ಬೆಂಗಳೂರು; ರಾಜ್ಯ ಸರ್ಕಾರದ 41 ಇಲಾಖೆಗಳಲ್ಲಿ 2025ರ ಫೆ.28ರ ಅಂತ್ಯಕ್ಕೆ 69,894 ಕಡತಗಳು ವಿಲೇವಾರಿಗೆ ಬಾಕಿ ಇವೆ. ಕಡತಗಳ ವಿಲೇವಾರಿಯಲ್ಲಿ 41 ಇಲಾಖೆಗಳಲ್ಲಿ ಶೇ. 41ರಷ್ಟು ಮಾತ್ರ ಪ್ರಗತಿ ಸಾಧಿಸಿದೆ.
ಕಡತಗಳ ವಿಲೇವಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳೂ ಸಭೆ ನಡೆಯುತ್ತಿದ್ದರೂ ಸಹ ಕಡತಗಳ ವಿಲೇವಾರಿಯಲ್ಲಿ ಪ್ರಗತಿ ಸಾಧಿಸಿಲ್ಲ. ನಾಗರೀಕರಿಗೆ ಸಮಸ್ಯೆಯಾಗದಂತೆ ಕಡತಗಳವಿಲೇವಾರಿಯನ್ನು ಕಾಲಮಿತಿಯೊಳಗೇ ಪೂರ್ಣಗೊಳಿಸಬೇಕು ಮತ್ತು ಈ ನಿಟ್ಟಿನಲ್ಲಿ ಅಧಿಕಾರಿವರ್ಗವು ಪ್ರಯತ್ನಿಸಬೇಕು ಎಂದು ಕಾನೂನು ಸೇವಾ ಪ್ರಾಧಿಕಾರವು ಪದೇ ಪದೇ ನೀಡುತ್ತಿರುವ ಸೂಚನೆಯನ್ನೂ ಅಧಿಕಾರಿ ವರ್ಗವು ಪಾಲಿಸಿಲ್ಲ.
ಅಧಿಕಾರಿಗಳ ಈ ನಿರ್ಲಕ್ಷ್ಯದ ನಡುವೆಯೇ 2025ರ ಫೆ.28ರ ಅಂತ್ಯಕ್ಕೆ ಕಡತಗಳು ಬಾಕಿ ಇರುವ ಸಂಗತಿಯು ಮುನ್ನೆಲೆಗೆ ಬಂದಿದೆ.
2025ರ ಮಾರ್ಚ್ 28ರಂದು ನಡೆದಿದ್ದ ಕೆಡಿಪಿ ಸಭೆಯಲ್ಲಿ ಕಡತಗಳ ವಿಲೇವಾರಿ ಕುರಿತೂ ಚರ್ಚೆಯಾಗಿದೆ. ಕೆಡಿಪಿ ಸಭೆಗೆ ಯೋಜನಾ ಇಲಾಖೆಯು ಮಂಡಿಸಿದ್ದ ಅಂಕಿ ಅಂಶಗಳ ವಿವರಣೆಯು ‘ದಿ ಫೈಲ್’ಗೆ ಲಭ್ಯವಾಗಿದೆ.
41 ಇಲಾಖೆಗಳಲ್ಲಿ ಒಟ್ಟಾರೆ 1,17,281 ಕಡತಗಳು ಚಲನೆಯಲ್ಲಿವೆ. ಈ ಪೈಕಿ 12,018 ಕಡತಗಳನ್ನು ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ಸಲ್ಲಿಕೆಯಾಗಿದೆ. 13,035 ಕಡತಗಳನ್ನು ಪಾರ್ಕ್ ಮಾಡಿಡಲಾಗಿದೆ. ಕಡತಗಳ ವಿಲೇವಾರಿಯಲ್ಲಿ 41 ಇಲಾಖೆಗಳು ಶೇ.41ರಷ್ಟು ಮಾತ್ರ ಪ್ರಗತಿ ಸಾಧಿಸಿದೆ. 20ಕ್ಕೂ ಹೆಚ್ಚು ಇಲಾಖೆಗಳು ಕಡತಗಳ ವಿಲೇವಾರಿಯಲ್ಲಿ ಶೇ. 50ನ್ನೂ ದಾಟಿಲ್ಲ.
41 ಇಲಾಖೆಗಳ ಪೈಕಿ ಕಂದಾಯ ಸಚಿವಾಲಯದಲ್ಲಿಯೇ ಅತೀ ಹೆಚ್ಚು ಎಂದರೆ 8,848 ಕಡತಗಳು ವಿಲೇವಾರಿಗೆ ಬಾಕಿ ಇವೆ. ಒಟ್ಟು 12,486 ಕಡತಗಳ ಪೈಕಿ 1,809 ಕಡತಗಳನ್ನು ಮುಂದಿನ ಕ್ರಮಕ್ಕೆ ರವಾನಿಸಿದ್ದರೇ 1,156 ಕಡತಗಳನ್ನು ಮುಕ್ತಾಯಗೊಳಿಸಿದೆ. 674 ಕಡತಗಳನ್ನು ಪಾರ್ಕ್ ಮಾಡಿಡಲಾಗಿದೆ. ಕಡತಗಳ ವಿಲೇವಾರಿಯಲ್ಲಿ ಕಂದಾಯ ಇಲಾಖೆಯು ಶೇ.29ರಷ್ಟು ಮಾತ್ರ ಪ್ರಗತಿ ಸಾಧಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರಾಗಿರುವ ಆರ್ಥಿಕ ಇಲಾಖೆಯಲ್ಲಿ 11,772 ಕಡತಗಳ ಪೈಕಿ 1,528 ಕಡತಗಳನ್ನು ಮುಂದಿನ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ರವಾನಿಸಿದೆ. 425 ಕಡತಗಳನ್ನು ಪಾರ್ಕ್ ಮಾಡಿಡಲಾಗಿದೆ. 2,298 ಕಡತಗಳನ್ನು ಮುಕ್ತಾಯಗೊಳಿಸಿದೆ. ಕಡತಗಳ ವಿಲೇವಾರಿಯಲ್ಲಿ ಹಣಕಾಸು ಇಲಾಖೆಯಲ್ಲಿ ಶೇ.26ರಷ್ಟು ಮಾತ್ರ ಪ್ರಗತಿ ಆಗಿರುವುದು ಗೊತ್ತಾಗಿದೆ.
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಬೈರತಿ ಸುರೇಶ್ ಅವರು ಸಚಿವರಾಗಿರುವ ನಗರಾಭಿವೃದ್ಧಿ ಇಲಾಖೆಯಲ್ಲಿ 9,591 ಕಡತಗಳ ಪೈಕಿ 508 ಕಡತಗಳನ್ನು ಮುಂದಿನ ಕ್ರಮಕ್ಕೆ ಕಳಿಸಿದೆ. 834 ಕಡತಗಳನ್ನು ಮುಕ್ತಾಯಗೊಳಿಸಿರುವ ಇಲಾಖೆಯು 734 ಕಡತಗಳನ್ನು ಪಾರ್ಕ್ ಮಾಡಿಟ್ಟಿದೆ. ಒಟ್ಟಾರೆ 7,515 ಕಡತಗಳು ವಿಲೇವಾರಿಗೆ ಬಾಕಿ ಇರಿಸಿಕೊಂಡಿರುವ ನಗರಾಭಿವೃದ್ಧಿ ಇಲಾಖೆಯು ಕಡತಗಳ ವಿಲೇವಾರಿಯಲ್ಲಿ ಶೇ. 22ರಷ್ಟು ಮಾತ್ರ ಪ್ರಗತಿ ಸಾಧಿಸಿದೆ.
ಸತೀಶ್ ಜಾರಕಿಹೊಳಿಯವರು ಸಚಿವರಾಗಿರುವ ಲೋಕೋಪಯೋಗಿ ಇಲಾಖೆಯು ಕಡತಗಳ ವಿಲೇವಾರಿಯಲ್ಲಿ ಶೇ. 18ರಷ್ಟು ಮಾತ್ರ ಪ್ರಗತಿ ಸಾಧಿಸಿದೆ. 6,407 ಕಡತಗಳ ಪೈಕಿ 387 ಕಡತಗಳನ್ನು ಮುಂದಿನ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಸಲ್ಲಿಸಿದೆ. 731 ಕಡತಗಳನ್ನು ಮುಕ್ತಾಯಗೊಳಿಸಿರುವ ಇಲಾಖೆಯು 51 ಕಡತಗಳನ್ನು ಪಾರ್ಕ್ ಮಾಡಿಟ್ಟಿದೆ. ಅದೇ ರೀತಿ 5,238 ಕಡತಗಳನ್ನು ವಿಲೇವಾರಿ ಮಾಡದೇ ಬಾಕಿ ಇರಿಸಿಕೊಂಡಿದೆ.
ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರು ಸಚಿವರಾಗಿರುವ ಗೃಹ ಇಲಾಖೆಯು 4,378 ಕಡತಗಳನ್ನು ವಿಲೇವಾರಿಗೆ ಬಾಕಿ ಇರಿಸಿಕೊಂಡಿದೆ. ಒಟ್ಟು 7,623 ಕಡತಗಳ ಪೈಕಿ 148 ಕಡತಗಳನ್ನು ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ರವಾನಿಸಿದೆ. 2,568 ಕಡತಗಳನ್ನು ಮುಕ್ತಾಯಗೊಳಿಸಿದೆ. 529 ಕಡತಗಳನ್ನು ಪಾರ್ಕ್ ಮಾಡಿಟ್ಟಿದೆ. ಕಡತಗಳ ವಿಲೇವಾರಿಯಲ್ಲಿ ಈ ಇಲಾಖೆಯು ಶೇ. 43ರಷ್ಟು ಮಾತ್ರ ಪ್ರಗತಿ ಸಾಧಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 4,493 ಕಡತಗಳ ಪೈಕಿ 767 ಕಡತಗಳನ್ನು ಮುಂದಿನ ಕ್ರಮಕ್ಕೆ ರವಾನಿಸಿದ್ದರೇ 446 ಕಡತಗಳನ್ನು ಮುಕ್ತಾಯಗೊಳಿಸಿದೆ. 630 ಕಡತಗಳನ್ನು ಪಾರ್ಕ್ ಮಾಡಿಟ್ಟಿದೆ. 2,650 ಕಡತಗಳನ್ನು ವಿಲೇವಾರಿಗೆ ಬಾಕಿ ಉಳಿಸಿಕೊಂಡಿರುವ ಇಲಾಖೆಯು ಶೇ. 41ರಷ್ಟು ಮಾತ್ರ ಪ್ರಗತಿ ಸಾಧಿಸಿರುವುದು ಗೊತ್ತಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು 4,216 ಕಡತಗಳ ಪೈಕಿ 279 ಕಡತಗಳನ್ನು ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ಕಳಿಸಿದೆ. 1,111 ಕಡತಗಳನ್ನು ಇಲಾಖೆಯು ಮುಕ್ತಾಯಗೊಳಿಸಿದೆ. 598 ಕಡತಗಳನ್ನು ಪಾರ್ಕ್ ಮಾಡಿಟ್ಟಿದೆ. 2,228 ಕಡತಗಳನ್ನು ವಿಲೇವಾರಿಗೆ ಬಾಕಿ ಇರಿಸಿಕೊಂಡಿದೆ. ಕಡತಗಳ ವಿಲೇವಾರಿಯಲ್ಲಿ ಒಟ್ಟಾರೆ ಶೇ.47ರಷ್ಟು ಪ್ರಗತಿ ಸಾಧಿಸಿರುವುದು ತಿಳಿದು ಬಂದಿದೆ.
ಜಲ ಸಂಪನ್ಮೂಲ ಇಲಾಖೆಯಲ್ಲಿ 1,981 ಕಡತಗಳು ವಿಲೇವಾರಿಗೆ ಬಾಕಿ ಇವೆ. 4,174 ಕಡತಗಳ ಪೈಕಿ 219 ಕಡತಗಳು ಮುಂದಿನ ಕ್ರಮಕ್ಕಾಗಿ ಕಳಿಸಿದೆ. 713 ಕಡತಗಳನ್ನು ಮುಕ್ತಾಯಗೊಳಿಸಿದೆ. 1,261 ಕಡತಗಳನ್ನು ಪಾರ್ಕ್ ಮಾಡಿಟ್ಟಿರುವ ಇಲಾಖೆಯು ವಿಲೇವಾರಿಯಲ್ಲಿ ಶೇ.53ರಷ್ಟು ಪ್ರಗತಿ ಸಾಧಿಸಿದೆ.
1,414 ಕಡತಗಳನ್ನು ವಿಲೇವಾರಿಗೆ ಬಾಕಿ ಇಟ್ಟುಕೊಂಡಿರುವ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆಯು ಕಡತಗಳ ವಿಲೇವಾರಿಯಲ್ಲಿ ಶೇ.48ರಷ್ಟು ಮಾತ್ರ ಪ್ರಗತಿ ಸಾಧಿಸಿದೆ. ಅರಣ್ಯ ಇಲಾಖೆಯು 1,591, ಸಹಕಾರ ಇಲಾಖೆಯು 1,549, ವಾಣಿಜ್ಯ ಮತ್ತು ಕೈಗಾರಿಕೆ 1,484, ವೈದ್ಯಕೀಯ ಶಿಕ್ಷಣ 1,435 ಕಡತಗಳನ್ನು ವಿಲೇವಾರಿಗೆ ಬಾಕಿ ಇಟ್ಟುಕೊಂಡಿದೆ.
ಸಮಾಜ ಕಲ್ಯಾಣ ಇಲಾಖೆಯು 1,373, ಪಶುಸಂಗೋಪನೆ 1364, ಸಣ್ಣ ನೀರಾವರಿ 1,354, ಉನ್ನತ ಶಿಕ್ಷಣ 1,341, ಹಿಂದುಳಿದ ವರ್ಗ 1,157, ವಸತಿ 1,028 ಕಡತಗಳನ್ನು ವಿಲೇವಾರಿಗೆ ಬಾಕಿ ಇರಿಸಿಕೊಂಡಿದೆ. ಇನ್ನುಳಿದ ಇಲಾಖೆಗಳು 1,000ಕ್ಕಿಂತಲೂ ಕಡಿಮೆ ಸಂಖ್ಯೆಯ ಕಡತಗಳನ್ನು ವಿಲೇವಾರಿಗೆ ಬಾಕಿ ಉಳಿಸಿಕೊಂಡಿದೆ. ಈ ಇಲಾಖೆಗಳು ಸರಾಸರಿ ಶೇ. 50ರಿಂದ ಶೇ.88ರವರೆಗೆ ಪ್ರಗತಿ ಸಾಧಿಸಿರುವುದು ತಿಳಿದು ಬಂದಿದೆ.
41 ಇಲಾಖೆಗಳಲ್ಲಿ 3,886 ಸಂಖ್ಯೆಯಷ್ಟು ಕಡತಗಳು 2 ವರ್ಷದಿಂದಲೂ ವಿಲೇವಾರಿಗೆ ಬಾಕಿ ಇದೆ. 1,991 ಸಂಖ್ಯೆಯ ಕಡತಗಳು 2 ವರ್ಷಕ್ಕೂ ಮೀರಿದ ಅವಧಿಯದ್ದಾಗಿದೆ.
ಮುಖ್ಯಮಂತ್ರಿ ಅವರ ಅನುಮೋದನೆಗೆ ಸ್ವೀಕೃತವಾಗಿರುವ, ಅನುಮೋದನೆ ನೀಡಿರುವ, ಅನುಮೋದನೆಗೆ ಬಾಕಿ ಇರುವುದಕ್ಕೆ ಸಂಂಧಿಸಿದಂತೆ ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಎಷ್ಟು ಕಡತಗಳು ಬಾಕಿ ಇವೆ ಎಂಬ ಕುರಿತಾದ ಮಾಹಿತಿಯನ್ನು ಮುಖ್ಯಮಂತ್ರಿಗಳ ಸಚಿವಾಲಯದ ಕಚೇರಿಗಳು 120 ದಿನಗಳಾದರೂ ಮಾಹಿತಿ ಒದಗಿಸಿರಲಿಲ್ಲ.
120 ದಿನಗಳಾದರೂ ಕಡತಗಳ ಮಾಹಿತಿ ಒದಗಿಸದ ಸಿಎಂ ಸಚಿವಾಲಯ; ಹಿರಿಯ ಅಧಿಕಾರಿಯಿಂದ ತಡೆ?
ಕಚೇರಿಗಳಲ್ಲಿ ಶೇ.47ರಷ್ಟು ಮಂದಿ ಸಿಬ್ಬಂದಿ ಕೆಲಸವನ್ನೇ ಮಾಡುತ್ತಿರಲಿಲ್ಲ. ಹೀಗಾಗಿ ಕಡತಗಳ ವಿಲೇವಾರಿಯಲ್ಲಿ ವಿಳಂಬವಾಗಿದೆ ಎಂದು ಹಿಂದಿನ ಕೆಡಿಪಿ ಸಭೆಯಲ್ಲಿಯೇ ಹೇಳಲಾಗಿತ್ತು.
ಕಚೇರಿಗಳಲ್ಲಿ ಕೆಲಸ ಮಾಡದ ಶೇ.47ರಷ್ಟು ಸಿಬ್ಬಂದಿ; ರಾಶಿ ರಾಶಿ ಕಡತಗಳು, ಆಡಳಿತ ವ್ಯವಸ್ಥೆ ಕುಂಠಿತ
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ವಿರುದ್ಧ ವಿಚಾರಣೆಗೆ ಸಂಬಂಧಿಸಿದ ಕಡತವು, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್ ಅವರ ಬಳಿ 11 ತಿಂಗಳಿನಿಂದಲೂ ವಿಲೇವಾರಿ ಆಗದೇ ಬಾಕಿ ಇತ್ತು.
ಜಮೀರ್ ವಿರುದ್ಧ ಲೋಕಾಯುಕ್ತ ತನಿಖೆ; ಸಿಎಂ ಎಸಿಎಸ್ ಬಳಿ 11 ತಿಂಗಳಿನಿಂದಲೂ ಧೂಳಿಡಿದ ಕಡತ
8 ಸಚಿವಾಲಯಗಳಲ್ಲಿ 35,471 ಕಡತಗಳು ವಿಲೇವಾರಿ ಆಗದೇ ತ್ರಿಶಂಕು ಸ್ಥಿತಿ ಬಂದೊದಗಿತ್ತು.
8 ಸಚಿವಾಲಯಗಳಲ್ಲಿ 35,471 ಕಡತಗಳು ವಿಲೇವಾರಿಗೆ ಬಾಕಿ; 21,009 ಕಡತಗಳಿಗೆ ತ್ರಿಶಂಕು ಭಾಗ್ಯ
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಕಡತಗಳ ವಿಲೇವಾರಿಯಲ್ಲಿ ಭಾರೀ ವಿಳಂಬ ಕಂಡುಬಂದಿತ್ತು.
ವಿಲೇವಾರಿಗೆ ಬಾಕಿ ಇವೆ 1.69 ಲಕ್ಷ ಕಡತಗಳು; ಕುಂತಲ್ಲೇ ಕುಳಿತಿದೆ ಮೈಗಳ್ಳರ ಸರ್ಕಾರ!
ದಿ ಫೈಲ್ ಈ ಕುರಿತಾಗಿ ವರದಿ ಪ್ರಕಟಿಸಿದ ನಂತರ ಕಡತಗಳ ವಿಲೇವಾರಿಗೆ ಅಂದಿನ ಮುಖ್ಯಮಂತ್ರಿ ಕ್ರಮ ಕೈಗೊಂಡಿದ್ದರು.
‘ದಿ ಫೈಲ್’ ವರದಿ ಪರಿಣಾಮ; ಕಡತ ವಿಲೇವಾರಿ ಮಾಡದ ಮೈಗಳ್ಳರಿಗೆ ಸಿಎಂ ತರಾಟೆ
ಕಡತಗಳ ವಿಲೇವಾರಿಯಲ್ಲಿ ರಾಜಕೀಯ ಹಸ್ತಕ್ಷೇಪ ಮತ್ತು ಲಂಚದ ಆರೋಪವೂ ಕೇಳಿ ಬಂದಿತ್ತು.
ರಾಜಕೀಯ ಹಸ್ತಕ್ಷೇಪ, ಲಂಚ; ಸಚಿವಾಲಯ, ಇಲಾಖೆಗಳಲ್ಲಿ ವಿಲೇವಾರಿಯಾಗಿಲ್ಲ 1.48 ಲಕ್ಷ ಕಡತಗಳು
ಕಡತಗಳ ವಿಲೇವಾರಿಯಲ್ಲಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿಯೇ ನಿರಂತರವಾಗಿ ಸಭೆ ನಡೆಯುತ್ತಿದ್ದರೂ ಸಹ ಇಷ್ಟೊಂದು ಸಂಖ್ಯೆಯಲ್ಲಿ ಕಡತಗಳು ವಿಲೇವಾರಿಯಾಗದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.