7 ಇಲಾಖೆಗಳಲ್ಲಿ ವೆಚ್ಚವಾಗದ 29,884 ಕೋಟಿ; ಚುರುಕಾಗದೇ ತೆವಳುತ್ತಿದೆಯೇ ಆಡಳಿತ ಯಂತ್ರ?

ಬೆಂಗಳೂರು; 2025-26ನೇ ಸಾಲಿನ ಬಜೆಟ್‌ ತಯಾರಿ ನಡೆಸುತ್ತಿರುವ ಇಲಾಖೆಗಳ ಪೈಕಿ  ನಗರಾಭಿವೃದ್ದಿ ಸೇರಿದಂತೆ ಒಟ್ಟು  7  ಇಲಾಖೆಗಳಲ್ಲಿ  ನವೆಂಬರ್‍‌ 16ರ ಅಂತ್ಯಕ್ಕೆ 29,884 ಕೋಟಿ ರು. ವೆಚ್ಚವಾಗಿಲ್ಲ.

 

ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದಿದ್ದ ಕೆಡಿಪಿ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದೆ. 2024-25ನೇ ಸಾಲಿಗೆ ಸಂಬಂಧಿಸಿದಂತೆ ಬಿಡುಗಡೆಯಾಗಿದ್ದ ಅನುದಾನ ಮತ್ತು ವೆಚ್ಚದ ಕುರಿತು  ಇಲಾಖೆಗಳು ಮಂಡಿಸಿದ್ದ ಅಂಕಿ ಅಂಶಗಳ ಪಟ್ಟಿ ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಶಾಲಾ ಶಿಕ್ಷಣ ಸಾಕ್ಷರತೆ, ಆರ್ಥಿಕ, ಒಳಾಡಳಿತ, ಯೋಜನೆ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ದಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಸತಿ ಮತ್ತು ಉನ್ನತ ಶಿಕ್ಷಣ ಇಲಾಖೆಗಳಲ್ಲಿ ನವೆಂಬರ್‍‌ 16ರ ಅಂತ್ಯಕ್ಕೆ ಒಟ್ಟಾರೆ 29,884 ಕೋಟಿ ರು ವೆಚ್ಚವಾಗಿಲ್ಲ ಎಂದು ಅಂಕಿ ಅಂಶಗಳ ಪಟ್ಟಿಯಿಂದ ತಿಳಿದು ಬಂದಿದೆ.

 

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಗೆ 2024-25ನೇ ಸಾಲಿಗೆ ಒಟ್ಟಾರೆ 37,457.19 ಕೋಟಿ ರು. ಒದಗಿಸಿತ್ತು ಇದರಲ್ಲಿ 22,932.80 ಕೋಟಿ ರು ಬಿಡುಗಡೆಯಾಗಿತ್ತು.  ಈ ಪೈಕಿ ನವೆಂಬರ್‍‌ 16ರ ಅಂತ್ಯಕ್ಕೆ 17,914.96 ಕೋಟಿ ರು ವೆಚ್ಚವಾಗಿತ್ತು. ಇನ್ನೂ 5,419.59 ಕೋಟಿ ರು ವೆಚ್ಚವಾಗದೇ ಬಾಕಿ ಇರುವುದು ಗೊತ್ತಾಗಿದೆ.

 

ಸರ್ಕಾರಿ ಪ್ರಾಥಮಿಕ ಶಾಲಾ ವೇತನ ಮತ್ತು ನಿರ್ವಹಣೆ ವೆಚ್ಚ, ಖಾಸಗಿ ಪ್ರೌಢಶಾಲೆಗಳಿಗೆ ಸಹಾಯಾನುದಾನ, ಸಮಗ್ರ ಶಿಕ್ಷಣ ಕರ್ನಾಟಕ, ಶಿಕ್ಷಕರ ವೇತನ, ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರಾಥಮಿಕ ಶಾಲೆಗಳಿಗೆ ಸಹಾಯಾನುದಾನ ಯೋಜನೆಗಳಿಗೆ  25,441.8 ಕೋಟಿ ರು. ಅನುದಾನ ಒದಗಿಸಿತ್ತು. ಈ ಪೈಕಿ ನವೆಂಬರ್‍‌ 16ರ ಅಂತ್ಯಕ್ಕೆ 19,621.51 ಕೋಟಿ ರು ಬಿಡುಗಡೆಯಾಗಿತ್ತು. ಇದರಲ್ಲಿ ನವೆಂಬರ್‍‌ 16ರ ಅಂತ್ಯಕ್ಕೆ 15,036.85 ಕೋಟಿ ರು ವೆಚ್ಚವಾಗಿದೆ. ಬಿಡುಗಡೆಗೆ ಇನ್ನು 4,584.66 ಕೋಟಿ ರು ಬಾಕಿ ಇರುವುದು ಗೊತ್ತಾಗಿದೆ.

 

 

ಆರ್ಥಿಕ ಇಲಾಖೆಗೆ 34,167.88 ಕೋಟಿ ರು ಅನುದಾನ ಒದಗಿಸಿತ್ತು. ಇದರಲ್ಲಿ 26,340.65 ಕೋಟಿ ರು ಬಿಡುಗಡೆಯಾಗಿತ್ತು. ಈ ಪೈಕಿ 17,970.12 ಕೋಟಿ ರು ಒಟ್ಟು ವೆಚ್ಚವಾಗಿದೆ. ನವೆಂಬರ್‍‌ 16ರ ಅಂತ್ಯಕ್ಕೆ 8,370.53 ಕೋಟಿ ರು ವೆಚ್ಚವಾಗಿಲ್ಲ.

 

ರಾಜ್ಯ ಸರ್ಕಾರಿ ನಿವೃತ್ತ ನೌಕರರಿಗೆ ಪಿಂಚಣಿ, ಕುಟುಂಬ ಪಿಂಚಣಿ, ನೂತನ ಪಿಂಚಣಿ ಯೋಜನೆ, ಪರಿಷ್ಕೃತ ವಿಶ್ರಾಂತಿ ವೇತನ ಯೋಜನೆಗಳಿಗೆ 2024-25ನೇ ಸಾಲಿನಲ್ಲಿ 29,687.14 ಕೋಟಿ ರು. ಅನುದಾನ ಒದಗಿಸಿತ್ತು. ಈ ಪೈಕಿ 23,748.66 ಕೋಟಿ ರು. ಬಿಡುಗಡೆಯಾಗಿತ್ತು. ಇದರಲ್ಲಿ ನವೆಂಬರ್‍‌ 16ರ ಅಂತ್ಯಕ್ಕೆ 16,227.45 ಕೋಟಿ ರು. ವೆಚ್ಚವಾಗಿದೆ. ಖರ್ಚು ಮಾಡಲು ಇನ್ನೂ 7,521.21 ಕೋಟಿ ರು ಬಾಕಿ ಉಳಿಸಿಕೊಂಡಿರುವುದು ತಿಳಿದು ಬಂದಿದೆ.

 

 

ಒಳಾಡಳಿತ ಇಲಾಖೆಗೆ ಒದಗಿಸಿದ್ದ  12,727.55 ಕೋಟಿ ರು ಅನುದಾನದ ಪೈಕಿ 10,845.10 ಕೋಟಿ ರು ಬಿಡುಗಡೆಯಾಗಿದೆ. ನವೆಂಬರ್‍‌ 16ರ ಅಂತ್ಯಕ್ಕೆ ಒಟ್ಟು 6,120.63 ಕೋಟಿ ರು ವೆಚ್ಚವಾಗಿದೆ. 4,724.47 ಕೋಟಿ ರು ಇನ್ನು ವೆಚ್ಚವಾಗಿಲ್ಲ.

 

ಪೊಲೀಸ್‌ ಸಿಬ್ಬಂದಿ, ಸೆರೆಮನೆ  ಹಾಗೂ ಸುಧಾರಣೆ ಸೇವೆಗಳು, ಹಾಲಿ ಜಿಲ್ಲೆಗಳಲ್ಲಿರುವ ಪೊಲೀಸ್‌ ಸಿಬ್ಬಂದಿಗೆ ರೂಪಿಸಿರುವ ವಿವಿಧ ಯೋಜನೆಗಳಿಗೆ 10,179.1 ಕೋಟಿ ರು ಅನುದಾನ ಹಂಚಿಕೆ ಮಾಡಲಾಗಿತ್ತು. ಇದರಲ್ಲಿ 9,600.07 ಕೋಟಿ ರು ಬಿಡುಗಡೆಯಾಗಿದೆ. ಈ ಪೈಕಿ 5,218.73 ಕೋಟಿ ರು ವೆಚ್ಚ ಮಾಡಲಾಗಿದೆ.

 

 

ಯೋಜನೆ ಇಲಾಖೆಗೆ 8,040.90 ಕೋಟಿ ರು ಅನುದಾನ ಒದಗಿಸಿತ್ತು. ಇದರಲ್ಲಿ 429.74 ಕೋಟಿ ರು ಬಿಡುಗಡೆ ಮಾಡಲಾಗಿದೆ. ಆದರೆ  ನವೆಂಬರ್‍‌ 16ರ ಅಂತ್ಯಕ್ಕೆ 1,360.57 ಕೋಟಿ ರು ವೆಚ್ಚವಾಗಿದೆ. 3,268.53 ಕೋಟಿ ರು ವೆಚ್ಚವಾಗಿಲ್ಲ.

 

ಇದೇ ಇಲಾಖೆಯು ರೂಪಿಸಿರುವ ಅನುಚ್ಛೇದ 371 ಜೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಗೆ ಒಟ್ಟಾರೆ 6,117.07 ಕೋಟಿ ರು ಅನುದಾನ ಒದಗಿಸಿತ್ತು. ಆದರೆ ನವೆಂಬರ್‍‌ 16ರ ಅಂತ್ಯಕ್ಕೆ ಒಟ್ಟು ಬಿಡುಗಡೆಯಲ್ಲಿ ಶೂನ್ಯ ಎಂದು ತೋರಿಸಿದೆ. ಆದರೆ ಒಟ್ಟು ವೆಚ್ಚದ ಕಾಲಂನಲ್ಲಿ 1,070.14 ಕೋಟಿ ರು ಎಂದು ನಮೂದಿಸಿರುವುದು ತಿಳಿದು ಬಂದಿದೆ.

 

ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಗೆ ಒಟ್ಟು 1,603.44 ಕೋಟಿ ರು ಅನುದಾನ ನೀಡಿತ್ತು. ಇದರಲ್ಲಿ 292.50 ಕೋಟಿ ರು ಬಿಡುಗಡೆ ಮಾಡಿತ್ತು. ಈ ಪೈಕಿ 180.99 ಕೋಟಿ ರು ಮಾತ್ರ ವೆಚ್ಚವಾಗಿದೆ. ಬಯಲುಸೀಮೆ ಅಭಿವೃದ್ದಿ ಮಂಡಳಿಗೆ 81.58 ಕೋಟಿ ರು ಅನುದಾನದ ಪೈಕಿ 19.75 ಕೋಟಿ ರು ಮಾತ್ರ ಬಿಡುಗಡೆ ಮಾಡಲಾಗಿದೆ. ನವೆಂಬರ್‍‌ 16ರ  ಅಂತ್ಯಕ್ಕೆ 32.49 ಕೋಟಿ ರು ವೆಚ್ಚವಾಗಿರುವುದು ಗೊತ್ತಾಗಿದೆ.

 

 

ಗ್ರಾಮೀಣಾಭಿವೃದ್ದಿ ಇಲಾಖೆಗೆ ಒಟ್ಟಾರೆ 25,400.05 ಕೋಟಿ ರು ಅನುದಾನ ಒದಗಿಸಿತ್ತು. ಇದರಲ್ಲಿ 7,095.07 ಕೋಟಿ ರು ಬಿಡುಗಡೆಯಾಗಿದೆ. ಆದರೆ 8,278.46 ಕೋಟಿ ರು ಒಟ್ಟು ವೆಚ್ಚವಾಗಿದೆ. 2,704.58 ಕೋಟಿ ರು ವೆಚ್ಚವಾಗಿಲ್ಲ ಎಂದು ಅಂಕಿ ಅಂಶ ಒದಗಿಸಿದೆ.

 

ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭರವಸೆ ಯೋಜನೆ, ಜಲಜೀವನ್‌ ಮಿಷನ್‌, ಗ್ರಾಮೀಣ ರಸ್ತೆಗಳು, ಗ್ರಾಮ ಪಂಚಾಯ್ತಿಗಳಿಗೆ ರಾಜ್ಯ ಹಣಕಾಸು ಆಯೋಗದ ಅಭಿವೃದ್ದಿ ಅನುದಾನ, ತಾಲೂಕು ಪಂಚಾಯತ್‌ಗಳಿಗೆ ಸಂಚಿತ ವೇತನ ಸೇರಿದಂತೆ ನಿರ್ವಹಣಾ ಅನುದಾನಗಳು, ತಾ.ಪಂ.ಗಳಿಗೆ ರಾಜ್ಯ ಹಣಕಾಸು ಆಯೋಗದ ಅಭಿವೃದ್ಧಿ ಅನುದಾನ, ವಿದ್ಯುಚ್ಛಕ್ತಿ ಬಾಕಿ ಸಲುವಾಗಿ ಗ್ರಾಮ ಪಂಚಾಯತ್‌ಗಳಿಗೆ ಖಾತರೀಕರಣ ಅನುದಾನ, ಜಲಧಾರೆ ಒಳಗೊಂಡಂತೆ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳಿಗೆ ಒಟ್ಟಾರೆ 13,671.96  ಕೋಟಿ ರು ಅನುದಾನ ನೀಡಿತ್ತು.  ಇದರಲ್ಲಿ 4,616.82 ಕೋಟಿ ರು ಬಿಡುಗಡೆ ಮಾಡಿತ್ತು. ಆದರೆ 5,562.61 ಕೋಟಿ ರು ಖರ್ಚಾಗಿರುವುದು ಗೊತ್ತಾಗಿದೆ.

 

 

 

ನಗರಾಭಿವೃದ್ಧಿಗೆ ಒಟ್ಟಾರೆ 19,710.46 ಕೋಟಿ ರು ಅನುದಾನದ ಪೈಕಿ 7,372.62 ಕೋಟಿ ರು ಬಿಡುಗಡೆ ಮಾಡಲಾಗಿದೆ. ಆದರೆ  ನವೆಂಬರ್‍‌ 16ರ ಅಂತ್ಯಕ್ಕೆ 10,184.88 ಕೋಟಿ ರು ಒಟ್ಟು ವೆಚ್ಚವಾಗಿದೆ. ಖರ್ಚು ಮಾಡಲು ಇನ್ನೂ 1,962.39 ಕೋಟಿ ರು ಬಾಕಿ ಇದೆ.

 

 

ಬೆಂಗಳೂರಿಗೆ ವಿಶೇಷ ಮೂಲಭೂತ ಸೌಕರ್ಯಕ್ಕೆ ಬಂಡವಾಳ ಬೆಂಬಲ, ಸಾಮಾನ್ಯ, ಬಿಡಬ್ಲ್ಯೂಎಸ್‌ಎಸ್‌ಬಿ ಮತ್ತು ಒಳಚರಂಡಿ ಯೋಜನೆ 3ನೇ ಘಟ್ಟ (ಕಾವೇರಿ ನೀರು ಸರಬರಾಜು 5ನೇ ಹಂತ) ಇಎಪಿ(ಐಡಿಪಿ 266/ಎ/ಬಿ), ಸಾಲ ಮರುಪಾವತಿಗಾಗಿ ಬಿಎಂಆರ್‍‌ಎಸಿಎಲ್‌ಗೆ ನೆರವು, ನತರ ಸ್ಥಳೀಯ ಸಂಸ್ಥೆಗಳಿಗಾಗಿ ಅಮೃತ್‌ ನಗರೋತ್ಥಾನ, ಬೆಂಗಳೂರು ಉಪನಗರ ರೈಲು ಸ್ಥಾಪನೆ, ಅಮೃತ್‌ ಯೋಜನೆ (ಕೇಂದ್ರ ಪುರಸ್ಕೃತ), ಸ್ವಚ್ಛ ಭಾರತ ನಗರ ಯೋಜನೆಗಳಿಗೆ ಒಟ್ಟಾರೆ 10,756.17 ಕೋಟಿ ರು ಒದಗಿಸಿದೆ. ಇದರಲ್ಲಿ 4,155.97 ಕೋಟಿ ರು ಬಿಡುಗಡೆಯಾಗಿದೆ. ಆದರೆ 5,512.41 ಕೋಟಿ ರು ಖರ್ಚಾಗಿದೆ.

 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಒಟ್ಟಾರೆ 11,185.90 ಕೋಟಿ ರು.ಗಳನ್ನು ಒದಗಿಸಿತ್ತು. ಈ ಪೈಕಿ ಬಿಡುಗಡೆ ಮಾಡಿದ್ದು 6,299.60 ಕೋಟಿ ರು ಮಾತ್ರ. ಇದರಲ್ಲಿ  5,537.34 ಕೋಟಿ ರು ವೆಚ್ಚವಾಗಿದೆ. 1,250.29 ಕೋಟಿ ರು ವೆಚ್ಚಕ್ಕೆ ಬಾಕಿ ಇದೆ.

 

 

ಆಯುಷ್ಮಾನ್‌ ಭಾರತ, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ, ಪ್ರಾಥಮಿಕ ಆರೋಗ್ಯ ಕೇಂದ್ರ, ರಾಷ್ಟ್ರೀಯ ಆರೋಗ್ಯ, ಆಯುಷ್‌ ಕಚೇರಿ, ನಿರ್ವಹಣೆ, ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳಿಗೆ 7,413.82 ಕೋಟಿ ರು.ಗಳನ್ನು ಒದಗಿಸಿತ್ತು. ಇದರಲ್ಲಿ 4,768.76 ಕೋಟಿ ರು. ಬಿಡುಗಡೆ ಮಾಡಲಾಗಿತ್ತು. ಈ ಪೈಕಿ ನವೆಂಬರ್‍‌ 16ರ ಅಂತ್ಯಕ್ಕೆ 4,186.89 ಕೋಟಿ ರು ವೆಚ್ಚವಾಗಿರುವುದು ಗೊತ್ತಾಗಿದೆ.

 

ವಸತಿ ಇಲಾಖೆಗೆ 4,468.31 ಕೋಟಿ ರು. ಅನುದಾನದ ಪೈಕಿ 1,606.34 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಇದರಲ್ಲಿ 1,846.79 ಕೋಟಿ ರು ವೆಚ್ಚವಾಗಿದೆ. 1,098.04 ಕೋಟಿ ರು ವೆಚ್ಚಕ್ಕೆ ಬಾಕಿ ಇದೆ. ಪ್ರಧಾನ ಮಂತ್ರಿ ವಾಸ್‌ ಯೋಜನೆ (ಗ್ರಾಮೀಣ), ಡಾ ಬಿ ಆರ್‍‌ ಅಂಬೇಡ್ಕರ್‍‌ ನವಿಆಸ್‌ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆ, ಡಿ ದೇವರಾಜ ಅರಸು ವಸತಿ ಯೋಜನೆ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳಿಗೆ 3,517.91 ಕೋಟಿ ರು ಅನುದಾನ ನೀಡಲಾಗಿತ್ತು.  ಈ ಪೈಕಿ 1,054.24 ಕೋಟಿ ರು ಬಿಡುಗಡೆ ಆಗಿತ್ತು. ಆದರೆ 1,294.95 ಕೋಟಿ ರು ವೆಚ್ಚವಾಗಿರುವುದು ತಿಳಿದು ಬಂದಿದೆ.

 

 

ಉನ್ನತ ಶಿಕ್ಷಣ ಇಲಾಖೆಗೆ 5,807.66 ಕೋಟಿ ರು ಅನುದಾನದ ಪೈಕಿ 4,099.02 ಕೋಟಿ ರು ಬಿಡುಗಡೆಯಾಗಿದೆ. ಈ ಪೈಕಿ ನವೆಂಬರ್‍‌ 16ರ ಅಂತ್ಯಕ್ಕೆ 3,012.94 ಕೋಟಿ ರು ವೆಚ್ಚವಾಗಿದೆ. 1,086.07 ಕೋಟಿ ರು. ವೆಚ್ಚ ಮಾಡಲು ಬಾಕಿ ಇದೆ.

 

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಸರ್ಕಾರಿ ಪಾಲಿಟೆಕ್ನಿಕ್‌, ಪಾಲಿಟೆಕ್ನಿಕ್‌ಗಳಿಗೆ ಸಹಾಯಾನುದಾನ, ಎಸ್‌ಕೆಎಸ್‌ಜೆಟಿ ಸಂಸ್ಥೆ, ಇಂಜಿನಿಯರಿಂಗ್‌ ಕಾಲೇಜು, ಪ್ರಥಮ ದರ್ಜೆ ಕಾಲೇಜುಗಳಿಗೆ ಸಹಾಯನುದಾನ, ಮೈಸೂರು ವಿಶ್ವವಿದ್ಯಾಲಯ, ರಾಷ್ಟ್ರೀಯ ಸೈನಿಕ ವಿದ್ಯಾರ್ಥಿ ದಳ, ಕರ್ನಾಟಕ, ಬೆಂಗಳೂರು, ಮಂಗಳೂರು ವಿಶ್ವವಿದ್ಯಾಲಯದ ವಿವಿಧ ಕಾರ್ಯಕ್ರಮಗಳಿಗೆ 3,961.6 ಕೋಟಿ ರು ಅನುದಾನ ಒದಗಿಸಿತ್ತು. ಈ ಪೈಕಿ 3,499.57 ಕೋಟಿ ರು ಬಿಡುಗಡೆ ಮಾಡಿತ್ತು. ಇದರಲ್ಲಿ 2,496.77 ಕೋಟಿ ರು ವೆಚ್ಚ ಮಾಡಿರುವುದು ಗೊತ್ತಾಗಿದೆ.

 

 

ಪ್ರಸಕ್ತ ಆರ್ಥಿಕ ಸಾಲಿನ ಬಜೆಟ್‌ ಅನುದಾನದಲ್ಲಿ ಅಕ್ಟೋಬರ್‌ ಅಂತ್ಯಕ್ಕೆ ಶೇ.35.41ರಷ್ಟೇ ಪ್ರಗತಿ ಆಗಿದೆ ಎಂದು  ಅಕ್ಟೋಬರ್‌ 21ರಂದೇ ನಡೆದಿದ್ದ ಕೆಡಿಪಿ ಸಭೆಯ ನಡವಳಿಯಲ್ಲೇ ದಾಖಲಾಗಿತ್ತು. ಆದರೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ  ಬಜೆಟ್‌ ಅನುದಾನದಲ್ಲಿ  ಶೇ.46ರಷ್ಟು ವೆಚ್ಚ ಮಾಡಲಾಗಿದೆ ಎಂದಿದ್ದರು.

 

2024-25ನೇ ಸಾಲಿನ ಬಜೆಟ್‌ ಅನುದಾನದಲ್ಲಿ ಅಕ್ಟೋಬರ್‍‌ 21ರ ಅಂತ್ಯಕ್ಕೆ  ಶೇ.35.41ರಷ್ಟೇ ಪ್ರಗತಿ ಆಗಿದೆ ಎಂದು ದಾಖಲಾಗಿದ್ದ ಕೆಡಿಪಿ ನಡವಳಿಗೆ ಖುದ್ದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರೇ ಸಹಿ ಮಾಡಿದ್ದರು.

 

ಹೀಗಿದ್ದರೂ ಬಜೆಟ್‌ ಅನುದಾನದಲ್ಲಿ ಅಕ್ಟೋಬರ್‍‌ ಅಂತ್ಯಕ್ಕೆ  ಶೇ.46ರಷ್ಟು ವೆಚ್ಚ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದರು.

ಕೆಡಿಪಿ ಪ್ರಕಾರ ಶೇ.35.41ರಷ್ಟೇ ಪ್ರಗತಿ, ಸಿಎಂ ಪ್ರಕಾರ ಶೇ.46ರಷ್ಟು ವೆಚ್ಚ; ವಾಸ್ತವ ಮರೆಮಾಚಲಾಗಿದೆಯೇ?

 

ಕಳೆದ ವರ್ಷ ಇದೇ ಸಮಯಕ್ಕೆ (ಅಕ್ಟೋಬರ್‍‌ 21, 2023)   ಶೇ.36.98ರಷ್ಟು ಖರ್ಚು ಮಾಡಿತ್ತು. ಪ್ರಸಕ್ತ ಸಾಲಿನ ಈ ಸಮಯಕ್ಕೆ (ಅಕ್ಟೋಬರ್‍‌ 21,2024) ಹೋಲಿಸಿದರೆ ಕಳೆದ ವರ್ಷಕ್ಕಿಂತಲೂ ಶೇ.1ರಷ್ಟು ಕಡಿಮೆ ವೆಚ್ಚ ಮಾಡಿದೆ ಎಂದು ಸಭೆ ನಡವಳಿಯಲ್ಲೇ ದಾಖಲಾಗಿತ್ತು.

