ಅಧಿಕಾರಿ, ನೌಕರರ ಆಸ್ತಿ ವಿವರ ಪರಿಶೀಲನೆ; ಡಿವೈಎಸ್ಪಿ, ಇನ್ಸ್‌ಪೆಕ್ಟರ್ ನೇಮಕ, ನಿದ್ದೆಗೆಡಿಸಿದ ಲೋಕಾ ಎಸ್ಪಿ

ಬೆಂಗಳೂರು; ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಯೊಳಗಿರುವ ನಿಗಮ, ಮಂಡಳಿ, ಪ್ರಾಧಿಕಾರಗಳಲ್ಲಿನ ಅಧಿಕಾರಿ, ಸಿಬ್ಬಂದಿಯವರ ಸೇವಾ ಪುಸ್ತಕ ಮತ್ತು ಆಸ್ತಿ ದಾಯಿತ್ವ ಪಟ್ಟಿಗಳನ್ನು ಲೋಕಾಯುಕ್ತ ಪೊಲೀಸರು ಪರಿಶೀಲನೆಗೆ ಮುಂದಾಗಿದ್ದಾರೆ.

 

ಸರ್ಕಾರಿ ಅಧಿಕಾರಿ, ನೌಕರರು ತಮ್ಮ ಹೆಸರಿನಲ್ಲಿ ಮತ್ತು ತಮ್ಮ ಕುಟುಂಬದ ಹೆಸರಿನಲ್ಲಿ ಹೊಂದಿರುವ  ಸ್ಥಿರಾಸ್ತಿ, ಚರಾಸ್ತಿ ಮತ್ತು ಪಿತ್ರಾರ್ಜಿತ ಆಸ್ತಿ, ಸ್ವಾಧೀನದಲ್ಲಿರುವ ಆಸ್ತಿಗಳ ವಿವರಗಳ ಮಾಹಿತಿಗಳನ್ನು ಒದಗಿಸುತ್ತಿಲ್ಲ ಎಂದು  ಲೋಕಾಯುಕ್ತರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಗೆ ಪತ್ರವನ್ನು ಬರೆದಿದ್ದರು. ಅಲ್ಲದೇ ಲೋಕಾಯುಕ್ತರ ಪತ್ರಕ್ಕೆ ಕಿಡಿ ಕಾರಿದ್ದ ಸರ್ಕಾರಿ ಅಧಿಕಾರಿ, ನೌಕರರು ಮುಖ್ಯ ಕಾರ್ಯದರ್ಶಿ ಬಳಿ ಅಲವತ್ತುಕೊಂಡಿದ್ದರು.

 

ಈ ಎಲ್ಲಾ ಬೆಳವಣಿಗೆಗಳ ನಡುವೆಯೇ  ನಗರಾಭಿವೃದ್ಧಿ ಇಲಾಖೆ ಅಧಿಕಾರಿ, ನೌಕರರು ಮತ್ತು ಈ ಇಲಾಖೆ ವ್ಯಾಪ್ತಿಯಲ್ಲಿನ ನಿಗಮ, ಮಂಡಳಿ, ಪ್ರಾಧಿಕಾರಗಳಲ್ಲಿನ ಅಧಿಕಾರಿ ಸಿಬ್ಬಂದಿಯವರ ಸೇವಾ ಪುಸ್ತಕ ಮತ್ತು ಆಸ್ತಿ ದಾಯಿತ್ವ ಪಟ್ಟಿ ಪರಿಶೀಲಿಸಲು  ಅನುಮತಿ ಕೋರಿರುವ  ಲೋಕಾಯುಕ್ತ ಪೊಲೀಸ್‌ ವಿಭಾಗದ ಬೆಂಗಳೂರು ನಗರ  ಘಟಕದ ಎಸ್ಪಿ ಜೋಶಿ ಶ್ರೀನಾಥ ಮಹದೇವ ಅವರು ಈ ಸಂಬಂಧ ಡಿವೈಎಸ್ಪಿ ಮತ್ತು ಪೊಲೀಸ್‌ ಇನ್ಸ್‌ಪೆಕ್ಟರ್‌ರನ್ನು ನೇಮಿಸಿದ್ದಾರೆ.

 

ಈ ಸಂಬಂಧ 2025ರ ಜನವರಿ 4ರಂದೇ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸೇವಾ ಪುಸ್ತಕ ಮತ್ತು ಆಸ್ತಿ ದಾಯಿತ್ವ ಪಟ್ಟಿ ಪರಿಶೀಲನೆಗೆ ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳನ್ನು ನಿಯೋಜಿಸಿರುವ ಕ್ರಮವು, ಭ್ರಷ್ಟ ಅಧಿಕಾರಿ, ನೌಕರರ ನಿದ್ದೆಗೆಡಿಸಲಿದೆ. ಹಾಗೆಯೇ ಲೋಕಾಯುಕ್ತ ಸಂಸ್ಥೆಯೊಂದಿಗೇ ಸರ್ಕಾರಿ ಅಧಿಕಾರಿ, ನೌಕರರ ಸಂಘರ್ಷಕ್ಕಿಳಿಯುವ ಸಾಧ್ಯತೆಯೂ ಇದೆ ಎಂಬ ಮಾತುಗಳು ಕೇಳಿ ಬಂದಿವೆ.

 

ನಗರಾಭಿವೃದ್ಧಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮತ್ತು ಈ ಇಲಾಖೆಯ ವ್ಯಾಪ್ತಿಗೆ ಒಳಪಡುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಜಲ ಮಂಡಳಿ, ಬಿಬಿಎಂಪಿ, ಬಿಎಂಆರ್‌ಡಿಎ ಸೇರಿದಂತೆ ರಾಜ್ಯಾದ್ಯಂತ  ನಿಗಮ, ಮಂಡಳಿ, ನಗರಾಭಿವೃದ್ದಿ ಪ್ರಾಧಿಕಾರಗಳಲ್ಲಿನ ಅಧಿಕಾರಿ ಸಿಬ್ಬಂದಿಯವರ ಸೇವಾ ಪುಸ್ತಕ, ಆಸ್ತಿದಾಯಿತ್ವ ಪಟ್ಟಿಗಳನ್ನು ಪರಿಶೀಲನೆ ಮಾಡಲು ಲೋಕಾಯುಕ್ತ ಅಧಿಕಾರಿಗಳಿಗೆ  ಅನುಮತಿ ನೀಡಬೇಕು ಎಂದು ಅನುಮತಿ ಕೋರಿರುವುದು ಪತ್ರದಿಂದ ತಿಳಿದು ಬಂದಿದೆ.

 

 

‘ನಗರಾಭಿವೃದ್ಧಿ ಇಲಾಖೆ ಮತ್ತು ಈ ಇಲಾಖೆ ವ್ಯಾಪ್ತಿಯಲ್ಲಿನ ಅಧಿಕಾರಿ, ಸಿಬ್ಬಂದಿಯವರ ಎಸ್‌ ಅರ್‌ ಬುಕ್‌ ಮತ್ತು ಆಸ್ತಿದಾಯಿತ್ವ ಪಟ್ಟಿಗಳನ್ನು ಪರಿಶೀಲಿಸಬೇಕಾಗಿರುತ್ತದೆ. ಈ ಕುರಿತಾಗಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಬೆಂಗಳೂರು ನಗರ ವಿಭಾಗದಿಂದ ಸೇವಾ ಪುಸ್ತಕ ಹಾಗೂ ಆಸ್ತಿ ದಾಯಿತ್ವ ಪಟ್ಟಿಗಳನ್ನು ಪರಿಶೀಲಿಸಬೇಕಾಗಿದೆ. ಪೊಲೀಸ್‌ ಉಪಾಧೀಕ್ಷಕ ವಸಂತ್‌ ಸಿ, ಇನ್ಸ್‌ಪೆಕ್ಟರ್‌ ಎ ಎಸ್ ಗುದಿಗೊಪ್ಪ ಅವರನ್ನು ನೇಮಕ ಮಾಡಿದೆ,’ ಎಂದು ಪತ್ರದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಲೋಕಾಯುಕ್ತ ಪೊಲೀಸ್‌ ವಿಭಾಗದ ಬೆಂಗಳೂರು ನಗರ ಘಟಕವು ನೇಮಿಸಿರುವ ಅಧಿಕಾರಿಗಳಿಗೆ ಎಸ್‌ ಅರ್‌ ಬುಕ್‌ ಮತ್ತು ಆಸ್ತಿ ದಾಯಿತ್ವ ಪಟ್ಟಿಗಳನ್ನು ಪರಿಶೀಲಿಸಲು ಅನುಮತಿ ನೀಡಬೇಕು ಎಂದು ಕೋರಿರುವುದು ತಿಳಿದು ಬಂದಿದೆ.

 

ಸರ್ಕಾರಿ ನೌಕರರು ಹೊಂದಿರುವ ಎಲ್ಲಾ ಬಗೆಯ  ಆಸ್ತಿ ವಿವರಗಳ ಮಾಹಿತಿಯನ್ನು ವೆಬ್‌ ಹೋಸ್ಟ್‌ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಚರ್ಚೆಗೂ ಸಿದ್ಧ ಎಂಬ ಸಂದೇಶವನ್ನೂ ರವಾನಿಸಿದ್ದರು.

 

 

 

 

ರಾಜ್ಯ ಸರ್ಕಾರಿ ನೌಕರರು ಮತ್ತು ಅಖಿಲ ಭಾರತ ಸೇವೆಗಳ ನಿಯಮಗಳು 1968 ರ ನಿಯಮ (16) ಗಳ ಪ್ರಕಾರ  ಐಎಎಸ್, ಐಪಿಎಸ್ ಮತ್ತು ಐಎಫ್ಎಸ್ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಪ್ರತಿ ಸರ್ಕಾರಿ ನೌಕರರು ತಮ್ಮ ಮೊದಲ ನೇಮಕಾತಿ ದಿನದಿಂದಲೇ  ಪ್ರತಿ 12 ತಿಂಗಳ ಮಧ್ಯಂತರದಲ್ಲಿ ಅವರ ಆಸ್ತಿ ಮತ್ತು ಹೊಣೆಗಾರಿಕೆಗಳ ವಿವರಗಳನ್ನು ಮತ್ತು ಎಲ್ಲಾ ಸದಸ್ಯರ ವಿವರಗಳನ್ನು ಸಲ್ಲಿಸಬೇಕು. ಸಲ್ಲಿಸದಿದ್ದಲ್ಲಿ ಇದು ಅಧಿಕಾರಿಗಳ ದುರ್ನಡತೆ ಯಾಗಿದೆ  ಎಂದು ನಿಯಮದಲ್ಲಿ ವಿವರಿಸಲಾಗಿದೆ. ಈ ಅಂಶವನ್ನು  ನಿಬಂಧಕರು  ಪತ್ರದಲ್ಲಿ ಉಲ್ಲೇಖಿಸಿದ್ದರು.

ಸರ್ಕಾರಿ ನೌಕರರ ಆಸ್ತಿ ವಿವರ; ಮಾಹಿತಿ ನೀಡದ ಮುಖ್ಯಸ್ಥರ ವರ್ತನೆಗೆ ಗರಂ, ರಂಗ ಪ್ರವೇಶ ಮಾಡಿದ ಲೋಕಾಯುಕ್ತ

ಸಾರ್ವಜನಿಕ ನೌಕರರ  ಆಸ್ತಿ, ಆಸ್ತಿಗಳ ವಿವರಗಳನ್ನು ಒದಗಿಸಬೇಕು ಎಂದು ಸೂಚಿಸಿದರೂ ಸಹ ಕೆಲವು ಇಲಾಖೆಗಳ ಇಲಾಖಾ ಮುಖ್ಯಸ್ಥರು ಅಥವಾ ಸಕ್ಷಮ ಪ್ರಾಧಿಕಾರವು ನಿರ್ಲಕ್ಷ್ಯಿಸುತ್ತಿದೆ. ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ ಎಂದು ನಿಬಂಧಕರು ಅಸಮಾಧಾನ ವ್ಯಕ್ತಪಡಿಸಿದ್ದರು.

 

‘ಕೆಲವು ಇಲಾಖೆಗಳ ಮುಖ್ಯಸ್ಥರ ವರ್ತನೆಯು ಸಂಬಂಧಿತ ನಿಯಮಗಳಿಗೆ ವಿರುದ್ಧವಾಗಿದೆ. ಅಲ್ಲದೇ ಇಂತಹ ಸರ್ಕಾರಿ ನೌಕರರನ್ನು ರಕ್ಷಿಸುವ ಗುರಿ ಹೊಂದಿದೆ,’ ಎಂದು ಪತ್ರದಲ್ಲಿ ಹೇಳಿದ್ದರು.

 

 

ವಾಸ್ತವವಾಗಿ, ಈ ಮಾಹಿತಿಯನ್ನು ವೆಬ್‌ಹೋಸ್ಟ್ ಮಾಡಲಾಗಿದೆಯೇ ಎಂದು  ಖಚಿತಪಡಿಸಿಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ. ಈ ಮಾಹಿತಿಯನ್ನು ವೆಬ್‌ ಹೋಸ್ಟ್‌ ಮಾಡಬೇಕು ಎಂದು ಎಲ್ಲಾ ಇಲಾಖೆಗಳ  ಮುಖ್ಯಸ್ಥರಿಗೆ ನಿರ್ದೇಶನ ನೀಡಬಹುದು. ಇದು ಸಾಧ್ಯವಾದರೇ   ಯಾವುದೇ ಶಂಕಿತ ಅಧಿಕಾರಿಗಳ ಆಸ್ತಿಯನ್ನು ಸಂಬಂಧಪಟ್ಟ ತನಿಖಾಧಿಕಾರಿಗಳೇ  ಪರಿಶೀಲಿಸಬಹುದು. ಆಸ್ತಿ  ವಿವರಗಳನ್ನು ಒದಗಿಸಿ ಎಂದು   ಇಲಾಖೆಯ ಮುಖ್ಯಸ್ಥರನ್ನು ಪ್ರತಿಬಾರಿಯೂ  ಸಂಪರ್ಕಿಸುವ ಅಗತ್ಯವಿರುವುದಿಲ್ಲ ಎಂದೂ ಪತ್ರದಲ್ಲಿ ವಿವರಿಸಿದ್ದರು.

 

 

ಅಲ್ಲದೇ  ‘ಈ ನಿಟ್ಟಿನಲ್ಲಿ ಯಾವುದೇ ಹೆಚ್ಚಿನ ಮಾಹಿತಿ ಅಥವಾ ವಿವರಗಳ ಅಗತ್ಯವಿದ್ದರೆ, ಲೋಕಾಯುಕ್ತರು ನಿಮ್ಮೊಂದಿಗೆ ಈ ವಿಷಯದಲ್ಲಿ ಚರ್ಚೆ ನಡೆಸಲು ಸಿದ್ಧರಿದ್ದಾರೆ. ಈ ಕುರಿತು  ಎರಡು ವಾರದೊಳಗಾಗಿ ವರದಿ ನೀಡಬೇಕು,’ ಎಂದು ಪತ್ರದಲ್ಲಿ ತಿಳಿಸಿದ್ದರು.

 

ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಡಿಜಿಐಜಿಪಿ ಪ್ರವೀಣ್‌ ಸೂದ್‌ ಸೇರಿದಂತೆ ರಾಜ್ಯದ ಐಎಎಸ್‌, ಐಪಿಎಸ್‌ ಅಧಿಕಾರಿಗಳು ಸಲ್ಲಿಸಿರುವ ಸ್ಥಿರಾಸ್ತಿ ವಿವರಗಳು ಕೇಂದ್ರ ಸರ್ಕಾರದ ಅಧಿಕೃತ ಜಾಲತಾಣ ಡಿಒಪಿಟಿಯಲ್ಲಿ ಸಾರ್ವಜನಿಕರಿಗೆ ಲಭ್ಯವಿದ್ದರೂ ಹಿಂದಿನ  ಬಿಜೆಪಿ ಸರ್ಕಾರವು ಆರ್‌ಟಿಐ ಅಡಿಯಲ್ಲಿ ನೀಡದೇ ಮುಚ್ಚಿಟ್ಟಿತ್ತು.

 

 

ಮುಖ್ಯ ಕಾರ್ಯದರ್ಶಿ, ಡಿಜಿಪಿ ಸೇರಿ ಐಎಎಸ್‌, ಐಪಿಎಸ್‌ ಅಧಿಕಾರಿಗಳ ಆಸ್ತಿ ವಿವರ ಮುಚ್ಚಿಟ್ಟ ಸರ್ಕಾರ

 

ಬಹುತೇಕ ಅಧಿಕಾರಿಗಳು ಘೋಷಣೆ ಮಾಡುವ ನಮೂನೆಯಲ್ಲಿ ಏನನ್ನೂ ಮಾಹಿತಿ ಒದಗಿಸದೆಯೇ ಖಾಲಿ ನಮೂನೆಗಳನ್ನು ಸಿಬ್ಬಂದಿ ಆಡಳಿತ ತರಬೇತಿ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಅಪ್‌ಲೋಡ್‌ ಮಾಡಿದ್ದರು.  ಅದೇ ರೀತಿ ಕಳೆದ 10 ವರ್ಷಗಳಿಂದಲೂ ಅಖಿಲಭಾರತ ಸೇವೆಯಲ್ಲಿರುವ ಹಲವು ಅಧಿಕಾರಿಗಳೂ ತಮ್ಮ ಬಳಿ ಒಂದೇ ಒಂದು ಸ್ಥಿರಾಸ್ತಿಯೂ ಇಲ್ಲ ಎಂದು ಘೋಷಿಸಿದ್ದರು. ಹಾಗೆಯೇ ಮಾರುಕಟ್ಟೆ ಬೆಲೆಯನ್ನೂ ಕೆಲ ಅಧಿಕಾರಿಗಳು ಘೋಷಿಸಿರಲಿಲ್ಲ.

 

ಸ್ಥಿರಾಸ್ತಿ; ಮಾರುಕಟ್ಟೆ ಬೆಲೆ ಘೋಷಿಸದ ಸಿಂಧೂರಿ, ಪತಿ ಆಸ್ತಿ ವಿವರವನ್ನೂ ನಿಗೂಢವಾಗಿಟ್ಟರೇ?

 

ಆದಾಯ ತೆರಿಗೆ ಸಲ್ಲಿಸುವ ಸಂದರ್ಭದಲ್ಲೇ ಚರಾಸ್ತಿ ವಿವರಗಳನ್ನು ಘೋಷಿಸುವುದರಿಂದ ಪ್ರತ್ಯೇಕವಾಗಿ ಭಾರತ ಸರ್ಕಾರಕ್ಕೆ ಸಲ್ಲಿಸುವ ಪ್ರಮೇಯವಿಲ್ಲ ಎಂದು ಕೆಲ ಐಎಎಸ್‌, ಐಪಿಎಸ್‌ ಮತ್ತು ಐಎಫ್‌ಎಸ್‌ ಅಧಿಕಾರಿಗಳು ಕುಂಟು ನೆಪವೊಡ್ಡಿದ್ದರು.

 

ಆಸ್ತಿ ವಿವರ ಸಲ್ಲಿಸದ 9 ಐಎಎಸ್‌, 19 ಐಪಿಎಸ್‌ ಅಧಿಕಾರಿಗಳ ಪಟ್ಟಿ ಬಹಿರಂಗ

 

ಸಾರ್ವಜನಿಕ ನೌಕರನು (ಆಸ್ತಿಗಳ ವಿವರಗಳ ವಾರ್ಷಿಕ ಸಲ್ಲಿಕೆ ಮತ್ತು ಮಾಹಿತಿ ಘೋಷಣೆ ಹಾಗೂ ಆಸ್ತಿಗಳ ವಿನಾಯಿತಿಯ ಮಿತಿ) 2014ರ ಪರಿಷ್ಕೃತ ನಿಯಮದ ಪ್ರಕಾರ ಅಧಿಸೂಚನೆ ಸಂಖ್ಯೆ ಜಿಎಸ್‌ಆರ್‌ 918(ಇ- 2014ರ ಡಿಸೆಂಬರ್‌ 26ರಲ್ಲಿ ಸೂಚಿಸಿರುವ ನಮೂನೆ 2 ಮತ್ತು 4 ರ ಪ್ರಕಾರ ಚರಾಸ್ತಿ, ಸಾಲ , ಹೊಣೆಗಾರಿಕೆಯ ವಿವರಗಳನ್ನು ಸಲ್ಲಿಸಬೇಕು ಇದೇ ಪತ್ರದಲ್ಲಿಯೇ ಪ್ರಸ್ತಾಪಿಸಿತ್ತು. ಅಲ್ಲದೆ ನಮೂನೆಗಳ ಮಾದರಿಗಳನ್ನೂ ಒದಗಿಸಿತ್ತು. ಆದರೂ ಆಸ್ತಿಗೆ ಸಂಬಂಧಿಸಿದ ಹಲವು ಮಾಹಿತಿಗಳು ಅಪೂರ್ಣವಾಗಿದ್ದವು.

 

ಸ್ಥಿರಾಸ್ತಿ ವಿವರ ಅಪೂರ್ಣ, ಲಕ್ಷಾಂತರ ರು. ಬಾಡಿಗೆ ಆದಾಯ, ಖರೀದಿ ಮೂಲ ಮುಚ್ಚಿಟ್ಟರೇ ಐಎಎಸ್‌ ಅಧಿಕಾರಿಗಳು?

 

ಅಖಿಲ ಭಾರತ ಸೇವೆ ಅಧಿಕಾರಿಗಳು ಕಳೆದ ಆರೇಳು ವರ್ಷದಿಂದಲೂ  ಪೂರ್ಣ ವಿವರಗಳನ್ನು ಒದಗಿಸಿಲ್ಲ.  ಹಾಗೆಯೇ ಚರಾಸ್ತಿಗಳ ವಿವರಗಳನ್ನು ಒದಗಿಸುವ ನಮೂನೆಯನ್ನೂ ಭಾರತ ಸರ್ಕಾರಕ್ಕೆ ಸಲ್ಲಿಸುತ್ತಿಲ್ಲ.  ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಮುಖ್ಯಮಂತ್ರಿಗಳ ಬಳಿಯೇ ಇದ್ದರೂ ಈ ಹಿಂದಿನ ಮೂವರು ಮುಖ್ಯಮಂತ್ರಿಗಳು ಭಾರತ ಸರ್ಕಾರದ ಸೂಚನೆಯತ್ತ ಪರಿಗಣಿಸದೇ ನಿರ್ಲಕ್ಷ್ಯ ವಹಿಸಿದ್ದರು.

 

ಉಲ್ಲಂಘನೆ; ಮುಖ್ಯಕಾರ್ಯದರ್ಶಿ, ಡಿಜಿಐಜಿ, ಅಧಿಕಾರಿಗಳು ಚರಾಸ್ತಿ ಗೌಪ್ಯವಾಗಿಟ್ಟರೇ?

 

ಅಲ್ಲದೆ ಕೈಯಲ್ಲಿರುವ ನಗದು, ಬ್ಯಾಂಕ್ ಠೇವಣಿ, ಬಾಂಡ್, ಡಿಬೆಂಚರ್, ಷೇರು, ಮ್ಯೂಚುಯಲ್ ಫಂಡ್‌ ಗಳಲ್ಲಿನ ಹೂಡಿಕೆ, ವಿಮೆ, ಫ್ರಾವಿಡೆಂಡ್ ಫಂಟ್, ವೈಯಕ್ತಿಕ ಸಾಲ, ಬೇರೆ ವ್ಯಕ್ತಿಗಳಿಗೆ ನೀಡಿರುವ ಸಾಲ ಮುಂತಾದ ವಿವರಗಳನ್ನು ಸಲ್ಲಿಸಬೇಕು. ಉದ್ಯೋಗಿಗಳು ಹೊಸ ನಿಯಮದಂತೆ ಹೊಂದಿರುವ ವಾಹನ ವಾಹನ ಚಿನ್ನಬೆಳ್ಳಿ ಆಭರಣಗಳು, ಗಟ್ಟಿಗಳ ವಿವರಗಳನ್ನು ಘೋಷಿಸಬೇಕು.

 

ಐಜಿ ಚಂದ್ರಶೇಖರ್‌, ಸತ್ಯವತಿ ಸೇರಿ 64 ಅಧಿಕಾರಿಗಳ ಬಳಿ ಸ್ಥಿರಾಸ್ತಿಯೇ ಇಲ್ಲ

 

ಲೋಕಾಯುಕ್ತ ಸಂಸ್ಥೆಯ ರಿಜಿಸ್ಟ್ರಾರ್ ಅವರು ಬರೆದಿರುವ ಪತ್ರದ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

SUPPORT THE FILE

Latest News

Related Posts