ಕೆಟ್ಟ ಆರ್ಥಿಕ ಪರಿಸ್ಥಿತಿ; ಕಾಮಗಾರಿಗಳಿಗೆ 200 ಕೋಟಿಯೂ ಇಲ್ಲ, ಸಿಎಂ ಸೇರಿ ಸಚಿವರ ಪ್ರಸ್ತಾವನೆಗಳೇ ತಿರಸ್ಕೃತ

ಬೆಂಗಳೂರು;  ಮುಖ್ಯಮಂತ್ರಿ ಸಿದ್ದರಾಮಯ್ಯ ,  ಸಚಿವ ಹೆಚ್‌ ಕೆ ಪಾಟೀಲ್, ಸತೀಶ್‌ ಜಾರಕಿಹೊಳಿ, ಕೆ ಹೆಚ್‌ ಮುನಿಯಪ್ಪ, ಎಂ ಬಿ ಪಾಟೀಲ, ಎನ್‌ ಎಸ್‌ ಬೋಸರಾಜು, ಡಾ  ಶರಣ ಪ್ರಕಾಶ್‌ ಪಾಟೀಲ, ಪ್ರಿಯಾಂಕ್ ಖರ್ಗೆ, ಎಸ್‌ ಎಸ್‌ ಮಲ್ಲಿಕಾರ್ಜುನ್‌, ಕೆ ಎನ್‌ ರಾಜಣ್ಣ ಸೇರಿದಂತೆ ಸರ್ಕಾರದ ಬಹುತೇಕ ಸಚಿವರು ಕೋರಿದ್ದ 169 ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನವೇ ಇಲ್ಲದಂತಾಗಿದೆ.

 

ಕೆರೆಗಳ ಆಧುನೀಕರಣ, ಏತ ನೀರಾವರಿ, ಪ್ರವಾಹ ನಿಯಂತ್ರಣ, ಸಣ್ಣ ಕಾಮಗಾರಿಗಳಿಗೂ ಹೆಚ್ಚುವರಿ ಅನುದಾನ ಒದಗಿಸಬೇಕು ಎಂದು 2023-24 ಮತ್ತು 2024-25ನೇ ಸಾಲಿನಲ್ಲಿಯೂ ಸಚಿವರು, ಶಾಸಕರು ಸಲ್ಲಿಸಿರುವ ಕೋರಿಕೆಗಳು,  ಪ್ರಸ್ತುತ ಆರ್ಥಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ತಿರಸ್ಕೃತಗೊಂಡಿರುವುದು ಆರ್‍ ಟಿ ಐ ದಾಖಲೆಗಳು ಬಯಲು ಮಾಡಿವೆ.

 

ವಿಶೇಷವೆಂದರೇ ಸ್ವತಃ ಸಣ್ಣ ನೀರಾವರಿ ಇಲಾಖೆಯ ಸಚಿವ ಎನ್ ಎಸ್‌ ಭೋಸರಾಜು ಅವರು ಕೋರಿದ್ದ 5.00 ಕೋಟಿ ರು. ಅನುದಾನ ಪ್ರಸ್ತಾವನೆಯೂ ತಿರಸ್ಕೃತಗೊಂಡಿದೆ.

 

ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಚೆಗಷ್ಟೇ ಹೇಳಿಕೆ ನೀಡಿದ್ದರು. ಅಲ್ಲದೇ ಪ್ರತಿಪಕ್ಷ ಬಿಜೆಪಿಯು ಅಧಿಕಾರದಲ್ಲಿದ್ದಾಗಲೇ ಹಣಕಾಸು ಪರಿಸ್ಥಿತಿ ಹದಗೆಟ್ಟಿತ್ತು ಎಂದು ತಿರುಗೇಟು ನೀಡಿದ್ದರು. ಈ ಬೆಳವಣಿಗೆ ನಡುವೆಯೇ ಸಣ್ಣ ನೀರಾವರಿ ಇಲಾಖೆಯ ಆರ್ಥಿಕ ಸ್ಥಿತಿಯ ಕುರಿತಾದ ದಾಖಲೆಗಳು ಮುನ್ನೆಲೆಗೆ ಬಂದಿವೆ.

 

ಸಣ್ಣ ನೀರಾವರಿ ಇಲಾಖೆಯಲ್ಲಿನ ವಿವಿಧ ಕಾಮಗಾರಿಗಳ ಅನುದಾನಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ ಆರ್‍‌ಟಿಐ ಅಡಿಯಲ್ಲಿ ಸಮಗ್ರ ಕಡತವನ್ನು ಪಡೆದುಕೊಂಡಿದೆ.

 

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯೊಂದರಲ್ಲೇ ಸಚಿವರು, ವಿಧಾನಸಭೆ, ವಿಧಾನ ಪರಿಷತ್‌ ಸದಸ್ಯರು, ಲೋಕಸಭೆ ಸದಸ್ಯರುಗಳು  ಒಟ್ಟು 169 ಕಾಮಗಾರಿಗಳಿಗೆ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಿದ್ದರು. ಈ ಕಾಮಗಾರಿಗಳನ್ನು 2023-24ನೇ ಸಾಲಿನಲ್ಲಿ ವಿವಿಧ ಲೆಕ್ಕ ಶೀರ್ಷಿಕೆಗಳಡಿಯಲ್ಲಿ ಕೈಗೊಳ್ಳಲು 278.27 ಕೋಟಿ ರು ವೆಚ್ಚವಾಗಲಿದೆ ಎಂದ ಅಂದಾಜಿಸಿತ್ತು. ಅಲ್ಲದೇ 92.75 ಕೋಟಿ ರುಗಳ ಹೆಚ್ಚುವರಿ ಅನುದಾನದೊಂದಿಗೆ ಅನುಮೋದನೆ ನೀಡಬೇಕು ಎಂದು ಸಣ್ಣ ನೀರಾವರಿ ಇಲಾಖೆಯು ಆರ್ಥಿಕ ಇಲಾಖೆಯನ್ನು ಕೋರಿತ್ತು.

 

 

ಅದೇ ರೀತಿ 2024-25ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ 92ರಲ್ಲಿಯೂ 115 ಕಾಮಗಾರಿಗಳನ್ನು 200.00 ಕೋಟಿ ರು ಮೊತ್ತದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಘೋಷಿಸಿತ್ತು. ಆದರೆ ಪ್ರಸ್ತುತ ಆರ್ಥಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಹೆಚ್ಚುವರಿ ಅನುದಾನ ಒದಗಿಸಲು ಸಾಧ್ಯವಿಲ್ಲ ಎಂದು ಆರ್ಥಿಕ ಇಲಾಖೆಯು ಕೈ ಎತ್ತಿರುವುದು ಆರ್‍‌ಟಿಐ ದಾಖಲೆಗಳಿಂದ ತಿಳಿದು ಬಂದಿದೆ.

 

ಸಣ್ಣ ನೀರಾವರಿ ಇಲಾಖೆಯಲ್ಲಿ  2023ರ ಏಪ್ರಿಲ್‌ 1ರ ಅಂತ್ಯಕ್ಕೆ 12,729.35 ಕೋಟಿ ರು ಮೊತ್ತದ ಕಾಮಗಾರಿಗಳ ಕಾರ್ಯಭಾರವಿತ್ತು. 2023-24ನೇ ಸಾಲಿನಲ್ಲಿ ಸಣ್ಣ ನೀರಾವರಿ ಇಲಾಖೆಗೆ 1,862.86 ಕೋಟಿ ರು ಅನುದಾನ ಒದಗಿಸಿತ್ತು. ಈ ಪೈಕಿ 49.80 ಕೋಟಿ ರು.ಗಳಿಗಷ್ಟೇ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಈ ಮೊತ್ತವನ್ನು ಸಂಪೂರ್ಣವಾಗಿ ಬಳಸಿಕೊಂಡ ನಂತರದಲ್ಲಿಯೂ 10,916.29 ಕೋಟಿ ರು ಮೊತ್ತದ ಕಾಮಗಾರಿಗಳ ಕಾರ್ಯಭಾರ ಬಾಕಿ ಇತ್ತು ಎಂದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

 

‘ಸಣ್ಣ ನೀರಾವರಿ ಇಲಾಖೆಯಡಿ ಅನುಮೋದಿತ ಕಾಮಗಾರಿಗಳ ಕಾರ್ಯಭಾರ ಅಧಿಕವಾಗಿರುವುದರಿಂದ ಹೊಸ ಕಾರ್ಯಭಾರ, ಹೆಚ್ಚುವರಿ ಅನುದಾನ ಒದಗಿಸಲು ಅವಕಾಶವಿರುವುದಿಲ್ಲ. ಆದ್ದರಿಂದ ಪ್ರಸ್ತಾಪಿತ ಕಾಮಗಾರಿಗಳನ್ನು ಸದ್ಯಕ್ಕೆ ಮುಂದೂಡಬೇಕು,’ ಎಂದು ಆಡಳಿತ ಇಲಾಖೆಗೆ ಹಿಂಬರಹ ನೀಡಿತ್ತು.

 

ಹಾಗೆಯೇ 200 ಕೋಟಿ ರು ಮೊತ್ತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಮಾಡಿದ್ದ ಘೋಷಣೆಯು ಭಾಷಣಕ್ಕಷ್ಟೇ ಸೀಮಿತಗೊಂಡಿದೆ. ಪ್ರಸ್ತುತ ಆರ್ಥಿಕ ಹಿನ್ನೆಲೆಯಲ್ಲಿ ಹೆಚ್ಚುವರಿ ಅನುದಾನ ಒದಗಿಸಲು ಅವಕಾಶವಾಗದ ಕಾರಣ ಇಲಾಖೆಗೆ ಒದಗಿಸಲಾದ ಅನುದಾನದಲ್ಲಿಯೇ ಕೈಗೆತ್ತಿಕೊಳ್ಳಲು ಪರಿಶೀಲಿಸಬೇಕು ಎಂದು ಆಡಳಿತ ಇಲಾಖೆಗೆ ತಿಳಿಸಿತ್ತು. ಆರ್ಥಿಕ  ಇಲಾಖೆಯು ನೀಡಿದ್ದ ಈ ಅಭಿಪ್ರಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಅನುಮೋದಿಸಿದ್ದರು.

 

 

 

 

ಮೈಸೂರು ಜಿಲ್ಲೆಯ ವರುಣಾ ವಿಧಾನಸಭೆ ಕ್ಷೇತ್ರದಲ್ಲಿ ಹಾಡ್ಯ ಗ್ರಾಮ, ಗಿರಿಬೆಟ್ಟ ಕೆರೆ ಹಳ್ಳ, ದುದ್ದಗೆರೆ, ಸೋಮೇಶ್ವರಪುರ, ನಂದಿಗುದ್ದ, ಹಡಜನ ಕೆರೆ, ದೇವಲಾಪುರ, ಉತ್ತನಹಳ್ಳಿ ಸರ್ಕಾರಿ ಕೆರೆ, ಮಿನಿಮಿಂಚಿ ಕಟ್ಟೆ, ಬಸಳ್ಳಿಹುಂಡಿಯ ವಿವಿಧೆಡೆ ಚೆಕ್‌ ಡ್ಯಾಂಗಳ ನಿರ್ಮಾಣ, ಅಭಿವೃದ್ದಿ ಕಾಮಗಾರಿಗಳಿಗೆ 17.50 ಕೋಟಿ ರು.ಗಳನ್ನು ಒದಗಿಸಬೇಕು ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕೋರಿದ್ದರು.

 

 

ಸಚಿವ ಕೆ ಹೆಚ್‌ ಮುನಿಯಪ್ಪ ಅವರು ಬೆಂಗಳೂರು ದಕ್ಷಿಣ ತಾಲೂಕಿನ ತಟ್ಟಗುಪ್ಪೆ ಗ್ರಾಮದ ಚಿಕ್ಕಲಿಂಗ ಶಾಸ್ತ್ರಿ ಕೆರೆ ಅಭಿವೃದ್ದಿಗೆ 3.00 ಕೋಟಿ, ಗದಗ್‌ನ ಸೀತಾಲಹರಿ ಗ್ರಾಮದ ಸುಧಾರಣೆ, ಹುಲಕೋಟಿ ಗ್ರಾಮದ ಕೆರೆ, ಮಲ್ಲ ಸಮುದ್ರ ಕೆರೆ, ಬಿಂಕದಕಟ್ಟೆ ಕೆರೆ, ದುಂದೂರು ಕೆರೆ, ಹಿರೆ ಹಂದಿಗೋಳ ಗ್ರಾಮದ ಕೆರೆ ಸುಧಾರಣೆಗೆ 2.50 ಕೋಟಿ ರು., ಸತೀಶ್‌ ಜಾರಕಿಹೊಳಿ ಅವರು ಬೆಳಗಾವಿ ತಾಲೂಕಿನ ಬೀರನಹೊಳಿಯ ಸಣ್ಣ ನೀರಾವರಿ ಕೆರೆಗಳಿಗೆ ಘಟಪ್ರಭಾ ನದಿಯಿಂದ ಏತ ನೀರಾವರಿ ಮೂಲಕ ನೀರು ತುಂಬಿಸುವ ಕಾಮಗಾರಿಗೆ 4.00 ಕೋಟಿ ರು., ಹಾಗೆಯೇ ವಂಟಮುರಿ ಗ್ರಾಮದ ಹತ್ತಿರ ಕೆರೆ ಸುಧಾರಣೆ ಕಾಮಗಾರಿಗೆ 1.00 ಕೋಟಿ ರು. ಕೋರಿದ್ದರು.

 

ಸಚಿವ ಎಂ ಬಿ ಪಾಟೀಲ ಅವರು ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಮೈಲೇಶ್ವರದಿಂದ ಗುಂಡಕನಾಳ ರಸ್ಗೆಗೆ ಅಡ್ಡಲಾಗಿ ಹರಿಯುವ ಹಳ್ಳಕ್ಕೆ ಸೇತುವೆ ಸಹಿತ ಬ್ಯಾರೇಜ್‌ ನಿರ್ಮಾಣ ಕಾಮಗಾರಿಗೆ 3.00 ಕೋಟಿ, ಈಶ್ವರ ಖಂಡ್ರೆ ಅವರು ಬೀದರ್‍‌ ಜಿಲ್ಲೆ ಭಾಲ್ಕಿ ತಾಲೂಕಿನ ತೂಗಾಂವ್‌ ಬ್ಯಾರೇಜ್‌ ಸುಧಾರಣೆ ಕಾಮಗಾರಿಗೆ 45.00 ಲಕ್ಷ ರು., ಮರಕಟ್ಟೆ ಇಂಗುಕೆರೆ ಸುಧಾರಣೆ ಕಾಮಗಾರಿಗೆ 42.00 ಲಕ್ಷ ರು., ಹಿಪ್ಪರಗಾ ಸಣ್ಣ ನೀರಾವರಿ ಕೆರೆ ಸುಧಾರಣೆ ಕಾಮಗಾರಿಗೆ 96.00 ಲಕ್ಷ ರು. ,  ಸ್ವತಃ ಸಣ್ಣ ನೀರಾವರಿ ಸಚಿವ ಎನ್ ಎಸ್‌ ಭೋಸರಾಜು ಅವರು ರಾಯಚೂರು ನಗರದ ಮಾವಿನಕೆರೆ ಅಭಿವೃದ್ಧಿ ಕಾಮಗಾರಿಗೆ 5.00 ಕೋಟಿ ರು.,  ಕೋರಿದ್ದರು.

 

 

ಕಲ್ಬುರ್ಗಿಯ ಸೇಡಂ ತಾಲೂಕಿನ ಬನ್ನೂರು ಗೋಪನಪಲ್ಲಿ ಗ್ರಾಮದ ಜಿ-ದೇವಿ ಕೆರೆ ಸುಧಾರಣೆ, ಕೋನಾಪುರ ಗ್ರಾಮದ ಊರ ಕೆರೆ ಸುಧಾರಣೆ, ಕೋತ್ತಪಲ್ಲಿ ಗ್ರಾಮದ ಪಾಕಲ್‌ ಸೈಟ್‌-1 ಕೆರೆ ಸುಧಾರಣೆಗೆ ಸಚಿವ ಡಾ ಶರಣ ಪ್ರಕಾಶ್‌ ಪಾಟೀಲ್‌ ಅವರು 2.00 ಕೋಟಿಗೆ ಅನುದಾನ ಪ್ರಸ್ತಾವ ಸಲ್ಲಿಸಿದ್ದರು. ಸಚಿವ ಶಿವರಾಜ ತಂಗಡಗಿ ಅವರು ಕಾರಟಗಿ ತಾಲೂಕಿನ ಮಾರುತಿ ನಗರದ ಕ್ಯಾಂಪ್‌ ಬಳಿ ಹರಿಯುವ ಹಳ್ಳಕ್ಕೆ ಚೆಕ್‌ ಡ್ಯಾಂ ನಿರ್ಮಾಣಕ್ಕೆ 1.25 ಕೋಟಿ ರು ಕೋರಿದ್ದರು.

 

 

ಸಚಿವ ಪ್ರಿಯಾಂಕ್ ಖರ್ಗೆ ಅವರು ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹೊನಗುಂಟಾ-ಮೋಘ ಗ್ರಾಮದ ಹತ್ತಿರದ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ 1.80 ಕೋಟಿ ರು., ಮಾರಡಗಿ ಗ್ರಾಮದ ಬಿಸಿಬಿ ನಿರ್ಮಾಣ ಕಾಮಗಾರಿಗೆ 2.30 ಕೋಟಿ ರು., ಇವಣಿ ಗ್ರಾಮದ ಹತ್ತಿರ ಇರುವ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ 1.40 ಕೋಟಿ ರು, ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ ಅವರು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಜಗದ್ಗುರು ಪಂಚಾಚಾರ್ಯ ವಿಶ್ವ ಧರ್ಮ ವಿದ್ಯಾಪೀಠದ ಹಿಂಭಾಗದ ಶೇರಾಪುರದ ಹಳ್ಳಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ 4.00 ಕೋಟಿ ರು. ಕೋರಿದ್ದರು.

 

ಲಕ್ಷ್ಮಿ ಹೆಬ್ಬಾಳಕರ್ ಅವರು ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದ ಹತ್ತಿರ ಇರುವ ಮುತ್ತವಳ್ಳಿ ಸ್ಥಳೀಯ ನಾಲೆಗೆ ಬ್ಯಾರೆಜ್‌ ಕಂ ಬ್ರಿಡ್ಜ್‌ ನಿರ್ಮಾಣ ಕಾಮಗಾರಿಗೆ 2.00 ಕೋಟಿ ರು., ಸಾವಗಾಂ ಗ್ರಾಮದ ಹತ್ತಿರ ಇರುವ ನಾಲಾಕ್ಕೆ ಬ್ಯಾರೇಜ್‌ ಕಂ ಬ್ರಿಡ್ಜ್‌ ನಿರ್ಮಾಣ ಕಾಮಗಾರಿಗೆ 2.00 ಕೋಟಿ ರ., ಬೆನಕನಹಳ್ಳಿ ಗ್ರಾಮದ ಹತ್ತಿರ ಸ್ಥಳೀಯ ನಾಲೆಗೆ ಬ್ಯಾರೇಜ್‌, ಕಂ ಬ್ರಿಡ್ಜ್‌ ನಿರ್ಮಾಣ ಕಾಮಗಾರಿಗೆ 2.00 ಕೋಟಿ ರು ಅನುದಾನ ಕೋರಿದ್ದರು.

