ಬೆಂಗಳೂರು; ಸಿದ್ದರಾಮಯ್ಯ ಅವರ ಮೊದಲ ಅವಧಿಯ ಕಾಂಗ್ರೆಸ್ ಸರ್ಕಾರವು ನಿಯಮಗಳಲ್ಲಿ ಅವಕಾಶವಿರದಿದ್ದರೂ ನರ್ಮ್ ಯೋಜನೆಗೆ ನೀಡಿದ್ದ ಅನುದಾನವನ್ನು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರವು ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿ ಇರಿಸಿದ್ದರೇ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಹೆಚ್ಚುವರಿ ಬಡ್ಡಿ ಪಡೆಯಲು ಅವಕಾಶವನ್ನೂ ತಳ್ಳಿ ಹಾಕಿದ್ದ ಮುಡಾ ಅಧಿಕಾರಿಗಳು ಪ್ರಾಧಿಕಾರಕ್ಕೆ ನಷ್ಟವನ್ನುಂಟು ಮಾಡಿದ್ದರು.
2021-22ನೇ ಸಾಲಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧಕರು ಮತ್ತು ಲೆಕ್ಕ ಪತ್ರ ಇಲಾಖೆಯು ಸಲ್ಲಿಸಿರುವ ಲೆಕ್ಕ ಪರಿಶೋಧನೆ ವರದಿಯು ಮುಡಾದಲ್ಲಿನ ಆರ್ಥಿಕ ನಷ್ಟವನ್ನೂ ಬಹಿರಂಗಪಡಿಸಿದೆ.
ಮುಡಾದಲ್ಲಿನ ಬದಲಿ ನಿವೇಶನ ಅಕ್ರಮಗಳ ರೂವಾರಿ ಎಂದು ಜಾರಿ ನಿರ್ದೇಶನಾಲಯವು ಗುರುತಿಸಿದ್ದ ಜಿ ಟಿ ದಿನೇಶ್ ಕುಮಾರ್, ಡಾ ಡಿ ಬಿ ನಟೇಶ್, ಜಿ ಲಕ್ಷ್ಮಿಕಾಂತ ರೆಡ್ಡಿ ಅವರು ಆಯುಕ್ತರಾಗಿದ್ದ ಅವಧಿಯಲ್ಲೇ ಆರ್ಥಿಕ ನಷ್ಟವುಂಟಾಗಿತ್ತು. ಈ ಆಯುಕ್ತರು 2023 ರಲ್ಲಿ ನೀಡಿದ್ದ ಸಮಜಾಯಷಿಯನ್ನೂ ಲೆಕ್ಕ ಪರಿಶೋಧಕರು ಒಪ್ಪಿರಲಿಲ್ಲ.
ಬದಲಿ ನಿವೇಶನ, ತುಂಡು ಭೂಮಿ ಮಂಜೂರು; ಸರ್ಕಾರಿ ಲೆಕ್ಕ ಪರಿಶೋಧನೆಗೂ ಕಡತ ಹಾಜರುಪಡಿಸದ ಅಧಿಕಾರಿಗಳು
ಲೆಕ್ಕ ಪರಿಶೋಧನೆಯ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಪ್ರಕರಣದ ವಿವರ
2021-22ನೇ ಸಾಲಿನಲ್ಲಿ ಮುಡಾದಲ್ಲಿ ಲಭ್ಯವಿದ್ದ ಹೆಚ್ಚುವರಿ (ಉಳಿತಾಯ) ಮೊತ್ತದ ರೂಪದಲ್ಲಿ 350 ಕೋಟಿ ರು.ಗಳನ್ನು ನಿಶ್ಚಿತ ಠೇವಣಿಯಾಗಿ ಹೂಡಿಕೆ ಮಾಡಲು ಇ-ಬಿಡ್ ಕರೆದಿತ್ತು. ಬಿಡ್ಡಿನಲ್ಲಿ ಭಾಗವಹಿಸಿದ್ದ ಸಾರ್ವಜನಿಕ ರಂಗದ ಬ್ಯಾಂಕ್ ಆಫ್ ಬರೋಡಾವು ವಾರ್ಷಿಕ ಶೇ.3.55 ಬಡ್ಡಿ ದರವನ್ನು ನಮೂದಿಸಿತ್ತು. ಖಾಸಗಿ ವಲಯದ ಹೆಚ್‌ಡಿಎಫ್‌ಸಿ ಬ್ಯಾಂಕ್ ವಾರ್ಷಿಕ ಶೇ.4.90ರಷ್ಟು ಬಡ್ಡಿ ದರವನ್ನು ನಮೂದಿಸಿತ್ತು.
ಮೂಲೆ, ಮಧ್ಯಂತರ, ಸಿ ಎ ನಿವೇಶನಗಳ ಹಂಚಿಕೆ; ಹರಾಜು ಮೊತ್ತ ಸ್ವೀಕೃತದಲ್ಲೇ 90.76 ಕೋಟಿ ರು ವ್ಯತ್ಯಾಸ
ಈ ಎರಡೂ ಬ್ಯಾಂಕ್‌ಗಳು ನಮೂದಿಸಿದ್ದ ಬಡ್ಡಿ ದರದಲ್ಲಿ ಶೇ. 1.35ರಷ್ಟು ವ್ಯತ್ಯಾಸವಿತ್ತು. ಮುಡಾವು 280 ಕೋಟಿ ರು.ಗಳನ್ನು ಬ್ಯಾಂಕ್ ಆಫ್ ಬರೋಡಾದಲ್ಲಿ (ಶೇ.80ರಷ್ಟು) ಮತ್ತು ಹೆಚ್‌ಡಿಎಫ್‌ಸಿಯಲ್ಲಿ 70 ಕೋಟಿ ರು.ಗಳನ್ನು 365 ದಿನಗಳಿಗೆ ಹೂಡಿಕೆ ಮಾಡಿತ್ತು.
3,493 ನಿವೇಶನಗಳಿಗೆ ಭೂಮಿ ಖರೀದಿ ವ್ಯವಹಾರ; ಲೆಕ್ಕಪರಿಶೋಧನೆಗೆ ಸಿಗದ ಸಬ್ ರಿಜಿಸ್ಟ್ರಾರ್ ದಾಖಲೆಗಳು
ಸರ್ಕಾರವು ಹೊರಡಿಸಿದ್ದ ಮಾರ್ಗಸೂಚಿ ಪ್ರಕಾರ ಬಡ್ಡಿ ದರವು ಸ್ಪರ್ಧಾತ್ಮಕವಾಗಿದ್ದಲ್ಲಿ ಶೇ. 30ರವರೆಗಿನ ಉಳಿತಾಯ ಮೊತ್ತವನ್ನು ಖಾಸಗಿ ವಲಯದ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಲು ಅವಕಾಶವಿದೆ. ಇದರ ಪ್ರಕಾರ ಖಾಸಗಿ ವಲಯದ ಹೆಚ್‌ಡಿಎಫ್‌ಸಿ ವಾರ್ಷಿಕ ಶೇ. 4.90ರಷ್ಟು ಬಡ್ಡಿ ದರವನ್ನು ನಮೂದಿಸಿದ್ದರಿಂದ ಬ್ಯಾಂಕ್ ಆಫ್ ಬರೋಡಾ ನಮೂದಿಸಿದ್ದ ಬಡ್ಡಿ ದರಕ್ಕಿಂತ ಶೇ.1.35ರಷ್ಟು ಹೆಚ್ಚಿತ್ತು.
ಬಡ್ಡಿ ದರವು ಸ್ಪರ್ಧಾತ್ಮಕವಾಗಿರುವುದರಿಂದ ಶೇ. 30ರಷ್ಟು ಅಂದರೇ 105 ಕೋಟಿ ರು.ಗಳನ್ನು ಹೆಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಲು ಅವಕಾಶವಿತ್ತು. ಆದರೆ ಮುಡಾ 70 ಕೋಟಿ ಅಂದರೆ ಶೇ.20ರಷ್ಟು ಮಾತ್ರ ಹೂಡಿಕೆ ಮಾಡಿತ್ತು. 105 ಕೋಟಿ ರು.ಗಳನ್ನು ಹೆಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಿದ್ದರೇ 35 ಕೋಟಿ ರು.ಗಳಿಗೆ ಶೇ.1.35ರಷ್ಟು ಹೆಚ್ಚುವರಿ ಬಡ್ಡಿ ಪಡೆಯಬಹುದಿತ್ತು. ಇದರಿಂದ ಪ್ರಾಧಿಕಾರಕ್ಕೆ ಲಾಭದಾಯವಾಗಿರುತ್ತಿತ್ತು. ಈ ಸಂಬಂಧ ಲೆಕ್ಕ ಪರಿಶೋಧಕರು 2023ರ ಜೂನ್ 22ರಂದು ವಿಚಾರಣೆ ಪತ್ರ ನೀಡಿದ್ದರು.
ಅನುಮೋದನೆಯಿಲ್ಲದೇ 223 ಕೋಟಿ ರು ವರ್ಗಾವಣೆ!; ಮುಡಾ ಅಕ್ರಮ ಬಯಲು ಮಾಡಿದ ಲೆಕ್ಕ ಪರಿಶೋಧನೆ
ಇದಕ್ಕೆ ಮುಡಾ ಅಧಿಕಾರಿಗಳು ಸಮಜಾಯಿಷಿ ನೀಡಿದ್ದರು.
ಸಮಜಾಯಿಷಿಯಲ್ಲೇನಿದೆ?
ಪ್ರಾಧಿಕಾರದ ನಿಧಿಯ ಸಂರಕ್ಷಣೆಗೆ ಒತ್ತು ನೀಡಬೇಕಾದ ಹೊಣೆಗಾರಿಕೆಯಿಂದ ರಾಷ್ಟ್ರೀಕೃತ ಬ್ಯಾಂಕ್ ಗೆ ಹೆಚ್ಚುವರಿ ಭಾಗವನ್ನು ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ. ತ್ತು ರ್ಸಾರದ ಸುತ್ತೋಲೆಯಲ್ಲಿ ವಿವರಿಸಿದಂತೆ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಶೇ.70ಕ್ಕಿಂತ ಕಡಿಮೆ ಇಲ್ಲದಂತೆ ಹೂಡಿಕೆ ಮಾಡಬೇಕು. ಹೀಗಾಗಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಶೇ. 80ರಷ್ಟು ಹಾಗೂ ಖಾಸಗಿ ಬ್ಯಾಂಕ್‌ನಲ್ಲಿ ಶೇ.30ಕ್ಕಿಂತ ಮೀರದಂತೆ ಇರಬೇಕು. ಅದರ ಪ್ರಕಾರ ಹೆಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಶೇ.20ರಷ್ಟು ಹೂಡಿಕೆ ಮಾಡಲಾಗಿದೆ. ಇದರಿಂದ ಸುತ್ತೋಲೆ ಉಲ್ಲಂಘನೆಯಾಗಿಲ್ಲ ಎಂದು ಸಮಜಾಯಿಷಿ ನೀಡಿದ್ದರು. ಇದನ್ನು ಸಚಿವ ಬೈರತಿ ಸುರೇಶ್ ಅವರು ಅನುಮೋದಿಸಿದ್ದರು ಎಂದು ಗೊತ್ತಾಗಿದೆ.
ಸಿದ್ದು ಮೊದಲ ಅವಧಿಯಲ್ಲೇ ನಿಯಮಬಾಹಿರವಾಗಿ 11.57 ಕೋಟಿ ಹೂಡಿಕೆ; ನಿಶ್ಚಿತ ಠೇವಣಿ ವ್ಯವಹಾರ ಬಯಲು
ಅಲ್ಲದೇ ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಬಡ್ಡಿ ದರವು ಹೂಡಿಕೆ ಮೊತ್ತವು 2 ಕೋಟಿ ಮೀರಿದ್ದಲ್ಲಿ ಶೇ. 3.75ರಷ್ಟು ಇರುವ ಕಾರಣ ಪ್ರತಿ 2 ಕೋಟಿಗೆ ಶೇ.4.90ರಷ್ಟು ಬಡ್ಡಿದರದಂತೆ ವಿಭಜಿಸಿ 70 ಕೋಟಿ ರ. ಹೂಡಿಕೆ ಮಾಡಲಾಗಿದೆ. ಇದರಿಂದ ಬಡ್ಡಿ ದರ ರಕ್ಷಣೆ ಮಾಡಲಾಗಿದೆ ಎಂದೂ ಸಮಜಾಯಿಷಿ ನೀಡಿದ್ದರು.
ಆದರೆ ಲೆಕ್ಕ ಪರಿಶೋಧಕರು ಈ ಸಮಜಾಯಿಷಿಯನ್ನು ಒಪ್ಪಿಲ್ಲ. ‘ಸರ್ಕಾರದ ಸುತ್ತೋಲೆಯಲ್ಲಿಯೇ ಶೇ.30ರವರೆಗೆ ಖಾಸಗಿ ವಲಯ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಲು ಅವಕಾಶವಿದೆ. ಅದರಂತೆ ಶೇ.30ರಷ್ಟು ಹೂಡಿಕೆ ಮಾಡಿದಲ್ಲಿ 35 ಕೋಟಿ ರು.ಗಳಿಗೆ ಶೇ.1.35ರಷ್ಟು ಹೆಚ್ಚುವರಿ ಬಡ್ಡಿ ಪಡೆಯಬಹುದಾಗಿತ್ತು. ಇದರಿಂದ ಪ್ರಾಧಿಕಾರಕ್ಕೆ ಲಾಭದಾಯವಾಗಿರುತ್ತಿತ್ತು,’ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ಅಭಿಪ್ರಾಯಿಸಿರುವುದು ಗೊತ್ತಾಗಿದೆ.