೀಕರಣ ಪ್ರಕ್ರಿಯೆಗೆ ಬಿರುಸಿನ ಚಾಲನೆ; ಎಲ್‌ಆರ್‍‌ಒಟಿ, ಪಿಪಿಪಿ ಮಡಿಲಿಗೆ ಎಥನಾಲ್‌ ಘಟಕ?

2024-25ನೇ ಸಾಲಿನಲ್ಲಿ ಆಯವ್ಯಯ ಘೋಷಣೆಗಳ ಕಂಡಿಕೆ 327 ರ ಮೇಲೆ ಕ್ರಮ ಕೈಗೊಳ್ಳುವ ಕುರಿತು ಚರ್ಚೆ ನಡೆಸಿದ್ದ ಆರ್ಥಿಕ ಇಲಾಖೆಯು ಈ ಅಭಿಪ್ರಾಯವನ್ನು ಆಡಳಿತ ಇಲಾಖೆಗೆ (FD 493 EXP-1/2024) ನೀಡಿತ್ತು.

 

 

 

 

ಟೆಂಡರ್ ಪ್ರಕ್ರಿಯೆಯಲ್ಲಿ ಯಶಸ್ವಿಯಾಗುವ ಗುತ್ತಿಗೆದಾರರು 2021-22ನೇ ಹಂಗಾಮಿನಿಂದ ಕಬ್ಬು ನುರಿಸುವ ಕಾರ್ಯವನ್ನು ಪ್ರಾರಂಭಿಸಬೇಕು ಎಂಬ ಷರತ್ತನ್ನೂ ವಿಧಿಸಲಾಗಿತ್ತು. ಆದರೆ ಮೈಸೂರು ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆ ಆಧಾರದ ಮೇಲೆ ನೀಡುವ ಪ್ರಸ್ತಾವನೆಗೆ ಕಾರ್ಖಾನೆಯ ವ್ಯಾಪ್ತಿಯಲ್ಲಿ ಕಬ್ಬು ಬೆಳೆಯುವ ರೈತರು, ಕಂಪನಿಯ ಷೇರುದಾರರು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಹಿಂದಿನ ಬಿಜೆಪಿ ಸರ್ಕಾರವು ತನ್ನ ನಿರ್ಧಾರದಿಂದ ಹಿಂದೆ ಸರಿದಿತ್ತು.

 

ದಿ ಮೈಸೂರು ಷುಗರ್ ಕಂಪನಿಯು ಬಾಕಿ ಉಳಿಸಿಕೊಂಡಿದ್ದ 53.05 ಕೋಟಿ ರು. ವಿದ್ಯುತ್‌ ಬಾಕಿಯನ್ನು ಮನ್ನಾ ಮಾಡಲು ಸಚಿವ ಸಂಪುಟವು ಈಚೆಗಷ್ಟೇ  ಅನುಮೋದಿಸಿತ್ತು. ಇದರಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸದ ಮೇಲೆ 37,74,95,141 ರು. ಆರ್ಥಿಕ ಹೊರೆಯೂ ಬಿದ್ದಿತ್ತು. ಅಲ್ಲದೇ ವಿದ್ಯುಚ್ಚಕ್ತಿ ಬಾಕಿ ಮೊತ್ತದ ಮೇಲಿನ ಬಡ್ಡಿ ಮೊತ್ತವನ್ನೂ ಮನ್ನಾ ಮಾಡಲು ಇಂಧನ ಇಲಾಖೆಯೂ ಸಹಮತಿ ನೀಡಿತ್ತು.

 

ಹೀಗೆ ಮೈಷುಗರ್ಸ್‌ ಕಂಪನಿಗೆ ಸಂಬಂಧಿಸಿದಂತೆ ಸಕಾರಾತ್ಮಕ ನಿರ್ಧಾರಗಳನ್ನು ಕೈಗೊಂಡಿದ್ದ ಸರ್ಕಾರವೇ ಇದೀಗ ಈ ಕಾರ್ಖಾನೆಯನ್ನು ಖಾಸಗಿಗೆ ವಹಿಸಲು ಮುಂದಾಗಿದೆ. ಸರ್ಕಾರವು ದಿಢೀರ್‍‌ ಎಂದು ಕೈಗೊಂಡಿರುವ ಈ ನಿರ್ಧಾರದ ಹಿಂದೆ ಸಕ್ಕರೆ ಲಾಬಿಯೂ ಕೆಲಸ ಮಾಡಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಮೈಸೂರು ಷುಗರ್ಸ್‌ ಕಂಪನಿಯು ಸಾರ್ವಜನಿಕ ವಲಯದ ಉದ್ಯಮವಾಗಿದೆ. 1950-51ನೇ ಸಾಲಿನಿಂದ 2016-17ನೇ ಸಾಲಿನವರೆಗೆ ಒಟ್ಟು 35 ಹಂಗಾಮುಗಳಲ್ಲಿ 34,738.90 ಲಕ್ಷ ರುಗಳಷ್ಟು ಕ್ರೋಢೀಕೃತ ನಷ್ಟ ಅನುಭವಿಸಿತ್ತು. ಅಲ್ಲದೇ ಪ್ರಸ್ತುತ 273.48 ಕೋಟಿ ರು. ಸಾಲವನ್ನೂ ಹೊಂದಿತ್ತು. ಆರ್ಥಿಕ ಸಂಕಷ್ಟದಲ್ಲಿರುವ ಈ ಕಾರ್ಖಾನೆಯು ಚೆಸ್ಕಾಂಗೆ ಬಾಕಿ ಉಳಿಸಿಕೊಂಡಿದ್ದ 53,46,34,707 ರು.ಗಳ ವಿದ್ಯುತ್‌ ಬಿಲ್‌ನ್ನೂ ಪಾವತಿಸಲು ಸಾಧ್ಯವಾಗಿರಲಿಲ್ಲ.

 

ಕಬ್ಬು ಮೀಸಲು ಕ್ಷೇತ್ರದಲ್ಲಿನ ರೈತರ ಹಿತದೃಷ್ಟಿಯಿಂದ ಕಾರ್ಖಾನೆಯಲ್ಲಿನ ಕಬ್ಬು ಅರೆಯುವ ಕಾರ್ಯವನ್ನು ಕೈಗೊಳ್ಳುವುದು ಮತ್ತು ಕಂಪನಿಯನ್ನು ಆರ್ಥಿಕ ಸಂಕಷ್ಟದಿಂದ ಹೊರ ತರುವ ಅವಶ್ಯಕತೆಯಿತ್ತು. ಈ ಹಿನ್ನೆಲೆಯಲ್ಲಿ ಮೈ ಷುಗರ್ಸ್‌, ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪನಿಗೆ ಪಾವತಿಸಬೇಕಿದ್ದ 53.46 ಕೋಟಿ ರು.ಗಳ ವಿದ್ಯುತ್‌ ಬಿಲ್‌ ಮನ್ನಾ ಮಾಡಲು ಸಚಿವ ಸಂಪುಟವು ಅನುಮೋದಿಸಿತ್ತು ಎಂದು ತಿಳಿದು ಬಂದಿದೆ.

 

ಇದನ್ನು ಒಪ್ಪಿದ್ದಲ್ಲಿ ಆರ್ಥಿಕ ಪರಿಣಾಮಗಳು ಆಗಲಿವೆ ಎಂದು ಆರ್ಥಿಕ ಇಲಾಖೆಯು ಹೇಳಿತ್ತು. ‘ ವಿದ್ಯುತ್‌ ಬಿಲ್‌ನ ಬಡ್ಡಿಯನ್ನು ಮನ್ನಾ ಮಾಡಲು ಇಂಧನ ಇಲಾಖೆಯು ಒಪ್ಪಿರುವುದರಿಂದ ಈ ಪ್ರಸ್ತಾವನೆಯಿಂದ ರಾಜ್ಯ ಸರ್ಕಾರದ ಮೇಲೆ 37,74,95,141.00 ರು ಗಳ ಆರ್ಥಿಕ ಹೊರೆ ಬೀಳಲಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ಅನುದಾನವನ್ನು ಕಾರ್ಖಾನೆಗೆ ನೀಡಲಾಗದು,’ ಎಂದು ಆರ್ಥಿಕ ಇಲಾಖೆಯು (FD 305 EXP-1/2024)  ಹೇಳಿತ್ತು ಎಂದು ಇಲಾಖೆಯ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಖಚಿತಪಡಿಸಿದ್ದಾರೆ.

 

ಆರ್ಥಿಕ ಸಹಾಯವನ್ನು ಮಾತ್ರ ಒದಗಿಸಿದೆ ಎಂದು ಹೇಳಿರುವ ಆರ್ಥಿಕ ಇಲಾಖೆಯು ಈ ಕಂಪನಿಯಲ್ಲಿ ಸರ್ಕಾರವು ಯಾವುದೇ ಹೂಡಿಕೆ ಮಾಡಿಲ್ಲವೆಂದು ಸಿಎಜಿಯನ್ನೇ ದಾರಿ ತಪ್ಪಿಸಿತ್ತು.

 

ಆರ್ಥಿಕ ಸಹಾಯ ಒದಗಿಸಿದೆಯೇ ವಿನಃ ಯಾವುದೇ ಹೂಡಿಕೆ ಮಾಡಿಲ್ಲ ಎಂದು ಆರ್ಥಿಕ ಇಲಾಖೆ ಹೇಳಿದೆಯಾದರೂ ವಾಸ್ತವದಲ್ಲಿ ಹಣಕಾಸು ಲೆಕ್ಕದಲ್ಲಿ 335.78 ಕೋಟಿ ರು.ಗಳನ್ನು ಸರ್ಕಾರವು ಹೂಡಿಕೆ ಮಾಡಿತ್ತು ಎಂಬ ಅಂಶವನ್ನು ಸಿಎಜಿ ವರದಿಯು ಹೊರಗೆಡವಿದೆ. ಕಂಪನಿಯಲ್ಲಿ ಸರ್ಕಾರವು ಮಾಡಿದ್ದ ಹೂಡಿಕೆಯನ್ನು ಮರೆಮಾಚಿತ್ತು.

 

 

ಮೈಸೂರು ಸಕ್ಕರೆ ಕಾರ್ಖಾನೆಯು 2016-17ರ ಅಂತ್ಯಕ್ಕೆ 416. 67 ಕೋಟಿ ಸಂಚಿತ ನಷ್ಟ ಅನುಭವಿಸಿತ್ತು. 2017-18ರಲ್ಲಿ 289.42 ಕೋಟಿ, 2018-19ರ ಅಂತ್ಯಕ್ಕೆ 460.89 ಕೋಟಿ ನಷ್ಟ ಅನುಭವಿಸಿತ್ತು. 2019-20ರಲ್ಲಿ ಸರ್ಕಾರವು 335.78 ಕೋಟಿಯಷ್ಟು ಹೂಡಿಕೆ ಮಾಡಿತ್ತು ಎಂಬುದು ಸಿಎಜಿ ವರದಿಯಲ್ಲಿ ವಿವರಿಸಲಾಗಿತ್ತು.

 

 

 

 

ಮೈಸೂರು ಸಕ್ಕರೆ ಕಾರ್ಖಾನೆ ನಿಯಮಿತಕ್ಕೆ ಸಂಬಂಧಿಸಿದಂತೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು (ಸೆ.2020) ದುಡಿಯುವ ಬಂಡವಾಳದ ಕೊರತೆಯಿಂದಾಗಿ ಕಂಪನಿಯು ನಷ್ಟವನ್ನು ಅನುಭವಿಸುತ್ತಿದೆ ಎಂದು ಹೇಳಿತ್ತು. 2015-16 ಮತ್ತು 2016-17ರ ಅವಧಿಯಲ್ಲಿ ಕಬ್ಬು ಅರೆಯುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು.

 

ಹೀಗಾಗಿ ರೈತರ ಹಿತಾಸಕ್ತಿ ಮತ್ತು ಈ ಪ್ರದೇಶದ ಇತರ ಪೂರಕ ಘಟಕಗಳನ್ನು ಪುನರುಜ್ಜೀವನಗೊಳಿಸುವುದು ಹಾಗೂ ನೌಕರರಿಗೆ ಸಂಬಳ, ವೇತನ, ಪಿಂಚಣಿಗಳನ್ನು ಪಾವತಿಸಲು ಸರ್ಕಾರವು 2017-18 ಮತ್ತು 2018-19ರಲ್ಲಿ 57 ಕೋಟಿಗಳನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ 17 ಕೋಟಿಯನ್ನು ಸಾಲವನ್ನಾಗಿ ಪರಿಗಣಿಸಿತ್ತು ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

 

ಮೈಸೂರು ಸಕ್ಕರೆ ಕಾರ್ಖಾನೆಯನ್ನು ಅಂದಾಜು 500 ಕೋಟಿ ರು. ವೆಚ್ಚದಲ್ಲಿ ಪುನಶ್ಚೇತನಗೊಳಿಸುವ ಪ್ರಸ್ತಾವನೆ ಕುರಿತು ಸರ್ಕಾರದ ಹಂತದಲ್ಲಿ ತೀರ್ಮಾನಿಸಿಲ್ಲ. ಅಲ್ಲದೆ ಈ ಸಂಬಂಧ ಯಾವುದೇ ಆದೇಶವನ್ನು ಹೊರಡಿಸಿಲ್ಲ ಎಂದು ವಿಧಾನಸಭೆಯಲ್ಲಿ ಸಕ್ಕರೆ ಸಚಿವರಾಗಿದ್ದ  ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ ಅವರು ಲಿಖಿತ ಉತ್ತರ ಒದಗಿಸಿದ್ದರು.

 

ಮೈಸೂರು ಸಕ್ಕರೆ ಕಾರ್ಖಾನೆ (ಮೈ ಷುಗರ್ಸ್‌) ಪುನರಾರಂಭಕ್ಕೆ ಸಂಬಂಧಿಸಿದಂತೆ ಹಿಂದಿನ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ‘ಈ ಹಿಂದೆ ಮೈ ಷುಗರ್ಸ್ ಪುನಶ್ಚೇತನಕ್ಕಾಗಿ ₹ 200 ಕೋಟಿ ಅನುದಾನವನ್ನು ನಾನೇ ಒದಗಿಸಿದ್ದೆ. ಆದರೆ, ಕಾರ್ಖಾನೆಯಲ್ಲಿನ ಗುಂಪುಗಾರಿಕೆಯಿಂದ ಮತ್ತೆ ನಷ್ಟ ಸಂಭವಿಸಿದೆ. ಈಗಲೂ ಕಾರ್ಖಾನೆ ನಡೆಸಲಾಗದ ಸ್ಥಿತಿ ಇದೆ. ಶೀಘ್ರದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಜತೆ ಸಭೆ ನಡೆಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹಿಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉತ್ತರಿಸಿದ್ದನ್ನು ಸ್ಮರಿಸಬಹುದು.

 

‘ಹೊಸ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ತಕ್ಷಣಕ್ಕೆ ₹ 15 ಕೋಟಿ ವೆಚ್ಚ ಮಾಡಿದರೆ ಕಾರ್ಖಾನೆಯಲ್ಲಿ ಕಬ್ಬು ನುರಿಯಲು ಆರಂಭಿಸಬಹುದು. ಆದರೆ, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಹೊಂದಿರುವ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ 40 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲು ಸರ್ಕಾರ ಹೊರಟಿದೆ. ಈ ವಿಚಾರದಲ್ಲಿ ಖಾಸಗಿಯವರ ಒತ್ತಡಕ್ಕೆ ಮಣಿಯಲಾಗಿದೆಯೆ’ ಎಂದು ಶ್ರೀಕಂಠೇಗೌಡ ಅವರು ಸದನದಲ್ಲಿ ಪ್ರಶ್ನಿಸಿದ್ದರು.

 

ಸಕ್ಕರೆ ಕಾರ್ಖಾನೆಯಿಂದ ₹ 30 ಕೋಟಿ ಆದಾಯ ತೆರಿಗೆ ಮತ್ತು ₹ 27 ಕೋಟಿ ವಿದ್ಯುತ್‌ ಬಿಲ್‌ ಬಾಕಿ ಇದೆ. ಇತ್ತೀಚೆಗೆ ನಿವೃತ್ತರಾದ ನೌಕರರಿಗೆ ₹ 8 ಕೋಟಿ ಬಾಕಿ ಪಾವತಿಸಬೇಕಾಗಿದೆ. ಯಂತ್ರೋಪಕರಣಗಳ ದುರಸ್ತಿ, ಹೊಸ ಯಂತ್ರಗಳ ಅಳವಡಿಕೆಗೆ ತುರ್ತಾಗಿ ₹ 100 ಕೋಟಿ ಅಗತ್ಯವಿದೆ. ಈ ಎಲ್ಲವನ್ನು ಪರಿಗಣಿಸಿ ಕಾರ್ಖಾನೆಯನ್ನು ಗುತ್ತಿಗೆಗೆ ನೀಡುವ ತೀರ್ಮಾನಕ್ಕೆ ಬರಲಾಗಿದೆ ಎಂದು ಸಚಿವ ಎಂ.ಟಿ.ಬಿ. ನಾಗರಾಜು ತಿಳಿಸಿದ್ದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts