ಬೆಂಗಳೂರು; ಅಲ್ಪಸಂಖ್ಯಾತರ ಕಲ್ಯಾಣ, ವಸತಿ ಮತ್ತು ವಕ್ಫ್ ಸಚಿವ ಬಿ ಝಡ್ ಜಮೀರ್ ಅಹ್ಮದ್ ಖಾನ್ ಅವರ ವಿರುದ್ಧ ಲೋಕಾಯುಕ್ತದಲ್ಲಿ ದಾಖಲಾಗಿರುವ ಪ್ರಕರಣದ ಕುರಿತು ತೆರೆದಿರುವ ಕಡತಕ್ಕೆ 11 ತಿಂಗಳಾದರೂ ಇನ್ನೂ ಮುಕ್ತಿ ದೊರೆತಿಲ್ಲ.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಮುಖ್ಯಮಂತ್ರಿಗಳ ಅನುಮೋದನೆಗೆ ಕಳಿಸಿರುವ ಬಹುತೇಕ ಕಡತಗಳಿಗೆ ಕಳೆದ ಒಂದು ವರ್ಷದಿಂದಲೂ ಧೂಳು ಮೆತ್ತಿಕೊಂಡಿದೆ. ಅದರಲ್ಲೂ ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ ಎಲ್ ಕೆ ಅತೀಕ್ ಅವರ ಬಳಿಯೇ 2023ರ ಮೇ 20ರಿಂದ 2024ರ ಡಿಸೆಂಬರ್ 4ರವರೆಗೆ ಒಟ್ಟು 371 ಕಡತಗಳು ವಿಲೇವಾರಿ ಆಗದೇ ಬಾಕಿ ಉಳಿದಿವೆ.
ಮುಖ್ಯಮಂತ್ರಿಗಳ ಸಚಿವಾಲಯದ ವಿವಿಧ ವೃಂದದ ಅಧಿಕಾರಿಗಳ ಬಳಿ ಬಾಕಿ ಇರುವ ಕಡತಗಳ ಪಟ್ಟಿಯನ್ನು ‘ದಿ ಫೈಲ್’, ಆರ್‍ಟಿಐ ಅಡಿಯಲ್ಲಿ ಪಡೆದುಕೊಂಡಿದೆ. ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಆಗಿರುವ ಎಲ್ ಕೆ ಅತೀಕ್ ಅವರ ಬಳಿ ಮಹತ್ವದ ವಿಚಾರಗಳಿಗೆ ಸಂಬಂಧಿಸಿದ ಕಡತಗಳು ಒಂದು ವರ್ಷದಿಂದಲೂ ತೆವಳುತ್ತಿರುವುದು ಕಂಡು ಬಂದಿದೆ.
ವಿಲೇವಾರಿ ಆಗದೇ ಇರುವ ಕಡತಗಳಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ ಝಡ್ ಜಮೀರ್ ಅಹ್ಮದ್ ಖಾನ್ ಅವರಿಗೆ ಸಂಬಂಧಿಸಿದ ಕಡತವೂ ಇದೆ. ಅಕ್ರಮ ಆಸ್ತಿ ಗಳಿಕೆ ಆರೋಪದಡಿಯಲ್ಲಿ ಜಮೀರ್ ಅಹ್ಮದ್ ಖಾನ್ ಅವರ ವಿರುದ್ಧ ಲೋಕಾಯುಕ್ತ ತನಿಖೆ ನಡೆಯುತ್ತಿದೆ.
ಇದಕ್ಕೆ ಸಂಬಂಧಿಸಿದ ಕಡತವು ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಲ್ ಕೆ ಅತೀಕ್ (ಕಂಪ್ಯೂಟರ್ ಸಂಖ್ಯೆ; 1292135) (DPAR/7/GAM/2024-DPAR PROT SEC BC-DPAR) ಅವರ ಬಳಿಯೇ ಇದೆ.
ಈ ಕಡತವನ್ನು ಮುಖ್ಯ ಕಾರ್ಯದರ್ಶಿಗಳಾಗಿದ್ದ ರಜನೀಶ್ ಗೋಯಲ್ ಅವರು ಎಲ್ ಕೆ ಅತೀಕ್ ಅವರಿಗೆ ರವಾನಿಸಿದ್ದರು. 2024ರ ಫೆ.8ರಿಂದಲೂ ಈ ಕಡತವು ಅತೀಕ್ ಅವರ ಬಳಿಯೇ ಇದೆ. ಇನ್ನೂ ಈ ಕಡತಕ್ಕೆ ಮುಕ್ತಿ ದೊರೆತಿಲ್ಲ. 11 ತಿಂಗಳಿನಿಂದಲೂ ಈ ಕಡತವು ಧೂಳಿಡಿದು ಕೂತಿರುವುದು ದಾಖಲೆಯಿಂದ ಗೊತ್ತಾಗಿದೆ.
ಈ ಕಡತದಲ್ಲಿನ ವಿಷಯಕ್ಕೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಾದ ತೀರ್ಮಾನಗಳ ಕುರಿತು ಮುಖ್ಯಮಂತ್ರಿಗಳ ಅಭಿಪ್ರಾಯ ಅಥವಾ ಅನುಮೋದನೆಗೆ ಸಲ್ಲಿಸಿತ್ತು. ಈ ಕಡತದಲ್ಲಿನ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆಗೆದುಕೊಳ್ಳಬೇಕಾದ ತೀರ್ಮಾನಗಳ ಕುರಿತು ಚರ್ಚಿಸಲಾಗಿದೆ ಎಂದು ಗೊತ್ತಾಗಿದೆ. ಆದರೆ 11 ತಿಂಗಳಾದರೂ ಈ ಕಡತದ ಮೇಲೆ ಯಾವುದೇ ತೀರ್ಮಾನಗಳನ್ನು ಕೈಗೊಳ್ಳದೆಯೇ ಧೂಳಿಡಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ಮತ್ತು ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಮಂಗಳವಾರ ಲೋಕಾಯುಕ್ತ ಪೊಲೀಸರ ಮುಂದೆ ಈಚೆಗಷ್ಟೇ ವಿಚಾರಣೆಗೆ ಹಾಜರಾಗಿದ್ದರು. ಎಸಿಬಿಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗಲು ಲೋಕಾಯುಕ್ತರು ಸೂಚಿಸಿದ್ದರು.
ಈ ಹಿಂದೆ ಜಮೀರ್ ಅಹ್ಮದ್ ಮನೆ ಮೇಲೆ ಎಸಿಬಿಯು ದಾಳಿ ನಡೆಸಿತ್ತು. ಜಮೀರ್ ಅವರ ಮನೆ, ಕಚೇರಿಗಳಲ್ಲಿ ಪರಿಶೀಲನೆ ನಡೆಸಿ, ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದಿತ್ತು. ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಿತ್ತು. ನಂತರ ಸರ್ಕಾರವು ಎಸಿಬಿ ರದ್ದು ಮಾಡಿತ್ತು. ಹೀಗಾಗಿ ಆ ಪ್ರಕರಣವನ್ನ ಈಗ ಲೋಕಾಯುಕ್ತ ತನಿಖೆ ನಡೆಸುತ್ತಿದೆ.
ತಮ್ಮ ಮೇಲಿನ ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ ಆರೋಪದ ವಿಚಾರಣೆಗೆ ಪೂರಕ ದಾಖಲೆ ಸಮೇತ ಬರಲು ಸಚಿವರಿಗೆ ಕಾಲಾವಕಾಶ ನೀಡಲಾಗಿತ್ತು. ಐಎಂಎ ಪೊಂಜಿ ಹಗರಣದ ತನಿಖೆ ನಡೆಸುತ್ತಿರುವಾಗ, ಜಾರಿ ನಿರ್ದೇಶನಾಲಯ ಆಗಸ್ಟ್ 2021 ರಲ್ಲಿ ಜಮೀರ್ ಖಾನ್ ಮೇಲೆ ದಾಳಿ ನಡೆಸಿದ್ದನ್ನು ಸ್ಮರಿಸಬಹುದು.
ಮುಖ್ಯಮಂತ್ರಿ ಅವರ ಅನುಮೋದನೆಗೆ ಸ್ವೀಕೃತವಾಗಿರುವ, ಅನುಮೋದನೆ ನೀಡಿರುವ, ಅನುಮೋದನೆಗೆ ಬಾಕಿ ಇರುವುದಕ್ಕೆ ಸಂಂಧಿಸಿದಂತೆ ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಎಷ್ಟು ಕಡತಗಳು ಬಾಕಿ ಇವೆ ಎಂಬ ಕುರಿತಾದ ಮಾಹಿತಿಯನ್ನು ಮುಖ್ಯಮಂತ್ರಿಗಳ ಸಚಿವಾಲಯದ ಕಚೇರಿಗಳು 120 ದಿನಗಳಾದರೂ ಮಾಹಿತಿ ಒದಗಿಸಿರಲಿಲ್ಲ.
120 ದಿನಗಳಾದರೂ ಕಡತಗಳ ಮಾಹಿತಿ ಒದಗಿಸದ ಸಿಎಂ ಸಚಿವಾಲಯ; ಹಿರಿಯ ಅಧಿಕಾರಿಯಿಂದ ತಡೆ?
ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಆಪ್ತ ಕಾರ್ಯದರ್ಶಿ, ಉಪ ಕಾರ್ಯದರ್ಶಿ ಸೇರಿದಂತೆ ಒಟ್ಟಾರೆ 12ಕ್ಕೂ ಹೆಚ್ಚು ಅಧಿಕಾರಿಗಳು ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತ್ಯೇಕವಾದ ಕಚೇರಿ ಮತ್ತು ಸಿಬ್ಬಂದಿಯನ್ನೂ ಒದಗಿಸಿದೆ. ಮುಖ್ಯಮಂತ್ರಿ ಸಚಿವಾಲಯದ ಪ್ರತೀ ಕಚೇರಿಯಲ್ಲಿ ಮಾಹಿತಿ ಹಕ್ಕು ಅಧಿಕಾರಿಯನ್ನು ನೇಮಿಸಲಾಗಿದೆ. ಆದರೂ ಆರ್‌ಟಿಐ ಅಡಿಯಲ್ಲಿ ಕೋರಿದ್ದ ಮಾಹಿತಿ ನೀಡಿರಲಿಲ್ಲ.
8 ಸಚಿವಾಲಯಗಳಲ್ಲಿ 35,471 ಕಡತಗಳು ವಿಲೇವಾರಿಗೆ ಬಾಕಿ; 21,009 ಕಡತಗಳಿಗೆ ತ್ರಿಶಂಕು ಭಾಗ್ಯ
ಈ ಕಚೇರಿಗಳಲ್ಲಿನ ಕಡತಗಳ ಮಾಹಿತಿಗಾಗಿ ‘ದಿ ಫೈಲ್’ 2024ರ ಜೂನ್ 1ರಂದೇ ಆರ್‍ಟಿಐ ಅಡಿಯಲ್ಲಿ ಮಾಹಿತಿ ಕೋರಿತ್ತು. ಕಡತಗಳ ಕುರಿತಾದ ಮಾಹಿತಿಯನ್ನು ಆರ್‍ಟಿಐ ಅಡಿ ಒದಗಿಸಬಾರದು ಎಂದು ಮುಖ್ಯಮಂತ್ರಿಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಮ್ಮ ಅಧೀನ ಅಧಿಕಾರಿಯೊಬ್ಬರಿಗೆ ತಡೆಯೊಡ್ಡಿದ್ದಾರೆ. ಹೀಗಾಗಿ 120 ದಿನಗಳಾದರೂ ಮಾಹಿತಿ ನೀಡಲಾಗುತ್ತಿಲ್ಲ. ಕಡತಗಳ ಮಾಹಿತಿ ನೀಡದಂತೆ ಮೇಲಾಧಿಕಾರಿಗಳ ಒತ್ತಡವೂ ಇದೆ ಎಂದು ಮುಖ್ಯಮಂತ್ರಿಗಳ ಸಚಿವಾಲಯದ ಮತ್ತೊಬ್ಬ ಅಧಿಕಾರಿಯೊಬ್ಬರು ‘ದಿ ಫೈಲ್’ಗೆ ಪ್ರತಿಕ್ರಿಯಿಸಿದ್ದರು.
ಕಚೇರಿಗಳಲ್ಲಿ ಕೆಲಸ ಮಾಡದ ಶೇ.47ರಷ್ಟು ಸಿಬ್ಬಂದಿ; ರಾಶಿ ರಾಶಿ ಕಡತಗಳು, ಆಡಳಿತ ವ್ಯವಸ್ಥೆ ಕುಂಠಿತ
ಕಡತ ವಿಲೇವಾರಿಯಲ್ಲಿ ವಿಳಂಬವು ಹಿಂದಿನ ಬಿಜೆಪಿ ಸರ್ಕಾರದಿಂದಲೂ ಮುಂದುವರದಿದೆ.
ಇಲಾಖೆ ಹಂತದಲ್ಲೇ 31,308 ಕಡತಗಳು ವಿಲೇವಾರಿಗೆ ಬಾಕಿ; ಸಿಎಂ ಸೂಚನೆಗೂ ಕಿಮ್ಮತ್ತಿಲ್ಲ
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗಲೂ ಅವರ ಸಚಿವಾಲಯದಲ್ಲಿಯೂ ಕಡತಗಳು ವಿಲೇವಾರಿಯಾಗದೇ ಧೂಳಿಡಿದಿದ್ದವು.
ಸಿಎಂ ಇಲಾಖೆಯಲ್ಲೇ ವಿಲೇವಾರಿಗೆ 3,351 ಕಡತ ಬಾಕಿ; ನೂರು ದಿನ ಪೂರೈಸಿದ್ದರೂ ಚುರುಕಿಲ್ಲ
ಅಲ್ಲದೇ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿಯೇ 1.69 ಲಕ್ಷ ಕಡತಗಳು ವಿಲೇವಾರಿಯಾಗದೇ ತೆವಳತ್ತಿದ್ದವು.
ವಿಲೇವಾರಿಗೆ ಬಾಕಿ ಇವೆ 1.69 ಲಕ್ಷ ಕಡತಗಳು; ಕುಂತಲ್ಲೇ ಕುಳಿತಿದೆ ಮೈಗಳ್ಳರ ಸರ್ಕಾರ!
ಈ ಕುರಿತು ‘ದಿ ಫೈಲ್’ ಸರಣಿ ವರದಿಗಳನ್ನು ಪ್ರಕಟಿಸಿತ್ತು. ಆ ನಂತರ ಕಡತ ಯಜ್ಞ ನಡೆಸಿದ್ದರು.
‘ದಿ ಫೈಲ್’ ವರದಿ ಪರಿಣಾಮ; ಕಡತ ವಿಲೇವಾರಿ ಮಾಡದ ಮೈಗಳ್ಳರಿಗೆ ಸಿಎಂ ತರಾಟೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಲ್ ಕೆ ಅತೀಕ್ ಅವರು ಕಳೆದ ಒಂದು ವರ್ಷದಿಂದಲೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಡಿಪಿಎಆರ್, ಇ-ಆಡಳಿತ, ಹಣಕಾಸು, ನಗರಾಭಿವೃದ್ಧಿ, ಕಾನೂನು ಸಂಸದೀಯ ವ್ಯವಹಾರಗಳು, ಜಲ ಸಂಪನ್ಮೂಲ, ಪಿಡಬ್ಲ್ಯೂಡಿ, ಗೃಹ, ವಾಣಿಜ್ಯ ಮತ್ತು ಕೈಗಾರಿಕೆ, ಐಟಿ, ಬಿಟಿ, ವಿಜ್ಞಾನ ತಂತ್ರಜ್ಞಾನ, ಇಂಧನ, ಮೂಲಸೌಕರ್ಯ, ನೀತಿ ನಿರೂಪಣೆ, ಅಂತರರಾಜ್ಯ ಜಲ ವಿವಾದ, ಭಾರತ ಸರ್ಕಾರದೊಂದಿಗೆ ವ್ಯವಹರಿಸುವುದು ಮತ್ತು ಈ ಇಲಾಖೆಗಳಿಗೆ ಸಂಬಂಧಿಸಿದ ಸಚಿವ ಸಂಪುಟದ ವಿಷಯಗಳನ್ನು ಹಂಚಿಕೆ ಮಾಡಿದೆ.