 

 

ನಡವಳಿಯಲ್ಲೇನಿದೆ?

 

2024-25ನೇ ಸಾಲಿನಲ್ಲಿ ಆಯವ್ಯಯ ಅಂದಾಜು 3,11,586, ಪ್ರಾಥಮಿಕ ಶಿಲ್ಕು 17,574 ಕೋಟಿ ಸೇರಿ  ಒಟ್ಟು 3,29,160 ಕೋಟಿ ರು. ಇದೆ. ಈ ಪೈಕಿ ಅಕ್ಟೋಬರ್‍‌ 21ರ ಅಂತ್ಯಕ್ಕೆ 1,50,834.97 ಕೋಟಿ ರು. ಬಿಡುಗಡೆ ಆಗಿದೆ. ಇದರಲ್ಲಿ 1,33,827.97 ಕೋಟಿ ರು. ಖರ್ಚಾಗಿದೆ. ಒಟ್ಟು ಅನುದಾನಕ್ಕೆ ಶೇ. 35.41ರಷ್ಟು ಪ್ರಗತಿಯಾಗಿರುವುದು ನಡವಳಿಯಿಂದ ಗೊತ್ತಾಗಿದೆ.

 

ಶೇ.35.41ರಷ್ಟು ವೆಚ್ಚ; ಹಗರಣಗಳಲ್ಲಿ ಉಸಿರು ಕಟ್ಟಿದ ಸರ್ಕಾರ, ಮೈಗಳ್ಳರಿಗೆ ಸ್ವರ್ಗಸೀಮೆಯಾಯಿತೇ?

‘ಕಳೆದ ಸಾಲಿನಲ್ಲಿ ಇದೇ ಸಮಯಕ್ಕೆ 1,25,115.63 ಕೋಟಿ ವೆಚ್ಚವಾಗಿದ್ದು ಒಟ್ಟಾರೆ ಅನುದಾನಕ್ಕೆ ಶೇ.36.98ರಷ್ಟು ವೆಚ್ಚವಾಗಿದೆ,’ ಎಂಬ ಅಂಶವನ್ನು ನಡವಳಿಯಲ್ಲಿ ಉಲ್ಲೇಖಿಸಿತ್ತು.

 

 

 

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರು ಸಚಿವರಾಗಿರುವ ನಗರಾಭಿವೃದ್ಧಿ ಇಲಾಖೆಯಲ್ಲಿಯೂ ಕಡಿಮೆ ಪ್ರಗತಿ ಆಗಿದೆ. ಸ್ವಚ್ಛ ಭಾರತ (ನಗರ) ಕಾರ್ಯಕ್ರಮಗಳಡಿಯಲ್ಲಿ ಆರಂಭಿಕ ಶಿಲ್ಕಿನ ರೂಪದಲ್ಲಿ 1,012.00 ಕೋಟಿ ರು. ಇದೆ. ಆದರೆ ಬಹಳ ಕಡಿಮೆ ವೆಚ್ಚವಾಗಿತ್ತು.

 

 

 

ಅದೇ ರೀತಿ ಗೃಹಲಕ್ಷ್ಮಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿನ ವೆಚ್ಚವು ಅಷ್ಟೇನೂ ಆಶಾದಾಯಕವಾಗಿಲ್ಲ. ಪೂರಕ ಪೌಷ್ಠಿಕಾಂಶ ಕಾರ್ಯಕ್ರಮದಲ್ಲಿ 419.72 ಕೋಟಿ ರು. ಪ್ರಾರಂಭಿಕ ಶಿಲ್ಕಿದೆ. ಇಷ್ಟೂ ಹಣವನ್ನೂ ಬಿಡುಗಡೆ ಮಾಡಲಾಗಿದೆ. ಆದರೆ ಇದರಲ್ಲಿ 232.30 ಕೋಟಿಯಷ್ಟು ಮಾತ್ರ ವೆಚ್ಚವಾಗಿತ್ತು.

 

ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ಕಲ್ಯಾಣ, ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಇಲಾಖೆಗಳಲ್ಲಿನ ವಿದ್ಯಾರ್ಥಿ ವೇತನ ಹಾಗೂ ಶುಲ್ಕ ಮರುಪಾವತಿ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ವಿದ್ಯಾರ್ಥಿಗಳ ಪ್ರವೇಶ ದಾಖಲಾತಿಯಾದ ನಂತರ ಮಾಹಿತಿಯನ್ನು ಸ್ಕಾಲರ್‍‌ ಶಿಪ್‌ ಪೋರ್ಟಲ್‌ನಲ್ಲಿ ದಾಖಲಿಸುವಲ್ಲಿ ವಿಳಂಬವಾಗಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದರು.

 

‘ವಿದ್ಯಾರ್ಥಿಗಳ ಆಧಾರ್‍‌ನಲ್ಲಿನ ಪರಿಷ್ಕೃತ ಬಯೋಮೆಟ್ರಿಕ್‌ ಮಾಹಿತಿಯು ಇಂಡೀಕರಿಸದೇ ಇರುವುದು ಹಾಗೂ ಪರೀಕ್ಷಾ ಫಲಿತಾಂಶಗಳ ಮಾಹಿತಿಯು ಯುಯುಸಿಎಂಎಸ್‌ನಲ್ಲಿ ಇಂಡಿಕರಿಸಲಾಗುತ್ತಿದೆ. ಸ್ಕಾಲರ್‍‌ ಶಿಪ್‌ ಪೋರ್ಟಲ್‌ ಗೆ ಸಂಯೋಜನೆಯಾಗದಿರುವುದು ಪ್ರಮುಖ ಕಾರಣವಾಗಿದೆ,’ ಎಂದು ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ಸಭೆಗೆ ತಿಳಿಸಿದ್ದರು.

 

 

ವಸತಿ ಇಲಾಖೆಯಡಿ ಅನುಷ್ಠಾನಗೊಳ್ಳತ್ತಿರುವ ವಿವಿಧ ಕಾರ್ಯಕ್ರಮಗಳೂ ಆಮೆ ವೇಗದಲ್ಲಿದೆ. ಫಲಾನುಭವಿಗಳಿಗೆ ಮನೆ ನಿರ್ಮಾಣದಲ್ಲಿ ಪ್ರಗತಿ ಕುಂಠಿತವಾಗಿತ್ತು.

 

 

ಅದೇ ರೀತಿ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಡಿಯಲ್ಲಿ ಕೆಲ ಇಲಾಖೆಗಳಿಗೆ ಕಡಿಮೆ ಅನುದಾನ ಬಿಡುಗಡೆ ಮಾಡಿದೆ. . ಶಾಲಾ ಶಿಕ್ಷಣ (ಶೇ.15.4), ಕೃಷಿ (ಶೇ.19.0), ಸಮಾಜ ಕಲ್ಯಾಣ ಶೇ.20.8ರಷ್ಟು ಬಿಡುಗಡೆ ಆಗಿದೆ. ಆದರೆ  ಸಣ್ಣ ನೀರಾವರಿ, ಮೀನುಗಾರಿಕೆ,  ಸಹಕಾರ ಮತ್ತು  ಮೂಲಸೌಲಭ್ಯ  ಇಲಾಖೆಗಳಿಗೆ ಬಿಡಿಗಾಸೂ ಬಂದಿಲ್ಲ.

 

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಲ್ಲಿ ಮೆಟ್ರಿಕ್‌ ಪೂವ್ ಮತ್ತು ಮೆಟ್ರಿಕ್‌ ನಂತರ  ವಿದ್ಯಾರ್ಥಿ ವೇತನ ಕಾರ್ಯಕ್ರಮದಲ್ಲಿಯೂ ಪ್ರಗತಿ ಉತ್ತಮವಾಗಿಲ್ಲ.   ಸಮಾಜ ಕಲ್ಯಾಣ ಇಲಾಖೆಯಡಿ ಮೆಟ್ರಿಕ್‌ ನಂತರ ವಿದ್ಯಾರ್ಥಿ ವೇತನ ಕಾರ್ಯಕ್ರಮದಲ್ಲಿ ಇಂಟ್ರೆಸ್ಟ್‌ ಡಿಪಾಸಿಟ್‌ ಸರ್ಟಿಫಿಕೇಟ್‌ನ್ನು ನೀಡಿಲ್ಲ. ಹೀಗಾಗಿ ಎರಡನೇ ಕಂತು ಬಿಡುಗಡೆ ಆಗುವುದಿಲ್ಲ ಎಂದು ಆರ್ಥಿಕ ಇಲಾಖೆಯು ಸಭೆಗೆ ತಿಳಿಸಿದ್ದರು.

 

ಪರಿಶಿಷ್ಟ ಜಾತಿ ಉಪ ಯೋಜನೆ, ಗಿರಿಜನ ಉಪ ಯೋಜನೆ ಕಾಯಕ್ರಮಗಳಡಿಯಲ್ಲಿ ಒಟ್ಟಾರೆ ಅನುದಾನಕ್ಕೆ ಶೇ. 35.41ರಷ್ಟು ಮಾತ್ರ ವೆಚ್ಚವಾಗಿದೆ. ಕಡಿಮೆ ಪ್ರಗತಿ ಸಾಧಿಸಿರುವ ಇಲಾಖೆಗಳಿಗೆ ಪ್ರಗತಿ ತ್ವರಿತಗೊಳಿಸಬೇಕು ಎಂದು  ಸಭೆಯು ಸೂಚಿಸಿತ್ತು.

 

 

2024ರ ಅಕ್ಟೋಬರ್‍‌ 1 ಅಂತ್ಯಕ್ಕೆ  32,250.02 ಕೋಟಿ ರು. ಖರ್ಚಾಗದೇ ಬಾಕಿ ಇತ್ತು.   22 ಇಲಾಖೆಗಳ ಪೈಕಿ ಒಂದು ಇಲಾಖೆಯೂ ಶೇ.50ರ ಗಡಿಯನ್ನೂ ದಾಟಿರಲಿಲ್ಲ.

 

ಸಣ್ಣ ನೀರಾವರಿ, ತೋಟಗಾರಿಕೆ, ಪಶು ಸಂಗೋಪನೆ, ಕರ್ನಾಟಕ ವಿಧಾನಸಭೆ, ಪರಿಷತ್‌, ವೈದ್ಯಕೀಯ ಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ, ಆಹಾರ, ಯುವ ಸಬಲೀಕರಣ, ಪ್ರವಾಸೋದ್ಯಮ, ರೇಷ್ಮೆ, ಮೀನುಗಾರಿಕೆ, ವಾರ್ತಾ, ವಾಣಿಜ್ಯ ಕೈಗಾರಿಕೆ, ಮೂಲಭೂತ ಸೌಕರ್ಯ, ಪರಿಶಿಷ್ಟ ಪಂಗಡ, ಇಂಧನ, ಕನ್ನಡ, ಸಂಸ್ಕೃತಿ, ಮಾಹಿತಿ ತಂತ್ರಜ್ಞಾನ, ಕಾರ್ಮಿಕ ಇಲಾಖೆಯಲ್ಲಿ  ಒಟ್ಟಾರೆಯಾಗಿ 2024ರ ಸೆ.21ರ ಅಂತ್ಯಕ್ಕೆ 32,250.02 ಕೋಟಿ ರು. ಖರ್ಚಾಗದೇ ಹಾಗೇ ಉಳಿದುಕೊಂಡಿತ್ತು.

 

ಅರ್ಧ ವರ್ಷ ಕಳೆದರೂ 22 ಇಲಾಖೆಗಳಲ್ಲಿ ಖರ್ಚೇ ಆಗದ 32,250.02 ಕೋಟಿ; ಕುಸಿದ ಆಡಳಿತ ಯಂತ್ರ?

2024-25ನೇ ಸಾಲಿನಲ್ಲಿ ಒಟ್ಟು 3.28 ಲಕ್ಷ ಕೋಟಿ ರು ಅನುದಾನವನ್ನು ಬಜೆಟ್‌ನಲ್ಲಿ ಹಂಚಿಕೆ ಮಾಡಲಾಗಿತ್ತು. ಈ ಪೈಕಿ ಸೆ.21ರ ಅಂತ್ಯಕ್ಕೆ 1.26 ಲಕ್ಷ ಕೋಟಿ ರು. ಬಿಡುಗಡೆ ಆಗಿತ್ತು. ಇದು ಒಟ್ಟು ಅನುದಾನಕ್ಕೆ ಶೇ. 40.67ರಷ್ಟಿತ್ತು ಈ ಪೈಕಿ 1.11 ಲಕ್ಷ ಕೋಟಿ ರು. ಒಟ್ಟು ವೆಚ್ಚವಾಗಿದೆ. ಇದು ಸಹ ಒಟ್ಟು ಅನುದಾನಕ್ಕೆ ಶೇ. 34.00 ರಷ್ಟಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆಗೆ ಬಿಡುಗಡೆಯಾಗಿದ್ದ ಒಟ್ಟು ಅನುದಾನದ ಪೈಕಿ ಶೇ. 27.37ರಷ್ಟು ಮಾತ್ರ ವೆಚ್ಚವಾಗಿತ್ತು.

 

ಸಣ್ಣ ನೀರಾವರಿ ಇಲಾಖೆಗೆ ಹಂಚಿಕೆಯಾಗಿದ್ದ ಒಟ್ಟು 2,388.49 ಕೋಟಿ ರು. ಅನುದಾನದ ಪೈಕಿ 1,003.54 ಕೋಟಿ ರು (ಶೇ.42.02) ಬಿಡುಗಡೆಯಾಗಿದೆ. ಇದರಲ್ಲಿ ಸೆ.21ರ ಅಂತ್ಯಕ್ಕೆ 761.92 ಕೋಟಿ ರು. ಮಾತ್ರ ಖರ್ಚಾಗಿದೆ. ಖರ್ಚು ಮಾಡಲು ಇನ್ನೂ 241.63 ಕೋಟಿ ರು. ಬಾಕಿ ಇರುವುದು ಗೊತ್ತಾಗಿದೆ.

 

ವಿಲೇವಾರಿಗೆ ಬಾಕಿ ಇವೆ 1.69 ಲಕ್ಷ ಕಡತಗಳು; ಕುಂತಲ್ಲೇ ಕುಳಿತಿದೆ ಮೈಗಳ್ಳರ ಸರ್ಕಾರ!

 

2023-24ನೇ ಸಾಲಿಗೆ ಹೋಲಿಸಿದರೇ ಸೆಪ್ಟಂಬರ್‍‌ ಅಂತ್ಯಕ್ಕೆ ಶೇ. 31ರಷ್ಟು ಅನುದಾನ ಖರ್ಚು ಮಾಡಿತ್ತು. 2024-25ನೇ ಸಾಲಿನ ಸೆಪ್ಟಂಬರ್‍‌ ಅಂತ್ಯಕ್ಕೆ ಶೇ. 34.96ರಷ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಇದೇ ಅವಧಿಯಲ್ಲಿ ಶೇ.3ರಷ್ಟು ಮಾತ್ರ ಖರ್ಚಾಗಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts