ಸಾಲ ಕಟ್ಟಲು ಪರದಾಟ, ಯಂತ್ರೋಪಕರಣಗಳ ಮಾರಾಟ, ಆಸ್ತಿ ಮುಟ್ಟುಗೋಲು ಭೀತಿ; ಬೀದಿಗೆ ಬಂದ ಗುತ್ತಿಗೆದಾರರು?

ಬೆಂಗಳೂರು;   ಕೋಟ್ಯಂತರ ರುಪಾಯಿಗಳನ್ನು ಸರ್ಕಾರವು ಪಾವತಿಸದ ಕಾರಣ ಗುತ್ತಿಗೆದಾರರು ಇದೀಗ ಕಾಮಗಾರಿಗಳನ್ನು ನಿರ್ವಹಿಸಲು ಬಳಸಿದ್ದ ಯಂತ್ರೋಪಕರಣಗಳನ್ನು ಮಾರಾಟ ಮಾಡುವ ಸ್ಥಿತಿಗೆ ತಲುಪಿದ್ದಾರೆ. ಬ್ಯಾಂಕ್‌ಗೆ ಸಾಲದ ಕಂತು ಕಟ್ಟದ ಕಾರಣ ಅವರ ಆಸ್ತಿಗಳು ಮುಟ್ಟುಗೋಲು ಹಾಕಿಕೊಳ್ಳುವ ಭೀತಿಯೂ ಅವರನ್ನು ಕಾಡುತ್ತಿದೆ.

 

ಉತ್ತರ ಕರ್ನಾಟಕ ಭಾಗದ ಸಿವಿಲ್‌ ಗುತ್ತಿಗೆದಾರರು ಸಾಲದ ಕಂತನ್ನು ಪಾವತಿಸಲು ಪರದಾಡುತ್ತಿದ್ದಾರೆ. ಸಾಲದ ಕಂತನ್ನು ಪಾವತಿಸದ ಕಾರಣ ಬ್ಯಾಂಕ್‌ಗಳು ಗುತ್ತಿಗೆದಾರರಿಗೆ ನೋಟೀಸ್‌ ಕೂಡ ನೀಡುತ್ತಿವೆ ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.

 

ಎಲ್‌ಒಸಿಗೆ ಕಮಿಷನ್‌ ಕೇಳುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘವು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಬೆನ್ನಲ್ಲೇ ಉತ್ತರ ಕರ್ನಾಟಕ ಸಿವಿಲ್‌ ಗುತ್ತಿಗೆದಾರರ ಸಂಘವು 2025ರ ಮಾರ್ಚ್‌ 5ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿದ್ದ ಪತ್ರವು ಮುನ್ನೆಲೆಗೆ ಬಂದಿದೆ.

 

ಈ ಸಂಘವು ಬರೆದಿರುವ ಪತ್ರಕ್ಕೆ ಅಧ್ಯಕ್ಷ ಸುಭಾಸ ಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿ ರವೀಂದ್ರ ಮಾನೆ ಅವರು ಸಹಿ ಮಾಡಿದ್ದಾರೆ. ಸಂಘವು ಬರೆದಿರುವ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪತ್ರದಲ್ಲೇನಿದೆ?

 

ಸರ್ಕಾರಿ ಕಾಮಗಾರಿಗಳನ್ನು ನಿರ್ವಹಿಸಿದ ಗುತ್ತಿಗೆದಾರರಿಗೆ 2-3 ವರ್ಷಗಳಿಂದ ಸರ್ಕಾರದಲ್ಲಿ ಬಾಕಿ ಇದೆ. ಈಗಾಗಲೇ ಗುತ್ತಿಗೆದಾರರು ಪಾವತಿ ಆಗದೇ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ. ಗುತ್ತಿಗೆದಾರರು ಕಾಮಗಾರಿ ನಿರ್ವಹಿಸಲು ಬಳಸುವ ಮಷಿನರಿಗಳ ಸಾಲದ ಕಂತನ್ನು ಕಟ್ಟಲಾಗದೇ ಅವುಗಳನ್ನು ಮಾರುವ ಸ್ಥಿತಿಗೆ ತಲುಪಿದ್ದಾರೆ ಎಂದು ಪತ್ರದಲ್ಲಿ ಅಳಲು ತೋಡಿಕೊಂಡಿರುವುದು ಗೊತ್ತಾಗಿದೆ.

 

 

‘ಕಾಮಗಾರಿ ನಿರ್ವಹಿಸಲು ಬ್ಯಾಂಕ್‌ನಿಂದ ಪಡೆದುಕೊಂಡಿದ್ದ ಸಾಲದ ಕಂತನ್ನು ಸುಮಾರು ದಿನಗಳಿಂದ ಕಟ್ಟಿಲ್ಲ. ಹೀಗಾಗಿ ಬ್ಯಾಂಕ್‌ನವರು ಗುತ್ತಿಗೆದಾರರಿಗೆ ಸಾಲದ ಹಣ ಮರು ಪಾವತಿಸಲು ನೋಟೀಸ್‌ ನೀಡಿದ್ದಾರೆ. ಈಗ ಬ್ಯಾಂಕ್‌ನ ಹಣ ಸ್ವಲ್ಪವಾದರೂ ಮರು ಪಾವತಿ ಮಾಡದಿದ್ದಲ್ಲಿ ಸಾಲ ಪಡೆಯಲು ಬ್ಯಾಂಕ್‌ಗೆ ನೀಡಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದರಲ್ಲಿದ್ದಾರೆ,’ ಎಂದು ಭೀತಿಯನ್ನು ವ್ಯಕ್ತಪಡಿಸಿರುವುದು ಪತ್ರದಿಂದ ತಿಳಿದು ಬಂದಿದೆ.

 

ಹಿಂದಿನ ಸರ್ಕಾರದಲ್ಲಿ ವಾಡಿಕೆಗಿಂತ ಹೆಚ್ಚು ಅನುದಾನ ನೀಡಿ ಕಾಮಗಾರಿಗಳನ್ನು ನಿರ್ವಹಿಸಿದ್ದಾರೆ ಎಂಬ ಆರೋಪಗಳನ್ನು ಮಾಡುವುದರಲ್ಲಿ ಯಾವುದೇ ಹುರುಳಿಲ್ಲ ಎಂದು ಈಗಿನ ಕಾಂಗ್ರೆಸ್‌ ಸರ್ಕಾರಕ್ಕೆ ತಿರುಗೇಟು ಕೂಡ ನೀಡಿದ್ದಾರೆ.

 

ಅಲ್ಲದೇ ‘5 ವರ್ಷಕ್ಕೊಮ್ಮೆ ಸರ್ಕಾರಗಳು ಬದಲಾಗುತ್ತವೆ. ಆದರೆ ಕಾಮಗಾರಿಗಳನ್ನು ನಿರ್ವಹಿಸುವ ಗುತ್ತಿಗೆದಾರರು ಅದೇ ವೃತ್ತಿಯಲ್ಲಿ ಮುಂದುವರೆದಿದ್ದಾರೆ. ಬೇರೆ ಸರ್ಕಾರ ಬಂದರೂ ಬರಬಹುದು ಅವರೂ ಸಹ ಈ ರೀತಿ ಹಿಂದಿನ ಸರ್ಕಾರದ ಬಗ್ಗೆ ಆರೋಪ ಮಾಡುತ್ತಾ ಕಾಮಘಾರಿ ನಿರ್ವಹಿಸಿದ ಹಣ ಪಾವತಿ ಮಾಡದೇ ಹೋದಲ್ಲಿ ಗುತ್ತಿಗೆದಾರರ ಗತಿ ಏನು,’ ಎಂದು ಪ್ರಶ್ನಿಸಿರುವುದು ತಿಳಿದು ಬಂದಿದೆ.

 

ಈ ರಿತಿ ನೆಪಗಳನ್ನು ಬಿಟ್ಟು ಪ್ರತೀ ತಿಂಗಳು ಹಣ ಪಾವತಿಸುವ ಮೂಲಕ 3 ತಿಂಗಳಿನಲ್ಲಿ ಗುತ್ತಿಗೆದಾರರ ಬಾಕಿ ಹಣವನ್ನು ಸಂಪೂರ್ಣ ಪಾವತಿ ಮಾಡಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ. ಅಲ್ಲದೇ ಈ ಬೆಳವಣಿಗೆ ನಡೆಯದಿದ್ದಲ್ಲಿ ಅನಿವಾರ್ಯವಾಗಿ ಕಾಮಗಾರಿಗಳನ್ನು ಬಂದ್ ಮಾಡಿ ಅನಿರ್ದಿಷ್ಟವಾಗಿ ಮುಷ್ಕರ ಹಮ್ಮಿಕೊಳ್ಳಬೇಕಾದೀತು ಎಂದೂ ಎಚ್ಚರಿಸಿರುವುದು ಪತ್ರದಿಂದ ಗೊತ್ತಾಗಿದೆ.

 

 

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಸಚಿವ ಪ್ರಿಯಾಂಕ್ ಖರ್ಗೆ, ಎಂ ಬಿ ಪಾಟೀಲ, ಎನ್ ಎಸ್‌ ಬೋಸರಾಜು, ಬೈರತಿ ಸುರೇಶ್‌, ಎಚ್‌ ಕೆ ಪಾಟೀಲ, ರಹೀಮ ಖಾನ್, ಎಸ್‌ ಎಸ್‌ ಮಲ್ಲಿಕಾರ್ಜುನ, ಸಂತೋಷ ಲಾಡ್, ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌, ನಗರಾಭಿವೃದ್ಧಿ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಸಕ್ಷಮ ಪ್ರಾಧಿಕಾರಗಳಿಗೂ ಇದೇ ಪತ್ರವನ್ನು ರವಾನಿಸಿರುವುದು ತಿಳಿದು ಬಂದಿದೆ.

 

40 ಪರ್ಸೆಂಟ್‌ ಕಮಿಷನ್‌ ಹಗರಣಕ್ಕೆ ಕ್ಲೀನ್‌ ಚಿಟ್‌; ತನಿಖೆ ನಡೆಸದೆಯೇ ಮಣ್ಣೆಳೆದು ಮುಚ್ಚಿ ಹಾಕಿದ ಸರ್ಕಾರ

 

ಉತ್ತರ ಕರ್ನಾಟಕದ ಗುತ್ತಿಗೆದಾರರಿಗೆ ಅಂದಾಜು 20,000 ಕೋಟಿಗೂ ಅಧಿಕ ಮೊತ್ತ ಪಾವತಿ ಆಗಬೇಕಿದೆ ಎಂದು ಗೊತ್ತಾಗಿದೆ.

 

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಹೊರಗುತ್ತಿಗೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲ ಇಂಜಿನಿಯರ್‍‌ಗಳು ಬಿಲ್‌ ಮಾಡಿಸಲು ಗುತ್ತಿಗೆದಾರರ ಬಳಿ ಕಮಿಷನ್‌ಗೆ ಬೇಡಿಕೆ ಇಡುತ್ತಿದ್ದಾರೆ ಎಂಬ ದೂರಿನ ನಡುವೆಯೇ ಕ್ರೈಸ್‌ನಲ್ಲಿನ ಈ ಇಂಜಿನಿಯರ್‍‌ಗಳ ವಿರುದ್ಧವೇ ಹತ್ತಾರು ದೂರುಗಳು ದಾಖಲಾಗಿದ್ದವು.

ಕಾಮಗಾರಿಗಳಲ್ಲಿ ಭಾರೀ ಭ್ರಷ್ಟಾಚಾರ; ಹೆಚ್ಚಿನ ಲಂಚಕ್ಕೆ ಬೇಡಿಕೆ, ಗುತ್ತಿಗೆದಾರರಿಂದಲೇ ದೂರು, ನಡೆಯದ ತನಿಖೆ

 

 

 

ಬಿಲ್‌ ಮಾಡಿಸಲು ಗುತ್ತಿಗೆದಾರರಿಗೆ 5ರಿಂದ 6 ಪರ್ಸೆಂಟ್‌ನಷ್ಟು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ಗುರುತರವಾದ ಆರೋಪ ಕೇಳಿ ಬಂದಿದೆ. ಈ ಕುರಿತು ನಂಜೇಗೌಡ ಮತ್ತಿತರರು ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಮತ್ತು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್‌ ಅವರಿಗೆ 2024ರ ಆಗಸ್ಟ್‌ 31ರಂದೇ ಲಿಖಿತ ದೂರು ಸಲ್ಲಿಸಿದ್ದಾರೆ. ಈ ದೂರನ್ನಾಧರಿಸಿ ಕ್ರಮ ವಹಿಸಿ ಎಂದು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್‌ ಅವರು ಷರಾ ಬರೆದಿದ್ದರು.

 

ಬಿಲ್‌ ಮಾಡಿಸಲು ಗುತ್ತಿಗೆದಾರರಿಂದ 6 ಪರ್ಸೆಂಟ್‌ ಕಮಿಷನ್‌ ವಸೂಲಿ; ಕ್ರೈಸ್‌ನಲ್ಲಿ ಲಂಚಾವತಾರ ಆರೋಪ

 

ರಾಜ್ಯದ ಗ್ರಂಥಾಲಯಗಳಿಗೆ ಪುಸ್ತಕ ಖರೀದಿಸಲು ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ ಪ್ರಾಧಿಕಾರಕ್ಕೆ ಸದಸ್ಯರ ನಾಮನಿರ್ದೇಶನ ಮಾಡಲೂ  ಕೆಲ  ಜಿಲ್ಲಾ ಮುಖ್ಯ ಗ್ರಂಥಾಲಯದ ಅಧಿಕಾರಿಗಳು  40 ಪರ್ಸೆಂಟ್‌ ಲಂಚದ ಹಣಕ್ಕೆ ಬೇಡಿಕೆ ಇರಿಸುತ್ತಿದ್ದಾರೆ ಎಂಬ ಗುರುತರವಾದ ಆರೋಪವು ಕೇಳಿ ಬಂದಿತ್ತು.

 

ಪುಸ್ತಕ ಖರೀದಿ, ಪ್ರಾಧಿಕಾರದ ನಾಮನಿರ್ದೇಶನ ಪ್ರಸ್ತಾವಕ್ಕೂ 40 ಪರ್ಸೆಂಟ್‌ ಲಂಚಕ್ಕೆ ಬೇಡಿಕೆ; ಸಚಿವ, ಡಿ ಸಿ ಗೆ ದೂರರ್ಜಿ

 

ಬೀದರ್ ಜಿಲ್ಲಾ ಕೇಂದ್ರ ಮುಖ್ಯ ಗ್ರಂಥಾಲಯದ ಪ್ರಭಾರಿ ಅಧಿಕಾರಿಯಾದ ಸಿದ್ಧಾರ್ಥ ಬಾವಿಕಟ್ಟಿ ಅವರು ಕಳೆದ 10 ವರ್ಷಗಳಿಂದ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಏನೇ ಮಾಡಿದರೂ ನನಗೆ ಇಲ್ಲಿಂದ ಯಾರೂ ಕೂಡ ಅಲುಗಾಡಿಸಲು ಸಾಧ್ಯವಿಲ್ಲ ಎಂಬ ಮನೋಧೋರಣೆ ಹೊಂದಿದ್ದಾರೆ. ಅಧಿಕಾರ ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರ, ಲಂಚ ಪಡೆಯುವ ಪ್ರವೃತ್ತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇದಕ್ಕೆ ನಾನೇ ಸಾಕ್ಷಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

 

 

ಸಿಎಸ್‌ಆರ್‍‌ ಫಂಡ್‌ಗೂ ಶೇ.50ರಷ್ಟು ಲಂಚ!; ಶಿಕ್ಷಣ ಸಚಿವರ ಪಿಎ ವಿರುದ್ಧವೇ ಆರೋಪ

 

2,000 ಗ್ರಾಮ ಪಂಚಾಯ್ತಿಗಳಲ್ಲಿ ಸಿಎಸ್‌ಆರ್‍‌ ಫಂಡ್‌ ಅಡಿ ಮಾದರಿ ಶಾಲೆ ನಿರ್ಮಾಣ ಮಾಡಲು 03 ಪಂಚಾಯ್ತಿಗಳಿಗೆ ಒಂದು ಮಾದರಿ ಶಾಲೆಯಂತೆ 1,000 ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಲು ಸರ್ಕಾರವು ಉದ್ದೇಶಿಸಿದೆ. ಇದಕ್ಕೆ ಬೇಕಾಗಿರುವ ಅನುದಾನವನ್ನು ಕಾರ್ಪೋರೇಟ್‌ ಕಂಪನಿಗಳ ಮೂಲಕ ಒದಗಿಸಲು ಕಾರ್ಯ ಯೋಜನೆ ರೂಪಿಸಿರುವುದನ್ನು ಸ್ಮರಿಸಬಹುದು.

SUPPORT THE FILE

Latest News

Related Posts