 

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ದೇವಲಾಪುರ ಹೋಬಳಿ ಕೆಸಲಗೆರೆ ಗ್ರಾಮದ ಹತ್ತಿರ ಚಿಕ್ಕಹಳ್ಳಕ್ಕೆ ಚೆಕ್‌ ಡ್ಯಾಂ ನಿಮಾfಣಕ್ಕೆ 80.00 ಲಕ್ಷ ರು., ದೊಡ್ಡಪ್ಪಳ ಗ್ರಾಮದ ಹತ್ತಿರದ ಕಾನಿಹಳ್ಳಕ್ಕೆ ಚೆಕ್‌ ಡ್ಯಾಂ ನಿರ್ಮಾಣಕ್ಕೆ 1.00 ಕೋಟಿ ರು., ಮುದ್ದೇಗೌಡನಕೊಪ್ಪಲಿನ ಹತ್ತಿರ ಇರುವ ಹಿರೆಕೆರೆಹಳ್ಳಕ್ಕೆ ಚೆಕ್‌ ಡ್ಯಾಂ ಹಾಗೂ ರಕ್ಷಣಾ ಗೋಡೆ ನಿರ್ಮಾಣಕ್ಕೆ 2.00 ಕೋಟಿ ರು., ದಡಗಾ ಕೆರೆ ಕೆಳಭಾಗದಲ್ಲಿ ಚೆಕ್‌ ಡ್ಯಾಂ ನಿರ್ಮಾಣಕ್ಕೆ 1.90 ಕೋಟಿ ರು ಅನುದಾನಕ್ಕೆ ಸಚಿವ ಚೆಲುವರಾಯಸ್ವಾಮಿ ಅವರು  ಕೋರಿದ್ದರು.

 

 

ಅದೇ ರೀತಿ ಸಹಕಾರ ಸಚಿವ ಕೆ ಎನ್‌ ರಾಜಣ್ಣ ಅವರು ಮಧುಗಿರಿ ಪಟ್ಟಣದ ರಾಘವೇಂದ್ರ ಕಾಲೋನಿಯಿಂದ ಛತ್ರಬಾವಿ ರಸ್ತೆ ಮಧ್ಯೆ ಇರುವ ಹಳ್ಳಕ್ಕೆ ಚೆಕ್‌ ಡ್ಯಾಂ ಕಂ ಬ್ರಿಡ್ಜ್‌ , ರಕ್ಷಣಾ ಕಾಮಗಾರಿಗೆ 2.50 ಕೋಟಿ ರು., ಕೊಡಿಗೇನಹಳ್ಳಿ ಹೋಬಳಿಯ ಕಡಗತ್ತೂರು ಕೆರೆಯಿಂದ ಹಾನಿಗೊಳಗಾದ ಜಮೀನುಗಳಿಗೆ ರಕ್ಷಣಾ ಕಾಮಗಾರಿ ನಡೆಸಲು 70 ಲಕ್ಷ ರು. ಅನುದಾನಕ್ಕೆ ಪ್ರಸ್ತಾವ ಸಲ್ಲಿಸಿದ್ದರು.

 

ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಕೂಡ ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಕುಂಬಾರಕೊಪ್ಪ ಗ್ರಾಮ, ಸಿದ್ದಾಪುರ ರಸ್ತೆ ಮಧ್ಯೆ ಹರಿಯುವ ಕಲ್ಮಡ ಹಳ್ಳಕ್ಕೆ ಅಡ್ಡಲಾಗಿ ಬಿಸಿಬಿ ನಿರ್ಮಾಣ ಕಾಮಗಾರಿಗೆ 1.50 ಕೋಟಿ ರು., ಕಲಘಟಗಿ ತಾಲೂಕಿನ ಮಸಳಿಕಟ್ಟಿ ಗ್ರಾಮದ ಹತ್ತಿರ ಇರುವ ತಟ್ಟಿಹಳ್ಳಕ್ಕೆ ಅಡ್ಡಲಾಗಿ ಬಾಂದಾರ ನಿರ್ಮಾಣಕ್ಕೆ 2.00 ಕೋಟಿ ರು., ರೋಣ ತಾಲೂಕಿನ ಹಡಗಲಿ ಗ್ರಾಮದ ಸರ್ವೆ ನಂಬರ್‍‌ 218/1 ಬಿ ಜಮೀನಿಗೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ 90.00 ಲಕ್ಷ ರು. ಅನುದಾನಕ್ಕೆ ಮೊರೆ ಇಟ್ಟಿದ್ದರು.

 

ಶಹಾಪುರ ತಾಲೂಕಿನ ಶಹಾಪುರ ನಗರದ ಮಾವಿನಕೆರೆಯ ಪುನಶ್ಚೇತನ ಕಾಮಗಾರಿಗಳಿಗೆ 2.00 ಕೋಟಿ ರು ನೀಡಬೇಕು ಎಂದು ಸಚಿವ ಶರಣಬಸಪ್ಪ ದರ್ಶಾನಪುರ ಅವರು ಕೋರಿದ್ದರು. ಪೌರಾಡಳಿತ ಸಚಿವ ರಹೀಂ ಖಾನ್‌ ಅವರು ಬೀದರ್‍‌ ತಾಲೂಕಿನ ಜಾಂಪಾಡ ಏತ ನೀರಾವರಿ ಯೋಜನೆಯ ಸಮಗ್ರ ಅಭಿವೃದ್ಧಿ ಕಾಮಗಾರಿಗೆ 1.00 ಕೋಟಿ ರು, ಅಲಿಯಂಬರ ಸಣ್ಣ ನೀರಾವರಿ ಕೆರೆಯ ಸಮಗ್ರ ಅಭಿವೃದ್ದಿ ಕಾಮಗಾರಿಗೆ 1.00 ಕೋಟಿ ರು. ಅನುದಾನಕ್ಕೆ ಪ್ರಸ್ತಾವ ಸಲ್ಲಿಸಿದ್ದರು.

 

 

 

ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ ಸುಧಾಕರ್‍‌ ಅವರು ಹಿರಿಯೂರು ತಾಲೂಕಿನ ಬೆನಕನಹಳ್ಳಿಯ ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ದಾಸಪ್ಪನ ಜಮೀನಿನ ಹತ್ತಿರ ಇರುವ ಹಳ್ಳಕ್ಕೆ ಚೆಕ್‌ ಡ್ಯಾಂ ನಿರ್ಮಾಣ ಕಾಮಗಾರಿಗೆ 1.00 ಕೋಟಿ ರು., ಬೀರೇನಹಳ್ಳಿ ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿಗೆ 1.00 ಕೋಟಿ ರು., ಪಶು ಸಂಗೋಪನೆ ರೇಷ್ಮೆ ಸಚಿವ ಕೆ ವೆಂಕಟೇಶ್‌ ಅವರು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿನ ತಾವರೆಕೆರೆ ಅಭಿವೃದ್ದಿ ಕಾಮಗಾರಿಗೆ 1.50 ಕೋಟಿ ರು.,  ಕೋರಿದ್ದರು.

 

ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಅಂದವಳ್ಳಿ ಗ್ರಾಮದ ಕಬ್ಬಿನ ಹೊಳೆಗೆ ಅಡ್ಡಲಾಗಿ ಬ್ಯಾರೇಜ್‌ ನಿರ್ಮಾಣ ಕಾಮಗಾರಿಗೆ 90.00 ಲಕ್ಷ ರು., ಗುಂಜನಗೂರು ಗ್ರಾಮದ ಹತ್ತಿರ ಕಾರೇಗದ್ದೆ ಹಳ್ಳಕ್ಕೆ ಅಡ್ಡಲಾಗಿ ಪಿಕಪ್‌ ನಿರ್ಮಾಣ ಕಾಮಗಾರಿಗೆ 80.00 ಲಕ್ಷ ರು., ಮಳಲಗದ್ದೆ ಗ್ರಾಮದ ಹತ್ತಿರ ಇರುವ ಕೋಳಿಸಾಲು ಹಳ್ಳಕ್ಕೆ ಅಡ್ಡಲಾಗಿ ಬ್ಯಾರೇಜ್‌ ನಿರ್ಮಾಣ ಕಾಮಗಾರಿಗೆ 85.00 ಲಕ್ಷ ರು., ಸೊರಬ ಪುರಸಭೆ ವ್ಯಾಪ್ತಿಯ ಹಳೇ ಸೊರಬ ಗ್ರಾಮದ ಶಾಂತಿಕೆರೆ ಅಭಿವೃದ್ದಿ ಕಾಮಗಾರಿಗೆ 75.00 ಲಕ್ಷ ರು., ಮೂಗೂರು ಗ್ರಾಮದ ಭೂ ಕೆರೆ ಅಭಿವೃದ್ಧಿ ಕಾಮಗಾರಿಗೆ 50.00 ಲಕ್ಷ ರು., ಆನವಟ್ಟಿ ಕೆರೆ ಕೋಡಿ ಕಾಲುವೆಯಿಂದ ಕುಬಟೂರು ದೊಡ್ಡಕೆರೆಗೆ ಸೇರುವ ಕಾಲುವೆ ಅಭಿವೃದ್ಧಿ ಕಾಮಗಾರಿಗೆ 50.00 ಲಕ್ಷ ರು. ಅನುದಾನ ಒದಗಿಸಬೇಕು ಎಂದು ಸಚಿವ ಮಧು ಬಂಗಾರಪ್ಪ ಅವರು ಕೋರಿದ್ದರು.

 

 

ಈ ಎಲ್ಲಾ ಪ್ರಸ್ತಾವನೆಗಳನ್ನು ಆರ್ಥಿಕ ಇಲಾಖೆಯು ಪರಿಶೀಲಿಸಿತ್ತು. ”ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. 2024-25ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ 92ರಲ್ಲಿ 115 ಕಾಮಗಾರಿಗಳನ್ನು 200.00 ಕೋಟಿ ರು ಮೊತ್ತದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಘೋಷಿಸಲಾಗಿದೆ.

 

ಪ್ರಸ್ತುತದ ಆರ್ಥಿಕ ಪರಿಸ್ಥಿತಿ ಹಿನ್ನಲೆಯಲ್ಲಿ ಹೆಚ್ಚುವರಿ ಅನುದಾನ ಒದಗಿಸಲು ಅವಕಾಶವಾಗದ ಕಾರಣ ಇಲಾಖೆಗೆ ಒದಗಿಸಲಾದ ಅನುದಾನದಲ್ಲಿಯೇ ನಿಯಮಾನುಸಾರ ಪರಿಶೀಲಿಸಿ ಕೈಗೆತ್ತಿಕೊಳ್ಳಬೇಕು ಎಂದು ಇಲಾಖೆಗೆ ತಿಳಿಸಿದೆ,’ ಎಂದು ಆರ್ಥಿಕ ಇಲಾಖೆಯು 2024ರ ಮಾರ್ಚ್‌ 27ರಲ್ಲೇ ಸಣ್ಣ ನೀರಾವರಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ತಿಳಿಸಿತ್ತು.

 

2,500 ಕೋಟಿ ರು., ಮೊತ್ತದ ಬಿಲ್‌ ಬಾಕಿ, ಚಾಲ್ತಿ ಕಾಮಗಾರಿಗಳಿಗೂ ಹಣವಿಲ್ಲ; ಆರ್ಥಿಕ ಪರಿಸ್ಥಿತಿ ಕೆಟ್ಟಿತೇ?

 

ಕೆರೆ ಸಂಜೀವಿನಿ, ಕೆರೆಗಳ ಸಮಗ್ರ ಅಭಿವೃದ್ಧಿ, ಏತ ನೀರಾವರಿ ಸೇರಿದಂತೆ ಇನ್ನಿತರೆ ಚಾಲ್ತಿಯಲ್ಲಿರುವ ಕಾಮಗಾರಿ ನಿರ್ವಹಿಸಿರುವ ಸಣ್ಣ  ನೀರಾವರಿ ಇಲಾಖೆಯ  ಗುತ್ತಿಗೆದಾರರಿಗೆ 2,500 ಕೋಟಿ ರು. ಮೊತ್ತದ ಬಿಲ್‌ಗಳನ್ನು ಪಾವತಿಸಲು ರಾಜ್ಯ ಕಾಂಗ್ರೆಸ್‌ ಸರ್ಕಾರವು  ಹರಸಾಹಸ ಪಡುತ್ತಿದೆ. ದುರಸ್ತಿ ಕಾಮಗಾರಿಗಳಿಗೆ ಹಣಕಾಸನ್ನು ಹೊಂದಿಸಲು ಜಿಲ್ಲಾ ವಿಪತ್ತು ನಿಧಿಗೆ ಕೈ ಹಾಕಿತ್ತು.

SUPPORT THE FILE

Latest News

Related Posts