ಬೆಂಗಳೂರು; ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆಯ ನಿಧಿಯಿಂದ ಯುವ ನಿಧಿ ಯೋಜನೆಗೆ ಒದಗಿಸಿದ್ದ 175.50 ಕೋಟಿ ರು.ನಲ್ಲಿ 2025ರ ಜನವರಿ 15ರ ಅಂತ್ಯಕ್ಕೆ ಕೇವಲ 43.88 ಕೋಟಿ ರು ಮಾತ್ರ ಬಿಡುಗಡೆಯಾಗಿದೆ. ಬಿಡುಗಡೆಗೆ ಇನ್ನು 131.62 ಕೋಟಿ ರು ಬಾಕಿ ಉಳಿಸಿಕೊಂಡಿದೆ.
ಗೃಹಜ್ಯೋತಿ, ಶಕ್ತಿ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳ ಸಂಖ್ಯೆಯನ್ನು ಇಲಾಖೆಗಳು ಸರ್ಕಾರಕ್ಕೆ ಒದಗಿಸುತ್ತಿಲ್ಲ. ಈ ನಡುವೆ ಮತ್ತೊಂದು ಗ್ಯಾರಂಟಿ ಯೋಜನೆಯಾಗಿರುವ ಯುವನಿಧಿ ಕಾರ್ಯಕ್ರಮಕ್ಕೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅಡಿಯಲ್ಲಿ ಒದಗಿಸಿದ್ದ ಅನುದಾನದಲ್ಲೇ ಕೇವಲ 43.88 ಕೋಟಿ ಮಾತ್ರ ಬಿಡುಗಡೆಯಾಗಿರುವುದು ಮುನ್ನೆಲೆಗೆ ಬಂದಿದೆ.
ಎನ್‌ಪಿಸಿಐ ಮೂಲಗಳ ಪ್ರಕಾರ 2024ರ ನವೆಂಬರ್ ಅಂತ್ಯಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ 1,77,030 ಲಕ್ಷ ಮಂದಿ ಪದವೀಧರ ನಿರುದ್ಯೋಗಿಗಳು ಯುವ ನಿಧಿ ಯೋಜನೆಗೆ ನೋಂದಾಯಿಸಿದ್ದಾರೆ. ಯುವನಿಧಿ ಭತ್ಯೆಗಾಗಿ 1.77 ಲಕ್ಷ ಮಂದಿ ನಿರುದ್ಯೋಗಿಗಳು ಕಾದು ಕುಳಿತಿದ್ದರೂ ಸಹ ಕೌಶಲ್ಯಾಭಿವೃದ್ಧಿ ಇಲಾಖೆಯು ಕೇವಲ 43.88 ಕೋಟಿ ರು ಮಾತ್ರ ಬಿಡುಗಡೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು 2025ರ ಜನವರಿ 18ರಂದು ನಡೆದಿರುವ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿಯ ನೋಡಲ್ ಏಜೆನ್ಸಿ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದೆ. ಸಭೆಯ ನಡವಳಿ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಯುವ ನಿಧಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಎಸ್‌ಸಿಎಸ್‌ಪಿ ಅಡಿ 123.50 ಕೋಟಿ ರು ಮತ್ತು ಟಿಎಸ್‌ಪಿ ಅಡಿಯಲ್ಲಿ 52.00 ಕೋಟಿ ರು ಸೇರಿ ಒಟ್ಟಾರೆ 175.50 ಕೋಟಿ ರು ಒದಗಿಸಿತ್ತು. 2025ರ ಜನವರಿ 15ರ ಅಂತ್ಯಕ್ಕೆ ಕೇವಲ 43.88 ಕೋಟಿ ರು ಅನುದಾನ ಬಿಡುಗಡೆಯಾಗಿದೆ. ಇದರಲ್ಲಿಯೂ 24.60 ಕೋಟಿ ರು ಮಾತ್ರ ವೆಚ್ಚ ಮಾಡಿರುವುದು ನಡವಳಿಯಿಂದ ಗೊತ್ತಾಗಿದೆ.
ಲಭ್ಯ ಫಲಾನುಭವಿಗಳ ಮಾಹಿತಿಯಂತೆ ಒಟ್ಟು 137.80 ಕೋಟಿ ರು ಅನುದಾನ ಅಗತ್ಯವಿದೆ. 37.70ಕೋಟಿ ರು ಉಳಿಕೆಯಾಗಲಿದೆ. ಹೀಗಾಗಿ ಈ ಮೊತ್ತವನ್ನು ಹಿಂಪಡೆಯಲು ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿರುವುದು ತಿಳಿದು ಬಂದಿದೆ.
ಕೌಶಲ್ಯಾಭಿವೃದ್ದಿ ಇಲಾಖೆಗೆ ಎಸ್‌ಸಿಎಸ್‌ಪಿ ಅಡಿಯಲ್ಲಿ 188.92 ಕೋಟಿ ರು ಹಂಚಿಕೆಯಾಗಿತ್ತು. ಇದರಲ್ಲಿ 75.65 ಕೋಟಿ ರು ಬಿಡುಗಡೆಯಾಗಿದೆ. ಈ ಪೈಕಿ ಶೇ.58.12ರಷ್ಟು ವೆಚ್ಚವಾಗಿದೆ. ಶೇ.31ರಷ್ಟು- ಬಿಡುಗಡೆಗೆ ಶೇ.77ರಷ್ಟು ಪ್ರಗತಿ ಆಗಿದೆ. ಟಿಎಸ್‌ಪಿ ಅಡಿಯಲ್ಲಿ 78.15 ಕೋಟಿ ರು ಹಂಚಿಕೆಯಾಗಿತ್ತು. ಇದರಲ್ಲಿ 32.40 ಕೊಟಿ ರು 32.40 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿಯೂ 18.76 ಕೋಟಿ ರು ವೆಚ್ಚವಾಗಿದೆ. ಇದು ಹಂಚಿಕೆಗೆ ಶೇ,24ರಷ್ಟಿರದ್ದರೇ, ಬಿಡುಗಡೆಗೆ ಶೇ.58ರಷ್ಟಿರುವುದು ನಡವಳಿಯಿಂದ ಗೊತ್ತಾಗಿದೆ.
ಕೌಶಲ್ಯಾಭಿವೃದ್ದಿ ಇಲಾಖೆಯ ಪ್ರಗತಿಯು ರಾಜ್ಯ ಸರಾಸರಿಗಿಂತ ಕಡಿಮೆ ಇದೆ. ಈ ಬಗ್ಗೆ ಕೂಡಲೇ ಹೆಚ್ಚಿನ ಪ್ರಗತಿ ಸಾಧಿಸಲು ಸೂಚಿಸಿದೆ.
ಅದೇ ರೀತಿ ಕೌಶಲ್ಯ ಮಿಷನ್ ಕಾರ್ಯಕ್ರಮದಡಿ ಒದಗಿಸಿರುವ 10.46 ಕೋಟಿ ರುಗಳಲ್ಲಿ 7.85 ಕೋಟಿ ರು ಮಾತ್ರ ಬಿಡುಗಡೆಯಾಗಿದೆ. 1.70 ಕೋಟಿ ರು ಮಾತ್ರ ವೆಚ್ಚ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಪಿಎಂಎಜೆಎಐ ಯೋಜನೆಯಡಿ ಕೌಶಲ್ಯಾಭಿವೃದ್ದಿ ತರಬೇತಿಗಾಗಿ 10 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಈ ಪೈಕಿ ಉಳಿಕೆಯಾಗಿರುವ 3.71 ಕೋಟಿ ರ.ಗಳನ್ನು ವೆಚ್ಚ ಮಾಡದೇ ಇರುವ ಕಾರಣ ಪಿಎಂಎಜೆಎಐ ಯೋಜನೆಯಡಿ ಭಾರತ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಅದ್ದರಿಂದ ಈ ಅನುದಾನವನ್ನು ಭಾರತ ಸರ್ಕಾರಕ್ಕೆ ಹಿಂದಿರುಗಿಸಬೇಕಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ತಿಳಿಸಿರುವುದು ತಿಳಿದು ಬಂದಿದೆ.
‘ಅನುದಾನ ಹಿಂದಿರುಗಿಸುವುದು ಸೂಕ್ತವಲ್ಲ. ಇದನ್ನು ಪ್ರಸಕ್ತ ಸಾಲಿನಲ್ಲಿ ವೆಚ್ಚ ಆಡಲು ಅನಮೋದನೆ ನೀಡುವಂತೆ ಭಾರತ ಸರ್ಕಾರವನ್ನು ಕೋರಬೇಕು,’ ಎಂದು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ಅವರು ಆಯುಕ್ತರಿಗೆ ಸೂಚಿಸಿರುವುದು ಗೊತ್ತಾಗಿದೆ.
ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೋಮಾ ಪದವಿದಾರರು ನಿರುದ್ಯೋಗ ಭತ್ಯೆ ಪಡೆಯಲು ಯುವನಿಧಿ ಯೋಜನೆಗಾಗಿ ಸಲ್ಲಿಸಿದ್ದ ಅರ್ಜಿಗಳನ್ನು ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್) ತಂತ್ರಾಂಶದ ಮೂಲದ 6,641 ಅರ್ಜಿಗಳನ್ನು ಅನರ್ಹಗೊಳಿಸಲಾಗಿತ್ತು.
