ಖಾಸಗಿ ಉಕ್ಕು ಕಂಪನಿಗೆ 30-08 ಎಕರೆ ಸರ್ಕಾರಿ ಜಮೀನು; ಉಚಿತವಾಗಿ ಮಂಜೂರು ಮಾಡಲಿದೆಯೇ ಸರ್ಕಾರ?

ಬೆಂಗಳೂರು; ಮಿಶ್ರಲೋಹ ಮತ್ತು ವಿಶೇಷ ಉಕ್ಕಿನ ಉತ್ಪಾದನಾ ಕಂಪನಿಯಾಗಿರುವ ಎಸ್‌ ಎಲ್‌ ಆರ್‍‌ ಮೆಟಾಲಿಕ್ಸ್‌ ಲಿಮಿಟೆಡ್‌ಗೆ ಹಗರಿಬೊಮ್ಮನಹಳ್ಳಿಯ ನಾರಾಯಣಕೆರೆ ಗ್ರಾಮದಲ್ಲಿರುವ 30-08 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನನ್ನು ಉಚಿತವಾಗಿ ಮಂಜೂರು ಮಾಡಲು ಕಂದಾಯ ಇಲಾಖೆಯು  ಸಲ್ಲಿಸಿರುವ ಪ್ರಸ್ತಾವನೆ ಕಡತವನ್ನು ‘ದಿ ಫೈಲ್‌’ ಇದೀಗ ಹೊರಗೆಡವುತ್ತಿದೆ.

 

ಜಿಂದಾಲ್‌ ಉಕ್ಕು ಕಾರ್ಖಾನೆಗೆ ಅತ್ಯಂತ ಕಡಿಮೆ ದರದಲ್ಲಿ ಜಮೀನು ನೀಡಲು ಅನುಮತಿ ನೀಡಿತ್ತು. ಈ ಬಗ್ಗೆ ಪ್ರತಿಪಕ್ಷ ವಿರೋಧಿಸಿತ್ತು. ಇದರ  ಬೆನ್ನಲ್ಲೇ ಇದೀಗ ಎಸ್ಎಲ್‌ಆರ್‍‌ ಮೆಟಾಲಿಕ್ಸ್‌ ಲಿಮಿಟೆಡ್‌ಗೆ ಉಚಿತವಾಗಿ ಸರ್ಕಾರಿ ಜಮೀನನ್ನು ಮಂಜೂರು ಮಾಡುವ ಪ್ರಸ್ತಾವನೆ ಕಡತಕ್ಕೆ ಕಾಂಗ್ರೆಸ್‌ ಸರ್ಕಾರವು ಚಿರತೆ ವೇಗ ನೀಡಿದೆ.

 

30-08 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನನ್ನು ಉಚಿತವಾಗಿ ಮಂಜೂರು ಮಾಡುವ ಪ್ರಕರಣದಲ್ಲಿ ಕೆಐಎಡಿಬಿ ಅಂತಿಮ ಫಲಾನುಭವಿಯೇ ಅಲ್ಲ. ಆದರೂ ಸಹ ಈ ಪ್ರಸ್ತಾವನೆಗೆ ಈಗಿನ ಕಾಂಗ್ರೆಸ್‌ ಸರ್ಕಾರದಲ್ಲಿ ಬಿರುಸಿನ ಚಾಲನೆ ಸಿಕ್ಕಿದೆ.

 

ವಿಶೇಷವೆಂದರೇ ಈ ಕಂಪನಿಗೆ ಉಚಿತವಾಗಿ ಜಮೀನು ಮಂಜೂರು ಮಾಡುವ ಪ್ರಸ್ತಾವನೆಯು ಹಿಂದಿನ ಬಿಜೆಪಿ ಸರ್ಕಾರದಲ್ಲಿಯೇ ಸಲ್ಲಿಕೆಯಾಗಿತ್ತು. ಸರ್ಕಾರಿ ಅನಾಧೀನ ಜಮೀನುಗಳನ್ನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 20(ಡಿ) ಅಡಿಯಲ್ಲಿ ಉಚಿತವಾಗಿ ಮಂಜೂರು ಮಾಡಲು ಬರುತ್ತದೆ ಎಂದು ಹಿಂದಿನ ಸರ್ಕಾರದಲ್ಲೇ ಪ್ರಸ್ತಾವನೆಯಲ್ಲಿ ವಿವರಿಸಿತ್ತು. ಇದೇ ಕಡತವನ್ನು ಈಗಿನ ಕಾಂಗ್ರೆಸ್‌ ಸರ್ಕಾರವು ಮುಂದುವರೆಸಿದೆ.

 

ಈ ಸಂಬಂಧ ಕಂದಾಯ ಸಚಿವ ಕೃಷ್ಣಬೈರೇಗೌಡ, ಕಾನೂನು ಸಚಿವ ಹೆಚ್‌ ಕೆ ಪಾಟೀಲ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

 

ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ ಆರ್‍‌ಟಿಐ ಅಡಿಯಲ್ಲಿ ದಾಖಲೆ  ಮತ್ತು ಮ್ಯುಟೇಷನ್‌, ಆರ್‍‌ಟಿಸಿಗಳನ್ನೂ ಪಡೆದುಕೊಂಡಿದೆ.

 

ವಿಶೇಷವೆಂದರೇ ಇಡೀ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದ್ದ ಅಂಶಗಳ ಪ್ರಕಾರ 30-08 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನನ್ನು ಎಸ್‌ಎಲ್‌ಆರ್‍‌ ಮೆಟಾಲಿಕ್ಸ್‌ ಲಿಮಿಟೆಡ್‌ಗೆ ಮಂಜೂರು ಮಾಡುವ ಉದ್ದೇಶವಿರುವುದು ಕಂಡು ಬಂದಿದೆ.

 

ಇದನ್ನು ಪರಿಶೀಲಿಸಿದ್ದ ಕಾನೂನು ಇಲಾಖೆಯು ಈ ಕಂಪನಿಗೆ ಉಚಿತವಾಗಿ ಜಮೀನು ಮಂಜೂರು ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು 2021ರಲ್ಲಿಯೇ ಅಭಿಪ್ರಾಯ ನೀಡಿದೆ. ಒಂದೊಮ್ಮೆ ಮಾರುಕಟ್ಟೆ ಬೆಲೆ ವಿಧಿಸಿ ಮಂಜೂರು ಮಾಡಬಹುದಾದರೂ ಇದಕ್ಕೆ ಸಚಿವ ಸಂಪುಟದ ಅನುಮೋದನೆಯ ಅವಶ್ಯಕತೆ ಇದೆ ಎಂದೂ ಕಾನೂನು ಇಲಾಖೆಯು ಹೇಳಿತ್ತು. ಸದ್ಯ ಈ ಕಡತವು 2024ರ ಅಕ್ಟೋಬರ್‍‌ 25ರ ಅಂತ್ಯಕ್ಕೆ ಕಂದಾಯ ಇಲಾಖೆಯ ಬಳಿ ಇರುವುದು ಗೊತ್ತಾಗಿದೆ.

 

 

ಪ್ರಕರಣದ ವಿವರ

 

ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕು ನಾರಾಯಣದೇವರಕೆರೆ ಗ್ರಾಮದ ಸರ್ವೆ ನಂಬರ್‍‌ 634, 642, 647 ಮತ್ತು 653 (ಎ) ರಲ್ಲಿ ಒಟ್ಟು 30-08 ಎಕರೆ ಸರ್ಕಾರಿ ಜಮೀನನ್ನು ಕೆಐಎಡಿಬಿ ಮೂಲಕ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ಅಡಿಯಲ್ಲಿ ಎಸ್‌ಎಲ್‌ಆರ್‍‌ ಮೆಟಾಲಿಕ್ಸ್‌ ಲಿಮಿಟೆಡ್‌ಗೆ ಮಂಜೂರು ಮಾಡಲು ಪ್ರಸ್ತಾವನೆ ಸಲ್ಲಿಕೆಯಾಗಿತ್ತು.

 

ವಾಸ್ತವದಲ್ಲಿ ನಾರಾಯಣದೇವರಕೆರೆ ಗ್ರಾಮದ ಸರ್ವೆ ನಂಬರ್‍‌ 642,

 

 

634,

 

 

 

647

 

 

ಮತ್ತು 653 (ಎ)ರಲ್ಲಿ ಒಟ್ಟು 30-08 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನು ‘ಸರ್ಕಾರಿ ಅನಾಧೀನ ಹಾಗೂ ಸರ್ಕಾರಿ ಕಲ್ಲುಗುಡ್ಡ’ ಎಂದು ಪಹಣಿ ಪತ್ರಿಕೆಯಲ್ಲಿ ನಮೂದಾಗಿದೆ.

 

 

ಈ ಜಮೀನುಗಳ ಪೈಕಿ ಸರ್ವೆ ನಂಬರ್‍‌ 647, 650, 653 (ಎ) ಮಾತ್ರ ಸರ್ಕಾರಿ ಅನಾಧೀನ ಜಮೀನುಗಳು ಎಂದಿದೆ. ಸರ್ವೆ ನಂಬರ್‍‌ 634 ಮತ್ತು 642ರಲ್ಲಿನ ಜಮೀನುಗಳು ಬಿ ಖರಾಬು ಜಮೀನು ಆಗಿವೆ.

 

 

ಮತ್ತು ಲ್ಯಾಂಡ್‌ ಲಾಕ್ಡ್‌ ಜಮೀನುಗಳಾಗಿವೆ. ಮತ್ತು ನಗರ ವ್ಯಾಪ್ತಿಯಿಂದ 24 ಕಿ ಮೀ ದೂರದಲ್ಲಿರುವ ಕಾರಣ ಗ್ರಾಮೀಣ ವ್ಯಾಪ್ತಿಯಲ್ಲಿದೆ ಎಂದು ದಾಖಲೆಗಳಿಂದ ಗೊತ್ತಾಗಿದೆ. ಇದೇ ಅಂಶವನ್ನೇ ಕಾನೂನು ಇಲಾಖೆಯು ತನ್ನ ಅಭಿಪ್ರಾಯದಲ್ಲಿಯೂ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಹೀಗಿದ್ದರೂ ಸಹ ಈ ಜಮೀನುಗಳನ್ನು ಎಸ್‌ಎಲ್‌ಆರ್‍‌ ಮೆಟಾಲಿಕ್ಸ್‌ ಲಿಮಿಟೆಡ್‌ಗೆ ಉಚಿತವಾಗಿ ಮಂಜೂರು ಮಾಡುವ ಪ್ರಸ್ತಾವನೆಯನ್ನು ಈವರೆಗೂ ತಿರಸ್ಕರಿಸಿಲ್ಲ. ಇದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ಉಚಿತ ಮಂಜೂರು ಸಮಂಜಸವಲ್ಲ

 

ಸರ್ಕಾರಿ ಅನಾಧೀನ ಜಮೀನುಗಳನ್ನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 20(ಡಿ) ಅಡಿಯಲ್ಲಿ ಉಚಿತವಾಗಿ ಮಂಜೂರು ಮಾಡಲು ಬರುತ್ತದೆ ಎಂದು ಉಲ್ಲೇಖಿಸಿರುವುದು ಸಮಂಜಸವಾಗಿರುವುದಿಲ್ಲ ಎಂದು ಕಾನೂನು ಇಲಾಖೆಯು ತನ್ನ ಟಿಪ್ಪಣಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

 

‘ಉದ್ದೇಶಿತ ಜಮೀನುಗಳನ್ನು ಕೆಐಎಡಿಬಿ ಮೂಲಕ ಎಸ್‌ ಎಲ್‌ ಆರ್‍‌ ಎಟಾಲಿಕ್ಸ್‌ ಲಿಮಿಟೆಡ್ ಇವರಿಗೆ ಮಂಜೂರು ಮಾಡುವ ಉದ್ದೇಶ ವ್ಯಕ್ತವಾಗುವ ಕಾರಣ ಅಂತಿಮ ಫಲಾನುಭವಿ ಕೆಐಎಡಿಬಿ ಆಗಿರುವುದಿಲ್ಲ. ಕೆಐಎಡಿಬಿಗೆ ಜಮೀನನ್ನು ಮಂಜೂರಾತಿ ಮಾಡುವುದಿದ್ದಲ್ಲಿ ಮಾತ್ರ ಕಲಂ 20(ಡಿ) ಅನ್ವಯವಾಗುತ್ತದೆ.

 

ಆದರೆ ಮಂಜೂರಾತಿ ಬಯಸುವ ಸಂಸ್ಥೆ ಎಸ್‌ ಎಲ್‌ ಆರ್‍‌ ಮೆಟಾಲಿಕ್ಸ್‌ ಆಗಿರುವುದರಿಂದ ಕರ್ನಾಟಕ ಭೂ ಮಂಜೂರಾತಿ ನಿಯಮ 1969ರ ನಿಯಮ 22 ಅನ್ವಯಿಸುತ್ತದೆ. ಆದ್ದರಿಂದ ಸದರಿ ಸಂಸ್ಥೆಗೆ ಉಚಿತವಾಗಿ ಜಮೀನನ್ನು ಮಂಜೂರು ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ,’ ಎಂದು ಕಾನೂನು ಇಲಾಖೆಯು ತನ್ನ ಸ್ಪಷ್ಟ ಅಭಿಪ್ರಾಯವನ್ನು ದಾಖಲಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಅದೇ ರೀತಿ ಜಮೀನನ್ನು ಮಂಜೂರಾತಿ ಮಾಡುವ ನಿರ್ಣಯಕ್ಕೆ ಬಂದಲ್ಲಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22ಎ (1)(i)(1)ರಲ್ಲಿ ನಿಗದಿಪಡಿಸಿದ ಪ್ರಕಾರ ಮಾರುಕಟ್ಟೆ ಬೆಲೆ ವಿಧಿಸಿ ಮಂಜೂರು ಮಾಡಬಹುದು. ಅಲ್ಲದೆ ಈ ಜಮೀನುಗಳ ಪೈಕಿ ಕೆಲವು ಜಮೀನುಗಳು ಬಿ ಖರಾಬು ಆಗಿದ್ದು ಗ್ರಾಮೀಣ ಪ್ರದೇಶದಲ್ಲಿವೆ. ಹೀಗಾಗಿ ಸಚಿವ ಸಂಪುಟದ ಅನುಮೋದನೆ ಅವಶ್ಯಕತೆ ಇದೆ ಎಂದೂ ಕಾನೂನು ಇಲಾಖೆಯು ತನ್ನ ಅಭಿಪ್ರಾಯದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

ಎಸ್‌ಎಲ್‌ಆರ್‍‌ ಮೆಟಾಲಿಕ್ಸ್‌ ಲಿಮಿಟೆಡ್‌ 0.3 ಎಂಟಿಪಿಎ ಉಕ್ಕನ್ನು ವಿವಿಧ ಅಂತರಾಷ್ಟ್ರೀಯ ಮಾನದಂಡಗಳಿಗೆ ದೃಢೀಕರಿಸುವ ಸಾಮರ್ಥ್ಯವನ್ನು ಹೊಂದಿದೆ.

SUPPORT THE FILE

Latest News

Related Posts