ಬೆಂಗಳೂರು; ಸಿದ್ದರಾಮಯ್ಯ ಅವರು ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಆರಂಭದ ಹದಿನಾರು ತಿಂಗಳಲ್ಲಿ ವೈಮಾನಿಕ ಹಾರಾಟಕ್ಕೆ ಸರ್ಕಾರಿ ಬೊಕ್ಕಸದಿಂದ 25.60 ಕೋಟಿ ರು. ವೆಚ್ಚವಾಗಿದೆ. ವಿಶೇಷವೆಂದರೇ ಹೊರ ರಾಜ್ಯಗಳಿಗಿಂತಲೂ ರಾಜ್ಯದ ಒಳಗೇ ಅತೀ ಹೆಚ್ಚಿನ ಬಾರಿ ವಿಮಾನ/ಹೆಲಿಕಾಪ್ಟರ್ ಮೂಲಕ ಪ್ರಯಾಣ ಮಾಡಿದ್ದಾರೆ. ಈ ಪೈಕಿ ಮೈಸೂರಿನ ಪ್ರಯಾಣವೇ ಸಿಂಹಪಾಲು ಪಡೆದಿದೆ.
ಮುಖ್ಯಮಂತ್ರಿಗಳ ವೈಮಾನಿಕ ಹಾರಾಟಕ್ಕೆ ಆಗಿರುವ ವೆಚ್ಚ ಮಾಹಿತಿಯನ್ನು ‘ದಿ ಫೈಲ್’ ಆರ್ ಟಿ ಐ ಅಡಿಯಲ್ಲಿ ಪಡೆದುಕೊಂಡಿದೆ. ವಿಶೇಷವೆಂದರೇ ಮುಖ್ಯಮಂತ್ರಿಗಳ ವೈಮಾನಿಕ ವೆಚ್ಚದ ಮಾಹಿತಿಗಾಗಿ ‘ದಿ ಫೈಲ್’ 2024ರ ಆಗಸ್ಟ್ 21ರಂದು ಅರ್ಜಿ ಸಲ್ಲಿಸಿತ್ತು.
ಲೋಕೋಪಯೋಗಿ ಇಲಾಖೆಯು ಈ ಮಾಹಿತಿಯನ್ನು 2025ರ ಫೆ.15ರಂದು ಅಂದರೇ 6 ತಿಂಗಳ ನಂತರ ಈ ಮಾಹಿತಿಯನ್ನು ಒದಗಿಸಿದೆ.
ಬೆಂಗಳೂರಿನಿಂದ ಸರಿಸುಮಾರು 143 ಕಿ ಮೀ ದೂರದಲ್ಲಿರುವ ಮೈಸೂರಿಗೂ ಸಹ 16 ತಿಂಗಳಲ್ಲಿ 20 ಬಾರಿ ವಿಮಾನದಲ್ಲೇ ತೆರಳಿರುವುದು ಆರ್‍ಟಿಐ ಮಾಹಿತಿಯಿಂದ ಗೊತ್ತಾಗಿದೆ.
ಎರಡನೇ ಅವಧಿಗೆ ಮುಖ್ಯಮಂತ್ರಿ ಆಗಿದ್ದ ಆರಂಭದ 7 ತಿಂಗಳಲ್ಲೇ 12.16 ಕೋಟಿ ರು.ಗಳನ್ನು ವೈಮಾನಿಕ ಪ್ರಯಾಣಕ್ಕೆ ವೆಚ್ಚವಾಗಿದೆ. 2023ರ ಮೇ 24ರಿಂದ 2023ರ ನವೆಂಬರ್ 11ರವರೆಗೆ ಒಟ್ಟು 48 ಬಾರಿ ವಿಮಾನ ಬಳಸಿದ್ದಾರೆ.
ನವದೆಹಲಿ, ಗೋವಾ, ಮೈಸೂರು, ಸುತ್ತೂರು, ಕೊಲ್ಹಾಪುರ, ಬಾರಾಮತಿ, ಹಾಸನ, ಹುಬ್ಬಳ್ಳಿ, ಗುಲ್ಬರ್ಗ, ಬೆಳಗಾವಿ, ಆಲಮಟ್ಟಿ, ಬೇಗಂಪೇಟೆ, ಪುಣೆ, ದಾವಣಗೆರೆ, ಚಿತ್ರದುರ್ಗ, ಹಿರಿಯೂರು, ಹೈದರಾಬಾದ್, ಕೊಪ್ಪಳ, ಚೆನ್ನೈ, ಬಿಜಾಪುರ, ಬಾಗಲಕೋಟೆ, ಬೀದರ್, ಭಾಲ್ಕಿ, ಕೋಲಾರ, ಶಿರಡಿ, ನರಸೀಪುರ, ಚಿಕ್ಕಬಾಸೂರು, ತಿಂತಿಣಿ, ಕೂಡಲ ಸಂಗಮ, ತಿರುಪತಿ, ಶಿವಮೊಗ್ಗಕ್ಕೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಇದಕ್ಕಾಗಿ ಒಟ್ಟಾರೆ 12,16,69, 365 ರು. ವೆಚ್ಚವಾಗಿರುವುದು ಆರ್‍ಟಿಐ ಮಾಹಿತಿಯಿಂದ ತಿಳಿದು ಬಂದಿದೆ.
ಅದೇ ರೀತಿ 2024ರ ಏಪ್ರಿಲ್ ನಿಂದ ಆಗಸ್ಟ್ ವರೆಗೆ ಕೇವಲ ನಾಲ್ಕೇ ನಾಲ್ಕು ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವೈಮಾನಿಕ ಪ್ರಯಾಣ ಬೆಳೆಸಿದ್ದರು.
ನಾಲ್ಕು ತಿಂಗಳ ವಿಮಾನ ಹಾರಾಟಕ್ಕೆ 13.43 ಕೋಟಿ ರು. ವೆಚ್ಚವಾಗಿದೆ.
ಬೆಂಗಳೂರಿನಿಂದ ಮೈಸೂರು, ಮೈಸೂರಿನಿಂದ ಸುತ್ತೂರು, ಮಂಗಳೂರಿನಿಂದ ಮೈಸೂರು, ಚೆನ್ನೈ, ಮಳವಳ್ಳಿ ಮೂಲಕ ಮೈಸೂರು, ಮೈಸೂರಿನಿಂದ ಹುಬ್ಬಳ್ಳಿ, ಹಾಸನದಿಂದ ಮೈಸೂರು, ಮೈಸೂರಿನಿಂದ ಕನಕಗಿರಿ, ಬೈಲಕುಪ್ಪ, ಪಿರಿಯಾಪಟ್ಟಣ ಮಾರ್ಗವಾಗಿ ಮೈಸೂರಿಗೆ ತೆರಳಲು 5,45,33,466 ರು ಖರ್ಚು ಮಾಡಲಾಗಿದೆ.
ಅದೇ ರೀತಿ ವಿಮಾನ ಪ್ರಯಾಣ ರದ್ದಾಗಿದ್ದ ಸಂದರ್ಭದಲ್ಲಿಯೂ ಲಕ್ಷಾಂತರ ರುಪಾಯಿ ಖರ್ಚಾಗಿದೆ.
ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಬ್ಬರೇ 18 ತಿಂಗಳಲ್ಲಿ ವೈಮಾನಿಕ ಹಾರಾಟಕ್ಕೆ ಸರ್ಕಾರಿ ಬೊಕ್ಕಸದ 23.67 ಕೋಟಿ ರು. ಖರ್ಚು ಮಾಡಿದ್ದರು. ಕಳೆದ 10 ವರ್ಷದಲ್ಲಿ ಮುಖ್ಯಮಂತ್ರಿ, ರಾಜ್ಯಪಾಲರು, ಸಚಿವರ ವೈಮಾನಿಕ ಹಾರಾಟಕ್ಕೆ ಒಟ್ಟಾರೆ 96.65 ಕೋಟಿ ರು. ವೆಚ್ಚವಾಗಿತ್ತು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ 2017-18ರ (ಚುನಾವಣೆ ವರ್ಷ)ಲ್ಲಿ 17,73, 25,113 ರು.ಗಳನ್ನು ವೈಮಾನಿಕ ಹಾರಾಟಕ್ಕೆ ಖರ್ಚು ಮಾಡಿದ್ದರೇ ಬಸವರಾಜ ಬೊಮ್ಮಾಯಿ ಅವರು 2022-23ರ (ಚುನಾವಣೆ ವರ್ಷ)ಲ್ಲಿ 23.67 ಕೋಟಿ ರು. ಖರ್ಚು ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಚುನಾವಣೆ ವರ್ಷದಲ್ಲಿ ವೈಮಾನಿಕ ಹಾರಾಟಕ್ಕೆ ಮಾಡಿರುವ ವೆಚ್ಚಕ್ಕೆ ಹೋಲಿಸಿದರೆ 7.25 ಕೋಟಿ ಹೆಚ್ಚಿಗೆ ಖರ್ಚು ಮಾಡಿದ್ದರು.
ಅಲ್ಲದೇ ಬಸವರಾಜ ಬೊಮ್ಮಾಯಿ ಅವರು ಹೊರರಾಜ್ಯಗಳಿಗಿಂತಲೂ ರಾಜ್ಯದೊಳಗೇ ಅತಿ ಹೆಚ್ಚು ಬಾರಿ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದ್ದರು. ಬೆಂಗಳೂರಿನಿಂದ ಒಂದು ಗಂಟೆಯಲ್ಲಿ ಪ್ರಯಾಣಿಸಬಹುದಾದ ತುಮಕೂರಿಗೂ ಹೆಲಿಕಾಪ್ಟರ್‌ನಲ್ಲಿ ತೆರಳಿದ್ದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ 18 ತಿಂಗಳ ಅವಧಿಯಲ್ಲಿ ವೈಮಾನಿಕ ಹಾರಾಟಕ್ಕೆ 13.07 ಕೋಟಿ ಖರ್ಚು ಮಾಡಿದ್ದರೇ ಬಸವರಾಜ ಬೊಮ್ಮಾಯಿ ಅವರು 18 ತಿಂಗಳಲ್ಲಿ 23.67 ಕೋಟಿ ರು. ವೆಚ್ಚ ಮಾಡಿದ್ದರು. 2019-20ರಲ್ಲಿ 5,80,5,600.00, 2020-21ರಲ್ಲಿ 6,99,89,732.00 ರು, 2021-22ರಲ್ಲಿ 4,31,2,508.00 ರು, 2022-23ರಲ್ಲಿ 24,99,14, 796.00 ರು. ಸೇರಿದಂತೆ ಒಟ್ಟು 38,02,2,730.36 ರು. ಖರ್ಚಾಗಿರುವುದು ಆರ್‌ಟಿಐ ದಾಖಲೆಗಳಿಂದ ಗೊತ್ತಾಗಿದೆ. ಈ ಅವಧಿಯಲ್ಲಿ ಬಿ ಎಸ್ ಯಡಿಯೂರಪ್ಪ ಅವರೂ ಮುಖ್ಯಮಂತ್ರಿಯಾಗಿದ್ದರು.
ಬೆಳಗಾವಿ, ಹುಬ್ಬಳ್ಳಿ, ಗುಲ್ಬರ್ಗಾ, ಮೈಸೂರು, ಕಬಿನಿ, ಕೆಆರ್‌ಎಸ್, ಗಜೇಂದ್ರಗಢ, ತಿರುಪತಿ, ಹೊನ್ನಾಳಿ, ವಿಜಯವಾಡ, ಚೆನ್ನೈ, ಹೈದರಾಬಾದ್, ಶಿಕಾರಿಪುರ, ರಾಣೆಬೆನ್ನೂರು, ಹಿರೇಕೆರೂರು, ಅಹಮದಾಬಾದ್, ಬೀದರ್, ಶಿವಮೊಗ್ಗ, ದಾವಣಗೆರೆ, ತುಮಕೂರು, ಶಂಶಬಾದ್, ನರಗುಂದ, ಶೃಂಗೇರಿ, ಹರಿಹರಪುರ, ಚಿಕ್ಕನಾಯಕನಹಳ್ಳಿ, ದಾವಣಗೆರೆ, ಬದಾಮಿ, ಮುಧೋಳ, ಮೂಡಬಿದರೆ, ಮುಂಬೈ, ಬೆಳಗಾವಿ, ಆದಿಚುಂಚನಗಿರಿ, ತುಮಕೂರು, ನವದೆಹಲಿ, ಹೊಸದುರ್ಗ, ಹಿರಿಯೂರು, ಚಿತ್ರದುರ್ಗ, ಆನೆಗುಂದಿ, ಗೋವಾ, ಕೊಯಮತ್ತೂರು, ಮಳವಳ್ಳಿ, ಸಿರಿಗೆರೆ, ವಿಜಯಪುರ, ಆಲಮಟ್ಟಿ, ಹೊಸದುರ್ಗ, ಔರಾದ್, ಹುಣಸಗಿ, ಕಮಲಾಪುರ, ಕೊಚ್ಚೀನ್, ಕೆಆರ್ ಪೇಟೆ, ತಿರುಪತಿ, ಮಂಗಳೂರು, ಉಡುಪಿ, ಸಾಣೆಹಳ್ಳಿ, ರಾಯಭಾಗ, ಕೊಪ್ಪಳ, ಬಳ್ಳಾರಿ, ಭದ್ರಾವತಿ, ಜೈಪುರ, ಪಾಂಡವಪುರ, ಮದ್ದೂರು, ಬಿಜಾಪುರ, ಕಾರ್ಕಳ, ಹಂಪಿ, ಹೊಳೆನರಸೀಪುರ, ಮಡಿಕೇರಿಗೆ ವಿಶೇಷ ವಿಮಾನದಲ್ಲಿ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಯಾಣ ಬೆಳೆಸಿದ್ದರು.
ಮುಖ್ಯಮಂತ್ರಿ ವಿಶೇಷ ವಿಮಾನ ಹಾರಾಟ ; 18 ತಿಂಗಳಲ್ಲಿ 23.67 ಕೋಟಿ ಖರ್ಚು
2013-14ರಲ್ಲಿ 9,69,50,098 ರು., 2014-15ರಲ್ಲಿ 6,10,40,773 ರು., 2015-16ರಲ್ಲಿ 6,89,45,646 ರು., 2016-17ರಲ್ಲಿ 8,29,04,994 ರು., 2017-18ರಲ್ಲಿ 17,73,25,113 ರು., 2018-19ರಲ್ಲಿ 5,83,14,951 ರು. ಸೇರಿ 5 ವರ್ಷದಲ್ಲಿ ಒಟ್ಟು 54,54,81, 575.00 ರು., ವೆಚ್ಚವಾಗಿತ್ತು.
ಬಿಜೆಪಿ ಸರಕಾರದ ಕೊನೆ ಅವಧಿಯಲ್ಲಿ ಸಿಎಂ ಆಗಿದ್ದ ಜಗದೀಶ್ ಶೆಟ್ಟರ್ ಸಹ ಕೇವಲ ಎಂಟು ತಿಂಗಳಲ್ಲಿ ವೈಮಾನಿಕ ಹಾರಾಟಕ್ಕೆ 12.77 ಕೋಟಿ ರೂ. ಖರ್ಚು ಮಾಡಿದ್ದರು. ಚುನಾವಣೆ ಘೋಷಣೆಯಾಗುವ ಮುನ್ನ ಪಕ್ಷದ ಕಾರ್ಯಕ್ರಮಗಳಿಗಾಗಿ 2013 ಮಾರ್ಚ್‌ನಲ್ಲಿ ವಿಶೇಷ ವಿಮಾನಕ್ಕಾಗಿ 42,66,815ರೂ. ಪಾವತಿಸಿದ್ದನ್ನು ಸ್ಮರಿಸಬಹುದು.