ಬೆಂಗಳೂರು; ವೈದ್ಯಕೀಯ ಕಾಲೇಜುಗಳು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಪಿಪಿಇ ಕಿಟ್ ಮತ್ತು ಎನ್ 95 ಮಾಸ್ಕ್‌ಗಳ ಖರೀದಿ ಪ್ರಕ್ರಿಯೆಗಳಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಹಿಂದಿನ ನಿರ್ದೇಶಕ ಪಿ ಜಿ ಗಿರೀಶ್ ಸೇರಿದಂತೆ ಇನ್ನಿತರೆ ಅಧಿಕಾರಿಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್‍ನಲ್ಲಿ 6ನೇ ಆರೋಪಿಯ ಹೆಸರನ್ನು ಉಲ್ಲೇಖಿಸದೇ ಇರುವುದು ಚರ್ಚೆಗೆ ಗ್ರಾಸವಾಗಿದೆ.
ಕೋವಿಡ್ ಅಕ್ರಮದಲ್ಲಿ ಭಾಗಿಯಾಗಿರುವವರ ಪೈಕಿ ಯಾರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಆದಿಯಾಗಿ ಸರ್ಕಾರದ ಇಡೀ ಸಚಿವ ಸಂಪುಟವೇ ಅಬ್ಬರಿಸಿತ್ತು. ಆದರೀಗ ದಾಖಲಾಗಿರುವ ಮೊದಲ ಎಫ್‌ಐಆರ್ ನಲ್ಲಿ ಚುನಾಯಿತ ಜನಪ್ರತಿನಿಧಿಗಳ ಹೆಸರಿಸಲು ಹಿಂದೆ ಸರಿದಿದೆ.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಹೊತ್ತಿನಲ್ಲೇ ಕೋವಿಡ್ ಅಕ್ರಮದ ಕುರಿತು ದಾಖಲಿಸಿರುವ ಎಫ್‌ಐಆರ್‍ನಲ್ಲಿ 6ನೇ ಆರೋಪಿ ಎಂದು ‘ಚುನಾಯಿತ ಜನಪ್ರತಿನಿಧಿಗಳು’ ಎಂದಷ್ಟೇ ಹೇಳಿದೆ. ಮೇಲ್ನೋಟಕ್ಕೆ ಈ ಎಫ್‌ಐಆರ್, ಪ್ರತಿಪಕ್ಷವನ್ನು ಹಿಮ್ಮೆಟ್ಟಿಸಲು ನೋಡಿದಂತಿದೆ. ಅಲ್ಲದೇ ಚುನಾಯಿತ ಜನಪ್ರತಿನಿಧಿಗಳ ಹೆಸರನ್ನು ಉಲ್ಲೇಖಿಸದಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ಅಧೈರ್ಯವೂ ಪ್ರದರ್ಶನವಾದಂತಿದೆ.
ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಹಿಂದಿನ ನಿರ್ದೇಶಕ ಪಿ ಜಿ ಗಿರೀಶ್ ಅವರನ್ನು ಮೊದಲ ಆಪಾದಿತ ಎಂದು ಗುರುತಿಸಲಾಗಿದೆ. ಅದೇ ರೀತಿ ರಾಜ್ಯ ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕ ರಘು ಜೆ ಪಿ (ಎರಡನೇ ಆಪಾದಿತ) ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಸಲಕರಣಾಧಿಕಾರಿ ಮುನಿರಾಜು ಎನ್ (ಮೂರನೇ ಆಪಾದಿತ) ಅವರ ಪಾತ್ರವೂ ಸಹ ಈ ಪ್ರಕ್ರಿಯೆಗಳಲ್ಲಿ ಇದೆ ಎಂದು ತನಿಖಾ ಸಮಿತಿಯು ದೃಢಪಡಿಸಿತ್ತು.
ಮೂವರು ಅಧಿಕಾರಿಗಳಿಗೆ ಆರೋಪ ಪಟ್ಟಿ ಜಾರಿಗೊಳಿಸಿದ್ದ ವೈದ್ಯಕೀಯ ಶಿಕ್ಷಣ ಇಲಾಖೆಯು, ಈ ಸಂಬಂಧ ಸಂಪೂರ್ಣ ಕಡತಗಳನ್ನು ಪರಿಶೀಲಿಸಿತ್ತು. ವೈದ್ಯಕೀಯ ಸಲಕರಣೆಗಳ ಖರೀದಿಗೆ ಸಂಬಂಧಿಸಿದಂತೆ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಗಳ ನಡವಳಿಗಳ ಮೇಲೂ ತನ್ನ ಷರಾ ಬರೆದಿತ್ತು. ಆದರೂ ಸಹ ದೂರು ಸಲ್ಲಿಸುವಾಗ ಯಾವೊಬ್ಬ ಚುನಾಯಿತ ಜನಪ್ರತಿನಿಧಿಯ ಹೆಸರೆತ್ತಿಲ್ಲ.
ಪಿಪಿಇ ಕಿಟ್ ಹಾಗೂ ಎನ್ 95 ಮಾಸ್ಕ್ ಗಳನ್ನು ನಿಯಮಬಾಹಿರವಾಗಿ ಖರೀದಿಸಿ ಸರ್ಕಾರ ಬೊಕ್ಕಸಕ್ಕೆ ಸುಮಾರು 167 ಕೋಟಿ ರೂ. ನಷ್ಟವುಂಟಾಗಿದೆ. ಈ ಸಂಬಂಧ ಡಾ.ಗಿರೀಶ್, ಇಲಾಖೆಯ ಅಧಿಕಾರಿಗಳಾದ ಜೆ.ಪಿ.ರಘು ಮುನಿರಾಜು, ಲಾಜ್ ಎಕ್ಸ್ಪರ್ಟ್ ಹಾಗೂ ಪ್ರೊಡೆಂಟ್ ಕಂಪನಿಗಳ ವಿರುದ್ಧ ವಿಧಾನಸೌಧ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಮುಖ್ಯ ಲೆಕ್ಕ ಪತ್ರಾಧಿಕಾರಿ ಡಾ ಎಂ ವಿಷ್ಣುಪ್ರಸಾದ್ ಎಂಬುವರು ನೀಡಿದ್ದ ದೂರು ಆಧರಿಸಿ ವೈದ್ಯ ಎಫ್ಐಆರ್ ದಾಖಲಾಗಿದೆ.
ಅವ್ಯವಹಾರದಲ್ಲಿ ಜನಪ್ರತಿನಿಧಿಗಳು ಹಾಗೂ ಉನ್ನತ ಅಧಿಕಾರಿಗಳು ಭಾಗಿಯಾಗಿರುವ ಶಂಕೆ ಪ್ರಬಲವಾಗಿದೆ ಎಂದು ಹೇಳಲಾಗಿದೆ.
ಮತ್ತೊಂದು ವಿಶೇಷವೆಂದರೇ ಇದೇ ದೂರಿನಲ್ಲಿ ರಾಜಕೀಯ ಕಾರ್ಯಾಂಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಜನಪ್ರತಿನಿಧಿಗಳು ಎಂದು ಉಲ್ಲೇಖಿಸಿದೆ. ಹಾಗೆಯೇ ಅಪರಾಧಿಕರಣದ ಶಡ್ಯಂತರವನ್ನು ರೂಪಿಸಿದೆ ಎಂದೂ ಹೇಳಿದೆ. ಆದರೆ ಈ ಜನಪ್ರತಿನಿಧಿಗಳು ಯಾರು ಎಂದು ಹೆಸರಿಸಿಲ್ಲ.
ಹೀಗಾಗಿ ಎಫ್‌ಐಆರ್‍ನಲ್ಲಿ ಚುನಾಯಿತ ಜನಪ್ರತಿನಿಧಿಗಳ ಹೆಸರೇ ಇಲ್ಲ. ಬದಲಿಗೆ ಚುನಾಯಿತ ಜನಪ್ರತಿನಿಧಿಗಳು ಎಂದಷ್ಟೇ ಉಲ್ಲೇಖಿಸಿದೆ.
ಕೋವಿಡ್-19 ಹರಡಿದ್ದ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಮೂಲಕ ಸಾಂಕ್ರಾಮಿಕ ರೋಗ ನಿವಾರಣೆಗೆ ಅತ್ಯವಶ್ಯಕವಾಗಿ ಬೇಕಾಗಿದ್ದ ಎನ್ 95 ಮಾಸ್ಕ್, ಪಿಪಿಇ ಕಿಟ್ ಹಾಗೂ ಇತರ ಸಾಮಗ್ರಿಗಳನ್ನು ಸಂಗ್ರಹಿಸಿರುವ ಸನ್ನಿವೇಶವನ್ನು ದುರ್ಬಳಕೆ ಮಾಡಿಕೊಂಡು ಕಾನೂನಿನ ಎಲ್ಲಾ ಪ್ರಕ್ರಿಯೆ ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿದೆ.
2020ರ ಆಗಸ್ಟ್ 18ರಂದು ಸರ್ಕಾರ ವತಿಯಿಂದ ಆಡಳಿತಾತ್ಮಕ ಹಾಗೂ ಕಾನೂನಾತ್ಮಕ 2.59 ಲಕ್ಷ ಎನ್ 95 ಮಾಸ್ಕ್ ಹಾಗೂ 2.59 ಪಿಪಿಇ ಕಿಟ್ ಖರೀದಿಸಲು ಅನುಮತಿ ಪಡೆದುಕೊಳ್ಳಲಾಗಿತ್ತು. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ, ರಾಜ್ಯದ 17 ಸರ್ಕಾರಿ ಕಾಲೇಜು ಹಾಗೂ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬಳಸಲು ಅನುಮೋದನೆ ನೀಡಲಾಗಿತ್ತು. ಅನುಮೋದನೆ ಪಡೆಯುವಾಗ ಕೆಟಿಪಿಪಿ ಕಾನೂನಿನ ಕಾಯ್ದೆಗಳನ್ನು ಪೂರ್ಣ ಪ್ರಮಾಣದಲ್ಲಿ ಪಾಲಿಸಬೇಕು.
41.35 ಕೋಟಿ ರೂ.ಗಿಂತ ಮೌಲ್ಯದ ಹೆಚ್ಚು ಸಾಮಗ್ರಿ ಖರೀದಿಸಕೂಡದು ಎಂದು ಷರತ್ತು ವಿಧಿಸಲಾಗಿತ್ತು. ಇದರ ನಂತರ ವೈದ್ಯಕೀಯ ಶಿಕ್ಷಣ ಇಲಾಖೆಯು ಟೆಂಡರ್ ಕರೆದಿದ್ದು, ಲಾಜ್ ಎಕ್ಸ್ ಪೋರ್ಟ್ಸ್ ಸಂಸ್ಥೆಯು ಪಿಪಿಇ ಕಿಟ್ ಸರಬರಾಜು ಮಾಡುವುದಾಗಿ ಬಿಡ್ ಪಡೆದುಕೊಂಡಿತ್ತು.
ನಿಗದಿತ ಸಂಖ್ಯೆಯ ಪಿಪಿಇ ಕಿಟ್ಗಳನ್ನು 15 ದಿನಗಳೊಳಗೆ ಸರಬರಾಜು ಮಾಡಲು ಆದೇಶಿಸಿದ್ದರೂ ಪಿಇಇ ಕಿಟ್ ಗಳನ್ನು 17 ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನೀಡಿರುವ ಬಗ್ಗೆ ಯಾವುದೇ ದಾಖಲೆಗಳಲ್ಲಿ ನಮೂದಿಸಿಲ್ಲ ಎಂದು ಎಫ್ಐಆರ್ ನಲ್ಲಿ ವಿವರಿಸಲಾಗಿದೆ.
ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಹಿಂದಿನ ನಿರ್ದೇಶಕ ಪಿ ಜಿ ಗಿರೀಶ್ ಅವರನ್ನು ಮೊದಲ ಆಪಾದಿತ ಎಂದು ಗುರುತಿಸಲಾಗಿದೆ. ಅದೇ ರೀತಿ ರಾಜ್ಯ ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕ ರಘು ಜೆ ಪಿ (ಎರಡನೇ ಆಪಾದಿತ) ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಸಲಕರಣಾಧಿಕಾರಿ ಮುನಿರಾಜು ಎನ್ (ಮೂರನೇ ಆಪಾದಿತ) ಅವರ ಪಾತ್ರವೂ ಸಹ ಈ ಪ್ರಕ್ರಿಯೆಗಳಲ್ಲಿ ಇದೆ ಎಂದು ತನಿಖಾ ಸಮಿತಿಯು ದೃಢಪಡಿಸಿತ್ತು. ಇದೇ ಅಂಶವನ್ನು ದೂರಿನಲ್ಲಿಯೂ ಉಲ್ಲೇಖಿಸಿದೆ.
ಈ ಪ್ರಕರಣಗಳ ಕುರಿತು ‘ದಿ ಫೈಲ್’ ಸರಣಿ ವರದಿಗಳನ್ನು ಪ್ರಕಟಿಸಿತ್ತು.
ಅನುಮೋದನೆಯಿಲ್ಲದೇ ಪಿಪಿಇ ಕಿಟ್, ಮಾಸ್ಕ್ ಖರೀದಿ; 78 ಕೋಟಿ ಅಕ್ರಮದ ಬಗ್ಗೆ ತನಿಖಾ ವರದಿ
514.87 ಕೋಟಿ ರು ಮೊತ್ತದ 4.11 ಲಕ್ಷ ಪಿಪಿಇ ಕಿಟ್ ಗಳನ್ನು ಸರಬರಾಜು ಮಾಡಲಾಗಿದೆ ಎಂದು ಹೇಳಿತ್ತು. ಆದರೆ ಈ ಸಂಬಂಧ ಕಡತಗಳೇ ಇಲ್ಲ ಎಂದು ತನಿಖಾ ಸಮಿತಿಯು ತನ್ನ ವರದಿಯಲ್ಲಿ ಬಯಲು ಮಾಡಿತ್ತು.
514.87 ಕೋಟಿ ಮೊತ್ತದ 4.11 ಲಕ್ಷ ಪಿಪಿಇ ಕಿಟ್ ಸರಬರಾಜು; ಕಡತಗಳೇ ಇಲ್ಲವೆಂದ ತನಿಖಾ ಸಮಿತಿ
14.05 ಕೋಟಿ ರು ಮೊತ್ತದಲ್ಲಿ ಪಿಪಿಇ ಕಿಟ್, ಮಾಸ್ಕ್ ಖರೀದಿಗೆ ಕರೆದಿದ್ದ ಟೆಂಡರ್‍ನಲ್ಲಿ ಬಿಡ್ ರಿಗ್ಗಿಂಗ್ ಅಗಿತ್ತು ಎಂದು ತನಿಖಾ ಸಮಿತಿಯು ದೃಢಪಡಿಸಿತ್ತು.
ಪಿಪಿಇ ಕಿಟ್, ಮಾಸ್ಕ್ ಖರೀದಿಯಲ್ಲಿ ಅಕ್ರಮ; 14.05 ಕೋಟಿ ಮೊತ್ತದ ಟೆಂಡರ್‍ನಲ್ಲಿ ಬಿಡ್ ರಿಗ್ಗಿಂಗ್
ಅಲ್ಲದೇ ಒಂದು ಪಿಪಿಇ ಕಿಟ್‌ಗೆ ಹೆಚ್ಚುವರಿಯಾಗಿ 912 ರು ತೆತ್ತಿತ್ತು. ಈ ಮೂಲಕ ಇಲಾಖೆಯೊಳಗೆ ರೇಟ್ ಕಾಂಟ್ರಾಕ್ಟ್ ವ್ಯವಹಾರವನ್ನು ತನಿಖಾ ಸಮಿತಿಯು ಬಯಲು ಮಾಡಿತ್ತು.
ಪಿಪಿಇ ಕಿಟ್‌ಗೆ ಹೆಚ್ಚುವರಿ 912 ರು ದರದಲ್ಲಿ ಖರೀದಿ; ಇಲಾಖೆಯ ರೇಟ್ ಕಾಂಟ್ರಾಕ್ಟ್ ವ್ಯವಹಾರ ಬಯಲು
ಟೆಂಡರ್ ಬಿಡ್ ರಿಗ್ಗಿಂಗ್ ಗೆ ಸಂಬಂಧಿಸಿದಂತೆ ಇಲಾಖೆಯ ನಿವೃತ್ತ ನಿರ್ದೇಶಕ ಗಿರೀಶ್ ಸೇರಿ ಮೂವರ ವಿರುದ್ಧ ಆರೋಪ ಪಟ್ಟಿ ಜಾರಿಗೊಳಿಸಿತ್ತು.
ಟೆಂಡರ್ ಬಿಡ್ ರಿಗ್ಗಿಂಗ್; ನಿವೃತ್ತ ನಿರ್ದೇಶಕ ಗಿರೀಶ್ ಸೇರಿ ಮೂವರ ವಿರುದ್ಧ ಆರೋಪಪಟ್ಟಿ ಜಾರಿ
ಅತಿ ಕಡಿಮೆ ಬಿಡ್ ಸಲ್ಲಿಸಿದ್ದ ಲಾಜ್ ಎಕ್ಸ್‌ಪೋರ್ಟ್ಸ್ ತಾಂತ್ರಿಕ ಅರ್ಹತೆ ಹೊಂದದೇ ಇದ್ದರೂ ಸಹ ತಾಂತ್ರಿಕವಾಗಿ ಅರ್ಹರು ಎಂದು ಟೆಂಡರ್‌ನ್ನು ಅಂತಿಮಗೊಳಿಸಿದ್ದರು ಎಂದು ತನಿಖೆ ವೇಳೆಯಲ್ಲಿ ದೃಢಪಡಿಸಿರುವುದನ್ನು ಸ್ಮರಿಸಬಹುದು.