514.87 ಕೋಟಿ ಮೊತ್ತದ 4.11 ಲಕ್ಷ ಪಿಪಿಇ ಕಿಟ್‌ ಸರಬರಾಜು; ಕಡತಗಳೇ ಇಲ್ಲವೆಂದ ತನಿಖಾ ಸಮಿತಿ

ಬೆಂಗಳೂರು; ಕೋವಿಡ್‌ ಮೊದಲ ಅಲೆ ವೇಳೆಯಲ್ಲಿ ಎನ್‌-95 ಮಾಸ್ಕ್‌ ಮತ್ತು ಪಿಪಿಇ ಕಿಟ್‌ಗಳನ್ನು ಸರಬರಾಜು ಮಾಡಿದ್ದ ಸರಬರಾಜುದಾರರಿಗೆ 125.36 ಕೋಟಿ ರು ಮೊತ್ತ ಪಾವತಿಸಿದ್ದಕ್ಕೆ ಅಧಿಕೃತ ಜ್ಞಾಪನ ಪತ್ರಗಳೇ ಇರಲಿಲ್ಲ.

 

ಅದೇ ರೀತಿ ಕೋವಿಡ್‌ ಎರಡನೇ ಅಲೆ ವೇಳೆಯಲ್ಲಿ 514.87 ಕೋಟಿ ರು ಮೊತ್ತದಲ್ಲಿ ಖರೀದಿಸಿದ್ದ 4.11 ಲಕ್ಷ ಸಂಖ್ಯೆಯ ಪಿಪಿಇ ಕಿಟ್‌ಗಳು ಸರಬರಾಜು ಆಗಿರುವುದಕ್ಕೆ ಸಂಬಂಧಿಸಿದಂತೆ   ಕಡತಗಳೇ ಲಭ್ಯವಿರಲಿಲ್ಲ. ಹಾಗೆಯೇ 2020ರಲ್ಲಿದ್ದ ದರವು 2021ರ ಹೊತ್ತಿಗೆ ಕುಸಿತವಾಗಿದ್ದರೂ ಸಹ ಇದನ್ನು ಪರಿಗಣಿಸಿರಲಿಲ್ಲ ಎಂಬುದನ್ನು ತನಿಖಾ ಸಮಿತಿಯು ಪತ್ತೆ ಹಚ್ಚಿದೆ.

 

ಎರಡನೇ ಅಲೆಗೆ ಸಂಬಂಧಿಸಿದಂತೆ ಪಿಪಿಇ ಕಿಟ್‌ಗಳ ಖರೀದಿಗೆ ಆಡಳಿತಾತ್ಮಕ ಅನುಮೋದನೆಯೂ ಇರಲಿಲ್ಲ. ಪ್ರತ್ಯೇಕವಾಗಿ ಟೆಂಡರ್‍‌ನ್ನೂ ಸಹ ಕರೆದಿರಲಿಲ್ಲ. ಅನುಮೋದನೆ ನೀಡಿದ್ದಕ್ಕಿಂತಲೂ ಹೆಚ್ಚಾಗಿ 16.71 ಲಕ್ಷ ಸಂಖ್ಯೆಯಲ್ಲಿ ಪಿಪಿಇ ಕಿಟ್‌ಗಳನ್ನು ಖರೀದಿಸಲಾಗಿತ್ತು ಎಂಬುದನ್ನು ತನಿಖಾ ಸಮಿತಿಯು ಬಹಿರಂಗಪಡಿಸಿದೆ.

 

ಕೋವಿಡ್‌ ಸಂದರ್ಭದಲ್ಲಿ ನಡೆದಿದೆ ಎನ್ನಲಾಗಿರುವ ವಿವಿಧ ರೀತಿಯ ಅಕ್ರಮಗಳ ಕುರಿತು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಮೈಕೆಲ್‌ ಕುನ್ಹಾ ಅವರ ನೇತೃತ್ವದ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೆ ಇದಕ್ಕೂ ಮುನ್ನವೇ ಅಂದರೇ 2023ರ ಡಿಸೆಂಬರ್‍‌ನಲ್ಲೇ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ ಸಂಬಂಧಿಸಿದಂತೆ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿನ ಅಧಿಕಾರಿಗಳ ನೇತೃತ್ವದ ಸಮಿತಿಯು ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಿದೆ. ತನಿಖಾ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

 

2020ರಲ್ಲಿ 41.35 ಕೋಟಿ (ಆದೇಶ ಸಂಖ್ಯೆ; MED 52 RGU 2020 (ಅನುಬಂಧ-6, 29/10/2020) ರಂದು ಬಿಡುಗಡೆಯಾಗಿತ್ತು. ಅದೇ ರೀತಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಐಸಿಯು ಉಪಕರಣಗಳ ಖರೀದಿಗೆ 94.81 ಕೋಟಿ ರು., ಪಿಪಿಇ ಕಿಟ್‌, ಎನ್‌ 95 ಮಾಸ್ಕ್‌ಗಳ ಖರೀದಿಗೆ 23.31 ಕೋಟಿ (CM/42/CMRF/GEN/2020 (ಅನುಬಂಧ 7) 91,450 ಸಂಖ್ಯೆಯಲ್ಲಿ ಪಿಪಿಇ ಕಿಟ್‌ ಮತ್ತು ಎನ್‌ -95 ಮಾಸ್ಕ್‌ಗಳನ್ನು ಖರೀದಿಸಿ ಮೂವತ್ತು ದಿನದೊಳಗೇ 12.00 ಕೋಟಿ ರು.ಗಳನ್ನು ಪಾವತಿಸಲು ಅನುಮತಿ (MED 154 MMC 2021) ನೀಡಿತ್ತು ಎಂಬುದು ವರದಿಯಿಂದ ಗೊತ್ತಾಗಿದೆ.

 

 

ಹಾಗೆಯೇ 49.01 ಕೋಟಿ ರು ಮೊತ್ತದಲ್ಲಿ ಪಿಪಿಇ ಕಿಟ್‌ ಮತ್ತು ಎನ್‌ 95 ಮಾಸ್ಕ್‌ಗಳನ್ನು ಖರೀದಿಸಲು 2021ರ ಮಾರ್ಚ್‌ 29ರಂದು 49.01 ಕೋಟಿ ರು. ಅನುದಾನ ಬಿಡುಗಡೆ (MED 197 MPS 2021) ಮಾಡಿತ್ತು.

 

ಸರ್ಕಾರವು ನೀಡಿದ್ದ ಆದೇಶಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಪಿಪಿಇ ಕಿಟ್‌, ಎನ್‌-95 ಮಾಸ್ಕ್‌ಗಳನ್ನು ಖರೀದಿಸಿದ್ದ ಅಧಿಕಾರಿಗಳು ಇದೇ ಅವಧಿಯಲ್ಲಿ ಸರಬರಾಜುದಾರರಿಗೆ ಒಟ್ಟಾರೆ 125.36 ಕೋಟಿ ರು.ಗಳನ್ನು ಪಾವತಿಸಿದ್ದರು ಎಂಬುದನ್ನು ತನಿಖಾ ಸಮಿತಿಯು ಹೊರಗೆಡವಿದೆ.

 

3,15,047 ಸಂಖ್ಯೆಯಲ್ಲಿ ಪಿಪಿಇ ಕಿಟ್‌ಗಳನ್ನು ಖರೀದಿಸಿತ್ತು. ಇದಕ್ಕೆ ಜಿಎಸ್‌ಟಿ ಸೇರಿ 41, 34,99,188 ರು.ಗಳನ್ನು ಸರಬರಾಜುದಾರರಿಗೆ ಪಾವತಿಸಿತ್ತು. ಅದೇ ರೀತಿ 1,14,300 ಸಂಖ್ಯೆಯ ಪಿಪಿಇ ಕಿಟ್‌ಗಳಿಗೆ 15,00, 18,750 ರು., 23,000 ಪಿಪಿಇ ಕಿಟ್‌ಗಳಿಗೆ 30, 187, 500 ರು., 2 ಲಕ್ಷ ಸಂಖ್ಯೆಯ ಎನ್‌ 95 ಮಾಸ್ಕ್‌ಗಳಿಗೆ 49, 980, 000 ರು., 83,800 ಪಿಪಿಇ ಕಿಟ್‌ಗಳಿಗೆ 109, 987, 500 ರು., 4 ಲಕ್ಷ ಎನ್‌ 95 ಮಾಸ್ಕ್‌ಗಳಿಗೆ 9,996,000 ರು., 3,44,750 ಸಂಖ್ಯೆಯ ಪಿಪಿಇ ಕಿಟ್‌ಗಳಿಗೆ 425,484,375 ರು., 1.50 ಲಕ್ಷ ಎನ್‌ 95 ಮಾಸ್ಕ್‌ಗಳಿಗೆ 37,485,000 ರು.ಗಳನ್ನು ಸರಬರಾಜುದಾರರಿಗೆ ಪಾವತಿಸಿತ್ತು.

 

ಕಡತದಲ್ಲಿ ಸರಬರಾಜುದಾರರಿಗೆ ಹಣ ಬಿಡುಗಡೆ ಮಾಡಿದ್ದ ಎಲ್ಲಾ ಅಧಿಕೃತ ಜ್ಞಾಪನಗಳು ಕಂಡು ಬಂದಿರುವುದಿಲ್ಲ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

 

ಇದಲ್ಲದೇ 2020ರಲ್ಲಿ ವಿವಿಧ ದಿನಾಂಕಗಳಂದು 50,00,00 ಸಂಖ್ಯೆಯಲ್ಲಿ ಪಿಪಿಇ ಕಿಟ್‌, ಪಿಪಿಕಿ ಕಿಟ್‌ ಆಕ್ಸೆಸಿರಿಸ್‌, ಎನ್ 95 ಮಾಸ್ಕ್‌ಗಳನ್ನು 123.82 ಕೋಟಿ ರು. ಮೊತ್ತದಲ್ಲಿ ಖರೀದಿಸಿತ್ತು. ಆದರೆ ‘ಕಡತದಲ್ಲಿ ಎಲ್ಲಾ ಸರಬರಾಜು ಆದೇಶಗಳು ಲಭ್ಯವಿಲ್ಲದೇ ಇರುವುದರಿಂದ ಬಿಡುಗಡೆ ಮಾಡಲಾದ ಅನದುಆನಕ್ಕೆ ಸಮನ್ವಯಗೊಳಿಸಲು ಸಾಧ್ಯವಾಗುತ್ತಿಲ್ಲ,’ ಎಂದು ತನಿಖಾ ಸಮಿತಿಯು ವರದಿಯಲ್ಲಿ ಉಲ್ಲೇಖಿಸಿದೆ.

 

ವಿಶೇಷವೆಂದರೇ 2020ರ ಸೆ.7ರ ಒಂದೇ ದಿನದಂದು 18 ಸರಬರಾಜು ಆದೇಶಗಳನ್ನು ಕಾಲೇಜುವಾರು ನೀಡಿತ್ತು. ಈ ಎಲ್ಲಾ ಸರಬರಾಜು ಆದೇಶಗಳನ್ನು ಪಿಪಿಇ ಕವರ್‍‌ಆಲ್‌ ಮತ್ತು ಪ್ರತ್ಯೇಕವಾಗಿ ಶೂ ಕವರ್‍‌, ಟ್ರಿಪಲ್‌ ಲೈಯರ್‍‌ ಮೆಡಿಕಲ್‌ ಮಾಸ್ಕ್‌, ಹ್ಯಾಂಡ್‌ ಗ್ಲೋವ್‌, ಗಾಗಲ್ಸ್‌, ಫೇಸ್‌ ಶೀಲ್ಡ್‌, ಹೆಡ್‌ ಕವರ್‍‌, ಏಪ್ರಾನ್‌, ಡಿಸ್ಪೋಸಬಲ್‌ ಮಾಸ್ಕ್‌ ಎಂದು ವಿಭಜಿಸಿ ಆದೇಶ ನೀಡಿದ್ದನ್ನೂ ತನಿಖಾ ಸಮಿತಿಯು ಪತ್ತೆ ಹಚ್ಚಿರುವುದು ಗೊತ್ತಾಗಿದೆ.

 

511.87 ಕೋಟಿ ಮೊತ್ತದಲ್ಲಿ 4.11 ಲಕ್ಷ ಸಂಖ್ಯೆಯ ಪಿಪಿಇ ಕಿಟ್‌ಗಳು ಸರಬರಾಜು ಆಗಿರುವ ಬಗ್ಗೆ ಕಡತಗಳಲ್ಲಿ ಕಂಡುಬಂದಿರುವುದಿಲ್ಲ ಎಂದು ತನಿಖಾ ಸಮಿತಿಯು ವಿವರಿಸಿದೆ. ಪಿಪಿಇ ಕಿಟ್‌ಗಳ ಖರೀದಿ ಸಂಬಂಧ ಪ್ರಸ್ತಾವನೆಯನ್ನು ಪರಿಷ್ಕರಿಸಿದ್ದ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರು, 2021ರ ಮೇ 13ರಂದು 238.1 ಕೋಟಿ ಗೆ ಬೇಡಿಕೆ ಸಲ್ಲಿಸಿದ್ದರು. ನಂತರ ಈ ಮೊತ್ತವನ್ನು 99.99 ಕೋಟಿಗೆ ಸೀಮಿತಗೊಳಿಸಿ ಆರ್ಥಿಕ ಇಲಾಖೆಗೆ ಸಲ್ಲಿಕೆಯಾಗಿತ್ತು.

 

 

 

ಈ ಸಂಬಂಧ ಆರ್ಥಿಕ ಇಲಾಖೆಯು 2021ರ ಜೂನ್‌ 4ರಂದು ಸಹಮತಿ ನೀಡಿ ಹಿಂಬರಹ (ಆಇ/217/ವೆಚ್ಚ-5/20-21) ನೀಡಿತ್ತು. ಆರ್ಥಿಕ ಇಲಾಖೆಯಿಂದ ಸ್ವೀಕೃತವಾಗಿದ್ದ ಈ ಟಿಪ್ಪಣಿಗೆ ವೈದ್ಯಕೀಯ ಶಿಕ್ಷಣ ಸಚಿವಾಲಯದಿಂದ ಸರ್ಕಾರಿ ಆದೇಶ ಹೊರಡಿಸಿರುವ ಬಗ್ಗೆ ದಾಖಲೆಯೇ ಲಭ್ಯವಿರಲಿಲ್ಲ. ಆದರೆ ಸರ್ಕಾರದಿಂದ ಅನುಮೋದನೆ ಸ್ವೀಕರಿಸುವ ಮುನ್ನವೇ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಿಂದ 95.23 ಕೋಟಿ ರು. ಮೊತ್ತದಲ್ಲಿ 7,61,900 ಪಿಪಿಇ ಕಿಟ್‌ಗಳ ಸರಬರಾಜಿಗೆ ಆದೇಶ ನೀಡಿತ್ತು ಎಂಬುದನ್ನು ತನಿಖಾ ಸಮಿತಿಯು ವಿವರಿಸಿರುವುದು ತಿಳಿದು ಬಂದಿದೆ.

 

ಇದರಲ್ಲಿ ಕೆಎಸ್‌ಎಂಎಸ್‌ಸಿಎಲ್‌ಗೆ 3,00,000 ಪಿಪಿಇ ಕಿಟ್‌ಗಳು ಸರಬರಾಜು ಆಗಿದ್ದವು. ಮತ್ತೊಂದು ಸಂಗತಿ ಎಂದರೇ 2021ರ ಏಪ್ರಿಲ್‌ 6ರಂದೇ ಆರ್ಥಿಕ ಇಲಾಖೆಯು 34.76 ಕೋಟಿ ರು. ಮೊತ್ತದಲ್ಲಿ 2,78,100 ಸಂಖ್ಯೆಯ ಪಿಪಿಇ ಕಿಟ್‌ಗಳಿಗೆ ಸರಬರಾಜು ಆದೇಶ ನೀಡಲು ಆರ್ಥಿಕ ಇಲಾಖೆಯು ಸಹಮತಿ ವ್ಯಕ್ತಪಡಿಸಿತ್ತು.

 

‘ಮೇಲ್ಕಂಡ ಸರಬರಾಜು ಆದೇಶದಲ್ಲಿ 514.87 ಕೋಟಿ ರು. ಮೊತ್ತದ 4,11,900 ಸಂಖ್ಯೆಗಳ ಪಿಪಿಇ ಕಿಟ್‌ಗಳು ಸರಬರಾಜು ಆಗಿರುವ ಕಡತಗಳಲ್ಲಿ ಕಂಡು ಬಂದಿರುವುದಿಲ್ಲ,’ ಎಂದು ತನಿಖಾ ಸಮಿತಿಯು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

 

ಇನ್ನು ಮೂಲ ಟೆಂಡರ್‍‌ನಲ್ಲಿ ಪಿಪಿಇ ಕಿಟ್‌ಗಳ ಖರೀದಿ ಪ್ರಮಾಣವನ್ನು 2,59,263 ಎಂದು ನಮೂದಿಸಿತ್ತು. ಆದರೆ ಒಟ್ಟಾಗಿ 10,40,000 ಸಂಖ್ಯೆಯಲ್ಲಿ ಪಿಪಿಇ ಕಿಟ್‌ಗಳನ್ನು ಇದುವರೆಗೂ ಖರೀದಿಸಿತ್ತು. ಅದೇ ರೀತಿ ಟೆಂಡರ್‍‌ನಲ್ಲಿ ಪಿಪಿಇ ಕಿಟ್‌ಗಳ ದರವನ್ನು 1,312.5 ರು ಎಂದು ನಿಗದಿಪಡಿಸಿತ್ತು. ಕೆಎಸ್‌ಎಂಎಸ್‌ಸಿಎಲ್‌ 2021ರ ಜೂನ್‌ 30ರಂದು ಕೇವಲ 400 ರು.ಗಳಿಗೆ ಪಿಪಿಇ ಕಿಟ್‌ಗಳನ್ನು ಖರೀದಿಸಿದ್ದರು. ಈ ಅಂಶವನ್ನು ಮುಖ್ಯ ಕಾರ್ಯದರ್ಶಿಯವರು ಗುರುತಿಸಿದ್ದರು ಎಂದು ವರದಿಯಲ್ಲಿ ಪ್ರಸ್ತಾಪಿಸಿದೆ.

 

‘ಕೋವಿಡ್‌ ಮೊದಲನೇ ಅಲೆಯ ಸಮಯದಲ್ಲಿ ನೀಡಲಾಗಿದ್ದ ಆಡಳಿತಾತ್ಮಕ ಅನುಮೋದನೆಯನ್ನೇ ಆಧಾರವಾಗಿರಿಸಿ ಮತ್ತು ಉಲ್ಲೇಖಿಸಿ ಎರಡನೇ ಅಲೆಯಲ್ಲಿಯೂ ಇದೇ ದರದಲ್ಲಿ ಎಲ್ಲಾ ಪಿಪಿಇ ಕಿಟ್‌ಗಳ ಸರಬರಾಜಿಗೆ ಆದೇಶ ನೀಡಲಾಗಿದೆ. ಇದಕ್ಕೆ ಯಾವುದೇ ಆಡಳಿತಾತ್ಮಕ ಅನುಮೋದನೆ ಇರಲಿಲ್ಲ. ಪ್ರತ್ಯೇಕವಾಗಿ ಟೆಂಡರ್‍‌ ಸಹ ಕರೆದಿರಲಿಲ್ಲ. 2020ರಲ್ಲಿ ಹಳೆಯ ಟೆಂಡರ್‍‌ನಂತೆ ಅಂತಿಮಗೊಳಿಸಿದ್ದ ಮೊತ್ತಕ್ಕೆ ಸರಬರಾಜು ಆದೇಶ ನೀಡಲಾಗಿತ್ತು. 2021ರಲ್ಲಿ ಬೆಲೆ ಕುಸಿತದ ಅಂಶವನ್ನು ಪರಿಗಣಿಸಿರಲಿಲ್ಲ,’ ಎಂದು ತನಿಖಾ ಸಮಿತಿಯು ವರದಿಯಲ್ಲಿ ವಿವರಿಸಿದೆ.

 

 

ಹಾಗೆಯೇ ಕೆಟಿಪಿಪಿ ಕಾಯ್ದೆ ಅಡಿಯಲ್ಲಿ ಟೆಂಡರ್‍‌ ಪ್ರಮಾಣದಲ್ಲಿ ಶೇ.25ರಷ್ಟು ಮಾತ್ರ ಹೆಚ್ಚಿನ ಪ್ರಮಾಣ ಖರೀದಿಸಬಹುದು. 2,59,263 ಪಿಪಿಇ ಕಿಟ್‌ಗಳಿಗೆ ಮಾತ್ರ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಇತ್ತು. ಇದಕ್ಕೆ ಟೆಂಡರ್‍‌ ಕೂಡ ಆಹ್ವಾನಿಸಿತ್ತು. ಆದರೆ ಒಟ್ಟು 19,30,613 ಸಂಖ್ಯೆಯ ಪಿಪಿಇ ಕಿಟ್‌ಗಳ ಖರೀದಿಗೆ ಆದೇಶ ನೀಡಲಾಗಿತ್ತು. ಅಂದರೆ ಒಟ್ಟಾರೆ 16,71,350 ಪಿಪಿಇ ಕಿಟ್‌ಗಳಿಗೆ ಹೆಚ್ಚಾಗಿ ಸರಬರಾಜು ಆದೇಶ ನೀಡಲಾಗಿತ್ತು. ಇದು ಶೇ. 644.65ಷ್ಟು ಹೆಚ್ಚಾಗಿತ್ತು. ಈ ಮೂಲಕ ಕೆಟಿಪಿಪಿ ಕಾಯ್ದೆಯನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

 

ಈ ಅವಧಿಯಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದರೇ ಡಾ ಕೆ ಸುಧಾಕರ್‌ ಅವರು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts