ಐವರ ದುರ್ಮರಣ; ದಸ್ತಗಿರಿಯಾಗದ ವಲಯ ಆಯುಕ್ತರು, ಅಧಿಕಾರಿ ರಕ್ಷಣೆಗೆ ಧಾವಿಸಿದ ಐಎಎಸ್‌ ಗುಂಪು?

ಬೆಂಗಳೂರು; ಬೆಂಗಳೂರು ನಗರದ ಹೆಣ್ಣೂರು ಸಮೀಪದ ಬಾಬುಸಾಬ್‌ ಪಾಳ್ಯದಲ್ಲಿ 6 ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಕುಸಿತದಿಂದಾಗಿ 5 ಮಂದಿ ಸಾವನ್ನಪ್ಪಿದ್ದರೂ ಸಹ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯ ವಲಯ ಆಯುಕ್ತರನ್ನು ಇದುವರೆಗೂ ದಸ್ತಗಿರಿ ಮಾಡಿಲ್ಲ.

 

ಐವರು ಮೃತಪಟ್ಟಿರುವ ಈ  ದುರ್ಘಟನೆಯ ಬೆನ್ನಲ್ಲೇ ಕಟ್ಟಡ ಮಾಲೀಕನ ಮೇಲೆ ಕೇಸು ದಾಖಲಿಸಲಾಗಿದೆ. ಆದರೆ  ಅನುಮೋದಿತ ನಕ್ಷೆಗೆ ವಿರುದ್ಧವಾಗಿ ಕಟ್ಟಡ ನಿರ್ಮಾಣ ನಡೆಯುತ್ತಿದ್ದರೂ ಸಹ  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ  ವಲಯ ಆಯುಕ್ತರ  ವಿರುದ್ಧ ಬಿಬಿಎಂಪಿ  ಮುಖ್ಯ ಆಯುಕ್ತ ತುಷಾರ್‍‌ ಗಿರಿನಾಥ್‌ ಅವರು ಅಧಿನಿಯಮದ ಪ್ರಕಾರ  ಒಂದೇ ಒಂದು ಕ್ರಮ ಜರುಗಿಸಿಲ್ಲ.

 

ಅಲ್ಲದೇ  ಈ ದುರ್ಘಟನೆಗೆ ಸಂಬಂಧಿಸಿದ ವಲಯ ಆಯುಕ್ತರನ್ನು  ಇದುವರೆಗೂ  ದಸ್ತಗಿರಿಯನ್ನೂ ಕೂಡ ಮಾಡಿಲ್ಲ. ಬಿಬಿಎಂಪಿಯ ಈ ನಡೆಯು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

 

ಈ ಅವಘಡ ನಡೆದು 20 ಗಂಟೆಗಳಾದರೂ ಸಹ    ವಲಯ ಆಯುಕ್ತರ  ವಿರುದ್ಧ ಮೊಕದ್ದಮೆ ಹೂಡದಿರುವ ಬಿಬಿಎಂಪಿ ಮತ್ತು ಸರ್ಕಾರವು,  ಈ ಪ್ರಕರಣದಲ್ಲಿ ಉನ್ನತ  ಅಧಿಕಾರಿ ವರ್ಗವನ್ನು ಬಂಧನದಿಂದ ರಕ್ಷಿಸುವ ಪ್ರಯತ್ನಗಳು ನಡೆದಿದೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ.

 

ವಲಯ ಆಯುಕ್ತರ ಪಾತ್ರವೇನು?

 

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಲಯಗಳ ವ್ಯಾಪ್ತಿಯ ಕಟ್ಟಡಗಳ ನಕ್ಷೆಗಳನ್ನು ಮಂಜೂರು ಮಾಡುವುದು, ಕಟ್ಟಡ ನಿರ್ಮಾಣ ಸರಿಯಾಗಿ ನಡೆಯುತ್ತಿದೆಯೇ ಎಂಬ  ಬಗ್ಗೆ ಮೇಲುಸ್ತುವಾರಿ,  ಅನುಮೋದಿತ ನಕ್ಷೆಗೆ ವಿರುದ್ಧವಾಗಿ ನಿರ್ಮಿಸಿರುವ ಕಟ್ಟಡಗಳನ್ನು ಮತ್ತು ಅಪಾಯಕಾರಿ ನಿರ್ಮಾಣಗಳನ್ನು ತೆರವುಗೊಳಿಸುವ ಅಧಿಕಾರವು ವಲಯ ಆಯುಕ್ತರಿಗಿದೆ.

 

ಇದನ್ನು   ಪ್ರಸ್ತುತ ಜಾರಿಯಲ್ಲಿರುವ ಬಿಬಿಎಂಪಿ ಅಧಿನಿಯಮ 2020ರ ಪರಿಚ್ಛೇದ 248ರಂತೆ ಆಯಾ ವಲಯ ಆಯುಕ್ತರಿಗೆ ವಹಿಸಿದೆ. ಹೀಗಿದ್ದರೂ ಸಹ ಈ ಪ್ರಕರಣದಲ್ಲಿ ವಲಯ ಆಯುಕ್ತರ ವಿರುದ್ಧ ಇದುವರೆಗೂ ಒಂದೇ ಒಂದು ಕ್ರಮ ಜರುಗಿಸಿಲ್ಲ.

 

 

 

‘ಆದರೆ ವಲಯ ಆಯುಕ್ತರು ಕಟ್ಟಡಗಳ ನಕ್ಷೆಗಳನ್ನು ಮಂಜೂರು ಮಾಡುವ ಪ್ರಕ್ರಿಯೆಗೆ ಮಾತ್ರ ಆಸಕ್ತಿ ವಹಿಸುತ್ತಾರೆ.  ನಗರದಾದ್ಯಂತ ಕಳಪೆ ನಿರ್ಮಾಣಗಳು ಮತ್ತು ನಕ್ಷೆ ಉಲ್ಲಂಘಿಸಿ ಮಾಡಿರುವ ನಿರ್ಮಾಣಗಳನ್ನು ಸ್ಥಗಿತಗೊಳಿಸಲು ಮತ್ತು ತೆರವುಗೊಳಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹಣ ಮಾಡುವ ದಂಧೆಗಿಳಿದಿದ್ದಾರೆ,’ ಎಂದು ಆರೋಪಿಸುತ್ತಾರೆ ಬಿಬಿಎಂಪಿಯ ಅಧಿಕಾರಿಯೊಬ್ಬರು.

 

ಈ  ಹಿಂದೆ ಕೆ.ಎಂ.ಸಿ ಕಾಯ್ದೆಯಡಿ ಮಂಜೂರಾತಿ ನಕ್ಷೆಗೆ ವಿರುದ್ಧವಾಗಿ/ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ಎಲ್ಲ ಕಟ್ಟಡಗಳನ್ನು ಪರಿವೀಕ್ಷಿಸಿ, ವ್ಯತಿರಿಕ್ತ ನಿರ್ಮಾಣ ಕಂಡುಬಂದಲ್ಲಿ ಕ್ರಮವಹಿಸುವ ಜವಾಬ್ದಾರಿ ಕೆ.ಎಂ.ಸಿ ಕಾಯ್ದೆಯ ಪರಿಚ್ಛೇದ 321ರಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಆಯುಕ್ತರ ಮೇಲಿತ್ತು. ಈ ಅಧಿಕಾರವನ್ನು   ಕೆ.ಎಂ.ಸಿ ಕಾಯ್ದೆಯ ಪರಿಚ್ಛೇದ 67 ರಂತೆ ಕಾಮಗಾರಿ ಉಪವಿಭಾಗಗಳ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಮತ್ತು ಸಹಾಯಕ ಅಭಿಯಂತರರಿಗೆ ನೀಡುತ್ತಿದ್ದರು.

 

ಆಗ ಕಟ್ಟಡ ಪತನವಾದರೆ ಇಂಜಿನಿಯರುಗಳು ಕೇಸು ಹಾಕಿಸಿಕೊಂಡು ಬಂಧನಕ್ಕೊಳಗಾಗುತ್ತಿದ್ದರು.   ಆದರೆ ಆನಂತರದಲ್ಲಿ ಕೆ.ಎಂ.ಸಿ ಕಾಯ್ದೆಗೆ ಬದಲಾವಣೆ ತರಲಾಯಿತು. ಸದ್ಯ  ಜಾರಿಗೆ ಬಂದಿರುವ ಬಿಬಿಎಂಪಿ  ಅಧಿನಿಯಮ 2020ರ ಪರಿಚ್ಛೇದ 248ರಂತೆ  ಮಂಜೂರಾತಿ ನಕ್ಷೆಗೆ ವಿರುದ್ಧವಾಗಿ/ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ಎಲ್ಲ ಕಟ್ಟಡಗಳನ್ನು ಪರಿವೀಕ್ಷಿಸಿ, ವ್ಯತಿರಿಕ್ತ ನಿರ್ಮಾಣ ಕಂಡುಬಂದಲ್ಲಿ ಕ್ರಮವಹಿಸುವ ಜವಾಬ್ದಾರಿ ಬಿಬಿಎಂಪಿ  ವಲಯ ಆಯುಕ್ತರಿಗೆ ನೀಡಲಾಗಿದೆ.

 

ಆದರೆ ಆ ಅಧಿಕಾರವನ್ನು ತಮ್ಮ ಕೆಳಗಿನ ಅಧಿಕಾರಿಗಳಿಗೆ ಪ್ರತ್ಯಾಯೋಜಿಸುವ ಅವಕಾಶ ಬಿಬಿಎಂಪಿ ಕಾಯ್ದೆಯಲ್ಲಿ ವಲಯ ಆಯುಕ್ತರಿಗೆ ಇರುವುದಿಲ್ಲ. ಈ ಕಾರಣಕ್ಕಾಗಿ ಹೆಣ್ಣೂರು ಬಾಬುಸಾ ಪಾಳ್ಯದ ದುರ್ಘಟನೆಯನ್ನು ತಡೆಯುವ ಜವಾಬ್ದಾರಿ ಬಿಬಿಎಂಪಿಯ ಪೂರ್ವ ವಲಯ ಆಯುಕ್ತರಿಗೆ ಇತ್ತು. ಆದರೆ  ಈ ಅಂಶವನ್ನು ಬಿಬಿಎಂಪಿಯು  ಮುಚ್ಚಿಡುತ್ತಿದೆ!. ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶದಿಂದಲೇ  ಕೆಳ ಹಂತದವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆಯೇ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿವೆ.

 

ಹೆಣ್ಣೂರು ಬಾಬುಸಾಪಾಳ್ಯ ಪ್ರಕರಣದಲ್ಲಿ  ಬಿಬಿಎಂಪಿಯ  ವಲಯ ಆಯುಕ್ತರ ಬಂಧನ ಆಗಬೇಕಲ್ಲವೇ,  ಅಥವಾ  ಐಎಎಸ್ ಅಧಿಕಾರಿ ಆಗಿರುವ ಕಾರಣಕ್ಕಾಗಿ ಅವರನ್ನು ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆಯೇ  ಎಂಬ ಸಂಶಯಗಳೂ  ವ್ಯಕ್ತವಾಗಿವೆ.

 

ಕಾಯ್ದೆಯಲ್ಲೇನಿದೆ?

 

ಕಾನೂನುಬಾಹಿರವಾಗಿ ಪ್ರಾರಂಭಿಸಿದ, ನಿರ್ವಹಿಸುತ್ತಿರುವ ಅಥವಾ ಪೂರ್ಣಗೊಳಿಸಿದ ಕಟ್ಟಡಗಳ ಅಥವಾ ಬಾವಿಯ ಕಾಮಗಾರಿಯನ್ನು ಕೆಡವಿ ಹಾಕುವುದು ಅಥವಾ ಬದಲಾಯಿಸಬೇಕು. ತನ್ನ ಅನುಮತಿಯನ್ನು ಪಡೆಯದೇ ಅಥವಾ ಸ್ಥಾಯಿ ಸಮಿತಿಗೆ, ಅಪೀಲನ್ನು ಅಥವಾ ಕೋರಿಕೆ ಮಾಡಿಕೊಂಡಿದ್ದರೇ ಸ್ಥಾಯಿ ಸಮಿತಿಯು ಮಾಡಿದ ಯಾವುದೇ ಆದೇಶವನ್ನು ಉಲ್ಲಂಘಿಸಿ ಪ್ರಾರಂಭಿಸಲಾಗಿದೆ ಎಂದು ವಲಯ ಆಯುಕ್ತರು ಗಮನಿಸಬೇಕು.

 

 

ಯಾವುದೇ ಕಟ್ಟಡಕ್ಕೆ ಅಥವಾ ಗುಡಿಸಲಿಗೆ ಯಾವುದೇ ಬದಲಾವಣೆಯನ್ನು ಆಥವಾ ಸೇರ್ಪಡೆಯನ್ನು ಅಥವಾ ಯಾವುದೇ ಉದ್ದೇಶಕ್ಕಾಗಿ ಯಾವುದೇ ಕಟ್ಟಡದ ಅಥವಾ ಗುಡಿಸಲಿನ ಒಳಗಡೆ ಅಥವಾ ಅದರ ಮೇಲೆ ಯಾವುದೇ ಇತರ ಕಾಮಗಾರಿಯನ್ನು 247ನೇ ಪ್ರಕರಣವನ್ನು ಉಲ್ಲಂಘಿಸಿ ಪ್ರಾರಂಭಿಸಲಾಗಿದೆ, ನಿರ್ವಹಿಸಲಾಗುತ್ತಿದೆ ಅಥವಾ ಪೂರ್ಣಗೊಳಿಸಲಾಗಿದೆ ಎಂಬುದು ಮನವರಿಕೆ ಮಾಡಿಕೊಳ್ಳಬೇಕು.

 

ಮನವರಿಕೆ ಆದ ನಂತರ ಕಾಮಗಾರಿಯನ್ನು ಅಥವಾ ಕಾನೂನುಬಾಹಿರವಾಗಿ ಮಾಡಲಾಗಿದೆ ಎಂದು ತಾತ್ಕಾಲಿಕ ಆದೇಶ ಹೊರಡಿಸಬಹುದು. ಮತ್ತು ಆದೇಶವನ್ನು ಪಾಲಿಸುವವರೆಗೆ ಮಾಲೀಕ ಅಥವಾ ನಿರ್ಮಾಣಕಾರನಿಗೆ ಕಟ್ಟಡದ ಅಥೌಆ ಬಾವಿಯ ಅಥವಾ ಗುಡಿಸಲಿನ ಕಾರ್ಯವನ್ನು ಮುಂದುವರೆಸಬಾರದು ಎಂದು ನಿರ್ದೇಶಿಸಬಹುದು. ಕಾರಣ ಕೇಳಿ ನೋಟೀಸ್‌ ಹೊರಡಿಸಬಹುದು ಎಂದು ಕಾಯ್ದೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ಐವರು ಮೃತಪಟ್ಟಿರುವ ಈ ದುರ್ಘಟನೆಗೆ ಸಂಬಂಧಿಸಿದಂತೆ ಕಟ್ಟಡ ಮಾಲೀಕ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಿದೆ.  ಈ ಕಟ್ಟಡವು ಒಂದೇ ದಿನದಲ್ಲಿ ನಿರ್ಮಿಸಿಲ್ಲ. ಹಲವು ತಿಂಗಳುಗಳಿಂದ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ನಕ್ಷೆಗೆ ವಿರುದ್ಧವಾಗಿ ಮತ್ತು ಕಳಪೆ ಗುಣಮಟ್ಟದಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದೆ.  ಈ ದುರ್ಘಟನೆಗೆ ವಾಸ್ತವದಲ್ಲಿ  ವಲಯ ಆಯುಕ್ತರ ವಿರುದ್ಧ ಪ್ರಕರಣ ದಾಖಲಿಸಬೇಕಿತ್ತು. ಆದರೆ ಅವರನ್ನು ರಕ್ಷಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

 

‘ಕೇವಲ ನಾಲ್ಕು ಅಂತಸ್ತಿನ ಕಟ್ಟಡಕ್ಕೆ ಮಂಜೂರಾತಿ ಪಡೆದು ಆನಂತರ ಅದೇ ನಾಲ್ಕು ಅಂತಸ್ತಿನ ಕಟ್ಟಡ ತಳಪಾಯದ ವಿನ್ಯಾಸದಲ್ಲಿ ಆರು ಅಂತಸ್ತು ಕಟ್ಟಡ ಕಟ್ಟಿ ಕಟ್ಟಡ ಮಾಲೀಕರು ಈವರೆಗೆ ಐದು ಜನರ ಸಾವಿಗೆ ಕಾರಣರಾಗಿದ್ದಾರೆ. ಸದರಿ ಕಟ್ಟಡ ನಿರ್ಮಾಣ ಅನುಮೋದಿತ ನಕ್ಷೆಗೆ ವಿರುದ್ಧವಾಗಿ ನಡೆಯುತ್ತಿದ್ದರೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಣ್ಣುಮುಚ್ಚಿ ಕುಳಿತಿದ್ದರ ಪರಿಣಾಮವಾಗಿಯೇ  ಈ ದುರ್ಘಟನೆ ಸಂಭವಿಸಿದೆ,’ ಎಂದು ಆರೋಪಿಸುತ್ತಾರೆ ಸ್ಥಳೀಯರೊಬ್ಬರು.

 

ಬೆಂಗಳೂರು ನಗರದಲ್ಲಿ ವಾಣಿಜ್ಯ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಆಗಿರುವ ಅಭಿವೃದ್ಧಿಯಿಂದಾಗಿ ಕಳೆದ ಕೆಲ ದಶಕಗಳಲ್ಲಿ ಬೆಂಗಳೂರು ಅಪೂರ್ವ ಬೆಳವಣಿಗೆ ಹೊಂದಿದೆ.  ಕರ್ನಾಟಕವಲ್ಲದೆ ದೇಶದ ಇತರ ಭಾಗಗಳಿಂದಲೂ ಜನರು ಬೆಂಗಳೂರಿಗೆ ವಲಸೆ ಬಂದು ಉದ್ಯೋಗಾವಕಾಶವನ್ನು ಹೊಂದಿ ನೆಲೆಯೂರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಭೂಮಿಯ ಮೌಲ್ಯ ತೀವ್ರವಾಗಿ ಹೆಚ್ಚಿದೆ. ಅಲ್ಲದೇ  ಜಮೀನಿಗೆ ಬೇಡಿಕೆ ಏರುತ್ತಲೆ ಇದೆ.

 

ವಾಸಕ್ಕೆ, ವಾಣಿಜ್ಯಕ್ಕೆ, ಉದ್ಯಮಗಳ ಸ್ಥಾಪನೆಗೆ ಅತ್ಯಗತ್ಯವಾಗಿ ಜಮೀನು/ಕಟ್ಟಡ ಬೇಕಿರುವ ಕಾರಣ ಇದರ ಮೌಲ್ಯವೂ   ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಕಟ್ಟಡಗಳನ್ನು ನಕ್ಷೆ ಮಂಜೂರಾತಿ ಪಡೆದು ಸೂಕ್ತವಾಗಿ ನಿರ್ಮಿಸುತ್ತಾರೆ ಎಂದು ಖಾತರಿ ಪಡಿಸಿಕೊಳ್ಳುವ ಹೊಣೆಗಾರಿಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಲಿದೆ. ಆದರೆ ಈ ಜವಾಬ್ದಾರಿಯನ್ನು ಬಿಬಿಎಂಪಿಯು ಸಮರ್ಥ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಹಲವು ಅರೋಪಗಳೂ ಕೇಳಿ ಬಂದಿವೆ.

 

ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣದಲ್ಲಿ ಮತ್ತೊಬ್ಬ ಕಾರ್ಮಿಕ ಸಾವನ್ನಪ್ಪಿದ್ದು, ಒಟ್ಟು ಮೃತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.  ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಎನ್ ಡಿ ಆರ್ ಎಫ್ ಮತ್ತು ಎಸ್ ಡಿ ಆರ್ ಎಫ್ ತಂಡಗಳು ಸತತ 17 ಗಂಟೆಯಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿವೆ.

 

ಅವೈಜ್ಞಾನಿಕವಾಗಿ ಕಟ್ಟಡ ನಿರ್ಮಿಸಿದ ಹಿನ್ನೆಲೆ ಕಟ್ಟಡ ಮಾಲೀಕ ಸೇರಿ ಹಲವರ ವಿರುದ್ಧ ಹೆಣ್ಣೂರು ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ನಾಲ್ಕು ಅಂತಸ್ತಿನ ಕಟ್ಟಡಕ್ಕೆ ಅನುಮತಿ ಪಡೆದು 7 ಅಂತಸ್ತಿನ ಕಟ್ಟಡ ನಿರ್ಮಿಸಲಾಗುತ್ತಿತ್ತು.

 

ಸುಮಾರು 15 ಕಾರ್ಮಿಕರು ಈ ಬಿಲ್ಡಿಂಗ್‌ ನಿರ್ಮಾಣದಲ್ಲಿ ತೊಡಗಿದ್ದರು.ಬಹುತೇಕ ಕಟ್ಟಡ ನಿರ್ಮಾಣ ಮಾಡಿ, ಪೇಟಿಂಗ್‌ ಕೆಲಸಗಳು ನಡೆಯುತ್ತಿದ್ದವು ಎಂದು ವರದಿಯಾಗಿದೆ. ಕಟ್ಟಡ ದಲ್ಲಿ ಸುಮಾರು ಹದಿನೈದು ಜನ ಕಾರ್ಮಿಕರಿದ್ದರುಎಂದು ತಿಳಿದು ಬಂದಿದೆ.

SUPPORT THE FILE

Latest News

Related Posts