ಸ್ಥಿರಾಸ್ತಿ; ಮಾರುಕಟ್ಟೆ ಬೆಲೆ ಘೋಷಿಸದ ಸಿಂಧೂರಿ, ಪತಿ ಆಸ್ತಿ ವಿವರವನ್ನೂ ನಿಗೂಢವಾಗಿಟ್ಟರೇ?

ಬೆಂಗಳೂರು; ಮೈಸೂರಿನ ವಿವಾದಿತ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ ಅವರು ತಮ್ಮ ಕುಟುಂಬ ಹೊಂದಿರುವ ಅವಿಭಜಿತ ಸ್ಥಿರಾಸ್ತಿಗಳ ಪ್ರಸಕ್ತ ಸರ್ಕಾರಿ ಮಾರ್ಗಸೂಚಿ  ಮೌಲ್ಯವನ್ನು ಮಾತ್ರ ನಮೂದಿಸಿ ಪ್ರಸಕ್ತ ಮಾರುಕಟ್ಟೆ ಬೆಲೆಯನ್ನು ಆಸ್ತಿದಾಯಿತ್ವ ಪಟ್ಟಿಯಲ್ಲಿ ಘೋಷಿಸಿಲ್ಲ. ಹಾಗೆಯೇ ಸಿಂಧೂರಿ ಅವರು ತಮ್ಮ ಪತಿ ಸುಧೀರ್‌ ರೆಡ್ಡಿ ಅವರ ವಿವರಗಳನ್ನೂ ಪಟ್ಟಿಯಲ್ಲಿ ಘೋಷಿಸಿಲ್ಲ. ಹೀಗಾಗಿ ಸುಧೀರ್‌ ರೆಡ್ಡಿ ಅವರು ಸ್ಥಿರಾಸ್ತಿ ಹೊಂದಿದ್ದಾರೆಯೇ ಅಥವಾ ಇಲ್ಲವೇ ಎಂಬುದು ನಿಗೂಢವಾಗಿ ಉಳಿದಿದೆ.

ಮೈಸೂರಿನ ಭೂ ಹಗರಣಗಳ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ರೋಹಿಣಿ ಸಿಂಧೂರಿ ಅವರು ಒತ್ತಾಯಿಸಿರುವ ಬೆನ್ನಲ್ಲೇ ಅವರು ಆಸ್ತಿ ದಾಯಿತ್ವ ಪಟ್ಟಿಯಲ್ಲಿ ನಮೂದಿಸಿರುವ ಸ್ಥಿರಾಸ್ತಿ ವಿವರಗಳು ಮುನ್ನೆಲೆಗೆ ಬಂದಿದೆ.

ತಮ್ಮ ತಂದೆ ಮತ್ತು ತಾಯಿ ಹೆಸರಿನಲ್ಲಿ ಆಸ್ತಿ ಖರೀದಿಸಲಾಗಿದೆ ಎಂಬ ವಿವರಗಳನ್ನು ಆಸ್ತಿ ದಾಯಿತ್ವ ಪಟ್ಟಿಯಲ್ಲಿ ಒದಗಿಸಿದ್ದಾರಾದರೂ ಆಸ್ತಿಯನ್ನು ಯಾವ ವರ್ಷದಲ್ಲಿ ಮತ್ತು ಯಾವ ಬೆಲೆಗೆ ಖರೀದಿಸಲಾಗಿತ್ತು ಎಂಬ ವಿವರಗಳನ್ನು ಒದಗಿಸದಿರುವುದು ತಿಳಿದು ಬಂದಿದೆ. ಪತಿ ಸುಧೀರ್‌ ರೆಡ್ಡಿ ಅವರು ಹೊಂದಿರುವ ಸ್ಥಿರಾಸ್ತಿ ವಿವರಗಳನ್ನು ಆಸ್ತಿ ದಾಯಿತ್ವ ಪಟ್ಟಿಯಲ್ಲಿ ಘೋಷಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

2010ರ ನವೆಂಬರ್ 13ರಂದು ಸುಧೀರ್‌ರೆಡ್ಡಿ ಅವರೊಂದಿಗೆ ವಿವಾಹ ಮಾಡಿಕೊಳ್ಳಲಾಗಿದೆ ಎಂದು 2011ರ ಆಸ್ತಿ ದಾಯಿತ್ವ ಪಟ್ಟಿಯಲ್ಲಿ ಘೋಷಿಸಿರುವ ರೋಹಿಣಿ ಸಿಂಧೂರಿ ಅವರು ಪತಿ ಹೊಂದಿರುವ ಸ್ಥಿರಾಸ್ತಿ ವಿವರಗಳು ತಿಳಿದು ಬಂದಿಲ್ಲ. ಮದುವೆ ಸಂದರ್ಭದಲ್ಲಿ ಮೊದಲ ಸಲ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ತನ್ನ ಗಂಡನ/ಕುಟುಂಬದ ಆಸ್ತಿ ವಿವರಗಳು ಸಂಪೂರ್ಣವಾಗಿ ನನಗೆ ಸರಿಯಾಗಿ ತಿಳಿದಿಲ್ಲ. ಮುಂದಿನ ದಿನಗಳಲ್ಲಿ ವಿವರಗಳು ಸಿಕ್ಕ ತಕ್ಷಣ ಅದನ್ನು ಸಲ್ಲಿಸಲಾಗುವುದು ಎಂದು ಘೋಷಿಸಿದ್ದಾರೆ.

2010ರಿಂದ 2021ರ ಜನವರಿ ಅಂತ್ಯದವರೆಗೆ ಸಿಂಧೂರಿ ಅವರು ಸಲ್ಲಿಸಿರುವ ಆಸ್ತಿದಾಯಿತ್ವ ಪಟ್ಟಿಯಲ್ಲಿ ಎಲ್ಲಿಯೂ ಪತಿ ಹೆಸರಾಗಲಿ ಮತ್ತು ಉಳಿದ ಯಾವ ವಿವರಗಳನ್ನೂ ಘೋಷಿಸಿಲ್ಲ. ಹೀಗಾಗಿ ಅವರು 10 ವರ್ಷಗಳು ಕಳೆದರೂ ಸ್ಥಿರಾಸ್ತಿ ಹೊಂದಿದ್ದಾರೆಯೇ ಅಥವಾ ಇಲ್ಲವೇ ಎಂಬುದು ನಿಗೂಢವಾಗಿ ಉಳಿದಂತಾಗಿದೆ.

ಸ್ಥಿರಾಸ್ತಿಗಳ ಸರ್ಕಾರಿ ಮಾರ್ಗಸೂಚಿ ದರ ಮತ್ತು ಮಾರುಕಟ್ಟೆ ಬೆಲೆಯಲ್ಲಿ ಬದಲಾವಣೆ ಅಥವಾ ಪರಿಷ್ಕರಣೆಗೆ ಒಳಗಾಗುತ್ತಿರುತ್ತದೆ. ಆದರೆ ತೆಲಂಗಾಣದಲ್ಲಿ ಸ್ಥಿರಾಸ್ತಿ ಮಾರ್ಗಸೂಚಿ ದರವನ್ನು 2013ರಿಂದ ಪರಿಷ್ಕರಣೆಯಾಗಿಲ್ಲ ತಿಳಿದು ಬಂದಿದೆ. ಹೀಗಾಗಿ ಕಳೆದ 7 ವರ್ಷಗಳಿಂದಲೂ ಒಂದೇ ತೆರನಾದ ಪ್ರಸಕ್ತ ಮೌಲ್ಯವನ್ನು ಆಸ್ತಿ ದಾಯಿತ್ವ ಪಟ್ಟಿಯಲ್ಲಿ ನಮೂದಿಸುತ್ತಿದ್ದಾರಾದರೂ ಪ್ರಸಕ್ತ ಮಾರುಕಟ್ಟೆ ಬೆಲೆಯನ್ನು ನಮೂದಿಸಿಲ್ಲ.

ರೋಹಿಣಿ ಸಿಂಧೂರಿ ಅವರು ಕೇಂದ್ರ ಸರ್ಕಾರಕ್ಕೆ 2011ರಿಂದ 2021ರ ಜನವರಿವರೆಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಆಸ್ತಿ ದಾಯಿತ್ವ ಪಟ್ಟಿ ‘ದಿ ಫೈಲ್‌’ಗೆ ಲಭ್ಯವಾಗಿದೆ. 10 ವರ್ಷಗಳಿಂದಲೂ ಸಲ್ಲಿಸುತ್ತಿರುವ ಆಸ್ತಿ ದಾಯಿತ್ವ ಪಟ್ಟಿಯಲ್ಲಿ ಗುತ್ತಿಗೆ ನೀಡಿರುವ ಜಮೀನು ಸೇರಿದಂತೆ ವಿವಿಧ ರೀತಿಯ ಆಸ್ತಿಗಳ ಪ್ರಸಕ್ತ ಮಾರುಕಟ್ಟೆ ಮೌಲ್ಯವನ್ನು ಘೋಷಿಸಿಲ್ಲದಿರುವುದು ತಿಳಿದು ಬಂದಿದೆ. ಆದರೆ ಕೆಲ ಐಎಎಸ್‌ ಅಧಿಕಾರಿಗಳು ಪ್ರಸಕ್ತ ಮಾರುಕಟ್ಟೆ ಮೌಲ್ಯವನ್ನು ಆಸ್ತಿ ದಾಯಿತ್ವ ಪಟ್ಟಿಯಲ್ಲಿ ಘೋಷಿಸಿರುವುದು ಅವರ ಆಸ್ತಿ ದಾಯಿತ್ವ ಪಟ್ಟಿಯಿಂದ ತಿಳಿದು ಬಂದಿದೆ.

ಕಮ್ಮಂ ಜಿಲ್ಲೆಯ ಕಲ್ಲೂರು ಮಂಡಲ್‌, ಹೈದರಾಬಾದ್‌, ತಲ್ಲಾಪುರನಲ್ಲಿ ರೋಹಿಣಿ ಸಿಂಧೂರಿ ಅವರ ಕುಟುಂಬ ವಿವಿಧ ರೀತಿಯ ಆಸ್ತಿ ಹೊಂದಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ತಮ್ಮ ತಂದೆ, ತಾಯಿ ಹೆಸರಿನಲ್ಲಿ ಪಿತ್ರಾರ್ಜಿತ ಅಸ್ತಿ ಮತ್ತು ಅವರ ಹೆಸರಿನಲ್ಲಿಯೇ ಕೆಲ ಆಸ್ತಿಗಳು ಖರೀದಿಯಾಗಿವೆ ಎಂದು ಗೊತ್ತಾಗಿದೆ.

ಸಿಂಧೂರಿ ಹೆಸರಿನಲ್ಲಿದೆ ಒಂದೇ ಒಂದು ನಿವೇಶನ

ಬೆಂಗಳೂರಿನ ಸೀಗೆಹಳ್ಳಿಯಲ್ಲಿ ಮೆಟ್ರೋಪಾಲಿಟಿನ್‌ ಹೌಸಿಂಗ್‌ ಸೊಸೈಟಿಯು ನಿರ್ಮಿಸಿರುವ ಬಡಾವಣೆಯಲ್ಲಿ ಸಿಂಧೂರಿ ಅವರ ಹೆಸರಿಗೆ ಹಂಚಿಕೆಯಾಗಿರುವ ನಿವೇಶನ (4,123 ಸ್ಕೈಯರ್‌ ಫೀಟ್‌) ಹೊರತುಪಡಿಸಿ ಉಳಿದೆಲ್ಲಾ ಆಸ್ತಿಯು ತಮ್ಮ ತಂದೆ ಮತ್ತು ತಾಯಿ ಹೆಸರಿನಲ್ಲಿದೆ ಎಂದು ಘೋಷಿಸಿದ್ದಾರೆ. ಆದರೆ ಈ ನಿವೇಶನದ ಪ್ರಸಕ್ತ ಮಾರುಕಟ್ಟೆ ಮೌಲ್ಯವನ್ನು ಘೋಷಿಸದಿರುವುದು ಆಸ್ತಿದಾಯಿತ್ವ ಪಟ್ಟಿಯಿಂದ ತಿಳಿದು ಬಂದಿದೆ.

2011-2021ರವರೆಗೆ ಘೋಷಿಸಿರುವ ಆಸ್ತಿ -ಪ್ರಸಕ್ತ ಮೌಲ್ಯದ ವಿವರ

ಖಮ್ಮಂ ಜಿಲ್ಲೆಯ ಕಲ್ಲೂರು ಮಂಡಲ್‌ನಲ್ಲಿ 1,122 ಸ್ಕೈಯರ್‌ ಯಾರ್ಡ್‌ ವಿಸ್ತೀರ್ಣವನ್ನು ಎಚ್‌ಪಿಸಿಎಲ್‌ಗೆ ಗುತ್ತಿಗೆ ನೀಡಲಾಗಿದೆ. ಈ ಜಾಗ ಪಿತ್ರಾರ್ಜಿತ ಎಂದು ಹೇಳಿರುವ ರೋಹಿಣಿ ಅವರು ಇದರ ಪ್ರಸಕ್ತ ಮೌಲ್ಯವನ್ನು 1.00 ಕೋಟಿ ಎಂದು ಘೋಷಿಸಿದ್ದಾರೆ. ಅದೇ ರೀತಿ ರುದ್ರಾಕ್ಷಪಾಳ್ಯ ಸೆಟ್ಟುಪಾಳ್ಯದಲ್ಲಿ 55 ಎಕರೆ ವಿಸ್ತೀರ್ಣದ ಕೃಷಿ ಭೂಮಿ ಪಿತ್ರಾರ್ಜಿತವಾಗಿ ಬಂದಿದೆಯಲ್ಲದೆ ಅದು ತಮ್ಮ ತಂದೆಯ ಹೆಸರಿನಲ್ಲಿದೆ ಎಂದು ಮಾಹಿತಿ ಒದಗಿಸಿದ್ದಾರೆ. ಇದರ ಪ್ರಸಕ್ತ ಮೌಲ್ಯವನ್ನು 2.5 ಕೋಟಿ ಎಂದು ಘೋಷಿಸಿರುವುದು ಪಟ್ಟಿಯಿಂದ ತಿಳಿದು ಬಂದಿದೆ.

ಖಮ್ಮಂ ಜಿಲ್ಲೆಯಲ್ಲಿ 1,300 ಸ್ಕೈಯರ್‌ ಯಾರ್ಡ್‌ ವಿಸ್ತೀರ್ಣ ಹೊಂದಿರುವ ಜಾಗವನ್ನು ಹೋಟೆಲ್‌ಗೆ ಗುತ್ತಿಗೆ ನೀಡಲಾಗಿದೆ. ಈ ಆಸ್ತಿ ತಮ್ಮ ತಾಯಿ ಖರೀದಿಸಿದ್ದಾರೆ ಎಂದು ಹೇಳಿರುವ ರೋಹಿಣಿ ಅವರು ಇದರ ಪ್ರಸಕ್ತ ಮೌಲ್ಯವನ್ನು 1.5 ಕೋಟಿ ರು. ಎಂದು ಘೋಷಿಸಿದ್ದಾರೆ. ಹಾಗೆಯೇ ಖಮ್ಮಂನಲ್ಲಿ ತಮ್ಮ ತಂದೆ ಖರೀದಿಸಿರುವ 1 ಎಕರೆ ವಿಸ್ತೀರ್ಣದ ಮನೆಯನ್ನು ಬಾಡಿಗೆ ನೀಡಲಾಗಿದೆ ಎಂದು ಪಟ್ಟಿಯಲ್ಲಿ ನಮೂದಿಸಿರುವ ಅವರು ಇದರ ಪ್ರಸಕ್ತ ಮೌಲ್ಯವನ್ನು 1 ಕೋಟಿ ಎಂದು ಘೋಷಿಸಿರುವುದು ಅವರು ಸಲ್ಲಿಸಿರುವ ಪಟ್ಟಿಯಿಂದ ಗೊತ್ತಾಗಿದೆ.

ಹೈದರಾಬಾದ್‌ನಲ್ಲಿ ತಾಯಿ ಹೆಸರಿನಲ್ಲಿ 3 ಫ್ಲಾಟ್‌ಗಳು ಖರೀದಿಯಾಗಿವೆ ಎಂದು ನಮೂದಿಸಲಾಗಿದೆಯಲ್ಲದೆ ಇದರ ಪ್ರಸಕ್ತ ಮೌಲ್ಯ 1 ಕೋಟಿ ಎಂದು ಘೋಷಿಸಿದ್ದಾರೆ. ಮೇದಕ್‌ ಜಿಲ್ಲೆಯ ತಲ್ಲಾಪುರ್‌ನಲ್ಲಿ ತಂದೆಯ ಹೆಸರಿನಲ್ಲಿ 40 ಲಕ್ಷ ರು.ಮೌಲ್ಯದ 500 ಸ್ಕೈಯರ್‌ ಯಾರ್ಡ್‌ ಹೊಂದಿದೆ ಎಂದು ಹೇಳಿರುವ ರೋಹಿಣಿ ಅವರು ತಂದೆಯ ಹೆಸರಿನಲ್ಲಿಯೇ ರಂಗಾರೆಡ್ಡಿ ಜಿಲ್ಲೆಯ ಶಂಶಾಬಾದ್‌ನಲ್ಲಿ 250 ಮತ್ತು 350 ಸ್ಕೈಯರ್‌ ಯಾರ್ಡ್‌ ವಿಸ್ತೀರ್ಣದ ಜಾಗ ಹೊಂದಿದೆ ಎಂದು ಹೇಳಿದ್ದಾರೆ. ಆದರೆ ಇದರ ಪ್ರಸಕ್ತ ಮೌಲ್ಯವನ್ನು 2011ರಲ್ಲೂ ಘೋಷಿಸಿಲ್ಲ.

ರೋಹಿಣಿ ಸಿಂಧೂರಿ ಅವರು 2011ರಲ್ಲಿ ಆಸ್ತಿ ದಾಯಿತ್ವ ಪಟ್ಟಿಯಲ್ಲಿ ಘೋಷಿಸಿದ್ದ ಸ್ಥಿರಾಸ್ತಿಯ ವಿವರಗಳನ್ನೇ 2021ರಲ್ಲಿಯೂ ಘೋಷಿಸಿದ್ದಾರೆ. 2021ರಲ್ಲಿ ಸಲ್ಲಿಸಿರುವ ಆಸ್ತಿದಾಯಿತ್ವ ಪಟ್ಟಿಯಲ್ಲಿ ಬೆಂಗಳೂರಿನ ಸೀಗೇಹಳ್ಳಿಯಲ್ಲಿ ತಮ್ಮ ಹೆಸರಿನಲ್ಲಿ ಹಂಚಿಕೆಯಾಗಿರುವ ನಿವೇಶನ ಹೊರತಾಗಿ ಉಳಿದೆಲ್ಲಾ ಸ್ಥಿರಾಸ್ತಿ ವಿವರಗಳು 2011ರಲ್ಲಿದ್ದಂತೆ ನಮೂದಿಸಿದ್ದಾರೆ.

ಸರ್ಕಾರಿ ಮಾರ್ಗಸೂಚಿ ದರವು ಪರಿಷ್ಕರಣೆಯಾಗದಿದ್ದರೂ ಮಾರುಕಟ್ಟೆ ಬೆಲೆ ಹೆಚ್ಚಳವಾಗುತ್ತಲೇ ಇರುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿನ ಪ್ರಸಕ್ತ ಬೆಲೆಯನ್ನು ನಮೂದಿಸಬೇಕಿತ್ತು.   ಅಲ್ಲದೆ ತಮ್ಮ ಪತಿ ಹೊಂದಿರುವ ಸ್ಥಿರಾಸ್ತಿ ವಿವರಗಳನ್ನೂ  ಬಹಿರಂಗಗೊಳಿಸಿ ಪಾರದರ್ಶಕವಾಗಿರಬೇಕಿತ್ತು ಎನ್ನುತ್ತಾರೆ ಅಧಿಕಾರಿಯೊಬ್ಬರು.

the fil favicon

SUPPORT THE FILE

Latest News

Related Posts