ಗೃಹ ಜ್ಯೋತಿ; ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳ ಅಂಕಿ ಅಂಶಗಳೇ ಸರ್ಕಾರದಲ್ಲಿಲ್ಲ

ಬೆಂಗಳೂರು;  ಗೃಹ ಜ್ಯೋತಿ ಯೋಜನೆ ಒಟ್ಟು ಫಲಾನುಭವಿಗಳ ಪೈಕಿ  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳ ನಿರ್ದಿಷ್ಯ ಅಂಕಿ ಅಂಶಗಳು ಸರ್ಕಾರದ ಬಳಿ  ಲಭ್ಯವಿಲ್ಲ.

 

ರಾಜ್ಯದ ಎಲ್ಲಾ ಪ್ರವರ್ಗದ ಗೃಹ ಬಳಕೆ ಮತ್ತು ಗ್ರಾಹಕರ ಸೌಲಭ್ಯಕ್ಕಾಗಿ ಗೃಹ ಜ್ಯೋತಿ  ಅನುಷ್ಠಾನಗೊಂಡಿದೆ.  ಗೃಹ ಜ್ಯೋತಿ ಯೋಜನೆಗೆ ನೋಂದಣಿಯಲ್ಲಿಯೂ  ಜಾತಿವಾರು ಮಾಹಿತಿ ಅಂಕಣ ನಮೂದಿಸಿಲ್ಲ. ಜಾತಿವಾರು ವಿವರಗಳ ಮಾಹಿತಿ ಸಂಗ್ರಹಿಸದ ಕಾರಣ ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳ ನಿರ್ದಿಷ್ಟ ಅಂಕಿ ಅಂಶಗಳು ಲಭ್ಯವಿಲ್ಲ ಎಂದು ಖುದ್ದು ಸಚಿವ ಕೆ ಜೆ ಜಾರ್ಜ್‌ ಅವರು ಸದನಕ್ಕೆ ಉತ್ತರ ನೀಡಿದ್ದರು.

 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆಯ ನಿಧಿಯನ್ನು ಗ್ಯಾರಂಟಿ ಯೋಜನೆಗಳಿಗೆ ಮಾರ್ಗಪಲ್ಲಟಗೊಳಿಸಿದ್ದರ ಕುರಿತು ಭಾರೀ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ   ಗೃಹ ಜ್ಯೋತಿ ಯೋಜನೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ  ಫಲಾನುಭವಿಗಳ ಅಂಕಿ ಅಂಶಗಳು ಲಭ್ಯವಿಲ್ಲ ಎಂದು ಸದನಕ್ಕೆ ಕೊಟ್ಟಿರುವ ಉತ್ತರವು ಮುನ್ನೆಲೆಗೆ ಬಂದಿದೆ.

 

ಗೃಹ ಜ್ಯೋತಿ ಯೋಜನೆಯಡಿಯಲ್ಲಿ ನೋಂದಣಿ ಮಾಡಿಕೊಂಡಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಾಪ್ತಿಗೆ ಒಳಪಡುವ ವಿದ್ಯುತ್‌ ಬಳಕೆದಾರರ ವಿವರಗಳು ಮತ್ತು ಅಂಕಿ ಅಂಶಗಳ ಕುರಿತಾಗಿ ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಿದ್ದರು. ಇದಕ್ಕೆ ಸಚಿವ ಕೆ ಜೆ ಜಾರ್ಜ್‌ ಅವರು ಉತ್ತರ ನೀಡಿದ್ದರು.

 

ಉತ್ತರದಲ್ಲೇನಿದೆ?

 

ಗೃಹ ಜ್ಯೋತಿ ಯೋಜನೆಯನ್ನು ರಾಜ್ಯದಲ್ಲಿನ ಎಲ್ಲಾ ಪ್ರವರ್ಗದ ಗೃಹ ಬಳಕೆ ಗ್ರಾಹಕರ ಸೌಲಭ್ಯಕ್ಕಾಗಿ ಅನುಷ್ಠಾನಗೊಳಿಸಲಾಗಿರುತ್ತದೆ. ಈ ಯೋಜನೆಯ ಸೌಲಭ್ಯಕ್ಕಾಗಿ ನೋಂದಾಯಿಸುವ ಫಲಾನುಭವಿಗಳು ಸೇವಾ ಸಿಂಧು ತಂತ್ರಾಂಶದಲ್ಲಿ ನೋಂದಣಿ ಮಾಡಬೇಕಾಗಿದೆ. ಈ ನೋಂದಣಿ ಅರ್ಜಿಯಲ್ಲಿ ಮಾಹಿತಿಯನ್ನು ಸರಳೀಕರಣಗೊಳಿಸುವ ಸಲುವಾಗಿ ಪ್ರತ್ಯೇಕವಾಗಿ ಜಾತಿವಾರು ಮಾಹಿತಿ ಅಂಕಣ ನಮೂದಿಸಿರುವುದಿಲ್ಲ. ಹೊಸದಾಗಿ ವಿದ್ಯುತ್‌ ಸಂಪರ್ಕ ಪಡೆಯುವ ಸಂದರ್ಭದಲ್ಲಿಯೂ ಸಹ ಜಾತಿವಾರು ವಿವರಗಳ ಮಾಹಿತಿ ಸಂಗ್ರಹಿಸಲ್ಪಡುವುದಿಲ್ಲ. ಹೀಗಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳ ನಿರ್ದಿಷ್ಟ ಅಂಕಿ ಅಂಶಗಳು ಲಭ್ಯವಿರುವುದಿಲ್ಲ ಎಂದು ಸಚಿವ ಕೆ ಜೆ ಜಾರ್ಜ್‌ ಅವರು ಉತ್ತರ ಒದಗಿಸಿರುವುದು ಗೊತ್ತಾಗಿದೆ.

 

 

ವಿಶೇಷವೆಂದರೇ ಇಂಧನ ಇಲಾಖೆಯಡಿ ಒಟ್ಟು 3.53 ಲಕ್ಷ ಎಸ್‌ ಸಿ ಮತ್ತು ಎಸ್‌ ಟಿ ರೈತರ ಪಂಪ್‌ ಸೆಟ್‌ಗಳಿವೆ. ಇದಕ್ಕೆ ಅನುಗುಣವಾಗಿ 1,437.18 ಅನುದಾನ ಮಾತ್ರ ಅಗತ್ಯವಿದೆ. ಎಸ್‌ಸಿಎಸ್‌ಪಿ ಮತ್ತು ಎಸ್‌ಟಿಪಿ ಕಾಯ್ದೆಯಂತೆ ಫಲಾನುಭವಿಗಳ ಸಂಖ್ಯೆಗೆ ಅನುಗುಣವಾಗಿ ವೆಚ್ಚ ಭರಿಸಬೇಕಾಗಿದೆ. ಅಂದಾಜು 846 ಕೋಟಿ ರು ಉಳಿಕೆಯಾಗಗುತ್ತದೆ. ಅದೇ ರೀತಿ ಗೃಹ ಜ್ಯೋತಿ ಯೋಜನೆಯಡಿಯೂ ಸಹ ನಿಖರ ಅಂಕಿ ಅಂಶಗಳನ್ನು ಇಂಧನ ಇಲಾಖೆಯಿಂದ ಒದಗಿಸಿಲ್ಲ.

 

 

ಸಮಾಜ ಕಲ್ಯಾಣ ಇಲಾಖೆಯು 2025ರ ಜನವರಿ 18ರಂದು ನಡೆದಿದ್ದ ಎಸ್‌ಸಿಸಿಎಸ್‌ಪಿ ಮತ್ತು ಎಸ್‌ಟಿಪಿ ನೋಡಲ್‌ ಏಜೆನ್ಸಿ ಸಭೆಯಲ್ಲಿ ಈ ಸಂಗತಿಯ ಕುರಿತು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಚರ್ಚಿಸಿದ್ದರು.

 

ಬೆಸ್ಕಾಂ ಸೇರಿದಂತೆ ಎಸ್ಕಾಂಗಳ ವ್ಯಾಪ್ತಿಯಲ್ಲಿ ಗೃಹ ಜ್ಯೋತಿ ಯೋಜನೆಯಡಿಯಲ್ಲಿ 2024ರ ಜೂನ್‌ ಅಂತ್ಯಕ್ಕೆ ಒಟ್ಟಾರೆ 1,66,41,767 ಮಂದಿ ನೋಂದಣಿ ಮಾಡಿಕೊಂಡಿದ್ದರು. ಇದೇ ಅವಧಿಯಲ್ಲಿ 30,99, 711 ಮಂದಿ ಗೃಹ ಜ್ಯೋತಿ ಯೋಜನೆಯಿಂದ ಹೊರಗುಳಿದಿದ್ದರು.

 

 

ಬೆಸ್ಕಾಂ ವ್ಯಾಪ್ತಿಯಲ್ಲಿ 7013678, ಮೆಸ್ಕಾಂ ವ್ಯಾಪ್ತಿಯಲ್ಲಿ 1744327, ಸೆಸ್ಕ್‌ 2393702, ಹೆಸ್ಕಾಂ 3317039, ಜೆಸ್ಕಾಂ 2173021 ಸೇರಿ ಒಟ್ಟಾರೆ 1,66,41,767 ಮಂದಿ ನೋಂದಣಿ ಮಾಡಿಸಿಕೊಂಡಿದ್ದರು. ಅದೇ ರೀತಿ ಬೆಸ್ಕಾಂ ವ್ಯಾಪ್ತಿಯಲ್ಲಿ 2190395, ಮೆಸ್ಕಾಂ 347150, ಸೆಸ್ಕ್‌ 135250, ಹೆಸ್ಕಾಂ 348355, ಜೆಸ್ಕಾಂ 78561 ಸೇರಿ 3099711 ಮಂದಿ  ಯೋಜನೆಯಿಂದ ಹೊರಗುಳಿದಿದ್ದರು ಎಂದು ಸದನಕ್ಕೆ ಮಾಹಿತಿ ಒದಗಿಸಿದ್ದರು.

 

 

ಹಾಗೆಯೇ 2023-24ನೇ ಸಾಲಿನಲ್ಲಿ ಗೃಹ ಜ್ಯೋತಿ ಯೋಜನೆಯಡಿಯಲ್ಲಿ ನೋಂದಾಯಿತ ವಿದ್ಯುತ್‌ ಬಳೆಕದಾರರು 5953.89 ದಶಲಕ್ಷ ಯೂನಿಟ್‌ ವಿದ್ಯುತ್‌ ಬಳಕೆ ಮಾಡಿದ್ದರು. ಇದಕ್ಕಾಗಿ ಒಟ್ಟಾರೆ 2,554.11 ಕೋಟಿ ರು ವೆಚ್ಚವಾಗಿತ್ತು. 2024-25ನೇ ಸಾಲಿನಲ್ಲಿ 2558.40 ದಶಲಕ್ಷ ಯೂನಿಟ್‌ ವಿದ್ಯುತ್‌ನನ್ನು 2024ರ ಜೂನ್‌ ಅಂತ್ಯಕ್ಕೆ ಬಳಕೆ ಮಾಡಿದ್ದರು. ಇದಕ್ಕಾಗಿ 2,304.24 ಕೋಟಿ ರು ವೆಚ್ಚವಾಗಿತ್ತು ಎಂದು ಉತ್ತರಿಸಿದ್ದರು.

 

 

2023-24ನೇ ಸಾಲಿನಲ್ಲಿ ಎಸ್ಕಾಂಗಳಿಗೆ ಯಾವುದೇ ಬಾಕಿ ಉಳಿಸಿರಲಿಲ್ಲ. ಇದೇ ಅವಧಿಯಲ್ಲಿ ಬೆಸ್ಕಾಂಗೆ 2,771.59 ಕೋಟಿ ರು., ಮೆಸ್ಕಾಂಗೆ 639.00 ಕೋಟಿ, ಸೆಸ್ಕ್‌ಗೆ 629.69 ಕೋಟಿ, ಹೆಸ್ಕಾಂಗೆ 1,092.91 ಕೋಟಿ, ಜೆಸ್ಕಾಂಗೆ 675 ಕೋಟಿ ರು ಬಿಡುಗಡೆಯಾಗಿತ್ತು ಎಂದು ಸಚಿವ ಜಾರ್ಜ್‌ ಅವರು ನೀಡಿದ್ದ ಉತ್ತರದಿಂದ ಗೊತ್ತಾಗಿದೆ.

 

ಗ್ಯಾರಂಟಿ ಹಣವೇನು ಸರ್ಕಾರದ ಸಂಬಳವೇ ಎಂದು ಸಚಿವ ಕೆ ಜೆ ಜಾರ್ಜ್‌ ಅವರು ಉತ್ತರಿಸಿದ್ದರು.   ಗೃಹ ಜ್ಯೋತಿ ಯೋಜನೆ ಅನುಷ್ಠಾನಗೊಳಿಸಿದ್ದ ಎಸ್ಕಾಂಗಳಿಗೆ ಸರ್ಕಾರವು ಬಾಕಿ  ಹಣ ಬಿಡುಗಡೆ ಮಾಡಿರಲಿಲ್ಲ. ಹೀಗಾಗಿ   ಗ್ರಾಹಕರಿಂದಲೇ ಹಣ ವಸೂಲು ಮಾಡಲಾಗುವುದು ಎಂದು ನೋಟೀಸ್‌ ಕೂಡ ಜಾರಿಗೊಳಿಸಿದ್ದವು. ನಂತರ ಸಚಿವ ಕೆ ಜೆ ಜಾರ್ಜ್‌ ಸೂಚನೆ ಮೇರೆಗೆ ನೋಟೀಸ್‌ ಹಿಂಪಡೆದುಕೊಳ್ಳಲು ಸೂಚಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts