ಸಿದ್ದಾರ್ಥ ವಿಹಾರ ಟ್ರಸ್ಟ್‌ ಭೂ ವ್ಯವಹಾರ: ಕುಸನೂರಿನ 7.18 ಎಕರೆ ಜಮೀನಿನ ಮಾಲೀಕತ್ವವೇ ನಿಗೂಢ

ಬೆಂಗಳೂರು; ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ್‌ ಖರ್ಗೆ ಮತ್ತು ಸಂಸದ ರಾಧಾಕೃಷ್ಣ ಅವರು ಸೇರಿದಂತೆ ಅವರ ಕುಟುಂಬದ ಸದಸ್ಯರು ಟ್ರಸ್ಟಿಗಳಾಗಿರುವ ಸಿದ್ದಾರ್ಥ ವಿಹಾರ ಟ್ರಸ್ಟ್‌, ಕಲ್ಬುರ್ಗಿಯ ಕುಸನೂರ ಗ್ರಾಮದಲ್ಲಿ 13 ವರ್ಷಗಳ ಹಿಂದೆಯೇ ಖರೀದಿಸಿದ್ದ 7 ಎಕರೆ 18 ಗುಂಟೆ ವಿಸ್ತೀರ್ಣದ ಜಮೀನಿನ ಕುರಿತಾಗಿ ಹಲವು ಅನುಮಾನಗಳು ವ್ಯಕ್ತವಾಗಿವೆ.

 

ಅಲ್ಲದೇ ಸರ್ವೆ ನಂಬರ್‍‌ 89ರಲ್ಲಿನ 07 ಎಕರೆ 18 ಗುಂಟೆ ವಿಸ್ತೀರ್ಣದ ಜಮೀನನ್ನು  13 ವರ್ಷಗಳ ಹಿಂದೆಯೇ ಖರೀದಿಸಿದೆಯಾದರೂ 2024-25ನೇ ಸಾಲಿನವರೆಗೂ ಜಮೀನನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಿಸಿಕೊಂಡಿಲ್ಲ. ಆದರೆ  ಟ್ರಸ್ಟ್‌ನ ಚಾರ್ಟೆಡ್‌ ಅಕೌಂಟೆಂಟ್‌, ಟ್ರಸ್ಟ್‌ ಹೊಂದಿರುವ ಸ್ಥಿರಾಸ್ತಿಗೆ ಸಂಬಂಧಿಸಿದ ಪ್ರಮಾಣ ಪತ್ರದಲ್ಲಿ  ಸರ್ವೆ ನಂಬರ್ 89 ರ ಸಂಖ್ಯೆಯನ್ನೇ ನಮೂದಿಸಿದ್ದಾರೆ.

 

ಮತ್ತೊಂದು ವಿಶೇಷವೆಂದರೇ  ಕಲಬುರಗಿ ತಾಲೂಕಿನ ಕುಸನೂರ ಗ್ರಾಮದ ವಿವಾದಿತ ಜಮೀನುಗಳಿಗೇ  ಸರ್ವೆ ನಂಬರ್‍‌ 89ರಲ್ಲಿನ 7.18 ಎಕರೆ ವಿಸ್ತೀರ್ಣದ ಜಮೀನು ಕೂಡ  ಹೊಂದಿಕೊಂಡಿದೆ. ಒಟ್ಟಾರೆ ಈ ಸರ್ವೆ ನಂಬರ್‍‌ನಲ್ಲಿನ ಜಮೀನಿಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳೂ ನಿಗೂಢವಾಗಿರವುದು ಮೇಲ್ನೋಟಕ್ಕೆ ಕಂಡು ಬಂದಿವೆ.

 

ಬೆಂಗಳೂರಿನಲ್ಲಿರುವ ಏರೋಸ್ಪೇಸ್‌ ಮತ್ತು ಡಿಫೆನ್ಸ್‌ ಪಾರ್ಕ್‌ನಲ್ಲಿ 5 ಎಕರೆ ವಿಸ್ತೀರ್ಣದ ಸಿಎ ನಿವೇಶನವನ್ನು ಸಿದ್ದಾರ್ಥ ವಿಹಾರ ಟ್ರಸ್ಟ್ ಗೆ  ಕೆಐಎಡಿಬಿ ಮಂಜೂರು ಮಾಡಿತ್ತು. ಇದನ್ನು ‘ದಿ ಫೈಲ್‌’, ಆರಂಭದಲ್ಲೇ ಬಯಲಿಗೆಳೆದಿತ್ತು. ಅಲ್ಲದೇ ಕಲ್ಬುರ್ಗಿಯಲ್ಲಿ ಸಿದ್ದಾರ್ಥ ವಿಹಾರ ಟ್ರಸ್ಟ್‌ ಆರಂಭಿಸಿರುವ ಪಾಲಿ ಅಧ್ಯಯನ ಕೇಂದ್ರಕ್ಕೆ ನಿಯಮಬಾಹಿರವಾಗಿ  ಮಂಜೂರಾಗಿದ್ದ ಜಮೀನಿನ ಕುರಿತಾಗಿಯೂ ದಾಖಲೆ ಸಹಿತ ವರದಿ ಪ್ರಕಟಿಸಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಕೆಐಎಡಿಬಿ ಮಂಜೂರು ಮಾಡಿದ್ದ ಸಿಎ ನಿವೇಶನನ್ನು ಸಿದ್ದಾರ್ಥ ವಿಹಾರ ಟ್ರಸ್ಟ್‌ ಹಿಂದಿರುಗಿಸಿತ್ತು.

 

ಇದೀಗ ಇದೇ ಸಿದ್ದಾರ್ಥ ವಿಹಾರ ಟ್ರಸ್ಟ್‌ , ಕಲ್ಬುರ್ಗಿಯ ಕುಸನೂರ ಗ್ರಾಮದ  ಸರ್ವೆ ನಂಬರ್‍‌ 89ರ ಜಮೀನು ಖರೀದಿಸಿರುವ ಸಂಬಂಧದ ದಾಖಲೆಗಳು ಮತ್ತು ಅದರ ಸುತ್ತ ಎದ್ದಿರುವ  ಅನೇಕ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.

 

ಸರ್ವೆ ನಂಬರ್‍‌ 89ರಲ್ಲಿನ ಜಮೀನಿಗೆ ಸಂಬಂಧಿಸಿದಂತೆ ಸಿಕ್ಕ ಸಣ್ಣ ಸುಳಿವನ್ನಾಧರಿಸಿ ‘ದಿ ಫೈಲ್‌’ ತನಿಖಾ ತಂಡವು ಅದಕ್ಕೆ ಸಂಬಂಧಿಸಿದ ಭೂ ದಾಖಲೆಗಳು ಮತ್ತು ಸಿದ್ದಾರ್ಥ ವಿಹಾರ ಟ್ರಸ್ಟ್‌ನ ವಹಿವಾಟಿನ ಕುರಿತಾದ ದಾಖಲೆಗಳನ್ನೂ ಕಲೆ ಹಾಕಿದೆ.

 

ವಹಿವಾಟಿನ ಕುರಿತಾಗಿ ಚಾರ್ಟೆಡ್‌ ಅಕೌಂಟೆಂಟ್‌, ಕೆಐಎಡಿಬಿಗೆ ಸಲ್ಲಿಸಿದ್ದ ಸರ್ಟಿಫಿಕೇಟ್‌ನಲ್ಲಿನ ಜಮೀನುಗಳ ಸರ್ವೆ ನಂಬರ್‍‌ಗಳನ್ನು, ಭೂ ದಾಖಲೆಗಳಲ್ಲಿನ ಸರ್ವೆ ನಂಬರ್‍‌ಗಳೊಂದಿಗೆ ‘ದಿ ಫೈಲ್‌’ ತನಿಖಾ ತಂಡವು ಪರಿಶೀಲಿಸಿದೆ. ಅಲ್ಲದೇ ಕ್ರಯ ಪತ್ರ (ಸೇಲ್‌ ಡೀಡ್‌), ಆರ್‍‌ಟಿಸಿ ಸೇರಿದಂತೆ ದಾಖಲೆಗಳೂ ‘ದಿ ಫೈಲ್‌’ಗೆ ಲಭ್ಯವಾಗಿವೆ.

 

13 ವರ್ಷಗಳ ಹಿಂದೆಯೇ ಜಮೀನು ಖರೀದಿ

 

ಸಿದ್ದಾರ್ಥ ವಿಹಾರ ಟ್ರಸ್ಟ್‌, ಕಲ್ಬುರ್ಗಿಯ ಕುಸನೂರು ಗ್ರಾಮದ ಸರ್ವೆ ನಂಬರ್‍‌ 89ರಲ್ಲಿನ 07 ಎಕರೆ 18 ಗುಂಟೆ ವಿಸ್ತೀರ್ಣದ ಜಮೀನನ್ನು ಕಸ್ತೂರಿ ಬಾಯಿ ಅವರಿಂದ ಖರೀದಿಸಿದೆ. ಈ ಸಂಬಂಧ ಕಸ್ತೂರಿಬಾಯಿ ಅವರು ಟ್ರಸ್ಟ್‌ನ ಕಾರ್ಯದರ್ಶಿಯಾಗಿರುವ ರಾಧಾಕೃಷ್ಣ (ಕಲ್ಬುರ್ಗಿ ಹಾಲಿ ಸಂಸದ) ಅವರ ಪರವಾಗಿ 2011ರ ಜುಲೈ 2ರಂದು ಕ್ರಯ ಪತ್ರ ಮಾಡಿಕೊಟ್ಟಿದ್ದಾರೆ. ಈ ಕ್ರಯ ಪತ್ರದಲ್ಲಿ ಸೇಲ್‌ ಕನ್ಸಿಡರೇಷನ್‌ ಮೊತ್ತವೆಂದು 71,75,000 ರು. ಎಂದು ನಮೂದಿಸಿದೆ.

 

 

ಇದೇ ಸರ್ವೆ ನಂಬರ್‍‌ 89ರ ಚೆಕ್‌ ಬಂದಿ ಪ್ರಕಾರ ಪೂರ್ವಕ್ಕೆ ಸರ್ವೆ ನಂಬರ್‍‌ 89, ಪಶ್ಚಿಮಕ್ಕೆ ಸರ್ವೆ ನಂಬರ್‍‌ 82, ಉತ್ತರಕ್ಕೆ ಸರ್ವೆ ನಂಬರ್‍‌ 81, ದಕ್ಷಿಣಕ್ಕೆ ಸರ್ವೆ ನಂಬರ್‍‌ 88 ಮತ್ತು 93 ಇದೆ.

 

 

ವಿಶೇಷವೆಂದರೇ ಕಲಬುರಗಿ ತಾಲೂಕಿನ ಕುಸನೂರ ಗ್ರಾಮದ ಸರ್ವೇ ಸಂಖ್ಯೆ 78/4, 80, 81, 89/2, 89/3, 90/2, 90/3, 90/4ರಲ್ಲಿ 107 ಎಕರೆ 39 ಗುಂಟೆ ಜಮೀನು ವಿವಾದಗಳಿಂದ ಕೂಡಿವೆ. ಹೂಡಿಕೆದಾರರಿಗೆ ವಂಚಿಸಿದ ಆರೋಪದ ಮೇಲೆ ಜೈಲು ಪಾಲಾಗಿದ್ದ ಸುಬ್ರತಾ ರಾಯ್ ಮಾಲೀಕತ್ವದ ಸಹರಾ ಗ್ರೂಪ್‌ನ ಅಂಗಸಂಸ್ಥೆ ‘ಸಹರಾ ಪ್ರೈಮ್ ಸಿಟಿ ಹೋಮ್ಸ್’ ಸಂಸ್ಥೆಗೆ ಸೇರಿದ ಆಸ್ತಿಗಳಿಗೆ ಹೊಂದಿಕೊಂಡಂತೆಯೇ ಸರ್ವೆ ನಂಬರ್‍‌ 89ರಲ್ಲಿ ಸಿದ್ದಾರ್ಥ ವಿಹಾರ ಟ್ರಸ್ಟ್‌ನ 7 ಎಕರೆ 18 ಗುಂಟೆ ಜಮೀನು ಕೂಡ ಇದೆ.

 

 

13 ವರ್ಷಗಳಾದರೂ ಬದಲಾವಣೆಯಾಗದ ಪಹಣಿ 

 

2011ರಲ್ಲಿದ್ದ ಕಂದಾಯ ಇಲಾಖೆಯ ನಿಯಮಾವಳಿಗಳ ಪ್ರಕಾರ ಒಮ್ಮೆ ಜಮೀನಿನ ಕ್ರಯ ಪತ್ರ ಮಾಡಿಕೊಂಡ ನಂತರ 30 ದಿನಗಳ ಅವಧಿಯೊಳಗೇ ಜಮೀನು, ಖರೀದಿದಾರರ ಹೆಸರಿಗೆ ವರ್ಗಾವಣೆ ಆಗಬೇಕು. ಅಲ್ಲದೇ ಜಮೀನಿನ ಪಹಣಿ ಬದಲಾವಣೆಗೆ ಮುನ್ನ ಕಂದಾಯ ಅಧಿಕಾರಿಗಳು ಸಾರ್ವಜನಿಕವಾಗಿ ಆಕ್ಷೇಪಣೆ ನೋಟೀಸ್‌ ಜಾರಿ ಮಾಡುತ್ತಾರೆ.

 

ತದ ನಂತರ ಯಾವುದೇ ಆಕ್ಷೇಪಣೆ ಸಲ್ಲಿಕೆಯಾಗದೇ ಇದ್ದಲ್ಲಿ ಜಮೀನು ಖರೀದಿದಾರನ ಹೆಸರನ್ನು ಪಹಣಿಯಲ್ಲಿ ದಾಖಲಿಸಲಾಗುತ್ತದೆ. ಒಂದು ವೇಳೆ ಜಮೀನಿನ ವಿರುದ್ಧ ಯಾವುದೇ ನ್ಯಾಯಾಲಯದಲ್ಲಿ ತಡೆಯಾಜ್ಞೆ ಅಥವಾ ವ್ಯಾಜ್ಯವಿದ್ದಲ್ಲಿ ಜಮೀನಿನ ಪಹಣಿ ಬದಲಾವಣೆ ಆಗುವುದಿಲ್ಲ. ಇದು ಸಾಮಾನ್ಯವಾದ ಪ್ರಕ್ರಿಯೆ.

 

ಅಲ್ಲದೇ 2011-12ರಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿಯ ಕಾವೇರಿ ತಂತ್ರಾಂಶ ಹಾಗೂ ಕಂದಾಯ ಇಲಾಖೆಯ ಭೂಮಿ ತಂತ್ರಾಂಶ ಮಧ್ಯೆ ಆಂತರಿಕ ಸಂಪರ್ಕ ಇರಲಿಲ್ಲ. ಹೀಗಾಗಿ ಮ್ಯಾನ್ಯುಯಲ್‌ ಆಗಿ ಜಮೀನು ವರ್ಗಾವಣೆ ಪ್ರಕ್ರಿಯೆಗಳು ನಡೆಯುತ್ತಿದ್ದವು.

 

ಆದರೀಗ ಕಾವೇರಿ-2 ಮತ್ತು ಭೂಮಿ ತಂತ್ರಾಂಶ ಸೌಲಭ್ಯವಿದೆ. ಈ ಎರಡರ ನಡವೆಯೂ ಆಂತರಿಕ ಸಂಪರ್ಕ ತಂತ್ರಾಂಶವಿದೆ. ಈ ಸೌಲಭ್ಯಗಳ ಪ್ರಕಾರ ಜಮೀನು ಖರೀದಿಸಿದ 7 ದಿನದ ಒಳಗೇ ಸ್ವಯಂ ಚಾಲಿತವಾಗಿ ಪಹಣಿ ಬದಲಾವಣೆ ಆಗಲಿದೆ.

 

ಈ ಎರಡೂ ಪ್ರಕ್ರಿಯೆಗಳ ಪ್ರಕಾರವೂ ಸಿದ್ದಾರ್ಥ ವಿಹಾರ ಟ್ರಸ್ಟ್‌, 2011ರಲ್ಲಿ ಸರ್ವೆ ನಂಬರ್‍‌ 89ರಲ್ಲಿನ ಖರೀದಿಸಿದ್ದ 7 ಎಕರೆ 18 ಗುಂಟೆ ವಿಸ್ತೀರ್ಣದ ಜಮೀನನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಿಸಿಕೊಳ್ಳಬೇಕಿತ್ತು. ಆದರೆ 13 ವರ್ಷಗಳಾದರೂ  ಟ್ರಸ್ಟ್‌ ತನ್ನ ಹೆಸರಿಗೆ ಈ ಜಮೀನನ್ನು ಬದಲಾವಣೆ ಮಾಡಿಕೊಂಡಿಲ್ಲ.

 

ಮತ್ತೊಂದು ವಿಶೇಷವೆಂದರೇ ಈ ಜಮೀನಿನ ಪಹಣಿ ಬದಲಾವಣೆಗೆ ಸಂಬಂಧಿಸಿದಂತೆ ಯಾವುದೇ ತಡೆಯಾಜ್ಞೆ ಮತ್ತು ವ್ಯಾಜ್ಯವಾಗಲೀ ಇಲ್ಲ. ಆದರೂ 13 ವರ್ಷಗಳಿಂದಲೂ ಸಿದ್ದಾರ್ಥ ವಿಹಾರ ಟ್ರಸ್ಟ್‌, ಜಮೀನಿನ ಪಹಣಿ ಬದಲಾವಣೆಯನ್ನೇ ಮಾಡಿಸಿಕೊಳ್ಳದೇ ಇರುವುದು ಈಗಾಗಲೇ ಎದ್ದಿರುವ ಹಲವು ಸಂಶಯಗಳನ್ನು ಮತ್ತಷ್ಟು ವಿಸ್ತರಿಸಿವೆ.

 

ಇನ್ನು ಟ್ರಸ್ಟ್‌ ಹೊಂದಿರುವ ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಟ್ರಸ್ಟ್‌ನ ಚಾರ್ಟಡ್ ಅಕೌಂಟೆಂಟ್‌ ಕೆಐಎಡಿಬಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿಯೂ ಸರ್ವೆ ನಂಬರ್ 89 ಸಂಖ್ಯೆಯನ್ನು ನಮೂದಿಸಿದ್ದಾರೆ.

 

ಚಾರ್ಟೆಡ್‌ ಅಕೌಂಟೆಂಟ್‌ರ ಪ್ರಮಾಣ ಪತ್ರದಲ್ಲೇನಿದೆ?

 

ಬೆಂಗಳೂರಿನ ಏರೋಸ್ಪೇಸ್‌ ಮತ್ತು ಡಿಫೆನ್ಸ್‌ ಪಾರ್ಕ್‌ನಲ್ಲಿ ಕೆಐಎಡಿಬಿಯು ಅಭಿವೃದ್ಧಿಪಡಿಸಿರುವ ಕೈಗಾರಿಕೆ ಬಡಾವಣೆಯಲ್ಲಿ 5 ಎಕರೆ ವಿಸ್ತೀರ್ಣದ ಸಿಎ ನಿವೇಶನಕ್ಕೆ ಸಿದ್ದಾರ್ಥ ವಿಹಾರ ಟ್ರಸ್ಟ್‌ ಅರ್ಜಿ ಸಲ್ಲಿಸಿತ್ತು. ಈ ವೇಳೆಯಲ್ಲಿ ಟ್ರಸ್ಟ್‌ನ ಚಾರ್ಟೆಡ್‌ ಅಕೌಂಟೆಂಟ್‌, ಟ್ರಸ್ಟ್‌ನ ವಹಿವಾಟಿಗೆ ಸಂಬಂಧಿಸಿದ ಪ್ರಮಾಣ ಪತ್ರವನ್ನು 2024ರ ಫೆ.19ರಂದು ಸಲ್ಲಿಸಿದ್ದರು.

 

 

ಈ ಪ್ರಮಾಣ ಪತ್ರದಲ್ಲಿ ಕುಸನೂರ ಗ್ರಾಮದ ಸರ್ವೆ ನಂಬರ್‍‌ 89 ಸಂಖ್ಯೆಯನ್ನು ನಮೂದಾಗಿದೆ.

 

ಆದರೆ ಈ ಸರ್ವೆ ನಂಬರ್‍‌ 89ರಲ್ಲಿ ಎಷ್ಟು ಎಕರೆ ವಿಸ್ತೀರ್ಣದ ಜಮೀನು ಇದೆ ಎಂಬ ವಿವರಗಳನ್ನು ನಮೂದಿಸಿರುವುದು ಕಂಡು ಬಂದಿಲ್ಲ. ಹಾಗೆಯೇ 2021, 2022 ಮತ್ತು 2023ರ ಆರ್ಥಿಕ ಸಾಲಿನ ಅಂತ್ಯಕ್ಕೂ ಸರ್ವೆ ನಂಬರ್‍‌ 89 ಎಂದು ನಮೂದಿಸಿದೆಯೇ ವಿನಃ ಎಷ್ಟು ಎಕರೆ ವಿಸ್ತೀರ್ಣದ ಜಮೀನು ಇದೆ ಎಂಬುದನ್ನು ಪ್ರಮಾಣಪತ್ರದಲ್ಲಿ ದಾಖಲಿಸದೇ ಇರುವುದು ಕಂಡು ಬಂದಿದೆ.

 

ಬದಲಿಗೆ ಇದೇ ಕಲಂನಲ್ಲಿ 78, 22,265 ರು ಎಂದು ಉಲ್ಲೇಖಿಸಿರುವುದು ಗೊತ್ತಾಗಿದೆ.

 

 

ಸರ್ವೆ ನಂಬರ್‍‌ 89ರಲ್ಲಿನ 7 ಎಕರೆ 18 ಗುಂಟೆ ಜಮೀನನ್ನು 2011ರಲ್ಲೇ ಅಂದರೇ 13 ವರ್ಷಗಳ ಹಿಂದೆಯೇ ಖರೀದಿಸಿದ್ದರೂ ಸಹ ಚಾರ್ಟೆಡ್‌ ಅಕೌಂಟೆಂಟ್‌ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಸರ್ವೆ ನಂಬರ್‍‌ 89 ರ ಸಂಖ್ಯೆಯನ್ನು ಮಾತ್ರ ನಮೂದಿಸಿ, ಜಮೀನಿನ ವಿಸ್ತೀರ್ಣವನ್ನು ದಾಖಲಿಸದೇ ಇರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.

 

ಹಾಗೆಯೇ ಭೂಮಿ ತಂತ್ರಾಂಶದಲ್ಲಿನ ಪಹಣಿ ದಾಖಲೆಗಳ ಪ್ರಕಾರ ಕುಸನೂರಿನ  ಸರ್ವೆ ನಂಬರ್‍‌ 89ರಲ್ಲಿನ ಜಮೀನು 2005ರಿಂದ ಈವರೆವಿಗೂ  ಕಸ್ತೂರಿಬಾಯಿ ಅವರ ಹೆಸರಿನಲ್ಲೇ ಇದೆ. 2011ರಲ್ಲಿ ಸಿದ್ದಾರ್ಥ ವಿಹಾರ ಟ್ರಸ್ಟ್‌ನ ಕಾರ್ಯದರ್ಶಿ ರಾಧಾಕೃಷ್ಣ ಅವರಿಗೆ ಕ್ರಯ ಪತ್ರ ಮಾಡಿಕೊಟ್ಟಿದ್ದರೂ ಸಹ ಪಹಣಿ ದಾಖಲೆಗಳಲ್ಲಿ ಕಸ್ತೂರಿಬಾಯಿ ಅವರ ಹೆಸರೇ ಮುಂದುವರೆಯುತ್ತಿರುವುದೇಕೆ ಎಂಬ ಪ್ರಶ್ನೆಯೂ ಸಹಜವಾಗಿ ಕೇಳಿ ಬಂದಿದೆ.

 

 

ಆದರೂ ಸಹ ಚಾರ್ಟೆಡ್‌ ಅಕೌಂಟೆಂಟ್‌ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಸರ್ವೆ ನಂಬರ್‍‌ 89ನ್ನು ಟ್ರಸ್ಟ್‌ನ ಸ್ಥಿರಾಸ್ತಿ ಎಂದು ನಮೂದಿಸಿರುವುದೇಕೆ ಎಂಬ ಪ್ರಶ್ನೆಯೂ ಸಹ ಕೇಳಿ ಬಂದಿದೆ.

 

ಮತ್ತೊಂದು ವಿಶೇಷವೆಂದರೇ ಈ ಜಮೀನನ್ನು ಟ್ರಸ್ಟ್‌ನ ಪರವಾಗಿ ಕ್ರಯಪತ್ರ ಮಾಡಿಸಿಕೊಂಡಿದ್ದ ಟ್ರಸ್ಟ್‌ನ ಕಾರ್ಯದರ್ಶಿ ರಾಧಾಕೃಷ್ಣ ಅವರು ಸಂಸತ್‌ನ ಹಾಲಿ ಸಂಸದರು ಕೂಡ ಹೌದು.

 

 

ಇದೇ ಕುಸನೂರಿನ ಸರ್ವೆ ನಂಬರ್‍‌ 69ರಲ್ಲಿ 4.39 ಎಕರೆ, 70/4ರಲ್ಲಿ 5.03 ಗುಂಟೆ, 70/7ರಲ್ಲಿ 0. 35 ಗುಂಟೆ, 70/8 ರಲ್ಲಿ 1.02 ಗುಂಟೆ ಜಮೀನಿನ ವಿವರಗಳನ್ನು ಘೋಷಣೆ ಮಾಡಿದ್ದಾರೆ.

 

 

ಹೀಗಿರುವಾಗ ಸರ್ವೆ ನಂಬರ್‍‌ 89ರಲ್ಲಿನ 7 ಎಕರೆ 18 ಗುಂಟೆ ಜಮೀನನ್ನು ಟ್ರಸ್ಟ್‌ನ ಕಾರ್ಯದರ್ಶಿಯಾಗಿ ಕ್ರಯ ಪತ್ರ ಮಾಡಿಕೊಂಡಿದ್ದರೂ ಚುನಾವಣೆ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಘೋಷಣೆ ಮಾಡದೇ ಇರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

 

 

ಈ ಸಂಬಂಧ ಪ್ರತಿಕ್ರಿಯೆಗಾಗಿ ಟ್ರಸ್ಟ್‌ನ ಟ್ರಸ್ಟಿಯಾಗಿರುವ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ವಾಟ್ಸಾಪ್‌ನಲ್ಲಿ ಕೋರಲಾಗಿದೆ.  ಅವರು ಪ್ರತಿಕ್ರಿಯೆ ನೀಡಿದ ನಂತರ ವರದಿಯನ್ನು ನವೀಕರಿಸಲಾಗುವುದು.

SUPPORT THE FILE

Latest News

Related Posts