ಕಚೇರಿ ನಿರ್ಮಾಣಕ್ಕೆ ಪಾಲಿಕೆ ಆಸ್ತಿ ಮೇಲೆ ಕಣ್ಣು ಹಾಕಿದ ಕೆಪಿಸಿಸಿ; ಕಡಿಮೆ ಬೆಲೆಯಲ್ಲಿ ಮಂಜೂರಾತಿಗೆ ಒತ್ತಡ

ಬೆಂಗಳೂರು;  ನೂರಾರು ಕೋಟಿ ರುಪಾಯಿ ದೇಣಿಗೆ ಪಡೆಯುತ್ತಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯು ಹುಬ್ಬಳ್ಳಿಯಲ್ಲಿ ಕಚೇರಿ ನಿರ್ಮಾಣ ಮಾಡಲು ಕಡಿಮೆ ಬೆಲೆಯಲ್ಲಿ 2,988.29 ಚದರ ಮೀಟರ್ ವಿಸ್ತೀರ್ಣದ ಜಾಗವನ್ನು  ಮಂಜೂರು ಮಾಡಲು  ಪ್ರಸ್ತಾವನೆ ಸಲ್ಲಿಸಿರುವುದು ಇದೀಗ ಬಹಿರಂಗವಾಗಿದೆ.

 

ಸಾವಿರಾರು ಕೋಟಿ ರುಪಾಯಿ ದೇಣಿಗೆ ಪಡೆದಿರುವ ಬಿಜೆಪಿಯೂ ಸಹ ಕರ್ನಾಟಕದ ವಿವಿಧೆಡೆ ಕಚೇರಿ ನಿರ್ಮಾಣ ಮಾಡಲು ಪರಿಶಿಷ್ಟ ಜಾತಿಯ ಸರ್ಕಾರಿ ವಿದ್ಯಾರ್ಥಿ ನಿಲಯಗಳೂ ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಿರುವ ನಿವೇಶನ, ಜಮೀನುಗಳ ಮೇಲೆ ಕಣ್ಣು ಹಾಕಿತ್ತು. ಇದರ ಬೆನ್ನಲ್ಲೇ ಇದೀಗ ಕೆಪಿಸಿಸಿ ಕೂಡ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಸ್ತಿ ಮೇಲೆ ಕಣ್ಣು ಹಾಕಿದೆ.

 

ಈ ಆಸ್ತಿಯನ್ನು  ಕಡಿಮೆ ಬೆಲೆಯಲ್ಲಿ  ಮಂಜೂರು ಮಾಡುವ ಸಂಬಂಧ  ಪ್ರಸ್ತಾವನೆ ಸಲ್ಲಿಸಿದೆ. ಈ ಪ್ರಸ್ತಾವನೆ ಅಧರಿಸಿ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯು ಆಯುಕ್ತರು ಪೌರಾಡಳಿತ ನಿರ್ದೇಶನಾಲಯಕ್ಕೆ ಕಡತ ಮಂಡಿಸಿದ್ದಾರೆ.

 

ಈ ಕಡತದಲ್ಲಿನ ಟಿಪ್ಪಣಿ ( UDD/D156/HDMC/2024-CORP-URBAN DEVELOPMENT DEPARTMENT, COMPUTER NUMBER 1632698) ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್, ಶಾಸಕ ವಿನಯ್ ಕುಲಕರ್ಣಿ, ಪ್ರಸಾದ್ ಅಬ್ಬಯ್ಯ ಮತ್ತಿತರರು ಈ ಪ್ರಸ್ತಾವನೆಗೆ ಶಿಫಾರಸ್ಸು ಮಾಡಿದ್ದಾರೆ. ಇದನ್ನಾಧರಿಸಿ ಆರ್ಥಿಕ ಇಲಾಖೆಯ ಅಭಿಪ್ರಾಯ ಪಡೆಯಲು ಕಡತವನ್ನು ಪೌರಾಡಳಿತ ಇಲಾಖೆಯು ಕಡತವನ್ನು (DMA/DEV/OTH/285/2024)  ಮಂಡಿಸಿರುವುದು ಗೊತ್ತಾಗಿದೆ.

 

ಪೌರಾಡಳಿತ ಇಲಾಖೆಯ ಪ್ರಸ್ತಾವನೆಯಲ್ಲೇನಿದೆ?

 

ಕೆಪಿಸಿಸಿಗೆ ಕಾರ್ಯಾಲಯ ಕಚೇರಿ ನಿರ್ಮಾಣ ಮಾಡಲು  ಉದ್ದೇಶಿತ ಆಸ್ತಿಯು ಮಹಾನಗರಪಾಲಿಕೆಯ ಆಸ್ತಿಯಾಗಿದೆ.  ಸರ್ಕಾರವು ನಿಗದಿಪಡಿಸಿರುವ ಮಾರ್ಗಸೂಚಿಗಳ ರೀತಿ ಪಾಲಿಕೆಯ ಆಸ್ತಿಗಳನ್ನು ಕೆಲವು ಉದ್ದೇಶಗಳನ್ನು ಹೊರತುಪಡಿಸಿ ಸಾರ್ವಜನಿಕ ಹರಾಜು ಮೂಲಕ ಮಾರಾಟ ಮಾಡಲು ಅವಕಾಶವಿದೆ. ಈ ಪ್ರಕರಣದಲ್ಲಿಯೂ ಸಾರ್ವಜನಿಕ ಹರಾಜು ಮುಖಾಂತರವೇ ಆಸ್ತಿಯನ್ನು ಹಂಚಿಕೆ ಮಾಡಬೇಕಾಗಿದೆ ಎಂದು ತಿಳಿಸಿದೆ.

 

 

ಆದರೆ ಈ ಪ್ರಸ್ತಾವಿತ ವಿಷಯಕ್ಕೆ ಪಾಲಿಕೆಯ ಕೌನ್ಸಿಲ್‌ ಸಭೆಯಲ್ಲಿ ಅನುಮೋದನೆ ಆಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್ ಅವರು ಧಾರವಾಡ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯ ನಿರ್ಮಾಣ ಮಾಡುವ ಸಲುವಾಗಿ ಜಾಗವನ್ನು ಮಂಜೂರು ಮಾಡಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದಕ್ಕೆ ತಗುಲುವ ವೆಚ್ಚವನ್ನು ಈಗಿನ ಸರ್ಕಾರದ ದರ ಅಥವಾ ಅದಕ್ಕಿಂತ ಕಡಿಮೆ ಬೆಲೆಯನ್ನು ಭರಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನು ಒಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಪ್ರಸ್ತಾವನೆಯನ್ನು ಸಚಿವ ಸಂಪುಟದ ಅನುಮೋದನೆಗೆ ಮಂಡಿಸಲು ಸೂಚಿಸಿದ್ದಾರೆ ಎಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

ಮಹಾನಗರಪಾಲಿಕೆಗಳ ಆಸ್ತಿ, ಜಾಗವನ್ನು ಮಾರಾಟ ಮಾಡಲು ಕರ್ನಾಟಕ ಮಹಾನಗರಪಾಲಿಕೆಎಗಳ ಅಧಿನಿಯಮ 1976ರ ಕಲಂ 176 (6) ಅಡಿ ಪಾಲಿಕೆಗಳ ಜಾಗಗಳನ್ನು ಮಾರಾಟ, ಗುತ್ತಿಗೆ ನೀಡಲು ಸರ್ಕಾರದ ಪೂರ್ವಾನುಮೋದನೆ ಪಡೆಯಬೇಕು. ಆದರೆ ನಗರ ಸ್ಥಳೀಯ ಸಂಸ್ಥೆಗಳ ಜಾಗವನ್ನು ವಿಲೇವಾರಿ ಮಾಡುವ ಕುರಿತು 2003ರ ಜೂನ್‌ 2ರಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದರ ಪ್ರಕಾರ ಕೆಪಿಸಿಸಿ ಕಚೇರಿ ನಿರ್ಮಾಣ ಮಾಡಲು ಪ್ರಸ್ತಾಪಿಸಿರುವ ಜಾಗವನ್ನು ಹರಾಜು ಮೂಲಕವೇ ವಿಲೇವಾರಿ ಮಾಡಬೇಕು ಎಂದು ಟಿಪ್ಪಣಿ ಹಾಳೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

‘ಆದರೆ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯ ನಿರ್ಮಿಸಲು ಜಾಗವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮಂಜೂರು ಮಾಡಬೇಕು ಎಂದು ಕೋರಿದೆ. ಹೀಗಾಗಿ ಪಾಲಿಕೆಯ ಒಡೆತನದಲ್ಲಿರುವ 2,988.29 ಚ ಮೀ ವಿಸ್ತೀರ್ಣ ಜಾಗವನ್ನು ಕೆಪಿಸಿಸಿಗೆ ಮಾರುಕಟ್ಟೆ ದರದಲ್ಲಿ ಮಂಜೂರು ಮಾಡುವ ಕುರಿತು ಸಚಿವ ಸಂಪುಟಕ್ಕೆ ಟಿಪ್ಪಣಿ ಸಿದ್ಧಪಡಿಸಬೇಕು,’  ಎಂದು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

ಈ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯ ಸಹಮತಿ, ಅಭಿಪ್ರಾಯ ಪಡೆಯಲು ಆದೇಶ ನೀಡಬೇಕು ಎಂದು ನಗರಾಭಿವೃದ್ಧಿ ಇಲಾಖೆಯು 2024ರ ಡಿಸೆಂಬರ್‍‌ 31ರಂದು ಕಡತ ಮಂಡಿಸಿರುವುದು ಗೊತ್ತಾಗಿದೆ.

 

 

ಭಾರತೀಯ ಜನತಾ ಪಾರ್ಟಿಯು ತಾಲೂಕು ಪ್ರದೇಶಗಳಲ್ಲಿ ಸ್ವಂತ ಕಚೇರಿಗಾಗಿ ಕಟ್ಟಡ ನಿರ್ಮಾಣ ಮಾಡಲು ಪರಿಶಿಷ್ಟ ಜಾತಿಯ ಸರ್ಕಾರಿ ವಿದ್ಯಾರ್ಥಿ ನಿಲಯಗಳೂ ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಿರುವ ನಿವೇಶನ, ಜಮೀನುಗಳ ಮೇಲೆ ಕಣ್ಣು ಹಾಕಿತ್ತು.

 

 

ಬಿಜೆಪಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಪರಿಶಿಷ್ಟರ ವಿದ್ಯಾರ್ಥಿ ನಿಲಯಕ್ಕೆ ಮೀಸಲಾದ ನಿವೇಶನ!; ಕಾರಜೋಳರ ಒತ್ತಡ?

 

ಪರಿಶಿಷ್ಟ ಜಾತಿಯ ಸರ್ಕಾರಿ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ ಸಂಬಂಧ ಕಾಯ್ದರಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ವರದಿ ನೀಡಿದ್ದರೂ ಇದೇ ಜಾಗದಲ್ಲಿ ಭಾರತೀಯ ಜನತಾ ಪಕ್ಷದ ಕಚೇರಿ ಕಟ್ಟಡ ನಿರ್ಮಾಣ ಮಾಡಲು ಖಾಲಿ ನಿವೇಶನ ಮಂಜೂರು ಮಾಡಲು ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದ್ದರು.

SUPPORT THE FILE

Latest News

Related Posts