ಬೆಂಗಳೂರು; ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಹಂಚಿಕೆ ಮಾಡಿದ್ದ ನಿವೇಶನಗಳಿಗೆ ಸಂಬಂಧಿಸಿದಂತೆ 360 ಪುಟಗಳು ಕಾಣೆಯಾಗಿವೆ ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರರು “ದಾಖಲೆಗಳನ್ನು ತಿರುಚಿದ್ದಾರೆ ಮತ್ತು ಸಾಕ್ಷ್ಯಗಳನ್ನು ನಾಶಪಡಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ಆರೋಪಿಸಿ ದೂರು ಸಲ್ಲಿಸಿತ್ತು. ಅದೇ ರೀತಿ ಹಗರಣ ಬೆಳಕಿಗೆ ಬರುತ್ತಿದ್ದಂತೆ ಮೈಸೂರಿಗೆ ದೌಡಾಯಿಸಿದ್ದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಮುಡಾದಲ್ಲಿದ್ದ ದಾಖಲೆಗಳನ್ನು ವಿಶೇಷ ವಿಮಾನದಲ್ಲಿ ಸಾಗಿಸಿದ್ದಾರೆ ಎಂದು ಗುರುತರವಾಗಿ ಆಪಾದಿಸಿದ್ದರು.
ಈ ಬೆಳವಣಿಗೆ ಬೆನ್ನಲ್ಲೇ ಮುಡಾವು 2015ರವರೆಗಿನ ಹಂಚಿಕೆ ಮಾಡಿರುವ ನಿವೇಶನಗಳನ್ನು ನಮೂದಿಸಿದ್ದ ಲೆಡ್ಜರ್‍ಗಳಲ್ಲಿನ ಸುಮಾರು 360 ಪುಟಗಳು ಕಾಣೆಯಾಗಿರುವ ಸಂಗತಿಯು ಚರ್ಚೆಗೆ ಗ್ರಾಸವಾಗಿದೆ.
ನಗರಾಭಿವೃದ್ಧಿ ಇಲಾಖೆಯಲ್ಲಿ ಹಲವು ಕಡತಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ ಇರುವ 734 ಕಡತಗಳ ಪಟ್ಟಿಯಲ್ಲಿ ಮುಡಾ ನಿವೇಶನಗಳ ಹಂಚಿಕೆಯಾಗಿರುವ ಕುರಿತು ಕಣ್ಮರೆಯಾಗಿರುವ ಪುಟಗಳ ಕುರಿತೂ ಕಡತ ತೆರೆದಿರುವುದು ಗೊತ್ತಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕಡತ ಸಂಖ್ಯೆಯು ‘ದಿ ಫೈಲ್’ಗೆ ಲಭ್ಯವಾಗಿದೆ.
‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 2015ರವರೆಗೆ ಹಂಚಿಕೆ ಮಾಡಿರುವ ನಿವೇಶನಗಳನ್ನು ನಮೂದು ಮಾಡಲಾಗಿರುವ ಲೆಡ್ಜರ್‍ಗಳಲ್ಲಿ ಸುಮಾರು 360 ಪುಟಗಳು ಕಾಣೆಯಾಗಿರುವುದನ್ನು ಡೇಟಾಬಿಂಗ್‌ನಲ್ಲಿ ಪತ್ತೆ ಹಚ್ಚಿರುವ ಬಗ್ಗೆ,’ ಎಂಬ ಹೆಸರಿನಲ್ಲಿ ಕಡತ (UDD-MYSAP/302/2022/MYS-URBAN DEVELOPMENT DEPARTMENT- COMPUTER NUMBER 871195) ತೆರೆದಿದೆ. ಈ ಕಡತ ತೆರೆದ ದಿನದಿಂದ ಇಲ್ಲಿಯವರೆಗೂ ಇದರ ಮೇಲೆ ಯಾವುದೇ ಕ್ರಮವಹಿಸಿಲ್ಲ. ಬದಲಿಗೆ ಈ ಕಡತವನ್ನು ಪಾರ್ಕ್ ಮಾಡಿಟ್ಟಿರುವುದು ಗೊತ್ತಾಗಿದೆ.
ಸಿದ್ದರಾಮಯ್ಯ ಅವರು ತಮ್ಮ ಅಧಿಕಾರವನ್ನು ಬಳಸಿಕೊಂಡು “ಮುಡಾ ಅಧಿಕಾರಿಗಳನ್ನು ಬಳಸಿಕೊಂಡು ದಾಖಲೆಗಳನ್ನು ತಿರುಚುತ್ತಿದ್ದಾರೆ ಮತ್ತು ಸಾಕ್ಷ್ಯಗಳನ್ನು ನಾಶಪಡಿಸುತ್ತಿದ್ದಾರೆ” ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರ ಸ್ವಾಮಿ ಹೇಳಿದ್ದರು.
ಮೈಸೂರಿನ ಮುಡಾ ಹಗರಣದ ದಾಖಲೆಗಳನ್ನು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ವಿಶೇಷ ವಿಮಾನದಲ್ಲಿ ಸಾಗಿಸಿ ಸುರಕ್ಷಿತ ಸ್ಥಳಗಳಲ್ಲಿ ಇಟ್ಟುಕೊಂಡಿದ್ದಾರೆ. ಎಂದು ಎಚ್‌ಡಿಕೆ ಆರೋಪಿಸಿದ್ದರು. ಹಗರಣ ಬೆಳಕಿಗೆ ಬರುತ್ತಿದ್ದಂತೆ ಮೈಸೂರಿಗೆ ದೌಡಾಯಿಸಿದ್ದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಮುಡಾದಲ್ಲಿದ್ದ ದಾಖಲೆಗಳನ್ನು ವಿಶೇಷ ವಿಮಾನದಲ್ಲಿ ಸಾಗಿಸಿದ್ದಾರೆ ಎಂದು ಗುರುತರವಾಗಿ ಆಪಾದಿಸಿದ್ದರು.
ಮುಡಾ ಹಗರಣ ಹೊರಗಡೆ ಬರುತ್ತಿದ್ದ ಹಾಗೇ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಮೈಸೂರಿಗೆ ಹೆಲಿಕಾಫ್ಟರ್‌ನಲ್ಲಿ ಬಂದು ಹಗರಣದ ದಾಖಲೆಗಳನ್ನು ಕಸದಂತೆ ತುಂಬಿಕೊಂಡು ಹೋಗಿದ್ದಾರೆಂದು ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಗಂಭೀರ ಆರೋಪಿಸಿದ್ದರು.
ರಾಜ್ಯ ಸರ್ಕಾರದ 41 ಇಲಾಖೆಗಳಲ್ಲಿ 2025ರ ಫೆ.28ರ ಅಂತ್ಯಕ್ಕೆ 69,894 ಕಡತಗಳು ವಿಲೇವಾರಿಗೆ ಬಾಕಿ ಇವೆ. ಕಡತಗಳ ವಿಲೇವಾರಿಯಲ್ಲಿ 41 ಇಲಾಖೆಗಳಲ್ಲಿ ಶೇ. 41ರಷ್ಟು ಮಾತ್ರ ಪ್ರಗತಿ ಸಾಧಿಸಿದೆ.
69,894 ಕಡತಗಳು ವಿಲೇವಾರಿಗೆ ಬಾಕಿ; ಸಿಎಂ, ಡಿಸಿಎಂ ಇಲಾಖೆ ಸೇರಿ 41 ಇಲಾಖೆಗಳಲ್ಲಿ ಶೇ.41ರಷ್ಟು ಮಾತ್ರ ಪ್ರಗತಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರಾಗಿರುವ ಆರ್ಥಿಕ ಇಲಾಖೆಯಲ್ಲಿ 11,772 ಕಡತಗಳ ಪೈಕಿ 1,528 ಕಡತಗಳನ್ನು ಮುಂದಿನ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ರವಾನಿಸಿದೆ. 425 ಕಡತಗಳನ್ನು ಪಾರ್ಕ್ ಮಾಡಿಡಲಾಗಿದೆ. 2,298 ಕಡತಗಳನ್ನು ಮುಕ್ತಾಯಗೊಳಿಸಿದೆ. ಕಡತಗಳ ವಿಲೇವಾರಿಯಲ್ಲಿ ಹಣಕಾಸು ಇಲಾಖೆಯಲ್ಲಿ ಶೇ.26ರಷ್ಟು ಮಾತ್ರ ಪ್ರಗತಿ ಆಗಿರುವುದು ಗೊತ್ತಾಗಿದೆ.
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಬೈರತಿ ಸುರೇಶ್ ಅವರು ಸಚಿವರಾಗಿರುವ ನಗರಾಭಿವೃದ್ಧಿ ಇಲಾಖೆಯಲ್ಲಿ 9,591 ಕಡತಗಳ ಪೈಕಿ 508 ಕಡತಗಳನ್ನು ಮುಂದಿನ ಕ್ರಮಕ್ಕೆ ಕಳಿಸಿದೆ. 834 ಕಡತಗಳನ್ನು ಮುಕ್ತಾಯಗೊಳಿಸಿರುವ ಇಲಾಖೆಯು 734 ಕಡತಗಳನ್ನು ಪಾರ್ಕ್ ಮಾಡಿಟ್ಟಿದೆ. ಒಟ್ಟಾರೆ 7,515 ಕಡತಗಳು ವಿಲೇವಾರಿಗೆ ಬಾಕಿ ಇವೆ.
41 ಇಲಾಖೆಗಳಲ್ಲಿ ಒಟ್ಟಾರೆ 1,17,281 ಕಡತಗಳು ಚಲನೆಯಲ್ಲಿವೆ. ಈ ಪೈಕಿ 12,018 ಕಡತಗಳನ್ನು ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ಸಲ್ಲಿಕೆಯಾಗಿದೆ. 13,035 ಕಡತಗಳನ್ನು ಪಾರ್ಕ್ ಮಾಡಿಡಲಾಗಿದೆ. ಕಡತಗಳ ವಿಲೇವಾರಿಯಲ್ಲಿ 41 ಇಲಾಖೆಗಳು ಶೇ.41ರಷ್ಟು ಮಾತ್ರ ಪ್ರಗತಿ ಸಾಧಿಸಿದೆ. 20ಕ್ಕೂ ಹೆಚ್ಚು ಇಲಾಖೆಗಳು ಕಡತಗಳ ವಿಲೇವಾರಿಯಲ್ಲಿ ಶೇ. 50ನ್ನೂ ದಾಟಿಲ್ಲ.
41 ಇಲಾಖೆಗಳ ಪೈಕಿ ಕಂದಾಯ ಸಚಿವಾಲಯದಲ್ಲಿಯೇ ಅತೀ ಹೆಚ್ಚು ಎಂದರೆ 8,848 ಕಡತಗಳು ವಿಲೇವಾರಿಗೆ ಬಾಕಿ ಇವೆ. ಒಟ್ಟು 12,486 ಕಡತಗಳ ಪೈಕಿ 1,809 ಕಡತಗಳನ್ನು ಮುಂದಿನ ಕ್ರಮಕ್ಕೆ ರವಾನಿಸಿದ್ದರೇ 1,156 ಕಡತಗಳನ್ನು ಮುಕ್ತಾಯಗೊಳಿಸಿದೆ. 674 ಕಡತಗಳನ್ನು ಪಾರ್ಕ್ ಮಾಡಿಡಲಾಗಿದೆ. ಕಡತಗಳ ವಿಲೇವಾರಿಯಲ್ಲಿ ಕಂದಾಯ ಇಲಾಖೆಯು ಶೇ.29ರಷ್ಟು ಮಾತ್ರ ಪ್ರಗತಿ ಸಾಧಿಸಿದೆ.
ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಎಷ್ಟು ಕಡತಗಳು ಬಾಕಿ ಇವೆ ಎಂಬ ಕುರಿತಾದ ಮಾಹಿತಿಯನ್ನು ಮುಖ್ಯಮಂತ್ರಿಗಳ ಸಚಿವಾಲಯದ ಕಚೇರಿಗಳು 120 ದಿನಗಳಾದರೂ ಮಾಹಿತಿ ಒದಗಿಸಿರಲಿಲ್ಲ.
120 ದಿನಗಳಾದರೂ ಕಡತಗಳ ಮಾಹಿತಿ ಒದಗಿಸದ ಸಿಎಂ ಸಚಿವಾಲಯ; ಹಿರಿಯ ಅಧಿಕಾರಿಯಿಂದ ತಡೆ?
ಕಚೇರಿಗಳಲ್ಲಿ ಶೇ.47ರಷ್ಟು ಮಂದಿ ಸಿಬ್ಬಂದಿ ಕೆಲಸವನ್ನೇ ಮಾಡುತ್ತಿರಲಿಲ್ಲ. ಹೀಗಾಗಿ ಕಡತಗಳ ವಿಲೇವಾರಿಯಲ್ಲಿ ವಿಳಂಬವಾಗಿದೆ ಎಂದು ಹಿಂದಿನ ಕೆಡಿಪಿ ಸಭೆಯಲ್ಲಿಯೇ ಹೇಳಲಾಗಿತ್ತು.
ಕಚೇರಿಗಳಲ್ಲಿ ಕೆಲಸ ಮಾಡದ ಶೇ.47ರಷ್ಟು ಸಿಬ್ಬಂದಿ; ರಾಶಿ ರಾಶಿ ಕಡತಗಳು, ಆಡಳಿತ ವ್ಯವಸ್ಥೆ ಕುಂಠಿತ
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ವಿರುದ್ಧ ವಿಚಾರಣೆಗೆ ಸಂಬಂಧಿಸಿದ ಕಡತವು, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್ ಅವರ ಬಳಿ 11 ತಿಂಗಳಿನಿಂದಲೂ ವಿಲೇವಾರಿ ಆಗದೇ ಬಾಕಿ ಇತ್ತು.
ಜಮೀರ್ ವಿರುದ್ಧ ಲೋಕಾಯುಕ್ತ ತನಿಖೆ; ಸಿಎಂ ಎಸಿಎಸ್ ಬಳಿ 11 ತಿಂಗಳಿನಿಂದಲೂ ಧೂಳಿಡಿದ ಕಡತ
8 ಸಚಿವಾಲಯಗಳಲ್ಲಿ 35,471 ಕಡತಗಳು ವಿಲೇವಾರಿ ಆಗದೇ ತ್ರಿಶಂಕು ಸ್ಥಿತಿ ಬಂದೊದಗಿತ್ತು.
8 ಸಚಿವಾಲಯಗಳಲ್ಲಿ 35,471 ಕಡತಗಳು ವಿಲೇವಾರಿಗೆ ಬಾಕಿ; 21,009 ಕಡತಗಳಿಗೆ ತ್ರಿಶಂಕು ಭಾಗ್ಯ
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಕಡತಗಳ ವಿಲೇವಾರಿಯಲ್ಲಿ ಭಾರೀ ವಿಳಂಬ ಕಂಡುಬಂದಿತ್ತು.
ವಿಲೇವಾರಿಗೆ ಬಾಕಿ ಇವೆ 1.69 ಲಕ್ಷ ಕಡತಗಳು; ಕುಂತಲ್ಲೇ ಕುಳಿತಿದೆ ಮೈಗಳ್ಳರ ಸರ್ಕಾರ!
ದಿ ಫೈಲ್ ಈ ಕುರಿತಾಗಿ ವರದಿ ಪ್ರಕಟಿಸಿದ ನಂತರ ಕಡತಗಳ ವಿಲೇವಾರಿಗೆ ಅಂದಿನ ಮುಖ್ಯಮಂತ್ರಿ ಕ್ರಮ ಕೈಗೊಂಡಿದ್ದರು.
‘ದಿ ಫೈಲ್’ ವರದಿ ಪರಿಣಾಮ; ಕಡತ ವಿಲೇವಾರಿ ಮಾಡದ ಮೈಗಳ್ಳರಿಗೆ ಸಿಎಂ ತರಾಟೆ
ಕಡತಗಳ ವಿಲೇವಾರಿಯಲ್ಲಿ ರಾಜಕೀಯ ಹಸ್ತಕ್ಷೇಪ ಮತ್ತು ಲಂಚದ ಆರೋಪವೂ ಕೇಳಿ ಬಂದಿತ್ತು.
ರಾಜಕೀಯ ಹಸ್ತಕ್ಷೇಪ, ಲಂಚ; ಸಚಿವಾಲಯ, ಇಲಾಖೆಗಳಲ್ಲಿ ವಿಲೇವಾರಿಯಾಗಿಲ್ಲ 1.48 ಲಕ್ಷ ಕಡತಗಳು
ಕಡತಗಳ ವಿಲೇವಾರಿಯಲ್ಲಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿಯೇ ನಿರಂತರವಾಗಿ ಸಭೆ ನಡೆಯುತ್ತಿದ್ದರೂ ಸಹ ಇಷ್ಟೊಂದು ಸಂಖ್ಯೆಯಲ್ಲಿ ಕಡತಗಳು ವಿಲೇವಾರಿಯಾಗದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.