ಯುವ ನಿಧಿ ಯೋಜನೆ; 6,641 ನಿರುದ್ಯೋಗಿಗಳ ಅನರ್ಹಗೊಳಿಸಿದ ಯುಯುಸಿಎಂಎಸ್ ತಂತ್ರಾಂಶ
ಇಂತಹ ತಂತ್ರಾಂಶದ ಮೂಲಕ 6,641 ನಿರುದ್ಯೋಗಿ ಪದವೀಧರರನ್ನು ಯುವ ನಿಧಿ ಯೋಜನೆಯಿಂದಲೇ ಅನರ್ಹಗೊಳಿಸಿರುವುದು ಚರ್ಚೆಗೆ ಗ್ರಾಸವಾಗಿತ್ತು.
ಅಲ್ಲದೇ ಐಟಿ ಮತ್ತಿ ಜಿಎಸ್‌ಟಿ ವ್ಯಾಪ್ತಿಗೊಳಪಡುವ 268 ನಿರುದ್ಯೋಗಿಗಳನ್ನೂ ಯುವ ನಿಧಿ ಯೋಜನೆಯಿಂದಲೇ ಅನರ್ಹಗೊಳಿಸಲಾಗಿದೆ. ಅದೇ ರೀತಿ ಋಣಾತ್ಮಕವಾಗಿ ಸ್ವಯಂ ಘೋಷಣೆ ಸಲ್ಲಿಸಿದ್ದ 34,670 ಮಂದಿಯನ್ನು ಯೋಜನೆಯಿಂದ ಹೊರಗಿಡಲಾಗಿದೆ.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು 2022-23, 2023-24 ಮತ್ತು 2024-25ನೇ ಸಾಲಿಗೆ ಸಂಬಂಧಿಸಿದಂತೆ ಆರ್ಥಿಕ ಪ್ರಗತಿ ಕುರಿತು ಸಭೆ ನಡೆದಿತ್ತು. ಈ ಸಭೆಯಲ್ಲಿ ಯುವ ನಿಧಿ ಯೋಜನೆಯ ಕುರಿತೂ ಚರ್ಚೆ ನಡೆದಿತ್ತು.
ಯುವ ನಿಧಿ ಯೋಜನೆಗೆ 2025ರ ಜನವರಿ 6ರ ಅಂತ್ಯಕ್ಕೆ ಒಟ್ಟಾರೆ 1,97,060 ಅಭ್ಯರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಪೈಕಿ 1,61,883 ಅರ್ಹ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮೂಲಕ 216.38 ಕೊಟಿ ರು. ಮೊತ್ತದ ನಿರುದ್ಯೋಗ ಭತ್ಯೆ ಪಾವತಿಸಲಾಗಿತ್ತು.
ಅದೇ ರೀತಿ ಯುವ ನಿಧಿ ಯೋಜನೆಗೆ ತಾತ್ಕಾಲಿಕ ಪ್ರಮಾಣ ಪತ್ರಗಳನ್ನು (ಪಿಡಿಸಿ) ವಿವಿಧ ವಿಶ್ವವಿದ್ಯಾಲಯಗಳಿಂದ ಹಾಗೂ ಬೋರ್ಡ್‌ಗಳಿಂದ ನ್ಯಾಡ್ ಪೋರ್ಟಲ್‌ನಲ್ಲಿ ಅಪ್‌ಲೋಡ ಮಾಡುವುದು ಕಡ್ಡಾಯ. ಈ ಪೋರ್ಟಲ್ ಮೂಲಕ 2023ರಲ್ಲಿ 4,88,112, 2024ರಲ್ಲಿ 2,96,697 ಮಂದಿ ತಾತ್ಕಾಲಿಕ ಪದವಿ ಪ್ರಮಾಣ ಪತ್ರ ಪಡೆದವರು ನೋಂದಣಿ ಮಾಡಿಸಿದ್ದರು.
ಪದವೀಧರರಿಗೆ ನಿರುದ್ಯೋಗಿ ಭತ್ಯೆ ನೀಡುವ ಯುವ ನಿಧಿ ಯೋಜನೆಗೆ ಮಾರ್ಚ್ 13ರ ಅಂತ್ಯಕ್ಕೆ ಒಟ್ಟು 2,409 ಅರ್ಜಿಗಳು ತಿರಸ್ಕೃತಗೊಂಡಿವೆ. ಈ ಪೈಕಿ 1,645 ಫಲಾನುಭವಿಗಳ ಆಧಾರ್ ಸಂಖ್ಯೆಯು ಬ್ಯಾಂಕ್ ಖಾತೆಯೊಡನೆ ಸೀಡ್ ಆಗಿರದ ಕಾರಣ ನೇರ ನಗದು ವರ್ಗಾವಣೆ ಆಗಿರಲಿಲ್ಲ.
ಯುವ ನಿಧಿ; 2,409 ಅರ್ಜಿಗಳು ತಿರಸ್ಕೃತ, ಮೂರು ತಿಂಗಳಲ್ಲಿ 15.89 ಕೋಟಿ ನಿರುದ್ಯೋಗ ಭತ್ಯೆ ಪಾವತಿ
ಯುವ ನಿಧಿ ಯೋಜನೆಯಡಿ ಪದವಿಧರರಿಗೆ/ಸ್ನಾತಕೋತ್ತರ ಪದವೀಧರರಿಗೆ ಪ್ರತಿ ತಿಂಗಳು 3,000 ರು ಮತ್ತು ಡಿಪ್ಲೋಮಾ ತೇರ್ಗಡೆಯಾದವರಿಗೆ ಪ್ರತಿ ತಿಂಗಳು 1,500 ರು. ನಿರುದ್ಯೋಗ ಭತ್ಯೆ ಯೋಜನೆಯಡಿ ಒಟ್ಟಾರೆ 1,43,549 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ಧಾರೆ. ಈ ಪೈಕಿ ನ್ಯಾಡ್ ಪೋರ್ಟಲ್‌ನಲ್ಲಿ 38,511 ಅಭ್ಯರ್ಥಿಗಳು ಡಿಪ್ಲೋಮಾ ಪ್ರಮಾಣ ಪತ್ರಗಳನ್ನು ಅಪ್‌ಲೋಡ್ ಮಾಡಿದ್ದರು.
ಯುವನಿಧಿ ಚಾಲನೆ ಸಮಾರಂಭಕ್ಕೆ ಕಡ್ಡಾಯವಾಗಿ ಹಾಜರಾಗಿ, ಗೈರಾದರೇ ಕಠಿಣ ಶಿಸ್ತು ಕ್ರಮ; ಸಿಮ್ಸ್ ನಿರ್ದೇಶಕರ ಎಚ್ಚರಿಕೆ
2023ರ ಡಿಸೆಂಬರ್ ಅಂತ್ಯಕ್ಕೆ 2,617 ಅಭ್ಯರ್ಥಿಗಳು 0.79 ಕೋಟಿ ರು., ಜನವರಿ 2024ರಲ್ಲಿ 21,858 ಅಭ್ಯರ್ಥಿಗಳು 6.56 ಕೋಟಿ ರು., ಫೆಬ್ರುವರಿಯ್ಲಿ 28,926 ಅಭ್ಯರ್ಥಿಗಳು 8.55 ಕೋಟಿ ರು ಸೇರಿ ಒಟ್ಟಾರೆ 15.89 ಕೋಟಿ ರು.ಮೊತ್ತದ ನಿರುದ್ಯೋಗ ಭತ್ಯೆ ಪಡೆದಿದ್ದರು.
ಯುವನಿಧಿ; ಅಂತಿಮಗೊಳ್ಳದ ರೂಪುರೇಷೆ, 5.29 ಲಕ್ಷ ಪದವೀಧರರಿಗೆ ವಾರ್ಷಿಕ 444.49 ಕೋಟಿ ರು ಅಂದಾಜು
38,511 ಅಭ್ಯರ್ಥಿಗಳ ಪೈಕಿ ತಾಂತ್ರಿಕ ಶಿಕ್ಷಣ ಇಲಾಖೆಯು 16,863, ಪ್ಯಾರಾ ಮೆಡಿಕಲ್ ಬೋರ್ಡ್ 10,254, ಜಿಟಿಟಿಸಿ 825, ಕರ್ನಾಟಕ ನರ್ಸಿಂಗ್ ಡಿಪ್ಲೋಮಾ ಪರೀಕ್ಷಾ ಮಂಡಳಿಯು 6,769, ಡಿ ಫಾರ್ಮಾದ 3,800 ಅಭ್ಯರ್ಥಿಗಳಿದ್ದಾರೆ.ಪದವೀಧರರ ಪೈಕಿ 4,84,981 ಅಭ್ಯರ್ಥಿಗಳು ಸೇರಿ ಒಟ್ಟಾರೆ 5,23, 492 ಅಭ್ಯರ್ಥಿಗಳ ಪ್ರಮಾಣ ಪತ್ರಗಳು ನ್ಯಾಡ್ ಪೋರ್ಟಲ್‌ನಲ್ಲಿ ಅಪ್ಲೋಡ್ ಆಗಿತ್ತು.
…………
ಶಕ್ತಿ ಯೋಜನೆ; ಎಸ್ ಸಿ , ಎಸ್ ಟಿ ಫಲಾನುಭವಿಗಳ ನಿಖರ ಅಂಕಿ ಅಂಶ ಒದಗಿಸದ ಸಾರಿಗೆ ಇಲಾಖೆ
………..
ಗೃಹ ಜ್ಯೋತಿ; ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳ ಅಂಕಿ ಅಂಶಗಳೇ ಸರ್ಕಾರದಲ್ಲಿಲ್ಲ
…………….