ಬೆಂಗಳೂರು; 3,493 ನಿವೇಶನಗಳುಳ್ಳ 84 ಖಾಸಗಿ ವಸತಿ ವಿನ್ಯಾಸ ನಕ್ಷೆಗೆ ಅನುಮೋದನೆ ಪಡೆದುಕೊಂಡಿರುವ ನಿರ್ಮಾಣದಾರರು ಭೂಮಿ ಖರೀದಿಸಿದ್ದ ದರ ಮತ್ತು ಮೌಲ್ಯಕ್ಕೆ ಸಂಬಂಧಿಸಿದಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ಅಧಿಕೃತ ದಾಖಲೆಗಳನ್ನು ಲೆಕ್ಕ ಪರಿಶೋಧನೆಗೆ ಹಾಜರುಪಡಿಸಿಲ್ಲ.
ಅಭಿವೃದ್ದಿದಾರರು ನಿರ್ಮಾಣ ಮಾಡಿರುವ ಬಡಾವಣೆಗಳ ವಿನ್ಯಾಸ ನಕ್ಷೆಗಳಿಗೆ ಸಂಬಂಧಿಸಿದಂತೆ ಉತ್ತಮತೆ ಶುಲ್ಕ (ಬೆಟರ್‌ಮೆಂಟ್ ಶುಲ್ಕ) ಕುರಿತು ನಿಖರವಾಗಿ ಪ್ರಾಧಿಕಾರಕ್ಕೆ ಎಷ್ಟು ಮೊತ್ತ ಜಮಾ ಆಗಬೇಕಿತ್ತು ಎಂಬುದರ ಬಗ್ಗೆ ಕಡತಗಳಲ್ಲಿ ಪೂರಕ ಮಾಹಿತಿಗಳೇ ಇರಲಿಲ್ಲ ಎಂಬುದನ್ನು ಸರ್ಕಾರಿ ಲೆಕ್ಕ ಪರಿಶೋಧಕರ ತಪಾಸಣೆ ವೇಳೆಯಲ್ಲಿ ಬಯಲಾಗಿದೆ.
ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷವನ್ನು ಸೇರಿರುವ ಹೆಚ್ ವಿ ರಾಜೀವ್ ಅವರು ಮುಡಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿಯೇ ಈ ಎಲ್ಲಾ ಲೋಪಗಳು ನಡೆದಿವೆ. ಅಲ್ಲದೇ ಮುಡಾದಲ್ಲಿನ ಬದಲಿ ನಿವೇಶನ ಅಕ್ರಮಗಳ ರೂವಾರಿ ಎಂದು ಜಾರಿ ನಿರ್ದೇಶನಾಲಯವು ಗುರುತಿಸಿದ್ದ ಜಿ ಟಿ ದಿನೇಶ್ ಕುಮಾರ್, ಡಾ ಡಿ ಬಿ ನಟೇಶ್, ಜಿ ಲಕ್ಷ್ಮಿಕಾಂತ ರೆಡ್ಡಿ ಅವರು ಈ ಅವಧಿಯಲ್ಲಿ ಮುಡಾ ಆಯಕ್ತರಾಗಿದ್ದರು.
2021-22ನೇ ಸಾಲಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಅಧಿಕಾರಿಗಳು ನಡೆಸಿದ್ದ ಲೆಕ್ಕ ಪರಿಶೋಧನೆಯು, ಮುಡಾ ವ್ಯಾಪ್ತಿಯಲ್ಲಿ ಅನುಮೋದನೆ ದೊರೆತಿರುವ ಖಾಸಗಿ ಅಭಿವೃದ್ಧಿದಾರರು ಭೂ ವ್ಯವಹಾರದ ಮತ್ತೊಂದು ಮುಖವನ್ನು ತೆರೆದಿಟ್ಟಿದೆ.
ಇಲಾಖೆಯು ಸರ್ಕಾರಕ್ಕೆ ಸಲ್ಲಿಸಿರುವ ಲೆಕ್ಕ ಪರಿಶೋಧನೆಯ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಬೆಳವಾಡಿ, ಲಿಂಗಾಂಬುದಿ, ಇಲವಾಲ, ಮಂಡಕಳ್ಳಿ, ಉದ್ಬೂರು, ಕಡಕೊಳ, ದಟ್ಟಗಳ್ಳಿ, ಬೊಮ್ಮೇನಹಳ್ಳಿ, ಚಿಕ್ಕಹರದನಹಳ್ಳಿ, ವಾಜಮಂಗಲ, ಕೆ, ಹೆಮ್ಮನಹಳ್ಳಿ, ಕರ್ಲಾಪುರ, ಹಾಲಾಳಿ, ಬೋಗಾದಿ, ಶ್ರೀರಾಂಪುರ, ಕೇರ್ಗಳ್ಳಿ, ಶ್ಯಾದನಹಳ್ಳಿ, ಸರ್ಕಾರಿ ಉತ್ತನಹಳ್ಳಿ, ಶ್ರೀರಾಂಪುರ, ಚಿಕ್ಕಳ್ಳಿ, ಬೆಲವತ್ತ, ಹುರುಳಿ ಕ್ಯಾತನಹಳ್ಳಿ, ಮಾದಗಳ್ಳಿ, ಭುಗತಹಳ್ಳಿ, ಯಡಹಳ್ಳಿ, ಹಿನಕಲ್, ನಾಗವಾಲ, ಮಾದಾಪುರ ಗ್ರಾಮಗಳ ವಿವಿಧ ಸರ್ವೇ ನಂಬರ್‌ಗಳಲ್ಲಿ ಪ್ರತಿಷ್ಠಿತ, ರಾಜಕೀಯ ಹಿನ್ನೆಲೆಯುಳ್ಳ ಅಭಿವೃದ್ದಿದಾರರು ಮತ್ತು ಹಿರಿಯ ಐಎಎಸ್ ಅಧಿಕಾರಿಯೊಬ್ಬರು ರಚಿಸಿರುವ ಬಡಾವಣೆಗಳಿಗೆ ಸಂಬಂಧಿಸಿದ ದಾಖಲೆಗಳೂ ಈ ಪಟ್ಟಿಯಲ್ಲಿವೆ.
ಮಾಜಿ ಸಚಿವ ಎಸ್ ಎ ರಾಮದಾಸ್ ಅವರ ಸೋದರ ಶ್ರೀಕಾಂತ್ ದಾಸ್, ಇಎಸ್‌ಎಸ್ ಅಂಡ್ ಇಎಸ್‌ಎಸ್ ಇನ್ಫ್ರಾಸ್ಟಕ್ಚರ್ಸ್ ಲಿ., ನಿವೃತ್ತ ಐಎಎಸ್ ಅಧಿಕಾರಿ ಡಾ ಎನ್ ನಾಗಾಂಬಿಕಾ ದೇವಿ, ನದೀಮ್ ಅಹ್ಮದ್, ಕೆಎಸ್‌ಐಸಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ, ಕೆ ಎಂ ಚಿಕ್ಕತಾಯಮ್ಮ, ಕೆಬಿಎಲ್ ಅಂಡ್ ಸನ್ಸ್ , ಸಿ ಎನ್ ಮಂಜೇಗೌಡ, ಮಂಜುನಾಥ್, ಶ್ರೀನಿಧಿ ಆಶಾಕಿರಣ ಟೌನ್ ಶಿಪ್ ಡೆವಲಪರ್ಸ್‌ನ ಜಗನ್ನಾಥ ಶೆಟ್ಟಿ, ಜಿತೇಂದ್ರ ಕುಮಾರ್, ಹೆಚ್ ಎನ್ ಶಿವನಂಜಯ್ಯ ಸೇರಿ ಒಟ್ಟಾರೆ 84 ಮಂದಿ ಖಾಸಗಿ ಬಡಾವಣೆಗಳಿಗೆ ಅನುಮೋದನೆ ಪಡೆದುಕೊಂಡಿರುವ ಪಟ್ಟಿಯಲ್ಲಿದ್ದಾರೆ.
2021-22ರ ಸಾಲಿನಲ್ಲಿ ಲೆಕ್ಕ ಪರಿಶೋಧನೆಗೆ ಹಾಜರುಪಡಿಸಲಾದ ಕಡತಗಳ ಪ್ರಕಾರ 84 ಖಾಸಗಿ ಬಡಾವಣೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ವಿನ್ಯಾಸ ನಕ್ಷೆಗೆ ಸಂಬಂಧಪಟ್ಟಂತೆ ಉತ್ತಮತೆ ಶುಲ್ಕ (ಬೆಟರ್‌ಮೆಂಟ್ ಫೀ) ಕುರಿತು ನಿಖರವಾಗಿ ಪ್ರಾಧಿಕಾರಕ್ಕೆ ಎಷ್ಟು ಮೊಬಲಗು ಜಮಾ ಆಗಬೇಕಿತ್ತು ಎಂಬುದರ ಕುರಿತು ಕಡತಗಳಲ್ಲಿ ಪೂರಕ ಮಾಹಿತಿಗಳು ಇಲ್ಲ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಲಾಗಿದೆ.
ಬದಲಿ ನಿವೇಶನ, ತುಂಡು ಭೂಮಿ ಮಂಜೂರು; ಸರ್ಕಾರಿ ಲೆಕ್ಕ ಪರಿಶೋಧನೆಗೂ ಕಡತ ಹಾಜರುಪಡಿಸದ ಅಧಿಕಾರಿಗಳು
‘ಪೂರಕ ಮಾಹಿತಿಗಳು ಎಂದರೆ ವಸತಿ ಬಡಾವಣೆ ನಿರ್ಮಾಣಕ್ಕೆ ಭೂ ಮಾಲೀಕರಿಂದ ನಿರ್ಮಾಣದಾರರು ಭೂಮಿ ಖರೀದಿಸಿದ ದರ ಮತ್ತು ಮೌಲ್ಯಕ್ಕೆ ಸಂಬಂಧಿಸಿದಂತೆ ಉಪ ನೋಂದಣಾಧಿಕಾರಿಗಳ ಕಚೇರಿಯಿಂದ ಅಧಿಕೃತ ದಾಖಲೆಗಳನ್ನು ಲೆಕ್ಕ ಪರಿಶೋಧನೆಗೆ ಹಾಜರುಪಡಿಸಿರುವುದಿಲ್ಲ,’ ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಹಾಗೆಯೇ ವಸತಿ ಬಡಾವಣೆಗಳನ್ನು ಅಭಿವೃದ್ಧಿಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ಆಗಿರುವ ವೆಚ್ಚದ ವಿವರಗಳನ್ನೂ ಮುಡಾದ ನಗರ ಯೋಜನೆ ಶಾಖೆಯು ಲೆಕ್ಕ ಪರಿಶೋಧಕರಿಗೆ ಹಾಜರುಪಡಿಸಿಲ್ಲ. ಮತ್ತು ಬಡಾವಣೆ ನಿರ್ಮಾಣದ ನಂತರ ಅಲ್ಲಿ ಬಿಟ್ಟಿರುವ ನಾಗರಿಕ ಸೌಕರ್ಯಗಳ ಪ್ರದೇಶ ಹೊರತುಪಡಿಸಿ (ಚರಂಡಿ, ರಸ್ತೆ, ಉದ್ಯಾನ, ಆಟದ ಮೈದಾನ, ಇತರೆ) ಉಳಿದ ಪ್ರದೇಶದಲ್ಲಿ ಯಾವ ಅಳತೆಯ ನಿವೇಶನಗಳನ್ನು ಮಾರಾಟಕ್ಕೆ ಇಟ್ಟಿರುತ್ತಾರೆ ಎಂಬ ಮಾಹಿತಿಯನ್ನೂ ರಿಜಿಸ್ಟರ್‌ನಲ್ಲಿ ನೀಡಿಲ್ಲ ಎಂಬುದು ವರದಿಯಿಂದ ತಿಳಿದು ಬಂದಿದೆ.
ಮೂಲೆ, ಮಧ್ಯಂತರ, ಸಿ ಎ ನಿವೇಶನಗಳ ಹಂಚಿಕೆ; ಹರಾಜು ಮೊತ್ತ ಸ್ವೀಕೃತದಲ್ಲೇ 90.76 ಕೋಟಿ ರು ವ್ಯತ್ಯಾಸ
ಅದೇ ರೀತಿ ಈ ನಿವೇಶನಗಳ ಮಾರಾಟ ಮಾಡುವ ಅವಧಿಯಲ್ಲಿ ಆರುಕಟ್ಟೆ ಮೌಲ್ಯ ಎಷ್ಟು ಎಂಬುದರ ಬಗ್ಗೆ ಮಾಹಿತಿಯನ್ನು ಹಾಜರುಪಡಿಸಿಲ್ಲ. ಹೀಗಾಗಿ ಖಾಸಗಿ ವಸತಿ ಬಡಾವಣೆಗಳ ನಿರ್ಮಾಣದಾರರು ನಿವೇಶನಗಳನ್ನು ಮಾರಾಟ ಮಾಡಿ ಬದ ಲಾಭಾಂಶದಲ್ಲಿ 1/3ರ ಭಾಗದಷ್ಟು ಮೊಬಲಗನ್ನು ಮುಡಾಕ್ಕೆ ಜಮಾ ಮಾಡಬೇಕಿತ್ತು. ಆದರೆ ಈ ಕುರಿತು ನಿಖರವಾದ ಅಂಕಿ ಅಂಶಗಳು ಲಭ್ಯವಿಲ್ಲ ಎಂದು ವರದಿಯಲ್ಲಿ ವಿವರಿಸಿದೆ.
ಮುಡಾ ಅನುಮೋದನೆ ನೀಡಿರುವ ಖಾಸಗಿ ಬಡಾವಣೆಗಳ ಪೈಕಿ ಇಎಸ್‌ಎಸ್ ಅಂಡ್ ಇಎಸ್‌ಎಸ್ ಇನ್ಫ್ರಾಸ್ಚಕ್ಚರ್ ಲಿ ಬೊಮ್ಮೇನಹಳ್ಳಿ ಸರ್ವೇ ನಂಬರ್ 19/5, 21, 2/1, 22/2, 22/8, 23/9ರಲ್ಲಿನ ಒಟ್ಟು 8 ಎಕರೆ 37 ಗುಂಟೆಯಲ್ಲಿ 125 ನಿವೇಶನಗಳನ್ನು ರಚಿಸಿದೆ. ಅದೇ ರೀತಿ ಇದೇ ಕಂಪನಿಯು ನಾಗವಾಲದ ಸರ್ವೇ ನಂಬರ್ 95/2ರಲ್ಲಿ 2 ಎಕರೆಯಲ್ಲಿ 33 ನಿವೇಶನ, ಸರ್ವೆ ನಂಬರ್ 08/2, 116, 180/2, 203/2ರಲ್ಲಿ 4 ಎಕರೆ 16 ಗುಂಟೆಯಲ್ಲಿ 74 ನಿವೇಶನಗಳನ್ನು ರಚಿಸಿರುವುದು ವರದಿಯಿಂದ ಗೊತ್ತಾಗಿದೆ.
ನದೀಮ್ ಅಹ್ಮದ್ ಷರೀಫ್ ಎಂಬುವರು ವಾಜಮಂಗಲದ ಸರ್ವೆ ನಂಬರ್ 14/1,15ರಲ್ಲಿನ 6 ಎಕರೆ 32 ಗುಂಟೆಯಲ್ಲಿ 129 ನಿವೇಶನಗಳನ್ನು ರಚಿಸಿದ್ದಾರೆ.
ನಿವೃತ್ತ ಐಎಎಸ್ ಅಧಿಕಾರಿ ಡಾ ಎನ್ ನಾಗಾಂಬಿಕ ದೇವಿ ಅವರು ಕೇರ್ಗಳ್ಳಿ ಸರ್ವೆ ನಂಬರ್ 4/8 ರಲ್ಲಿ 12 ಗುಂಟೆಯಲ್ಲಿ 1 ನಿವೇಶನವನ್ನು ರಚಿಸಿದ್ದಾರೆ.
ಕೆಎಸ್‌ಐಸಿಸಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘವು ವಾಜಮಂಗಲದ ಸರ್ವೆ ನಂಬರ್ 85/2ರಲ್ಲಿ 3 ಎಕರೆ 15 ಗುಂಟೆ ವಿಸ್ತೀರ್ಣದಲ್ಲಿ 50 ನಿವೇಶನ, ಸರ್ಕಾರಿ ಉತ್ತನಹಳ್ಳಿ ಗ್ರಾಮದ ಸರ್ವೆ ನಂಬರ್ 99/1, 99/2, 91/1ರ್ಲಿನ ಒಟ್ಟು 4 ಎಕರೆ 5 ಗುಂಟೆಯಲ್ಲಿ 72 ನಿವೇಶನ, ಕೆ ಎಂ ಚಿಕ್ಕತಾಯಮ್ಮ ಇವರ ಪರವಾಗಿ ಜಿಪಿಎ ವಾರಸುದಾರರಾದ ಎನ್ ಮಂಜುನಾಥ್ ಎಂಬುವರು ದಟ್ಟಗಳ್ಳಿ ಸರ್ವೆ ನಂಬರ್ 176/1, 176/2,183/4, 185ರಲ್ಲಿ ಒಟ್ಟು 12 ಎಕರೆ 36 ಗುಂಟೆಯಲ್ಲಿ 195 ನಿವೇಶನಗಳನ್ನು ರಚಿಸಿರುವುದು ವರದಿಯಿಂದ ತಿಳಿದು ಬಂದಿದೆ.
ಕೆಬಿಎಲ್ ಅಂಡ್ ಸನ್ಸ್ ಪರವಾಗಿ ಎಲ್ ರವಿ ಎಂಬುವರು ಯಾಂದಳ್ಳಿ ಸರ್ವೆ ನಂಬರ್ 24/1, 25/1, 24/2ರಲ್ಲಿ ಒಟ್ಟು 25 ಎಕರೆ 8 ಗುಂಟೆಯಲ್ಲಿ 347 ನಿವೇಶನ ರಚಿಸಿದ್ದಾರೆ. ಶ್ರೀಕಾಂತದಾಸ್ ಅವರು ಬೆಳವಾಡಿಯ ಸರ್ವೆ ನಂಬರ್ 159/1ರಲ್ಲಿ 1 ಎಕರೆಯಲ್ಲಿ 13 ನಿವೇಶನ, ಮಂಜುನಾಥ್ , ನಿಖಿಲ್ ನಾರಾಯಣ್ ಎಂಬುವರು ಚಾಮಲಾಪುರ ಸರ್ವೆ ನಂಬರ್ 82/1, 82/2ರಲ್ಲಿ 7 ಎಕರೆ 5 ಗುಂಟೆಯಲ್ಲಿ 115 ನಿವೇಶನ ರಚಿಸಿದ್ದಾರೆ.
ಬಿಎಸ್‌ಎನ್‌ಎಲ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘವು ವಾಜಮಂಗಲದ ಸರ್ವೆ ನಂಬರ್ 3/2, 191/2, 191/8ರಲ್ಲಿ 3 ಎಕರೆ 39 ಗುಂಟೆಯಲ್ಲಿ 45 ನಿವೇಶನ, ಜಿತೇಂದ್ರ ಕುಮಾರ್ ಎಂಬುವರು ವಾಜಮಂಗಲದ ಸರ್ವೆ ನಂಬರ್ 42/1, 42/2, 42/4ರಲ್ಲಿ 17 ಎಕರೆ 9 ಗುಂಟೆಯಲ್ಲಿ 251 ನಿವೇಶನಗಳನ್ನು ರಚಿಸಿರುವುದು ಗೊತ್ತಾಗಿದೆ.